ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
October 2023 » Dynamic Leader
July 18, 2024
Home 2023 October
ರಾಜ್ಯ

ಶ್ರೀಕ್ಷೇತ್ರ ಆದಿಚುಂಚನಗಿರಿ ಮಠ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿ ಮಾತನಾಡಿದರು.

“ಕಾರಿನ ಮೇಲೆ ಕಾಗೆ ಕುಳಿತರೆ ಅದರಿಂದ ರಾಜ್ಯದ ಜನತೆಗೆ ಏನಾಗಬೇಕು? ಈ ಬಗ್ಗೆ ಜ್ಯೋತಿಷಿಗಳನ್ನು ಕರೆಸಿ ಚಾನಲ್‌ಗಳಲ್ಲಿ ಚರ್ಚೆ ನಡೆಸಿದರು. ಜ್ಯೋತಿಷಿಗಳು ನಾನು ಅಧಿಕಾರ ಕಳ್ಕೊತೀನಿ ಅಂದ್ರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳ್ಕೊತೀನಿ ಅಂತಾನೂ ಜ್ಯೋತಿಷಿಗಳು ಹೇಳಿದ್ರು. ಆದರೆ ನಾನು ಅಧಿಕಾರ ಪೂರ್ಣಗೊಳಿಸಿ ಮತ್ತೆ ಎರಡನೇ ಬಾರಿ ಸಿಎಂ ಆದೆ. ಕಾಗೆ ಕೂತಾಗ ಮಾತಾಡಿದ್ದ ಜ್ಯೋತಿಷಿಗಳ ಮಾತಿಗೆ ಏನು ಬೆಲೆ ಬಂತು? ಇಂಥಾ ಮೌಡ್ಯದ ಸುದ್ದಿ ಮತ್ತು ಚರ್ಚೆಗಳನ್ನು ಚಾನಲ್‌ಗಳು ಮಾಡಬಾರದು.

ವಸ್ತು ಸ್ಥಿತಿಯನ್ನು ಜನರಿಗೆ ತಲುಪಿಸಿ. ಊಹೆ ಮಾಡಿಕೊಂಡು, ಕಲ್ಪಿಸಿಕೊಂಡು ಸುದ್ದಿ ಬರೆದು ಹಾಸ್ಯಾಸ್ಪದರಾಗಬೇಡಿ. ತಿರುಚಿ ಸುದ್ದಿ ಮಾಡುವುದನ್ನು ಬಿಡಿ. ನನ್ನ ಮಾತುಗಳ ಸಾಂದರ್ಭಿಕತೆಯನ್ನೇ ಮರೆ ಮಾಚಿ ಸುದ್ದಿ ಮಾಡ್ತಾರೆ. ಇದು ತಪ್ಪು. ನನ್ನ ಸರ್ಕಾರದಲ್ಲಿ ತಪ್ಪುಗಳಿದ್ದರೆ ಮುಲಾಜಿಲ್ಲದೆ ಬರೆಯಿರಿ. ಸರ್ಕಾರ ಕೊಟ್ಟ ಮಾತು ತಪ್ಪಿದೆಯಾ, ಜನಪರವಾಗಿ ಕೆಲಸ ಮಾಡ್ತಾ ಇದೆಯೋ? ಇಲ್ಲವೋ? ಎನ್ನುವುದನ್ನೂ ಪ್ರಾಮಾಣಿಕಕವಾಗಿ ಜನರಿಗೆ ತಲುಪಿಸಬೇಕು.

ನನ್ನ ಬಗ್ಗೆ ಸುಳ್ಳು ಬರೆದಾಗ, ಸತ್ಯ ತಿರುಚಿ ಸುದ್ದಿ ಪ್ರಸಾರ ಮಾಡಿದಾಗ ನಾನು ಯಾವತ್ತೂ ಯಾವ ಮಾಧ್ಯಮದವರಿಗೂ ಯಾಕೆ ಸುಳ್ಳು ಹೇಳ್ತೀರಾ ಎಂದು ಕರೆ ಮಾಡಿ ಕೇಳಿಲ್ಲ, ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಅದನ್ನೂ ಜನರಿಗೆ ತಲುಪಿಸಿ. ನಿಮಗೆ ವಾಕ್ ಸ್ವಾತಂತ್ರ್ಯ ಇದೆ. ಅದನ್ನು ಘನತೆಯಿಂದ ಬಳಸಿಕೊಳ್ಳಬೇಕು” ಎಂದು ಹೇಳಿದರು.

ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದ ಮಹಾ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕರುಗಳಾದ ರವಿ ಗಣಿಗ, ದಿನೇಶ್ ಗೂಳಿಗೌಡ, ರಮೇಶ್ ಬಂಡಿ ಸಿದ್ದೇಗೌಡ, ನರೇಂದ್ರ ಸ್ವಾಮಿ ಹಾಗೂ ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇಶ

ಚೆನ್ನೈ: ಸನಾತನ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ಮಾತನಾಡಿರುವುದು ವಿವಾದಕ್ಕೀಡಾಗಿದ್ದು ಇದಕ್ಕೆ ಸಂಬಂಧಿಸಿದ ಪ್ರಕರಣ ಚೆನ್ನೈ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರಂತೆ ಇಂದು ಪ್ರಕರಣದ ವಿಚಾರಣೆ ನಡೆದಾಗ ಉದಯನಿಧಿ ಪರವಾಗಿ ವಾದ ಮಂಡಿಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸನಾತನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಕ್ವೋ ವಾರಾಂಟೊ (Quo Warranto) ಪ್ರಕರಣವನ್ನು ವಜಾಗೊಳಿಸಬೇಕು. ಆರೋಪಿಗಳನ್ನು ಸಾಕ್ಷ್ಯ ಕೇಳುವುದು ಸಂವಿಧಾನ ಬಾಹಿರ.

ಆರೋಪ ಸಾಬೀತುಪಡಿಸಲು ಅರ್ಜಿದಾರರೇ ಸಾಕ್ಷ್ಯ ಸಲ್ಲಿಸಬೇಕು ಎಂದು ಸಚಿವ ಉದಯನಿಧಿ ಸ್ಟಾಲಿನ್ ಪರವಾಗಿ ವಾದಿಸಲಾಯಿತು. ಆದ್ದರಿಂದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಫಲವಾಗಿರುವ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಮಾಡಲಾಗಿತ್ತು.

ನಂತರ, ಮದ್ರಾಸ್ ಹೈಕೋರ್ಟ್ ಸಚಿವರಾದ ಉದಯನಿಧಿ ಸ್ಟಾಲಿನ್, ಶೇಖರ್ ಬಾಬು ಮತ್ತು ಇತರರ ವಿರುದ್ಧದ ಪ್ರಕರಣವನ್ನು ನವೆಂಬರ್ 7 ಕ್ಕೆ ಮುಂದೂಡಿತು.

ರಾಜಕೀಯ

ಬೆಂಗಳೂರು: ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ ಎಂದು ರಾಜ್ಯ ಪ್ರವಾಸ ಹೊರಟಿರುವ ರಾಜ್ಯ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಡಿದರಂತೆ’’ ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ. ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರ ಕಳುಹಿಸಿರುವ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ. ಯಾಕೆ, ನಿಮ್ಮದೇ ಸರ್ಕಾರ ಕಳುಹಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನೀವು ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಿ ಎಂದು ಕೇಳಿಕೊಂಡಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ? ಎಂದು ಮೂದಲಿಸಿದರು.

ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೊದಿ ಅವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ ಎಂದು ವ್ಯಂಗ್ಯವಾಡಿದರು.

ನೆಲ-ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ ರಾಜ್ಯ ಬಿಜೆಪಿ ನಾಯಕರೇ? ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ. ಬರಗಾಲದ ನಷ್ಟ – ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ ಎಂದು ಎಚ್ಚರಿಸಿದ್ದಾರೆ.

ವಿದೇಶ

ಬೀಜಿಂಗ್: ಚೀನಾದ ಬೈದು (Baidu) ಮತ್ತು ಅಲಿಬಾಬಾ (Alibaba) ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಲಾಗಿದೆ. ಪ್ಯಾಲೆಸ್ತೀನ್ ಗೆ ಬೆಂಬಲ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ 20 ದಿನಗಳಿಗೂ ಹೆಚ್ಚು ಕಾಲ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಚೀನಾದ ಪ್ರಮುಖ ತಂತ್ರಜ್ಞಾನ ಕಂಪನಿಗಳಾದ ಅಲಿಬಾಬಾ ಮತ್ತು ಬೈದು ತಮ್ಮ ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಿವೆ. ಚೀನಾದ ಪ್ಯಾಲೆಸ್ತೀನ್ ಪರ ನಿಲುವನ್ನು ಬೆಂಬಲಿಸುವ ಸಲುವಾಗಿ ಚೀನಾದ ಕಂಪನಿಗಳು ಈ ಕ್ರಮವನ್ನು ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತದೆ.

ಆದಾಗ್ಯೂ, ಬೈದುವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಯಲ್ಲಿ ಅಂತರಾಷ್ಟ್ರೀಯವಾಗಿ ಸೂಚಿಸಲಾದ ಅಳತೆಗಳ ಪ್ರಕಾರ ಇಸ್ರೇಲ್‌ನ ಗಡಿಗಳನ್ನು ಗುರುತಿಸಲಾಗಿದ್ದರೂ ಆ ಪ್ರದೇಶದಲ್ಲಿ ಇಸ್ರೇಲ್ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಲಿಬಾಬಾ ಮತ್ತು ಬೈದು ಕಂಪನಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯಾರನ್ನೂ ಬೆಂಬಲಿಸದ ಚೀನಾ ಪ್ಯಾಲೆಸ್ತೀನ್ ಗೆ ಪ್ರತ್ಯೇಕ ರಾಜ್ಯ ನೀಡುವುದೇ ಪರಿಹಾರ ಎಂದು ಹೇಳಿದ್ದು ಗಮನಾರ್ಹ.

ದೇಶ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಮೊಮ್ಮಗ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ‘ನನ್ನ ಶಕ್ತಿ, ನನ್ನ ಅಜ್ಜಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಅವರ ಸ್ಮಾರಕಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪುಷ್ಪ ನಮನ ಸಲ್ಲಿಸಿದರು.

ಈ ಹಿನ್ನಲೆಯಲ್ಲಿ, ಇಂದಿರಾಗಾಂಧಿ ಅವರನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ, “ನನ್ನ ಶಕ್ತಿ, ನನ್ನ ಅಜ್ಜಿ! ನೀವು ಸರ್ವಸ್ವವನ್ನೂ ತ್ಯಾಗ ಮಾಡಿದ ಭಾರತವನ್ನು ನಾನು ಸದಾ ರಕ್ಷಿಸುತ್ತೇನೆ. ನಿಮ್ಮ ನೆನಪುಗಳು ಸದಾ ನನ್ನೊಂದಿಗೆ, ನನ್ನ ಹೃದಯದಲ್ಲಿ. ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಲ್ಲದೇ ಇಂದಿರಾ ಕುರಿತ ತಮ್ಮ ನೆನಪುಗಳನ್ನು ರಾಹುಲ್ ವಿಡಿಯೋ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ: https://x.com/RahulGandhi/status/1719201716271219183?s=20

ದೇಶ ರಾಜಕೀಯ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ‘ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್’ ಸರಣಿಯ 3ನೇ ಆಡಿಯೋ ಇಂದು ಬಿಡುಗಡೆಯಾಗಿದೆ. ಅದರಲ್ಲಿ ಮಾತನಾಡಿರುವ ಎಂ.ಕೆ.ಸ್ಟಾಲಿನ್, “ರಾಜಭವನಗಳ ಮೂಲಕ ರಾಜ್ಯ ಸ್ವಾಯತ್ತತೆಯನ್ನು ಬಿಜೆಪಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತ ಒಂದು ಸಂಯುಕ್ತ ರಾಷ್ಟ್ರ. ವಿವಿಧ ಸುಂದರವಾದ ಹೂವುಗಳಿಂದ ತುಂಬಿದ ಅದ್ಭುತ ಉದ್ಯಾನ. ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಹಕ್ಕುಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ಪ್ರಧಾನಿಯಾದ ಬಳಿಕ ರಾಜ್ಯದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ.

ಬಿಜೆಪಿ, ರಾಜ್ಯಗಳನ್ನು ರದ್ದುಪಡಿಸಬೇಕೆಂದು ಬಯಸುತ್ತಿದೆ. ಸಿಎಜಿ ಮೂಲಕ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದ ಅಧಿಕಾರಿಗಳು ಎಲ್ಲರನ್ನೂ ಬಿಜೆಪಿ ಸರ್ಕಾರ ತ್ವರಿತವಾಗಿ ವರ್ಗಾವಣೆ ಮಾಡಿದೆ. ಬಿಜೆಪಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ.

ರಾಜ್ಯಗಳನ್ನು ರಕ್ಷಿಸೋಣ, ಭಾರತವನ್ನು ರಕ್ಷಿಸೋಣ, ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸೋಣ. ಕೇಂದ್ರದಲ್ಲಿ ಒಕ್ಕೂಟ ಸರ್ಕಾರ; ರಾಜ್ಯಗಳಲ್ಲಿ ಸ್ವಾಯತ್ತತೆ ಸರ್ಕಾರ ಇದುವೇ ನಿಜವಾದ ಪ್ರಜಾಪ್ರಭುತ್ವ ಆಗಿರುತ್ತದೆ” ಎಂದು ಹೇಳಿದರು.

ದೇಶ

ನವದೆಹಲಿ: ಉಪಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರದ ಅಧಿಕಾರವೂ ಸೇರಿದಂತೆ 13 ಮಸೂದೆಗಳು ತಮಿಳುನಾಡು ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿವೆ.

ಈ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡದ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಮೊಕದ್ದಮೆ ಹೂಡಲಾಗಿದೆ. ತಮಿಳುನಾಡು ಸರ್ಕಾರವು ಕಳುಹಿಸಿದ ಮಸೂದೆಗಳನ್ನು ಅನುಮೋದಿಸಲು ವಿಳಂಬದ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.

ತಮಿಳುನಾಡು ವಿಧಾನಸಭೆ ಅಂಗೀಕರಿಸಿರುವ ವಿಧೇಯಕಗಳಿಗೆ ಕಾಲಮಿತಿಯಲ್ಲಿ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮತ್ತು ಸರ್ಕಾರಿ ಆದೇಶಗಳನ್ನು ಅಂಗೀಕರಿಸಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದೂ ಮನವಿ ಮಾಡಲಾಗಿದೆ.

ದೇಶ

ಅಹಮದಾಬಾದ್: ಭಾರತದ ಉಕ್ಕಿನ ಮನುಷ್ಯ ಎಂದು ಬಣ್ಣಿಸಲಾಗುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಮಾಲಾರ್ಪಣೆ ಮಾಡಿದರು.

ಅವರ ಜನ್ಮದಿನದಂದು ಪ್ರಧಾನಿ ಮೋದಿ ಗುಜರಾತ್‌ನಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಏಕತೆಯನ್ನು ಸಾರುವ ವಿಶ್ವದ ಅತಿದೊಡ್ಡ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ನರ್ಮದಾ ನದಿಯ ದಡದಲ್ಲಿ ಸ್ಥಾಪಿಸಲಾಗಿದೆ. ಪ್ರಧಾನಿಯವರು ಇಲ್ಲಿಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ದೇಶ

ತಮಿಳುನಾಡಿನಲ್ಲಿ ರ‍್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಪೊಲೀಸರ ವಿರುದ್ಧ ಆರ್‌ಎಸ್‌ಎಸ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.!

ದೇಶದ 76ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಇದೇ 22 ಮತ್ತು 29 ರಂದು ತಮಿಳುನಾಡಿನ 33 ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ನಿಂದ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದವು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಚಂದ್ರ ಅವರು ಆರ್‌ಎಸ್‌ಎಸ್‌ ಮೆರವಣಿಗೆಗೆ ಷರತ್ತುಗಳೊಂದಿಗೆ ಅನುಮತಿ ನೀಡುವಂತೆ ಪೊಲೀಸರಿಗೆ ಕಳೆದ 16 ರಂದು ಆದೇಶ ಹೊರಡಿಸಿದ್ದರು.

ಈ ಹಿನ್ನಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಮೆರವಣಿಗೆಗೆ ಅನುಮತಿ ನೀಡದ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ಆರ್‌ಎಸ್‌ಎಸ್ ಪರ ವಾದ ಮಂಡಿಸಿದ ವಕೀಲರು, ಪ್ರಕರಣವನ್ನು ತುರ್ತು ಪ್ರಕರಣವಾಗಿ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಜಯಚಂದ್ರ ಅವರ ಬಳಿ ಮನವಿ ಮಾಡಿದರು.

ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ, ಮೆರವಣಿಗೆ ನಡೆಸಲು ಅನುಮತಿ ನೀಡಿದ ದಿನಾಂಕಗಳು ಈಗಾಗಲೇ ಮುಗಿದಿರುವುದರಿಂದ ಇದನ್ನು ತುರ್ತು ಪ್ರಕರಣವೆಂದು ಪರಿಗಣಿಸುವ ಅಗತ್ಯವಿಲ್ಲ ಮತ್ತು ಅರ್ಜಿಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ದೇಶ ರಾಜಕೀಯ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೂ ಬಂಧಿಸಬಹುದು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

ಹೊಸ ಮದ್ಯ ನೀತಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಂಧನಕ್ಕೊಳಗಾಗಿ ಸುಮಾರು 8 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಲಾಗಿದೆ. ಇಂದಿನ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೂ ಜಾಮೀನು ನೀಡಲು ನಿರಾಕರಿಸಿದ್ದಾರೆ. 338 ಕೋಟಿ ಅಕ್ರಮ ಹಣ ವಿನಿಮಯವಾಗಿರುವುದಾಗಿ ಇಡಿ ಅಧಿಕಾರಿಗಳು ಸಾಕ್ಷ್ಯ ಸಹಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ಕೋರ್ಟ್ ಒಪ್ಪಿಕೊಂಡಿದೆ.

ಇದರ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಮನೋಜ್ ತಿವಾರಿ, “ಅಕ್ರಮ ಹಣ ವರ್ಗಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಪ್ರಮುಖ ಮುಖಂಡರು ಏಕೆ ಕೇಜ್ರಿವಾಲ್ ಕೂಡ ಬಂಧನವಾಗಬಹುದು. ಅಷ್ಟೊಂದು ಆಧಾರಗಳು ಇದೆ ಎಂದು ತಿಳಿಯುತ್ತೇನೆ” ಎಂದು ಹೇಳಿದ್ದಾರೆ.