ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
January 2023 » Dynamic Leader
December 5, 2024
Home 2023 January
ಬೆಂಗಳೂರು

ಬೆಂಗಳೂರು: ಅದಾನಿ ಸಮೂಹದ ನಿವ್ವಳ ಮೌಲ್ಯವು ಕಳೆದ ಕೆಲವು ವರ್ಷಗಳಿಂದ ದೈತ್ಯಾಕಾರವಾಗಿ ಬೆಳೆದಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಾನಿ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಆದಾಗ್ಯೂ, ಅದಾನಿ ಗ್ರೂಪ್‌ನ ಆಸ್ತಿ ಹೆಚ್ಚಿದ ನಂತರ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದರು. ಕಳೆದ ಕೆಲವು ದಿನಗಳಿಂದ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದು, ಅಲ್ಪ ಅಂತರದಿಂದ ಎರಡನೇ ಸ್ಥಾನದಲ್ಲಿದ್ದ ಅದಾನಿ ಗ್ರೂಪ್ ಈಗ ಮೂರನೇ ಸ್ಥಾನಕ್ಕೆ ಬಂದಿಳಿದಿದೆ.

ಈ ಹಿನ್ನಲೆಯಲ್ಲಿ ಅಮೆರಿಕದ ಪ್ರಸಿದ್ಧ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ಬರ್ಗ್ (Hindenburg) 106 ಪುಟಗಳ ವರದಿಯನ್ನು ಪ್ರಕಟಿಸಿ, ‘ಭಾರತದ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಹಲವಾರು ವಂಚನೆಗಳನ್ನು ಮಾಡಿದೆ ಮತ್ತು ಸಮೂಹವು ಭಾರಿ ಸಾಲದಲ್ಲಿದೆ’ ಎಂದು ಆರೋಪಿಸಿತು. ವರದಿ ಬಿಡುಗಡೆಯಾದ ನಂತರ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿತು. ಜನವರಿ 25 ರಂದು ಮಾತ್ರ ಅದಾನಿ ಸಮೂಹವು ಒಂದು ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿತು.

ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಸತತ ಮೂರನೇ ದಿನವೂ ನಿನ್ನೆ ಕುಸಿತವನ್ನು ಕಂಡವು. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮರ್ ಮುಂತಾದವುಗಳ ಷೇರುಗಳ ಬೆಲೆ ವಿಪರೀತ ಕುಸಿತವನ್ನು ಕಂಡಿತು.

ಈ ಹಿನ್ನಲೆಯಲ್ಲಿ ಅದಾನಿಗೆ ಆರ್‌ಎಸ್‌ಎಸ್‌ನ ಆರ್ಥಿಕ ವಿಭಾಗ ಬೆಂಬಲ ನೀಡಿದೆ. ಆರ್‌ಎಸ್‌ಎಸ್‌ನ ಆರ್ಥಿಕ ವಿಭಾಗವಾದ ಸ್ವದೇಶಿ ಜಾಗರಣ ಮಂಚ್‌ ನೀಡಿರುವ ಹೇಳಿಕೆಯಲ್ಲಿ ‘ಅದಾನಿ ಹಣವನ್ನು ನಾಶ ಮಾಡುತ್ತಿಲ್ಲ, ಅವರು ಭಾರತದ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ; ಹಿಂಡೆನ್‌ಬರ್ಗ್ ವರದಿಯಿಂದ ಅಂತರಾಷ್ಟ್ರೀಯ ರಂಗದಲ್ಲಿ ಭಾರತದ ಹೆಸರಿಗೆ ಧಕ್ಕೆಯಾಗುವುದಿಲ್ಲ’ ಎಂದು ಹೇಳಿದೆ.

ಬೆಂಗಳೂರು ರಾಜ್ಯ

ಬೆಂಗಳೂರು: ಮಾಜಿ ಮಹಾಪೌರ, ನಾಡೋಜ ಡಾ.ಜಿ.ನಾರಾಯಣ ಜನ್ಮಶತಮಾನೋತ್ಸವವನ್ನು ದಿನಾಂಕ: 05.02.2023 ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಜಂಟಿಯಾಗಿ ಘೋಷಿಸಿದೆ.  

 ಜಿ.ನಾರಾಯಣ:
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದ ಜಿ.ನಾರಾಯಣ ಅವರು ಕನ್ನಡದ ವಿದ್ವಾಂಸರಾಗಿ, ಕನ್ನಡ ನಾಡು ಕಂಡ ಮಹತ್ವದ ಆಡಳಿತಗಾರರಲ್ಲಿ ಒಬ್ಬರಾಗಿದ್ದರು. ಆಡಳಿತ ಮತ್ತು ರಾಜಕೀಯದಲ್ಲಿದ್ದರೂ ಅವರು ವಿವಾದಾತೀತರೆನಿಸಿದ್ದರು.

ಶಾಲೆಯಿಂದ ಹೊರಬಿದ್ದ ನಾರಾಯಣರು ತಮ್ಮ ಜೀವನವನ್ನು ದೇಶ ಸೇವೆಗೆ ಮುಡಿಪುಗೊಳಿಸಿದರು. ಮದ್ದೂರಿನ ವೀರಣ್ಣಗೌಡರ ಪ್ರಭಾವದ ಆಕರ್ಷಣೆಗೆ ಒಳಗಾದ ನಾರಾಯಣರು ಅವರೊಡನೆ ಸ್ವಾತಂತ್ರ್ಯ ಹೋರಾಟದ ಕೆಲಸದಲ್ಲಿ ಭಾಗಿಯಾದರು. ಶಿವಪುರದ ಸತ್ಯಾಗ್ರಹದಲ್ಲಿ ಭಾಗಿಯಾದ ನಂತರದಲ್ಲಿ ಸಾಹುಕಾರ್ ಚೆನ್ನಯ, ಕೆಂಗಲ್ ಹನುಮಂತಯ್ಯ ಅಂತಹ ಹಿರಿಯರ ಪರಿಚಯ ಒಡನಾಟಗಳು ಅವರಿಗೆ ದೊರಕಿದವು. ಪೂನಾದ ಬಳಿ ಉದಲಿ ಎಂಬಲ್ಲಿಗೆ ಹೋಗಿ ಖಾದಿ ಗ್ರಾಮೋದ್ಯೋಗದ ಬಗ್ಗೆ ತರಬೇತಿ ಪಡೆದು ಬಂದರು.

ಚಾಮರಾಜಪೇಟೆಯಲ್ಲಿ ತಮ್ಮದೇ ಆದ ಮುದ್ರಣಾಲಯ ಆರಂಭಿಸಿದರು. ಅಂದಿನ ದಿನದಲ್ಲಿ ಕಾಂಗ್ರೆಸ್ ಪತ್ರಿಕೆಯನ್ನು ಅವರೇ ಸಂಪಾದಿಸುತ್ತಿದ್ದರು. ‘ವಿನೋದ’ ಹಾಸ್ಯ ಮಾಸಪತ್ರಿಕೆ ಅವರ ಮಹತ್ವದ ಕೊಡುಗೆಗಳಲ್ಲೊಂದು. ಆ ಪತ್ರಿಕೆ ಅಂದಿನ ದಿನಗಳಲ್ಲಿ ಬಹು ಜನಪ್ರಿಯಗೊಂಡು ನಾಡಿಗೇರ ಕೃಷ್ಣರಾವ್, ಶ್ರೀನಿವಾಸ ವೈದ್ಯ, ಎಚ್.ಎಲ್.ಕೇಶವಮೂರ್ತಿ, ಅನಂತ ಕಲ್ಲೋಳ ಅಂತಹ ಮಹಾನ್ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಕಾರಣೀಭೂತವೆನಿಸಿತ್ತು.

ಜಿ. ನಾರಾಯಣರು 1964ರ ಅವಧಿಯಲ್ಲಿ ಬೆಂಗಳೂರಿನ ಮೇಯರ್ ಆಗಿ, 1969ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, 1987ರಲ್ಲಿ ಕರ್ನಾಟಕ ಪ್ರೆಸ್ ಅಕಾಡೆಮಿ ಅಧ್ಯಕ್ಷರಾಗಿ, 1992ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆ ಸ್ಮರಣೀಯವಾದುದು. ತಾವರೆ ಎಲೆ ಕೆಸರು ನೀರುಗಳನ್ನು ಹೇಗೆ ಅಂಟಿಸಿಕೊಳ್ಳುವುದಿಲ್ಲವೋ ಹಾಗೆ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಸರಾದರೇ ವಿನಹ ಆಪಾದನೆ, ವಿವಾದಗಳಿಗೆ ಎಂದೂ ಸಿಲುಕಲಿಲ್ಲ. ಸಾಹಿತ್ಯದಲ್ಲಿ ಅವರು ಸೇವೆ ಮಾಡಿದ್ದಾರಾದರೂ ಅವರು ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ತೊಡಗಿಕೊಂಡಿದ್ದರಿಂದ ಕನ್ನಡದ ಮಹಾನ್ ಸಾಹಿತಿಗಳ ಸಾನ್ನಿಧ್ಯ ಅವರಿಗೆ ನಿರಂತರವಾಗಿ ಲಭ್ಯವಾಗಿತ್ತು. ಆಕರ್ಷಣೀಯ ವ್ಯಕ್ತಿತ್ವದ ನಾರಾಯಣರು ತಮ್ಮ ಸಮಂಜಸ ನಿಲುವುಗಳು, ಗಾಂಭೀರ್ಯ, ಆಕರ್ಷಕ ವ್ಯಕ್ತಿತ್ವಗಳಿಂದ ಎಲ್ಲಾ ಜನರಿಗೂ ಪ್ರಿಯರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರದಿಂದ ಸೂಕ್ತ ಬೆಂಬಲಗಳು ಪರಿಷತ್ತಿಗೆ ದೊರಕುವಂತೆ ಮಾಡಿ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುವಲ್ಲಿ ಜಿ.ನಾರಾಯಣರು ವಹಿಸಿದ ಪಾತ್ರ ಮಹತ್ವಪೂರ್ಣವಾದುದು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರು ಅಧ್ಯಕ್ಷರಾಗಿದ್ದಾಗ ನಡೆಸಿದ ಮಹತ್ವಪೂರ್ಣ ಕಾಯಕಗಳಲ್ಲಿ ಜಾನಪದ ತಜ್ಞರ ಭಾಗವಹಿಕೆಯಲ್ಲಿ ಮೂಡಿಸಿದ ‘ಕರ್ನಾಟಕ ಜಾನಪದ ಲೋಕ’ದಂತಹ ಕೃತಿಗಳು ಈಗಲೂ ಜನಪ್ರಿಯವಾಗಿವೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷತೆಯನ್ನೂ ಅಲಂಕರಿಸಿದ್ದ ನಾರಾಯಣರು ಈ ಲೋಕವನ್ನಗಲುವ ಸಂದರ್ಭದವರೆಗೆ ‘ಜಾನಪದ ಲೋಕ’ ಟ್ರಸ್ಟಿನ ಅಧ್ಯಕ್ಷರಾಗಿದ್ದರು.

ಬಿ.ಎಂ.ಶ್ರೀ.ಪ್ರತಿಷ್ಠಾನ’, ‘ಸಾಹಿತ್ಯ ಸಂವರ್ಧಕ ಟ್ರಸ್ಟ್’, ‘ಜಾನಪದ ಲೋಕ’ ಮುಂತಾದ ಅನೇಕ ಸಂಸ್ಥೆಗಳ ದತ್ತಿಗಳ ನಿರ್ವಹಣೆ ಕೂಡಾ ಜಿ.ನಾರಾಯಣರ ತೆಕ್ಕೆಯಲ್ಲಿದ್ದು ಅವರು ಹಲವಾರು ಪ್ರತಿಷ್ಠಿತ ಸ್ಥಾನಗಳಲ್ಲಿದ್ದಾಗಿಯೂ ಸಾರ್ವಜನಿಕ ಜೀವನದಲ್ಲಿ ಗಳಿಸಿದ ಉತ್ತಮ ಹೆಸರಿಗೆ ದ್ಯೋತಕವಾಗಿವೆ. ಜಿ.ನಾರಾಯಣರು ಕರ್ನಾಟಕ ಗಮಕ ಕಲಾ ಪರಿಷತ್, ಶಶಿ ಕಲಾವಿದರು, ಲೇಖಕರ ಬಳಗ, ಶಾರದಾ ವಿದ್ಯಾಪೀಠ, ಉದಯ ಭಾನು ಕಲಾ ಸಂಘ ಮುಂತಾದ ಹಲವಾರು ಸಂಸ್ಥೆಗಳಿಗೆ ಮಾರ್ಗದರ್ಶಕರೂ ಆಗಿದ್ದವರು.

ಕನ್ನಡ ಪರವಾದ ಮಹತ್ವದ ಹೋರಾಟಗಳಲ್ಲಿ ಜಿ.ನಾರಾಯಣರು ಗಮನಾರ್ಹವಾದ ಪಾತ್ರವಹಿಸಿದ್ದಾರೆ. ಅದರಲ್ಲೂ ಅವರು ಕರ್ನಾಟಕ ಏಕೀಕರಣ ಚಳುವಳಿ ಮತ್ತು ಗೋಕಾಕ್ ಚಳುವಳಿಗಳಲ್ಲಿ ನಿರ್ವಹಿಸಿದ ಪಾತ್ರಗಳು ಗಮನಾರ್ಹವಾದದ್ದು. ಅವರು ಗೋಕಾಕ ಸಮಿತಿಯ ಸದಸ್ಯರೂ ಆಗಿದ್ದರು.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ರಾಜ್ಯ ಸರ್ಕಾರವು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂತಹ ಮೇರು ವ್ಯಕ್ತಿತ್ವದ ಮಾಜಿ ಮಹಾಪೌರ, ನಾಡೋಜ ಡಾ.ಜಿ.ನಾರಾಯಣ ಅವರಿಗೆ ಜನ್ಮಶತಮಾನೋತ್ಸವವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಜಂಟಿಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ.

ಶತಮಾನೋತ್ಸವದ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವಹಿಸಲಿದ್ದಾರೆ. ಡಾ.ಜಿ.ನಾರಾಯಣ ಸಂಸ್ಕೃತಿ ಪ್ರಶಸ್ತಿ ಪ್ರದಾನವನ್ನು ಜಾನಪದ ಲೋಕ ಮಾಜಿ ಅಧ್ಯಕ್ಷರಾದ ಡಾ.ಟಿ.ತಿಮ್ಮೇಗೌಡ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಧರ್ಮಗುರುಗಳಾದ ಫಾದರ್ ಸೈಮನ್ ಬರ್ತಲೋಮಿಯಾ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಶಶ್ತಿ ಪುರಸ್ಕೃತರು: ಶೇಷಾದ್ರಿಪುರಂ ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ನಾಡೋಜ ವೂಡೇ ಪಿ.ಕೃಷ್ಣ, ಹಿರಿಯ ಕನ್ನಡ ಹೋರಾಟಗಾರರಾದ ರಾಮಣ್ಣ ಕೋಡಿಹೊಸಹಳ್ಳಿ, ಹಿರಿಯ ಹೋರಾಟಗಾರರಾದ ಆರೋಗ್ಯಪ್ಪ ಹಾಗೂ ಫಿಲೋಮಿನ ರಾಜ್.

ಆಶಯ ನುಡಿ: ರಫಾಯಲ್ ರಾಜ್, ಅಧ್ಯಕ್ಷರು, ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ. ಬೆಂಗಳೂರು.      

ಬೆಂಗಳೂರು ರಾಜಕೀಯ

ಬೆಂಗಳೂರು: ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಇಂದು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಸರ್ವೋದಯ ದಿನಾಚರಣೆ ಆಚರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ದಿನಾಚರಣೆ ಸಾಂಸ್ಕೃತಿಕವಾಗಿ ಬಹಳ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷ ಅರ್.ಪ್ರಕಾಶ್ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದರು.

ಜೆ.ಪಿ.ಭವನದಲ್ಲಿ ಇಂದು ಆಚರಿಸಲಾದ ಸರ್ವೋದಯ ದಿನಾಚರಣೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್, ರಾಜ್ಯ ಹಿರಿಯ ಮುಖಂಡ ಶಫಿಯುಲ್ಲಾ, ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ರೂತ್ ಮನೋರಮ, ಶಾಂತಿನಗರ ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ ಮುಂತಾದ ಹಲವರು ಭಾಗವಿಸಿದ್ದರು.

ಜೆಡಿಎಸ್ ಕಚೇರಿಯಲ್ಲಿ ನಡೆದ ಸರ್ವೋದಯ ದಿನಾಕಾರಣೆ

ದೇಶಾದ್ಯಂತ ದೇಶಕ್ಕಾಗಿ ಜೀವತೆತ್ತ ಹುತಾತ್ಮರನ್ನು ಸ್ಮರಣೆ ಮಾಡಿ ಅವರ ತ್ಯಾಗ ಸೇವೆ ಮತ್ತು ದೇಶಪ್ರೇಮವನ್ನು ಕೊಂಡಾಡಿ, ಇತರರಲ್ಲಿ ದೇಶ ಪ್ರೇಮ ಮತ್ತು ರಾಷ್ಟಭಕ್ತಿಯನ್ನು ಮೂಡಿಸುವ ಸದುದ್ದೇಶ ಈ ಆಚರಣೆಯ ಮೂಲ ಉದ್ದೇಶವಾಗಿರುತ್ತದೆ. ವಿಶ್ವದಾದ್ಯಂತ ಸುಮಾರು 15 ದೇಶಗಳು ಪ್ರತಿ ವರ್ಷ ಹುತಾತ್ಮರ ದಿನವನ್ನು ಬೇರೆ ಬೇರೆ ದಿನಗಳಲ್ಲಿ ಆಚರಣೆ ಮಾಡಿ ಜನರಲ್ಲಿ ದೇಶ ಪ್ರೇಮದ ಬಗ್ಗೆ ಭಕ್ತಿ ಮೂಡುವಂತೆ ಮಾಡುತ್ತದೆ. ಮೊದಲೆಲ್ಲಾ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ದೇಶಕ್ಕಾಗಿ ಜೀವತೆತ್ತ ಸೈನಿಕರನ್ನು ನೆನೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಜನವರಿ 30ರಂದು ನಮ್ಮ ದೇಶದ ಸ್ವಾತಂತ್ರಕ್ಕಾಗಿ ‘ಅಹಿಂಸಾ’ ಅಸ್ತ್ರದ ಮುಖಾಂತರ ಹೋರಾಡಿದ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಆಚರಿಸಲಾಗುತ್ತಿದೆ.

ಗಾಂಧೀಜಿಯವರ ಪುಣ್ಯತಿಥಿಯ ನೆನಪಿಗಾಗಿಯೂ ಈ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಪ್ರಧಾನ ಮಂತ್ರಿ ಮತ್ತು ವಿವಿಧ ಸೇನಾ ದಳಗಳ ಮುಖ್ಯಸ್ಥರು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಹುತಾತ್ಮರಿಗೆ ಗೌರವವನ್ನು ಸಲ್ಲಿಸುತ್ತಾರೆ. ಎರಡು ನಿಮಿಷಗಳ ಮೌನಾಚರಣೆಯ ಮಾಡಿ ಪ್ರಾರ್ಥಿಸುತ್ತಾರೆ.

ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

1,268 ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕನ್ನಡ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಲಾಗಿದೆ. ಇದೊಂದು ಐತಿಹಾಸಿಕವಾದ ಪ್ರಯತ್ನವಾಗಿದೆ. ಇದು ಕನ್ನಡ ಸೇರಿದಂತೆ ಇತರ ರಾಜ್ಯ ಭಾಷೆಗಳ ಹಕ್ಕುಗಳನ್ನು ಎತ್ತಿಹಿಡಿದಂತಾಗಿದೆ. ಈ ಮಹತ್ತರವಾದ ಕಾರ್ಯವನ್ನು ಮಾಡಲು ಇಷ್ಟು ವರ್ಷಗಳು ಕಾಯಬೇಕಿತ್ತೆ? ಎಂದು ಭಾವಿಸಿಕೊಂಡರು, ಅಂತಿಮವಾಗಿ ಆಗಿದೆ ಎಂಬುದೇ ನಮಗೆ ಸಂತೋಷ!

ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆದ ಪ್ರಮುಖ ಬದಲಾವಣೆ ಇದಾಗಿದೆ. ಈ ಹಿಂದೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ‘ಸುಪ್ರೀಂ ಕೋರ್ಟ್ ತೀರ್ಪುಗಳನ್ನು ರಾಜ್ಯ ಭಾಷೆಗಳಲ್ಲಿ ಪ್ರಕಟಿಸಬೇಕು’ ಎಂದು ಬಹಿರಂಗವಾಗಿ ಹೇಳಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಎಲ್ಲಾ ನಾಯಕರೂ ಸ್ವಾಗತಿಸಿದ್ದರು.

ತೀರ್ಪುಗಳನ್ನು ರಾಜ್ಯ ಭಾಷೆಗಳಿಗೆ ಭಾಷಾಂತರಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಎಸ್.ಓಕಾ ನೇತೃತ್ವದಲ್ಲಿ ಆರು ಜನರ ಸಮಿತಿಯನ್ನು ರಚಿಸಲಾಗಿತ್ತು. ‘ಅವರೆಲ್ಲರು ತಮ್ಮ ಕೆಲಸವನ್ನು ಗಂಭೀರವಾಗಿ ಮಾಡಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.

ಸುಪ್ರೀಂ ಕೋರ್ಟ್‌ನ ಎಲೆಕ್ಟ್ರಾನಿಕ್ ವಿಭಾಗದ ಪರವಾಗಿ 34 ಸಾವಿರ ತೀರ್ಪುಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಈ ಎಲ್ಲಾ ತೀರ್ಪುಗಳನ್ನು ಸಾರ್ವಜನಿಕರ ಉಚಿತ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದ ಮೊದಲ ಹಂತವಾಗಿ 1268 ತೀರ್ಪುಗಳು ಕನ್ನಡ ಸೇರಿದಂತೆ ಇತರ ರಾಜ್ಯ ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಭಾರತದ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ 22 ಭಾಷೆಗಳಲ್ಲಿ ಅವುಗಳನ್ನು ಪ್ರಕಟಿಸಲಾಗುವುದು. ‘ಸುಪ್ರೀಂ ಕೋರ್ಟ್‌ನ ಎಲ್ಲಾ ತೀರ್ಪುಗಳನ್ನು ರಾಜ್ಯ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸಲಾಗುವುದು. ಆದ್ದರಿಂದ ವಕೀಲರು ಸುಪ್ರೀಂ ಕೋರ್ಟ್‌ಗೆ ಸಹಕರಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿಕೊಂಡಿದ್ದಾರೆ. ಅದರಂತೆ ಗಣರಾಜ್ಯೋತ್ಸವದಂದು ತೀರ್ಪುಗಳನ್ನು ಪ್ರಕಟಿಸಲಾಗಿದೆ.

ಕಳೆದ ಏಪ್ರಿಲ್ ನಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ‘ಪ್ರಾದೇಶಿಕ ಭಾಷೆಗಳನ್ನು ನ್ಯಾಯಾಲಯದ ಭಾಷೆಯನ್ನಾಗಿ ಮಾಡುವುದು ಮುಖ್ಯ. ಏಕೆಂದರೆ, ದಾವೆದಾರರು ನ್ಯಾಯದ ಆಡಳಿತದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ಯಾರಿಗೂ ಅರ್ಥವಾಗದ ಮಂತ್ರ ಪಠಣದಂತೆ ಇರಬಾರದು’ ಎಂದರು. (It is important that regional languages are made languages of the court because the litigant must understand the process of administration of justice. It should not be like chanting of mantra that no one understands.)

ಈಗ ಮೊದಲ ಹಂತದಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ತೀರ್ಪು ಪ್ರಕಟಿಸಲಾಗಿದೆ. ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಇದು ಅತ್ಯಂತ ಮಹತ್ವವಾದದ್ದು.

ದೇಶ

ನವದೆಹಲಿ: ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಸ್ವದೇಶಿ ಹೈಪರ್ಸಾನಿಕ್ ಕ್ಷಿಪಣಿಯನ್ನು ಭಾರತ ನೆನ್ನೆ ಪರೀಕ್ಷೆಗೊಳಪಡಿಸಿದೆ.

ಭಾರತೀಯ ಸೇನೆಯು ಈಗಾಗಲೇ ರಾಮ್‌ಜೆಟ್ ಚಾಲಿತ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಹೊಂದಿದೆ. ರಷ್ಯಾ ಸಹಯೋಗದಲ್ಲಿ ಭಾರತ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ಮ್ಯಾಕ್ 2.8 ವೇಗದಲ್ಲಿ ಸಾಗಬಲ್ಲದು. ಇದರ ವ್ಯಾಪ್ತಿಯನ್ನು 290 ಕಿ.ಮೀ.ನಿಂದ ಈಗ 450 ಕಿ.ಮೀ.ಗೆ ಹೆಚ್ಚಿಸಲಾಗಿದೆ.

ಈ ಹಿನ್ನಲೆಯಲ್ಲಿ, ಭಾರತ, ಚೀನಾ, ರಷ್ಯಾ ಮತ್ತು ಅಮೇರಿಕ ಸೇರಿ, ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸುವ ಹೈಪರ್ಸಾನಿಕ್ ಕ್ಷಿಪಣಿಯ ಉತ್ಪಾದನೆಯಲ್ಲಿ ತೊಡಗಿದ್ದವು. ಭಾರತದ ಮೊದಲ ಹೈಪರ್ಸಾನಿಕ್ ಕ್ಷಿಪಣಿ (HSDTV) ಪರೀಕ್ಷೆಯು ಜೂನ್ 2019 ರಲ್ಲಿ ವಿಫಲವಾಯಿತು. ಎರಡನೇ ಪರೀಕ್ಷೆಯನ್ನು ಸೆಪ್ಟೆಂಬರ್ 2020ರಲ್ಲಿ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಸ್ಕ್ರ್ಯಾಮ್‌ಜೆಟ್ ಚಾಲಿತ ಕ್ಷಿಪಣಿಯು ಮ್ಯಾಕ್-6 ವೇಗದಲ್ಲಿ 22 ರಿಂದ 23 ಸೆಕೆಂಡುಗಳವರೆಗೆ ಹಾರಿತು.

ಏತನ್ಮಧ್ಯೆ, ಸ್ಥಳೀಯವಾಗಿ ತಯಾರಿಸಲಾದ ಹೈಪರ್ಸಾನಿಕ್ ಕ್ಷಿಪಣಿಯ (Hyper sonic Technology Demonstrator Vehicle-HSDTV) 3ನೇ ಪರೀಕ್ಷೆಯನ್ನು ಒಡಿಶಾ ರಾಜ್ಯದ ಅಬ್ದುಲ್ ಕಲಾಂ ದ್ವೀಪದಲ್ಲಿ ನೆನ್ನೆ ನಡೆಸಲಾಯಿತು. ಪರೀಕ್ಷೆ ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಡಿಆರ್‌ಡಿಒ ಇನ್ನೂ ಖಚಿತಪಡಿಸಿಲ್ಲ. ಆದರೂ, ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆಯ ಮೊದಲ ಹಂತವು ಯಶಸ್ವಿಯಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಆದರೆ, ಸ್ಕ್ರಾಮ್ ಜೆಟ್ ಎಂಜಿನ್‌ನ ಕಾರ್ಯಕ್ಷಮತೆಯ ಡೇಟಾವನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ.

ಅಮೇರಿಕ ವಿಜ್ಞಾನಿಗಳ ಒಕ್ಕೂಟವು (FAS) ಕಳೆದ ವರ್ಷದ ನೀಡಿದ ವರದಿಯಲ್ಲಿ, ‘ಸಾಮಾನ್ಯವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದ್ದ ಭಾರತ ಈಗ ಚೀನಾವನ್ನು ಗುರಿಯಾಗಿಸಿಕೊಂಡು ತನ್ನ ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿರುವಂತಿದೆ. ಭಾರತವು ಪ್ರಸ್ತುತ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು 2 ವಿಧದ ವಿಮಾನಗಳು, 4 ರೀತಿಯ ಭೂ-ಉಡಾವಣಾ ಕ್ಷಿಪಣಿಗಳು ಮತ್ತು 2 ರೀತಿಯ ಸಮುದ್ರದಿಂದ ಉಡಾಯಿಸುವ ಕ್ಷಿಪಣಿಗಳನ್ನು ಹೊಂದಿದೆ. ಈ ಉದ್ದೇಶಕ್ಕಾಗಿ ಭಾರತ ಇನ್ನೂ 4 ರೀತಿಯ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇವು ಮುಕ್ತಾಯದ ಹಂತದಲ್ಲಿವೆ.

ಭಾರತವು 700 ಕೆಜಿಯಷ್ಟು ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಅನ್ನು ಉತ್ಪಾದಿಸಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 138 ರಿಂದ 213 ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಬಹುದು. ಭಾರತವು ಪ್ರಸ್ತುತ 160 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ, ಪಾಕಿಸ್ತಾನ 165, ಚೀನಾ 350, ಅಮೇರಿಕ 5,428 ಮತ್ತು ರಷ್ಯಾ 5,977 ಹೊಂದಿದೆ’ ಎಂದು ಅಮೇರಿಕ ವಿಜ್ಞಾನಿಗಳ ಒಕ್ಕೂಟವು (FAS) ಹೇಳಿದೆ.

ದೇಶ

‘ನಮ್ಮ ದೇಶ ಅಭಿವೃದ್ಧಿ ಹೊಂದಲು, ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಲು ಎಲ್ಲಾ ಹಿಂದೂಗಳು ಮುಂದಾಗಬೇಕು’ ಎಂದು ಪ್ರವೀಣ್ ತೊಗಾಡಿಯಾ ಮಾತನಾಡಿದ್ದಾರೆ.

ಅಮೇಥಿ: ಉತ್ತರ ಪ್ರದೇಶದ ಅಮೇಥಿಯ ಪುರೇರಾಮದೀನ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಆದರೆ ಬರಬೇಕಾದ ರಾಮರಾಜ್ಯ ಎಲ್ಲೂ ಕಾಣಲಿಲ್ಲ.

ನಮ್ಮ ದೇಶದ ಹತ್ತಾರು ಸಾವಿರ ಹಿಂದೂಗಳು ಮನೆಗಳನ್ನು ಪಡೆಯಬೇಕು, ಅವರ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕು, ಯುವಕರು ಉದ್ಯೋಗವನ್ನು ಪಡೆಯಬೇಕು ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ.

ನಮ್ಮ ದೇಶವು ಅಭಿವೃದ್ಧಿ ಹೊಂದಲು, ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಲು ಎಲ್ಲಾ ಹಿಂದೂಗಳು ಮುಂದಾಗಬೇಕು.’ ಎಂದು ಹೇಳಿದ್ದರು.

ರಾಜಕೀಯ ರಾಜ್ಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಖಂಡಿಸಿ, ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ವಿರೋಧಿಸಿ, ಅಲ್ಲಿನ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕಾರಣಕ್ಕೆ ಅವರನ್ನು ಹಾಸ್ಟೆಲ್ ನಿಂದ ಹೊರಹಾಕಲು ಸೂಚಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೆ, ಇದು ಸರ್ವಾಧಿಕಾರವಲ್ಲವೆ?

ಗುಣಮಟ್ಟದ ಆಹಾರ ಒದಗಿಸುವುದು ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದ ಜವಾಬ್ದಾರಿ. ವಿದ್ಯಾರ್ಥಿಗಳ ಅಳಲನ್ನು ಕೇಳಿಸಿಕೊಳ್ಳದೆ, ಈ ಹೀನ ಕೆಲಸಕ್ಕೆ ಆದೇಶಿಸಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಗೆ ಶಿಕ್ಷಿಸಿದ ಜಿಲ್ಲಾ ಇಲಾಖಾಧಿಕಾರಿಗಳು ಎಲ್ಲರನ್ನೂ ಕೂಡಲೇ ಅಮಾನತು ಮಾಡಬೇಕು. ಈ ಬಗ್ಗೆ ಅಗತ್ಯ ತನಿಖೆ ನಡೆಯಲೇಬೇಕು.

ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಈ ಸರ್ಕಾರದ ಆಡಳಿತದಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಹೇಸಿಗೆ ತರಿಸುತ್ತಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರೆ, ವಿದ್ಯಾರ್ಥಿಗಳ ಪರ ನಿಲ್ಲದೆ, ಅವರ ವಿರುದ್ಧದ ಕ್ರಮಕ್ಕೆ ಸಾಥ್ ನೀಡಿರುವುದು ಎಷ್ಟು ಸರಿ? ನಿಮ್ಮ ಮುಖವಾಡ ಕಳಚಿದೆ.

ವಿದ್ಯಾರ್ಥಿಗಳ ಹಿತ ಕಾಪಾಡಬೇಕಿರುವ ಆಡಳಿತ ವರ್ಗ ಇಷ್ಟು ಅಪ್ರಜಾತಾಂತ್ರಿಕವಾಗಿ ನಡೆದುಕೊಳ್ಳುವುದು ಖಂಡನೀಯ. ಸಮಸ್ಯೆ ಪರಿಹರಿಸಿ, ವಿದ್ಯಾರ್ಥಿಗಳ ಮನಗೆಲ್ಲಬೇಕು. ಅದು ಬಿಟ್ಟು, ಇಂತಹ ಕೆಟ್ಟ ನಿರ್ಧಾರ ಸರಿಯಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಎನ್ನುವ ಹಾಗೆ ಆಡಳಿತ ಎಷ್ಟು ಕುಸಿದಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ ಏನು ಬೇಕು? ಎಂದು ಸರ್ಕಾರವನ್ನು ಕಾರವಾಗಿ ಪ್ರಶ್ನಿಸಿದೆ.

ದೇಶ

ನವದೆಹಲಿ: ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೆಪ್ಟೆಂಬರ್ 7 ರಂದು ಭಾರತ್ ಜೋಡೋ ಯಾತ್ರೆಯನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಿಸಿದ್ದರು. ತರುವಾಯ, ಯಾತ್ರೆಯು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಇಂದು ಕಾಶ್ಮೀರದಲ್ಲಿ ನಡೆಯುತ್ತಿದೆ.

ಜನವರಿ 30ರಂದು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಯಾತ್ರೆ ಮುಕ್ತಾಯವಾಗಲಿದೆ. ರಾಹುಲ್ ಗಾಂಧಿ ಅಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಖರ್ಗೆಯವರು 21 ಪಕ್ಷಗಳ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ.

ಈ ಸಂದರ್ಭದಲ್ಲಿ ನಿನ್ನೆ (ಜನವರಿ 27) ಕಾಶ್ಮೀರದಲ್ಲಿ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಲ್ಲಿ ಭದ್ರತಾ ಕರ್ತವ್ಯಕ್ಕೆ ಪೊಲೀಸರು ಇಲ್ಲದ ಕಾರಣ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

‘ಜನಸಂದಣಿಯನ್ನು ನಿಯಂತ್ರಿಸಬೇಕಾದ ಪೊಲೀಸರು ಎಲ್ಲೂ ಕಾಣಲಿಲ್ಲ. ನಾವು ಸುರಂಗವನ್ನು ದಾಟಿದ ನಂತರ, ಪೊಲೀಸ್ ಭದ್ರತೆಗೆ ಅಡ್ಡಿಯಾಯಿತು. ಭದ್ರತೆ ಕೊರತೆಯಾಗಿದೆ’ ಎಂದು ರಾಹುಲ್ ಆರೋಪಿಸಿದ್ದರು.

ಈ ಹಿನ್ನಲೆಯಲ್ಲಿ ಖರ್ಗೆಯವರು ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದು, ‘ಇಂದು ಮತ್ತು ನಾಳೆ ಎರಡು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾದ್ಯತೆಯಿದೆ.

ಜನವರಿ 30 ರಂದು ಶ್ರೀನಗರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಈ ವಿಚಾರದಲ್ಲಿ ನೀವು ತಕ್ಷಣ ಮಧ್ಯಪ್ರವೇಶಿಸಿ, ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ರೀತಿಯಲ್ಲಿ ಭದ್ರತೆಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ಖರ್ಗೆಯವರು ‘ಯಾತ್ರೆಯಲ್ಲಿ ಭದ್ರತೆಯ ಕೊರೆತೆಯಿದೆ’ ಎಂದು ಆಪಾದಿಸಿದ್ದರು. ಇದಕ್ಕೆ ಪ್ರತಿಯುತ್ತರ ನೀಡಿದ್ದ ಗೃಹ ಸಚಿವಾಲಯ, ‘ಯಾತ್ರೆಯಲ್ಲಿ ಭದ್ರತೆಯ ಕೊರತೆ ಇಲ್ಲ’ ಎಂದು ಹೇಳಿದ್ದು ಗಮನಾರ್ಹ.

ದೇಶ

ಗುಜರಾತ್ ಗಲಭೆಗಳ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದ ವಿದ್ಯಾರ್ಥಿಗಳು! ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ.!!

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯತ್ನಿಸಿದಾಗ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಬಿಸಿ ಸುದ್ದಿ ಸಂಸ್ಥೆ 2002ರ ಗುಜರಾತ್ ಗಲಭೆಯ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಪ್ರಕಟಿಸಿತ್ತು. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ನಿಷೇಧಿಸಿತ್ತು. ಈ ವೇಳೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ವಿದ್ಯಾರ್ಥಿಗಳು ಯತ್ನಿಸಿದ್ದರು. ತಕ್ಷಣ ಅಲ್ಲಿಗೆ ತೆರಳಿದ ದೆಹಲಿ ಪೊಲೀಸರು ಸಾಕ್ಷ್ಯಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರಹಾಕಲು ಯತ್ನಿಸಿದರು. ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಡೆಯಲು ಆ ಪ್ರದೇಶದಲ್ಲಿ 144 ನಿಷೇಧಾಜ್ಞೆಯನ್ನೂ ಹೊರಡಿಸಲಾಗಿದೆ.

ನಿಷೇಧದ ನಡುವೆಯೂ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದಾಗ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ವಿದ್ಯಾರ್ಥಿಗಳನ್ನು ಬಂದಿಸಿ ಪೊಲೀಸ್ ವಾಹನಕ್ಕೆ ಏರಿಸಲಾಯಿತು. ಈ ಘಟನೆಯಿಂದ ಇಡೀ ಪ್ರದೇಶ ಉದ್ವಿಗ್ನವಾಗಿ ಕಾಣುತ್ತಿದೆ

ದೇಶ

ನವದೆಹಲಿ: ಮುಂದಿನ ವರ್ಷ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳು ಈಗಾಗಲೆ ಸಿದ್ದತೆಗಳನ್ನು ನಡೆಸಿಕೊಂಡು ಬರುತ್ತಿವೆ. ಸದ್ಯ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಕೂಡ 3ನೇ ಅವಧಿಗೆ ಅಧಿಕಾರ ಹಿಡಿಯಲು ತಂತ್ರಗಳನ್ನು ರೂಪಿಸುತ್ತಿದೆ.

ಭಾರತೀಯ ಜನತಾ ಪಾರ್ಟಿ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಪರವಾಗಿ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಲು ಮುಂದಾಗಿದೆ. ಇದಕ್ಕಾಗಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ಧಿಯನ್ನು ಹರಿಯಬಿಟ್ಟಿದ್ದಾರೆ.

ಪ್ರಧಾನಿ ಮೋದಿ ಉತ್ತರದಲ್ಲಿ ಒಂದು ಹಾಗೂ ದಕ್ಷಿಣ ರಾಜ್ಯದಲ್ಲಿ ಒಂದು ಕ್ಷೇತ್ರಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ದಕ್ಷಿಣ ರಾಜ್ಯದ ತಮಿಳುನಾಡಿನಿಂದಲೇ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುವುದಾದರೆ ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಅವರನ್ನು ಕೇಳಿದಾಗ, ‘ಪ್ರಧಾನಿ ನರೇಂದ್ರ ಮೋದಿ ವಿದೇಶಿಯಲ್ಲ; ಆತ ಭಾರತೀಯ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾಡಿನ ಜನ ಅವರ ಮೇಲೆ ಪ್ರೀತಿ, ಮಮತೆ ಹೊಂದಿದ್ದಾರೆ. ಅಷ್ಟೇ ಅಲ್ಲ ಮುಂದಿನ ಸಂಸತ್ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದು ನಿಜವೇ ಎಂದು ಅನೇಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಕಳೆದ 2 ದಿನಗಳ ಹಿಂದೆ ನಾನು ತೂತ್ತುಕುಡಿಗೆ ಹೋಗಿದ್ದೆ. ಅಲ್ಲಿನ ಅಂಗಡಿಯೊಂದರಲ್ಲಿ ಟೀ ಕುಡಿಯಲು ಹೋಗಿದ್ದಾಗ, ನನ್ನನ್ನು ನೋಡಿದ ಅಲ್ಲಿನ ಜನರು, ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುತ್ತಾರೆಯೇ? ಎಂದು ಕೇಳಿದರು.

ಇದನ್ನು ತಿಳಿದುಕೊಳ್ಳಲು ಜನರು ತುಂಬಾ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ತಮಿಳುನಾಡಿನ ಜನರು ಪ್ರಧಾನಿ ಮೋದಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ. ಅವರ ಚಟುವಟಿಕೆಗಳನ್ನು ಮೆಚ್ಚುತ್ತಾರೆ. ತಮಿಳುನಾಡಿನಲ್ಲೂ ಪ್ರಧಾನಿ ಮೋದಿಯ ಅಲೆ ಎದ್ದಿದೆ. ತಮಿಳುನಾಡಿನಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಪ್ರತ್ಯೇಕ ಗುರುತು ಸಿಗಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದನ್ನು ನಾವು ಸಾಬೀತು ಮಾಡುತ್ತೇವೆ’ ಎಂದರು.