ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕೆಎಂಯು Archives » Dynamic Leader
July 18, 2024
Home Posts tagged ಕೆಎಂಯು
ರಾಜ್ಯ

ವಿಜಯಪುರದ ಮುಸ್ಲಿಂ ಧಾರ್ಮಿಕ ಮುಖಂಡರಾದ ಸೈಯ್ಯದ್ ತನ್ವೀರ್ ಹಾಶ್ಮಿಯವರ ವಿರುದ್ಧದ ಬಸನಗೌಡ ಪಾಟೀಲ್ ಯತ್ನಾಳ್‌  ಹೇಳಿಗೆ ಖಂಡನೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಒಂದು ಚಿತ್ರವೊಂದನ್ನು ಇಟ್ಟುಕೊಂಡು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು  ‘ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿ ಸಂಚಲನ ಮೂಡಿಸಿದರು.

ಇದನ್ನು ಕರ್ನಾಟಕ ಮುಸ್ಲಿಂ ಯೂನಿಟಿಯ (ರಾಜ್ಯ ಸಮಿತಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್. ಎ.,  ತೀವ್ರವಾಗಿ ಖಂಡಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. “ಸುನ್ನಿ ಜಮಾತ್‌ನ ಮುಖಂಡರು, ಹಿರಿಯ ಸಮಾಜ ಸೇವಕರು ಹಾಗೂ ಜಾತ್ಯತೀತ ಮನೋಭಾವದ ಧಾರ್ಮಿಕ ಪಂಡಿತರು ಆಗಿರುವ ತನ್ವೀರ್ ಪೀರಾ ರವರ ಕುರಿತು ಯತ್ನಾಳರ ತೇಜೋವದೆ ಹೇಳಿಕೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದ್ದಾರೆ.

“ಯತ್ನಾಳ್ ಅಪಪ್ರಚಾರ ಮಾಡುತ್ತಿರುವ ತನ್ವೀರ್ ಪೀರಾ ರವರ ಫೋಟೋಗಳಲ್ಲಿ ಒಂದು ಬಾಗ್ದಾದಿನ ಪ್ರಿನ್ಸ್‌ ಶೇಖ್‌ ಖಾಲಿದ್‌ ಅವರ ಜ್ಯೋತೆಗಿನ ಫೋಟೋ ಹಾಗೂ ಮತ್ತೊಂದು ಫೋಟೋದಲ್ಲಿ ಇರುವವರು ಇರಾಕ್‌ ಸರ್ಕಾರದ ಸೆಕ್ಯುರಿಟಿ ಆಫೀಸರ್‌ ಆಗಿರುವ ಸಜ್ಜಾದೇ ನಶೀನ್‌ ಹಜ್ರತ್‌ ಗೌಸ್‌ ಆಜಂ ರವರ ಜ್ಯೋತೆಗೆ ತನ್ವೀರ್ ಪೀರಾ ರವರು ಇರುವ ಹತ್ತು ವರ್ಷಗಳ ಹಿಂದಿನ ಫೋಟೋಗಳು” ಎಂದು ಸ್ಪಷ್ಟನೆ ನೀಡಿದ್ದಾರೆ.

“ಫೋಟೋಗಳನ್ನು ತಿರುಚಿ, ಬಳಸಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಪೀರಾರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಅಪಪ್ರಚಾರದ ಹಿಂದೆ ಮುಸ್ಲಿಂ ವಿರೋಧಿ ಭಾವನೆ, ಶಾಂತಿಕದಡುವ ಉದ್ದೇಶ ಯತ್ನಾಳ್ ಹೊಂದಿದ್ದಾರೆ” ಆರೋಪಿಸಿದ್ದಾರೆ. “ಈ ಕೂಡಲೇ ಕರ್ನಾಟಕ ಸರಕಾರ ಬಿಜೆಪಿಯ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.

“ಹುಬ್ಬಳ್ಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯದ ರಕ್ಷಣೆ ನಮ್ಮ ಸರಕಾರ ಜವಾಬ್ದಾರಿಯಾಗಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಅವರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿಗಳನ್ನು ಮೀಸಲು ಇರಿಸುವುದಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಅಲ್ಲದೆ, ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ಓಬಿಸಿಯೊಳಗಿನ ಮುಸ್ಲಿಮರ ಶೇ.4ರಷ್ಟು ಇರುವ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕೆಂದು KMU ಸರಕಾರಕ್ಕೆ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.

ರಾಜ್ಯ

ಮೊನ್ನೆ ಪೊಲೀಸರ ಮೇಲೆ ಹಲ್ಲೆ; ಈಗ ಪತ್ರಕರ್ತರ ಮೇಲೆ ಗೂಂಡಾಗಿರಿ. ಈ ಅಮಾನವೀಯ, ಸಂವಿಧಾನ ವಿರೋಧಿ ಕಾನೂನು ಬಾಹಿರ ಘಟನೆಗಳು ನಡೆದದ್ದು ಮುಸ್ಲಿಮ್ ಎಂಬ ಗುಮಾನಿಯ (… ಮುಸ್ಲಿಮ್ ಆಗಿದ್ದರೆ..!? ) ಮೇಲೆ ಮಾತ್ರ. ಕೋಮುವಾದಿ(ವ್ಯಾದಿ)ಗಳ ಅನೈತಿಕ ಪೋಲಿಸ್‌ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ, ರಾಜ್ಯ ಗೃಹ ಇಲಾಖೆಯು, ಆ್ಯಂಟಿ ಕಮ್ಯೂನಲ್ ವಿಂಗನ್ನು ರಚನೆ ಮಾಡಿತ್ತು. ಇದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದಂತಿದೆ ಎಂದು ಕರ್ನಾಟಕ ಮುಸ್ಲಿಮ್ ಯೂನಿಟಿಯ ರಾಜ್ಯಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ, ಕೋಮುವಾದಿಗಳ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಎಗ್ಗಿಲ್ಲದೆ ಮಿತಿಮೀರಿ ನಡೆಯುತ್ತಿದ್ದವು. ಇದಕ್ಕೆ ಸಹಕಾರಿ ಎಂಬಂತೆ ಕೆಲ ಅಧಿಕಾರಿಗಳು ಸಹ ಸಾತ್ ನೀಡುತ್ತಿದ್ದದ್ದು ಬಹಿರಂಗಗೊಂಡಿದೆ. ಇಂತಹ ಕಾನೂನು ಬಾಹಿರ ಕೃತ್ಯಗಳ ಕಡಿವಾಣಕ್ಕೆ, ಕಾಂಗ್ರೆಸ್ ಪಕ್ಷ, ತಾನು ಆಡಳಿತಕ್ಕೆ ಬಂದರೆ ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವುದಾಗಿ ಆಶ್ವಾಸನೆ ನೀಡಿತ್ತು.

ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಈ ರೀತಿಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ, ಆಂಟಿ ಕಮ್ಯುನಲ್ ವಿಂಗ್ ಅನ್ನು ರಚಿಸಿತು. ಆದರೆ, ಈ ವಿಂಗ್‌ನ ಕಾರ್ಯವೈಖರಿ ಮತ್ತು ಪರಿಣಾಮಗಳು ಮಾತ್ರ ಈವರೆಗೆ ಶೂನ್ಯವೆ ಆಗಿದೆ. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯ ಅಧಿಕೃತ ವರದಿಗಾರರಾದ ಅಭಿಜಿತ್ ಅವರ ಮೇಲೆ, ಗೂಂಡಾಗಿರಿ ನಡೆಸಿರುವ ಕೋಮುವಾದಿಗಳ ವಿರುದ್ಧ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಾಸಿಂ ಸಾಬ್ ಆಗ್ರಹಿಸಿದ್ದಾರೆ.

ಈ ವಿಂಗ್ ಜಾರಿಗೆ ಬಂದ ನಂತರವೂ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂಬ ಸತ್ಯವು ಇದರ ಸೀಮಿತತೆ ಮತ್ತು ನಿಸ್ಕ್ರಿಯತೆಯನ್ನು ಸೂಚಿಸುತ್ತದೆ. ಮುರುಡೇಶ್ವರ ಬೀಚ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ, ಬೆಂಗಳೂರಿನಲ್ಲಿ ಬಿಎಂಟಿಸಿಯ ಮುಸ್ಲಿಮ್ ನಿರ್ವಾಹಕರ ಟೋಪಿಯನ್ನು ಬಲವಂತವಾಗಿ ತೆಗೆಸಿದ್ದು ಸೇರಿದಂತೆ, ಕೋಮುವಾದಿ ಪುಂಡಾಟಗಳು ಮೊದಲಿನಂತೆಯೇ ಮುಂದುವರಿದಿವೆ.

ನೈತಿಕ ಪೊಲೀಸ್ ಗಿರಿ ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಜಿಲ್ಲೆಗೆ ಕೆಟ್ಟ ಹೆಸರು ತರಲು ಕೋಮುವಾದಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ.

ಇಂತಹ ದಬ್ಬಾಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಈ ಸ್ಪಷ್ಟನೆಗಳು ಸ್ವಾಗತಾರ್ಹವೆ. ಆದರೆ, ಈ ವಿಂಗ್ ಅನ್ನು ಶಕ್ತ ಸಕ್ರಿಯಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂಬುದು ಪ್ರಶ್ನೆ.

ಕೂಡಲೇ ಈ ವಿಂಗ್ ಅನ್ನು ಸಕ್ರಿಯಗೊಳಿಸುವ ಕುರಿತು ಮತ್ತಷ್ಟು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು; ಕೋಮು ಗೂಂಡಾಗಿರಿಗಳನ್ನು ನಿಲ್ಲಿಸಬೇಕು ಎಂದು ಖಾಸಿಂ ಸಾಬ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯ

ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿಯು ಪುನರ್ ರಚನೆಯಾಗಿದ್ದು, ಜನಾಬ್ ಜಬ್ಬಾರ್ ಕಲಬುರ್ಗಿ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎಂದು ಕೆ.ಎಂ.ಯುನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಖಾಸಿಂ ಸಾಬ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೊತೆಗೆ ಗೌರವ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಜಿ.ಎ.ಬಾವ ರವರನ್ನು, ಶೇಕಬ್ಬ ಅವರನ್ನು ಕಾರ್ಯಾಧ್ಯಕ್ಷರಾಗಿ, ಉತ್ತರ ಕರ್ನಾಟಕದ ಸಂಚಾಲಕರಾಗಿ ಬಾಗಲಕೋಟೆ ಜಿಲ್ಲೆಯ ವಕ್ಫ್ ಬೋರ್ಡ್ನ ಅಧ್ಯಕ್ಷರಾದ ಎಂ.ಎಲ್.ಸರ್ಕಾವಾಸ ಅವರನ್ನು, ದಕ್ಷಿಣ ಕರ್ನಾಟಕದ ಸಂಚಾಲಕರಾಗಿ ಚಿಕ್ಕಮಗಳೂರಿನ ಅಬ್ದುಲ್ ವಾಹಿದ್ ಮಾಗುಂಡಿ ಅವರನ್ನು ನೇಮಿಸಲಾಯಿತು. ಅಲ್ಲದೆ ಒಟ್ಟು 21 ಸದಸ್ಯರ ರಾಜ್ಯಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ಖಾಸಿಂ ಸಾಬ್ ತಿಳಿಸಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ನಂಬಿ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಆ ಕಾರಣಕ್ಕಾಗಿ ವರ್ತಮಾನದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಈ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಎಂಬುದನ್ನು ರಾಜ್ಯ ಸರ್ಕಾರ ಮರೆಯಬಾರದು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ನೂತನ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಯವರು ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಕೆ.ಎಂ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್

2ಬಿ ಮೀಸಲಾತಿ ಪರಿಹಾರ ಮುಂತಾದ ಹಲವು ಬೇಡಿಕೆಗಳು ಸೇರಿದಂತೆ ಪರಿಹರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದ ಮುಸ್ಲಿಮ್ ಸಮುದಾಯವು ಇದೀಗ ರಾಜಕೀಯವಾಗಿ ಅತ್ಯಂತ ಪ್ರಬುದ್ಧವಾಗಿದೆ. ಆದ್ದರಿಂದ ಈ ಸತ್ಯವನ್ನು ಅರಿತು ರಾಜ್ಯ ಸರ್ಕಾರವು ಮುಸ್ಲಿಮ್ ಸಮುದಾಯದ ಸಮಗ್ರ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಈಡೇರಿಸುವ ಯೋಜನೆಗಳನ್ನು ಕಾರ್ಯಗತ ಗೊಳಿಸುವುದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳ ಹೊಣೆಗಾರಿಕೆಯಾಗಿದೆ.

ಕರ್ನಾಟಕದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ನೋವು, ಅನ್ಯಾಯ, ಹಿಂಸೆ ಅನುಭವಿಸಿದೆ. ಗೋವು ಸಂರಕ್ಷಕರ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ, 4% ಒಬಿಸಿ ಮೀಸಲಾತಿ ಮತ್ತು ಅಲ್ಪಸಂಖ್ಯಾತ ವಿಧ್ಯಾರ್ಥಿ ವೇತನವನ್ನು ಕಡಿತಗೊಳಿಸಿ, ಸುಮಾರ 6 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯವನ್ನು ಹಾಳು ಮಾಡಿರುವುದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ನಿಗಮದಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನು ದ್ವೇಷದಿಂದ ರದ್ದುಗೊಳಿಸಿ, ಅನುದಾನಗಳನ್ನು ಕಡಿತಗೊಳಿಸಿದ ಕಾರಣ ರಾಜ್ಯದ ಮುಸ್ಲಿಮರಿಗೆ ಅಘಾದ ನೋವು ಮತ್ತು ಅನ್ಯಾಯವಾಗಿದೆ.

ಈ ಎಲ್ಲಾ ಮುಸ್ಲಿಮರ ಮೇಲಿನ ಅಸಮಾನತೆಗಳನ್ನು ಹೋಗಲಾಡಿಸಿ, ನ್ಯಾಯ ಮತ್ತು ಭದ್ರತೆಯನ್ನು ಕೊಡುವುದು ಈ ಸರ್ಕಾರದ ಹೊಣೆ ಮತ್ತು ಜವಾಬ್ದಾರಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ನೂತನ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಮುಸ್ಲಿಮರ ಸಾಮಾಜಿಕ ನ್ಯಾಯ, ಎಲ್ಲಾ ಕ್ಷೇತ್ರಗಳಲ್ಲಿ ಸಮಪಾಲು ಹಾಗು ಸರಕಾರಿ ಯೋಜನೆಗಳ ಸಮಗ್ರ ಬಳಕೆಯ ಗುರಿಯುಳ್ಳ ಕರ್ನಾಟಕ ಮುಸ್ಲಿಮ್ ಯೂನಿಟಿಯು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ವಿಸ್ತರಿಸಿ ಇಡೀ ರಾಜ್ಯಾದಂತ್ಯ ಮುಸ್ಲಿಮರ ಸಾಮಾಜಿಕ ಜಾಗೃತಿಯಲ್ಲಿ ತೊಡಗಲಿದೆ ಎಂದು ಖಾಸಿಂ ಸಾಬ್ ತಿಳಿಸಿದರು.

ರಾಜಕೀಯ

ಬೆಂಗಳೂರು: ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಸಂವಿಧಾನ ಬದ್ಧವಾಗಿ ನೀಡಿರುವ ಶೇಕಡಾ 4ರ ಮೀಸಲಾತಿಯನ್ನು ಏಕಾ ಏಕಿ ರದ್ದು ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮುಸ್ಲಿಂ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. ರಾಜ್ಯ ಸರಕಾರದ ಈ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಕಳೆದ 60 ವರ್ಷಗಳಲ್ಲಿ ಬಂದಿರುವ ಎಲ್ಲ ಆಯೋಗಗಳೂ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದ ಅಧ್ಯಯನ ಪೂರ್ಣ ವರದಿಯ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದಲ್ಲಿ 4% ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಇದನ್ನು ಏಕಾ ಏಕಿ ರದ್ದು ಪಡಿಸಿರುವುದು ಸಂವಿಧಾನ ವಿರೋಧಿ ಕ್ರಮ. ಇದನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ಮುಸ್ಲಿಮರು ಮತ್ತು ಲಿಂಗಾಯತ / ಒಕ್ಕಲಿಗ ಸಮುದಾಯದ ಮಧ್ಯೆ ವೈಷಮ್ಯ ಹುಟ್ಟಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಈ ಮೂಲಕ ರಾಜಕೀಯ ದುರ್ಲಾಭ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಸಂಚು ಹೂಡಿದ್ದಾರೆ. ಈ ಸಂಚಿಗೆ ಮುಸ್ಲಿಮರು ಬಲಿಯಾಗಬಾರದು. ಸಂಯಮದಿಂದ ವರ್ತಿಸಬೇಕು. ಯಾವುದೇ ಬೀದಿ ಹೋರಾಟಕ್ಕೆ ಇಳಿಯದೆ, ಈ ಕ್ರಮದ ವಿರುದ್ಧ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಬೇಕು. ಕರ್ನಾಟಕ ಮುಸ್ಲಿಂ ಯೂನಿಟಿ ಕಾನೂನು ತಜ್ಞರ ಜೊತೆಗೆ ಈಗಾಗಲೆ ಸಮಾಲೋಚನೆ ನಡೆಸುತ್ತಿದ್ದು ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ.

ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಶಿಫಾರಸ್ಸಿನ ಅನ್ವಯ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಅವರನ್ನು ಮುಂದುವರಿದ ವರ್ಗ ಎಂದು ಪರಿಗಣಿಸಿ, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (EWS) ಸೇರಿಸಿ, ಮೀಸಲಾತಿ ಕೊಡಲಾಗುವುದು (EWS) ಎಂದು ಮುಖ್ಯ ಮಂತ್ರಿಯವರು ಹೇಳಿದ್ದಾರೆ. ಜಯಪ್ರಕಾಶ್ ಹೆಗ್ಡೆ ಆಯೋಗವು ಈ ಕುರಿತು ಯಾವ ಸಮೀಕ್ಷೆಯನ್ನೂ ಮಾಡದೆ ಹೇಗೆ ನಿರ್ಧಾರ ಕೈ ಗೊಂಡಿದೆ? ಜಯಪ್ರಕಾಶ್ ಹೆಗ್ಡೆ ಆಯೋಗವು ರಹಸ್ಯ ಸಮೀಕ್ಷೆ ಏನಾದರೂ ಮಾಡಿದೆಯೆ? ಹಾಗಿದ್ದರೆ ಆ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯು ಒತ್ತಾಯಿಸಿದೆ. ಮುಸ್ಲಿಮರ ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುವುದು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಸಲಹೆಯನ್ನೂ ಪಡೆದು ಮುಂದು ವರಿಯಲಾಗುವುದು. ಸಮುದಾಯ ಯಾವುದೇ ಭಾವಾವೇಶಕ್ಕೆ ಒಳಗಾಗದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಮುಸ್ಲಿಂ ಯೂನಿಟಿ ಮನವಿ ಮಾಡಿದೆ. karnataka Government scraps Reservation For muslim