ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
RSS Archives » Dynamic Leader
October 5, 2024
Home Posts tagged RSS
ರಾಜಕೀಯ

ಜಾತಿವಾರು ಜನಗಣತಿ ಪರವೋ ಅಥವಾ ವಿರೋಧವೋ ಎಂಬುದನ್ನು ಆರ್‌ಎಸ್‌ಎಸ್ ಸ್ಪಷ್ಟಪಡಿಸಬೇಕು ಎಂದು ಖರ್ಗೆ ಹೇಳಿದ್ದಾರೆ.

ಜಾತಿವಾರು ಜನಗಣತಿ ಕುರಿತು ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ ಪ್ರತಿಕ್ರಿಯಿಸಿದೆ. ಕಲ್ಯಾಣ ಕಾರ್ಯಕ್ರಮಗಳಿಗೆ ಜಾತಿವಾರು ಜನಗಣತಿ ಉಪಯುಕ್ತವಾಗಿರುತ್ತದೆ. ಆದರೆ, ಅದನ್ನು ಚುನಾವಣಾ ಲಾಭಕ್ಕಾಗಿ ಬಳಸಬಾರದು ಎಂದು ಎಚ್ಚರಿಕೆ ನೀಡಿದೆ.

ಕೇರಳದ ಪಾಲಕ್ಕಾಡ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ಸಂಘಟನೆಯ ಮುಖ್ಯ ವಕ್ತಾರ ಸುನೀಲ್ ಅಂಬೇಕರ್, “ಜಾತಿವಾರು ಜನಗಣತಿ ಎಂಬುದು ಬಹಳ ಸೂಕ್ಷ್ಮವಾದ ವಿಚಾರ. ಅದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಬಹಳ ಮುಖ್ಯವಾದದ್ದು. ಅದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು.

ಕೆಲವೊಮ್ಮೆ ಸರ್ಕಾರಕ್ಕೆ ದತ್ತಾಂಶಗಳು (Data) ಬೇಕಾಗುತ್ತದೆ. ಹಿಂದಿನ ದಿನಗಳಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ನಡೆಸಲಾಯಿತು. ಆದರೆ ಜಾತಿ ಗಣತಿಯು ಸಮುದಾಯಗಳು ಮತ್ತು ಜಾತಿಗಳ ಕಲ್ಯಾಣದ ಬಗ್ಗೆ ಮಾತ್ರ ಮಾತನಾಡಬೇಕು. ಇದನ್ನು ರಾಜಕೀಯವಾಗಿ ಅಥವಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಾರದು” ಎಂದು ಹೇಳಿದರು.

ಈ ಕುರಿತು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ಜಾತಿವಾರು ಜನಗಣತಿ ಪರವೋ ಅಥವಾ ವಿರೋಧವೋ ಎಂಬುದನ್ನು ಆರ್‌ಎಸ್‌ಎಸ್ ಜನತೆಗೆ ಸ್ಪಷ್ಟಪಡಿಸಬೇಕು.

ದೇಶದ ಸಂವಿಧಾನದ ಬದಲು ಮನುಸ್ಮೃತಿಯನ್ನು ಪ್ರತಿಪಾದಿಸುವ ಸಂಘ ಪರಿವಾರ ದಲಿತರು, ಆದಿವಾಸಿಗಳು, ಹಿಂದುಳಿದ ಮತ್ತು ಬಡ ಸಮುದಾಯದ ಭಾಗವಹಿಸುವಿಕೆಯ ಬಗ್ಗೆ ಕಾಳಜಿ ವಹಿಸುತ್ತದೆಯೇ ಅಥವಾ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ

ಪಾಲಕ್ಕಾಡ್: ಆರ್‌ಎಸ್‌ಎಸ್‌ನ 3 ದಿನಗಳ ಸಮಾವೇಶ ನಿನ್ನೆ ಕೇರಳದಲ್ಲಿ ಆರಂಭವಾಗಿದೆ. ಇದರಲ್ಲಿ ಸಮಾಜ ಸುಧಾರಣೆ, ಬಾಂಗ್ಲಾದೇಶ ಸಮಸ್ಯೆ ಕುರಿತು ಚರ್ಚಿಸಲು ಯೋಜಿಸಲಾಗಿದೆ.

ನಿನ್ನೆ ಕೇರಳದ ಪಾಲಕ್ಕಾಡ್ (Palakkad)ನಲ್ಲಿ ಆರ್‌ಎಸ್‌ಎಸ್‌ನ (RSS) ಅಖಿಲ ಭಾರತ ಸಮನ್ವಯ ಸಭೆ ಆರಂಭವಾಗಿದೆ. ರಾಷ್ಟ್ರೀಯ ಮಟ್ಟದ ವಾರ್ಷಿಕ ಸಭೆ ಕೇರಳದಲ್ಲಿ ನಡೆಯುತ್ತಿರುವುದು ಇದೇ ಮೊದಲು. 3 ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಆರ್‌ಎಸ್‌ಎಸ್‌ನ ಸಹಬಾಗಿ ಸಂಘಟನೆಗಳಾದ 32 ಸಂಘ / ಸಂಸ್ಥೆಗಳ 320 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಆರ್‌ಎಸ್‌ಎಸ್ ಅಧ್ಯಕ್ಷ ಮೋಹನ್ ಭಾಗವತ್ (Mohan Bhagwat) ಮತ್ತು 6 ಜಂಟಿ ಪ್ರಧಾನ ಕಾರ್ಯದರ್ಶಿಗಳೂ ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಈ ಸಭೆಯ ಆರಂಭದಲ್ಲಿ ವಯನಾಡು ಭೂಕುಸಿತದ ವಿವರಗಳು ಮತ್ತು ಆರ್‌ಎಸ್‌ಎಸ್ ಸ್ವಯಂಸೇವಕರು ಮಾಡಿದ ಸಹಾಯದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

ಶತಮಾನೋತ್ಸವ (Centenary) ಆಚರಣೆ: ಆರ್‌ಎಸ್‌ಎಸ್ ಸಂಘಟನೆಯ ಶತಮಾನೋತ್ಸವ ಸಮಾರಂಭ ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಮುಂದಿನ ಒಂದು ವರ್ಷಕ್ಕೆ ಸಮಾಜ ಸುಧಾರಣೆ ಮತ್ತು ದೇಶ ನಿರ್ಮಾಣಕ್ಕೆ ಸಂಬಂಧಿಸಿದ 5 ಪ್ರಮುಖ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ.

ಶೇಖ್ ಹಸೀನಾ (Sheikh Hasina) ಅವರನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಹೊರಹಾಕಿದ ನಂತರ, ಆ ದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಹಾಗೂ ಅಲ್ಲಿನ ದೇವಾಲಯಗಳ ಮೇಲಿನ ದಾಳಿ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ (BJP) 240 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದರಿಂದ ಸರಳ ಬಹುಮತ ಸಿಗಲಿಲ್ಲ. ಆದಾಗ್ಯೂ, ಸಮ್ಮಿಶ್ರ ಪಕ್ಷಗಳ ಬೆಂಬಲದೊಂದಿಗೆ ಸತತ 3ನೇ ಅವಧಿಗೆ ಸರ್ಕಾರ ರಚಿಸಿದೆ. ಕಳೆದ 2 ಚುನಾವಣೆಗಳಿಗಿಂತ ಈ ಬಾರಿ ಬಿಜೆಪಿ ಕಡಿಮೆ ಸ್ಥಾನ ಗಳಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಘರ್ಷವೇ ಕಾರಣ ಎಂದೂ ಹೇಳಲಾಗುತ್ತಿದೆ. ಈ ಸನ್ನಿವೇಶದಲ್ಲಿ ಈ ಸಭೆ ನಡೆಯುತ್ತಿದೆ.

ದೇಶ

ಪುಣೆ, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರಿಗೆ ಕೇಂದ್ರ ಗೃಹ ಸಚಿವಾಲಯ ವಿಶೇಷ ‘ಝಡ್ ಪ್ಲಸ್’ ಭದ್ರತೆಗೆ ಆದೇಶಿಸಿದೆ.

ಮಹಾರಾಷ್ಟ್ರದಲ್ಲಿ, ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯವಾದಿ ಕಾಂಗ್ರೆಸ್ (ಎಸ್‌ಪಿ) ಪಕ್ಷದ ಶರದ್ ಪವಾರ್ ಅವರಿಗೆ ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವಾಲಯ ‘ಝಡ್ ಪ್ಲಸ್’ ಭದ್ರತೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ, ವಿವಿಧ ಭಯೋತ್ಪಾದಕ ಸಂಘಟನೆಗಳಿಂದ ಆರ್‌ಎಸ್‌ಎಸ್ ಹಿರಿಯ ನಾಯಕ ಮೋಹನ್ ಭಾಗವತ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿತ್ತು.

ಹಾಗಾಗಿ, ಮೋಹನ್ ಭಾಗವತ್‌ಗೆ ‘ಝಡ್‌ ಪ್ಲಸ್‌’ ಜೊತೆಗೆ ಎಎಸ್‌ಎಲ್ ಸುಧಾರಿತ ಭದ್ರತಾ ಸಂಪರ್ಕದೊಂದಿಗೆ ವಿಶೇಷ ಭದ್ರತಾ ವಿಭಾಗದ ಅಡಿಯಲ್ಲಿ ಭದ್ರತೆಯನ್ನು ಒದಗಿಸಲು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಈ ರೀತಿ, ಎಎಸ್ಎಲ್ ಅನ್ನು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾತ್ರ ನೀಡಲಾಗಿದೆ. ಇದೀಗ ಮೋಹನ್ ಭಾಗವತ್ ಅವರಿಗೂ ಅದೇ ಎಎಸ್ಎಲ್ ವಿಭಾಗದಡಿ ವಿಶೇಷ ರಕ್ಷಣೆ ನೀಡುವಂತೆ ಆದೇಶಿಸಲಾಗಿದೆ.

ಅದರಂತೆ, CRPF ಎಂದು ಕರೆಯಲ್ಪಡುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 55 ಸಶಸ್ತ್ರ ಸಿಬ್ಬಂದಿಗಳು, ದಿನದ 24 ಗಂಟೆಯೂ ಸರದಿ ಆಧಾರದ ಮೇಲೆ ಭದ್ರತೆ ಒದಗಿಸುತ್ತಾರೆ. ಈ ವಿಭಾಗದ ಅಡಿಯಲ್ಲಿ ಅಗತ್ಯವಿದ್ದರೆ ಹೆಚ್ಚುವರಿಯಾಗಿ ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಳ್ಳಬಹುದು.

ದೇಶ

ಕೇಂದ್ರ ಸರ್ಕಾರಿ ನೌಕರರ ಮೇಲೆ ವಿಧಿಸಲಾದ ನಿಷೇಧದಿಂದ ವಿನಾಯಿತಿ ಪಡೆದ ನಂತರ, ರಾಜಸ್ಥಾನದಲ್ಲಿ ಆರ್‌ಎಸ್‌ಎಸ್  (RSS) ಮೇಲಿನ ನಿಷೇಧಕ್ಕೂ ವಿನಾಯಿತಿ ನೀಡಲಾಗಿದೆ!

ಧಾರ್ಮಿಕ ರಾಜಕೀಯ ಮತ್ತು ತಾರತಮ್ಯ ರಾಜಕಾರಣವನ್ನು ಉತ್ತೇಜಿಸುವ ಆರ್‌ಎಸ್‌ಎಸ್ – ಬಿಜೆಪಿಯ ಪ್ರಾಬಲ್ಯವು ಸರ್ಕಾರಿ ಉದ್ಯೋಗಗಳಿಗೂ ವಿಸ್ತರಿಸಲು ಪ್ರಾರಂಭಿಸಿದೆ.

40 ವರ್ಷಗಳ ಹಿಂದೆ, ಭಾರತೀಯ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಆಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದ್ದವು.

ಕಾರಣ, ನಿರ್ದಿಷ್ಟ ದಮನಕಾರಿ ಜೀವನಶೈಲಿಯನ್ನು ಜಾರಿಗೆ ತರುವುದು ಆರ್‌ಎಸ್‌ಎಸ್‌ನ ಮೂಲ ಸಿದ್ಧಾಂತವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಹುಟ್ಟಿನಿಂದಲೇ ಮನುಷ್ಯನನ್ನು ಪ್ರತ್ಯೇಕಗೊಳಿಸಿದ್ದು ಕೂಡಾ ಆ ವಿಚಾರಧಾರೆಯೆ ಆಗಿತ್ತು. ಹಾಗಾಗಿ, ನಾಗರಿಕ ಸೇವಕರು ಹುಟ್ಟಿನಿಂದ ಪ್ರತ್ಯೇಕತೆಯ ಸಿದ್ಧಾಂತವನ್ನು ಅನುಸರಿಸಿದರೆ, ಅವರು ಎಲ್ಲಾ ಜನರಿಗೆ ಸಮಾನ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ನಿಷೇಧಿಸಲಾಗಿತ್ತು.

ಆದಾಗ್ಯೂ, ದಬ್ಬಾಳಿಕೆಯ ಜೀವನಶೈಲಿಯನ್ನು ಕಾರ್ಯರೂಪಕ್ಕೆ ತರಲೇಬೇಕು ಎಂಬ ಉದ್ದೇಶದಿಂದ ಆಡಳಿತದ ಚುಕಾಣಿಯನ್ನು ಹಿಡಿದಿರುವ ಬಿಜೆಪಿ, ಅದನ್ನು ಕಾರ್ಯರೂಪಕ್ಕೆ ತರಲು ಕಾರ್ಯನಿರ್ವಹಿಸುತ್ತಿದೆ. ಅದು ರಾಜ್ಯ ಸರ್ಕಾರವೇ ಇರಲಿ ಅಥವಾ ಕೇಂದ್ರ ಸರ್ಕಾರವೇ ಇರಲಿ, ಅದನ್ನು ಸಾಬೀತುಪಡಿಸಲು, ಕಳೆದ ತಿಂಗಳು ಕೇಂದ್ರ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸಂಘಟನೆಗೆ ಸೇರುವ ನಿಷೇಧವನ್ನು ತೆಗೆದುಹಾಕಿತು.

ಅದರ ಮುಂದುವರಿದ ಭಾಗವಾಗಿ, ರಾಜಸ್ಥಾನ ಬಿಜೆಪಿ ಸರ್ಕಾರವು, ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ಗೆ ಸೇರ್ಪಡೆಗೊಳ್ಳಲು ರಾಜ್ಯ ಸರ್ಕಾರಿ ನೌಕರರ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಈಗಾಗಲೇ, ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಹರಿಯಾಣ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಆರ್‌ಎಸ್‌ಎಸ್ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆಗೆದುಹಾಕಿರುವುದು ಗಮನಾರ್ಹ.

ದೇಶ

ರಾಂಚಿ: ‘ಕೋವಿಡ್ ಯುಗದ ನಂತರ, ಭಾರತವು ಶಾಂತಿ ಮತ್ತು ಸಂತೋಷಕ್ಕಾಗಿ ಯೋಜನೆಯನ್ನು ಹೊಂದಿದೆ ಎಂದು ಜಗತ್ತು ಅರ್ಥಮಾಡಿಕೊಂಡಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಜಾರ್ಖಂಡ್‌ನ ಕುಮ್ಲಾದಲ್ಲಿ ಸೇವಾ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ‘ಜಾಗತೀಕವಾಗಿ ಕಳೆದ 2,000 ವರ್ಷಗಳಲ್ಲಿ ಸಂತೋಷ ಮತ್ತು ಶಾಂತಿಯನ್ನು ಹುಡುಕುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಆದರೆ ಇವೆರಡೂ ಭಾರತೀಯ ಜೀವನ ವಿಧಾನದಲ್ಲಿ ಅಂತರ್ಗತವಾಗಿವೆ. ಕೋವಿಡ್ ಹರಡಿಕೆಯ ನಂತರ, ಭಾರತವು ಶಾಂತಿ ಮತ್ತು ಸಂತೋಷಕ್ಕಾಗಿ ಯೋಜನೆಯನ್ನು ಹೊಂದಿದೆ ಎಂದು ಜಗತ್ತಿಗೆ ತಿಳಿದಿದೆ.

ಸನಾತನ ಧರ್ಮವು ಅರಮನೆಯಿಂದ ಹುಟ್ಟಿಕೊಂಡಿಲ್ಲ. ಅದು ಆಶ್ರಮದಿಂದ ಮತ್ತು ಅರಣ್ಯದಿಂದ ಬಂದಿದೆ. ಮಾನವ ಕಲ್ಯಾಣದ ಬಗ್ಗೆ ಕಾಳಜಿ ಹೊಂದಿದೆ. ಕಾಲ ಬದಲಾದರೂ ನಮ್ಮ ಬಟ್ಟೆ ಬದಲಾದರೂ ಪ್ರಕೃತಿ ಬದಲಾಗುವುದಿಲ್ಲ. ಸಮಯ ಬದಲಾದಂತೆ, ನಮ್ಮ ಕೆಲಸವನ್ನು ಮುಂದುವರಿಸಲು ಮತ್ತು ಸೇವೆ ಮಾಡಲು ನಾವು ಹೊಸ ಮಾರ್ಗಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.

ಕಾಡಿನಲ್ಲಿ ವಾಸಿಸುವ ಜನರು ಪ್ರಕೃತಿಯೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇದು ದೊಡ್ಡ ನಗರಗಳಲ್ಲಿ ಕಾಣುವುದಿಲ್ಲ. ನಾವು ಕಣ್ಣು ಮುಚ್ಚಿ ಗ್ರಾಮಸ್ಥರನ್ನು ನಂಬಬಹುದು. ಆದರೆ ನಗರಗಳಲ್ಲಿ ನಾವು ಯಾರೊಂದಿಗೆ ಮಾತನಾಡುತ್ತೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು.

ದೇಶದ ಭವಿಷ್ಯದ ಬಗ್ಗೆ ಎಂದಿಗೂ ಚಿಂತಿಸಬೇಡಿ; ದೇಶದ ಒಳಿತಿಗಾಗಿ ಅನೇಕರು ಕೆಲಸ ಮಾಡುತ್ತಿದ್ದಾರೆ. ನಾವೂ ಪ್ರಯತ್ನಿಸುತ್ತಿದ್ದೇವೆ. ಭಾರತೀಯ ಜನರು ತಮ್ಮದೇ ಆದ ಸ್ವಭಾವವನ್ನು ಹೊಂದಿದ್ದಾರೆ. ಅನೇಕರು ಯಾವುದೇ ವಸ್ತು ಅಥವಾ ಕೀರ್ತಿಯನ್ನು ಅಪೇಕ್ಷಿಸದೆ ದೇಶದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದು ಫಲಿತಾಂಶಗಳನ್ನು ನೀಡುತ್ತದೆ.

ನಮ್ಮಲ್ಲಿ 33 ಕೋಟಿ ದೇವಾನುದೇವತೆಗಳು ಇರುವುದರಿಂದ ವಿವಿಧ ರೀತಿಯ ಆಚರಣೆಗಳನ್ನು ಹೊಂದಿರುತ್ತೇವೆ. ನಮ್ಮ ದೇಶದಲ್ಲಿ 3,800ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. ಆಹಾರ ಪದ್ಧತಿಯೂ ವಿಭಿನ್ನವಾಗಿದೆ. ನಾವು ಬೇರೆಯಾಗಿದ್ದರೂ ನಮ್ಮ ಮನಸ್ಸು ಒಂದೇ ಆಗಿದೆ. ಇದು ಇತರ ದೇಶಗಳಲ್ಲಿ ಕಂಡುಬರುವುದಿಲ್ಲ.

ನಾವು ಇತರರ ಅನುಕೂಲಕ್ಕಾಗಿ ಕೆಲಸ ಮಾಡಿದಾಗ, ನಾವೂ ಪ್ರಗತಿ ಹೊಂದುತ್ತೇವೆ. ಮನುಷ್ಯರು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಸಾವಿನ ಭಯವಿಲ್ಲ. ಒಬ್ಬ ವ್ಯಕ್ತಿಯು ಬೀಗ ಹಾಕಿದ ಕೋಣೆಯಲ್ಲಿ ಒಬ್ಬಂಟಿಯಾಗಿ ವಾಸಿಸಬೇಕಾದರೆ, ಅವನು ಹುಚ್ಚನಾಗುತ್ತಾನೆ. ಕೂಡಿ ಬಾಳಿದಾಗ ಮಾತ್ರ ಭಾವನೆಗಳು ಒಂದಾಗುತ್ತವೆ.

ಸಮಾಜಕ್ಕೆ ಮರಳಿ ಕೊಡುವುದು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದೆ ಎಂದು ತಥಾಕಥಿತ ಪ್ರಗತಿಪರರು ಈಗ ನಂಬಿದ್ದಾರೆ. ಇದು ವೇದಗಳಲ್ಲಿ ಎಲ್ಲಿಯೂ ಬರೆದಿಲ್ಲ. ಆದರೆ ಇದು ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸ್ವಭಾವದಲ್ಲಿದೆ. ಗ್ರಾಮದ ಕಾರ್ಯಕರ್ತರು ಸಮಾಜದ ಸ್ವಾಸ್ಥ್ಯಕ್ಕಾಗಿ ಅವಿರತವಾಗಿ ಶ್ರಮಿಸಬೇಕು. ಅಭಿವೃದ್ಧಿಗೆ ಅಂತ್ಯವಿದೆಯೇ? ನಾವು ನಮ್ಮ ಗುರಿಯನ್ನು ತಲುಪಿದಾಗ, ನಾವು ಇನ್ನೂ ಬಹಳ ದೂರ ಸಾಗಬೇಕಾಗಿರುವುದು ನಮಗೆ ಅರ್ಥವಾಗುತ್ತದೆ’ ಎಂದು ಮಾತನಾಡಿದ್ದಾರೆ.

ದೇಶ

ತಿರುವನಂತಪುರಂ: ಕೇಂದ್ರದಲ್ಲಿ 3ನೇ ಬಾರಿಗೆ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆ ಸಮಾಲೋಚನೆ ನಡೆಸಲು ನಿರ್ಧರಿಸಿವೆ. ಜುಲೈ 31 ರಿಂದ ಆಗಸ್ಟ್ 2ರ ವರೆಗೆ ನಡೆಯುವ ಈ ಸಮಾಲೋಚನಾ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಸಮ್ಮಿಶ್ರ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ 3ನೇ ಅವಧಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ್ದಾರೆ. ಕೇರಳದಿಂದ ಪ್ರಥಮ ಬಾರಿಗೆ ಸುರೇಶ್ ಗೋಪಿ ಬಿಜೆಪಿ ಪರವಾಗಿ 74 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತ್ರಿಶೂರ್ ಪೂರಂ ನಡೆಯುವ ಈ ನಗರದಲ್ಲಿ ಬಿಜೆಪಿಯ ಗೆಲುವನ್ನು ಆರ್‌ಎಸ್‌ಎಸ್‌ ಪ್ರಮುಖವಾಗಿ ಪರಿಗಣಿಸುತ್ತಿದೆ. ಆರ್‌ಎಸ್‌ಎಸ್‌ಗೆ ಕೇರಳದಲ್ಲಿ ಹಲವು ಶಾಖೆಗಳಿವೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪದಾಧಿಕಾರಿಗಳು ವರ್ಷಕ್ಕೊಮ್ಮೆ ಸಭೆ ಸೇರಿ ಮಾತನಾಡುವುದು ವಾಡಿಕೆ.

ಈ ಹಿನ್ನೆಲೆಯಲ್ಲಿ, ಜುಲೈ 31 ರಿಂದ ಆಗಸ್ಟ್ 2 ರವರೆಗೆ 3 ದಿನಗಳ ಕಾಲ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಪಾಲಕ್ಕಾಡ್‌ನಲ್ಲಿ ನಡೆಯುವ ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಲೇಖನ

ಡಿ.ಸಿ.ಪ್ರಕಾಶ್

ಬಿಜೆಪಿಯ ಮೇಲೆ ಅದರ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ಅತೃಪ್ತದಲ್ಲಿದೆ ಎಂಬ ಸುದ್ದಿ ಪ್ರಕಟವಾಗುತ್ತಲೇ ಇದೆ!

ಇತ್ತೀಚೆಗೆ ಬಿಜೆಪಿ ಮತ್ತು ಅದರ ಸಂಘಟನೆಯಾದ ಆರ್‌ಎಸ್‌ಎಸ್ ನಡುವೆ ಸಂಘರ್ಷ ನಡೆಯುತ್ತಿದೆ. ಅದರಲ್ಲೂ 2024ರ ಲೋಕಸಭೆ ಚುನಾವಣೆ ವೇಳೆಗೆ ಈ ಸಂಘರ್ಷ ಹೆಚ್ಚಿರುವುದನ್ನು ಕಾಣಬಹುದು.

ಬಿಜೆಪಿ ಅಧಿಕಾರದಲ್ಲಿರುವುದರಿಂದ ಆರ್‌ಎಸ್‌ಎಸ್ ಸಂಘಟನೆಗೆ ಮನ್ನಣೆ ನೀಡದಿರುವುದು ಆರ್‌ಎಸ್‌ಎಸ್ ನಿರ್ವಾಹಕರಿಗಾಗಿ ಸಿಟ್ಟು ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲವಾಗಿ ಚುನಾವಣಾ ಕೆಲಸ ಮಾಡಿಲ್ಲ ಎಂಬ ಸುದ್ದಿ ಹೊರಬಿದ್ದಿರುವಾಗಲೇ ಆರ್‌ಎಸ್‌ಎಸ್ ಸಂಘಟನೆಯ ಮುಖವಾಣಿಯಾದ ‘ಆರ್ಗನೈಸರ್’ನಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.

ಆರ್‌ಎಸ್‌ಎಸ್‌ನ ರತನ್ ಶಾರದಾ ಅವರು ಈ ಲೇಖನವನ್ನು ಬರೆದಿದ್ದಾರೆ. ‘ಮೋದಿ 3.0 – ತಪ್ಪುಗಳನ್ನು ಸರಿಪಡಿಸಲಿಕ್ಕಾಗಿ ಒಂದು ಸಂಭಾಷಣೆ’ ಎಂಬ ಶೀರ್ಷಿಕೆಯ ಲೇಖನದಲ್ಲಿ, ‘ಬಿಜೆಪಿ ನಾಯಕರು ಮತ್ತು ಆಡಳಿತಗಾರರಿಗೆ ಬೀದಿಯಲ್ಲಿ ಧ್ವನಿಸುವ ಜನರ ಕೂಗು ಕೇಳುವುದಿಲ್ಲ. ಬದಲಿಗೆ, ಪ್ರಧಾನಿ ಮೋದಿಯವರ ಜನಪ್ರಿಯತೆಯ ಬೆಳಕಿನಲ್ಲಿ ಅವರು ಬಿಸಿಲು ಕಾಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಅಲ್ಲದೆ, ‘ಬಿಜೆಪಿ ನಾಯಕರು ತಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾದಲ್ಲಿದ್ದರು. ಆದರೆ ವಾಸ್ತವ ಏನೆಂಬುದನ್ನು ಚುನಾವಣಾ ಫಲಿತಾಂಶ ತೋರಿಸಿದೆ’ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ನೋಡಿದರೆ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸಂಘಟನೆ ಬಿಜೆಪಿ ಪರ ಕೆಲಸ ಮಾಡಿಲ್ಲ ಎಂಬ ವರದಿಗಳು ನಿಜ ಎಂಬುದನ್ನು ಈ ಲೇಖನ ಅಧಿಕೃತವಾಗಿ ಬಹಿರಂಗಪಡಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರು ಕೆಲವು ಹೇಳಿಕೆಗಳನ್ನು ವ್ಯಕ್ತಪಡಿಸಿದ್ದರು. ಆ ವೇಳೆ ‘ನಿಜವಾದ ಸೇವಕರು ದುರಹಂಕಾರಿಯಾಗಿರುವುದಿಲ್ಲ’ ಎಂದು ಬಿಜೆಪಿ ಸದಸ್ಯರನ್ನು ಪರೋಕ್ಷವಾಗಿ ಟೀಕಿಸಿದ್ದರು.’ಆರ್ಗನೈಸರ್’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ‘ಚುನಾವಣಾ ಕೆಲಸಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಸೇವಕರನ್ನು (ಆರ್‌ಎಸ್‌ಎಸ್ ಕಾರ್ಯಕರ್ತರು) ಸಂಪರ್ಕಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಅಹಂಕಾರವನ್ನು (Ego) ಬಹಿರಂಗಪಡಿಸುವ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅಂದರೆ, ‘ತನ್ನ ಸ್ವಂತ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಅದಕ್ಕೆ ಆರ್‌ಎಸ್‌ಎಸ್ ಬೇಡ’ ಎಂದು ಅವರು ಹೇಳಿದರು.

ಅಲ್ಲದೆ, ವಾಜಪೇಯಿ ಪ್ರಧಾನಿಯಾಗಿದ್ದ ಸಮಯ ಹಾಗೂ ಮೋದಿ ಪ್ರಧಾನಿಯಾಗಿದ್ದ ಸಮಯವನ್ನು ಹೋಲಿಕೆ ಮಾಡಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ವಾಜಪೇಯಿ ಕಾಲದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಹಾಯ ಪಡೆಯುವ ಮಟ್ಟೆಕ್ಕೆ ಒಂದು ಸಣ್ಣ ಶಕ್ತಿಯಾಗಿತ್ತು. ಈಗ ಬಿಜೆಪಿ ಬೆಳೆದಿದೆ. ಯಾರ ಕೃಪಾಕಟಾಕ್ಷವೂ ಇಲ್ಲದೇ ಬಿಜೆಪಿ ಸ್ವಂತ ಬಲದಿಂದ ನಡೆಯುತ್ತಿದೆ’ ಎಂದು ಜೆ.ಪಿ.ನಡ್ಡಾ ಹೇಳಿದ್ದರು.

ಆದರೆ ಜೆ.ಪಿ.ನಡ್ಡಾ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿ 370 ಮತ್ತು ಎನ್‌ಡಿಎ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಬಿಜೆಪಿ ಗೆದ್ದಿರುವುದು 240 ಕ್ಷೇತ್ರಗಳಲ್ಲಿ ಮಾತ್ರ. ಸರ್ಕಾರ ರಚನೆಗೆ ಬೇಕಾದ 272 ಸಂಖ್ಯಾಬಲವನ್ನೂ ಬಿಜೆಪಿ ಮುಟ್ಟಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಒಟ್ಟು 293 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಹೀಗಾಗಿ ಬಿಜೆಪಿ ನಾಯಕರು ಇದನ್ನು ಅರಿಯದೆ ತೇಲಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಕಡೆಯವರು ಹೇಳುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುತ್ತಿರುವ ರಾಜಕೀಯ ವಿಮರ್ಶಕರು, “ಬಿಜೆಪಿ ಆರ್‌ಎಸ್‌ಎಸ್ ಹಿಡಿತದಲ್ಲಿರಬೇಕು. ಅವರ ರಾಜಕೀಯ ಅಜೆಂಡಾಗಳನ್ನು ಬಿಜೆಪಿ ಆಡಳಿತಗಾರರು ಈಡೇರಿಸಬೇಕು ಎಂದು ಆರ್‌ಎಸ್‌ಎಸ್ ನಿರೀಕ್ಷಿಸುತ್ತದೆ. ಆದರೆ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವಷ್ಟು ಬೆಳೆದಿರುವಾಗ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಸಂಘಟನೆಯ ಮೇಲೆ ಅವಲಂಬಿತರಾಗಿರಲು ಬಯಸುತ್ತಿಲ್ಲ. ಅದುವೇ ಸಮಸ್ಯೆಗೆ ಕಾರಣ” ಎಂದು ಹೇಳುತ್ತಾರೆ.

ಮಣಿಪುರ ರಾಜ್ಯದಲ್ಲಿ ಜನಾಂಗೀಯ ಸಂಘರ್ಷಗಳಿಂದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೂ, ಸಾವಿರಾರು ಮಂದಿ ಮನೆ ಕಳೆದುಕೊಂಡು, ಮಹಿಳೆಯರು ಅಧೋಗತಿಗೆ ಒಳಗಾಗಿದ್ದರೂ ಪ್ರಧಾನಿ ಮೋದಿ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ‘ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮೋದಿ ಸರ್ಕಾರದ ಭದ್ರತೆಯ ವೈಫಲ್ಯವೇ ಕಾರಣ’ ಎಂದು ಟೀಕಿಸಿದ್ದಾರೆ. ‘ಚುನಾವಣೆ ವಿಜಯೋತ್ಸವದ ಸಂಭ್ರಮ ಸಾಕು. ಮಣಿಪುರ ಶಾಂತಿಗಾಗಿ ಕಾಯುತ್ತಿದೆ’ ಎಂದು ಟೀಕಿಸಿದ್ದಾರೆ.

ಬೀದಿಗೆ ಬಂದ ಆರ್‌ಎಸ್‌ಎಸ್-ಬಿಜೆಪಿ ಘರ್ಷಣೆ ಇನ್ನೂ ತೀವ್ರವಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ? ಕಾಲವೇ ಉತ್ತರಿಸಬೇಕು.

ಲೇಖನ

ಡಿ.ಸಿ.ಪ್ರಕಾಶ್

2024ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಏಕ ಬಹುಮತದೊಂದಿಗೆ ಸರ್ಕಾರ ರಚಿಸುವ ನಿರೀಕ್ಷೆ ಇತ್ತು. ಅಲ್ಲದೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶದಲ್ಲಿ ಬಿ.ಜೆ.ಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ವರದಿಯಾಗಿತ್ತು. ಆದರೆ, ಸಮೀಕ್ಷೆಯ ಫಲಿತಾಂಶವನ್ನು ಸಂಪೂರ್ಣವಾಗಿ ಸುಳ್ಳಾಗಿಸಿ, ಬಿಜೆಪಿ 240 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು.

ಬಿಜೆಪಿ, ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ನೇತೃತ್ವದಲ್ಲಿ ಬಹುಮತ ಗಳಿಸಿದ್ದು, ಮತ್ತೆ ಸರ್ಕಾರ ರಚಿಸುವ ಕೆಲಸದಲ್ಲಿ ತೊಡಗಿದೆ. 2014 ಮತ್ತು 2019ರ ಸಂಸತ್ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಕೆಲವೆಡೆ ಮಾತ್ರ ಗೆದ್ದಿದೆ. ಇದರಿಂದಾಗಿ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ.

ಈ ಹಿನ್ನೆಲೆಯಲ್ಲಿ, ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲು ವಿಫಲವಾಗಿರುವುದರಿಂದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗವುದನ್ನು ಆರ್‌ಎಸ್‌ಎಸ್ ಬಯಸುತ್ತಿಲ್ಲ ಎಂದು ಶಿವಸೇನೆಯ ಸಂಜಯ್ ರಾವತ್ ಹೇಳಿದ್ದಾರೆ. ಮತ್ತು ಮೋದಿ ಬದಲು ಮತ್ತೊಬ್ಬರನ್ನು ಪ್ರಧಾನಿಯನ್ನಾಗಿ ನೇಮಿಸುವ ಬಗ್ಗೆಯೂ ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿಸಿದರು.

ಭಾರತದ ಮುಂದಿನ ಪ್ರಧಾನಿಯಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರ ಹೆಸರನ್ನು ಪರಿಶೀಲಿಸಲಾಯಿತು. ಆದರೆ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

2024ರ ಸಂಸತ್ತಿನ ಚುನಾವಣಾ ಫಲಿತಾಂಶಗಳು ನರೇಂದ್ರ ಮೋದಿಯವರ ವಿರುದ್ಧವಾಗಿರುವುದರಿಂದ ನರೇಂದ್ರ ಮೋದಿ ಅವರು ಸ್ವಯಂಪ್ರೇರಿತರಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಅವರು ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಆರ್‌ಎಸ್‌ಎಸ್‌ಗೆ ಇಷ್ಟವಿಲ್ಲದೆ, ಬೇರೊಬ್ಬ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಲು ಪ್ರಯತ್ನಿಸಿದೆ. ಇದರ ಹೊರತಾಗಿಯೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವತ್ತ ಗಮನಹರಿಸಿದ್ದಾರೆ. ಎನ್‌ಡಿಎ ಭಾಗವಾಗಿರುವ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಈ ಹಿಂದೆ ಮೋದಿ ಮತ್ತು ಅಮಿತ್ ಶಾ ಅವರಿಂದ ಹೆಚ್ಚು ನೋವನ್ನು ಅನುಭವಿಸಿದ್ದಾರೆ. ಇದರಿಂದ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿ ಪಕ್ಷಗಳು ತಮ್ಮ ಸಂಸದರನ್ನು ಕರೆಸಿ ಸಮಾಲೋಚನೆ ನಡೆಸುವುದು ವಾಡಿಕೆ. ಈ ಸಮಾಲೋಚನಾ ಸಭೆಯಲ್ಲಿ ಆ ಪಕ್ಷದ ಸಂಸದೀಯ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಇತರ ವಿಷಯಗಳ ಬಗ್ಗೆಯೂ ಚರ್ಚೆ ನಡೆಯುತ್ತದೆ.

ಆದರೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಮಾಲೋಚನಾ ಸಭೆಯನ್ನು ಕರೆದು, ತಮ್ಮನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಇದರ ಬೆನ್ನಲ್ಲೇ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನೂತನ ಸಂಸತ್ ಸದಸ್ಯರ ಸಭೆ ದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಬೆಂಬಲ ವ್ಯಕ್ತಪಡಿಸಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದರು.

ಇದರ ಬೆನ್ನಲ್ಲೇ ಮೋದಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೇ ದೇಶದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ಪ್ರಸ್ತಾಪಿಸುವುದಾಗಿ ಮಾಜಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದರು.

ತರುವಾಯ, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಇಬ್ಬರೂ ಮೋದಿಯನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿರ್ಧಾರವನ್ನು ಪ್ರಸ್ತಾಪಿಸಿದರು. ನಂತರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಅಧಿಕೃತವಾಗಿ ಘೋಷಿಸಲಾಯಿತು.

ಸಂಸತ್ ಚುನಾವಣೆಯ ಫಲಿತಾಂಶ ಪ್ರಕಟವಾದ ಮೂರು ದಿನಗಳಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ. ಈ ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹೊಸ ಸರ್ಕಾರ ಎಷ್ಟು ದಿನ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ

ಗುವಾಹಟಿ: “ನನ್ನ ವಿರುದ್ಧ ಎಷ್ಟು ಪ್ರಕರಣಗಳು ಬೇಕಾದರು ದಾಖಲಿಸಿ; ನಾನು ಹೆದರುವುದಿಲ್ಲ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜನವರಿ 14 ರಂದು ಮಣಿಪುರದಿಂದ ಮುಂಬೈಗೆ “ಭಾರತ್ ಜೋಡೋ ನ್ಯಾಯ ಯಾತ್ರೆ”ಯ ಎರಡನೇ ಹಂತವನ್ನು ಮಣಿಪುರದಲ್ಲಿ ಪ್ರಾರಂಭಿಸಿದರು. ಈ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಅಸ್ಸಾಂನ ಬಾರ್ಪೇಟಾ ಪ್ರದೇಶದಲ್ಲಿ 11ನೇ ದಿನದ ಯಾತ್ರೆ ಕೈಗೊಂಡಿದ್ದಾರೆ. ಆಗ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ” ದೇಶದಲ್ಲೇ ಭ್ರಷ್ಟ ಮುಖ್ಯಮಂತ್ರಿ ಯಾರು ಎಂದರೆ ಅದು ಅಸ್ಸಾಂ ಮುಖ್ಯಮಂತ್ರಿ” ಎಂದು ಟೀಕಿಸಿದರು.

“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಯಂತ್ರಿಸುತ್ತಿದ್ದಾರೆ. ಅಮಿತ್ ಶಾ ವಿರುದ್ಧ ಏನಾದರೂ ಹೇಳುವ ಧೈರ್ಯ ಮಾಡಿದರೆ ಅವರನ್ನು ಹೊರಹಾಕುತ್ತಾರೆ. ರಾಹುಲ್‌ಗೆ ಬೆದರಿಸೋಣ ಎಂಬ ಯೋಚನೆ ಎಲ್ಲಿಂದ ಬಂದಿತೋ ಗೊತ್ತಿಲ್ಲ.

ನನ್ನ ವಿರುದ್ಧ ಎಷ್ಟು ಪ್ರಕರಣಗಳು ಬೇಕಾದರು ದಾಖಲಿಸಿ; ನಾನು ಹೆದರುವುದಿಲ್ಲ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ದೇಶವನ್ನು ಒಡೆಯಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತ ಮಣಿಪುರವನ್ನು ಸುಟ್ಟು ಹಾಕಿದೆ. ಆದರೆ ದೇಶದ ಪ್ರಧಾನಿ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ.

ಮಣಿಪುರದಲ್ಲಿ ನಮ್ಮ “ಭಾರತ ಜೋಡೋ ನ್ಯಾಯ ಯಾತ್ರೆ” ಆರಂಭವಾಗಿದೆ; ಅದು ಮಹಾರಾಷ್ಟ್ರದವರೆಗೂ ಹೋಗುತ್ತದೆ. ಹಿಂಸೆ ಮತ್ತು ದ್ವೇಷದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ” ಎಂದು ಮಾತನಾಡಿದರು.

ರಾಜಕೀಯ

ನವದೆಹಲಿ: (ಪಿಟಿಐ) ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕರಾದ ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ರಾಮ ಮಂದಿರದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆ “ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕ್ರಮ” ಎಂದಿರುವ ಕಾಂಗ್ರೆಸ್, ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಯೋಧ್ಯೆ ಮಂದಿರವನ್ನು ರಾಜಕೀಯ ಯೋಜನೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಬುಧವಾರ ಹೇಳಿದೆ.

ಲೋಕಸಭೆ ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಅಯೋಧ್ಯೆಯ ಅಪೂರ್ಣ ದೇವಾಲಯವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಆಹ್ವಾನ ನೀಡಲಾಗಿತ್ತು.

ಜನವರಿ 22 ರಂದು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 6,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.