ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
BJp Archives » Dynamic Leader
September 18, 2024
Home Posts tagged BJp
ದೇಶ

“ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ; ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” – ವಿನೇಶ್ ಫೋಗಟ್

ಹರಿಯಾಣದ ರೈತರು ಶಂಭು ಗ್ರಾಮದ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 200 ದಿನಗಳನ್ನು ತಲುಪಿದ್ದು, ಇಂದು (ಶನಿವಾರ) ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ರೈತರೊಂದಿಗೆ ಸೇರಿಕೊಂಡಿದ್ದಾರೆ. “ನಿಮ್ಮ ಮಗಳು ನಿಮ್ಮೊಂದಿಗೆ ನಿಂತಿದ್ದಾಳೆ” ಎಂದು ಮಾತನಾಡಿ, ತಮ್ಮ ದೃಢವಾದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ 13 ರಿಂದ ಹರಿಯಾಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಆರಂಭಿಸಿದ್ದಾರೆ. ಹರಿಯಾಣದ ಗಡಿಭಾಗದ ಶಂಭು ಪ್ರದೇಶದಲ್ಲಿ ರೈತರು ದೆಹಲಿಗೆ ತೆರಳದಂತೆ ಅಧಿಕಾರಿಗಳು ತಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ರೈತರನ್ನು ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, “ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು, ಯಾರೂ ನಮಗಾಗಿ ಬರುವುದಿಲ್ಲ. ನಮ್ಮ ಕೋರಿಕೆಗಳು ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” ಎಂದು ಹೇಳಿದ್ದಾರೆ.

ಅಲ್ಲದೆ, “ರೈತರು ತಮ್ಮ ಹಕ್ಕುಗಳಿಗಾಗಿ ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. 200 ದಿನ ಕಳೆದರೂ ಅವರ ಬೇಡಿಕೆ ಈಡೇರದಿರುವುದು ಬೇಸರದ ಸಂಗತಿಯಾಗಿದೆ. ಅವರು ತಮ್ಮ ಹಕ್ಕುಗಳಿಗೆ ಧ್ವನಿಗೂಡಿಸುವುದನ್ನು ನೋಡಿದಾಗ ನಾವು ಹೆಚ್ಚುವರಿ ಶಕ್ತಿಯನ್ನು ಪಡೆಯುತ್ತೇವೆ” ಎಂದೂ ಹೇಳಿದ್ದಾರೆ.

2021ರ ಮುಷ್ಕರವನ್ನು ದೂಷಿಸಿದ ಸಂಸದೆ ಕಂಗನಾ ರಣಾವತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ನಿರತ ರೈತರು ಒತ್ತಾಯಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ರೈತರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ರೈತರ ಚುನಾವಣಾ ತಂತ್ರಗಾರಿಕೆ ಬಗ್ಗೆ ಯಾವುದೆ ಸ್ಪಷ್ಟ ಅಭಿಪ್ರಾಯಗಳಿಲ್ಲ!

ದೇಶ

ತಿರುವನಂತಪುರಂ: ಕೇಂದ್ರದಲ್ಲಿ 3ನೇ ಬಾರಿಗೆ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆ ಸಮಾಲೋಚನೆ ನಡೆಸಲು ನಿರ್ಧರಿಸಿವೆ. ಜುಲೈ 31 ರಿಂದ ಆಗಸ್ಟ್ 2ರ ವರೆಗೆ ನಡೆಯುವ ಈ ಸಮಾಲೋಚನಾ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಸಮ್ಮಿಶ್ರ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ 3ನೇ ಅವಧಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ್ದಾರೆ. ಕೇರಳದಿಂದ ಪ್ರಥಮ ಬಾರಿಗೆ ಸುರೇಶ್ ಗೋಪಿ ಬಿಜೆಪಿ ಪರವಾಗಿ 74 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತ್ರಿಶೂರ್ ಪೂರಂ ನಡೆಯುವ ಈ ನಗರದಲ್ಲಿ ಬಿಜೆಪಿಯ ಗೆಲುವನ್ನು ಆರ್‌ಎಸ್‌ಎಸ್‌ ಪ್ರಮುಖವಾಗಿ ಪರಿಗಣಿಸುತ್ತಿದೆ. ಆರ್‌ಎಸ್‌ಎಸ್‌ಗೆ ಕೇರಳದಲ್ಲಿ ಹಲವು ಶಾಖೆಗಳಿವೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪದಾಧಿಕಾರಿಗಳು ವರ್ಷಕ್ಕೊಮ್ಮೆ ಸಭೆ ಸೇರಿ ಮಾತನಾಡುವುದು ವಾಡಿಕೆ.

ಈ ಹಿನ್ನೆಲೆಯಲ್ಲಿ, ಜುಲೈ 31 ರಿಂದ ಆಗಸ್ಟ್ 2 ರವರೆಗೆ 3 ದಿನಗಳ ಕಾಲ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಪಾಲಕ್ಕಾಡ್‌ನಲ್ಲಿ ನಡೆಯುವ ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಲೇಖನ

ಡಿ.ಸಿ.ಪ್ರಕಾಶ್

ಬಿಜೆಪಿಯ ಮೇಲೆ ಅದರ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ಅತೃಪ್ತದಲ್ಲಿದೆ ಎಂಬ ಸುದ್ದಿ ಪ್ರಕಟವಾಗುತ್ತಲೇ ಇದೆ!

ಇತ್ತೀಚೆಗೆ ಬಿಜೆಪಿ ಮತ್ತು ಅದರ ಸಂಘಟನೆಯಾದ ಆರ್‌ಎಸ್‌ಎಸ್ ನಡುವೆ ಸಂಘರ್ಷ ನಡೆಯುತ್ತಿದೆ. ಅದರಲ್ಲೂ 2024ರ ಲೋಕಸಭೆ ಚುನಾವಣೆ ವೇಳೆಗೆ ಈ ಸಂಘರ್ಷ ಹೆಚ್ಚಿರುವುದನ್ನು ಕಾಣಬಹುದು.

ಬಿಜೆಪಿ ಅಧಿಕಾರದಲ್ಲಿರುವುದರಿಂದ ಆರ್‌ಎಸ್‌ಎಸ್ ಸಂಘಟನೆಗೆ ಮನ್ನಣೆ ನೀಡದಿರುವುದು ಆರ್‌ಎಸ್‌ಎಸ್ ನಿರ್ವಾಹಕರಿಗಾಗಿ ಸಿಟ್ಟು ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲವಾಗಿ ಚುನಾವಣಾ ಕೆಲಸ ಮಾಡಿಲ್ಲ ಎಂಬ ಸುದ್ದಿ ಹೊರಬಿದ್ದಿರುವಾಗಲೇ ಆರ್‌ಎಸ್‌ಎಸ್ ಸಂಘಟನೆಯ ಮುಖವಾಣಿಯಾದ ‘ಆರ್ಗನೈಸರ್’ನಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.

ಆರ್‌ಎಸ್‌ಎಸ್‌ನ ರತನ್ ಶಾರದಾ ಅವರು ಈ ಲೇಖನವನ್ನು ಬರೆದಿದ್ದಾರೆ. ‘ಮೋದಿ 3.0 – ತಪ್ಪುಗಳನ್ನು ಸರಿಪಡಿಸಲಿಕ್ಕಾಗಿ ಒಂದು ಸಂಭಾಷಣೆ’ ಎಂಬ ಶೀರ್ಷಿಕೆಯ ಲೇಖನದಲ್ಲಿ, ‘ಬಿಜೆಪಿ ನಾಯಕರು ಮತ್ತು ಆಡಳಿತಗಾರರಿಗೆ ಬೀದಿಯಲ್ಲಿ ಧ್ವನಿಸುವ ಜನರ ಕೂಗು ಕೇಳುವುದಿಲ್ಲ. ಬದಲಿಗೆ, ಪ್ರಧಾನಿ ಮೋದಿಯವರ ಜನಪ್ರಿಯತೆಯ ಬೆಳಕಿನಲ್ಲಿ ಅವರು ಬಿಸಿಲು ಕಾಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಅಲ್ಲದೆ, ‘ಬಿಜೆಪಿ ನಾಯಕರು ತಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾದಲ್ಲಿದ್ದರು. ಆದರೆ ವಾಸ್ತವ ಏನೆಂಬುದನ್ನು ಚುನಾವಣಾ ಫಲಿತಾಂಶ ತೋರಿಸಿದೆ’ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ನೋಡಿದರೆ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸಂಘಟನೆ ಬಿಜೆಪಿ ಪರ ಕೆಲಸ ಮಾಡಿಲ್ಲ ಎಂಬ ವರದಿಗಳು ನಿಜ ಎಂಬುದನ್ನು ಈ ಲೇಖನ ಅಧಿಕೃತವಾಗಿ ಬಹಿರಂಗಪಡಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರು ಕೆಲವು ಹೇಳಿಕೆಗಳನ್ನು ವ್ಯಕ್ತಪಡಿಸಿದ್ದರು. ಆ ವೇಳೆ ‘ನಿಜವಾದ ಸೇವಕರು ದುರಹಂಕಾರಿಯಾಗಿರುವುದಿಲ್ಲ’ ಎಂದು ಬಿಜೆಪಿ ಸದಸ್ಯರನ್ನು ಪರೋಕ್ಷವಾಗಿ ಟೀಕಿಸಿದ್ದರು.’ಆರ್ಗನೈಸರ್’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ‘ಚುನಾವಣಾ ಕೆಲಸಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಸೇವಕರನ್ನು (ಆರ್‌ಎಸ್‌ಎಸ್ ಕಾರ್ಯಕರ್ತರು) ಸಂಪರ್ಕಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಅಹಂಕಾರವನ್ನು (Ego) ಬಹಿರಂಗಪಡಿಸುವ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅಂದರೆ, ‘ತನ್ನ ಸ್ವಂತ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಅದಕ್ಕೆ ಆರ್‌ಎಸ್‌ಎಸ್ ಬೇಡ’ ಎಂದು ಅವರು ಹೇಳಿದರು.

ಅಲ್ಲದೆ, ವಾಜಪೇಯಿ ಪ್ರಧಾನಿಯಾಗಿದ್ದ ಸಮಯ ಹಾಗೂ ಮೋದಿ ಪ್ರಧಾನಿಯಾಗಿದ್ದ ಸಮಯವನ್ನು ಹೋಲಿಕೆ ಮಾಡಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ವಾಜಪೇಯಿ ಕಾಲದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಹಾಯ ಪಡೆಯುವ ಮಟ್ಟೆಕ್ಕೆ ಒಂದು ಸಣ್ಣ ಶಕ್ತಿಯಾಗಿತ್ತು. ಈಗ ಬಿಜೆಪಿ ಬೆಳೆದಿದೆ. ಯಾರ ಕೃಪಾಕಟಾಕ್ಷವೂ ಇಲ್ಲದೇ ಬಿಜೆಪಿ ಸ್ವಂತ ಬಲದಿಂದ ನಡೆಯುತ್ತಿದೆ’ ಎಂದು ಜೆ.ಪಿ.ನಡ್ಡಾ ಹೇಳಿದ್ದರು.

ಆದರೆ ಜೆ.ಪಿ.ನಡ್ಡಾ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿ 370 ಮತ್ತು ಎನ್‌ಡಿಎ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಬಿಜೆಪಿ ಗೆದ್ದಿರುವುದು 240 ಕ್ಷೇತ್ರಗಳಲ್ಲಿ ಮಾತ್ರ. ಸರ್ಕಾರ ರಚನೆಗೆ ಬೇಕಾದ 272 ಸಂಖ್ಯಾಬಲವನ್ನೂ ಬಿಜೆಪಿ ಮುಟ್ಟಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಒಟ್ಟು 293 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಹೀಗಾಗಿ ಬಿಜೆಪಿ ನಾಯಕರು ಇದನ್ನು ಅರಿಯದೆ ತೇಲಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಕಡೆಯವರು ಹೇಳುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುತ್ತಿರುವ ರಾಜಕೀಯ ವಿಮರ್ಶಕರು, “ಬಿಜೆಪಿ ಆರ್‌ಎಸ್‌ಎಸ್ ಹಿಡಿತದಲ್ಲಿರಬೇಕು. ಅವರ ರಾಜಕೀಯ ಅಜೆಂಡಾಗಳನ್ನು ಬಿಜೆಪಿ ಆಡಳಿತಗಾರರು ಈಡೇರಿಸಬೇಕು ಎಂದು ಆರ್‌ಎಸ್‌ಎಸ್ ನಿರೀಕ್ಷಿಸುತ್ತದೆ. ಆದರೆ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವಷ್ಟು ಬೆಳೆದಿರುವಾಗ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಸಂಘಟನೆಯ ಮೇಲೆ ಅವಲಂಬಿತರಾಗಿರಲು ಬಯಸುತ್ತಿಲ್ಲ. ಅದುವೇ ಸಮಸ್ಯೆಗೆ ಕಾರಣ” ಎಂದು ಹೇಳುತ್ತಾರೆ.

ಮಣಿಪುರ ರಾಜ್ಯದಲ್ಲಿ ಜನಾಂಗೀಯ ಸಂಘರ್ಷಗಳಿಂದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೂ, ಸಾವಿರಾರು ಮಂದಿ ಮನೆ ಕಳೆದುಕೊಂಡು, ಮಹಿಳೆಯರು ಅಧೋಗತಿಗೆ ಒಳಗಾಗಿದ್ದರೂ ಪ್ರಧಾನಿ ಮೋದಿ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ‘ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮೋದಿ ಸರ್ಕಾರದ ಭದ್ರತೆಯ ವೈಫಲ್ಯವೇ ಕಾರಣ’ ಎಂದು ಟೀಕಿಸಿದ್ದಾರೆ. ‘ಚುನಾವಣೆ ವಿಜಯೋತ್ಸವದ ಸಂಭ್ರಮ ಸಾಕು. ಮಣಿಪುರ ಶಾಂತಿಗಾಗಿ ಕಾಯುತ್ತಿದೆ’ ಎಂದು ಟೀಕಿಸಿದ್ದಾರೆ.

ಬೀದಿಗೆ ಬಂದ ಆರ್‌ಎಸ್‌ಎಸ್-ಬಿಜೆಪಿ ಘರ್ಷಣೆ ಇನ್ನೂ ತೀವ್ರವಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ? ಕಾಲವೇ ಉತ್ತರಿಸಬೇಕು.

ದೇಶ

ವಿಜಯವಾಡ: ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಸನ್ನಿವೇಶದಲ್ಲಿ, ಆಂಧ್ರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರಾಗಿರುವ ತೆಲುಗು ದೇಶಂ ಪಕ್ಷವು ತನ್ನ ವಿಜಯವನ್ನು ದಾಖಲಿಸಿದೆ.

175 ಸ್ಥಾನಗಳ ಆಂಧ್ರ ಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ, ಜನಸೇನಾ ಮತ್ತು ಬಿಜೆಪಿ ಒಳಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 164 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ 11.30ಕ್ಕೆ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಲ್ಲದೆ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ಚಂದ್ರಬಾಬು ಪುತ್ರ ನಾರಾ ಲೋಕೇಶ್ ಸೇರಿದಂತೆ 24 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ವಿಜಯವಾಡ ಬಳಿಯ ಗನ್ನಾವರಂ ಪ್ರದೇಶದ ಟೆಕ್ನಾಲಜಿ ಪಾರ್ಕ್ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ, ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ನಟರಾದ ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಆಂಧ್ರಪ್ರದೇಶದ ಕಿಂಗ್ ಮೇಕರ್, ರಾಜಕೀಯದಲ್ಲಿ ಮುತ್ಸದ್ದಿ, ಜಾಣ ಎಂದು ಗುರುತಿಸಿಕೊಂಡಿರುವ ಚಂದ್ರಬಾಬು ನಾಯ್ಡು ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ!

ರಾಜಕೀಯ

ದೇಶಾದ್ಯಂತ 7 ಹಂತಗಳಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 234 ಸ್ಥಾನಗಳಲ್ಲಿ ಮತ್ತು ಬಿಜೆಪಿ ಮೈತ್ರಿಕೂಟ 292 ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ.

ಆದಾಗ್ಯೂ, ಬಿಜೆಪಿ ಏಕಾಂಗಿಯಾಗಿ ಕೇವಲ 240 ಸ್ಥಾನಗಳನ್ನು ಗೆದ್ದಿದ್ದರೂ ಬಹುಮತ ಸಿಗದ ಕಾರಣ ಸಮ್ಮಿಶ್ರ ಪಕ್ಷಗಳ ಜತೆ ಸೇರಿ ಸರ್ಕಾರ ನಡೆಸುವ ತವಕದಲ್ಲಿದೆ. ಬಿಜೆಪಿ ಮೈತ್ರಿಕೂಟದಲ್ಲಿರುವ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾರಿಗೆ ಬೆಂಬಲ ನೀಡುತ್ತಾರೋ ಅವರೇ ಸರ್ಕಾರ ರಚಿಸಬಹುದು ಎಂಬ ಸ್ಥಿತಿಯಲ್ಲಿ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಬಿಜೆಪಿ ಮೈತ್ರಿಕೂಟದಲ್ಲಿರುವ 293 ಸಂಸದರ ಪೈಕಿ ಒಬ್ಬರು ಕೂಡಾ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸಮುದಾಯಕ್ಕೆ ಸೇರಿದವರು ಇಲ್ಲ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ಕುರಿತು ಪ್ರಕಟವಾದ ಅಧ್ಯಯನದಲ್ಲಿ, ಬಿಜೆಪಿ ಮೈತ್ರಿಕೂಟದಲ್ಲಿ ಶೇ.33.2ರಷ್ಟು ಸಂಸದರು ಮೇಲ್ಜಾತಿ ಸಮುದಾಯಕ್ಕೆ ಸೇರಿದವರು, ಶೇ.15.7ರಷ್ಟು ಮಧ್ಯಮ ವರ್ಗದವರು ಮತ್ತು ಶೇ.26.2ರಷ್ಟು ಮಾತ್ರ ಇತರೆ ಹಿಂದುಳಿದ ಸಮುದಾಯಗಳಿಗೆ ಸೇರಿದವರು.

ಅದೇ ಸಮಯದಲ್ಲಿ, ‘ಇಂಡಿಯಾ’ ಮೈತ್ರಿಕೂಟದಲ್ಲಿರುವ 235 ಸಂಸದರಲ್ಲಿ ಮುಸ್ಲಿಮರು ಶೇ.7.9ರಷ್ಟು, ಸಿಖ್ಖರು ಶೇ.5ರಷ್ಟು, ಮತ್ತು ಕ್ರಿಶ್ಚಿಯನ್ನರು ಶೇ.3.5% ರಷ್ಟು ಇದ್ದಾರೆ. ಇಲ್ಲಿ ಶೇ.30.7ರಷ್ಟು ಇತರೆ ಹಿಂದುಳಿದ ಸಮುದಾಯಗಳಿಗೆ ಸೇರಿದವರು, ಶೇ.2.4ರಷ್ಟು ಮೇಲ್ಜಾತಿ ಸಮುದಾಯಗಳು ಮತ್ತು ಶೇ.11.9ರಷ್ಟು ಮಧ್ಯಮ ವರ್ಗದ ಸಮುದಾಯಗಳಿಗೆ ಸೇರಿದವರು ಇದ್ದಾರೆ ಎಂದು ವಿವರಿಸಿದೆ.

ರಾಜಕೀಯ

ಡಿ.ಸಿ.ಪ್ರಕಾಶ್

ಆಂಧ್ರಪ್ರದೇಶದ 175 ಕ್ಷೇತ್ರಗಳಲ್ಲಿ 134 ಕ್ಷೇತ್ರಗಳಲ್ಲಿ ಚಂದ್ರಬಾಬು ಗೆದ್ದಿದ್ದಾರೆ: ಜಗನ್ಮೋಹನ್ ಪ್ರತಿಪಕ್ಷ ಸ್ಥಾನಮಾನವನ್ನೂ ಕಳೆದುಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಬರುತ್ತಿದ್ದಂತೆ, ಜಗನ್ಮೋಹನ್ ರೆಡ್ಡಿ ವಿರೋಧ ಪಕ್ಷವಾಗುವ ಅರ್ಹತೆಯನ್ನೂ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಇದೇ 13ರಂದು ಒಂದೇ ಹಂತದಲ್ಲಿ ವಿಧಾನಸಭೆ ಮತ್ತು ಸಂಸತ್ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ, ತೆಲುಗು ದೇಶಂ, ಜನಸೇನಾ ಮತ್ತು ಬಿಜೆಪಿ ಮತ್ತೊಂದು ತಂಡವಾಗಿ ಹಾಗೂ ಕಾಂಗ್ರೆಸ್-ಕಮ್ಯುನಿಸ್ಟ್ ಪ್ರತ್ಯೇಕ ತಂಡವಾಗಿ ಸ್ಪರ್ಧಿಸಿದ್ದವು. ಇದರಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಕ್ಷೇತ್ರಗಳ ಪೈಕಿ 88 ಕ್ಷೇತ್ರಗಳನ್ನು ಗೆದ್ದ ಪಕ್ಷ ಸರ್ಕಾರ ರಚಿಸಲಿದೆ. ನಿನ್ನೆ ರಾಜ್ಯಾದ್ಯಂತ 33 ಸ್ಥಳಗಳಲ್ಲಿ 401 ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಯಿತು. ಮತ ಎಣಿಕೆಯಲ್ಲಿ ತೆಲುಗು ದೇಶಂ ಪಕ್ಷ ಮೊದಲಿನಿಂದಲೂ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದು, ಕೊನೆಯಲ್ಲಿ 134 ಸ್ಥಾನಗಳನ್ನು ಗೆದ್ದಿರುವುದಾಗಿ ಘೋಷಿಸಲಾಯಿತು. ಪಕ್ಷಕ್ಕೆ ಮೂರನೇ ಎರಡರಷ್ಟು ಶಾಸಕರ ಬೆಂಬಲ ಸಿಕ್ಕಿದೆ. ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ 21 ಸ್ಥಾನಗಳನ್ನು ಗೆದ್ದುಕೊಂಡಿದೆ.

ಬಿಜೆಪಿ 8 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಮೂಲಕ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) 164 ಸ್ಥಾನಗಳನ್ನು ಗೆದ್ದುಕೊಂಡಿದೆ. ಜಗನ್ಮೋಹನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಕೇವಲ 12 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಜಗನ್ ಅವರ ಪಕ್ಷಕ್ಕೆ ಪ್ರಮುಖ ಪ್ರತಿಪಕ್ಷ ಸ್ಥಾನಮಾನವೂ ಸಿಗಲಾರದು.

ವಿರೋಧ ಪಕ್ಷದ ನಾಯಕರಾಗಿ ಪವನ್ ಕಲ್ಯಾಣ್ ಆಯ್ಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಪೈಕಿ ತೆಲುಗು ದೇಶಂ 16, ಜನಸೇನೆ 2, ಬಿಜೆಪಿ 3 ಮತ್ತು ವೈಎಸ್‌ಆರ್ ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಸಿಗಲಿಲ್ಲ.

ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು
ಲೋಕಸಭಾ ಚುನಾವಣಾ ಫಲಿತಾಂಶದ ಪ್ರಕಾರ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನೇತೃತ್ವದ ತೆಲುಗು ದೇಶಂ ಒಟ್ಟು 16 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ಹೀಗಾಗಿ ತೆಲುಗುದೇಶಂ ಪ್ರಭಾವ ಹೆಚ್ಚಿದೆ. ಬಿಜೆಪಿಗೆ ಬಹುಮತ ಸಿಗದ ಕಾರಣ ಹೊಸ ಸರ್ಕಾರ ರಚಿಸುವ ಟ್ರಂಪ್ ಕಾರ್ಡ್ ತೆಲುಗು ದೇಶಂ ಬಳಿ ಇದೆ ಎಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ. ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ?

ಎನ್.ಡಿಎ ಮೈತ್ರಿಕೂಟ 293 ಕಡೆ ಗೆಲುವನ್ನು ಸಾಧಿಸಿ ಬಹುಮತ ಪಡೆದಿದ್ದರೂ ಬಿಜೆಪಿ ಪ್ರತ್ಯೇಕವಾಗಿ ಮ್ಯಾಜಿಕ್ ನಂಬರ್ 272 ಅನ್ನು ತಲುಪುವಲ್ಲಿ ವಿಪಲವಾಗಿದೆ. ಅದು ಬರೀ 240 ಸ್ಥಾನಗಳನ್ನು ಮಾತ್ರ ಪಡೆದು ಹಿನ್ನೆಡೆಯನ್ನು ಅನುಭವಿಸಿದೆ. ಇದು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ. ವಿಶ್ವಗುರು, ದೇವಮಾನವ, ನಂ.1 ಪ್ರಧಾನಿ ಎಂದೆಲ್ಲಾ ಹೇಳಿಕೊಂಡಿದ್ದ ಮೋದಿ 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಇಡಿಯಬೇಕಾದರೆ ಮೈತ್ರಿಪಕ್ಷಗಳ ಸಹಾಯ… ಸಹಮತ ಬೇಕು.

ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ನಿತೀಶ್ ಕುಮರ್ ಮುಂತಾದವರ ಬೆಂಬಲ ಪಡೆದು, ಸರ್ಕಾರ ರಚಿಸಿಕೊಂಡ ಮೇಲೆ ಆಪರೇಷನ್ ಕಮಲದ ಮೂಲಕ ಇದೇ ಪಕ್ಷಗಳನ್ನು ಕೆಡವಿ, ಬಿಜೆಪಿ ಬಹುಮತದೊಂದಿಗೆ 5 ವರ್ಷಗಳು ಅಧಿಕಾರ ನಡೆಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಇದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ.        

ರಾಜಕೀಯ

ಡಿ.ಸಿ.ಪ್ರಕಾಶ್

ದೇಶಾದ್ಯಂತ 7 ಹಂತಗಳಲ್ಲಿ ನಡೆದ ಸಂಸತ್ ಚುನಾವಣೆ ನಿನ್ನೆ (ಜೂನ್ 1) ಮುಕ್ತಾಯಗೊಂಡಿದೆ. ಆ ಬಳಿಕ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಅದರಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ ಪರವಾಗಿಯೇ ಬಂದಿವೆ. ಅದರಲ್ಲೂ ಬಿಜೆಪಿ ಮೈತ್ರಿಕೂಟ 350ರಿಂದ 371ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ.

ದೇಶಾದ್ಯಂತ ಬಿಜೆಪಿಯೇ ಭಾರಿ ಬಹುಮತ ಪಡೆಯಲಿದ್ದು, ಬಿಜೆಪಿ ಆಡಳಿತವಿಲ್ಲದ ಪ್ರಮುಖ ರಾಜ್ಯಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ವರದಿಯಾಗಿದೆ. ಆದರೆ, NewsX, NDTV, India News ಪ್ರಕಟಿಸಿರುವ ಸಮೀಕ್ಷೆಗಳಲ್ಲಿ ಬಿಜೆಪಿ ಮೈತ್ರಿ 371, ಇಂಡಿಯಾ ಮೈತ್ರಿ 125, ಇತರರು 47 ಎಂದು ಒಂದೇ ರೀತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ಇದರಿಂದ ಈ ಕಂಪನಿಗಳು ಬಿಜೆಪಿ ನೀಡಿದ್ದನ್ನೇ ಪ್ರಕಟಿಸಿವೆ ಎಂದು ಟೀಕಿಸಲಾಗುತ್ತಿದೆ.

ಹೇಳಿಕೊಟ್ಟಂತೆ, ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿವಿಧ ಕಂಪನಿಗಳು ಪ್ರಕಟಿಸಿರುವ ಸಮೀಕ್ಷೆಗಳು ಎಲ್ಲರಲ್ಲೂ ಅನುಮಾನ ಮೂಡಿಸಿದ್ದು, ಪ್ರಸ್ತುತ ಸ್ಪರ್ಧಿಸಿದ ಕ್ಷೇತ್ರಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿ ಗೆಲವು ಸಾಧಿಸಲಿದೆ ಎಂದು ಸಮೀಕ್ಷೆಯ ಫಲಿತಾಂಶಗಳು ದೊಡ್ಡ ಆಘಾತವನ್ನುಂಟು ಮಾಡಿದೆ.

ರಾಹುಲ್ ಗಾಂಧಿ

ಈ ಹಿನ್ನೆಲೆಯಲ್ಲಿ, ಚುನಾವಣಾ ಸಮೀಕ್ಷೆಗಳು ಈಗ ಟೀಕೆಗೆ ಗುರಿಯಾಗುತ್ತಿವೆ. ಈ ಕುರಿತು ಇಂದು ರಾಹುಲ್ ಗಾಂಧಿ ನೀಡಿದ ಸಂದರ್ಶನದಲ್ಲಿ, “ಲೋಕಸಭೆ ಚುನಾವಣೆಯಲ್ಲಿ 295 ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಮೈತ್ರಿಕೂಟವು ಸರ್ಕಾರವನ್ನು ರಚಿಸಲಿದೆ. ನಿನ್ನೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳು EXIT POLL ಅಲ್ಲ, ಮೋದಿಯವರ ಮೀಡಿಯಾ POLL” ಎಂದು ಅವರು ಟೀಕಿಸಿದ್ದಾರೆ.

ಆಮ್ ಆದ್ಮಿ ಸಂಸದ ಸಂಜಯ್ ಸಿಂಗ್, “ನಿನ್ನೆಯ EXIT POLL ಫಲಿತಾಂಶಗಳಿಂದ ಮೋದಿ ಜಿಗಿದು ನೃತ್ಯ ಮಾಡುತ್ತಾರೆ. ಆದರೆ ನಿಜವಾದ ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ. ಬಿಜೆಪಿ ನಿಜವಾಗಿಯೂ ಸ್ನೇಹಪರ ಪಕ್ಷವೇ ಆಗಿದೆ. ಆದ್ದರಿಂದಲೇ 442 ಸ್ಥಾನಗಳ ಪೈಕಿ 110 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ನೀಡಿದೆ.

ಆಮ್ ಆದ್ಮಿ ಸಂಸದ ಸಂಜಯ್ ಸಿಂಗ್

2021ರಲ್ಲಿ AAJ TAK, AXIS, MY INDIA ಮುಂತಾದ ಸಂಸ್ಥೆಗಳು, ಬಿಜೆಪಿ 160 ಸ್ಥಾನಗಳನ್ನು ಗೆದ್ದು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆಯನ್ನು ಬಿಡುಗಡೆ ಮಾಡಿತ್ತು. ಆಗ ಬಿಜೆಪಿ ಮುಖಂಡರೆಲ್ಲ ಸಿಹಿ ನೀಡಿ ಸಂತಸ ಪಟ್ಟುಕೊಂಡರು. ಆದರೆ ಚುನಾವಣೆಯ ಅಂತ್ಯಕ್ಕೆ ಬಿಜೆಪಿಗೆ ಸಿಕ್ಕಿದ್ದು ಬರೀ 77 ಸ್ಥಾನ ಮಾತ್ರ.

ಈಗ ಮೋದಿಗೆ ಗೋಡಿ ಮೀಡಿಯಾ ಕೊಟ್ಟಿರುವ 400 ಸೀಟುಗಳಲ್ಲಿ ಬಿಜೆಪಿಗೆ 200 ಕ್ಕಿಂತ ಕಡಿಮೆ ಸ್ಥಾನಗಳೇ ಬರುತ್ತವೆ. ಮತ ಎಣಿಕೆ ವೇಳೆ ನಿಜವಾದ ಫಲಿತಾಂಶ ಹೊರಬೀಳಲಿದೆ” ಎಂದು ಹೇಳಿದ್ದಾರೆ.

ಶಿವಸೇನೆಯ (ಉದ್ದವ್) ಸಂಜಯ್ ರಾವತ್

ಶಿವಸೇನೆಯ (ಉದ್ದವ್) ಸಂಜಯ್ ರಾವತ್, ” ಚುನಾವಣೋತ್ತರ ಸಮೀಕ್ಷೆಗಳೆಂದು ಹೇಳಿಕೊಳ್ಳುವ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದು CORPORATE ಆಟವಾಗಿದೆ. ನೀವು ಹಣ ಪಾವತಿಸಿದರೆ, ಅವರು ನಿಮಗೆ ಅಗತ್ಯವಿರುವ ಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಾರೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ಪರವಾಗಿ ಭವಿಷ್ಯ ನುಡಿಯುವುದು ಆ ಮಾಧ್ಯಮಗಳ ಕೆಲಸವಾಗಿದೆ. ಇಂಡಿಯಾ ಮೈತ್ರಿಕೂಟ 295 ರಿಂದ 310 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸುವುದು ಖಚಿತ” ಎಂದು ಹೇಳಿದ್ದಾರೆ.

ರಾಜಕೀಯ

ವರದಿ: ಯೋಗಿತಾ ಲಿಮಾಯೆ, ಶ್ರುತಿ ಮೇನನ್ ಮತ್ತು ಜೇಕ್ ಗುಡ್‌ಮ್ಯಾನ್
ಬಿಬಿಸಿ ನ್ಯೂಸ್
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

ಅಂಕುರ್ ರಾಣಾ ಅವರು ನಿರ್ವಹಿಸುವ ನೂರಾರು ವಾಟ್ಸಾಪ್ (WhatsApp) ಗುಂಪುಗಳಲ್ಲಿ ಸಂದೇಶಗಳನ್ನು ಕಳುಹಿಸಲು ತಮ್ಮ ಮೊಬೈಲ್ ಫೋನ್‌ನಲ್ಲಿ ಅತ್ಯಂತ ವೇಗವಾಗಿ ‘ಟೈಪ್’ ಮಾಡುತ್ತಾರೆ.

“ನನ್ನ ಬಳಿ 400-450 ವಾಟ್ಸಾಪ್ ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ಸುಮಾರು 200-300 ಜನರಿದ್ದಾರೆ. ಇದಲ್ಲದೆ, ನನ್ನ ಬಳಿ ಸುಮಾರು 5,000 ಜನರ ಸಂಪರ್ಕ ಸಂಖ್ಯೆಗಳಿವೆ. ಇವುಗಳ ಮೂಲಕ ನಾನೊಬ್ಬನೇ ದಿನಕ್ಕೆ 10-15,000 ಜನರನ್ನು ತಲುಪಬಲ್ಲೆ,” ಎಂದು ಕಳೆದ ತಿಂಗಳು ಮತದಾನ ನಡೆದ ಪಶ್ಚಿಮ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಾಮಾಜಿಕ ಮಾಧ್ಯಮ ಸಂಯೋಜಕ ಅಂಕುರ್ ರಾಣಾ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ, ಅವರ ಸಂದೇಶಗಳು ಲಕ್ಷಾಂತರ ಮತದಾರರನ್ನು ತಲುಪುವುದನ್ನು ಖಾತ್ರಿಪಡಿಸುವ ತಂಡದಲ್ಲಿ ಅವರು ಭಾಗವಾಗಿದ್ದಾರೆ. ಉತ್ತರ ಪ್ರದೇಶವೊಂದರಲ್ಲೇ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳು ಹರಿದಾಡುತ್ತವೆ.

ಈ ಕಾರ್ಯಗಳು ತುಂಬಾ ಕಷ್ಟವಾದದ್ದು. ಆದರೆ ಬಿಜೆಪಿ ಈ ಲೋಕಸಭೆ ಚುನಾವಣೆಯಲ್ಲಿ 370 ಸ್ಥಾನಗಳ ಗುರಿಯನ್ನು ಸಾಧಿಸಲು ಪ್ರಮುಖ ಮಾರ್ಗಗಳಾಗಿ ವಾಟ್ಸಾಪ್ ಸೇರಿದಂತೆ ಇತರ ಸಂದೇಶ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಗುರುತಿಸಿಕೊಂಡಿದೆ.

ವಾಟ್ಸಾಪ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಲು ಉತ್ತಮ ಕಾರಣವೂ ಇದೆ. ಜಾಗತಿಕವಾಗಿ ವಾಟ್ಸಾಪ್ ಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದೆ. ವಾಟ್ಸಾಪ್ ನಲ್ಲಿ ಗಂಟೆಗಟ್ಟಲೆ ಕಳೆಯುವ ಸುಮಾರು 50 ಕೋಟಿ ಬಳಕೆದಾರರಿದ್ದಾರೆ.

ವಾಟ್ಸಾಪ್ ನಲ್ಲಿ ಅವರು ‘ಗುಡ್ ಮಾರ್ನಿಂಗ್’ ನಿಂದ ಎಲ್ಲವನ್ನೂ ಇತರರಿಗೆ ಕಳುಹಿಸುತ್ತಾರೆ. ನಿರ್ದಿಷ್ಟವಾಗಿ, ಅವರು ವಿವಿಧ ಭಾಷೆಗಳಲ್ಲಿ ರಾಜಕೀಯ ಸಂದೇಶಗಳನ್ನು ಕಳುಹಿಸುತ್ತಾರೆ.

ಈ ಚುನಾವಣಾ ಯಂತ್ರದಲ್ಲಿ ಅಂಕುರ್ ಅವರಂತಹ ಕಾರ್ಯಕರ್ತರು, ಬಿಜೆಪಿ ಕುರಿತ ಸುದ್ದಿಗಳು ಎಲ್ಲಾ ವೇದಿಕೆಗಳಲ್ಲಿ ಭಾಗವಹಿಸುವುದನ್ನು ಖಚಿತಪಡಿಸುವ ಬೃಹತ್ ಕಾರ್ಯದಲ್ಲಿ ಸಣ್ಣ ಪಾತ್ರವನ್ನು ವಹಿಸುತ್ತಾರೆ.

ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರಗಳಿಗೆ ಸಾಮಾಜಿಕ ಮಾಧ್ಯಮ ಸಂಯೋಜಕರಾಗಿರುವ ಇತರ 10 ಜನರೊಂದಿಗೆ ಬಿಬಿಸಿ ಮಾತನಾಡಿದೆ. ಅವರೆಲ್ಲರೂ ನೂರಕ್ಕೂ ಹೆಚ್ಚು ವಾಟ್ಸಾಪ್ ಗ್ರೂಪ್‌ಗಳನ್ನು ನಿರ್ವಹಿಸುತ್ತಿದ್ದು, ಪ್ರತಿ ಗುಂಪಿನಲ್ಲಿ 200 ರಿಂದ 2,000 ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.

ಅಂಕುರ್ ರಾಣಾ

ಸುದ್ದಿ ಎಲ್ಲಿಂದ ಬರುತ್ತದೆ?
ಈ ಕಾರ್ಯವಿಧಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಮೀರತ್‌ನ ಬಿಜೆಪಿ ಕಾರ್ಯಕರ್ತರ ಪ್ರಕಾರ, “ದೆಹಲಿಯ ಪಕ್ಷದ ಪ್ರಧಾನ ಕಚೇರಿಯಿಂದ ಪ್ರತಿದಿನ, ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳುವುದರಿಂದ ಹಿಡಿದು ವಿರೋಧ ಪಕ್ಷವನ್ನು ಟೀಕಿಸುವವರೆಗೆ ಟ್ರೆಂಡಿಂಗ್ ಮಾಡಬಹುದಾದ ರಾಜಕೀಯ ಸಂದೇಶಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ರಾಜ್ಯದ ಪಕ್ಷದ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ” ಎಂದು ಹೇಳುತ್ತಾರೆ.

ಅಲ್ಲಿಂದ ಅಂಕುರ್ ಸೇರಿದಂತೆ ಮೀರತ್ ಕ್ಷೇತ್ರದ 180 ಕಾರ್ಯಕರ್ತರಿಗೆ ಸುದ್ದಿ ತಲುಪುತ್ತದೆ. ಅವರು ಸಂದೇಶಗಳನ್ನು ಇನ್ನಷ್ಟು ಆಂತರಿಕ ಮಟ್ಟಕ್ಕೆ ಹರಡುತ್ತಾರೆ. ನಂತರ, ಆ ಸಂದೇಶಗಳು ಮತಗಟ್ಟೆ ಮಟ್ಟದಲ್ಲಿ ಪ್ರಚಾರವನ್ನು ನಿರ್ವಹಿಸುವವರಿಗೆ ತಲುಪುತ್ತವೆ.

ಅದರಲ್ಲೂ ಯುವಕರನ್ನು ತಲುಪುವಲ್ಲಿ ವಾಟ್ಸಾಪ್ ಪರಿಣಾಮಕಾರಿ ಎನ್ನುತ್ತಾರೆ ಅಂಕುರ್. ಸಂಭಾವನೆ ಇಲ್ಲದೆ ಬಿಜೆಪಿಗಾಗಿ ಈ ಕೆಲಸ ಮಾಡುವ ಅಂಕುರ್, ಮುಂಬೈನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ನಡೆಸುತ್ತಿದ್ದಾರೆ. 40 ವರ್ಷ ಮೇಲ್ಪಟ್ಟವರು ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಅವರು ವರದಿ ಮಾಡಿದ್ದಾರೆ.

“ದಿನಕ್ಕೆ ಸರಾಸರಿ 1 ಲಕ್ಷದಿಂದ 1.5 ಲಕ್ಷದವರೆಗೆ ಹೊಸ ಜನರನ್ನು ತಲುಪುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳುತ್ತಾರೆ.

ಮತದಾರರೊಂದಿಗೆ ನೇರ ಸಂಪರ್ಕ:
ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ, ಬಿಜೆಪಿಯ ಸಾಮಾಜಿಕ ಮಾಧ್ಯಮ ಪ್ರಚಾರವು ತನ್ನ ಪ್ರತಿಸ್ಪರ್ಧಿಗಳಿಂದ ದೂರ ಸರಿಯುತ್ತಿರುವಂತೆ ತೋರುತ್ತಿದೆ ಎಂಬುದು ತಜ್ಞರು ಅಭಿಪ್ರಾಯವಾಗಿದೆ. ಆದರೆ ವೈಯಕ್ತಿಕ ಸಂಪರ್ಕವಿಲ್ಲದೆ ಇದು ಕೆಲಸ ಮಾಡುವುದಿಲ್ಲ ಎಂದು ಕಾರ್ಯಕರ್ತರು ಹೇಳುತ್ತಾರೆ. ನಿರ್ದಿಷ್ಟವಾಗಿ, ಅವರಿಗೆ ಮೊದಲು ಜನರ ಸಂಪರ್ಕ ಸಂಖ್ಯೆಗಳು ಬೇಕು.

“ಪಕ್ಷದ ಉನ್ನತ ಕಾರ್ಯಕರ್ತನಿಂದ ಹಿಡಿದು ತಳಮಟ್ಟದ ಕಾರ್ಯಕರ್ತರವರೆಗೆ, ಅಧ್ಯಕ್ಷರು ಸೇರಿದಂತೆ ಎಲ್ಲರೂ 60 ಮತದಾರರಿಗೆ ಜವಾಬ್ದಾರರು” ಎಂದು ಮೀರತ್ ಬಳಿಯ ಮತಗಟ್ಟೆಯ ಪ್ರಚಾರ ಉಸ್ತುವಾರಿ ವಿಪಿನ್ ವಿಬಾಲಾ ಹೇಳುತ್ತಾರೆ.

“ನಮಗೆ ಒಪ್ಪಿಸಿದ 60 ಜನರೊಂದಿಗೆ ನಾವು ನಿರಂತರ ನೇರ ಸಂಪರ್ಕದಲ್ಲಿರಬೇಕು. ಬಿಜೆಪಿಗೆ ಮತ ಹಾಕುವಂತೆ ಅವರನ್ನು ಪ್ರೇರೇಪಿಸಬೇಕು. ಅವರ ಮೊಬೈಲ್ ನಂಬರ್ ಪಡೆದು ಮೆಸೇಜ್ ಗ್ರೂಪ್ ಗಳಿಗೆ ಅವರ ಹೆಸರನ್ನು ಸೇರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ” ಎಂದು ಅವರು ಹೇಳುತ್ತಾರೆ.

ವಿಪಿನ್ ತಮ್ಮ ಅಧೀನದಲ್ಲಿರುವ ಮತದಾರರ ವಾಟ್ಸಾಪ್ ಗ್ರೂಪ್‌ಗೆ ‘ಮಾನವೀಯತೆಯೇ ಜೀವನ’ (Humanity is Life) ಎಂದು ಹೆಸರಿಟ್ಟಿದ್ದಾರೆ. ಅಂತೆಯೇ, ಗುಂಪು ಬಹಿರಂಗವಾಗಿ ರಾಜಕೀಯವಾಗದಂತೆ ನೋಡಿಕೊಳ್ಳುವುದು ಕೂಡ ಈ ಕೆಲಸದ ಭಾಗವಾಗಿದೆ. ಅಂತರ್ಜಾಲ ವಿಷಯದಲ್ಲಿ ಯಾವುದೇ ರೀತಿಯ ಸಂಭಾಷಣೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದು ಅಸಾಧ್ಯವೆಂದು ಎಲ್ಲರಿಗೂ ತಿಳಿದಿದೆ.

ವಿಪಿನ್ ವಿಬಾಲಾ

ವಾಟ್ಸಾಪ್ ನಲ್ಲಿ ಪ್ರತ್ಯೇಕವಾಗಿ ಅಥವಾ ಗುಂಪುಗಳಲ್ಲಿ ಸಂದೇಶಗಳನ್ನು ಕಳುಹಿಸಿದಾಗ, ಏನನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಸಂದೇಶವು ಮೂಲತಃ ಎಲ್ಲಿಂದ ಬಂದಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ.

ಹಂಚಿಕೊಳ್ಳುತ್ತಿರುವ ಸುಳ್ಳು ಸುದ್ದಿಗಳು:
ಕೆಲವು ಗುಂಪುಗಳಲ್ಲಿ; ಬಿಬಿಸಿ ನೋಡಿದ ಹಾಗೆ, ಹಲವು ಬಾರಿ ಹಂಚಿಕೊಂಡಿರುವ ವೈರಲ್ ಸಂದೇಶಗಳಲ್ಲಿ, ಕಾಂಗ್ರೆಸ್ ಪಕ್ಷ ಮುಸ್ಲಿಂ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂಬ ಸುದ್ದಿಯೇ ಪ್ರಮುಖವಾಗಿದೆ.

ಹಿಂದಿಯಲ್ಲಿರುವ ಆ ಸಂದೇಶದಲ್ಲಿ, “ಕಾಂಗ್ರೆಸ್ ಈಗಾಗಲೇ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಿದೆ. ಅವರು ಅದನ್ನು ಅಧಿಕೃತವಾಗಿ ಘೋಷಿಸಲಿಲ್ಲ,” ಎಂದು ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಮುಸ್ಲಿಂ ಸಮುದಾಯದ ಪರವಾಗಿ ನಡೆದುಕೊಳ್ಳುತ್ತಿರುವ 18 ಮಾರ್ಗಗಳನ್ನೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.

ಆ ಸಂದೇಶ ಎಲ್ಲಿಂದ ಬಂತು ಎಂಬುದನ್ನು ಪತ್ತೆಹಚ್ಚುವುದು ಕಷ್ಟ. ಆದರೆ, ಸತ್ಯವೆಂದರೆ, ಇತ್ತೀಚಿನ ವಾರಗಳಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕತ್ವವು ಮಾಡಿದ ಅಭಿಪ್ರಾಯಗಳನ್ನು ಇದು ಪ್ರತಿಬಿಂಬಿಸುವಂತಿದೆ.

ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು “ನುಸುಳುಕೋರರಿಗೆ” ಕೊಡಲಾಗುವುದು ಎಂದು ಮುಸ್ಲಿಮರನ್ನು ಗುರಿಯಾಗಿಸಿ ಹೇಳುವ ರೀತಿಯಲ್ಲಿ, ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು.

ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು ಈ ವಿಷಯವನ್ನು ಪದೇ ಪದೇ ಪುನರುಚ್ಚಿಸಿದಂತೆ ಇದ್ದವು. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲೂ ಇದನ್ನು ಅಳವಡಿಸಲಾಗಿದೆ ಎಂದು ಬಿಜೆಪಿ ನಾಯಕರು ತಪ್ಪಾಗಿ ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆಸ್ತಿ ಹಂಚಿಕೆ ಅಥವಾ ಮುಸ್ಲಿಮರು ಎಂಬ ಪದವನ್ನು ಎಲ್ಲೂ ಉಲ್ಲೇಖಿಸಿಲ್ಲ.

ರಾಜಕೀಯ ಪಕ್ಷಗಳು ಅಧಿಕೃತವಾಗಿ ಹೇಳುವುದು ಸಾಮಾನ್ಯವಾಗಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಪ್ರತಿಫಲಿಸುತ್ತದೆ ಎಂದು ರಟ್ಜರ್ಸ್ ವಿಶ್ವವಿದ್ಯಾಲಯದ (Rutgers University) ಸಹಾಯಕ ಪ್ರಾಧ್ಯಾಪಕ ಕಿರಣ್ ಕರಿಮೆಲ್ಲಾ ಹೇಳುತ್ತಾರೆ. ಆದರೆ ನಂತರ ಯಾವುದು ಅಧಿಕೃತ ಮತ್ತು ಅನಧಿಕೃತ ಎಂಬುದನ್ನು ಆಯ್ಕೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.

“ಇದನ್ನು ಉನ್ನತ ಮಟ್ಟದಿಂದ ನಿಯಂತ್ರಿಸಲಾಗುತ್ತದೆ. ಮೊದಲಿಗೆ ತಾಂತ್ರಿಕ ತಂಡದ (ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡ) ಚಟುವಟಿಕೆಗಳು. ತರುವಾಯ, ಶಾಶ್ವತ ಮತ್ತು ಸಂಯೋಜಿತ ವಿಷಯಗಳು. ಆದರೆ, ಈ ಸಂದೇಶಗಳನ್ನು ಹರಡುವಲ್ಲಿ ಸಾಮಾನ್ಯ ಜನರು ತೊಡಗಿಸಿಕೊಂಡಿರುವುದು ಹೊಸ ವಿಷಯವಾಗಿದೆ” ಎಂದು ಅವರು ಹೇಳುತ್ತಾರೆ. ಅಲ್ಲದೆ, ವಾಟ್ಸಾಪ್‌ನ ಸ್ವರೂಪವನ್ನು ಅವಲಂಬಿಸಿ, “ಯಾವುದು ಐಟಿ ತಂಡದಿಂದ ಅಭಿವೃದ್ಧಿಪಡಿಸಿದ್ದು ಮತ್ತು ಯಾವುದು ಸಾಮಾನ್ಯ ಕಾರ್ಯಕರ್ತರಿಂದ ಪ್ರಸಾರವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ” ಎಂದೂ ಅವರು ಹೇಳಿದ್ದಾರೆ.

ಅಲ್ಲದೆ, ಅಂತಹ ಸುದ್ದಿಗಳು ಒಂದು ನಿರ್ದಿಷ್ಟ (ಸಾಮಾಜಿಕ) ಮಾಧ್ಯಮದಲ್ಲಿ ಹುಟ್ಟಿಕೊಂಡು ನಂತರ ಎಲ್ಲಾ ಸಾಮಾಜಿಕ ಮಾಧ್ಯಮಗಳಿಗೆ ಹರಡುವುದರಿಂದ, ಜನರು ತಾವು ನೋಡುತ್ತಿರುವುದನ್ನು ನಿಜವೆಂದು ನಂಬಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಕೃಪೆ:ಬಿಬಿಸಿ

ರಾಜಕೀಯ

ಡಿ.ಸಿ.ಪ್ರಕಾಶ್

ಇಸ್ಲಾಂ ವಿರೋಧದ ನಂತರ ಬಿಜೆಪಿ ವರ್ಣ ಆಧಾರಿತ ರಾಜಕಾರಣವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿದೆ!

ಮುಸ್ಲಿಮರು ಮತ್ತು ಅಲ್ಪಸಂಖ್ಯಾತರನ್ನು ದಮನ ಮಾಡಿ, ವಿಭಜನೆಯನ್ನು ಸೃಷ್ಟಿಸಿ ಆ ಮೂಲಕ ಬಹುಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯುವುದು ಆರ್.ಎಸ್.ಎಸ್ ಸಿದ್ಧಾಂತದ ಬಿಜೆಪಿಯ ಉದ್ದೇಶವಾಗಿದೆ. ಹೀಗಾಗಿ ಜಾತಿ ತಾರತಮ್ಯ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯದ ಬಗ್ಗೆ ಮಾತನಾಡುವುದು ಬಿಜೆಪಿಯ ಮೂಲ ರಚನೆಯಾಗಿದೆ.

ಆದರೂ ಇಂತಹ ಚಟುವಟಿಕೆಗಳು ಇಲ್ಲಿಯವರೆಗೆ ಗುಟ್ಟಾಗಿ ನಡೆಯುತ್ತಿದ್ದವು. ಆದರೆ ತನ್ನ 10 ವರ್ಷಗಳ ಆಡಳಿತದಲ್ಲಿ ಹಲವು ವೈಫಲ್ಯಗಳನ್ನು ಕಂಡ ಮೋದಿ ಸರಕಾರ, ಈ ಬಾರಿ ಖಂಡಿತವಾಗಿಯೂ ಸೋಲಲಿದೆ ಎಂದು ಅರಿವಾಗಿ, ನಿರಂತರ ದ್ವೇಷ ಅಭಿಯಾನಗಳನ್ನು ಮುನ್ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಮೋದಿ ಈಗ ಮುಸ್ಲಿಮರನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

ಬಿಜೆಪಿ ನಾಯಕರು, ಮುಸ್ಲಿಮರು ಎಂದರೇ ಶತ್ರುಗಳು ಎಂಬಂತಹ ವರ್ತನೆಯನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮುಸ್ಲಿಮರ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು, ಮುಸ್ಲಿಮರ ಮೇಲೆ ದ್ವೇಷ ಸಾಧಿಸಿದರೆ ಸಾಕಾಗದು, ಜನಾಂಗೀಯ ದ್ವೇಷವನ್ನು ಬಿತ್ತಿದರೆ ಮಾತ್ರ ಮತಗಳು ಹೆಚ್ಚಾಗುತ್ತವೆ ಎಂದು ಭಾವಿಸಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮೋದಿ ಅವರು, ‘ಕಾಂಗ್ರೆಸ್ ಪಕ್ಷವು, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬಣ್ಣದ ಕಾರಣಕ್ಕಾಗಿಯೇ ಮತ ಹಾಕಲಿಲ್ಲ’ ಎಂಬ ಹೊಸ ಸುಳ್ಳನ್ನು ಉಗುಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ‘ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಸೂಚಿಸಿದಂತೆಯೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೂಡ ಮತ್ತೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬೆಂಬಲಿಸಿದವು, ಅದಕ್ಕೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಏಕೆ ಆಹ್ವಾನಿಸಲಿಲ್ಲ? ಅವರ ಬಣ್ಣದ ಕಾರಣದಿಂದಲೇ ಎಂಬ ಪ್ರಶ್ನೆಗಳು ಮೋದಿಯತ್ತ ಹರಿದಾಡುತ್ತಿವೆ. ಇಂತಹ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಟೀಕೆಗೆ ಗುರಿಯಾಗಿದೆ.

ರಾಜಕೀಯ

ಉತ್ತರ ಪ್ರದೇಶದ ವಾರಣಾಸಿಯಲ್ಲಿ 7ನೇ ಹಂತದಲ್ಲಿ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 5 ರಂದು ಅಯೋಧ್ಯೆಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ‘ರೋಡ್ ಶೋ’ ನಡೆಸಲಿದ್ದಾರೆ.

ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಅವರು ಉತ್ತರಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದರು. 2019ರ ಚುನಾವಣೆಯಲ್ಲೂ ಗೆದ್ದಿರುವ ಮೋದಿ ಮೂರನೇ ಬಾರಿಗೂ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ.

ಈ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತದೆ. ಕೊನೆಯ ಹಂತದಲ್ಲಿ ವಾರಾಣಸಿಯಲ್ಲಿ ಮೇ 5ರ ನಂತರ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಮೇ 5ರಂದು ಅಯೋಧ್ಯೆಯಲ್ಲಿ ಅದ್ಧೂರಿ ‘ರೋಡ್ ಶೋ’ ನಡೆಸಲಿದ್ದಾರೆ.

ಕಳೆದ ಜನವರಿ 22ರಂದು ರಾಮಮಂದಿರ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಅವರು ಕಳೆದ ವರ್ಷ ಡಿಸೆಂಬರ್ 30 ರಂದು ವಾಲ್ಮೀಕಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಅಯೋಧ್ಯೆಗೆ ಭೇಟಿ ನೀಡಿದ್ದರು. ಆ ವೇಳೆ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿಯೂ ಮೆರವಣಿಗೆ ಮಾಡಿದ್ದರು. ಇದಕ್ಕಾಗಿ, ಅಯೋಧ್ಯೆಯ ರಸ್ತೆಗಳಲ್ಲಿ ಸಾವಿರಾರು ನಾಗರಿಕರು ಜಮಾಯಿಸಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.

ಇದಾದ ನಂತರ ಮೇ 5 ರಂದು ಶ್ರೀರಾಮನ ದರ್ಶನಕ್ಕಾಗಿ ಪ್ರಧಾನಿ ಮೋದಿ ಅಯೋಧ್ಯೆಗೆ ಬರಲಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರು ಅಯೋಧ್ಯೆಯಲ್ಲಿ ಮೊಕ್ಕಾಂ ಹೂಡಿ, ಈ ಅಭಿಯಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಯ ನಂತರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಿದೆ ಎಂದು ಊಹಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಮುಗಿದಿರುವ ಎರಡು ಹಂತಗಳ ಚುನಾವಣಾ ಪ್ರಚಾರದಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದ ಬಗ್ಗೆ ಹೆಚ್ಚಾಗಿ ಗಮನ ಸೆಳೆಯಲಿಲ್ಲ ಎಂಬುದು ಗಮನಾರ್ಹ.

ತಮ್ಮ ಸಂಸದ ಕ್ಷೇತ್ರ ವಾರಣಾಸಿಗೆ ಆಗಮಿಸಲಿರುವ ಪ್ರಧಾನಿ ಅಲ್ಲೇ ಉಳಿದು ಸುತ್ತಲಿನ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಗುಜರಾತ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಲಾ 2 ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ. ಅಂತೆಯೇ ಪ್ರಧಾನಿ ಮೋದಿ ಅವರು ಜಾರ್ಖಂಡ್ ಮತ್ತು ಬಿಹಾರದಲ್ಲಿ ನಡೆಯಲಿರುವ ಪ್ರಚಾರ ಸಭೆಗಳಲ್ಲೂ ಭಾಗವಹಿಸಿ ಮಾತನಾಡಲಿದ್ದಾರೆ.