ಸುನಿತಾ ವಿಲಿಯಮ್ಸ್, ವಿಲ್ಮೋರ್ ಭೂಮಿಗೆ ಹಿಂತಿರುಗುವುದರಲ್ಲಿ ಸಮಸ್ಯೆ: ಏನು ಕಾರಣ?
ವಾಷಿಂಗ್ಟನ್: ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಹಿಂತಿರುಗುವುದರಲ್ಲಿ ಸಮಸ್ಯೆ ಎದುರಾಗಿದೆ. ಇಬ್ಬರೂ ಯೋಜಿಸಿದಂತೆ ಜೂನ್ 22 ರಂದು ಭೂಮಿಗೆ ಮರಳಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಭೂಮಿಗೆ ಹಿಂತಿರುಗುವುದನ್ನು ಮುಂದೂಡಲಾಗಿದೆ.
ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ (58) ಮತ್ತು ಅನುಭವಿ ಗಗನಯಾತ್ರಿ ಬುಚ್ ವಿಲ್ಮೋರ್ (61) ಜೂನ್ 5 ರಂದು ಅಮೆರಿಕಾದ ವಿಮಾನ ತಯಾರಕ ಬೋಯಿಂಗ್ ಸ್ಟಾರ್‌ಲೈನರ್ ರಾಕೆಟ್ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣಿಸಿದರು.
ಅವರು ಜೂನ್ 5 ರಂದು ರಾತ್ರಿ 8.22ಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡು ಜೂನ್ 6ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. 9 ದಿನಗಳ ಕಾಲ ಅವರು ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಸಂಶೋಧನೆಗಳನ್ನು ನಡೆಸಿದರು.
ಪ್ರಸ್ತುತ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಲು ತೊಂದರೆ ಅನುಭವಿಸುತ್ತಿದ್ದಾರೆ. ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇಬ್ಬರು ಯೋಜನೆಯಂತೆ ಜೂನ್ 22 ರಂದು ಭೂಮಿಗೆ ಮರಳಬೇಕಿತ್ತು.
ಆದರೆ ಅನಿಲ ಸೋರಿಕೆ ಸೇರಿದಂತೆ ಬೋಯಿಂಗ್ ಸ್ಟಾರ್‌ಲೈನರ್‌ನ ತಾಂತ್ರಿಕ ಸಮಸ್ಯೆಗಳಿಂದ ಭೂಮಿಗೆ ಮರಳುವುದು ವಿಳಂಬವಾಗಿದೆ. ಸುನಿತಾ ವಿಲಿಯಮ್ಸ್ ಅವರನ್ನು ರಕ್ಷಿಸಲು ನಾಸಾ ಸ್ಪೇಸ್‌ಎಕ್ಸ್‌ನಿಂದ ಸಹಾಯ ಪಡೆಯಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.