ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dynamic Leader Magazine Archives » Dynamic Leader
October 5, 2024
Home Posts tagged Dynamic Leader Magazine
ದೇಶ

ವಿವಿಧ ಉತ್ಪನ್ನಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬಳಸುವ ಕೃತಕ ಸಿಹಿಕಾರಕಗಳು, ತೂಕವನ್ನು ಕಡಿಮೆ ಮಾಡದೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಸಕ್ಕರೆಗೆ ಪರ್ಯಾಯವಾಗಿ, ಡಯಟ್ ಸೋಡ, ಕಾಫಿ ಮುಂತಾದವುಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡಲಿಕ್ಕಾಗಿ ದಿನವೂ ಲಕ್ಷಾಂತರ ಜನರಿಂದ, ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತಿದೆ. ಆದರೆ ಇವು ಆರೋಗ್ಯಕರವೇ ಎಂಬುದರ ಬಗ್ಗೆ ಬಹಳ ಹಿಂದಿನಿಂದಲೂ ವಿವಾದಗಳು ನಡೆಯುತ್ತಲೇ ಇವೆ.

ಈ ವೇಳೆ ಎನ್‌ಎಸ್‌ಎಸ್ (NSS) ಎಂದು ಕರೆಯಲ್ಪಡುವ ಸಕ್ಕರೆ ರಹಿತ ಕೃತಕ ಸಿಹಿಕಾರಕಗಳನ್ನು ಬಳಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ‘ನಮ್ಮ ಬಳಿ ಇರುವ ಪುರಾವೆಗಳನ್ನು ಮೌಲ್ಯಮಾಪನ ಮಾಡಿದಾಗ, ಹಿರಿಯರು ಮತ್ತು ಮಕ್ಕಳ ಕೊಬ್ಬನ್ನು ಕರಗಿಸುವುದರಲ್ಲಿ ಕೃತಕ ಸಿಹಿಕಾರಕಗಳು ದೀರ್ಘ ಕಾಲದ ಫಲವನ್ನು ನೀಡುವುದಿಲ್ಲ. ದೀರ್ಘ ಕಾಲದಿಂದ ಇದನ್ನು ಬಳಸುವ ಹಿರಿಯರಿಗೆ ಮಧುಮೇಹ, ಹೃದಯ ಸಮಸ್ಯೆ, ಸಾವು ಸೇರಿದಂತೆ ಹೆಚ್ಚಿನ ಅಪಾಯಗಳನ್ನು ಏರ್ಪಡಿಸುವಂತಹ ಸಾಧ್ಯತೆಗಳೇ ಹೆಚ್ಚಾಗಿದ್ದು, ಇದರಿಂದ ಅಹಿತಕರ ಘಟನೆಗಳು ಸಂಭವಿಸಬಹುದು ಎಂಬ ಶಿಫಾರಸ್ಸನ್ನು ಮಾಡಲಾಗುತ್ತದೆ’ ಎಂದು ಅದರಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪೋಷಣೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ಅವರು, ‘ಕೃತಕ ಸಿಹಿಕಾರಕಗಳನ್ನು ಬಳಸುವುದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದಿಲ್ಲ. ಹಣ್ಣುಗಳು ಅಥವಾ ಸಿಹಿ ಅಲ್ಲದ ಆಹಾರ ಮತ್ತು ನೈಸರ್ಗಿಕವಾಗಿ ಸಕ್ಕರೆಗಳನ್ನು ಹೊಂದಿರುವ ಪಾನೀಯಗಳಂತಹ ಆಹಾರಗಳನ್ನು ಹಾಗೂ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಇತರ ಆಹಾರ ವಿಧಾನಗಳನ್ನು ಪರಿಗಣಿಸಬೇಕು.

ಕೃತಕ ಸಿಹಿಕಾರಕವು ಅತ್ಯಗತ್ಯ ಆಹಾರವಲ್ಲ. ಅದರಲ್ಲಿ ಪೌಷ್ಟಿಕಾಂಶವಿಲ್ಲ. ಆದ್ದರಿಂದ, ಜನರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಜೀವನದ ಆರಂಭದಿಂದಲೂ ಸಿಹಿ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಇದು ಅನ್ವಯಿಸುತ್ತದೆ’ ಎಂದು ಹೇಳಿದ್ದಾರೆ.

ಹೆಚ್ಚು ವ್ಯಾಪಕವಾಗಿ ಬಳಸುವ ಕೃತಕ ಸಿಹಿಕಾರಕಗಳಲ್ಲಿ Acesulfame K, Aspartame, Advantame, Cyclamates, Neotame, Saccharin, Sucralose, stevia ಮತ್ತು stevia derivatives ಮುಂತಾದವುಗಳು ಒಳಗೊಂಡಿರುತ್ತದೆ.

ದೇಶ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ತಿಂಗಳ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಮೇ 31 ರಂದು ರಾಹುಲ್ ಗಾಂಧಿ ಅಮೆರಿಕಕ್ಕೆ ತೆರಳುತ್ತಿದ್ದು 10 ದಿನಗಳ ಕಾಲ ಅಲ್ಲಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 4 ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯೊಂದರಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಸುಮಾರು 5000 ಅನಿವಾಸಿ ಭಾರತೀಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಲೋಕಸಭೆ ಸದಸ್ಯತ್ವ ಕಳೆದುಕೊಂಡ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ.

ನ್ಯೂಯಾರ್ಕ್ ಅಲ್ಲದೆ, ರಾಹುಲ್ ಗಾಂಧಿ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾಗೂ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ ಹಲವು ರಾಜಕೀಯ ಮುಖಂಡರು ಮತ್ತು ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಲಿದ್ದು, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ ರಾಹುಲ್ ಗಾಂಧಿ ಅವರು ಲಂಡನ್ ಗೆ ಭೇಟಿ ನೀಡಿದಾಗ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ ವಿವಾದವಾಗಿತ್ತು. ರಾಹುಲ್ ಗಾಂಧಿ ಲಂಡನ್‌ನಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ ಭಾರತೀಯ ಜನತಾ ಪಕ್ಷದ ನಾಯಕರು, ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಕೂಡ ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.

ಅಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಬೈಡನ್ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಆತಿಥ್ಯ ನೀಡಲು ವ್ಯವಸ್ಥೆ ಮಾಡಿದ್ದಾರೆ. ಪ್ರಧಾನಿ ಮೋದಿ ಜೂನ್ 22 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಸುದ್ದಿಯಾಗಿದೆ.

ದೇಶ

ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ದಬ್ಬಾಳಿಕೆ ನಡೆಯುತ್ತಿದೆ ಎಂದು ಅಮೆರಿಕ ವರದಿಯನ್ನು ಪ್ರಕಟಿಸಿದೆ.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಎಂಬ ಶೀರ್ಷಿಕೆಯಡಿ ಕಳೆದ ವರ್ಷದ ವಾರ್ಷಿಕ ವರದಿಯನ್ನು ನಿನ್ನೆ ಅಮೆರಿಕ ವಿದೇಶಾಂಗ ಸಚಿವಾಲಯವು ಈ ವರದಿಯನ್ನು ಬಿಡುಗಡೆ ಮಾಡಿತು. ವರದಿಯಲ್ಲಿ ಭಾರತದ ಕೆಲವು ರಾಜ್ಯಗಳಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಉಲ್ಲೇಖಿಸಿದೆ.

ಅಮೆರಿಕದ ಈ ಹೇಳಿಕೆ ಸಾಕಷ್ಟು ಕೋಲಾಹಲಕ್ಕೆ ಕಾರಣವಾದ ಹಿನ್ನಲೆಯಲ್ಲಿ, ಭಾರತವು ಅದನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಇದಲ್ಲದೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಸಿ, ‘ಸರಿಯಾದ ಮಾಹಿತಿ ಮತ್ತು ತಿಳುವಳಿಕೆಯ ಕೊರತೆಯಿಂದಾಗಿ ಅಮೆರಿಕ ಈ ಹೇಳಿಕೆಯನ್ನು ನೀಡಿದೆ’ ಎಂದು ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

“Religious freedom conditions in India are taking a drastic turn downward, with national and various state governments tolerating widespread harassment and violence against religious minorities. The BJP-led government enacted the Citizenship (Amendment) Act (CAA), which provides a fast track to Indian citizenship only for non-Muslim migrants from Afghanistan, Bangladesh, and Pakistan already residing in India. This potentially exposes millions of Muslims to detention, deportation and statelessness when the government completes its planned nationwide National Register of Citizens”. – USCIRF

ರಾಜಕೀಯ

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಹಗ್ಗಜಗ್ಗಾಟ ನಡುವೆ, ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸಂಜೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಸಂಜೆ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರವನ್ನು ನೀಡಿ, ಕರ್ನಾಟಕದಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರು ನಿರ್ಣಯವನ್ನು ಅಂಗೀಕರಿಸಿದ್ದರು. ನಿನ್ನೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರೆ, ಇಂದು ಬೆಳಗ್ಗೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.

ಸಾಂದರ್ಭಿಕ ಚಿತ್ರ

ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಶಾಂತಿನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಪುಟ್ಟ ಕ್ಷೇತ್ರವಾಗಿದೆ. ಅದು ಸರ್ವ ಜನಾಂಗದ ಶಾಂತಿಯ ತೋಟವೂ ಹೌದು. ಈ ಕ್ಷೇತ್ರವನ್ನು ಮೇಲ್ನೋಟಕ್ಕೆ ನೋಡಿದರೆ ನಮಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ, ಮಾರ್ಕ್ಸ್ ರಸ್ತೆ, ಲವಲ್ಲಿ ರಸ್ತೆ, ಚರ್ಚ್ ಸ್ಟ್ರೀಟ್, ವಿಠಲ್ ಮಲ್ಯ ರಸ್ತೆ, ಕಸ್ತೂರಿಬಾಯ್ ರಸ್ತೆ ಮುಂತಾದ ವಿಶ್ವಖ್ಯಾತಿಯ ಐಷಾರಾಮಿ ರಸ್ತೆಗಳು, ಅಲ್ಲಿನ ಮಾಲ್‌ಗಳು, ಅಂತರಾಷ್ಟ್ರೀಯ ಬ್ರಾಂಡೆಡ್ ಶೋರೂಂಗಳೆಲ್ಲವೂ ಕಾಣಸಿಗುತ್ತವೆ.

ಯೂಟಿಲಿಟಿ ಬಿಲ್ಡಿಂಗ್, ಮೇಯೋಹಾಲ್, ಮಿತ್ತಲ್ ಟವರ್, ಕಾವೇರಿ ಎಂಪೋರಿಯಂ, ಬಾರ್ಟನ್ ಸೆಂಟರ್, ಹಿಗ್ಗಿನ್ ಬಾಥಮ್ಸ್, ಬೈಬಲ್ ಸೊಸೈಟಿ, ಮಲ್ಯ ಟವರ್ಸ್, ವಾರ್ ಮೆಮೋರಿಯಲ್, ಗರುಡ ಮಾಲ್, ಲೈಫ್‌ಸ್ಟೈಲ್ ಹೀಗೆ ಹೇಳುತ್ತಾ ಹೋಗಬಹುದು. ಆದರೆ, ಇದೆಲ್ಲವನ್ನು ನೋಡಿ, ಕ್ಷೇತ್ರವನ್ನು ಐಷಾರಾಮಿ-ಶ್ರೀಮಂತ ಕ್ಷೇತ್ರವೆಂದು ಭಾವಿಸಿಕೊಂಡರೆ ಅದು ಮೂರ್ಖತನ.

ಮೇಲಿನ ಎಲ್ಲವೂ ವ್ಯಾಪಾರ ವಹಿವಾಟು ನಡೆಯುವ ಸ್ಥಳ. ಇದಕ್ಕೂ ಕ್ಷೇತ್ರದ ಜನತೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಇಲ್ಲಿರುವ 90% ಜನ ಯಾರೂ ಕೂಡ ಕ್ಷೇತ್ರದ ಮತದಾರರಲ್ಲ. ಇಲ್ಲಿನದು ಜಾತ್ರೆಯ ಸಂಸ್ಕೃತಿ. ಇದನ್ನು ನೋಡಿ ಕ್ಷೇತ್ರವನ್ನು ತೂಕ ಮಾಡಬಾರದು. ಮತ್ತು ಕ್ಷೇತ್ರವನ್ನು ಸ್ವಲ್ಪ ಆಳವಾಗಿ ಇಣುಕಿ ನೋಡಿದರೆ, ನಮಗೆ ಗೋಚರಿಸುವುದೆಲ್ಲವೂ ಬರೀ ಆಶ್ಚರ್ಯ ಮತ್ತು ಅಘಾತವೇ ಆಗಿರುತ್ತದೆ.

ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದ ಕೊರೆತೆಯಿರುವ ಶ್ರೀ.ಎನ್. ಲಕ್ಷ್ಮಣರಾವ್ ನಗರ (ಎಲ್.ಆರ್.ನಗರ), ಅಂಬೇಡ್ಕರ್ ನಗರ, ಸಮತಾನಗರ, ಸೊನ್ನೇನಹಳ್ಳಿ, ಮಾಯಾಬಜಾರ್, ತಿಮ್ಮರಾಯಪ್ಪ ಗಾರ್ಡನ್, ವಿನಾಯಕ ನಗರ, ಇಸ್ರೋ ಸ್ಲಂ, ಹಟ್ಟಿಂಗ್ ಕಾಲೋನಿ ಹಾಗೂ ಶಕ್ತಿವೇಲ್ ನಗರ ಮುಂತಾದ 10 ಕೊಳಗೇರಿ ಪ್ರದೇಶಗಳು ಇನ್ನು ಕೂಡ ಮೂಲಭೂತ ಸೌಲಭ್ಯಕ್ಕಾಗಿ ಹಾತೊರೆಯುತ್ತಿದೆ.

ನೀಲಸಂದ್ರ, ರೋಸ್ ಗಾರ್ಡನ್, ಅನೇಪಾಳ್ಯ, ಶಾಂತಿನಗರ, ಅಶೋಕ್ ನಗರ, ಗೌತಮಪುರಂ, ದೀನಬಂಧು ನಗರ, ರುದ್ರಪ್ಪ ಗಾರ್ಡನ್, ಜಯರಾಜ್ ನಗರ, ಆಸ್ಟೀನ್ ಟೌನ್ ಸಿಮೆಂಟ್ ಲೇನ್, ಸಿದ್ಧಾರ್ಥನಗರ, ಬಿಡಿಎ ಕ್ವಾಟ್ರಸ್, ವನ್ನಾರಪೇಟೆ ಮುಂತಾದ ಪ್ರದೇಶಗಳು ಇನ್ನೂ ಕೂಡ ಯಾವ ಅಭಿವೃದ್ಧಿಯೂ ಕಾಣದೆ 5 ದಶಕಗಳಿಂದ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಕ್ಷೇತ್ರದಲ್ಲಿ ಒಂದು ಒಳ್ಳೆಯ ಸರ್ಕಾರಿ ಶಾಲೆ – ಕಾಲೇಜುಗಳು ಇಲ್ಲ. ಸುಸುಜ್ಜಿತವಾದ ಸರ್ಕಾರಿ ಆಸ್ಪತ್ರೆಗಳು ಇಲ್ಲ. ಸಮುದಾಯ ಭವನಗಳಿಲ್ಲ. ಇದ್ದ ಒಂದೆರಡು ಲೈಬ್ರರಿಗಳು ಕೂಡ ಕಣ್ಮರೆಯಾಗುತ್ತಿವೆ. ಆಸ್ಟೀನ್ ಟೌನ್ ಬಿಡಿಎ ಕಾಂಪ್ಲೆಕ್ಸ್, ಅಸ್ಟೀನ್ ಟೌನ್ ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಹಾಗೂ ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್ ಎಲ್ಲವೂ ನಿರ್ವಹಣೆಯಿಲ್ಲದೆ ಅವಸಾನದ ಸ್ಥಿತಿಯಲ್ಲಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರವು ಈ ರೀತಿ ಹದೆಗೆಡಲು ಈ ಹಿಂದೆ ಇದ್ದ ಸರ್ಕಾರಗಳು ಮತ್ತು ನಿದ್ರಾವಸ್ಥೆಯಲ್ಲಿರುವ ಬಿಬಿಎಂಪಿಯೇ ಕಾರಣ. ಅದುಮಾತ್ರವಲ್ಲ, ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗುವ ಶಾಸಕರು ಯಾರಿಗೂ ಇಲ್ಲಿಯವರೆಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡದೇ ನಿರಂತರವಾಗಿ ವಂಚಿಸಲಾಗುತ್ತಿದೆ ಇದು ಮತ್ತೊಂದು ಕಾರಣ. 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ರಚನೆಯಾದ ಬಿಜೆಪಿ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ಕೊಡದೇ ವಂಚಿಸಿದ್ದು ಕ್ಷೇತ್ರ ಹದೆಗೆಡಲು ಇದುವೇ ಮೂಲ ಕಾರಣವಾಯಿತು. 

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯವು ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಖಂಡಿದ್ದು ನಿಜ. ತದನಂತರ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಒಂದು ವರ್ಷವಷ್ಟೆ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸವೂ ನಡೆಯಲಿಲ್ಲ.

ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಮತ್ತು ಅವರ ನಂತರ ಬಂದ ಬಸವರಾಜ ಬೊಮ್ಮಾಯ್ ಸರ್ಕಾರ ಈ ಕ್ಷೇತ್ರಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಏನು ಮಾಡಿದೆ ಎಂಬುದನ್ನು ಶಾಸಕ ಎನ್.ಎ.ಹ್ಯಾರಿಸ್ ನವರೇ ಬಂದು ಹೇಳಬೇಕು ಎಂದೇನಿಲ್ಲ. ಅದು ಈ ರಾಜ್ಯದ ಪ್ರತಿಯೊಬ್ಬರಿಗೂ ತಿಳಿದ ವಿಚಾರ.

ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೇ ಇರುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡದಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾದವು. ಅಲ್ಪ ಸಂಖ್ಯಾತ ಸಮುದಾಯದ ಎನ್.ಎ.ಹ್ಯಾರಿಸ್ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ದಲಿತರು ಬಹುಸಂಖ್ಯಾತರಾಗಿದ್ದಾರೆ. ಹಿಂದುಳಿದ ವರ್ಗಗಳ ಮತಗಳು ಇಲ್ಲಿ ನಿರ್ಣಾಯಕವಾಗಿದೆ.

ಶಾಸಕ ಎನ್.ಎ.ಹ್ಯಾರಿಸ್ ಮೇಲೆ ನಂಬಿಕೆಯಿಟ್ಟು ಕ್ಷೇತ್ರದ ಜನ ಮತ್ತೊಮ್ಮೆ (4ನೇ ಬಾರಿಗೆ) ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಕಾರಣ, ಅವರಿಂದ ಕ್ಷೇತ್ರಕ್ಕೆ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆಯಿಂದಲೇ. ಜನರ ಆಶಯ ಈ ಬಾರಿ ನೆರವೇರಬೇಕು. ಕ್ಷೇತ್ರದ ಪ್ರತಿಯೊಂದು ಪ್ರದೇಶವೂ ಅಭಿವೃದ್ಧಿಯನ್ನು ಕಾಣಬೇಕು. ಅದಕ್ಕೆ ಅವರಿಗೆ ಹೆಚ್ಚಿನ ಅಧಿಕಾರ ಶಕ್ತಿಯನ್ನು ತುಂಬಬೇಕು. ಕ್ಷೇತ್ರದ ಮತದಾರರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಅದು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಾರದು.

ಕಾಂಗ್ರೆಸ್ ಪಕ್ಷವು ಜನರ ಬಳಿ ಮುಂದಿಟ್ಟ 1) ಗೃಹ ಜ್ಯೋತಿ (200 ಯೂನಿಟ್ ವಿದ್ಯುತ್ ಉಚಿತ), 2) ಗೃಹಲಕ್ಷ್ಮಿ (2000 ಪ್ರತಿ ಮನೆ ಯಜಮಾನಿಗೆ ಖಚಿತ), 3) ಅನ್ನಭಾಗ್ಯ (ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನಿಶ್ಚಿತ), 4) ಯುವ ನಿಧಿ (ನಿರುದ್ಯೋಗ ಭತ್ಯೆ ರೂ.3000 ಪದವೀಧರರಿಗೆ ರೂ.1500 ಡಿಫ್ಲೋಮ ಪದವೀಧರರಿಗೆ) ಮುಂತಾದ ಗ್ಯಾರೆಂಟಿಗಳು ಖಂಡಿತವಾಗಿ ಜನರಿಗೆ ಸಿಗುತ್ತವೆ ಎಂಬ ಬರವಸೆ ಇದೆ. ಆದರೆ, ಅದುಮಾತ್ರ ಸಾಲದು. ನಮ್ಮ ಬಡಾವಣೆ ಮತ್ತು ನಮ್ಮ ಸುತ್ತಮುತ್ತ ಇರುವ ಪ್ರದೇಶಗಳೆಲ್ಲವೂ ಕೂಡ ಇತರರಂತೆ ಅಭಿವೃದ್ಧಿ ಕಾಣಬೇಕು.

ಅತಿ ಹಿಂದುಳಿದ ಅಹಿಂದ ಕ್ಷೇತ್ರವಾದ ಶಾಂತಿನಗರ ವಿಧಾನಸಭಾ ಕೇತ್ರವನ್ನು ಇಷ್ಟು ವರ್ಷಗಳು ಕಡೆಗಣಿಸಲಾಗಿತ್ತು; ಅದು ಇನ್ನು ಮುಂದುವರಿಯುವುದು ಬೇಡ. ಇತರೆ ಕ್ಷೇತ್ರಗಳಂತೆ ಶಾಂತಿನಗರವೂ ಅಭಿವೃದ್ಧಿಯನ್ನು ಕಾಣಬೇಕಾದರೆ ಖಂಡಿತ ಈ ಬಾರಿ ಎನ್.ಎ.ಹ್ಯಾರಿಸ್ ಸಚಿವರಾಗಬೇಕು. ಅಹಿಂದ ವರ್ಗದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದನ್ನು ಖಂಡಿತ ನೆರೆವೇರಿಸಿ ಕೋಡುತ್ತರೆ ಎಂದು ಕ್ಷೇತ್ರದ ಜನರು ನಂಬಿದ್ದಾರೆ.

ಒಂದು ವೇಳೆ, ಅಕಸ್ಮಾತ್ ಎನ್.ಎ.ಹ್ಯಾರಿಸ್ ಸಚಿವರಾಗುವುದು ಈ ಬಾರಿ ಕೈತಪ್ಪಿದರೆ, ಕ್ಷೇತ್ರದ ಒಳಿತಿಗಾಗಿ ಅವರಿಗೆ ಸಚಿವ ಸ್ಥಾನ ಸಿಗುವವರೆಗೂ ಜನಶಕ್ತಿ ವೇದಿಕೆಯ ನೇತೃತ್ವದಲ್ಲಿ ನಿರಂತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜನಶಕ್ತಿ ವೇದಿಕೆ ಎಚ್ಚರಿಕೆಯನ್ನು ಕೊಟ್ಟಿದೆ.

ಬೆಂಗಳೂರು

ಡಿ.ಸಿ.ಪ್ರಕಾಶ್

ತಿರುಮಂಗಲಂ: ತಮಿಳುನಾಡಿನ ತಿರುಮಂಗಲಂ ನಗರ ಪುರಸಭೆಯು ಸಾರ್ವಜನಿಕರಿಂದ ಸಂಗ್ರಹಿಸುವ ತಾಜ್ಯವನ್ನು ವಿಂಗಡಣೆ ಮಾಡಿ ಕೊಳೆತ ಹಸಿ ತ್ಯಾಜ್ಯದಿಂದ ನೈಸರ್ಗಿಕ ಗೊಬ್ಬರವನ್ನು ತಯಾರಿಸಿ ರೈತರಿಗೆ ಉಚಿತವಾಗಿ ವಿತರಿಸುತ್ತಿರುವುದು ಸುದ್ದಿಯಾಗಿದೆ.

ತಿರುಮಂಗಲಂ ಪುರಸಭೆಯಲ್ಲಿ ಪ್ರತಿದಿನ 12 ಮೆಟ್ರಿಕ್ ಟನ್ ಕಸವನ್ನು ಸ್ವಚ್ಚತಾ ಕಾರ್ಯಕರ್ತರಿಂದ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಲಾದ ಕಸವನ್ನು ಸಂಗ್ರಹ ಕೇಂದ್ರಕ್ಕೆ ತಂದು, ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವೆಂದು ಇಬ್ಬಾಗವಾಗಿ ವಿಂಗಡಿಸಲಾಗುತ್ತದೆ. ನಂತರ ಸಂಗ್ರಹ ಕೇಂದ್ರದಲ್ಲಿರುವ ಗ್ರೈಂಡಿಂಗ್ ಯಂತ್ರಗಳ ಮೂಲಕ ಸಣ್ಣ ಸಣ್ಣ ತುಂಡುಗಳಾಗಿ ಪುಡಿಮಾಡಲಾಗುತ್ತದೆ.

ನಂತರ ಈ ಕೇಂದ್ರದಲ್ಲಿರುವ ತೊಟ್ಟಿಗಳಲ್ಲಿ ಇಎಂ ದ್ರಾವಣವನ್ನು (ಸಲ್ಯೂಷನ್) ಬಳಸಿ 21 ದಿನಗಳ ಕಾಲ ಕೊಳೆಯಲು ಬಿಡಲಾಗುತ್ತದೆ. ನಂತರ ಅವುಗಳನ್ನು ತೊಟ್ಟಿಯಿಂದ ಹೊರತೆಗೆದು ಮತ್ತೆ 24 ದಿನಗಳವರೆಗೆ ಒಣಗಿಸಿ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಈ ನೈಸರ್ಗಿಕ ಗೊಬ್ಬರಗಳನ್ನು ಮನೆಯಲ್ಲಿ ಬೆಳೆಸುವ ಗಿಡಗಳು, ಬಳ್ಳಿಗಳು ಮತ್ತು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ನೈಸರ್ಗಿಕ ಗೊಬ್ಬರ ಬೇಕಾದವರು ನಗರಸಭೆಯ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬಹುದು ಎಂದೂ ಪ್ರಕಟಣೆಯನ್ನೂ ನೀಡಲಾಗಿದೆ. ನಗರಸಭೆ ಮೂಲಕ ದೊರೆಯುವ ನೈಸರ್ಗಿಕ ಗೊಬ್ಬರವನ್ನು ಪಡೆಯಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಇದಲ್ಲದೇ ಒಣ ತ್ಯಾಜ್ಯಗಳಾದ ರಟ್ಟು, ಹಾಲಿನ ಪ್ಯಾಕೆಟ್, ಪ್ಲಾಸ್ಟಿಕ್ ಕವರ್ ಇತ್ಯಾದಿಗಳನ್ನು ಸ್ವಚ್ಛತಾ ಕಾರ್ಮಿಕರೇ ತೆಗೆದುಕೊಳ್ಳುತ್ತಾರೆ. ಉಳಿದ ತ್ಯಾಜ್ಯಗಳಾದ ರಬ್ಬರ್, ಟೈರ್ ಮತ್ತು ಹಳೆಯ ಶೂಗಳನ್ನು ತಿರುಮಂಗಲಂ ಪುರಸಭೆಯ ಮೂಲಕ ಸಿಮೆಂಟ್ ಕಂಪೆನಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಹಸಿ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುವ ತಂತ್ರಗಾರಿಕೆ ನಮಗೆ ತಿಳಿದಿದ್ದರೂ ನಾವು ಆ ಪ್ರಯತ್ನಕ್ಕೆ ಕೈಹಾಕಲಿಲ್ಲ ಎಂದು ಭಾವಿಸುತ್ತೇನೆ. ನಾವು ಯಾಕೆ ಇಂತಹ ಪ್ರಯತ್ನವನ್ನು ಮಾಡಬಾರದು ಎಂಬುದು ನನ್ನ ಪ್ರಶ್ನೆಯಾಗಿದೆ.

ಬೆಂಗಳೂರು ನಗರದಲ್ಲಿ ಸಂಗ್ರಹಿಸಲಾಗುವ ಹಸಿ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಿ ಹಂಚಿಕೆ ಮಾಡಿದರೆ, ನಮ್ಮ ಅಕ್ಕಪಕ್ಕದಲ್ಲಿರುವ ಎಲ್ಲಾ ಜಿಲ್ಲೆಗಳಿಗೂ ಉಚಿತವಾಗಿ ನೈಸರ್ಗಿಕ ಗೊಬ್ಬರವನ್ನು ಹಂಚಿಕೆಮಾಡಬಹುದು ಅಲ್ಲವೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಮ್ಮ ಸುತ್ತಮುತ್ತ ಇರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಇದರ ಬಗ್ಗೆ ಯೋಚಿಸಬೇಕು.

ರಾಜಕೀಯ

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ದಿಢೀರ್ ರದ್ದಾಗಿದೆ. “135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಯಾವ ಶಾಸಕರೂ ಇಲ್ಲ. ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದೇನೆ; ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಶಾಸಕರಿಂದ ಬಹುಮತ ಬಂದರೆ, ಅವರಿಗೆ ಶುಭ ಹಾರೈಸುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಸಂದರ್ಶನ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿಪಟ್ಟು ಹಿಡಿದಿರುವುದರಿಂದ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್  ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿ ತಲುಪಿದ್ದು, ಇಂದು ರಾತ್ರಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ದೆಹಲಿಗೆ ತೆರಳಬೇಕಿತ್ತು. ಸಂಜೆ 7-30ಕ್ಕೆ ಕೆಐಎಬಿಯಿಂದ ದೆಹಲಿಗೆ ತಲುಪಲು ಏರ್ ಇಂಡಿಯಾ ವಿಮಾನದ ಟಿಕೆಟ್ ಕೂಡಾ ಬುಕ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಈ ಕುರಿತು ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ನನ್ನ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು” ಎಂದರು.

ನನಗೆ ಸಮಯ ಪ್ರಜ್ಞೆ ಇದೆ. ಹೋರಾಟದ ಕಿಚ್ಚು ಇದೆ. ಹೋರಾಟದಲ್ಲಿ ಯಶಸ್ವು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಪೂಜೆ ಪುನಸ್ಕಾರ, ಹುಟ್ಟುಹಬ್ಬ ಆಚರಣೆ ಬಳಿಕ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದರು.

135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಶಾಸಕರಿಲ್ಲ, ಯಾವುದೇ ನಂಬರ್ ಇಲ್ಲ, ಯಾರನ್ನೂ ದೆಹಲಿಗೆ ಕರೆದೊಯ್ಯಲ್ಲ ಅಂತಾ ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರ ತಂತ್ರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ತಮ್ಮ ಶಿಷ್ಯನಿಂದಲೇ ಹೀನಾಯವಾಗಿ ಸೋಲು ಕಂಡಿದ್ದು, ಬಿಜೆಪಿ ಪಾಳಯಕ್ಕೆ ದೊಡ್ಡ ಶಾಕ್ ನೀಡಿದೆ.

ಕರ್ನಾಟಕದಲ್ಲಿ ಕಳೆದ 10 ರಂದು ವಿಧಾನಸಭೆ ಚುನಾವಣೆ ಮುಗಿದಿದ್ದು, ನಿನ್ನೆ ಮತ ಎಣಿಕೆ ನಡೆಸಲಾಯಿತು. ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ತಮ್ಮ ಶಿಷ್ಯನ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದು ಬಿಜೆಪಿ ವರಿಷ್ಠರಿಗೆ ಶಾಕ್ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ.ಟಿ.ರವಿ, ಬಿಜೆಪಿ ಮತ್ತು ಸಂಘಪರಿವಾರದ ಜೊತೆ ಬಾಲ್ಯದಿಂದಲೂ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿ ಹಂತಹಂತವಾಗಿ ಬೆಳೆದ ಸಿ.ಟಿ.ರವಿ 1999ರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಗೀರ್ ಅಹಮದ್ ವಿರುದ್ಧ ಸ್ಪರ್ಧಿಸಿ 982 ಮತಗಳ ಅಂತರದಿಂದ ಸೋತಿದ್ದರು. ನಂತರ 2004ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸಗೀರ್ ಅಹಮದ್ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದರು.

ನಂತರ ಚಿಕ್ಕಮಗಳೂರಿನಲ್ಲಿ ನಾಲ್ಕು ಬಾರಿ ಗೆದ್ದಿದ್ದ ಸಿ.ಟಿ.ರವಿ. ಆ ಪ್ರದೇಶದಲ್ಲಿ ಬಿಜೆಪಿಯ ಅನಿವಾರ್ಯ ನಾಯಕರಾಗಿ ಬೆಳೆದರು. ಎರಡು ಬಾರಿ ಸಚಿವರು, ತಮಿಳುನಾಡು ಚುನಾವಣಾ ಉಸ್ತುವಾರಿ, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದಲ್ಲದೇ ಪ್ರತಿಪಕ್ಷಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದು, ‘ಸಿದ್ದರಾಮಯ್ಯ ಹಿಂದೂ ವಿರೋಧಿ’ ಎಂದು ಪ್ರಚಾರ ಮಾಡುವುದು, ಹಿಂದುತ್ವ ಪರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸಿ.ಟಿ.ರವಿಯ ಕಾಯಕವಾಗಿತ್ತು.

‘ಬಿಜೆಪಿಯ ಮುಂದಿನ ತಲೆಮಾರುಗಳಿಗೆ ನಾನೇ ಸೀನಿಯರ್’ ಎಂದು ಬೀಗುತ್ತಿದ್ದ ಸಿಟಿ ರವಿ, ಕರ್ನಾಟಕ ಚುನಾವಣೆಯಲ್ಲಿ ಈ ಬಾರಿ ಶಿಷ್ಯನ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದಾರೆ. ಹೆಚ್.ಡಿ.ತಮ್ಮಯ್ಯ ಈ ಹಿಂದೆ ಸಿ.ಟಿ.ರವಿಯ ಕಾರ್ಯದರ್ಶಿಯಾಗಿ ಮತ್ತು ಬಿಜೆಪಿಯ ಜಿಲ್ಲಾ ಉಸ್ತುವಾರಿಯಾಗಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ ಇವರು, ರವಿ ಮತ್ತು ಬಿಜೆಪಿ ವಿರುದ್ಧದ ಅಸಮಾಧಾನದಿಂದ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಕ್ಷೇತ್ರದಲ್ಲಿ ಸಿ.ಟಿ.ರವಿಯಷ್ಟು ಪ್ರಭಾವ ತಮ್ಮಯ್ಯ ಅವರಿಗೂ ಇದ್ದಿದ್ದರಿಂದ ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ನ ಚುನಾವಣಾ ‘ವಾರ್ ರೂಂ’ ಹಾಗೂ ವರಿಷ್ಠರು ಸಿ.ಟಿ.ರವಿಯ ವಿರುದ್ಧ ತಮ್ಮಯ್ಯ ಅವರನ್ನು ಕಣಕ್ಕಿಳಿಸಿದರು. ಸಿ.ಟಿ.ರವಿಯ ಪ್ರಭಾವದ ಮುಂದೆ ತಮ್ಮಯ್ಯನವರು ಹೀನಾಯ ಸೋಲನ್ನು ಅನುಭವಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗರಿಗೆ ತಮ್ಮಯ್ಯನ ಗೆಲುವು ಅಘಾತವನ್ನು ನೀಡಿತು.

ಮೇಲಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಣತಂತ್ರ ರೂಪಿಸಿ ಮತ ಸಂಗ್ರಹಣೆ, ಸಾರ್ವಜನಿಕ ಸಭೆ, ತಮ್ಮಯ್ಯನವರ ಪರ ಕಾಂಗ್ರೆಸ್ ನಾಯಕರು ನಡೆಸಿದ ಪ್ರಚಾರದಂತಹ ಹಲವು ಕಾರ್ಯಗಳು ತಮ್ಮಯ್ಯನವರಿಗೆ ಅನುಕೂಲವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿತು. ಇದರಿಂದ ತಮ್ಮಯ್ಯನವರು ಒಟ್ಟು 85,054 ಮತಗಳನ್ನು ಪಡೆದು 5,926 ಮತಗಳ ಅಂತರದಿಂದ ಸಿ.ಟಿ.ರವಿಯನ್ನು ಸೋಲಿಸಿ ಶಾಸಕರಾಗಿದ್ದಾರೆ. ಸಿ.ಟಿ.ರವಿ ತಮ್ಮ ಶಿಷ್ಯನಿಂದಲೇ ಸೋಲನುಭವಿಸಿರುವುದು ಬಿಜೆಪಿ ಪಾಳಯಕ್ಕೆ ದೊಡ್ದ ಶಾಕ್ ನೀಡಿದೆ.

ರಾಜಕೀಯ

ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಮುಸ್ಲಿಮ್ ಮತದಾರರ ಪಾತ್ರವನ್ನು ಗುರುತಿಸಿ ಸೂಕ್ತ ಸ್ಥಾನ – ಮಾನಗಳನ್ನು ನೀಡಲು ಕರ್ನಾಟಕ ಮುಸ್ಲಿಮ್ ಯುನಿಟಿ ಒತ್ತಾಯ.

ಈ ಭಾರಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬಹಳ ಮುತುವರ್ಜಿಯಿಂದ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಕಾಂಗ್ರೆಸ್ಸಿನೊಂದಿಗೆ ಮುಸ್ಲಿಂ ಸಮುದಾಯಕ್ಕೆ ಬಹಳಷ್ಟು ನಿರೀಕ್ಷೆಗಳಿವೆ

2ಬಿ ಮೀಸಲಾತಿ ಪರಿಹಾರ ಮುಂತಾದ ಹಲವು ಬೇಡಿಕೆಗಳು ಇವೆ. ಇದೆಲ್ಲವನ್ನೂ ಪರಿಹರಿಸುವುದು ಕಾಂಗ್ರೆಸ್ಸಿನ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ದಲಿತರ ನಂತರ ಎರಡನೇ ಅತಿ ದೊಡ್ಡ ಮತದಾರರನ್ನು ಹೊಂದಿರುವ ಮುಸ್ಲಿಮ್ ಸಮುದಾಯಕ್ಕೆ ಒಂದು ಪಕ್ಷವನ್ನು ಜಯಿಸಲಿಕ್ಕೂ ಅಥವಾ ಸೋಲಿಸಲಿಕ್ಕೂ ಸಾಧ್ಯವೆಂಬ ಸತ್ಯ ಈ ಚುನಾವಣೆಯಲ್ಲಿ ಸಾಬೀತಾಗಿದೆ. ಕರ್ನಾಟಕದ ಮುಸ್ಲಿಮ್ ಸಮುದಾಯವು ಇದೀಗ ರಾಜಕೀಯವಾಗಿ ಅತ್ಯಂತ ಪ್ರಬುದ್ಧವಾಗಿದೆ. ಆದ್ದರಿಂದ ಈ ಸತ್ಯವನ್ನು ಅರಿತು ಕಾಂಗ್ರೆಸ್ ಪಕ್ಷ / ಸರ್ಕಾರ ಮುಸ್ಲಿಮ್ ಸಮುದಾಯದ ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಈಡೇರಿಸುವ ಯೋಜನೆಗಳನ್ನು ಮಾಡಿದರೆ ಮಾತ್ರ ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜಯಗಳಿಸಬಹುದು. ಕಾಂಗ್ರೆಸ್ಸಿನ ನೇತಾರರು ಇದರ ಬಗ್ಗೆ ವಿಶೇಷವಾಗಿ ಚಿಂತಿಸಬೇಕಾಗಿದೆ.

ಕರ್ನಾಟಕದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಕಳೆದ ನಾಲ್ಕು ವರ್ಷದಲ್ಲಿ  ಸಾಕಷ್ಟು ನೋವು, ಅನ್ಯಾಯ, ಹಿಂಸೆ ಅನುಭವಿಸಿರುತ್ತಾರೆ. ಮಹಿಳೆಯರ ಶಿಕ್ಷಣದ ವಿಚಾರ (ಹಿಜಾಬ್) ದಲ್ಲಿ ಗೊಂದಲವನ್ನು ಸೃಷ್ಠಿ ಮಾಡಲಾಗಿತ್ತು. ದೇವಸ್ಥಾನ ಪ್ರದೇಶದಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಸಂಘಿಗಳಿಂದ ತಾಕೀತು ಮಾಡಲಾಗಿತ್ತು. ಅನಗತ್ಯವಾಗಿ ಗೋವು ಸಂರಕ್ಷಕರ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ ಮಾಡಲಾಗಿತ್ತು. ಲವ್‌ ಜೀಹಾದ್‌ ಹೆಸರಲ್ಲಿ ಮುಸ್ಲಿಮ್ ಯುವಕ/ಯುವತಿಯರ ಮೇಲೆ ವಿನಾ ಕಾರಣ ದೌರ್ಜನ್ಯ ಮಾಡಲಾಗುತಿತ್ತು. 4% ಮೀಸಲಾತಿಯನ್ನು ರದ್ದುಗೊಳಿಸಿ, ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮರುಹಂಚಿಕೆ ಮಾಡಿ, ಮುಸ್ಲಿಮರನ್ನು ಇ ಡಬ್ಲ್ಯೂಎಸ್ ಕೋಟಾಗೆ ವರ್ಗಾವಣೆಮಾಡಿ ಗೊಂದಲವನ್ನು ಸೃಷ್ಠಿಸಿತು. ಗಣನೀಯವಾಗಿ ಅಲ್ಪಸಂಖ್ಯಾತ ವಿಧ್ಯಾರ್ಥಿ ವೇತನವನ್ನು ಕಡಿತ ಗೋಳಿಸಿ ಸುಮಾರ 6 ಲಕ್ಷಕ್ಕೂ ಹೆಚ್ಚು ಮಕ್ಕಳ ವಿಧ್ಯಾರ್ಥಿ ವೇತನದಿಂದ ವಂಚನೆ ಮಾಡಿತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಗೂ ನಿಗಮದಿಂದ ಜಾರಿಯಲ್ಲಿದ್ದ ಯೋಜನೆಗಳನ್ನು ದ್ವೇಶದಿಂದ ರದ್ದುಗೊಳಿಸಿತು.

ಅನುದಾನ ಕಡಿತಗೊಳಿಸಿ ಮುಸ್ಲಿಂ ಸಮುದಾಯವನ್ನು ಹೆದರಿಕೆಯಲ್ಲಿಡುವ ಪ್ರಯತ್ನವನ್ನು ಸರ್ಕಾರದಿಂದಲೇ ಮಾಡಲಾಗಿತ್ತು. ಸಿ.ಎ.ಎ. ಮತ್ತು ಎನ್.ಆರ್.ಸಿ ಹೋರಾಟದಲ್ಲಿ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿ ಮುಗ್ದ ಮುಸ್ಲಿಮರ ಸಾವಿಗೆ ಕಾರಣವಾಯಿತು. ಮಂಗಳೂರು ಹಾಗೂ ನರಗುಂದದಲ್ಲಿ ಕೋಮುದ್ವೇಶದ ಕಾರಣ ಕೊಲೆಗಳಾದರೂ ಕನಿಷ್ಠ ಮಾನವಿಯತೆ ತೋರದಿರುವದು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡದೆ ತಾರತಮ್ಯ ಮಾಡಿರುವದು ಮುಸ್ಲಿಮ್ ಭೇಗುದಿಗೆ ಕಾರಣವಾಗಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ಮುಸ್ಲಿಮ್ ಸಮುದಾಯಕ್ಕೆ 2023ರ ಸಾರ್ವತ್ರಿಕ ಚುನಾವಣೆ ವರವಾಗಿ ಬಂದಿತು.

ಈ ಮೇಲಿನ ಎಲ್ಲ ಬೆಳವಣಿಗೆಗಳನ್ನ ಹತ್ತಿರದಲ್ಲಿ ಕಂಡಿದ್ದ ಮುಸ್ಲಿಮರಲ್ಲಿ ಸಾಕಷ್ಟು ಜಾಗೃತಿ ಉಂಟಾಗಿತ್ತು. ಹೀಗಾಗಿ ರಾಜ್ಯದ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಇಡಿಯಾಗಿ ಬೆಂಬಲಿಸಿ ಶೇ.95ರಷ್ಟು ಪೂಲಿಂಗ್ ಮಾಡಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಮುಸ್ಲಿಮರು ಬಹುಮುಖ್ಯ ಪಾತ್ರವನ್ನುವಹಿಸಿದರು. ಇದಕ್ಕಾಗಿ ಕರ್ನಾಟಕ ಮುಸ್ಲಿಮ್ ಯೂನಿಟಿಯು, ಸಮುದಾಯದ ಎಲ್ಲಾ ಮುಖಂಡರುಗಳಿಗೆ, ಉಲೇಮಾಗಳಿಗೆ, ಚಿಂತಕರಿಗೆ ಹಾಗೂ ರಾಜ್ಯದ ಸಮಸ್ತ ಮುಸ್ಲಿಮ್ ಮತದಾರರಿಗೆ ಅಭಿನಂದಿಸುತ್ತದೆ.

ಕರ್ನಾಟಕದಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗದೆ ಇಂದು ಬಹುಮತದ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದಲ್ಲಿ 9  ಮುಸ್ಲಿಂ ಅಭ್ಯರ್ಥಿಗಳು ಗೆದ್ದು ಬಿಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ಕರ್ನಾಟಕ ಮುಸ್ಲಿಮ್ ಯೂನಿಟಿಯ ಹೊಕ್ಕೋತ್ತಾಯವಾಗಿದೆ. ಹಾಗೆಯೇ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಗಳಲ್ಲಿ ಮುಸ್ಲಿಮರಿಗೆ ಸೂಕ್ತ ಆಧ್ಯತೆ, ಸರ್ಕಾರದ ಎಲ್ಲಾ ಪ್ರಮುಖ ನಿಗಮ / ಮಂಡಳಿಗಳಲ್ಲಿ ಸೂಕ್ತ ಆಧ್ಯತೆ ನೀಡಬೇಕು, ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ನಿಗಮ / ಮಂಡಳಿಗಳನ್ನು ಸಂಪೂರ್ಣ ಹಾಗು ಖಡ್ದಾಯವಾಗಿ ಭರ್ತಿಮಾಡ ಬೇಕು. ಅದರಲ್ಲೂ ವಿಶೇಷವಾಗಿ ರಾಜ್ಯಾದ್ಯಂತ ಚುನಾವಣಾ ಪ್ರವಾಸ ಕೈಕೊಂಡು, ಮುಸ್ಲಿಮರ ಮತಗಳನ್ನು ಕ್ರೋಢೀಕರಿಸಿದ, ಕರ್ನಾಟಕ ಮುಸ್ಲಿಮ್ ಜನನಾಯಕ, ಪ್ರಖರ ವಾಗ್ಮಿ, ಅರ್ಹ, ಅಹಿಂದ ಮುಖಂಡರೂ ಆಗಿರುವ ಶ್ರೀ.ಬಿ.ಜಡ್.ಜಮೀರ್ ಅಹ್ಮದ್ ಖಾನ್ ರವರಿಗೆ  ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ, ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿರುವ ಸಮುದಾಯದ ಉಪಕಾರ ಸ್ಮರಿಸಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಮುಸ್ಲಿಮ್ ಯುನಿಟಿ ಸಂಘಟನೆ ಒತ್ತಾಯ ಮಾಡುತ್ತಿದೆ.

ಗೆಲುವಿನ ಸಂಭ್ರಮದಲ್ಲಿ ಶೇ.95ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಮುಸ್ಲಿಮ್ ಸಮಾಜವನ್ನು ಮರೆಯಬಾರದು. ಮುಸ್ಲಿಮ್ ಸಮುದಾಯಕ್ಕೆ ನೀಡಿರುವ 2ಬಿ ಮೀಸಲಾತಿಯ ಪ್ರಕರಣವನ್ನು ತಕ್ಷಣಕ್ಕೆ ಬಗೆಹರಿಸಬೇಕು. ದಲಿತರಿಗೆ ನೀಡಿರುವ ಭರವಸೆಯನ್ನೂ ಈಡೇರಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಒತ್ತಾಯಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಸಮುದಾಯದ ಒಂಬತ್ತು ಅಭ್ಯರ್ಥಿಗಳಿಗೆ ಹಾಗೂ ರಾಜ್ಯದ ಧಿಮಂತ ನಾಯಕ ಶ್ರೀ.ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ. ಡಿ.ಕೆ. ಶಿವಕುಮಾರ್ ರವರನ್ನು ಈ ಮೂಲಕ ಕೆ.ಎಮ್.ಯು ಅಭಿನಂದಿಸುತ್ತಿದೆ.

ರಾಜಕೀಯ

ಡಿ.ಸಿ.ಪ್ರಕಾಶ್

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ನಿನ್ನೆ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಗೆದ್ದು ಏಕ ಬಹುಮತದೊಂದಿಗೆ ಸರ್ಕಾರ ರಚಿಸಲು ಹೊರಟಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷ ಹಲವು ಉಚಿತ ಯೋಜನೆಗಳನ್ನು ಘೋಷಿಸಿತ್ತು.

ಅದರಲ್ಲಿ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ನೀಡಿತ್ತು. ಮಹಿಳೆಯರಿಗೆ ಮಾಸಿಕ ರೂ.2000 ಪ್ರೋತ್ಸಾಹಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ರೂ.3000 ಮತ್ತು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮುಂತಾದ 5 ಗ್ಯಾರಂಟಿಗಳು ವಿಶೇಷವಾದದ್ದು.

ಈ ಉಚಿತ ಕಾರ್ಯಕ್ರಮಗಳು ಕಾಂಗ್ರೆಸ್ ಗೆಲುವಿಗೆ ನೆರವಾದವು ಎಂದರೆ ಅತಿಶಯೋಕ್ತಿಯಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯ್ ಸೇರಿದಂತೆ ಬಿಜೆಪಿಯ ಮುಖಂಡರು “ಈ ಉಚಿತ ಯೋಜನೆಗಳು ಕಾಂಗ್ರೆಸ್ ನವರ ಸುಳ್ಳು ಭರವಸೆಗಳು” ಎಂದರು. ಆದರೆ, ಕಾಂಗ್ರೆಸ್ ಮುಖಂಡರು ಮನೆ-ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ, ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ಉಚಿತ ಯೋಜನೆಗಳಿಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದರು.

ನಂತರ ಬಿಜೆಪಿ ಕೂಡ ಇದೇ ರೀತಿಯ ಉಚಿತ ಭರವಸೆಗಳನ್ನು ನೀಡಿತು. ಪ್ರತಿದಿನ ಅರ್ಧ ಲೀಟರ್ ಹಾಲಿನೊಂದಿಗೆ, ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತ ಎಂಬ ಭರವಸೆಯನ್ನೂ ಕೊಟ್ಟಿತು. ಆದರೆ ಫಲಕಾರಿಯಾಗಲಿಲ್ಲ. ಜನತಾ ದಳ (ಎಸ್) ವರ್ಷಕ್ಕೆ 5 ಉಚಿತ ಗ್ಯಾಸ್ ಸಿಲಿಂಡರ್ ಸೇರಿದಂತೆ ಇತರೆ ಉಚಿತಗಳನ್ನು ಘೋಷಿಸಿತು. ಅದುವೂ ಅವರಿಗೆ ಕೈಕೊಡಲಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಈಗ ಸರ್ಕಾರ ರಚಿಸಲಿದೆ. ಆದ್ದರಿಂದ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಯಕ್ರಮಗಳು ಜಾರಿಯಾಗುವುದೇ? ಅದು ಕಾರ್ಯಸಾಧ್ಯವೇ? ಇದಕ್ಕೆ ಪ್ರತಿ ವರ್ಷ ಬೇಕಾಗುವ ಹಣವೆಷ್ಟು? ಅದರ ಬಗ್ಗೆ ಸ್ವಲ್ಪ ನೋಡೋಣ.

Congress Guarantee

ಅಂದರೆ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ ಸರಾಸರಿ 25,800 ಕೋಟಿ ಬೇಕಾಗುತ್ತದೆ. ಅದೇ ರೀತಿ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ ಕುಟುಂಬ) ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ಒದಗಿಸಲು ವರ್ಷಕ್ಕೆ ಸರಾಸರಿ 30,000 ಕೋಟಿ ಬೇಕಾಗಬಹುದು. ಏಕೆಂದರೆ ರಾಜ್ಯಾದ್ಯಂತ 1.28 ಕೋಟಿ ಮಹಿಳೆಯರು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದಾರೆ. ಇವರೆಲ್ಲರಿಗೂ ತಿಂಗಳಿಗೆ 2 ಸಾವಿರ ನೀಡಲು 30 ಸಾವಿರ ಕೋಟಿ ಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರ್ಷಿಕ 3 ಸಾವಿರ ಕೋಟಿ ಬೇಕಾಗುತ್ತದೆ ಎಂದು ಊಹಿಸಲಾಗಿದೆ. ಇದಲ್ಲದೇ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ಮತ್ತು 10 ಕೆಜಿ ಉಚಿತ ಅಕ್ಕಿ ನೀಡಲು ವರ್ಷಕ್ಕೆ 15,000 ಕೋಟಿಯಿಂದ 17,000 ಕೋಟಿಯವರೆಗೆ ಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್ ನೀಡಿರುವ ಈ 5 ಪ್ರಮುಖ ಭರವಸೆಗಳನ್ನು ಈಡೇರಿಸಲು ವರ್ಷಕ್ಕೆ ಅಂದಾಜು 75 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು. 2023-24ನೇ ಸಾಲಿನ ಬಜೆಟ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಅವರು 3 ಸಾವಿರ ಕೋಟಿಗೆ ಮಂಡಿಸಿದ್ದರು. 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ 1 ಲಕ್ಷದ 28 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ ಆ ಸಾಲ 3 ಸಾವಿರ ಕೋಟಿ ಮೀರಿತ್ತು.

ಇದರಿಂದಾಗಿ ಕರ್ನಾಟಕ ಸರ್ಕಾರದ ಸಾಲ ಹೆಚ್ಚುತ್ತಲೇ ಇದೆ. ಮತ್ತು ಆ ಸಾಲದ ಮೇಲಿನ ಬಡ್ಡಿಯೂ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ಯೋಜನೆಗಳನ್ನು ಈಡೇರಿಸಲು ಸರ್ಕಾರ ಇನ್ನೂ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ? ಆದ್ದರಿಂದ ಕಾಂಗ್ರೆಸ್ ಉಚಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸಾದ್ಯವೇ? ಎಂಬ ಪ್ರಶ್ನೆಯನ್ನು ಅರ್ಥಶಾಸ್ತ್ರಜ್ಞರು ಮುಂದಿಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ನೀಡಿದ ಭರವಸೆಗಳು ಈಡೇರುತ್ತದೆಯೇ? ಅದಕ್ಕಾಗಿ ಕಾಂಗ್ರೆಸ್ ನಾಯಕರು ಯಾವ ಕ್ರಮಗಳನ್ನು ತೆಗೆದುಕೊಳಬಹುದು? ಎಂಬುದನ್ನು ಕಾದು ನೋಡಬೇಕಿದೆ.