ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
June 2024 » Dynamic Leader
October 22, 2024
Home 2024 June
ದೇಶ

ಡಿ.ಸಿ.ಪ್ರಕಾಶ್

ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ನಾಳೆ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿವೆ. ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಸೇರಿದಂತೆ ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಿಸಿ, ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಮುಂತಾದ 3 ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು.

ರಾಷ್ಟ್ರಪತಿಗಳ ಒಪ್ಪಿಗೆಯ ನಂತರ ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಮೂರು ಹೊಸ ಕ್ರಿಮಿನಲ್ ಕಾನೂನುಗಳು ನಾಳೆಯಿಂದ (ಸೋಮವಾರ) ಜಾರಿಗೆ ಬರಲಿವೆ. ಹೊಸ ಕ್ರಿಮಿನಲ್ ಕಾನೂನುಗಳು ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ, ದೇಶದ ಪ್ರತಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳನ್ನು ದಾಖಲಿಲು ಅಸ್ತಿತ್ವದಲ್ಲಿರುವ ಅಪರಾಧ ಟ್ರ್ಯಾಕಿಂಗ್ ಸಿಸ್ಟಮ್ (CCTNS) ಬಳಕೆಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRP) 23 ಕಾರ್ಯಾಚರಣೆಯ ನವೀಕರಣಗಳನ್ನು ಪರಿಚಯಿಸಿದೆ.

ಹೊಸ ಕಾರ್ಯವಿಧಾನಗಳಿಗೆ ಮತ್ತು ಸುಗಮ ಪರಿವರ್ತನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್‌ಸಿಆರ್‌ಪಿ ತಾಂತ್ರಿಕ ನೆರವು ಒದಗಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5,65,746 ಕಾನ್ಸ್‌ಟೇಬಲ್‌ಗಳು, ಜೈಲು, ಫೋರೆನ್ಸಿಕ್ ಮತ್ತು ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ 5,84,174 ಅಧಿಕಾರಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 3 ಹೊಸ ಕಾನೂನುಗಳ ಕುರಿತು 40 ಲಕ್ಷ ಸ್ವಯಂ ಸೇವಕರಿಗೆ ತರಬೇತಿ ನೀಡಿದೆ.

ಹೊಸ ಕಾನೂನುಗಳ ಅಡಿಯಲ್ಲಿ ವಿದ್ಯುನ್ಮಾನವಾಗಿ ಸಮನ್ಸ್ ಸೂಚನೆಗಳನ್ನು ಡೌನ್‌ಲೋಡ್ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಇ-ಸಾಕ್ಷಿಯ, ನ್ಯಾಯಶ್ರುತಿ ಮತ್ತು ಇ-ಸಮನ್ಸ್ ಎಂಬ 3 ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ನಾಳೆ 3 ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದ್ದರೆ, ಸಂಸತ್ತಿನಲ್ಲಿ ಚರ್ಚೆಯಿಲ್ಲದೆ 3 ಹೊಸ ಕಾನೂನುಗಳನ್ನು ಅಂಗೀಕರಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಕಾನೂನುಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಪ್ರಕರಣ ಬಾಕಿಯಿದೆ. ಹಲವು ರಾಜ್ಯಗಳಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಳೆಯಿಂದ ಹೊಸ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ.

ಈ ಕಾಯ್ದೆಯ ಪ್ರಕಾರ, ಯಾವುದೇ ನೊಂದ ವ್ಯಕ್ತಿ ತಮ್ಮ ಮನೆಯಿಂದಲೇ ಇ-ಎಫ್‌ಐಆರ್ ಮೂಲಕ ದೂರು ದಾಖಲಿಸಬಹುದು. ನಿರ್ದಿಷ್ಟ ಪೊಲೀಸ್ ಠಾಣೆ ಮಿತಿಯನ್ನು ಲೆಕ್ಕಿಸದೆ ಯಾವುದೇ ರಾಜ್ಯದಲ್ಲಿ ಎಲ್ಲಿ ಬೇಕಾದರೂ ದೂರು ಸಲ್ಲಿಸಬಹುದು. ಜೀರೋ ಎಫ್‌ಐಆರ್ ಮೂಲಕವೂ ದೂರು ದಾಖಲಿಸಬಹುದು. ದೂರುಗಳನ್ನು ಡಿಜಿಟಲ್ ರೂಪದಲ್ಲೂ ಸಲ್ಲಿಸಬಹುದು. ವಿಚಾರಣೆಗಾದ ಅವಧಿಯನ್ನು ನಿರ್ದಿಷ್ಟಪಡಿಸಲಾಗಿದೆ. ಹೊಸ ಕಾನೂನಿನ ಪ್ರಕಾರ, ತನಿಖಾಧಿಕಾರಿಯು 90 ದಿನಗಳಲ್ಲಿ ಪ್ರಕರಣದ ಪ್ರಗತಿಯನ್ನು ಸಂತ್ರಸ್ತರಿಗೆ ಅಥವಾ ದೂರುದಾರರಿಗೆ ತಿಳಿಸಲಾಗುವುದು.

ರಾಜಕೀಯ

ಪಾಟ್ನಾ: ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಸಂಯುಕ್ತ ಜನತಾ ದಳ (ಜೆಡಿಯು) ನಿರ್ಣಯ ಅಂಗೀಕರಿಸಿದೆ.

ಹೊಸದಾಗಿ ಆಯ್ಕೆಯಾದ ಲೋಕಸಭೆಯಲ್ಲಿ ಸಂಯುಕ್ತ ಜನತಾದಳದಿಂದ 12 ಸಂಸದರಿದ್ದಾರೆ. ಅವರು ಬಿಜೆಪಿ ನೇತೃತ್ವದ  ಎನ್ ಡಿಎ ಸರ್ಕಾರದ ಭಾಗವಾಗಿದ್ದಾರೆ. ಇಂದು (ಜೂನ್ 29) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಯುಕ್ತ ಜನತಾದಳದ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕೇಂದ್ರ ಸಚಿವರು, ಸಂಯುಕ್ತ ಜನತಾದಳ ಮುಖಂಡರು ಸೇರಿದಂತೆ ಪಕ್ಷದ ಎಲ್ಲ ಸಂಸದರು ಉಪಸ್ಥಿತರಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ಸಂಯುಕ್ತ ಜನತಾದಳ ಬೆಂಬಲ ನೀಡುತ್ತಿರುವುದರಿಂದ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸುವುದೇ? ಎಂಬುದನ್ನು ಕಾದುನೋಡಬೇಕಾಗಿದೆ.

ದೇಶ

ಇಂದೋರ್: ಮಧ್ಯಪ್ರದೇಶದಲ್ಲಿ 14 ಮಹಿಳೆಯರು ಸೇರಿದಂತೆ 30 ಜನರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಕಾನೂನುಬದ್ಧವಾಗಿ ಮತಾಂತರಗೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಅಧಿಕಾರದಲ್ಲಿದೆ.

ಇಲ್ಲಿ ‘ಸಜಾ ಸಂಸ್ಕೃತಿ ಮಂಚ್’ (Sajha Sanskriti Manch)ಎಂಬ ಹಿಂದೂ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವತಿಯಿಂದ ನಿನ್ನೆ ಅಲ್ಲಿನ ವಿನಾಯಕ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಇದರಲ್ಲಿ 14 ಮುಸ್ಲಿಂ ಮಹಿಳೆಯರು ಸೇರಿದಂತೆ 30 ಜನರು ವೇದ ಮಂತ್ರಗಳನ್ನು ಪಠಿಸುವ ಮೂಲಕ ಕಾನೂನುಬದ್ಧವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘಟನೆಯ ಅಧ್ಯಕ್ಷ ಸ್ಯಾಮ್ ಪಾವ್ರಿ (Sam Pawri), “ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ರ ಪ್ರಕಾರ, 30 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರೆಲ್ಲರೂ, ಜಿಲ್ಲಾಡಳಿತಕ್ಕೆ ಔಪಚಾರಿಕವಾಗಿ ಇದಕ್ಕಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಲೀ, ಬಲವಂತದ ಮತಾಂತರವಾಗಲೀ ನಡೆದಿಲ್ಲ” ಎಂದು ಹೇಳಿದ್ದಾರೆ.

ರಾಜಕೀಯ

ಹೈದರಾಬಾದ್: ತೆಲಂಗಾಣದಲ್ಲಿ ಭಾರತೀಯ ರಾಷ್ಟ್ರೀಯ ಸಮಿತಿ (ಬಿಆರ್​ಎಸ್) ಶಾಸಕರ ಪಕ್ಷಾಂತರವು ನಿರಂತರ ಕಥೆಯಾಗುತ್ತಿದೆ. ಇಂದು ಪಕ್ಷದ ಶಾಸಕರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಆಘಾತವನ್ನು ಉಂಟು ಮಾಡಿದ್ದಾರೆ.

2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಜಗ್ತಿಯಾಲ್ ಕ್ಷೇತ್ರದ ಬಿಆರ್​ಎಸ್ ಪಕ್ಷಕ್ಕೆ ಸೇರಿದ ಶಾಸಕ ಸಂಜಯ್ ಕುಮಾರ್ ಕಳೆದ 24 ರಂದು ಪಕ್ಷ ತೊರೆದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಹಿನ್ನೆಲೆಯಲ್ಲಿ, ಚೇವೆಲ್ಲಾ ಕ್ಷೇತ್ರಕ್ಕೆ ಸೇರಿದ ಬಿಆರ್​ಎಸ್ ಶಾಸಕ ಕಾಳೆ ಯಾದಯ್ಯ ಆ ಪಕ್ಷವನ್ನು ತೊರೆದು ಇಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದುವರೆಗೆ ಬಿಆರ್​ಎಸ್ ಪಕ್ಷದ 6 ಶಾಸಕರು ಪರ್ಯಾಯ ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದು, ಚಂದ್ರಶೇಖರ್ ರಾವ್ ಅವರಿಗೆ ಹಿನ್ನಡೆಯಾಗಿದೆ.

ದೇಶ

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ನೀಡಿರುವ ಹೇಳಿಕೆ ನಿರಂಕುಶವಾಗಿದ್ದು ಅದನ್ನು ತಿರಸ್ಕರಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ರಣಧೀರ್ ಜೈಸ್ವಾಲ್, ‘ಅಮೆರಿಕ ವರದಿಯು ಏಕಪಕ್ಷೀಯವಾಗಿದೆ. ಭಾರತದ ಸಾಮಾಜಿಕ ರಚನೆಯನ್ನು ಅರ್ಥಮಾಡಿಕೊಳ್ಳದೆ ವರದಿಯನ್ನು ಸಿದ್ಧಪಡಿಸಲಾಗಿದೆ. ಆರೋಪಗಳು ಮತ್ತು ತಪ್ಪು ನಿರೂಪಣೆಗಳನ್ನು ಮಿಶ್ರಣಗೊಳಿಸಿ ವರದಿ ಸಿದ್ಧಪಡಿಸಲಾಗಿದೆ. ನಾವು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅಮೆರಿಕ ವರದಿಯನ್ನು ತಿರಸ್ಕರಿಸುತ್ತೇವೆ’ ಎಂದು ಹೇಳಿದ್ದಾರೆ.

ದೇಶ

 ಡಿ.ಸಿ.ಪ್ರಕಾಶ್

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ!

ಭಾರತದಲ್ಲಿ ಮರ್ಯಾದಾ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಅದರಲ್ಲೂ ಕಳೆದ ದಶಕದಲ್ಲಿ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಜಾತಿ ಸಂಬಂಧಿತ ಹತ್ಯಗಳು ನಡೆದಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ಜಾರಿಯಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಕಾನೂನು ನೀಡಿದೆ. ಆದರೆ ಜಾತಿಯ ಹೆಸರಿನಲ್ಲಿ ಆ ಹಕ್ಕನ್ನು ಕಸಿದುಕೊಳ್ಳುವ ಕ್ರೌರ್ಯ ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ತಮ್ಮ ಸ್ವಂತ ಇಚ್ಚೆಯ ಆಧಾರದ ಮೇಲೆ ಕೂಡಿ ಬಾಳುವ ಆಯ್ಕೆಯನ್ನು ಕೈಗೆತ್ತಿಕೊಳ್ಳುವ ಯುವ ಜೋಡಿಗಳನ್ನು ಕೊಲ್ಲಲಾಗುತ್ತದೆ.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಗೋಕುಲ್ ರಾಜ್

ಜಾತಿ ಸಂಘಟನೆಗಳು ಮತ್ತು ಜಾತಿ ಆಧಾರಿತ ರಾಜಕೀಯ ಪಕ್ಷಗಳು ಇದರ ಹಿಂದೆ ಇವೆ. ಜಾತಿಗೆ ವಿರುದ್ಧವಾಗಿ ಮದುವೆಯಾಗುವ ಯುವ ಜೋಡಿಗಳನ್ನು ಗೌರವ ಮತ್ತು ಜಾತಿ ಶುದ್ಧತೆಯ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತದೆ. ಅಂತಹ ಕೊಲೆಗಳು ಮತ್ತು ಸಂಬಂಧಿತ ಅಪರಾಧಗಳನ್ನು ಶಿಕ್ಷಿಸುವ ಕಾನೂನು ಭಾರತದಲ್ಲಿಲ್ಲ. ಹಾಗಾಗಿ ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಸಂಘಟನೆಗಳು ಒತ್ತಾಯಿಸುತ್ತಿವೆ.

ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ತರುವಂತೆ ಸಿಪಿಎಂ, ಸಿಪಿಐ, ಕಾಂಗ್ರೆಸ್ ಸೇರಿದಂತೆ ಪಕ್ಷಗಳ ಶಾಸಕರು ತಮಿಳುನಾಡು ವಿಧಾನಸಭೆಯಲ್ಲಿ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದಾಗಲೂ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿತ್ತು.

ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರವೂ ಪ್ರತ್ಯೇಕ ಕಾನೂನು ಬೇಡಿಕೆ ಮುಂದಿಟ್ಟು ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಇತ್ತೀಚೆಗಷ್ಟೇ ತಿರುನಲ್ವೇಲಿಯಲ್ಲಿ ಅಂತರ್ಜಾತಿ ದಂಪತಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಕಚೇರಿಯನ್ನು ಧ್ವಂಸ ಮಾಡಿದ್ದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರೀ ಆಘಾತವನ್ನು ಉಂಟು ಮಾಡಿತ್ತು.

ಸಿಪಿಎಂ ಕಚೇರಿ ಮೇಲಿನ ದಾಳಿ

ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಿಪಿಎಂ ಕಚೇರಿ ಮೇಲಿನ ದಾಳಿ ಕುರಿತು ಗಮನ ಸೆಳೆಯುವ ನಿರ್ಣಯ ಮಂಡಿಸಲಾಯಿತು. ಆ ವೇಳೆ ಕಾಂಗ್ರೆಸ್, ಸಿಪಿಎಂ, ಸಿಪಿಐ, ಎಂಡಿಎಂಕೆ, ವಿಡುದಲೈ ಚಿರುತ್ತೈಗಳ್, ಟಿವಿಕೆ, ಎಂಡಿಎಂಕೆ, ಬಿಜೆಪಿ ಶಾಸಕರು ಸಿಪಿಎಂ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿದರು. ಇದರಲ್ಲಿ ಪಿಎಂಕೆ (ಪಾಟಾಳಿ ಮಕ್ಕಳ್ ಕಚ್ಚಿ) ಮತ್ತು ಕೊಂಗು ಮಕ್ಕಳ್ ದೇಸಿಯ ಕಚ್ಚಿ ಭಾಗವಹಿಸಲಿಲ್ಲ.

ಗಮನ ಸೆಳೆಯುವ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಅಂತರ್ಜಾತಿ ವಿವಾಹಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಪರಾಧಗಳ ವಿಚಾರಣೆಗೆ ಸರ್ಕಾರದಿಂದ ಪ್ರತ್ಯೇಕವಾಗಿ ವಿಶೇಷ ಕ್ರಿಮಿನಲ್ ಪ್ರಾಸಿಕ್ಯೂಟರನ್ನು ನೇಮಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗಳ ಬದಲಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ತನಿಖಾ ಅಧಿಕಾರಿಯನ್ನಾಗಿ ನೇಮಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಪ್ರತ್ಯೇಕ ಕಾನೂನನ್ನು ತರುವ ಬದಲು, ಅಸ್ತಿತ್ವದಲ್ಲಿರುವ ಕಾನೂನುಗಳು, ವಿಶೇಷವಾಗಿ ದೌರ್ಜನ್ಯ ತಡೆ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆಯ ಆಧಾರದ ಮೇಲೆ ಗಂಭೀರ ಮತ್ತು ತ್ವರಿತ ಕ್ರಮಗಳನ್ನು ತೆಗೆದುಕೊಂಡು ಅಪರಾಧಿಗಳನ್ನು ಕಾನೂನಿನ ಮುಂದೆ ತರುವುದು ಸರಿಯಾಗಿರುತ್ತದೆ ಎಂದು ಈ ಸರ್ಕಾರ ನಂಬುತ್ತದೆ’ ಎಂದು ಹೇಳಿದರು.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಧರ್ಮಪುರಿ ಇಳವರಸು

ಅಂದರೆ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂಬ ನಿಲುವನ್ನು ಡಿಎಂಕೆ ಸರ್ಕಾರ ತೆಗೆದುಕೊಂಡಿದೆ ಎಂಬುದು ಇದರ ಮೂಲಕ ಸ್ಪಷ್ಟವಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಮರುಪರಿಶೀಲಿಸಬೇಕು ಎಂದು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಸಮಿತಿ ಒತ್ತಾಯಿಸಿದೆ.

ಈ ಕುರಿತು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಚೆಲ್ಲಕಣ್ಣು, ಪ್ರಧಾನ ಕಾರ್ಯದರ್ಶಿ ಸ್ಯಾಮ್ಯುಯೆಲ್ ರಾಜ ಹೇಳಿಕೆ ನೀಡಿದ್ದಾರೆ. ಅದರಲ್ಲಿ, ‘ಮರ್ಯಾದಾ ಹತ್ಯೆಗಳ ವಿರುದ್ಧ ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿಯವರ ಹೇಳಿಕೆ ಸ್ವೀಕಾರಾರ್ಹವಲ್ಲ. ಮರ್ಯಾದಾ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾನೂನಿನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಅಂತರ್ಜಾತಿ ಪ್ರೇಮಿಗಳನ್ನು ಬರ್ಬರವಾಗಿ ಕೊಲ್ಲಲಾಗುತ್ತದೆ. ದಂಪತಿ ಅಥವಾ ಅವರ ಸಂಬಂಧಿಕರನ್ನು ಗ್ರಾಮದಿಂದ ಬಹಿಷ್ಕರಿಸುವುದು, ಶಿಕ್ಷೆ, ಸಾಮಾಜಿಕ ಬಹಿಷ್ಕಾರ, ಆರ್ಥಿಕ ದಿಗ್ಬಂಧನ, ಆಸ್ತಿಯ ಹಕ್ಕುಗಳ ನಿರಾಕರಣೆ ಮುಂತಾದ ದೌರ್ಜನ್ಯಗಳು ಸಹ ಪ್ರದರ್ಶಿಸಲಾಗುತ್ತದೆ.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಉಡುಮಲೈ ಶಂಕರ್

ಉಡುಮಲೈ ಶಂಕರ್ ಅವರಿಂದ ಆರಂಭಗೊಂಡು, ಪೊಲೀಸ್ ಠಾಣೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ವಿವಿಧ ಮರ್ಯಾದಾ ಹತ್ಯೆಗಳ ಪ್ರಕರಣಗಳು ಹಾಗೆಯೇ ಸ್ಥಗಿತಗೊಂಡಿವೆ. ಆದ್ದರಿಂದ, ವಿಶೇಷ ಕಾನೂನು ಅಗತ್ಯವಿದೆ. ಮೌಖಿಕವಾಗಿ ಅಥವಾ ಲಿಖಿತವಾಗಿ, ಪೊಲೀಸ್ ಠಾಣೆಯಲ್ಲಿ ಅಥವಾ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣೀಕರಿಸಿ ಅಂತರ್ಜಾತಿ ವಿವಾಹಕ್ಕೆ ಮುಂದಾಗುವ ದಂಪತಿಗಳನ್ನು ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಬಾರದು. ಉಲ್ಲಂಘಿಸಿದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು. ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳಿಗೆ ಪ್ರತ್ಯೇಕ ಕಾನೂನು ಜಾರಿ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಡಿಎಂಕೆಯ ಮಿತ್ರಪಕ್ಷವಾದ ವಿಡುದಲೈ ಚಿರುತ್ತೈಗಳ್ ಪಕ್ಷದ ನಾಯಕ ತೊಲ್ ತಿರುಮಾವಳವನ್ ಕೂಡ ಪ್ರತ್ಯೇಕ ಕಾನೂನಿಗೆ ಒತ್ತಾಯಿಸಿದ್ದಾರೆ. ಅವರು, ‘ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗಳನ್ನು ನಿಯಂತ್ರಿಸಲು ಭಾರತೀಯ ಕಾನೂನು ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಸೂಚನೆಗಳನ್ನು ಆಧರಿಸಿ ತಮಿಳುನಾಡು ಸರ್ಕಾರವು ವಿಶೇಷ ಕಾನೂನನ್ನು ಜಾರಿಗೊಳಿಸಬೇಕು; ಅಲ್ಲಿಯವರೆಗೆ, 2018ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ವಿಡುದಲೈ ಚಿರುತ್ತೈಗಳ್ ಪಕ್ಷದ ಪರವಾಗಿ ಒತ್ತಾಯಿಸುತ್ತೇವೆ’ ಎಂದು ಅವರು ಸುದೀರ್ಘ ಹೇಳಿಕೆಯನ್ನು ಪ್ರಕಟಿಸಿದ್ದಾರೆ.

ಆದರೂ ಡಿಎಂಕೆ ಈ ವಿಚಾರದಲ್ಲಿ ಪ್ರತ್ಯೇಕ ಕಾನೂನು ಬೇಕಿಲ್ಲ ಎಂಬ ಮನೋಭಾವನೆಯಲ್ಲಿ ಮುಂದುವರಿದಂತೆ ಕಾಣುತ್ತಿದೆ. ಸಮ್ಮಿಶ್ರ ಪಕ್ಷಗಳ ಬೇಡಿಕೆಗಳನ್ನು ಡಿಎಂಕೆ ಸರ್ಕಾರ ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯ

ಬೆಂಗಳೂರು: ಸಂಚಾರಿ ಕುರಿಗಾಹಿ ಸಮುದಾಯಗಳ ಮುಖಂಡರ ಜೊತೆಗಿನ ಸಭೆಯನ್ನು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆಯೋಜಿಸಲಾಗಿತ್ತು. ಸಭೆಯ ಬಳಿಕ ಅವರು ನೀಡಿದ ಪ್ರಮುಖ ಸೂಚನೆ ಹಾಗೂ ಮಾಹಿತಿ ಹೀಗಿವೆ:

ಕುರಿಗಾಹಿಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕುರಿಗಳ ಕಳ್ಳತನ ತಡೆಯಲು ಅಗತ್ಯವಿದ್ದರಿಗೆ ಬಂದೂಕಿನ ಲೈಸೆನ್ಸ್ ಕೊಡಿಸಲು ಸೂಚಿಸಲಾಗುವುದು. ಕುರಿ ಕಳ್ಳತನ ಪ್ರಕರಣಗಳ ಕುರಿತು ಯಾವುದೇ ಠಾಣೆಗೆ ದೂರು ಬಂದ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಯಿತು.

ರಾಜ್ಯದಲ್ಲಿನ ವಲಸೆ ಕುರಿಗಾರರ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಕಾಯ್ದೆ ರೂಪಿಸಲಾಗುವುದು.

ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಗುರುತಿನ ಚೀಟಿ ಆಧಾರದ ಮೇಲೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು.

ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ ನೀಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಇವುಗಳಿಗೆ ಸರ್ಕಾರಿ ಆದೇಶ ನೀಡುವಂತೆ ಸೂಚಿಸಲಾಯಿತು.

ಪಶುಸಂಗೋಪನಾ ಇಲಾಖೆಯಲ್ಲಿ 1300 ವೈದ್ಯರ ಹುದ್ದೆ ಖಾಲಿ ಇದ್ದು, ಪ್ರಸ್ತುತ 400 ವೈದ್ಯರನ್ನು ನೇಮಕ ಮಾಡಲಾಗುತ್ತಿದೆ. ಮುಂದಿನ ವರ್ಷ ಬಾಕಿ ವೈದ್ಯರ ನೇಮಕಾತಿ ಮಾಡಲಾಗುವುದು.

ಕುರಿಗಾರರು ಕ್ಯಾಂಪ್ ಮಾಡಿರುವ ಕಡೆಗಳಲ್ಲೇ ವೈದ್ಯರು ಬಂದು ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗುವುದು.

ಹಿಂದಿನ ಸರ್ಕಾರ ಸತ್ತ ಕುರಿಗಳಿಗೆ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ದು, ಈ ಕುರಿತು ಪರಿಹಾರ ನೀಡುವ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಲಾಗುವುದು. ಅನುಗ್ರಹ ಯೋಜನೆಯಡಿ ಒಂದು ಕುರಿ ಆಕಸ್ಮಿಕವಾಗಿ ಮರಣ ಹೊಂದಿದರೆ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು.

ಗೋಮಾಳಗಳನ್ನು ಯಾರಿಗೂ ಪರಭಾರೆ ಮಾಡಬಾರದೆಂದು ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಗೋಮಾಳಗಳ ರಕ್ಷಣೆ ಮಾಡಲಾಗುವುದು. ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮಾತ್ರ ಮೇಯಿಸಲು ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

ಕುರಿಗಳ ಅಭಿವೃದ್ಧಿ, ಕುರಿಗಾಹಿಗಳ ಭದ್ರತೆ, ಕುರಿ ವ್ಯಾಪಾರಕ್ಕೆ ನೆರವು, ಮಾರುಕಟ್ಟೆ ವಿಸ್ತರಣೆಗೆ ನೆರವು ನೀಡಲಾಗುವುದು ಎಂಬ ಸೂಚನೆಗಳನ್ನು ನೀಡಿದ್ದಾರೆ.

ವಿದೇಶ

ವಾಷಿಂಗ್ಟನ್: ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಹಿಂತಿರುಗುವುದರಲ್ಲಿ ಸಮಸ್ಯೆ ಎದುರಾಗಿದೆ. ಇಬ್ಬರೂ ಯೋಜಿಸಿದಂತೆ ಜೂನ್ 22 ರಂದು ಭೂಮಿಗೆ ಮರಳಬೇಕಿತ್ತು.  ಆದರೆ, ತಾಂತ್ರಿಕ ದೋಷದಿಂದಾಗಿ ಭೂಮಿಗೆ ಹಿಂತಿರುಗುವುದನ್ನು ಮುಂದೂಡಲಾಗಿದೆ.

ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ (58) ಮತ್ತು ಅನುಭವಿ ಗಗನಯಾತ್ರಿ ಬುಚ್ ವಿಲ್ಮೋರ್ (61) ಜೂನ್ 5 ರಂದು ಅಮೆರಿಕಾದ ವಿಮಾನ ತಯಾರಕ ಬೋಯಿಂಗ್ ಸ್ಟಾರ್‌ಲೈನರ್ ರಾಕೆಟ್‌ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣಿಸಿದರು.

ಅವರು ಜೂನ್ 5 ರಂದು ರಾತ್ರಿ 8.22ಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡು ಜೂನ್ 6ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. 9 ದಿನಗಳ ಕಾಲ ಅವರು ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಸಂಶೋಧನೆಗಳನ್ನು ನಡೆಸಿದರು.

ಪ್ರಸ್ತುತ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಲು ತೊಂದರೆ ಅನುಭವಿಸುತ್ತಿದ್ದಾರೆ. ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇಬ್ಬರು ಯೋಜನೆಯಂತೆ ಜೂನ್ 22 ರಂದು ಭೂಮಿಗೆ ಮರಳಬೇಕಿತ್ತು.

ಆದರೆ ಅನಿಲ ಸೋರಿಕೆ ಸೇರಿದಂತೆ ಬೋಯಿಂಗ್ ಸ್ಟಾರ್‌ಲೈನರ್‌ನ ತಾಂತ್ರಿಕ ಸಮಸ್ಯೆಗಳಿಂದ ಭೂಮಿಗೆ ಮರಳುವುದು ವಿಳಂಬವಾಗಿದೆ. ಸುನಿತಾ ವಿಲಿಯಮ್ಸ್ ಅವರನ್ನು ರಕ್ಷಿಸಲು ನಾಸಾ ಸ್ಪೇಸ್‌ಎಕ್ಸ್‌ನಿಂದ ಸಹಾಯ ಪಡೆಯಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶ

ಬೆಂಗಳೂರು: ಸನಾತನ ಧರ್ಮ ಭಾಷಣದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇಂದು ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸನಾತನ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಭಾರತದಾದ್ಯಂತ ಸಂಚಲನ ಮೂಡಿಸಿದ್ದರು. ‘ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ ಸನಾತನ ಧರ್ಮವನ್ನು ತೊಲಗಿಸಬೇಕು’ ಎಂದು ಉದಯನಿಧಿ ಸ್ಟಾಲಿನ್ ಮಾಡಿದ ಭಾಷಣವನ್ನು ಬಿಜೆಪಿ ಮತ್ತು ಬಲಪಂಥೀಯರು ತೀವ್ರವಾಗಿ ಖಂಡಿಸಿದ್ದರು ಮತ್ತು ಪ್ರತಿಭಟನೆಗಳನ್ನು ಸಹ ನಡೆಸಿದ್ದರು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಸಂಪುಟದ ಸಚಿವರೊಂದಿಗೆ ಮಾತನಾಡಿದ್ದರು.

ಅಲ್ಲದೆ, ಸನಾತನ ಧರ್ಮದ ಕುರಿತು ಉದಯನಿಧಿ ಅವರ ಭಾಷಣದ ವಿರುದ್ಧ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಆ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಉದಯನಿಧಿ, ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾದರು.

ಉದಯನಿಧಿ ಕಡೆಯಿಂದ ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸಿ ಒಂದೇ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಬಗ್ಗೆ ದೂರುದಾರರು ಉತ್ತರ ನೀಡಬೇಕಾಗಿದೆ ಹೀಗಾಗಿ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದರು. ಈ ಪ್ರಕರಣದಲ್ಲಿ ಉದಯನಿಧಿ ಸ್ಟಾಲಿನ್‌ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು 1 ಲಕ್ಷ ರೂಪಾಯಿ ಬಾಂಡ್ ಪಾವತಿಸುವಂತೆ ಆದೇಶಿಸಿದ್ದಾರೆ.

ದೇಶ

ನವದೆಹಲಿ: ಸಂವಿಧಾನದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

25 ಜೂನ್ 1975 ರಂದು ಭಾರತದಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಈ ಕುರಿತು ಪ್ರಧಾನಿ ಮೋದಿ ಅವರು ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲರನ್ನೂ ಗೌರವಿಸುವ ದಿನವಾಗಿದೆ. ಕಾಂಗ್ರೆಸ್ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯು ಅವರು ಭಾರತದ ಸಂವಿಧಾನವನ್ನು ಹೇಗೆ ಸಂಪೂರ್ಣವಾಗಿ ಬುಡಮೇಲು ಮಾಡಿದರು ಎಂಬುದನ್ನು ನೆನಪಿಸುತ್ತದೆ.

ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಹಕ್ಕು ಇಲ್ಲ. ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿದವರು ಮತ್ತು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದವರು ಇವರು. ತುರ್ತು ಪರಿಸ್ಥಿತಿ ಹೇರಲು ಕಾರಣವಾದ ಭಾವನೆ ಅವರ ಪಕ್ಷದ ಸದಸ್ಯರಲ್ಲಿ ಜೀವಂತವಾಗಿದೆ.

ಅಧಿಕಾರ ಉಳಿಸಿಕೊಳ್ಳಲು ಅಂದಿನ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವದ ತತ್ವವನ್ನು ಕಡೆಗಣಿಸಿತು. ಕಾಂಗ್ರೆಸ್ ಪಕ್ಷಕ್ಕೆ ಮಣಿಯದವರನ್ನು ಹಿಂಸಿಸಲಾಯಿತು. ದುರ್ಬಲ ವರ್ಗಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕವಾಗಿ ಪ್ರತಿಗಾಮಿ ನೀತಿಗಳನ್ನು ಅನಾವರಣಗೊಳಿಸಲಾಯಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.