ಉತ್ತರ ಪ್ರದೇಶದಲ್ಲಿ ದಲಿತ ಯುವಕನ ಮೇಲೆ ಹಲ್ಲೆ; ಶೂ ನೆಕ್ಕುವಂತೆ ಮಾಡಿದ ವೀಡಿಯೊ ವೈರಲ್! » Dynamic Leader
October 11, 2024
ದೇಶ

ಉತ್ತರ ಪ್ರದೇಶದಲ್ಲಿ ದಲಿತ ಯುವಕನ ಮೇಲೆ ಹಲ್ಲೆ; ಶೂ ನೆಕ್ಕುವಂತೆ ಮಾಡಿದ ವೀಡಿಯೊ ವೈರಲ್!

ಉತ್ತರ ಪ್ರದೇಶ ರಾಜ್ಯದಲ್ಲಿ ಯುವಕನೊಬ್ಬನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಆತನ ನಾಲಿಗೆಯಿಂದ ಚಪ್ಪಲಿಯನ್ನು ನೆಕ್ಕುವಂತೆ ಮಾಡಿರುವ ಅಮಾನುಷ ಘಟನೆಯೊಂದು ಭಾರೀ ಆಘಾತವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಮರದ ಹಾಸಿಗೆಯ ಮೇಲೆ ಕುಳಿತು, ತನ್ನ ಕಾಲುಗಳನ್ನು ಚಾಚುತ್ತಾನೆ; ಹದಿಹರೆಯದ ಯುವಕ ಆತನ ಚಪ್ಪಲಿಯನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಛಗೊಳಿಸುವ ದೃಶ್ಯ ಕಂಡುಬರುತ್ತಿದೆ. ಅಲ್ಲದೆ, ಯುವಕ ಕಿವಿ ಹಿಡಿದು ತಾನು ಮಾಡಿದ್ದು ತಪ್ಪು ಎಂದು ಬಸ್ಕಿ ಹೊಡೆಯುತ್ತಾನೆ. ಅದೇ ರೀತಿ ಮತ್ತೊಂದು ವೀಡಿಯೊದಲ್ಲಿ ಆ ವ್ಯಕ್ತಿ ಯುವಕನ ಕೈಯನ್ನು ತಿರುಚಿ, ಕೆಳಗೆ ತಳ್ಳಿ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ.

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೊ ವೈರಲ್ ಆದ ನಂತರ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ತನಿಖೆಯಿಂದ ಆ ವ್ಯಕ್ತಿ ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್ ತೇಜಪಾಲಿ ಸಿಂಗ್ ಎಂಬುದು ಗೊತ್ತಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದ ರಾಜೇಂದ್ರ ಎಂಬುದು ತಿಳಿದುಬಂದಿದೆ.

ತರುವಾಯ ತೇಜಪಾಲಿ ಸಿಂಗ್ ಮೇಲೆ ಎಸ್‌ಸಿ.ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾಜೇಂದ್ರನ ಮಾವನ ಮನೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಈ ವಿಚಾರವಾಗಿ ಲೈನ್‌ಮ್ಯಾನ್ ತೇಜಪಾಲಿ ಸಿಂಗ್ ಜೋತೆ ವಾಗ್ವಾದ ಮಾಡಿದ ಕಾರಣಕ್ಕೆ ರಾಜೇಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Posts