ರಾಜ್ಯ Archives » Dynamic Leader
January 22, 2025
Home Archive by category ರಾಜ್ಯ

ರಾಜ್ಯ

ರಾಜ್ಯ

ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿರುವ HMPV ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದ್ದು, ರಾಜ್ಯ ಆರೋಗ್ಯ ಇಲಾಖೆ ವೈರಸ್‌ ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ. ಅಲ್ಲದೆ, ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲದ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದೂ ಹೇಳಿದೆ.

ಚೀನಾದಲ್ಲಿ ಹೊಸ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ (HMPV) ಅಬ್ಬರಿಸಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಜ್ವರ ಇದ್ದರೆ ಜನನಿಬಿಡ ಪ್ರದೇಶಕ್ಕೆ ಹೋಗದಂತೆ ಹಾಗೂ ಅನಗತ್ಯ ಓಡಾಟ ತಪ್ಪಿಸಿ

ಹಾಗಾಗೇ ಕೈಗಳನ್ನೂ ಸಾಬೂನು ಹಾಗೂ ಸ್ಯಾನಿಟೈಸರ್‌ಗಳಿಂದ ಸ್ವಚ್ಛಗೊಳಿಸಿ

ಜ್ವರ, ಕೆಮ್ಮು, ನೆಗಡಿ ಇರುವವರು ಆದಷ್ಟು ಹೊರಗೆ ಓಡಾಡದೆ ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯಿರಿ.

ಇಂತಹವರು ಬಳಿಸಿದ ಟವಲ್ ಮತ್ತು ಬಟ್ಟೆಗಳನ್ನು ಬೇರೆಯವರು ಬಳಸದಿರಿ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ತಪ್ಪಿಸಿ ಸ್ವಯಂ ಔಷಧಗಳನ್ನು ಸೇವಿಸದೆ ನೆಗಡಿ, ಕೆಮ್ಮು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ.

ಮನೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ, ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ.

ಪೌಷ್ಠಿಕಾಂಶವಿರುವ ಆಹಾರ ಸೇವಿಸಿ.

ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ ಸಾಮಾನ್ಯ ಶೀತ, ಐಎಲ್‌ಯ ಮತ್ತು ಸಾರಿ ಪ್ರಕರಣಗಳಲ್ಲಿ ಯಾವುದೇ ಗಮನಾರ್ಹ ಏರಿಕೆ ಇಲ್ಲ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

HMPV ಒಂದು ಉಸಿರಾಟದ ಕಾಯಿಲೆಯಾಗಿದ್ದು, ಚಳಿಗಾಲದಲ್ಲಿ ಶೀತ ಮತ್ತು ಜ್ವರದ ತರಹದ ಲಕ್ಷಣಗಳನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ವಯಸ್ಸಾದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ಇದೂವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ರಾಜ್ಯ ಸನ್ನದ್ಧವಾಗಿದೆ ಎಂದು ರಾಜ್ಯದ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಯೋಜನಾ ನಿರ್ದೇಶಕ ಡಾ. ಅನ್ಸಾರ್ ಅಹ್ಮದ್ ಹೇಳಿದ್ದಾರೆ.

ರಾಜ್ಯ

ನರೇನಹಳ್ಳಿ ಅರುಣ್ ಕುಮಾರ್

ಚಿತ್ರದುರ್ಗ: ಚಿತ್ರದುರ್ಗದ ಮುಸ್ಲಿಂ  ಕಲ್ಚರಲ್  ಅಕಾಡೆಮಿ ವತಿಯಿಂದ ಜನವರಿ 4 ಹಮ್ಮಿಕೊಳ್ಳಲಾಗಿದ್ದ ಸಂತ ಶಿಶುನಾಳ ಷರೀಫರ ತತ್ವಪದಗಳ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಸಮಯೋಚಿತವಾಗಿತ್ತು.

ಗುರುಗೋವಿಂದ ಭಟ್ ಮತ್ತು ಶಿಶುನಾಳ ಷರೀಫ್ ಅವರು ನಾಡಿಗೆ ನೀಡಿರುವ ಸಂದೇಶವು ಮನುಷ್ಯತ್ವ, ಮಾನವೀಯತೆಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಮತ್ತು ಸಹಭಾಳ್ವೆಯಿಂದ ಜೀವಿಸಬೇಕು ಎಂಬ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ.

ಜೀವನ ತತ್ವಗಳನ್ನು ತಮ್ಮ ಸುತ್ತಮುತ್ತಲಿನ ಜನರಲ್ಲಿ ಬೆಳೆಸುವ ಪ್ರಯತ್ನವೂ ಇಂದಿನ ಪೀಳಿಗೆಯ ಜನರಿಗೆ ದಾರಿದೀಪವಾಗಿದೆ.

ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಕೆಲಸಮಾಡಿರುವ ಗೋವಿಂದಭಟ್ ಮತ್ತು  ಶಿಶುನಾಳ ಷರೀಫ್ ಅವರು ಜನಸಾಮಾನ್ಯರಿಗೆ ಕೋಮು ಸಾಮರಸ್ಯ ಪಾಠ ಹೇಳಿದ್ದು, ಸೌಹಾರ್ದತೆ ಹಾಗೂ ಸಹಭಾಳ್ವೆಯ ಜೀವನ ನಡೆಸಲು ಮಾರ್ಗದರ್ಶನ ಮಾಡಿರುವುದು ಇಂದಿನ ಕಾಲಕ್ಕೂ ಸರಿಯಾಗಿದೆ.

ತತ್ವ ಪದಗಳ ಮೂಲಕ ಜೀವನ ಮೌಲ್ಯಗಳನ್ನು ಸಾರಿದ ಷರೀಫ್ ಅವರು ತನ್ನ ಗುರುವಿನ ಮಾರ್ಗದರ್ಶನವನ್ನು ಇಡೀ ಸಮಾಜಕ್ಕೆ ಬಿತ್ತುವ ಮುಖಾಂತರ ಸಮಾಜವನ್ನು ಸಮಾನತೆಯಿಂದ ನೋಡುವ ಪರಿಪಾಠವನ್ನು ಬೆಳೆಸಿದರು.

ಪ್ರಸ್ತುತ ಕಾಲಗಟ್ಟದಲ್ಲಿ, ಮನುಷ್ಯ ಮನುಷ್ಯರ ನಡುವೆ ವಿಷಬೀಜ ಬಿತ್ತುವ ಮೂಲಕ ದ್ವೇಷ ಬೆಳೆ ಪಡೆಯುವ ಹವಣಿಕೆಯಲ್ಲಿರುವ ವಿಷಕಂಕಟಂಕರು, ವಿಶ್ವಕ್ಕೆ ಕಂಟಕರಾಗುವ ದಿನಮಾನಗಳು ದೂರ ಉಳಿದಿಲ್ಲ!

ಯಾವ ಭೂಮಿ ಮಾನವೀಯತೆ, ಮನುಷ್ಯತ್ವ, ಮಾತೃತ್ವವನ್ನು ಬೆಳೆಸಿಕೊಂಡು ಬಂದಿತ್ತೊ ಅಂತಹ ಭೂಮಿಯಲ್ಲಿ ಇಂದು ದ್ವೇಷ, ಹಗೆತನ ಬೆಳೆಸಿ ಧರ್ಮ, ಧರ್ಮಗಳ ನಡುವೆ ಕಚ್ಚಾಟಗಳನ್ನು ಇಡುತ್ತಿರುವುದು ಗೋವಿಂದ ಬಟ್, ಶಿಶುನಾಳ ಷರೀಫ್ ಅವರು ತತ್ವ, ವಿಚಾರ, ಸಂದೇಶಗಳಿಗೆ ಮಾಡಿದಂತ ಅಪಚಾರವಾಗಿದೆ.

ಕನ್ನಡ ನಾಡಿನಲ್ಲಿ ಸಾಧು, ಸಂತರು, ಶರಣರು, ವಚನಕಾರರು ಬಂದು ಹೋಗಿದ್ದಾರೆ. ಎಲ್ಲರ ಸಂದೇಶವು ಒಂದೇ ಆಗಿತ್ತು. ಅದು ಶಾಂತಿ ಮತ್ತು  ಸೌಹಾರ್ದತೆ.

ಶಿಶುನಾಳ ಷರೀಫ್ ಅವರು ತತ್ವ ಗೀತಾ ಗಾಯನ ಮಾಡುವ ಮೂಲಕ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯವನ್ನು ಗೆಳೆಯ ಮಹಮದ್ ಹನೀಫ್ ಮತ್ತು ತಂಡದವರು ಮುಸ್ಲಿಂ ಕಲ್ಚರಲ್ ಅಕಾಡೆಮಿ (Muslim Cultural Academy) ಮೂಲಕ ಮಾಡುವ ಪ್ರಯತ್ನವು ಅತ್ಯುತ್ತಮವಾಗಿದೆ.

ರಾಜ್ಯ

ಬೆಂಗಳೂರು: ರಾಜ್ಯದಲ್ಲಿನ ಕ್ರಿಶ್ಚಿಯನ್ ಸಮುದಾಯ ಬಹುದಿನಗಳ ಬೇಡಿಕೆಯಾದ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕಳೆದ ಫೆಬ್ರವರಿಯಲ್ಲೇ ಅದಕ್ಕಾದ ಆದೇಶವನ್ನು ಹೊರಡಿಸಿತ್ತು. ಆ ಆದೇಶದಲ್ಲಿ Memorandum of Association ಮತ್ತು Articles of Association ಗಳಿಗೆ ಸರ್ಕಾರ ಅನುಮೋದನೆ ನೀಡಿತ್ತು.

ಸದರಿ ನಿಗಮವನ್ನು ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಲು ನಿಗಮದ ಕಛೇರಿಯ ಸಂಪೂರ್ಣ ವಿಳಾಸ, ವಿದ್ಯುತ್ / ಟೆಲಿಫೋನ್ ಬಿಲ್ ಮತ್ತು ಮಾಲೀಕತ್ವದ ಪುರಾವೆಗೆ ಸಂಬಂಧಿಸಿದ ದಾಖಲೆಗಳು ಅಗತ್ಯವಾಗಿತ್ತು. ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಕೇಂದ್ರ ಕಛೇರಿಗೆ ಕೆ.ಎಂ.ಡಿ.ಸಿ ಭವನ, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ ಸ್ಥಳಾವಕಾಶವನ್ನು ನಿಗದಿಪಡಿಸಿ ಸೂಕ್ತ ಸರ್ಕಾರಿ ಆದೇಶ ಹೊರಡಿಸುವಂತೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿಯಮಿತದ ಕಛೇರಿಗೆ ಕೆ.ಎಂ.ಡಿ.ಸಿ ಭವನ, ಶೇಷಾದ್ರಿಪುರಂ, ಬೆಂಗಳೂರು ಈ ಕಟ್ಟಡದ ಮೊದಲನೇ ಮಹಡಿಯಲ್ಲಿ ಅರ್ಧ ಭಾಗವನ್ನು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಕ್ರಿಶ್ಚಿಯನ್ ಸಮುದಾಯದವರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯ

ಬೆಂಗಳೂರು: ರಾಜ್ಯದ ಸುಮಾರು 25 ಕಡೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಮಂಗಳೂರು ಸೇರಿದಂತೆ ಹಲವು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ನಿವಾಸ ಮತ್ತು ಕಚೇರಿಯಲ್ಲಿ ಶೋಧ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ ಒಟ್ಟು 25 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಭೂ ಹಾಗೂ ಗಣಿ ವಿಜ್ಞಾನ ಇಲಾಖೆಯ ಕೃಷ್ಣವೇಣಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ಅವರ ಮಂಗಳೂರಿನ ವೆಲೆನ್ಸಿಯಾದ ಮನೆ ಹಾಗೂ ಕಚೇರಿಯ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣವೇಣಿ 2 ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿ ಮಂಗಳೂರಿಗೆ ಬಂದಿದ್ದರು. ಇವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ‌ ಇಲಾಖೆ ಅಧಿಕಾರಿಯಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಕೃಷ್ಣವೇಣಿ ವಿರುದ್ಧ ದೂರು ದಾಖಲಾದ ಹಿನ್ನೆಲೆ ಈ ದಾಳಿ ನಡೆದಿದೆ. ಮಂಗಳೂರು ಲೋಕಾಯುಕ್ತ ಎಸ್​ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್, ಬೆಂಗಳೂರಿನ ಟೌನ್ ಅಂಡ್ ಪ್ಲಾನಿಂಗ್ ಡೈರಕ್ಟರ್ ತಿಪ್ಪೇಸ್ವಾಮಿ, ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯ ಎಸ್​ಪಿ ಮಹೇಶ್ ಮನೆ ಮೇಲೆ‌ ದಾಳಿ ಮಾಡಲಾಗಿದೆ. ಈ ನಾಲ್ವರು ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್ ಕೊಟ್ಟಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ರಾಜ್ಯ

ಕಳೆದ ನವಂಬರ್ 6 ರಂದು ಶೃಂಗೇರಿಯಿಂದ ಮಠದ ಶ್ರೀಗಳಿಂದ ಉದ್ಘಾಟನೆಯಾದ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಹರಿಹರಪುರದ ಮೂಲಕ ಮುನ್ನಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಜಿಲ್ಲಾ ಸಂಚಾಲಕರು ಹಾಗೂ ಕಾರ್ಯದರ್ಶಿಗಳು, ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಕರ್ನಾಟಕದ ನಿವೃತ್ತ ಸೈನಿಕರಾದ ವಾಸಪ್ಪ ಎಂ. ಅವರು ಹೇಳಿದ್ದಾರೆ.

ಪಾದಯಾತ್ರೆ ಶಿವಮೊಗ್ಗಕ್ಕೆ ನವಂಬರ್ 10 ರಂದು ತಲುಪಲಿದ್ದು ಅಲ್ಲಿಂದ ದಿನಾಂಕ 11 ರಂದು ಸಂಜೆ ಹೊಳಲೂರ್ ನಲ್ಲಿ ರಾತ್ರಿ ವಿಶ್ರಾಂತಿಯ ನಂತರ ಬೆಳಗ್ಗೆ 12 ರಂದು ಹೊನ್ನಾಳಿ ತಾಲ್ಲೂಕಿನ ಚೀಲೂರ್ ಗ್ರಾಮವನ್ನು ತಲುಪುವುದು, ಊಟದ ನಂತರ ಮದ್ಯಾಹ್ನ 3.30 ಗಂಟೆಯ ನಂತರ ಗೋಪಾನಹಳ್ಳಿಯ ಮೂಲಕ ಗೋವಿನಕೋವಿಯಲ್ಲಿ ಟೀ-ಕಾಫಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ನದಿಯ ನೀರಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ನಂತರ ಹರಳಹಳ್ಳಿ ದಿಡಗೂರು ಮೂಲಕ ಸಂಜೆ 6.00 ಗಂಟ್ಟೆಗೆ ದೇವನಾಯ್ಕನಹಳ್ಳಿ / ಟಿಬಿ ಸರ್ಕಲ್ ನ ಕನಕದಾಸರ ವೃತ್ತ ತಲುಪಲಿದೆ. ಟಿಬಿ ವೃತ್ತದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಗುವುದು. ಅಲ್ಲಿಂದ ಮುಂದೆಸಾಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ  ಸಾರ್ವಜನಿಕರಲ್ಲಿ ನದಿಯ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳು ನಡೆಯಲಿವೆ. ಅದಾದ ನಂತರ ನೇರವಾಗಿ ಹಿರೇಕಲ್ಮಠಕ್ಕೆ ಹೋಗಿ ಸ್ವಲ್ಪ ವಿಶ್ರಾಂತಿಯ ನಂತರ ಅಲ್ಲಿ ಅರ್ಧ ತಾಸು ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳು ನಡೆಯಲಿದೆ. ನಂತರ ರಾತ್ರಿ ಭೋಜನದ ನಂತರ ವಿಶ್ರಾಂತಿ ಮಾಡಲಾಗುವುದು.

ಅಲ್ಲಿಂದ ಬೆಳಗ್ಗೆ ತಿಂಡಿ ಟೀ-ಕಾಫಿಯ ನಂತರ ನವಂಬರ್ 13 ರಂದು ಅದೇ ರಸ್ತೆಯ ಮೂಲಕ ತುಂಗಭದ್ರಾ ನದಿಯ ಸೇತುವೆಯ ಮೂಲಕ ಗೊಲ್ಲರಹಳ್ಳಿಗೆ ಪಾದಯಾತ್ರೆಯ ಪ್ರಯಾಣ ಮುಂದುವರಿಯುವುದು. ಅಲ್ಲಿಂದ ಬೇಲಿ ಮಲ್ಲೂರಿನಲ್ಲಿ ಟೀ-ಕಾಫಿ, ಅಲ್ಪಹಾರದ ವ್ಯವಸ್ಥೆಯ ನಂತರ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ನಂತರ, ಪಾದಯಾತ್ರೆ ಕೋಟೆ ಮಲ್ಲೂರು, ಚಿಕ್ಕಗೊಣಗೇರಿ, ಹಿರೇಗೊಣಗೇರಿ, ಹರಗನಹಳ್ಳಿ ನಂತರ ಕೋಣನತಲೆಯ ಶ್ರೀ.ಗುರುದೇವ ಮುಪ್ಪಿನಾರ್ಯ ಆಶ್ರಮ – ಕೋಣನ ತಲೆ, ಶ್ರೀ ಗುರು ಬಸವರಾಜ ದೇಶಿಕೇಂದ್ರ, ಶ್ರೀ ಶ್ರೀ ಶ್ರೀ ತಿಪ್ಪೇಸ್ವಾಮಿ ಜೀ ಅವರ ಮಠದಲ್ಲಿ ಮದ್ಯಾಹ್ನದ ಪ್ರಸಾದ / ಉಪಹಾರದ ನಂತರ ಮುಂದೆ ಸಾಗುವುದು.

ಅಲ್ಲಿಯವರೆಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಈ ಪಾದಯಾತ್ರೆಯ ಕಾರ್ಯಕರ್ತರು ಜೊತೆಯಾಗಿ ಇರಬೇಕು ಎಂಬುದು ನಮ್ಮ ವಿನಂತಿಯಾಗಿದೆ. ಮತ್ತು ಎಲ್ಲರೂ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು  ಎಂದು ಮನವಿ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ತಾವೆಲ್ಲರೂ ಸೇರಿಕೊಂಡು ಪಾದಯಾತ್ರೆಯನ್ನು ನಮ್ಮ ತಾಲ್ಲೂಕಿನಿಂದ ಹರಿಹರ ತಾಲ್ಲೂಕಿನ ವರೆಗೆ ಮುಂದುವರಿಸಿ ಯಶಸ್ವಿಗೊಳಿಸಬೇಕೆಂದು ವಾಸಪ್ಪ (ಮೊಬೈಲ್: 8050399487) ಮನವಿ ಮಾಡಿದ್ದಾರೆ.

ರಾಜ್ಯ

“ಬಂದೇನವಾಜ ದರ್ಗಾವನ್ನು ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು” – ಮುಖ್ಯಮಂತ್ರಿ 

ಬೆಂಗಳೂರು: ಹಿರಿಯ ಧಾರ್ಮಿಕ ಮುಖಂಡರು, ಕಲಬುರಗಿಯ ಹಜ್ರತ್ ಖಾಜಾ ಬಂದೇನವಾಜ ದರ್ಗಾದ ಗುರುಗಳು ಆದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.

ಬಂದೇನವಾಜ ದರ್ಗಾವನ್ನು ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು. ಸದಾಕಾಲ ಸಮಾಜದ ಒಳಿತನ್ನೇ ಬಯಸುತ್ತಿದ್ದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ಅಗಲಿಕೆಯಿಂದ ನೊಂದಿರುವ ಅವರ ಬಂಧು ಮಿತ್ರರಿಗೆ, ಅನುಯಾಯಿಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

ರಾಜ್ಯ

ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ನವೆಂಬರ್ 6 ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದು, ಮುಡಾ ನಿವೇಶನ ಹಂಚಿಕೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಈಗಾಗಲೇ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಇಂದು ಸಿದ್ದರಾಮಯ್ಯನವರನ್ನು ವಿಚಾರಣೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲನೇ ಆರೋಪಿಯಾಗಿದ್ದಾರೆ. 2ನೇ ಆರೋಪಿ ಅವರ ಪತ್ನಿ ಪಾರ್ವತಿ, 3ನೇ ಆರೋಪಿ ಮಲ್ಲಿಕಾರ್ಜುನ ಹಾಗೂ 4ನೇ ಅರೋಪಿ ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ನಡೆಸಿದೆ.

ಮುಡಾ ಹಗರಣ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಯಮಬಾಹಿರ ವರ್ಗಾವಣೆಯಾಗಿದ್ದ ಹಣವನ್ನು ತಕ್ಷಣವೇ ನಿಗಮಕ್ಕೆ ಬಿಡುಗಡೆ ಮಾಡಿ ಜನಾಂಗದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದು ವಾಲ್ಮೀಕಿ ನಾಯಕ ಸಮಾಜದ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಶಾಸಕರಾದ ಬಿ.ಎಂ.ನಾಗರಾಜ, ಟಿ.ರಘುಮೂರ್ತಿ, ಬಸನಗೌಡ ತುರವಿಹಾಳ, ರಾಜಾ ವೇಣುಗೋಪಾಲ ನಾಯಕ, ಡಾ.ಶ್ರೀನಿವಾಸ, ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ.ಚಂದ್ರಶೇಖರಪ್ಪ ಮತ್ತಿತರ ಮುಖಂಡರನ್ನೊಳಗೊಂಡ ವಾಲ್ಮೀಕಿ ನಾಯಕ ಸಮಾಜದ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು  ಭೇಟಿಯಾಗಿ ಚರ್ಚಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಯಮಬಾಹಿರ ವರ್ಗಾವಣೆಯಾಗಿದ್ದ ಹಣವನ್ನು ತಕ್ಷಣವೇ ನಿಗಮಕ್ಕೆ ಬಿಡುಗಡೆ ಮಾಡಿ ಜನಾಂಗದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಹಾಗೂ ತಳವಾರ ಹೆಸರಿನಲ್ಲಿ ನಕಲಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ ಪಡೆಯುತ್ತಿರುವುದನ್ನು ತಡೆಯಲು ಅಗತ್ಯ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ತಕ್ಷಣ ಸಭೆ ಕರೆದು ಚರ್ಚಿಸಿ, ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ನಿಯೋಗಕ್ಕೆ ಭರವಸೆ ನೀಡಿದರು.

ರಾಜ್ಯ

ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮುವಾದ, ಸರ್ವಾಧಿಕಾರ ಮತ್ತು ಹಿಂಸೆಯಿಂದ ಕೂಡಿರುವ ಜಗತ್ತಿನಲ್ಲಿ ಸತ್ಯ, ಶಾಂತಿ ಮತ್ತು ಅಹಿಂಸೆಯ ಸಾಕಾರಮೂರ್ತಿಯಾಗಿದ್ದ ಮಹಾತ್ಮ ಗಾಂಧೀಜಿಯವರು ಮಾತ್ರ ನಮ್ಮ ಕೈಹಿಡಿದು ಮುನ್ನಡೆಸಬಲ್ಲರು ಎಂದು ಹೇಳಿದ್ದಾರೆ.

ಸತ್ಯದ ಸತ್ವ ಪರೀಕ್ಷೆಯನ್ನು ಎದುರಿಸುತ್ತಿರುವ ಈಗಿನ ನನ್ನ ಹೋರಾಟಕ್ಕೆ ಕೂಡಾ ಬಾಪುವಿನ ಬದುಕು ಮತ್ತು ಚಿಂತನೆಗಳೇ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿದೆ ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022, 2023, 2024ನೇ ಸಾಲಿನ ವಾರ್ಷಿಕ ನಾಟಕ ಪ್ರಶಸ್ತಿಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಿ, ಪ್ರಶಸ್ತಿ ವಿಜೇತರಿಗೆ ಗೌರವಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ, ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಡಾ.ಉಮಾಶ್ರೀ, ಪ್ರೊ.ಎಚ್.ಎಸ್. ಶಿವಪ್ರಕಾಶ್, ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಧರಣೀದೇವಿ ಮಾಲಗತ್ತಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.