ಬೆಂಗಳೂರು Archives » Dynamic Leader
July 18, 2024
Home Archive by category ಬೆಂಗಳೂರು

ಬೆಂಗಳೂರು

ಬೆಂಗಳೂರು

ಬೆಂಗಳೂರು: ಗಾಂಧಿನಗರ ಕ್ಷೇತ್ರದ ಕಾಟನ್‌ಪೇಟೆಯಲ್ಲಿ ಅನೇಕ ಬೀದಿಗಳಲ್ಲಿ ಹೊಗೆಯಾಡಿಸುವ ಅಭಿಯಾನದ ನೇತೃತ್ವ ವಹಿಸಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ತಿಳಿವಳಿಕೆ ಕರಪತ್ರಗಳನ್ನು ವಿತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್.

“ಈ ರೋಗವನ್ನು ಎದುರಿಸಲು ನಾವು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿರುವಾಗ, ಡೆಂಗ್ಯೂ ಬಗ್ಗೆ ತಿಳುವಳಿಕೆಯನ್ನು ಉಳಿಸಿಕೊಳ್ಳುವ ಮೂಲಕ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಾರ್ವಜನಿಕರು ತಮ್ಮ ಕೈಲಾದಷ್ಟು ಮಾಡುವಂತೆ ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಗುರುತರವಾದ ಈ ಕರಪತ್ರ ಅಭಿಯಾನವನ್ನು ಬೆಂಗಳೂರಿನ ಪ್ರತಿಯೊಂದು ವಾರ್ಡ್‌ಗಳಿಗೂ ವಿಸ್ತರಿಸುವುದರ ಜೊತೆಯಲ್ಲೇ ಚರಂಡಿ, ಒಳಚರಂಡಿಗಳನ್ನು ಸ್ವಚ್ಚಗೊಳಿಸಿ, ಬೀದಿಯಲ್ಲಿ ಅಡ್ಡದಿಡ್ಡಿಯಾಗಿ ಬಿದ್ದಿರುವ ಕಸದ ರಾಶಿಗಳನ್ನು ವಿಲೇ ಮಾಡಿ, ದಿನನಿತ್ಯ ಬೀದಿಗಳಲ್ಲಿ ಹೊಗೆಯಾಡಿಸುವ ಕೆಲಸವೂ ಅತ್ಯಂತ ಜರೂರಾಗಿ ನಡೆಸಲು ಆರೋಗ್ಯ ಸಚಿವರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲು ಮುಂದಾಗಬೇಕೆಂಬುದು ಎಲ್ಲರ ಆಗ್ರಹವಾಗಿದೆ.

ಬೆಂಗಳೂರು

ವರದಿ ಮತ್ತು ಫೋಟೋ: ಪ್ರತಿಬನ್, ಕಮ್ಮನಹಳ್ಳಿ

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕೊತ್ತನೂರು, ಕೆ.ನಾರಾಯಣಪುರ, ಬೈರತಿ ಹಾಗೂ ಗೆದ್ದಲಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡು ಜನ ಪರದಾಡುವಂತೆ ಆಗಿದೆ. ರಸ್ತೆಗಳೇ ಕಾಣುತ್ತಿಲ್ಲ. ಎಲ್ಲೆಡೆಯೂ ನೀರು ತುಂಬಿದ್ದು, ರಸ್ತೆ ಎಲ್ಲಿದೆ… ಗುಂಡಿಗಳು ಎಲ್ಲಿದೆ ಎಂದು ತಿಳಿಯಲೂ ಆಗುತ್ತಿಲ್ಲ. ಕತ್ತಲೆಯಲ್ಲಿ… ಗಾಬರಿಯಿಂದ… ರಸ್ತೆಯನ್ನು ಹಾದು ಹೋಗಬೇಕಾದ ಸನ್ನಿವೇಶ ಎದುರಾಗಿದೆ.

ರಸ್ತೆ ಅಗಲೀಕರಣ, ಅಲ್ಲಲ್ಲಿ ಬಾಯ್ ತೆರೆದಿರುವ ರಸ್ತೆ ಗುಂಡಿಗಳು, ವಿಪರೀತವಾದ ಜನಸಂದಣಿ, ವಾಹನಗಳ ದಟ್ಟನೆ ಇವುಗಳಿಂದ ಸಿಲುಕಿಂಕೊಂಡ ಸ್ಥಳೀಯರ ಬವಣೆ ಹೇಳತೀರದು. ಹೆಣ್ಣೂರು ಕ್ರಾಸ್ ನಿಂದ ಕೊತ್ತನೂರುವರೆಗೆ ಇದೇ ಗೋಳು. ರಸ್ತೆ ಅಗಲೀಕರಣದ ಹೆಸರಿನಲ್ಲಿ ವರ್ಷಾನುಗಟ್ಟಲೇ ನಡೆಯುತ್ತಿರುವ ನಿಧಾನಗತಿಯ ಕಾಮಗಾರಿಗಳಿಂದಲೇ ಇಂತಹ ರದ್ಧಾಂತ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತಲುಪಬೇಕಾದ ಪ್ರಯಾಣಿಕರು ಪರದಾಡುತ್ತಿರುವುದು ಗಮನಾರ್ಹ.

ಬೆಂಗಳೂರು

ಹೊಟ್ಟೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಇದು ಕಡಿಮೆಯಾಗದಿದ್ದರೆ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ.

ಪ್ರಶ್ನೆ: ನನ್ನ ವಯಸ್ಸು 46. ನಾನು ಸರಿಯಾದ ತೂಕದಲ್ಲಿದ್ದೇನೆ. ಆದರೆ, ದಿನದಿಂದ ದಿನಕ್ಕೆ ಹೊಟ್ಟೆ ದೊಡ್ಡದಾಗುತ್ತಿದೆ. ಇದಕ್ಕೆ ಕಾರಣವೇನು? ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪರಿಹಾರವೇನು?

ಉತ್ತರ: ಉಬ್ಬಿದ ಹೊಟ್ಟೆ ಎಂಬುದು ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಸೂಚಿಸುತ್ತದೆ. ಕೊಬ್ಬಿನಲ್ಲಿ ಎರಡು ವಿಧಗಳಿವೆ. ದೇಹದ ಅಂಗಾಂಗಗಳ ಸುತ್ತಲೂ ಇರುವುದು ಒಳಾಂಗಗಳ ಕೊಬ್ಬು (Visceral Fat) ಚರ್ಮದ ಅಡಿಯಲ್ಲಿ ಇರುವುದು ಸಬ್ಕ್ಯುಟೇನಿಯಸ್ (Subcutaneous Fat) ಕೊಬ್ಬು

ಅಪೌಷ್ಟಿಕ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಒತ್ತಡ, ಮದ್ಯಪಾನ, ಸರಿಯಾದ ನಿದ್ರೆಯ ಕೊರತೆ ಮತ್ತು ಆನುವಂಶಿಕದಂತಹ ಅನೇಕ ಕಾರಣಗಳಿಂದ ಉಬ್ಬಿದ ಹೊಟ್ಟೆ ಉಂಟಾಗುತ್ತದೆ. ಇವುಗಳಲ್ಲಿ ಅಸಮರ್ಪಕ ಆಹಾರ ಪದ್ಧತಿಯೇ ಮುಖ್ಯ ಕಾರಣ. ನಾವು ಸೇವಿಸುವ ಆಹಾರದ ಮೂಲಕ ದೇಹಕ್ಕೆ ಸೇರುವ ಕ್ಯಾಲೊರಿಗಳು ಮತ್ತು ದೈಹಿಕ ಚಟುವಟಿಕೆಯಿಂದ ಉರಿಯುವ ಕ್ಯಾಲೊರಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಆ ಮೂಲಕ ಸಮತೋಲಿತ ಪೌಷ್ಠಿಕ ಆಹಾರ ಸೇವಿಸಿ ಕ್ಯಾಲೊರಿ ಕರಗಿಸಲು ವ್ಯಾಯಾಮಕ್ಕೆ ಪ್ರಾಮುಖ್ಯತೆ ನೀಡುವುದು ಅವಶ್ಯಕವಾಗಿದೆ. ವಯಸ್ಸಾದಂತೆ ನಮ್ಮ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಹೊಟ್ಟೆಯ ಕೊಬ್ಬಿಗೆ ಇದು ಕೂಡ ಒಂದು ಕಾರಣ.

ಕೆಲವರಿಗೆ ಆನುವಂಶಿಕವಾಗಿ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ಇನ್ನು ಕೆಲವರಿಗೆ ದೇಹದಾದ್ಯಂತ ಕೊಬ್ಬು ಸಂಗ್ರಹವಾಗುತ್ತದೆ. ಮಹಿಳೆಯರಿಗೆ ಸಂಬಂಧಿಸಿದಂತೆ ಋತುಬಂಧಕ್ಕೆ ಮುನ್ನ ‘ಪೆರಿಮೆನೋಪಾಸ್’ ಸಮಯದಲ್ಲೂ ಮೆನೋಪಾಸ್ ಸಮಯದಲ್ಲೂ ಬೊಜ್ಜು ಹೆಚ್ಚಾಗುತ್ತವೆ. ಆ ಋತುವಿನಲ್ಲಿ ಅವರ ದೇಹದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳೇ ಇದಕ್ಕೆ ಕಾರಣ.

ಕ್ಯಾಲೊರಿಗಳನ್ನು ಲೆಕ್ಕಿಸಿ ದೀರ್ಘಕಾಲದವರೆಗೆ ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದರಿಂದ, ದೇಹವು ಆಹಾರದ ಅಗತ್ಯವನ್ನು ಗ್ರಹಿಸಿಕೊಂಡು ದೇಹದಲ್ಲಿ ಹೆಚ್ಚಿನ ಕೊಬ್ಬನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಒಬ್ಬರ ದೇಹದಲ್ಲಿ ಹಾರ್ಮೋನ್ ಸ್ರವಿಸುವಿಕೆಯಲ್ಲಿನ ಏರುಪೇರುಗಳಿಂದಲೂ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸಬಹುದು.

ಹೊಟ್ಟೆಯ ಸುತ್ತ ಕೊಬ್ಬಿನ ಶೇಖರಣೆಯಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡವು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅನೇಕ ಜನರಿಗೆ ತಿಳಿದಿರುವುದಿಲ್ಲ. ಅಂದರೆ, ನೀವು ಒತ್ತಡಕ್ಕೆ ಒಳಗಾದಾಗ, ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಹೆಚ್ಚು ಸ್ರವಿಸುತ್ತದೆ.

ಆ ಹಾರ್ಮೋನ್ ಕೊಬ್ಬನ್ನು ಸೇರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಹಸಿವಿನ ಭಾವನೆಯನ್ನು ಪ್ರಚೋದಿಸಿ ಹೆಚ್ಚಿನ ಕ್ಯಾಲೋರಿ ಮತ್ತು ಹೆಚ್ಚಿನ ಸಕ್ಕರೆಯ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಕೆಲವು ಔಷಧಿಗಳು ಕೂಡ ತೂಕ ಹೆಚ್ಚಾಗಲು ಕಾರಣವಾಗಬಹುದು. ಇದು ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬನ್ನು ಹೆಚ್ಚಿಸಬಹುದು.

ಹೊಟ್ಟೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಇದು ಕಡಿಮೆಯಾಗದಿದ್ದರೆ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ನಿಮ್ಮ ವಿಚಾರದಲ್ಲಿ, ಹೊಟ್ಟೆಯ ಕೊಬ್ಬಿಗೆ ಕಾರಣವೇನು ಎಂಬುದನ್ನು ನೀವು ತಿಳಿದುಕೊಂಡು ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ತಕ್ಷಣವೇ ಪ್ರಾರಂಭಿಸಬೇಕು.

ನಿಮಗೆ ತಿಳಿದ ಪೌಷ್ಟಿಕ ಆಹಾರ ತಜ್ಞರನ್ನು ಸಂಪರ್ಕಿಸಿದಾಗ ಅವರು ನಿಮ್ಮನ್ನು ಕೂಲಂಕಷವಾಗಿ ಪರೀಕ್ಷಿಸಿ ನಿಮಗಾಗಿ ಆಹಾರ ಯೋಜನೆ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಸೂಚಿಸುತ್ತಾರೆ.

ಬೆಂಗಳೂರು

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಇಂದು ಮಾನ್ಯ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಾಗಿದೆ.

ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಹಾಗೂ “ಡೈನಾಮಿಕ್ ಲೀಡರ್” ಪತ್ರಿಕೆಯ ಸಂಪಾದಕ ಡಿ.ಸಿ.ಪ್ರಕಾಶ್ ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ,

“ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2023 (1) ಹಾಗೂ ವಇ 115 ಕೊಮಂಇ ೨೦೧೩ (2)ರ ಪ್ರಕಾರ ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ, ಅಧಿಕಾರ ದುರುಪಯೋಗ ಪಡಿಸಿಕೊಂಡು, ರಚಿತವಾಗದ ಆಶ್ರಯ ಸಮಿತಿಯ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳು

“ಕೊಳಗೇರಿ ಜನರ ಮನೆಗಳನ್ನು ಬೈರತಿ ಬಸವರಾಜ್ ಹಿಂಬಾಲಕರಿಗೆ ಅವರ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅನುಕೂಲಸ್ಥ ವರ್ಗದ ಜನರಿಗೆ ಹಂಚಿಕೆ ಮಾಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಂಚನೆಯಲ್ಲಿ ಭಾಗಿಯಾಗಿರುವ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದೆ” ಎಂದು ಹೇಳಿದ್ದಾರೆ.

ಬೈರತಿ ಬಸವರಾಜ್ ಅವರೊಂದಿಗೆ ಸೇರಿಕೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಜಂಟಿಯಾಗಿ ತಯಾರಿಸಿದ 768 ಫಲಾನುಭವಿಗಳ ಪಟ್ಟಿಯಲ್ಲಿರುವವರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡುತ್ತಿರುವುದನ್ನು ಕೂಡಲೆ ತಡೆಗಟ್ಟಿ, ಮಂಡಳಿಯ ನಿಯಮಗಳಂತೆ ನಿಜವಾದ ಘೋಷಿತ ಕೊಳಗೇರಿ ಬಡಜನರಿಗೆ ಸದರಿ ಮನೆಗಳು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಕೋರಲಾಗಿದೆ ಎಂದು ಡಿ.ಸಿ.ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು!

ಬೆಂಗಳೂರು

ಬೆಂಗಳೂರು: ವಸತಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ (Slum Board) ನೂತನ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರು ಇಂದು ಬೆಂಗಳೂರು ಸರ್ವಜ್ಞ ನಗರ ಕ್ಷೇತ್ರದ ಮಾರುತಿ ಸೇವಾ ನಗರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಸ್ಲಮ್ ಬೋರ್ಡ್ ವತಿಯಿಂದ ನಿರ್ಮಿಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಬಂದಿದ್ದಾರೆ.

ನೆನ್ನೆ ನಮ್ಮ ಡೈನಾಮಿಕ್ ಲೀಡರ್, “ಕೊಳಗೇರಿ ಮಂಡಳಿಯ ಕರ್ಮಕಾಂಡ-1” ಶೀರ್ಷಿಕೆಯಡಿ, ‘ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು! ಕಂಡುಕೊಳ್ಳದ ವಸತಿ ಸಚಿವ’ ಎಂಬ ತನಿಖಾ ಸುದ್ಧಿಯನ್ನು ಪ್ರಕಟಿಸಿತ್ತು.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು.! ಕಂಡುಕೊಳ್ಳದ ವಸತಿ ಸಚಿವರು.!!

ಡೈನಾಮಿಕ್ ಲೀಡರ್‌ ನಲ್ಲಿ ಪ್ರಕಟವಾದ ಸುದ್ಧಿಯಲ್ಲಿ, “ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ” ಎಂದು ವರದಿ ಮಾಡಿತ್ತು.

ಜೊತೆಯಲ್ಲೇ, “ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದೂ ಮನವಿ ಮಾಡಿತ್ತು.

ಈ ಹಿನ್ನಲೆಯಲ್ಲಿ, ಕೆ.ಆರ್.ಪುರಂ ವಿಧಾನಸಭಾ ಮತಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ, ಸ್ಲಮ್ ಬೋರ್ಡ್ ವತಿಯಿಂದ ನಿರ್ಮಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಮಂಡಳಿಯ ಅಧಿಕಾರಿಗಳೊಂದಿಗೆ ಬಂದಿರುವುದು ಸ್ವಾಗತಾರ್ಹ. ಅದೇ ವೇಳೆಯಲ್ಲಿ ಮಂಡಳಿಯ ಅಧಿಕಾರಿಗಳು ನಿಮ್ಮಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ; ಎಚ್ಚರದಿಂದ ಇರಲು ನಮ್ಮ ಮನವಿ. ಆದಷ್ಟು ಬೇಗೆ ನಮ್ಮ ಕೋರಿಕೆಯ ಮೇಲೆ ಕ್ರಮ ಕೈಗೊಂಡು ಕೊಳಗೇರಿ ಬಡಜನರಿಗೆ ನೆರವಾಗುತ್ತೀರಿ ಎಂದು ನಂಬಿದ್ದೇವೆ.

ಬೆಂಗಳೂರು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ರವರು ನಿನ್ನೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮುಂಬರುವ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಅನುದಾನ ಮೀಸಲಿರಿಸುವಂತೆ ಮನವಿ ಮಾಡಿದ್ದಾರೆ.

ಮುಖ್ಯವಾಗಿ ಆನೇಕಲ್ ತಾಲ್ಲೂಕಿನಲ್ಲಿ ಹಸಿರುಮನೆ ಹೂ ಬೆಳೆಗಾರರಿಗೆ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿರುವುದು ಗಮನಾರ್ಹ ವಿಷಯವಾಗಿದೆ.

ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಸತಿ ರಹಿತರಿಗೆ ಅನುಕೂಲ ಆಗುವಂತೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ವಸತಿ ಕಲ್ಪಿಸುವಂತೆ ಬಜೆಟ್‌ನಲ್ಲಿ ಅನುವು ಮಾಡಿಕೊಡಲು ಮನವಿ ಮಾಡಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ವಸತಿ ರಹಿತ ಬಡವರಿಗೆ ಮುಂದಿನ ದಿನಗಳಲ್ಲಿ ಮನೆಗಳು ಸಿಗುವ ಲಕ್ಷಣಗಳು ಕಂಡುಬರುತ್ತಿವೆ.

ಒಟ್ಟಾರೆಯಾಗಿ ಇವರ ಕ್ಷೇತ್ರದ ಅಡಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಮೂರು ಭಾರಿ ಆಯ್ಕೆಯಾಗಿದ್ದ ಶಾಸಕ ಎನ್.ಎ.ಹ್ಯಾರಿಸ್ ಅವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗುವ ನಿರೀಕ್ಷೆಯಿತ್ತು. ಆದರೆ ಕಾರಣಾಂತರಗಳಿಂದ ಆ ಸೌಭಾಗ್ಯ ಕೂಡಿಬರಲಿಲ್ಲ. ನಿಗಮ-ಮಂಡಳಿಗಳಲ್ಲಿ ಉನ್ನತ ಸ್ಥಾನ ಸಿಗುವ ನಿರೀಕ್ಷೆಯಿತ್ತು ಅದು ನೆರವೇರಿದೆ. ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹ್ಯಾರಿಸ್ ಅವರು ಪ್ರತ್ಯೇಕವಾಗಿ ಬೇಟಿಯಾಗಿ ಬಂದಿದ್ದು ಗಮನಾರ್ಹ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರಾಗಿ ನೇಮಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಸಚಿವ ಸಂಪುಟದಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಯಾವುದೇ ಸ್ಥಾನಮಾನ ನೀಡದೇ ಶಾಂತಿನಗರ ಕ್ಷೇತ್ರವನ್ನು ನಿರ್ಲಕ್ಷ್ಯೆ ಮಾಡಿಬಂದಿದ್ದ ಹಿನ್ನಲೆಯಲ್ಲಿ ಈಗಲಾದರೂ ಸಚಿವ ಸಂಪುಟ ದರ್ಜೆಗೆ ಸರಿಸಮಾನವಾಗಿ ಬಿಡಿಎ ಅಧ್ಯಕ್ಷ ಸ್ಥಾನ ನೀಡಿರುವುದು ಕ್ಷೇತ್ರದ ಜನರಲ್ಲಿ ಸಂತಸ ತಂದಿದೆ.   

ಬೆಂಗಳೂರು

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ಸರಹದ್ದಿನ ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಅಕ್ರಮ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕೆಲವು ವ್ಯಕ್ತಿಗಳು ಟರ್ಫ್ ಕ್ಲಬ್ ಪ್ರವಾಗಿರುವ ಲೀಗಲ್ ಬುಕ್ಕಿಗಳೆಂದು ಹೇಳಿಕೊಂಡು ಬೆಂಗಳೂರು ಟರ್ಫ್ ಕ್ಲಬ್ ಗೆ ಸಮನಾಂತರವಾಗಿ (ಪ್ಯಾರಲಲ್) ಸಾರ್ವಜನಿಕರು ಹಾಗೂ ಪಂಟರುಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ವಂಚಿಸಿರುತ್ತಾರೆ.

ಅಕ್ರಮ ರೇಸ್ ಬೆಟ್ಟಿಂಗ್ ಎಂಬ ಜೂಜಾಟ ನಡೆಸುತ್ತಿರುವುದು ಮತ್ತು ಕೆಲವು ಪರವಾನಗಿ ಪಡೆದ ಏಜೆಂಟುಗಳು ಸರ್ಕಾರದ ಆದೇಶಗಳನ್ನು ಸ್ಟಾಲ್‌ಗಳಲ್ಲಿ ಪ್ರಕಟಿಸದೇ ಸರಿಯಾಗಿ ಲೆಕ್ಕ ನಿರ್ವಹಣೆ ಮಾಡದೇ ಗಿರಾಕಿಗಳಿಗೆ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡದೇ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೋಸ ಮಾಡಿರುತ್ತಾರೆ.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ದಾಳಿ ನಡೆಸಿ, ಅಕ್ರಮ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 66 ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ 55 ಮೊಬೈಲ್ ಗಳು, ದಾಖಲಾತಿಗಳು ಹಾಗೂ ರೂ.3,45,78,140/- (ಮೂರು ಕೋಟಿ ನಲವತ್ತೈದು ಲಕ್ಷದ ಎಪ್ಪತ್ತೆಂಟು ಸಾವಿರದ ನೂರ ನಲವತ್ತು) ಹಣ ವಶಕ್ಕೆ ಪಡೆದುಕೊಂಡಿರುತ್ತಾರೆ.

ಈ ಕಾರ್ಯಚರಣೆಯಲ್ಲಿ 09 ವ್ಯಕ್ತಿಗಳು ತಲೆ ಮರೆಸಿಕೊಂಡಿರುತ್ತಾರೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ; ತನಿಖೆ ಮುಂದುವರಿಯುತ್ತಿದೆ.  

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸು ಇದೀಗ ಸಾಕಾರಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬೆಂಗಳೂರು ನಗರ ಜಿಲ್ಲೆಯಾದ್ಯಂತ ‘1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿಯಲ್ಲಿ ನಿರ್ಮಿಸಿ ಪೂರ್ಣಗೊಂಡಿರುವ ಬಡಾವಣೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಕೂಡಲೇ ನೊಂದಾಯಿಸಿ, ಸ್ವಂತ ಸೂರು ಹೊಂದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಎಕ್ಸ್’ ಪೇಜ್ ನಲ್ಲಿ ತಿಳಿಸಿದ್ದಾರೆ.

ಕೂಗೂರು ಸರ್ವೆ ನಂ.69, ಸಾದೇನಹಳ್ಳಿ ಸರ್ವೆ ನಂ.30, ಅಗ್ರಹಾರ ಪಾಳ್ಯ ಸರ್ವೆ ನಂ.30, ಚಿಕ್ಕನಹಳ್ಳಿ-ಕಾಮನಹಳ್ಳಿ ಸರ್ವೆ ನಂ.71 ಹಾಗೂ ಜೆ.ಭಂಗೀಪುರ ಸರ್ವೆ ನಂ.29ರಲ್ಲಿ 1 ಬಿ.ಹೆಚ್.ಕೆ ಮನೆಗಳು ಮತ್ತು ಗೂಳಿಮಂಗಲ ಸರ್ವೆ ನಂ.67ರಲ್ಲಿ 2 ಬಿ.ಹೆಚ್.ಕೆ ಮನೆಗಳು ಪೂರ್ಣಗೊಂಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: https://ashraya.karnataka.gov.in/

ಬೆಂಗಳೂರು

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ರಾಮಮೂರ್ತಿ ನಗರ ವ್ಯಾಪ್ತಿಯ ಕುವೆಂಪು ನಗರದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಎಂದಿನಂತೆ ಈ ವರ್ಷವೂ ಅದ್ದೂರಿಯಾಗಿ ಆಚರಿಸಲಾಯಿತು. ಅದೂ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಈ ವಿಶೇಷ ಸಂದರ್ಭದ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳೆಲ್ಲರೂ ಒಂದೆಡೆ ಸೇರಿ ಸಂಭ್ರಮಿಸಿ, ಸಿಹಿ ಹಂಚುವ ಮೂಲಕ ಸಾಂಸ್ಕೃತಿಕವಾಗಿ ಕೊಂಡಾಡಿದ್ದು ವಿಶೇಷವೆನಿಸಿತು.

ಕನ್ನಡ ಧ್ವಜದ ಸುತ್ತಲೂ ಮಕ್ಕಳೆಲ್ಲರೂ ನಿಂತು ದೇಶ ಭಕ್ತಿ ಗೀತೆಗಳನ್ನು ಮತ್ತು ನಾಡ ಗೀತೆಗಳನ್ನು ಮಧುರವಾದ ಧ್ವನಿಯಲ್ಲಿ ಹಾಡಿದ್ದು ಮನಸೆಳೆಯಿತು. ಕುವೆಂಪುನಗರ ಹೌಸ್ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯೊಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಬಡಾವಣೆಯ ನಿವಾಸಿಗಳೆಲ್ಲರೂ ಭಾಗವಹಿಸಿದ್ದರು.

ಇದನ್ನೂ ಓದಿ: ಜಾತಿವಾರು ಜನಗಣತಿ: “ಸುಳ್ಳುಗಳನ್ನು ಹರಡುವ ಬದಲು ಉತ್ತರಿಸಿ..” – ಅಮಿತ್ ಶಾ ಅವರನ್ನು ಪ್ರಶ್ನಿಸಿದ ತೇಜಸ್ವಿ ಯಾದವ್!