ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
December 2022 » Dynamic Leader
December 5, 2024
Home 2022 December
ದೇಶ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ (100) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮೋದಿ ಅವರೇ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

‘ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್‌ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.

ಶ್ರೀಮತಿ ಹೀರಾಬೆನ್‌ ಮೋದಿ ಅವರು 2022ರ ಡಿಸೆಂಬರ್‌ 30ರಂದು ಬೆಳಗಿನ ಜಾವ 3.39ಕ್ಕೆ ನಿಧನರಾಗಿದ್ದಾರೆ. ಹೀರಾಬೆನ್ ಅವರು ಜೂನ್ 18, 1923 ರಂದು ಜನಿಸಿದ್ದು ಶತಾಯುಶಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ನಿಧನಕ್ಕೆ ‘ಡೈನಾಮಿಕ್ ಲೀಡರ್’ ಬಳಗವು ಸಂತಾಪ ಸೂಚಿಸುತ್ತದೆ. 

ಬೆಂಗಳೂರು

ಮಂಜುಳಾ ರೆಡ್ಡಿ, ಹಿರಿಯ ವರದಿಗಾರರು

ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 5 ರಿಂದ 10 ರತನಕ ಅವರೇಕಾಯಿ ಮೇಳವನ್ನು ವಾಸವಿ ಕ್ಯಾಂಡಿಮೆಂಟ್ಸ್ ಅದ್ಧೂರಿಯಾಗಿ ನಡೆಸಲಿದೆ.

ವಾಸವಿ ಕ್ಯಾಂಡಿಮೆಂಟ್ಸ್ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 2023 ರ ಜನವರಿ 5 ರಿಂದ 10 ರತನಕ ಈ ಅದ್ಧೂರಿ ಅವರೆಕಾಯಿ ಮೇಳ ನಡೆಯಲಿದೆ ಎಂದು ವಾಸವಿ ಕ್ಯಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ  ತಿಳಿಸಿದರು .

ಗೀತಾ ಅವರು ಮಾತನಾಡುತ್ತಾ “ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೆ ಹೆಸರು ವಾಸಿಯಾದ ವಾಸವಿ ಕ್ಯಾಂಡಿಮೆಂಟ್ಸ್ ಕಳೆದ ಇಪ್ಪತ್ತು ವರ್ಷಗಳಿಂದ ವಿನೂತನವಾದ ಸಾಹಸ-ಪುಯೋಗವನ್ನು ಮಾಡುತ್ತಾ ಬರುತ್ತಿದೆ. ಅದರಲ್ಲಿ ಅಮೋಘ ಯಶಸ್ಸನ್ನೂ ಕಂಡಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ವಾಸವಿ ಕ್ಯಾಂಡಿಮೆಂಟ್ಸ್ ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾಗುವ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಯಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.  ಹೀಗಾಗಿ ಬೆಂಗಳೂರಿನ ಬಹಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾಯುತ್ತಿರುತ್ತಾರೆ.

ನಮ್ಮ ಮಳಿಗೆ  ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ  ತೆರೆದಿರುತ್ತದೆ. ಸಂಜೆ 3 ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯುತ್ತದೆ. ಮಾಗಡಿ ತಾಲೂಕಿನ ರೈತರು ಬೆಳೆದ ಅವರೇಕಾಯಿಯನ್ನು ವಾಸವಿ ಕ್ಯಾಂಡಿಮೆಂಟ್ಸ್ ನೇರವಾಗಿ ಖರೀದಿಸುತ್ತದೆ. ಆದ್ದರಿಂದ ಇದರಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿರುವುದಿಲ್ಲ. ನೇರವಾಗಿ ಬೆಳೆಗಾರರ ಮನೆಬಾಗಿಲಿಗೆ ತೆರೆಳಿ, ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು ಮೊತ್ತದ ಲಾಭ ನಮ್ಮ ಮೇಳದಿಂದ ಅವರಿಗೆ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂಧವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದು ಸಂತೃಪ್ತರಾಗುತ್ತಾರೆ.

ವರ್ಷದಿಂದ ವರ್ಷಕ್ಕೆ ಅವರೇಕಾಯಿ ಖರೀದಿಯೂ ಹೆಚ್ಚಳವಾಗುತ್ತಿದೆ. ಇದು ರೈತರಿಗೆ ಸಂತೋಷದ ವಿಷಯವೂ ಆಗಿದೆ.  ಕಷ್ಟಪಟ್ಟು  ಅವರೇಕಾಯಿ ಬೆಳೆದ ರೈತರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇಲ್ಲಿ ನಡೆಯಲಿದೆ. ಈ ಬಾರಿ ಕೂಡಾ ಖರೀದಿದಾರರು ಪದಾರ್ಥಗಳನ್ನು ಮನೆಯಿಂದಲೇ ಸುಲುಭವಾಗಿ ಖರೀದಿಸಲು ಅನುಕೂಲವಾಗುವಂತೆ ಜ್ಯೊಮ್ಯಾಟೋ ಮತ್ತು ಡೆಂಜೋ ಮುಂತಾದ ಆನ್ ಲೈನ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ” ಎಂದು ವಾಸವಿ ಕ್ಯಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಿವಶಂಕರ, ಸ್ವಾತಿ, ನರೇಶ್ ಉಪಸ್ಥಿತರಿದ್ದರು

ಬೆಂಗಳೂರು ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ಬೆಂಗಳೂರು: ಜೆ.ಪಿ.ಭವನದಿಂದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ ಮತ್ತಿತರರು ಕೃಷ್ಣ ಫ್ಲೋರ್ ಮಿಲ್ ವೃತ್ತದಲ್ಲಿ ಪ್ರತಿಭಟನೆ ನಡಿಸಿದರು. ಪ್ರತಿಭಟನಾ ನಿರತರು ರಸ್ತೆಯನ್ನು ತಡೆಯಲು ಮುಂದಾದಾಗ ಅವರನ್ನು ಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ ಮತ್ತು ಭಾಲ್ಕಿ ಸೇರಿದಂತೆ ಮೂರು ಜಿಲ್ಲೆಗಳ 865 ಗ್ರಾಮಗಳು ಮತ್ತು ಕರ್ನಾಟಕದ ನಗರಗಳ ಮೇಲೆ ರಾಜ್ಯದ ಹಕ್ಕು ಪುನರುಚ್ಚರಿಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತು. ಇದು ಎರಡು ರಾಜ್ಯಗಳ ನಡುವಿನ ಜಗಳವನ್ನು ಮತ್ತಷ್ಟು ಹೆಚ್ಚಿಸಿದೆ. ಡಿಸೆಂಬರ್ 22 ರಂದು ಕರ್ನಾಟಕ ವಿಧಾನಸಭೆಯು ಮಹಾರಾಷ್ಟ್ರಕ್ಕೆ “ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡುವ ಉದ್ದೇಶದಿಂದ ಮಹಾರಾಷ್ಟ್ರ ಸರಕಾರವು ಇಂತಹ ನಿರ್ಣಯವನ್ನು ಕೈಗೊಂಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಿವಾದಿತ ಪ್ರದೇಶಗಳಿಗಾಗಿ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಮತ್ತು ಈ ಪ್ರದೇಶಗಳಲ್ಲಿ ವಾಸಿಸುವ ಮಹಾರಾಷ್ಟ್ರೀಯರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನೂ ಕೊಡುವುದಾಗಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಹೇಳಿಕೊಂಡಿದೆ. ಡಿಸೆಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇಬ್ಬರು ಮುಖ್ಯಮಂತ್ರಿಗಳ ನಡುವೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕೆಂದೂ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

“ಎರಡೂ ರಾಜ್ಯಗಳು ಒಪ್ಪಿಕೊಂಡಿರುವ ನಿರ್ಣಯದ ಮೇಲೆ ಕಾರ್ಯನಿರ್ವಹಿಸಲು ಕೇಂದ್ರವು ಕರ್ನಾಟಕಕ್ಕೆ ನಿರ್ದೇಶಿಸಬೇಕು ಮತ್ತು ವಿವಾದಿತ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೆರೆಯ ರಾಜ್ಯವನ್ನು ಕೇಳಬೇಕು. ಪೊಲೀಸರು ಪ್ರತಿಭಟನಾಕಾರರ ಮೇಲೆ ಕ್ರೂರವಾಗಿ ದಾಳಿ ಮಾಡುತ್ತಾರೆ, ಮಹಾರಾಷ್ಟ್ರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮೇಲೆ ದಾಳಿ ಮಾಡಲಾಗುತ್ತದೆ, ಮರಾಠಿ ಮಾತನಾಡುವ ಜನರ ಒಡೆತನದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಭಯ ರಾಜ್ಯಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ರಾಜ್ಯ ಸರ್ಕಾರ ನೇಮಿಸಿದ ಸಚಿವರು, ವಿವಾದಿತ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶವಿಲ್ಲದಂತಾಗಿದೆ. ಇದೆಲ್ಲವೂ ಅಲ್ಲಿ ವಾಸಿಸುವ ನಮ್ಮ ಜನರ ಮೇಲೆ ದಬ್ಬಾಳಿಕೆ ನಡೆಸಲು ಕರ್ನಾಟಕ ಸರಕಾರವು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ” ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.

ಇದನ್ನು ಖಂಡಿಸಿ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷವು ಇಂದು ಮೆರವಣಿಗೆ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಇಂದು ಮಧ್ಯಾಹ್ನ ಪಕ್ಷದ ಕಚೇರಿ ಜೆ.ಪಿ.ಭವನದಿಂದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ ಮತ್ತಿತರರು ಕೃಷ್ಣ ಫ್ಲೋರ್ ಮಿಲ್ ವೃತ್ತದಲ್ಲಿ ಪ್ರತಿಭಟನೆ ನಡಿಸಿದರು. ಪ್ರತಿಭಟನಾ ನಿರತರು ರಸ್ತೆಯನ್ನು ತಡೆಯಲು ಮುಂದಾದಾಗ ಅವರನ್ನು ಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದರು. ನಂತರ ಎಲ್ಲರನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರು ರಾಜ್ಯ ಸಿನಿಮಾ

ಮಂಜುಳಾ ರೆಡ್ಡಿ, ಹಿರಿಯ ವರದಿಗಾರರು

ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಮೀಸಲಿಟ್ಟಿರುವ ಡಾ.ವಿಷ್ಣುವರ್ಧನ್ ಅವರ 10 ಗುಂಟೆ ಪುಣ್ಯ ಭೂಮಿ ಜಾಗದ ಸಮಸ್ಯೆಯನ್ನು ಸರಕಾರ ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ವಿಎಸ್‌ಎಸ್ ಮತ್ತು ಅಭಿಮಾನ್ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ನಿಂದ ಡಿಸಂಬರ್ 30ರಂದು ಬನಶಂಕರಿ ದೇವಸ್ಥಾನದ ಬಸ್‌ ನಿಲ್ದಾಣದಿಂದ ಅಭಿಮಾನ್ ಸ್ಟುಡಿಯೋವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜು ಗೌಡ ತಿಳಿಸಿದರು.

ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ  ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿಎಸ್‌ಎಸ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಟಿ.ತಿಮ್ಮರಾಜು (ರಾಜುಗೌಡ), ‘ಅಭಿಮಾನ್ ಸ್ಟುಡಿಯೋದಲ್ಲಿರುವ 10 ಗುಂಟೆ ಜಾಗವನ್ನು ಕೂಡಲೇ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ, ಬರಿಗಾಲಿನಲ್ಲಿ ಶುಕ್ರವಾರ ಬೆಳಿಗ್ಗೆ 7.30ಕ್ಕೆ ವಿಎಸ್‌ಎಸ್ ಮತ್ತು ವಿಷ್ಣುಸೇನಾ ಸಮಿತಿ ಹಾಗೂ ಅಭಿಮಾನಿಗಳು ಬರಿಗಾಲಿನಲ್ಲಿ ಬನಶಂಕರಿಯ ಬಸ್‌ ನಿಲ್ದಾಣದಿಂದ ಅಭಿಮಾನ್ ಸ್ಟುಡಿಯೋವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ,’’ ಎಂದು ತಿಳಿಸಿದರು.

‘ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ಹಾಗೂ ವಿಎಸ್‌ಎಸ್, ವಿಷ್ಣುಸೇನಾ ಸಂಘಟನೆ ಸಂಧಾನದ ಫಲವಾಗಿ 2017ರಲ್ಲಿ ಅಭಿಮಾನ್ ಸ್ಟುಡಿಯೋ ಮಾಲೀಕರು ಕೆಲವು ಷರತ್ತುಗಳೊಂದಿಗೆ 10 ಗುಂಟೆ ಜಾಗವನ್ನು ನೀಡಿದ್ದರು. ಈ ಸಂಬಂಧ 2018 ಸೆಪ್ಟೆಂಬರ್‌ನಲ್ಲಿ ಜಾಗದ ಸರ್ವೆ ನಡೆಸಿರುವ ದಾಖಲೆಗಳನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿತ್ತು. ಕೆಲವು ಸಮಸ್ಯೆಗಳಿಂದ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಮಾಲೀಕರ ಷರತ್ತನ್ನು ವಾಪಸ್ ಪಡೆದು, ಡಾ.ವಿಷ್ಣುವರ್ಧನ್ ಅವರ ಪುಣ್ಯ ಭೂಮಿಗೆ ಮೀಸಲಿಟ್ಟಿದ್ದ 10 ಗುಂಟೆ ಜಾಗವನ್ನು ಕೂಡಲೇ ಕೊಡಿಸಬೇಕು. ಈ ಜಾಗವನ್ನು ವಿಷ್ಣುವರ್ಧನ್ ಪ್ರತಿಷ್ಠಾನಕ್ಕೆ ಅಥವಾ ಬಿಬಿಎಂಪಿ ಅಥವಾ ಅಭಿಮಾನ್ ಸ್ಟುಡಿಯೋ ಮಾಲೀಕರು ಹಾಗೂ ಅಭಿಮಾನಿಗಳು ಸೇರಿ ಟ್ರಸ್ಟ್  ಮೂಲಕ ನಡೆಸಿಕೊಂಡು ಹೋಗುವುದಕ್ಕೆ ಸರ್ಕಾರ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ನಮ್ಮ ದೇವರು ವಿಷ್ಣುವರ್ದನ್ ಪುಣ್ಯ ಸಮಾಧಿ ನೋಡಲು ಸರ್ಕಾರವು ಅನುಮತಿ  ನಿರಾಕರಿಸುತ್ತಿದೆ. ಆದರೂ ಅಭಿಮಾನಿಗಳ ಬಳಗವು ಬರೀ ಕಾಲಿನಲ್ಲಿ  ಸರ್ಕಾರ ಹಾಕಿರುವ ತಡೆಯನ್ನೂ ಮೀರಿ ಸಮಾದಿ ಬಳಿಗೆ  ಹೋಗ ತೀರುತ್ತೇವೆಂದು ಖಾರವಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಟ್ರಸ್ಟ್ ನ ಗೌರವಾಧ್ಯಕ್ಷೆ ಸ್ನೇಹ ರಶ್ಮಿ ಸರಾಗ್, ಮೇಲುಕೋಟೆ ಪ್ರಸನ್ನ, ಕಾನೂನು ಸಲಹೆ ಗಾರರಾದ ಮೋಹನ್ ಶ್ರೀನಿವಾಸ್, ಬಕಾಸ್, ಗೋಪಿಗೌಡ, ಚಂದ್ರಹಾಸ್ ಮುಂತಾದವರು ಉಪಸ್ಥಿತಿಯಿದ್ದರು

ಬೆಂಗಳೂರು ರಾಜಕೀಯ ರಾಜ್ಯ
  • ಡಿ.ಸಿ.ಪ್ರಕಾಶ್, ಸಂಪಾದಕರು.

ಬೆಂಗಳೂರು: ಬೆಂಗಳೂರಿನಲ್ಲಿ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ‘ಕರ್ನಾಟಕ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪಕ್ಷ ಕಟ್ಟಬಹುದು. ಸಂವಿಧಾನ ಎಲ್ಲರಿಗೂ ಆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಆದರೇ ಯಾರು, ಯಾತಕ್ಕಾಗಿ, ಯಾವ ಸನ್ನಿವೇಶದಲ್ಲಿ ಪಕ್ಷವನ್ನು ಸ್ಥಾಪನೆ ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 110 ಸ್ಥಾನಗಳಲ್ಲಿ ಗೆದ್ದು ಬೀಗಿದರೂ ಬಹುಮತವನ್ನು ಪಡೆಯಲು ಅದರಿಂದ ಸಾದ್ಯವಾಗಲಿಲ್ಲ. 6 ಜನ ಪಕ್ಷೇತರರ ಬೆಂಬಲದೊಂದಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ದಕ್ಷಿಣ ಭಾರತದಲ್ಲಿ ರಚಿತವಾದ ಮೊದಲ ಬಿಜೆಪಿ ಸರ್ಕಾರ ಇದಾಗಿತ್ತು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 110 ಸ್ಥಾನಗಳನ್ನು ಗೆಲ್ಲಲು ಮತ್ತು 6 ಜನ ಪಕ್ಷೇತರರ ಬೆಂಬಲವನ್ನು ಪಡೆಯುವ ವಿಚಾರದಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಸಹೋದರರ ಪಾತ್ರವು ಬಹುದೊಡ್ಡದಿತ್ತು. ಆ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದು ಮಿಂಚಿದ ಹೀರೋ ಅವರೇ ಆಗಿದ್ದರು.

ನಂತರ ಕಾಲವು ಬದಲಾಗಿ, ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿಕೊಂಡ ಜನಾರ್ಧನ ರೆಡ್ಡಿ ಜೈಲು ಪಾಲಾದರು. ‘ಅಭಿವೃದ್ಧಿ’, ‘ಭ್ರಷ್ಟಾಚಾರ ಮುಕ್ತ’ ಎಂದೆಲ್ಲ ಹೇಳಿಕೊಂಡ ಬಿಜೆಪಿ, ಜನಾರ್ಧನ ರೆಡ್ಡಿಯನ್ನು ಮೆಲ್ಲೆಗೆ ಕೈತೊಳೆದುಕೊಂಡಿತು. ಇದರಿಂದ ಕುಪಿತರಾದ ಜನಾರ್ಧನ ರೆಡ್ಡಿ, ತಮ್ಮ ಆಪ್ತ ಮಿತ್ರ ಶ್ರೀರಾಮುಲುವನ್ನು ತಮ್ಮ ಶಾಸಕ, ಸಚಿವ ಸ್ಥಾನಕ್ಕೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ನಂತರ ನಡೆದ ಉಪ ಚುನಾವಣೆಯಲ್ಲಿ ಶ್ರೀರಾಮುಲುವನ್ನು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಿಸಿಕೊಂಡರು. ನಂತರ ಬಿಜೆಪಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಆಪ್ತನಾದ ಶ್ರೀರಾಮುಲುವಿನ ಮುಖಾಂತರ 2011ರಲ್ಲಿ ಬಿ.ಎಸ್.ಆರ್ (ಬಡವರ, ಶ್ರಮಿಕರ, ರೈತರ) ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿ, ಬಿಜೆಪಿಗೆ ಟಕ್ಕರ್ ಕೊಟ್ಟರು.

ಈ ಹಿನ್ನಲೆಯಲ್ಲಿ, ಮತ್ತೊಂದು ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸಿಲುಕಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರು ಮತ್ತು ಸಾವಿರಾರು ಬೆಂಬಲಿಗರೊಂದಿಗೆ ರಾಜಭವನಕ್ಕೆ ತೆರಳಿ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಯಡಿಯೂರಪ್ಪನ ಸೂಚನೆಯ ಮೇರೆಗೆ ಅವರ ಉತ್ತರಾಧಿಕಾರಿಯಾಗಿ ಸದಾನಂದಗೌಡರು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿಕೊಂಡರು. ನಂತರ ಸದಾನಂದಗೌಡರನ್ನು ಬದಲಿಸಿ, ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಮಾಡಲಾಯಿತು. ಭ್ರಷ್ಟಾಚಾರ ವಿಷಯದಲ್ಲಿ ಜೈಲು ಸೇರಿ ಹೊರಬಂದಿದ್ದ ಯಡಿಯೂರಪ್ಪನನ್ನು ಬಿಜೆಪಿ ಪಕ್ಷವು ಸ್ವಲ್ಪ ದೂರವೇ ಇಟ್ಟಿತ್ತು.

ಇದರಿಂದ ರೊಚ್ಚಿಗೆದ್ದ ಯಡಿಯೂರಪ್ಪ, 30 ನವಂಬರ್ 2012 ರಂದು ತಮ್ಮ ಶಾಸಕಾಂಗ ಸದಸ್ಯತ್ವಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, 9 ಡಿಸಂಬರ್ 2012ರಲ್ಲಿ ಪದ್ಮನಾಭ ಪ್ರಸನ್ನ ಕುಮಾರ್ ಸ್ಥಾಪಿತ ಕರ್ನಾಟಕ ಜನತಾ ಪಕ್ಷದಲ್ಲಿ ಸೇರ್ಪಡೆಯಾದರು. ಬಿಜೆಪಿ ಪಕ್ಷವನ್ನು ತೊರೆದು, ಪ್ರಾದೇಶಿಕ ಪಕ್ಷಗಳನ್ನು ಪ್ರಾರಂಭಿಸಿದ ಶ್ರೀರಾಮುಲು ಮತ್ತು ಯಡಿಯೂರಪ್ಪ 2013ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಇದರಿಂದ ಬಿಜೆಪಿಯ ಮತಗಳು ವಿಭಜನೆಯಾಗಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆಯಾದವು. ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವು ಬರೀ 40 ಶೀಟುಗಳನ್ನು ಮಾತ್ರವೇ ಪಡೆದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಅನುವು ಮಾಡಿಕೊಟ್ಟಿತು.

ಇವರಂತೆಯೇ 1993 ರಿಂದ 2003 ರವರೆಗೆ ಬಿಜೆಪಿ ಪಕ್ಷದಲ್ಲಿದ್ದ ವಿಜಯ ಸಂಕೇಶ್ವರ್, ಕೆಲವು ಬಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು, ‘ಕನ್ನಡ ನಾಡು’ ಪಕ್ಷವನ್ನು ಸ್ಥಾಪಿಸಿ ಕೈಸುಟ್ಟುಕೊಂಡರು. ನಂತರ ಜ್ಯಾತ್ಯತೀತ ಜನತಾದಳದೊಂದಿಗೆ ಪಕ್ಷವನ್ನು ವಿಲೀನಗೊಳಿಸಿ 2004ರಲ್ಲಿ ಚುನಾವಣೆಗೆ ಸ್ಪರ್ದಿಸಿದರು. ಜೆಡಿಎಸ್‍ನಲ್ಲೂ ಅವರು ಬಹಳಕಾಲ ಉಳಿಯಲಿಲ್ಲ. ನಂತರ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷಕ್ಕೆ ಸೇರಿಕೊಂಡರು. ನಂತರದ ದಿನಗಳಲ್ಲಿ ಯಡಿಯೂರಪ್ಪನವರೊಂದಿಗೆ ಸೇರಿ ಮತ್ತೆ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಯಾದರು.

ಬಿಜೆಪಿಯಿಂದ ಮುನಿಸಿಕೊಂಡು ಪಕ್ಷವನ್ನು ತೈಜಿಸಿದ ವಿಜಯ ಸಂಕೇಶ್ವರ್, ಶ್ರೀರಾಮುಲು, ಬಿ.ಎಸ್.ಯಡಿಯೂರಪ್ಪ ಮುಂತಾದವರೆಲ್ಲ ‘ನನ್ನಿಂದಲೇ ಪಕ್ಷ-ಪಕ್ಷದಿಂದ ನಾನಲ್ಲ’ ಎಂದು ಹೇಳಿಕೊಂಡು, ರಾಜಾರೋಷವಾಗಿ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿ, ಏನೂ ಮಾಡಲಾಗದೇ ಹೊಡೆದ ಚೆಂಡಿನಂತೆ ಮತ್ತೆ ಬಿಜೆಪಿ ಅಂಗಳಕ್ಕೆ ಬಂದು ಬಿದ್ದಿದ್ದು ಇತಿಹಾಸ.

ಈ ಸರದಿಯಲ್ಲಿ ಈಗ ಮತ್ತೊಂದು ಹೊಸ ಸೇರ್ಪಡೆ ಗಾಲಿ ಜನಾರ್ಧನ ರೆಡ್ಡಿ. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಜನಾರ್ಧನ ರೆಡ್ಡಿ ಎಂಎಲ್‍ಸಿಯಾಗಿ, ಸಚಿವರಾಗಿ ನಂತರ ಗಣಿಗಾರಿಕೆ ಅಕ್ರಮಗಳ ವಿಚಾರದಲ್ಲಿ ಜೈಲು ಸೇರಿಕೊಂಡರು. ನಂತರ ಸುಪ್ರೀಂ ಕೋರ್ಟ್ ನೀಡಿದ ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇಷ್ಟು ದಿನಗಳು ಅವರು ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ವಿಚಾರಗಳೆಲ್ಲ ನಮಗೆ ಸ್ವಲ್ಪ ಮಟ್ಟಕ್ಕೆ ತಿಳಿದಿದ್ದೆ. ಆದ್ದರಿಂದ ನಾವು ಹಳೆಯ ವಿಚಾರಕ್ಕೆ ಹೋಗುವುದು ಈ ಸಂದರ್ಭದಲ್ಲಿ ಸೂಕ್ತವಲ್ಲ.

ಈ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಘೋಷಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಹಿಂದಿನ ಸನ್ನಿವೇಶಗಳು ಬೇರೆಯೇ ಆಗಿತ್ತು. ಕಟ್ಟಿ ಬೆಳೆಸಿದ ಪಕ್ಷವೇ ಚೂರಿ ಹಾಕಿದಾಗ, ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬಂತೆ ಬಿಜೆಪಿಯನ್ನು ಬಗ್ಗುಬಡಿದು, ಸೇಡನ್ನು ತೀರಿಸಿಕೊಳ್ಳಲು ವೇದಿಕೆಯನ್ನು ಸಜ್ಜುಗೊಳಿಸಲಾಯಿತು. ಅದರಲ್ಲಿ ಯಶಸ್ವಿಯನ್ನೂ ಕಂಡರು. ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬಂತೆ ಕಾಂಗ್ರೆಸ್ ಪಕ್ಷವು 122 ಸ್ಥಾನಗಳಲ್ಲಿ ಗೆದ್ದು ಬಹುಮತದೊಂದಿಗೆ 5 ವರ್ಷಗಳು ರಾಜ್ಯವನ್ನಾಳಿತು. ಇದರ ಅನುಭವ ಯಾರಿಗೆ ಇದೆಯೋ ಇಲ್ಲವೋ ಖಂಡಿತ ಬಿಜೆಪಿ ಪಕ್ಷಕ್ಕೆ ಇದ್ದೇ ಇರುತ್ತದೆ.

ಆದರೇ ಇಂದಿನ ಪರಿಸ್ಥಿತಿ ಬೇರೆಯದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‍ಷಾ ಜೋಡಿ ಅಷ್ಟು ಸುಲುಭವಾಗಿ ಇಂತಹ ಬಂಡಾಯಕ್ಕೆಲ್ಲ ಅವಕಾಶ ಮಾಡಿಕೊಡುವುದಿಲ್ಲ. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ವರಿಷ್ಠರು, ಅದಕ್ಕೆ ಮಾಡಬೇಕಾದ ಎಲ್ಲಾ ಸಿದ್ದತೆಗಳನ್ನು ತಮ್ಮದೇ ಆದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿಕೊಂಡರೆ ‘ಕಾಂಗ್ರೆಸ್ ಮುಕ್ತ ಭಾರತ’ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಅವರಿಗೆ ಅನುಕೂಲವಾಗುತ್ತದೆ. ಮತ್ತು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರು ಬಹುಮತದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯ ಪಟ್ಟಕ್ಕೆ ಏರಲು ಇದು ಸಹಕಾರಿಯೂ ಆಗುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೆ, ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಮೀಸಲಾತಿ ವಿರೋಧಿ, ಭ್ರಷ್ಟಾಚಾರಿಯಾದ 40% ಕಮಿಷನ್ ಸರ್ಕಾರವನ್ನು ಕರ್ನಾಟಕದಿಂದ ಕಿತ್ತೊಗೆಯಲಾಗಿದೆ ಎಂಬ ಸಂದೇಶವನ್ನು ದೇಶಾದ್ಯಂತ ಬಿತ್ತರಿಸುತ್ತಾರೆ. ಇದರಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಮತ್ತೊಮ್ಮೆ ಪುನಶ್ಚೇತನಗೊಳ್ಳುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಓಟಕ್ಕೆ ಕಡಿವಾಣ ಬೀಳುವುದರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಇದುವೇ ಬಿಜೆಪಿ ಪಕ್ಷಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮುಳುವಾಗುತ್ತದೆ.

ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಮತ್ತು ಪ್ರತಿಷ್ಠೆಯ ಚುನಾವಣೆಯಾಗಿರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅನಾನುಕೂಲವಾಗುವ ವಾತಾರಣಗಳೇ ಹೆಚ್ಚಾಗಿ ಕಂಡುಬರುತ್ತಿದೆ. 40% ಕಮಿಷನ್, ಪೇಸಿಎಂ, ಪಿಎಸ್‍ಐ ಹಗರಣ, ಅಲ್ಪಸಂಖ್ಯಾತ ವಿರೋಧಿ, ರೈತ ವಿರೋಧಿ, ಮೀಸಲಾತಿ ಗೊಂದಲ, ಗಡಿ ವಿಚಾರ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮುಂತಾದ ಹಲವಾರು ಪ್ರಮುಕವಾದ ವಿಷಯಗಳನ್ನು ಜೀವಂತವಾಗಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಿರಂತರವಾಗಿ ದಾಳಿ ನಡೆಸುತ್ತಿದೆ. ಇಂದರಿಂದ ಬಿಜೆಪಿಗೆ ಭಾರೀ ಮುಖಭಂಗ ಮತ್ತು ಹಿನ್ನಡೆಯಾಗುತ್ತಿರುವುದು ಸತ್ಯದ ಮಾತು. ಅದುಮಾತ್ರವಲ್ಲ ಹಿಂದೂಗಳನ್ನು ರಕ್ಷಣೆ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಹಿಂದೂಪರ ಸಂಘಟನೆಗಳು ಕೂಡ ಧ್ವನಿ ಎತ್ತಿ ಸರ್ಕಾರದ ವಿರುದ್ಧ ಬಂಡಾಯ ನಿಂತಿರುವುದು ಸುಳ್ಳೇನಲ್ಲ.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗುವ ಲಕ್ಷಣಗಳೂ ಕಂಡುಬರುತ್ತಿವೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಬೀಳುವುದನ್ನು ತೆಡೆಯಲಿಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರವು ಜನಾರ್ಧನ ರೆಡ್ಡಿಯ ಮೂಲಕ ಹೊಸ ತಾಲೀಮು ನಡೆಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ‘ನಾನು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಗಾಗಿ ಪಕ್ಷ ಸ್ಥಾಪಿಸುತ್ತಿಲ್ಲ. ವಾಜಪೇಯಿ ರವರನ್ನು ಸ್ಮರಿಸುತ್ತಾ ಹೊಸ ಪಕ್ಷವನ್ನು ಘೋಷನೆ ಮಾಡಿದ್ದೇನೆ. ಯಡಿಯೂರಪ್ಪ ನನ್ನ ತಂದೆಯ ಸಮಾನರು. ಯಡಿಯೂರಪ್ಪನವರನ್ನು ಅಧಿಕಾರದಿಂದ ದೂರ ಇಡಬಹುದು ಆದರೆ, ಅವರ ಶಕ್ತಿಯನ್ನು ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ. ಜನಾರ್ಧನ ರೆಡ್ಡಿಯ ಮಾತುಗಳನ್ನು ಗಮನಿಸಿದರೆ ‘ನಮ್ಮ ಪಕ್ಷವು ಬಿಜೆಪಿಯ ವಿರುದ್ಧವಲ್ಲ’ ಎಂದು ಹೇಳಿದಂತಿದೆ. ಇದನ್ನೇ ಹೇಳುವುದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಎಂದು.

ಈ ಹಿಂದೆ ಹೊಸದಾಗಿ ರಾಜಕೀಯ ಪಕ್ಷವನ್ನು ಕಟ್ಟಿದವರಿಗೆ (ವಿಜಯ ಸಂಕೇಶ್ವರ್, ಶ್ರೀರಾಮುಲು, ಯಡಿಯೂರಪ್ಪ) ಆದ ಅನುಭವ ಮತ್ತು ಅನಾನುಕೂಲತೆ ಜರ್ನಾಧನ ರೆಡ್ಡಿಗೂ ಆಗಿದೆ. ಶ್ರೀರಾಮುಲು ಮುಖಾಂತರ ಬಿಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಬಿಜೆಪಿ ವಿರುದ್ಧ ಬಂಡಾಯವೆದ್ದ ಇವರು ಈಗ ಎರಡನೇ ಸರದಿಯನ್ನು ಆರಂಭಿಸಿದ್ದಾರೆ. ಆದರೇ ಈ ಬಾರಿ ಖಂಡಿತವಾಗಿಯೂ ಬಿಜೆಪಿಯ ವಿರುದ್ಧ ಯುದ್ಧ ಸಾರಲು ಇಲ್ಲವೆಂಬುದು ಮಾತ್ರ ಸ್ಪಷ್ಟ!

ರಾಜ್ಯ ರಾಜಕೀಯದಲ್ಲಿ ಮರೆಮಾಚಲ್ಪಟ್ಟ ತನ್ನ ಗುರುತು ಮತ್ತು ವರ್ಚಸ್ಸನ್ನು ಪುನರ್ ಸ್ಥಾಪಿಸಿಕೋಳ್ಳಲು ನಡೆಸುತ್ತಿರುವ ಕಾರ್ಯ (Task) ಇದಾಗಿದೆ. ಬಿಜೆಪಿ ಪಕ್ಷಕ್ಕೆ ನೇರವಾಗಿ ಪರು ಪ್ರವೇಶ ಮಾಡದೇ ಮುಂದಿನ ವಿಧಾನಸಭಾ ಚುನಾವಣೆಯ ನಂತರ, ಕೆಲವೊಂದು ಎಮ್ಮೆಲ್ಯೆ ಸೀಟುಗಳನ್ನು ಕೈಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮುಂತಾದ ಪ್ರಮುಖವಾದ ಖಾತೆಗಳಿಗೆ ಪಟ್ಟು ಹಿಡಿದು, ಅಧಿಕಾರ ಬಲದೊಂದಿಗೆ ಮರುಪ್ರವೇಶ (Reentry) ಮಾಡಬೇಕೆಂಬುದು ಇವರ ಉದ್ದೇಶವಾಗಿರಬಹುದೆಂದೂ ಊಹಿಸಲಾಗುತ್ತಿದೆ. ಶ್ರೀರಾಮುಲುವನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಉದ್ದೇಶವೂ ಇದರ ಹಿಂದಿದೆ ಎಂದು ಹೇಳುವವರೂ ಉಂಟು.

ಸಿನಿಮಾ
  • ಪ್ರತಿಬನ್ ಪ್ರಕಾಶ್

ಒಟಿಟಿಯಿಂದ ಚಿತ್ರರಂಗ ನಾಶವಾಗುತ್ತದೆ ಎಂದು ಕೇರಳದ ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಎಚ್ಚರಿಸಿದ್ದಾರೆ.

‘ಸ್ವಯಂವರಂ’, ‘ಎಲಿ ಪತ್ತಾಯಂ’, ‘ನಾಲು ಪೆನ್ನುಗಳ್’ ಮುಂತಾದ 12ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ದೇಶಿಸಿ, 16 ರಾಷ್ಟ್ರೀಯ ಪ್ರಶಸ್ತಿ, 18 ಕೇರಳ ರಾಜ್ಯ ಪ್ರಶಸ್ತಿ, 2004ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು ಅಡೂರು ಗೋಪಾಲಕೃಷ್ಣನ್ (80)

ಕೆಲವು ದಿನಗಳ ಹಿಂದೆ ಅವರು ನೀಡಿದ ಸಂದರ್ಶನವೊಂದರಲ್ಲಿ ‘ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡುವುದೆಂಬುದು ಒಂದು ಸಾಮಾಜಿಕ ಅನುಭವ. ಅದನ್ನು ಕಿರು ತೆರೆಯಲ್ಲಿ ನೋಡುವುದು ಹೇಗೆ? ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡ ನಾವು, ಒಟಿಟಿಗೆ ಒಗ್ಗಿಕೊಂಡೆವು. ಆದರೇ ಸಿನಿಮಾ ಜೀವಂತವಾಗಿರಬೇಕಾದರೆ, ಅದು ಕಿರುತೆರೆಯನ್ನು ನಂಬಿರಬಾರದು. ನಿರ್ದಿಷ್ಟವಾಗಿ ಹೇಳಬೇಕಾದರೆ, ಒಟಿಟಿಗಾಗಿ ತಯಾರಿಸಲ್ಪಡುವ ಸಿನಿಮಾಗಳು, ಸಿನಿಮಾ ಸಂಸ್ಕೃತಿಯನ್ನೇ ನಾಶಮಾಡಿಬಿಡುತ್ತದೆ’ ಎಂದು ಎಚ್ಚರಿಸಿದ್ದಾರೆ.

ದೇಶ

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೈಯಲ್ಲಿ ಕಟ್ಟಿರುವ ಸುಮಾರು 5 ಲಕ್ಷ ಬೆಲೆ ಬಾಳುವ ರಫೇಲ್ ಕೈ ಗಡಿಯಾರದ ವಿಚಾರವೇ ಈಗ ತಮಿಳುನಾಡಿಲ್ಲಿ ಟ್ರೆಂಡಿಂಗ್ ನ್ಯೂಸ್.

ತಮಿಳುನಾಡು ಇಂಧನ ಸಚಿವ ಸೆಂದಿಲ್ ಬಾಲಾಜಿ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, ‘ಫ್ರೆಂಚ್ ಕಂಪನಿಯ ರಫೇಲ್ ವಾಚ್ ಹೊಂದಿರುವ ಅಣ್ಣಾಮಲೈ, ಖರೀದಿಯ ರಸೀದಿಯನ್ನು  ಒಂದು ಗಂಟೆಯ ಒಳಗೆ ಪ್ರಕಟಿಸಿದರೆ, ಸಾಮಾನ್ಯ ಜನರು ಸಹ ಅದನ್ನು ಖರೀದಿಸಿ ಆನಂದಿಸಬಹುದು. ಮತ್ತು ಕೇವಲ 4 ಕುರಿಮರಿಗಳನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಅಣ್ಣಾಮಲೈ, 5 ಲಕ್ಷಕ್ಕೂ ಹೆಚ್ಚು ಬೆಲೆಯ ದುಬಾರಿ ರಫೇಲ್ ವಾಚನ್ನು ಹೊಂದಿದ್ದಾರೆ ಎಂದು ಟೀಕಿಸಿದ್ದರು.

ಇದಕ್ಕೆ ಕೆಂಡಾಮಂಡಲವಾದ ಅಣ್ಣಾಮಲೈ ‘ನಾನು ಬಿಜೆಪಿ ಅಧ್ಯಕ್ಷನಾಗುವ ಮೊದಲೇ 2021 ಮೇ ತಿಂಗಳಲ್ಲಿ ರಫೇಲ್ ವಾಚನ್ನು ಖರೀದಿ ಮಾಡಿದ್ದೆ. ಅದರ ರಸೀದಿ, ಆದಾಯ ತೆರಿಗೆ ರಿಟರ್ನ್ಸ್, 10 ವರ್ಷಗಳು  ಬ್ಯಾಂಕಿನಲ್ಲಿ ನಡೆಸಿದ ಹಣಕಾಸಿನ ವ್ಯವಹಾರ, ಐಪಿಎಸ್ ಕಾಲದಲ್ಲಿ ಸಂಪಾದಿಸಿದ ಹಣ, ಮುಂತಾದ ಎಲ್ಲಾ ವಿವರಗಳನ್ನು ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಪಾದಯಾತ್ರೆಯ ಮೊದಲ ದಿನವೇ ಪ್ರಕಟಿಸುತ್ತೇನೆ’ ಎಂದು ಹೇಳಿದ ಅಣ್ಣಾಮಲೈ, ‘ಅದೇ ರೀತಿ ಡಿಎಂಕೆ ಪಕ್ಷದ ಆಸ್ತಿ ವಿವರಗಳನ್ನು ಪ್ರಕಟಿಸಲು ಅವರು ಸಿದ್ಧರಿದ್ದಾಯೇ’ ಎಂದೂ ಪ್ರಶ್ನೆ ಮಾಡಿದರು. ‘ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಅವರ ಕುಟುಂಬ ವರ್ಗದವರು, ಸಚಿವರುಗಳು, ಅವರ ಸಂಬಂಧಿಗಳು, ಅವರ ಬೇನಾಮಿಗಳು ಮಾಡಿರುವ ಭ್ರಷ್ಟಾಚಾರ ಎಲ್ಲವನ್ನೂ ಒಂದೊಂದಾಗಿ ಬಯಲು ಮಾಡುತ್ತೇನೆ’ ಎಂದೂ ಅಣ್ಣಾಮಲೈ ಗುಡುಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸೆಂದಿಲ್ ಬಾಲಾಜಿ, ‘ನಾವು ನಿಮ್ಮಲ್ಲಿ ಕೇಳಿದ್ದು ಬರೀ ಬಿಲ್ ಮಾತ್ರ‌. ಬಿಲ್ ಇದೆ ಅಥವಾ ಇಲ್ಲ ಎಂಬುದೇ ಇದಕ್ಕೆ ಸರಿಯಾದ ಉತ್ತರವಾಗಿರುತ್ತದೆ. ಚುನಾವಣೆ ನಂತರ ಖರೀದಿ ಮಾಡಿದ್ದು ಎಂದು ಹೇಳಿದರೆ, ಚುನಾವಣಾ ನಾಮಪತ್ರದಲ್ಲಿ ಏಕೆ ಲೆಕ್ಕ ತೋರಿಸಲಿಲ್ಲ ಎಂಬ ಪ್ರಶ್ನೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ 2021 ಮೇ ತಿಂಗಳಲ್ಲಿ ಖರೀದಿ ಮಾಡಿದ್ದು ಎಂದು ಹೇಳುವ ಸುಮಾರು 5 ಲಕ್ಷ ಬೆಲೆಬಾಳುವ  ರಫೇಲ್ ವಾಚಿಗೆ ನಿಮ್ಮ ಬಳಿ ಬಿಲ್ ಇದೆಯೇ? ಅಥವಾ ತಯಾರಿ ಮಾಡಬೇಕೇ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. 

ಅಣ್ಣಾಮಲೈ ಕೈಯಲ್ಲಿ ಇರುವ ಕೈ ಗಡಿಯಾರ ಫ್ರಾನ್ಸ್ ದೇಶದ ರಫೇಲ್ ಕಂಪನಿಯಿಂದ ತಯಾರಿಸಿದ್ದು ಎಂದು ಹೇಳಲಾಗುತ್ತಿದೆ. ರಫೆಲ್ ಕಂಪನಿಯು ಈಗಾಗಲೇ ಯುದ್ಧ ರಾಕೆಟ್ ಗಳನ್ನು ತಯಾರಿಸಿ ನಮ್ಮ ದೇಶಕ್ಕೆ ಸರಬರಾಜು ಮಾಡಿದೆ. ‘ರಾಕೆಟ್ ಗಳ ಬಿಡಿ ಭಾಗಗಳಿಂದ ಈ ರಫೇಲ್ ವಾಚನ್ನು ತಯಾರಿಸಲಾಗಿದೆ. ಬರೀ 500 ವಾಚ್ ಗಳನ್ನಷ್ಟೇ ರಫೇಲ್ ಕಂಪನಿ ತಯಿರಿಸಿತ್ತು ಅದರಲ್ಲಿ ನನ್ನ ಬಳಿಯಿರುವುದು 149ನೇ ವಾಚ್’ ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಹಿಂದೆ ಕರ್ನಾಟಕದಲ್ಲಿ ‘ರಿಯಲ್ ಸಿಂಗಮ್’, ‘ಕರ್ನಾಟಕ ಸಿಂಗಮ್’ ಎಂದೆಲ್ಲ ಅಡ್ಡಹೆಸರಿಟ್ಟು ಕರೆಯುತ್ತಿದ್ದ ಐಪಿಎಸ್ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಗೆ 2016ರಲ್ಲಿ ಕಾಫಿ ಮಾಲೀಕರೊಬ್ಬರು ಈ ವಾಚನ್ನು ಉಡುಗೊರೆಯಾಗಿ ನೀಡಿದ್ದು ಎಂದು ಹೇಳಲಾಗುತ್ತಿದೆ.

ಈಗ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದವರು ಅಣ್ಣಾಮಲೈಗೆ ‘ಬಿಲ್ ಎಲ್ಲಿ’ ಎಂದು ಕೇಳುವುದನ್ನೇ ಟ್ರೆಂಡ್ ಮಾಡಿಕೊಂಡಿದ್ದಾರೆ.

ತಮಿಳುನಾಡು ಕರೂರಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ‘ಅಣ್ಣಾಮಲೈನ 5 ಲಕ್ಷ ರೂಪಾಯಿಯ ಕೈ ಗಡಿಯಾರ, ಮೋದಿಯ 10 ಲಕ್ಷ ರೂಪಾಯಿಯ ಕೋಟ್ ಇವೆಲ್ಲವೂ ಸರಳ. ಪ್ರಾಮಾಣಿಕತೆಯ ಸಂಕೇತ. ಕುರಿಮರಿ ಮತ್ತು ಚಹಾ ಮಾರಾಟದಿಂದ ಗಳಿಸಿದ ಹಣದಿಂದ ಖರೀದಿಸಿದ್ದು. ಬಿಜೆಪಿಗೂ ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧ. ಅದನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ. ಬಿಜೆಪಿಯು ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ದೇಶಭಕ್ತಿ  ಎಂಬ ಮುಖವಾಡವನ್ನು ಧರಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ವಿದೇಶ

ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ 16 ಲಕ್ಷ ಜನರು ಸಾಯುವ ಸಾದ್ಯತೆಯಿದೆ!


– ಸಾಂಕ್ರಾಮಿಕ ತಜ್ಞ ಎರಿಕ್ ಫಿಗಲ್ ಡಿಂಗ್

ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ ಶೇ.60ಕ್ಕೂ ಮೇಲಾದ ಜನರು ಕೊರೊನಾ ಸೋಂಕಿಗೆ ಗುರಿಯಾಗಬಹುದು. ಅದೇ ರೀತಿ 16 ಲಕ್ಷ ಜನರು ಸಾಯುವ ಸಾದ್ಯತೆಯೂ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಎಚ್ಚರಿಕೆಯನ್ನು ನೀಡಿದ್ದಾರೆ.

ಚೀನಾದಲ್ಲಿ ಕೊರೊನಾ ಹರಡುವಿಕೆ ಮತ್ತೆ ಹೆಚ್ಚುತ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾವನ್ನು ತಡೆಗಟ್ಟಲು ಸರ್ಕಾರ ನಾನಾ ರೀತಿಯ ನಿರ್ಬಂಧಗಳನ್ನು ಹಾಕಿತ್ತು. ಆದರೇ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಚೀನಿಯರು ಹೋರಾಟದ ದಾರಿಯನ್ನು ಕೈಗೆತ್ತಿಕೊಂಡರು. ಜನಪರವಾದ ಹೋರಾಟಕ್ಕೆ ಮಣಿದ ಸರ್ಕಾರ, ತಮ್ಮ ನಿರ್ಬಂಧಗಳನ್ನು ಸಡಿಲಗೊಳಿಸಿತು.

ಕ್ರಿಸ್ಮಸ್, ನ್ಯೂ ಇಯರ್ ಮತ್ತು ಚಂದ್ರಮಾನದ ಹೊಸ ವರ್ಷಾಚರಣೆಯಿಂದ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗು ಸಾದ್ಯತೆ ಇದೆಯೆಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸ್ಮಶಾನಗಳಿಗೆ ಬರುವ ಮೃತರ ಶವಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದೇರೀತಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದರ ಬಗ್ಗೆ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ‘ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ ಕೊರೊನಾದಿಂದ ಶೇ.60 ರಷ್ಟು ಜನ ಸೋಂಕಿಗೆ ಗುರಿಯಾಗಬಹುದು. ಇದರಿಂದ 16 ಲಕ್ಷ ಜನರು ಸಾಯಬಹುದು. ಬೀಜಿಂಗ್‍ನಲ್ಲಿರುವ ಸ್ಮಶಾನಗಳಲ್ಲಿ ಶವಗಳನ್ನು ಮಣ್ಣು ಮಾಡುವ ಕೆಲಸಗಳು ದಿನದ 24 ಗಂಟೆಯೂ ನಡೆಯುತ್ತಿದೆ. ಪ್ರತಿ ಸ್ಮಶಾನಕ್ಕೆ ಪ್ರತಿದಿನ 2000 ಶವಗಳನ್ನು ತರಲಾಗುತ್ತಿದೆ. ಇಲ್ಲಿನ ಶವಗಾರಗಳು ಹೆಚ್ಚು ಹೊರೆಯಾಗುತ್ತಿದೆ.

ಸೋಂಕಿನ ತ್ವರಿತ ಹರಡುವಿಕೆಯಿಂದ 90 ದಿಗಳಲ್ಲಿ 87 ಕೋಟಿ ಜನರು ಸೋಂಕಿಗೆ ಒಳಗಾಗುತ್ತಾರೆ. ಮತ್ತು ಹಲವಾರು ಲಕ್ಷ ಜನರು ಸಾಯುತ್ತಾರೆ. ಚೀನಾದ ಕಮ್ಯುನಿಷ್ಟ್ ಪಕ್ಷದ ಈಗಿನ ಧ್ಯೇಯವಾಕ್ಯ ಏನಂದರೆ, ಸಾಯುತ್ತೇವೆ ಎಂದುಕೊಂಡವರು ಸಾಯಲಿ ಎಂಬುದೇ ಆಗಿದೆ. ಎಂದು ಹೇಳುತ್ತಿದ್ದಾರೆ.

ರಾಜ್ಯ

ಸ್ವಯಂ ಘೋಷಿತ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು.

ಬೆಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಹಿಂದೂ ವಿರೋಧಿ, ಭ್ರಷ್ಟಾಚಾರ ಚಟುವಟಿಕೆ ಹಾಗೂ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 1) ರಾಜೇಶ್ ಪವಿತ್ರನ್, 2) ಎಲ್.ಕೆ.ಸುವರ್ಣ, 3) ಸುಂದರ್ ಜೀ, 4) ವಿವೇಕನಂದ, 5) ಕಿಶೋರ್ ಕುಮಾರ್ ಮುಂತಾದವರ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ (ಕರ್ನಾಟಕ) ರಾಜಾಧ್ಯಕ್ಷ ಡಾ.ಮನೋಜ್ ಆಲುಂಗಲ್ ಕೆಂಡಕಾರಿದ್ದಾರೆ.

ಇಂದು ಬೆಂಗಳೂರು ಪ್ರಸ್‍ಕ್ಲಬ್‍ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಡಾ.ಮನೋಜ್ ಆಲುಂಗಲ್ ‘ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷವು ಭಾರತದ ಪ್ರಪ್ರಥಮ ರಾಜಕೀಯ ಪಕ್ಷವಾಗಿದೆ. ಈ ಪಕ್ಷವು ವಿನಾಯಕ ದಾಮೋದರ್ ಸಾವರ್ಕರ್ ಅವರಿಂದ 1907ರಲ್ಲಿ ಸ್ಥಾಪಿಸಲ್ಪಟ್ಟಿದ್ದು. ಇಂದಿನ ಆಯ್ದ ಹಲವು ಪ್ರತಿಷ್ಠಿತ ಪಕ್ಷಗಳು ಇಲ್ಲಿಂದಲೇ ಹುಟ್ಟಿಕೊಂಡಿರುತ್ತದೆ.

ಈ ಪಕ್ಷದ ಈಗಿನ ರಾಷ್ಟ್ರಾಧ್ಯಕ್ಷರು ಚಕ್ರಪಾಣಿ ಮಹಾರಾಜ್ ರವರು, ಕರ್ನಾಟಕ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ನನಗೆ ನೀಡಿರುತ್ತಾರೆ. ನಾನು ಈಗ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ರಾಜ್ಯಾಧ್ಯಕ್ಷನಾದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಲ್ಲಿ ನಾವೆಲ್ಲರು ಒಂದೇ ಎಂಬ ಒಗ್ಗಟ್ಟಿನ ಮಂತ್ರವನ್ನು ಸಾರುತ್ತ, ಎಲ್ಲರೂ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಬಂದಿರುತ್ತೇವೆ.

ಈ ಹಿನ್ನಲೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದ ಕೆಲವು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಸರಿಯಾದ ರೀತಿಯಲ್ಲಿ ಪಕ್ಷದ ಕಾರ್ಯವೈಕರಿಗಳನ್ನು ಮುಂದುವರೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದ್ದರೂ ಅವರುಗಳು ತಮ್ಮ ಹಿಂದಿನ ಚಾಳಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದ ಕಾರಣದಿಂದ ಪಕ್ಷದ ರಾಷ್ಟ್ರಾಧ್ಯಕ್ಷರ ಗಮನಕ್ಕೆ ತಂದು, ಅವರ ಆದೇಶದ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿರುತ್ತದೆ.

ನಂತರದಲ್ಲಿ ಕೆಲವು ಪಕ್ಷದ ಪದಾಧಿಕಾರಿಗಳು, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಹೆಸರಿನಡಿಯಲ್ಲಿ ಸ್ವಯಂ ಘೋಷಿತ ರಾಜ್ಯಾಧ್ಯಕ್ಷರುಗಳಾಗಿ ಸಮಾಜದ ಜನತೆಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಹಿಂದೂ ವಿರೋಧಿ, ಭ್ರಷ್ಟಾಚಾರ ಚಟುವಟಿಕೆ ಹಾಗೂ ಸಮಾಜ ವಿರೋಧಿ ಕಾರ್ಯಗಳಲ್ಲಿ ಪಾಲ್ಗೊಂಡಿರುತ್ತಾರೆ. ಮತ್ತು ತಮ್ಮ ಈ ಎಲ್ಲಾ ಕಾರ್ಯಗಳಿಗೂ ಅಖಿಲ ಭಾರತ ಹಿಂದೂ ಮಾಹಾಸಭಾ ಪಕ್ಷದ ಹೆಸರು, ಬಾವುಟ, ಹಾಗೂ ಲಾಂಛನವನ್ನು ಉಪಯೋಗಿಸುತ್ತಿದ್ದಾರೆ. ಇದು ದರಾದೃಷ್ಟಕರ ಸಂಗತಿಯಾಗಿದೆ.

ಇಂತಹ ಕಾರ್ಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾವು, ಈ ರೀತಿಯಾದಂತಹ ಅವ್ಯವಹಾರಗಳನ್ನು ತಡೆಗಟ್ಟುವ ಹಾಗೂ ಪಕ್ಷದ ಹೆಸರಿಗೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹಿತಾಸಕ್ತಿಯಿಂದ ಕಾನೂನಾತ್ಮಕ ಹೋರಾಟವನ್ನು ಮಾಡಲು ಮುಂದಾಗಿ 1) ರಾಜೇಶ್ ಪವಿತ್ರನ್, 2) ಎಲ್.ಕೆ.ಸುವರ್ಣ, 3) ಸುಂದರ್ ಜೀ, 4) ವಿವೇಕನಂದ, 5) ಕಿಶೋರ್ ಕುಮಾರ್ ಮುಂತಾದವರ ವಿರುದ್ಧ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತೇವೆ. ಆದರೂ ರಾಜೇಶ್ ಪವಿತ್ರನ್ ಹಾಗೂ ಆತನ ಸಹಚರರು ಪಕ್ಷದ ಹೆಸರನ್ನು ನಮೂದಿಸಿ, ಸಭೆ ಸಮಾರಂಭಗಳನ್ನು ಮಾಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ದಾಖಲಾತಿಗಳೊಂದಿಗೆ ದಿನಾಂಕ: 16.12.2022 ರಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರನ್ನು ಸಲ್ಲಿಸಿರುತ್ತೇವೆ’. ಎಂದು ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಹಿಂದೂ ಮಹಾಸಭಾ ಪಕ್ಷದ ಹಲವಾರು ಪ್ರಮುಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ರಾಜ್ಯ

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‍ಗೆ ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ.

‘ಶ್ರೀ.ಸಿದ್ದಗಂಗಾ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿ, ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪ್ರತಿಭಾನ್ವಿತರಿಗೆ ಪ್ರತಿವರ್ಷವೂ ‘ಶ್ರೀ.ಸಿದ್ದಗಂಗಾ ಸಿರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ವರ್ಷ ಕನ್ನಡದ ಪ್ರಸಿದ್ದ ವಿದ್ವಾಂಸರಾದ, ಸಿದ್ದಗಂಗಾ ಮಠದ ಹಿರಿಯ ವಿದ್ಯಾರ್ಥಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ನೀಡಲಾಗುತ್ತಿದೆ’. ಎಂದು ಬಸವ ಅಂತರಾಷ್ಟ್ರೀಯ ಪ್ರತಿಷ್ಟಾನ, ಲಂಡನ್‍ನ ಪದಾಧಿಕಾರಿಗಳು ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರಿ. ಎಸ್.ಮಹಾದೇವಯ್ಯ,    

‘ದಿನಾಂಕ: 24.12.2022 ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಕನ್ನಲ್ಲಿ ಗ್ರಾಮದ ಶ್ರೀ.ವೀರಭದ್ರಸ್ವಾಮಿ ಸುಕ್ಷೇತ್ರದ ಆವರಣದಲ್ಲಿ ಶ್ರೀ.ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು, ಡಾ.ಗೊ.ರು.ಚನ್ನಬಸಪ್ಪ, ಶ್ರೀ.ಎಸ್.ಟಿ.ಸೋಮಶೇಖರ್ ಹಾಗೂ ಶ್ರೀ.ಎಸ್.ಮಹಾದೇವಯ್ಯ ಇವರುಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಧ್ಯಾಪಕರಾಗಿ, ಕುಲಸಚಿವರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾಗಿ, ಕರ್ನಾಟಕದ ಮೊದಲ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸೇವೆಸಲ್ಲಿಸಿದ್ದಾರೆ. ಶ್ರೀಯುತರು ಬಹುಶೃತ ವಿದ್ವಾಂಸರು. ಈಗಾಗಲೇ ನೂರಾರು ಅತ್ಯಂತ ವಿದ್ವತ್‍ಪೂರ್ಣ ಕೃತಿಗಳು ಇವರಿಂದ ರಚನೆಯಾಗಿದೆ. ಕನ್ನಡ, ಸಂಸ್ಕೃತ ಹಾಗೂ ಪಾಲಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿರುವ ಶ್ರೀ.ವೆಂಕಟೇಶ್ ರವರ ಸಂಪಾದಕತ್ವದಲ್ಲಿ ಅನೇಕ ಮಹತ್ವದ ಕೃತಿಗಳು ಹೊರಬಂದಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯವಾಗಿರುವ ಗ್ರಂಥಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅನೇಕ ಮಹತ್ವದ ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿರುವ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ರವರಿಗೆ ಪ್ರಸ್ತುತ ಶ್ರೀ.ಸಿದ್ದಗಂಗಾ ಮಠದ ಪೂಜ್ಯರಾಗಿದ್ದ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಗಳವರ ಪುಣ್ಯಸ್ಮರಣೆಯಲ್ಲಿ ನೀಡಲಾಗುವ ‘ಶ್ರೀ.ಸಿದ್ದಗಂಗಾ ಸಿರಿ’ ಪ್ರಶಸ್ತಿಯನ್ನು ನೀಡಲಾಗುತ್ತದೆ’ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ.ನಾಗರಾಜಮೂರ್ತಿ, ಟ್ರಸ್ಟಿಗಳಾದ ಮಂಜುಳ ಶಿವಾನಂದ, ದಯಾನಂದ್ ಪಾಟೀಲ್ ಉಪಸ್ಥಿತರಿದ್ದರು.