ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2024 » Dynamic Leader
October 22, 2024
Home 2024 February
ಬೆಂಗಳೂರು

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಇಂದು ಮಾನ್ಯ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಾಗಿದೆ.

ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಹಾಗೂ “ಡೈನಾಮಿಕ್ ಲೀಡರ್” ಪತ್ರಿಕೆಯ ಸಂಪಾದಕ ಡಿ.ಸಿ.ಪ್ರಕಾಶ್ ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ,

“ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2023 (1) ಹಾಗೂ ವಇ 115 ಕೊಮಂಇ ೨೦೧೩ (2)ರ ಪ್ರಕಾರ ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ, ಅಧಿಕಾರ ದುರುಪಯೋಗ ಪಡಿಸಿಕೊಂಡು, ರಚಿತವಾಗದ ಆಶ್ರಯ ಸಮಿತಿಯ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳು

“ಕೊಳಗೇರಿ ಜನರ ಮನೆಗಳನ್ನು ಬೈರತಿ ಬಸವರಾಜ್ ಹಿಂಬಾಲಕರಿಗೆ ಅವರ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅನುಕೂಲಸ್ಥ ವರ್ಗದ ಜನರಿಗೆ ಹಂಚಿಕೆ ಮಾಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಂಚನೆಯಲ್ಲಿ ಭಾಗಿಯಾಗಿರುವ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದೆ” ಎಂದು ಹೇಳಿದ್ದಾರೆ.

ಬೈರತಿ ಬಸವರಾಜ್ ಅವರೊಂದಿಗೆ ಸೇರಿಕೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಜಂಟಿಯಾಗಿ ತಯಾರಿಸಿದ 768 ಫಲಾನುಭವಿಗಳ ಪಟ್ಟಿಯಲ್ಲಿರುವವರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡುತ್ತಿರುವುದನ್ನು ಕೂಡಲೆ ತಡೆಗಟ್ಟಿ, ಮಂಡಳಿಯ ನಿಯಮಗಳಂತೆ ನಿಜವಾದ ಘೋಷಿತ ಕೊಳಗೇರಿ ಬಡಜನರಿಗೆ ಸದರಿ ಮನೆಗಳು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಕೋರಲಾಗಿದೆ ಎಂದು ಡಿ.ಸಿ.ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು!

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ-3, ಕಾಂಗ್ರೆಸ್-2, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟ-1 ಸ್ಥಾನಕ್ಕೆ ಸ್ಪರ್ಧಿಸಲು ಒಪ್ಪಂದ ನಡೆದಿವೆ ಎಂಬ ವರದಿಗಳು ಬರುತ್ತಿವೆ!

ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಕಾಂಗ್ರೆಸ್ ಪಕ್ಷವು ಸುಗಮ ಕ್ಷೇತ್ರ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಯಾಗಿವೆ. ಈ ಕುರಿತು ಅಧಿಕೃತ ಅಧಿಸೂಚನೆ ಹೊರ ಬೀಳುವುದೊಂದೆ ಬಾಕಿ.

ಕಾಂಗ್ರೆಸ್ ಪಕ್ಷವು ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯೊಂದಿಗೆ ಕ್ಷೇತ್ರ ಒಪ್ಪಂದದ ಮಾತುಕತೆಗಳನ್ನು ನಡೆಸಿತು. ಆದರೆ, ಈ ಮಾತುಕತೆಗಳಲ್ಲಿ ಆರಂಭದಲ್ಲಿ ಭಾರಿ ಹಿನ್ನಡೆ ಉಂಟಾಯಿತು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿದ್ದ ನಿತೀಶ್ ಕುಮಾರ್, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಮತ್ತೆ ಪಲಾಯನ ಮಾಡಿದರು. ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ ಕೂಡ ಬಿಜೆಪಿ ಕಡೆಗೆ ಓಡಿ ಹೋಯಿತು.

‘ಇಂಡಿಯಾ’ ಮೈತ್ರಿಕೂಟವು ಲೋಕಸಭೆ ಚುನಾವಣೆಯನ್ನು ಎದುರಿಸಲಿದೆಯೇ? ‘ಇಂಡಿಯಾ ಮೈತ್ರಿಕೂಟ ಉಳಿಯುತ್ತದೆಯೇ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಮುಗಿಲುಮುಟ್ಟಿದವು. ಈ ಹಿನ್ನಲೆಯಲ್ಲಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ 5 ರಾಜ್ಯಗಳಲ್ಲಿ ಸೀಟು ಹಂಚಿಕೆ ನಿರ್ಧಾರ ಪ್ರಕಟಿಸಿತು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರಬಲವಾಗಿರುವುದರಿಂದ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧಾರ ಕೈಗೊಂಡಿತು. ಉತ್ತರಪ್ರದೇಶದಲ್ಲೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸುಲಲಿತವಾಗಿ ಕ್ಷೇತ್ರ ಒಪ್ಪಂದವನ್ನು ಮಾಡಿಕೊಂಡಿತು.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆ ಸೀಟು ಹಂಚಿಕೆಗೆ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ವರದಿಗಳಾಗಿವೆ. ಆಂಧ್ರಪ್ರದೇಶದಲ್ಲಿ, ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶರ್ಮಿಳಾ ಎಡಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಪ್ರಬಲ ಪಕ್ಷಗಳಾಗಿರುವುದರಿಂದ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ.

ಅದೇ ರೀತಿ ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷ ನಡೆಸಿದ ಸೀಟು ಹಂಚಿಕೆಯ ಮೊದಲ ಹಂತದ ಮಾತುಕತೆಯಲ್ಲಿ ಭಾರಿ ಹಿನ್ನಡೆಯಾಗಿತ್ತು. ಇದರಿಂದ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದರು.

ಆದರೆ, ಕಾಂಗ್ರೆಸ್ ಪಕ್ಷವು ಸೀಟು ಹಂಚಿಕೆ ಬಗ್ಗೆ ನಿರಂತರ ಮಾತುಕತೆ ನಡೆಸಿದ ಪರಿಣಾಮ, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ-3, ಕಾಂಗ್ರೆಸ್-2, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟ-1 ಸ್ಥಾನಕ್ಕೆ ಸ್ಪರ್ಧಿಸಲು ಒಪ್ಪಂದ ನಡೆದಿವೆ ಎಂಬ ವರದಿಗಳು ಬರುತ್ತಿವೆ. ಈ ಕುರಿತು ಅಧಿಕೃತ ಅಧಿಸೂಚನೆ ಯಾವಾಗ ಬೇಕಾದರೂ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಬಿಜೆಪಿಯ 370 ಕ್ಷೇತ್ರಗಳ ಕನಸು ಬಗ್ನವಾಗವ ಕಾಲ ಸಮೀಪಿಸುತ್ತಿದೆಯೇ ಎಂಬುದನ್ನು ಕಾದು ನೋಡಣ.

ದೇಶ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಾಧ್ಯಮದವರನ್ನು ಭೇಟಿಯಾಗಿ ಮಾತನಾಡಿದರು:

ಕೇಂದ್ರ ಸರ್ಕಾರ ಮನೀಶ್ ಸಿಸೋಡಿಯಾ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದೆ. ಅವರನ್ನು ಬಂಧಿಸಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ನ್ಯಾಯಾಲಯಕ್ಕೆ ಒಂದೇ ಒಂದು ಸಾಕ್ಷ್ಯವನ್ನು ಮಂಡಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಇದೊಂದು ಸುಳ್ಳು ಪ್ರಕರಣ.

75 ವರ್ಷಗಳ ನಂತರ ಮನೀಶ್ ಸಿಸೋಡಿಯಾ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉಜ್ವಲ ಭವಿಷ್ಯದ ಭರವಸೆಯನ್ನು ತಂದರು. ಅವರು ಬಡವರ ಮಕ್ಕಳಿಗೆ ಕನಸು ಕಾಣುವ ಹಕ್ಕನ್ನು ನೀಡಿದರು. ಅಂತಹ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ಹಾಕಲಾಗಿದೆ.

ಅವರು ನಮಗೆ ಉದಾಹರಣೆಯಾಗಿದ್ದಾರೆ. ಅವರು ಬಿಜೆಪಿ ಸೇರಿದ್ದರೆ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತಿತ್ತು. ಆದರೆ ಅವರು ಸತ್ಯದ ಹಾದಿಯನ್ನು ಬಿಡಲಿಲ್ಲ ಎಂದು ಹೇಳಿದರು.

ಕ್ರೈಂ ರಿಪೋರ್ಟ್ಸ್ ದೇಶ

ಹರಿಯಾಣದಲ್ಲಿ ನಿಗೂಢ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿರುವುದು ಅಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ!

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಹರಿಯಾಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಹದ್ದೂರ್ ಎಂಬಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ನಿಗೂಢ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅವರ ಪಕ್ಷದ ಹಿರಿಯ ಮುಖಂಡ ಜೈಕಿಶನ್ ಕೂಡ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಇನ್ನೂ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನು ವಿವಾದದಿಂದ ಈ ಗುಂಡಿನ ದಾಳಿ ನಡೆದಿರಬಹುದು ಎನ್ನಲಾಗಿದೆ.

ಹರಿಯಾಣದಲ್ಲಿ ನಿಗೂಢ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿರುವುದು ಅಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ.

ಶಿಕ್ಷಣ

ರಾಜಸ್ಥಾನದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಹೇಮಲತಾ ಭೈರ್ವಾ, ರಾಜಸ್ಥಾನದ ಬರನ್ ಜಿಲ್ಲೆಯ ಕಿಶನ್‌ಗಂಜ್ ಪ್ರದೇಶದ ಲಕ್ಡಾಯ್ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಜನವರಿ 26 ರಂದು ಸರಸ್ವತಿ ದೇವಿಯ ಫೋಟೋ ವಿಚಾರವಾಗಿ ಅವರಿಗೂ ಸ್ಥಳೀಯರಿಗೂ ವಿವಾದ ಹುಟ್ಟಿಕೊಂಡಿದೆ. ಅಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರಸ್ವತಿ ದೇವಿಯ ಭಾವಚಿತ್ರ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಆಗ ಶಿಕ್ಷಕಿ ಹೇಮಲತಾ ಭೈರ್ವಾ, ಇಬ್ಬರು ನಾಯಕರ ಜೊತೆ ಸರಸ್ವತಿ ದೇವಿಯ ಫೋಟೋ ಹಾಕಲು ನಿರಾಕರಿಸಿದ್ದಾರೆ. ಇದರಿಂದ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಕುಪಿತಗೊಂಡ ಶಿಕ್ಷಕಿ, “ಸರಸ್ವತಿ ದೇವಿ ಶಿಕ್ಷಣಕ್ಕೆ ಏನನ್ನೂ ಕೊಡುಗೆ ನೀಡಲಿಲ್ಲ” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊನ್ನೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು ಕಳೆದ ಗುರುವಾರ ಬರನ್ ಜಿಲ್ಲೆಯ ಕಿಶನ್‌ಗಂಜ್ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಆ ಸಮಯದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಶಾಲೆಗಳಲ್ಲಿ ಸರಸ್ವತಿ ದೇವಿಯ ಪಾತ್ರವೇನು ಎಂದು ಕೆಲವರು ಕೇಳುತ್ತಿದ್ದಾರೆ. ಹೇಳಿದವರು ಯಾರೇ ಆದರೂ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಹೇಳಿ ಹೋಗಿದ್ದಾರೆ.

ಶಿಕ್ಷಣ ಸಚಿವರ ಈ ಘೋಷಣೆಯ ನಂತರ ಬರನ್ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ಪೂರ್ಣಗೊಂಡ ಬಳಿಕವೇ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ, “ಗ್ರಾಮಸ್ಥರೊಂದಿಗೆ ಸಂಧಾನ ಮಾಡಿಕೊಂಡು, ವೇದಿಕೆಯ ಮೇಲೆ ಸರಸ್ವತಿ ದೇವಿಯ ಭಾವಚಿತ್ರ ಹಾಕಿ, ಯಾವುದೇ ಅಡ್ಡಿಯಿಲ್ಲದೆ ಗಣರಾಜ್ಯೋತ್ಸವ ನಡೆಯುವುದನ್ನು ಶಿಕ್ಷಕಿ ಖಚಿತಪಡಿಸಿಕೊಳ್ಳಬಹುದಿತ್ತು. ಬದಲಾಗಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು ಹೇಳಿದ್ದಾರೆ.   

ರಾಜ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಸುರಪುರ ಕ್ಷೇತ್ರದ ಶಾಸಕರಾದ ರಾಜಾ ವೆಂಕಟ್ಟಪ್ಪ ನಾಯಕ ಅವರು ಇಂದು ಹೃದಯಘಾತದಿಂದ ನಿಧನ ಹೊಂದಿದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ನಮ್ಮ ಕುಟುಂಬದ ಆತ್ಮೀಯರಾಗಿ, ಚಿಕ್ಕಂದಿನಿಂದ ನನ್ನ ಮಾರ್ಗದರ್ಶಕರಾಗಿದ್ದ ಅವರು ನಮ್ಮನ್ನು ಅಗಲಿರುವ ವಿಚಾರ ನಂಬಲು ಅತೀವ ಕಷ್ಟವಾಗುತ್ತಿದೆ.

ಬ್ರಿಟಿಷರೊಂದಿಗೆ ಹೋರಾಡಿ ವೀರ ಮರಣ ಹೊಂದಿದ ಸುರಪುರ ಸಂಸ್ಥಾನದ ದೊರೆ ನಾಲ್ಕನೇ ರಾಜಾ ವೆಂಕಟಪ್ಪ ನಾಯಕ ಅವರ ಕುಟುಂಬದಿಂದ ಬಂದಿದ್ದ ಜನರ ಪ್ರೀತಿಯ ನಾಯಕ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಹು ದೊಡ್ಡ ಶಕ್ತಿಯಾಗಿದ್ದರು.

ಅವರ ಈ ಅಕಾಲಿಕ ಅಗಲಿಕೆ ನಮ್ಮ ಭಾಗದ ಜನತೆಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ರಾಜಕೀಯ

ಲಖನೌ: ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಸಮಯವನ್ನು ವ್ಯರ್ಥ ಮಾಡುವುದೇ ಬಿಜೆಪಿ ಸರ್ಕಾರದ ಗುರಿಯಾಗಿದೆ. ಎಂದು ಕಾಂಗ್ರೆಸ್ ಸಂಸದ ರಾಹುಲ್ ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ನಡೆಸುತ್ತಿದ್ದಾರೆ. ಈಗ ಉತ್ತರ ಪ್ರದೇಶದಲ್ಲಿ ರ‍್ಯಾಲಿ ನಡೆಯುತ್ತಿದೆ.

ಆಗ್ರಾದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ. ಯುವಕರಿಗೆ ಉದ್ಯೋಗವಿಲ್ಲ, ರೈತರು ಇನ್ನೂ ಬೀದಿಯಲ್ಲಿ ಕುಳಿತಿದ್ದಾರೆ. ಜನರಿಗಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಜನರು ಇದನ್ನು ಅರ್ಥಮಾಡಿಕೊಳ್ಳದಿದ್ದರೆ, ಯಾವುದೇ ಬದಲಾವಣೆ ಸಂಭವಿಸುವುದಿಲ್ಲ.

ನಿಮ್ಮ ಸ್ವಂತ ಯೋಗಕ್ಷೇಮದ ಬಗ್ಗೆ ಯೋಚಿಸಲು ಪ್ರಾರಂಭಿಸಿ ಎಂಬುದನ್ನು ಮಾತ್ರ ನಾನು ನಿಮಗೆ ಹೇಳಲು ಬಯಸುತ್ತೇನೆ. ಅಗ್ನಿಪಥ್ ಯೋಜನೆಯಡಿ ಸೇನೆಯಲ್ಲಿ ಸೇವೆ ಸಲ್ಲಿಸುವ ಯುವಕರ ಆರ್ಥಿಕ ಸ್ಥಿತಿ 4 ವರ್ಷಗಳ ನಂತರ ಹದಗೆಡಲಿದೆ.

ಯುವಕರಿಗೆ ಉದ್ಯೋಗ ನೀಡಲು ಅವರು ಬಯಸದೇ ಇರುವ ಕಾರಣ, ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಸಮಯವನ್ನು ವ್ಯರ್ಥ ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶವಾಗಿದೆ. ದೇಶದಲ್ಲಿ ದ್ವೇಷ ಹೆಚ್ಚಾಗಲು ಅನ್ಯಾಯವೇ ಕಾರಣ. ಭಾರತದಲ್ಲಿ ಬಡವರಿಗೆ, ರೈತರಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಆರಂಭಿಸಿದ್ದೇನೆ” ಎಂದು ಹೇಳಿದರು.

ರಾಜಕೀಯ

ಲಖನೌ/ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನ, ಅಂಬೇಡ್ಕರ್ ನಗರದ ಬಿಎಸ್‌ಪಿ ಲೋಕಸಭಾ ಸಂಸದ ರಿತೇಶ್ ಪಾಂಡೆ ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ರಿತೇಶ್ ಪಾಂಡೆ ಅವರು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, ‘ತಮ್ಮನ್ನು ದೀರ್ಘಕಾಲ ಸಭೆಗಳಿಗೆ ಕರೆಯದ ಕಾರಣ ಮತ್ತು ಪಕ್ಷದ ನಾಯಕತ್ವವು ತಮ್ಮೊಂದಿಗೆ ಮಾತನಾಡದ ಕಾರಣ ಪಕ್ಷಕ್ಕೆ ನನ್ನ ಸೇವೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಅವರು ತಮ್ಮ ರಾಜೀನಾಮೆ ಪತ್ರವನ್ನು ‘ಎಕ್ಸ್’ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ.

ವಿದೇಶ

ಬರ್ಲಿನ್: ಜರ್ಮನಿಯಲ್ಲಿ ಮನೆಯಲ್ಲೇ ಗಾಂಜಾ ಗಿಡವನ್ನು ಬೆಳೆಯಲು ಮತ್ತು ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಯುರೋಪಿಯನ್ ದೇಶದ ಜರ್ಮನಿ, ಯುರೋಪ್ ಒಕ್ಕೂಟದಲ್ಲಿ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ.ಜರ್ಮನ್ ಸರ್ಕಾರವು ಗಾಂಜಾ ಮೇಲಿನ ನಿಷೇಧವನ್ನು ರದ್ದುಗೊಳಿಸಿ, ಅದನ್ನು ಸಂಸತ್ತಿನಲ್ಲಿ ಮಂಡಿಸಿ ಕಾನೂನುಬದ್ಧಗೊಳಿಸಿದೆ ಎಂದು ವರದಿಗಳಾಗಿವೆ.

ಹೊಸ ಕಾನೂನಿನ ಪ್ರಕಾರ ಮನೆಯಲ್ಲೇ 3 ಗಾಂಜಾ ಗಿಡಗಳನ್ನು ಬೆಳೆಸಿಕೊಳ್ಳಬಹುದು. ಪ್ರತಿ ವ್ಯಕ್ತಿ 25 ಗ್ರಾಂ ವರೆಗೆ ಗಾಂಜಾವನ್ನು ಇಟ್ಟುಕೊಳ್ಳಬಹುದು ಮತ್ತು ಮನೆಯಲ್ಲೇ 50 ಗ್ರಾಂಗಳಷ್ಟು ಗಾಂಜಾವನ್ನು ಇರಿಸಿಕೊಳ್ಳಬಹುದು. ಗಾಂಜಾ ಹೊಂದಲು ಮತ್ತು ಬೆಳೆಯುವ ಅನುಮತಿ ಏಪ್ರಿಲ್ 1 ರಿಂದ ಜಾರಿಯಾಗಲಿದೆ.

ಈ ಹಿನ್ನಲೆಯಲ್ಲಿ, ಸರ್ಕಾರದ ಹೊಸ ಮಸೂದೆಯನ್ನು ಮರುಪರಿಶೀಲಿಸುವಂತೆ 16 ವಿರೋಧ ಪಕ್ಷಗಳು ಒತ್ತಾಯಿಸಿರುವುದು ಗಮನಾರ್ಹ.

ಸಿನಿಮಾ

ಅಪ್ಪು ಹಾಡುಗಳಿಗೆ ಸಮರ್ಜಿತ್ ಲಂಕೇಶ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಖ್ಯಾತ ನಟಿ ತಾನ್ಯ ಹೋಪ್!

ಅರುಣ್ ಕುಮಾರ್ ಜಿ

ಬೆಂಗಳೂರು: ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ‘ಗೌರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ ‘ಗೌರಿ’ ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿನ ಬಗ್ಗೆ ಚಿತ್ರತಂಡದ ಸದಸ್ಯರು ಮಾತನಾಡಿದರು.

‘ನಾನು ಅಪ್ಪು ಅವರ ಅಭಿಮಾನಿ’ ಎಂದು ಮಾತನಾಡಿದ ಸಮರ್ಜಿತ್, “ಪುನೀತ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು ‘ಗೌರಿ’ ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ” ಎಂದರು.

“ಇಂದ್ರಜಿತ್ ಅವರ ಮಗ ಸಮರ್ಜಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ಸಮರ್ಜಿತ್ ಬಹಳ ಲವಲವಿಕೆಯ ಹುಡುಗ. ಈ ಹಾಡಿನಲ್ಲಿ ಸಮರ್ಜಿತ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ನಾನು ಸಹ ಪುನೀತ್ ಅವರ ಅಭಿಮಾನಿ”‌ ಎಂದು ತಾನ್ಯ ಹೋಪ್ ತಿಳಿಸಿದರು.

“ಈಗಾಗಲೇ ‘ಗೌರಿ’ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಆದರೆ ಇಂದು ಸಿನಿಮಾಗಿಂತ ಈ ಹಾಡಿನ ಬಗ್ಗೆ ಹೇಳಲು ಬಯಸುತ್ತೇನೆ. ಮುಂಬರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ ‘ಗೌರಿ’ ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ” ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ಅವರಿಗೆ ನಾಯಕಿಯಾಗಿ ಸಾನ್ಯ ಅಯ್ಯರ್ ನಟಿಸುತ್ತಿದ್ದಾರೆ.