ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
September 2023 » Dynamic Leader
December 13, 2024
Home 2023 September
ಕ್ರೀಡೆ

ಭಾರತದಲ್ಲಿ 50 ಓವರ್ ಪುರುಷರ ವಿಶ್ವಕಪ್ ಪಂದ್ಯಗಳು ಪ್ರಾರಂಭವಾಗಲು ಇನ್ನು 5 ದಿನ ಮಾತ್ರ ಬಾಕಿ ಇದೆ. ಇದಕ್ಕಾಗಿ ಸಮಾರಂಭಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ತಂಡದ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸಲು ಬಂದಿರುವ ಪ್ರತಿ ತಂಡದ ಆಟಗಾರರ ಮೆನು ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಯಾವುದೇ ತಂಡಕ್ಕೆ ಗೋಮಾಂಸ ನೀಡುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ದನದ ಮಾಂಸ ಇಲ್ಲದ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಿಗೂ ವಿಭಿನ್ನ ಮೆನು ಸಿದ್ಧಪಡಿಸಲಾಗಿದೆ. ಆದರೂ ಮೆನುವಿನಲ್ಲಿ ಗೋಮಾಂಸ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ವರ್ಷ ಭಾರತದಲ್ಲಿ ವಿಶ್ವಕಪ್ ಸರಣಿ ನಡೆಯಲಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಬರುವ ವಿದೇಶಿ ಆಟಗಾರರಿಗೆ ನೀಡುವ ಆಹಾರದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ಗೋಮಾಂಸವನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಮಟನ್, ಚಿಕನ್, ಮೀನಿನಂಥ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಆಟಗಾರರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

ವಿಶೇಷವೆಂದರೆ, ಏಳು ವರ್ಷಗಳ ನಂತರ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸಲು ಪಾಕಿಸ್ತಾನದ ಆಟಗಾರರು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಅವರಿಗೆ ಬಡಿಸುವ ಆಹಾರದ ಪ್ರಕಾರಗಳಲ್ಲಿ ಮಟನ್ ಚಾಪ್ಸ್, ಮಟನ್ ಗ್ರೇವಿ, ಬಟ್ಟರ್ ಚಿಕ್ಕನ್, ಹುರಿದ ಮೀನು ಮತ್ತು ಬಾಸ್ಮತಿ ಅಕ್ಕಿ, ಸ್ಪಾಗೆಟ್ಟಿ ಮತ್ತು ಬೊಲೊಗ್ನೀಸ್ ಸಾಸ್, ವೆಜ್ ಪುಲಾವ್ ಮತ್ತು ಹೈದರಾಬಾದ್ ಬಿರಿಯಾನಿ ಮುಂತಾದವುಗಳು ಒದಗಿಸಲಾಗುತ್ತದೆ. ಅದರಲ್ಲಿ ದನದ ಮಾಂಸ ಇರುವುದಿಲ್ಲ ಎಂಬುದು ವಿವಾದಕ್ಕೆ ಕಾರಣವಾಗಿದೆ.

ಭಾರತದಲ್ಲಿ ಕೆಲವರು ಹಸುವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಹಾಗಾಗಿ ದೇಶದ ಹಲವು ಭಾಗಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಗೋಮಾಂಸ ಸಾಗಣೆದಾರರು ಮತ್ತು ಮಾರಾಟಗಾರರನ್ನು ಗೋರಕ್ಷಕರು ಹತ್ಯೆಗೈದ ಮತ್ತು ಹಲ್ಲೆ ಮಾಡಿದ ಘಟನೆಗಳೂ ನಡೆದಿವೆ. ಈ ಕಾರಣಕ್ಕಾಗಿ ಭಾರತ ಸರ್ಕಾರ ವಿಶ್ವಕಪ್ ಆಟಗಾರರಿಗೆ ಗೋಮಾಂಸವನ್ನು ನಿಷೇಧಿಸಿರಬಹುದು ಎಂದು ಹೇಳಲಾಗಿದೆ. ಆದರೂ ಇದನ್ನು ಕೆಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೀಗಾಗಿ ಅನೇಕ ನೆಟ್ಟಿಗರು ಇದನ್ನು ಟೀಕಿಸುತ್ತಿದ್ದಾರೆ.

ರಾಜಕೀಯ

ಬೆಂಗಳೂರು: ಜಾತ್ಯತೀತ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ ಸಿದ್ದರಾಮಯ್ಯನವರೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.   

ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್ ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. I.N.D.I.A ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಕಾಂಗ್ರೆಸ್ ಪಕ್ಷ ಜಾತ್ಯತೀತವೇ? ಉತ್ತರಿಸಿ ಮುಖ್ಯಮಂತ್ರಿಗಳೇ? ಎಂದು ವ್ಯಂಗ್ಯವಾಡಿದ್ದಾರೆ.

ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣದ ಪ್ರಮುಖ ಮಾಹಿತಿಯನ್ನು ಕೆನಡಾ ಹಂಚಿಕೊಂಡರೆ ತನಿಖೆಗೆ ಸಿದ್ಧ!

2006ರಲ್ಲಿ ಜಿಜೆಪಿ ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು ಜೆಡಿಎಸ್ ಗೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ಮಾನ್ಯ ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ!! ಮರೆತಿರಾ ಛದ್ಮವೇಷಧಾರಿ? ಪಾಪ.. ನಿಮಗೆ ಕೋಮುವಾದ, ಜಾತ್ಯತೀತ ಸಿದ್ಧಾಂತದ ಕನಸು ಈಗ ಬಿದ್ದಿದೆ. ನಿಮ್ಮ ರಾಜಕೀಯ ಬದುಕಿಗಾಗಿ ಜಾತಿಜಾತಿಗಳನ್ನು ಒಡೆದು ಬೆಂಕಿ ಇಟ್ಟು ಆ ಕೆನ್ನಾಲಗೆಯಲ್ಲೇ ಚಳಿ ಕಾಯಿಸಿಕೊಳ್ಳುವುದಷ್ಟೇ ನಿಮಗೆ ಗೊತ್ತು ಎಂದು ಮೂದಲಿಸಿದ್ದಾರೆ.

ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ. ಏನಂತೀರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ವಿದೇಶ

ನ್ಯೂಯಾರ್ಕ್: ಭಾರತ-ರಷ್ಯಾ ಸ್ನೇಹ ಸ್ಥಿರವಾಗಿದೆ. ರಷ್ಯಾದ ಗಮನ ಏಷ್ಯಾ ರಾಷ್ಟ್ರಗಳತ್ತ ಹೊರಳುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ವಿದೇಶಿ ಸಂಬಂಧಗಳ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದರು: “ಕೆನಡಾ ಆರೋಪದಲ್ಲಿ ಅದು ಭಾರತ ಸರ್ಕಾರದ ನೀತಿಯಲ್ಲ. ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣದ ಪ್ರಮುಖ ಮಾಹಿತಿಯನ್ನು ಕೆನಡಾ ಹಂಚಿಕೊಂಡರೆ ತನಿಖೆ ನಡೆಸಲು ಸಿದ್ಧ.

ಕೆನಡಾ ಸರ್ಕಾರದೊಂದಿಗೆ ಕೆಲವು ವರ್ಷಗಳಿಂದ ನಿರಂತರ ಸಮಸ್ಯೆ ಇದೆ. ಅಂತೆಯೇ, ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ಸಂಬಂಧಿಸಿದ ನಿರಂತರ ಸಮಸ್ಯೆ ಇದೆ. ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ.

ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರು ಕೆನಡಾದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ-ರಷ್ಯಾ ಸ್ನೇಹ ಸ್ಥಿರವಾಗಿದೆ. ರಷ್ಯಾದ ಗಮನ ಏಷ್ಯಾದ ದೇಶಗಳತ್ತ ತಿರುಗುತ್ತಿದೆ. ಉಕ್ರೇನ್‌ನಲ್ಲಿನ ಯುದ್ಧದಿಂದ ಪಾಶ್ಚಿಮಾತ್ಯ ದೇಶಗಳೊಂದಿಗೆ ರಷ್ಯಾದ ಸಂಬಂಧವು ಹದಗೆಟ್ಟಿದೆ ಎಂದು ಹೇಳಿದ್ದಾರೆ.  

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮಧ್ಯಪ್ರದೇಶದಲ್ಲಿ ಸೋಲನ್ನು ತಪ್ಪಿಸಲು ಬಿಜೆಪಿಯಿಂದ ಕೇಂದ್ರ ಸಚಿವರಿಗೆ ಶಾಸಕ ಟಿಕೆಟ್ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷ 114 ಸ್ಥಾನಗಳನ್ನು ಗೆದ್ದುಕೊಂಡಿತು. ಆ ನಂತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಆದರೆ ಕಳೆದ 2020ರಲ್ಲಿ 6 ಸಚಿವರು ಸೇರಿದಂತೆ 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದರು. ಇದರಿಂದ ಕಾಂಗ್ರೆಸ್ ಸರ್ಕಾರ ಉರುಳಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಲಿ ಅಸಮಾಧಾನದ ಅಲೆ ಎದ್ದಿದೆ.

ಸದ್ಯದಲ್ಲೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಇತ್ತೀಚಿನ ಸಮೀಕ್ಷೆಗಳು ಬಹಿರಂಗಪಡಿಸಿವೆ. ಇದರಿಂದ ಬಿಜೆಪಿ ನಾಯಕತ್ವ ತೀವ್ರ ಆಘಾತಕ್ಕೊಳಗಾಗಿದೆ.

ಈ ಹಿನ್ನಲೆಯಲ್ಲಿ, ಮಧ್ಯಪ್ರದೇಶದಲ್ಲಿ ಸೋಲು ತಪ್ಪಿಸಲು ಬಿಜೆಪಿಯಿಂದ ಕೇಂದ್ರ ಸಚಿವರಿಗೆ ವಿಧಾನಸಭೆಗೆ ಟಿಕೆಟ್ ನೀಡಲಾಗಿದೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಫಗನ್ ಸಿಂಗ್ ಕುಲಸ್ತೆ ಸೇರಿದಂತೆ 7 ಸಂಸದರನ್ನು ಬಿಜೆಪಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸುವ ಮೂಲಕ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಈಗಾಗಲೇ ಅಲ್ಲಿ ಬಿಜೆಪಿ ವರ್ಚಸ್ಸು ಕುಸಿದಿದ್ದು, ಜನರಿಗೆ ಒಂದಷ್ಟು ಪರಿಚಿತ ಮುಖಗಳನ್ನು ಬಳಸಿಕೊಂಡರೆ ಅಲ್ಲಿ ಆಗಿರುವ ಹಾನಿಯನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂದು ಬಿಜೆಪಿ ಭಾವಿಸಿದೆ ಎನ್ನಲಾಗಿದೆ.

ರಾಜಕೀಯ

ಬೆಂಗಳೂರು: ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ನಿಲುವು. ಇಂದು ಸಂಜೆ ಕಾನೂನು ಮತ್ತು ನೀರಾವರಿ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

“ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಚನೆ ಮಾಡಿದೆ. ಅವುಗಳು ವಾಸ್ತವ ಸ್ಥಿತಿಯ ಅವಲೋಕನ ಮಾಡಿ ತನ್ನ ಅಭಿಪ್ರಾಯವನ್ನು ನೀಡುತ್ತವೆ. ನಾವು ತಮಿಳುನಾಡಿಗೆ ಹರಿಸುವ ನೀರನ್ನು ಬಿಳಿಗುಂಡ್ಲುವಿನಲ್ಲಿ ಕೇಂದ್ರ ಜಲ ಆಯೋಗದ ಸುಪರ್ದಿಯಲ್ಲಿರುವ ಜಲಮಾಪನ ಕೇಂದ್ರ ಲೆಕ್ಕ ಹಾಕುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ 284.85 ಟಿಎಂಸಿ ನೀರು ಅಗತ್ಯವಿದೆ. ಆದರೆ ಸಂಕಷ್ಟ ಕಾಲದಲ್ಲಿ ನೀರು ಹೇಗೆ ಹಂಚಿಕೊಳ್ಳುವ ಸೂತ್ರವನ್ನು ಸುಪ್ರೀಂಕೋರ್ಟ್ ಇಲ್ಲವೆ ಪ್ರಾಧಿಕಾರ ಸಿದ್ಧಪಡಿಸಿಲ್ಲ” ಎಂದು ದೂರಿದರು.

“ಆಗಸ್ಟ್ ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಯಿತು. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ನಾವು ಇಲ್ಲಿಯ ವರೆಗೆ 123 ಟಿಎಂಸಿ ನೀರು ಬಿಡಬೇಕಾಗಿತ್ತು, ಈ ವರೆಗೆ 43 ಟಿಎಂಸಿ ನೀರು ಹೋಗಿದೆ. ಈಗ ನಮ್ಮ ರೈತರಿಗೂ ನೀರಿಲ್ಲ, ಕುಡಿಯಲು ಬೇಕಾದಷ್ಟು ಕೂಡಾ ನೀರಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಮ್ಮ ಅಧಿಕಾರಿಗಳು ಮಳೆಯ ಕೊರತೆ, ಜಲಾಶಯಗಳ ನೀರಿನ ಸಂಗ್ರಹ ಇತ್ಯಾದಿ ವಿವರಗಳನ್ನು ಮುಂದಿಟ್ಟು ನಮ್ಮ ವಾದ ಮಂಡಿಸಿದ್ದಾರೆ. ಇದರ ಹೊರತಾಗಿಯೂ ನೀಡಿರುವ ಆದೇಶವನ್ನು ವಿರೋಧಿಸುತ್ತಾ ಬಂದಿದ್ದೇವೆ; ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿ ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು, ನೀರಾವರಿಗೆ 30 ಟಿಎಂಸಿ, ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ ಎಂದು ಹೇಳಿದ್ದೇವೆ. ಒಟ್ಟು 106 ಟಿಎಂಸಿ ನೀರಿನ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರಾಗಿದೆ” ಎಂಬುದನ್ನು ಮನವರಿಕೆ ಮಾಡಿಕೊಟ್ಟರು.  

“ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ ಗಳೊಂದಿಗೆ ಇಂದು ಸಂಜೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ನೀರು ಕೊಡಬಾರದೆಂಬುದು ನಮ್ಮ ನಿಲುವು. ಅಂತಹ ನಿರ್ಧಾರ ಕೈಗೊಂಡರೆ ಏನಾಗಬಹುದೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದೇ? ನ್ಯಾಯಾಂಗ ನಿಂದನೆ ಆಗಬಹುದೇ? ಸರ್ಕಾರವನ್ನೇ ವಜಾ ಮಾಡಬಹುದೇ? ಈ ಎಲ್ಲ ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: 2046ರ ವೇಳೆಗೆ ಭಾರತದಲ್ಲಿ 15 ವರ್ಷದವರೆಗಿನ ಮಕ್ಕಳ ಸಂಖ್ಯೆಗಿಂತ ವಯಸ್ಸಾದವರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಹೇಳಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ – ಭಾರತ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್‌ನ ಸಹಯೋಗದೊಂದಿಗೆ ಭಾರತದ ವೃದ್ಧಾಪ್ಯದ ಕುರಿತು ಬಹು ನಿರೀಕ್ಷಿತ ವರದಿಯನ್ನು ಬಿಡುಗಡೆ ಮಾಡಿದೆ.

ಭಾರತದ ಜನಗಣತಿ, ಭಾರತ ಸರ್ಕಾರದ ಜನಸಂಖ್ಯೆಯ ಪ್ರಕ್ಷೇಪಗಳು ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು 2022ರ ಇತ್ತೀಚಿನ ಮಾಹಿತಿಯನ್ನು ಬಳಸಿಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂದ್‌ಗೆ ಅವಕಾಶ ಇಲ್ಲ; ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲು ಅವಕಾಶ: ಪೊಲೀಸ್ ಇಲಾಖೆ

ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 10 ವರ್ಷಗಳಲ್ಲಿ ಶೇಕಡಾ 41ರಷ್ಟು ಹೆಚ್ಚಳವಾಗಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆಯಲ್ಲಿ ಶೇ.20ರಷ್ಟು ಜನರು ವೃದ್ಧರಾಗಿರುತ್ತಾರೆ. 2046ರ ಹೊತ್ತಿಗೆ ಭಾರತದಲ್ಲಿ 15 ವರ್ಷದೊಳಗಿನ ಮಕ್ಕಳ ಸಂಖ್ಯೆಗಿಂತ ವೃದ್ಧರ ಸಂಖ್ಯೆ ಹೆಚ್ಚಿರುತ್ತದೆ.

ಭಾರತದ ಶೇಕಡ 40ರಷ್ಟು ವೃದ್ಧರು ಬಡತನದಲ್ಲಿ ಬದುಕುತ್ತಿದ್ದಾರೆ. 18.7 ರಷ್ಟು ಜನರು ಯಾವುದೇ ಆದಾಯವಿಲ್ಲದೆ ಬದುಕುತ್ತಿದ್ದಾರೆ. ಇದು ವಯಸ್ಸಾದವರ ಜೀವನದ ಗುಣಮಟ್ಟ ಮತ್ತು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 2022 ಮತ್ತು 2050ರ ನಡುವೆ, 80 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರ ಸಂಖ್ಯೆಯು ಶೇ.279 ರಷ್ಟು ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರು

ಡಿ.ಸಿ.ಪ್ರಕಾಶ್ ಸಂಪಾದಕರು

ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ನೀಡಿರುವ ಬಂದ್ ಕರೆ ಕಾನೂನು ಬಾಹಿರ, ಸಂವಿಧಾನ ವಿರೋಧಿ ಹಾಗೂ ಜನ ಸಾಮಾನ್ಯರ ಮೂಲಭೂತ ಹಕ್ಕುಚ್ಯುತಿ ಆಗುವುದರಿಂದ ಯಾವುದೇ ರೀತಿಯ ಬಂದ್‌ಗೆ ಅವಕಾಶವಿರುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 29 ರಂದು ವಿವಿಧ ರಾಜಕೀಯ ಪಕ್ಷಗಳು, ಕನ್ನಡ ಒಕ್ಕೂಟ ಕರ್ನಾಟಕ ರಾಜ್ಯ ಹಾಗೂ ಇತರ ಸಂಘಟನೆಗಳು ಕರ್ನಾಟಕದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಹಾಗೂ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ ಆದೇಶದ ವಿರುದ್ಧ ‘ಕರ್ನಾಟಕ ಬಂದ್‌’ಗೆ ಕರೆ ನೀಡಿರುತ್ತಾರೆ.

ಯಾವುದೇ ಬಂದ್‌ಗೆ ಕರೆ ನೀಡುವುದು ಕಾನೂನು ಬಾಹಿರ, ಸಂವಿಧಾನ ವಿರೊಧಿ ಮತ್ತು ಜನ ಸಾಮಾನ್ಯರ ಮೂಲಭೂತ ಹಕ್ಕು ವಿರೊಧಿ ಎಂದು ಮಾನ್ಯ ಕೇರಳ ಹೈಕೋರ್ಟ್ ಎಐಆರ್ 1997 ಕೇರಳ 291 (ಫುಲ್ ಬೆಂಚ್)ನ ನ್ಯಾಯಾಲಯದ ತೀರ್ಪಿನಲ್ಲಿ ಘೋಷಿಸಿದ್ದು, ಈ ತೀರ್ಪನ್ನು ಮಾನ್ಯ ಸುಪ್ರೀಂ ಕೋರ್ಟ್ 1998ರಲ್ಲಿ ಸಿಪಿಐ (ಎಮ್) V/S ಭರತ್ ಕುಮಾರ್ ಪ್ರಕರಣದಲ್ಲಿ ಬಂದ್ ಕರೆ ನೀಡುವುದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಈ ಕೆಳಕಂಡಂತೆ ಆದೇಶಿಸಿರುತ್ತದೆ.

As we find that organized bodies or associations or registered political parties, by their act of calling and holding bundhs, trample upon the rights of the citizens of the country protected by the constitution, we are of the view that this court has sufficient jurisdiction to declare that the calling of “bundh” and the holding of it is unconstitutional especially since it is undoubted that the national by leading to national loss of production. We cannot also ignore the destruction of public and private property when a bundh is enforced by the political parties or other organisations. We are inclined to the view that the political parties and the organisations which call for such bundhs and enforce them are really liable to compensate the Government, the public and the private citizen for the loss suffered by them for such destruction. The state cannot shirk its responsibility of taking steps to recoup and of recouping the loss from the sponsors and organisers of such bundhs. We think that these aspects justify our intervention under Article 226 of the Constitution.

(ಯಾವುದೇ ರಾಜಕೀಯ ಪಕ್ಷಗಳು, ಯಾವುದೇ ಸಂಘಟಿಕರು ಬಂದ್ ಕರೆ ನೀಡಿದ ಸಂಧರ್ಭದಲ್ಲಿ, ಆಗುವ ಆಸ್ತಿಪಾಸ್ತಿಯ ನಷ್ಟಕ್ಕೆ ಅಂತಹ ಬಂದ್‌ಗಳ ಆಯೋಜಕರು ಮತ್ತು ಸಂಘಟಿಕರೇ ನೇರ ಹೊಣೆಗಾರರಾಗಿ ಮಾಡಿ, ನಷ್ಟವನ್ನು ಸರ್ಕಾರಕ್ಕೆ ಮರುಪಾವತಿಸಲು/ಭರಿಸಲು ಜವಾಬ್ದಾರರಾಗಿರುತ್ತಾರೆ. ಇದನ್ನು ಉಲ್ಲಂಘಿಸಿ ಬಂದ್ ಅಥವಾ ಮೆರವಣಿಗೆ ಹಮ್ಮಿಕೊಂಡಲ್ಲಿ ಕಾನೂನು ರೀತ್ಯಾ ಕ್ರಮಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ).

ಬೆಂಗಳೂರು ನಗರದಲ್ಲಿ ವಿವಿಧ ಸಂಘಟಣೆಗಳು/ವ್ಯಕ್ತಿಗಳು ನಡೇಸುವ ಅನಧೀಕೃತ ಮೆರವಣಿಗೆ/ಧರಣಿಗಳಿಗೆ ಸಂಬಂಧಿಸಿದಂತೆ, ಮಾನ್ಯ ಸರ್ವೋಚ್ಚ ನ್ಯಾಯಲಯವು ರಿಟ್ ಅರ್ಜಿ ಸಂಖ್ಯೆ 1153/2017ರಲ್ಲಿ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ವಯ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 5781/2021ರ ನಿರ್ದೇಶನದಂತೆ ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ ರವರ Licensing and Regulation of Protests, Demonstrations and Protest Marches (Bangalore City) 2021 ಆದೇಶವನ್ನು ಬೆಂಗಳೂರು ನಗರ ವ್ಯಾಪ್ತಿಗೆ ಒಳಪಟ್ಟಂತೆ ಹೊರಡಿಸಿದ್ದು, ಘನ ಸರ್ಕಾರವು ಈ ಆದೇಶವನ್ನು ಕರ್ನಾಟಕ ರಾಜ್ಯ ಪ್ರಪತ್ರದಲ್ಲಿ ದಿನಾಂಕ: 10-01-2022 ರಂದು ಪ್ರಕಟಿಸಿರುತ್ತದೆ.

ಆದ್ದರಿಂದ ದಿನಾಂಕ: 29-09-2023 ರಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ನೀಡಿರುವ ಬಂದ್ ಕರೆ ಕಾನೂನು ಬಾಹಿರ, ಸಂವಿಧಾನ ವಿರೋಧಿ ಹಾಗೂ ಜನ ಸಾಮಾನ್ಯರ ಮೂಲಭೂತ ಹಕ್ಕುಚ್ಯುತಿ ಆಗುವುದರಿಂದ ಯಾವುದೇ ರೀತಿಯ ಬಂದ್‌ಗೆ ಅವಕಾಶವಿರುವುದಿಲ್ಲ. ಬೆಂಗಳೂರು ನಗರದಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹಮ್ಮಿಕೊಳಲು ಅವಕಾಶ ನೀಡಲು ಸಾಧ್ಯವಿರುವುದಿಲ್ಲ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಯವರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಹಮ್ಮಿಕೊಳ್ಳಲು ಅವಕಾಶವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ದೇಶ

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಎನ್‌ಐಎ ದಾಳಿಯ ಹೆಸರಿನಲ್ಲಿ ಮುಸ್ಲಿಂ ಜನರನ್ನು ಭಯೋತ್ಪಾದಕರಂತೆ ಬಿಂಬಿಸುವುದನ್ನು ಒಪ್ಪಲಾಗದು ಎಂದು ‘ಮನಿದನೇಯ ಮಕ್ಕಳ್ ಕಚ್ಚಿ’ ಮುಖ್ಯಸ್ಥ ಜವಾಹಿರುಲ್ಲಾ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ವರ್ಷ ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟ ಘಟನೆಯನ್ನು ಮುಂದಿಟ್ಟುಕೊಂಡು ಎನ್‌ಐಎ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಮುಸ್ಲಿಂ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ.

ಕಾರ್ ಬಾಂಬ್ ದಾಳಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದನ್ನು ನಾವು ಬೆಂಬಲಿಸುತ್ತೇವೆ. ಆದರೆ, ಅರೇಬಿಕ್ ಅಧ್ಯಯನ ಮಾಡಿದ ಮಾಜಿ ವಿದ್ಯಾರ್ಥಿಗಳ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಮುಂಜಾನೆ ವೇಳೆಯಲ್ಲಿ ಅವರ ಮನೆಯ ಬಾಗಿಲು ಮುರಿದಂತೆ ಬಡಿದು, ತನಿಖೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ, ಮುಸ್ಲಿಂ ಬಾಂಧವರನ್ನು ಜನರಲ್ಲಿ ಭಯೋತ್ಪಾದಕರಂತೆ ಬಿಂಬಿಸುತ್ತಿರುವುದು ಖಂಡನೀಯ. ಅವರು (ಎನ್ಐಎ) ಇದನ್ನು ಬದಲಾಯಿಸಿಕೊಳ್ಳಬೇಕು” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಜವಾಹಿರುಲ್ಲಾ, “ಅರೇಬಿಕ್ ಭಾಷೆ ವಿಶ್ವದ ಹಲವು ದೇಶಗಳಲ್ಲಿ ಮಾತನಾಡುವ ಭಾಷೆಯಾಗಿದೆ. ಅರೇಬಿಕ್ ಅಧ್ಯಯನ ಮಾಡಿದ ಮಾಜಿ ಮತ್ತು ಪ್ರಸ್ತುತ ವಿದ್ಯಾರ್ಥಿಗಳ ಕುಟುಂಬಗಳನ್ನು ತನಿಖೆಯ ಹೆಸರಿನಲ್ಲಿ ಎನ್ಐಎ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮುಸ್ಲಿಂ ಬಾಂಧವರ ಭವಿಷ್ಯವನ್ನು ಹಾಳುಮಾಡಿದ್ದಾರೆ. ಅವರ ಬಳಿಯಿದ್ದ ಲ್ಯಾಪ್‌ಟಾಪ್ ಮತ್ತು ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ನಿರ್ದಿಷ್ಟವಾಗಿ ಅವರನ್ನು ಭಯೋತ್ಪಾದಕರಂತೆ ಚಿತ್ರಿಸಿ, ಮನೆಯನ್ನು ಖಾಲಿ ಮಾಡುವಂತೆ ಹೇಳಿ ಕಿರುಕುಳ ನೀಡುತ್ತಿದ್ದಾರೆ.

ಕೊಯಮತ್ತೂರು ಭಯೋತ್ಪಾದಕರ ಶಿಬಿರ ಎಂಬ ಚಿತ್ರಣವನ್ನು ಎನ್‌ಐಎ ಸೃಷ್ಟಿಸುತ್ತಿದೆ. ಮಾಲೆಗಾಂವ್ ಸ್ಫೋಟ ನಡೆಸಿದವರು ಯಾರು? ಅಭಿನವ್ ಭಾರತ್ ಎಂಬ ಸಂಘಟನೆಯೇ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಎಂಬ ವಿಷಯವನ್ನು ನಾವೇ (ಇಸ್ಲಾಮಿಕ್ ಸಂಸ್ಥೆಗಳು) ಕಂಡುಹಿಡಿದು ಹೇಳಿದ್ದು. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಎನ್‌ಐಎ ಮೊಕದ್ದಮೆಗಳನ್ನು ದಾಖಲಿಸಿ ಶಿಕ್ಷೆ ನೀಡುತ್ತಿದೆ” ಎಂದರು.

“ಮೊಹಮದ್ ಅಜರುದ್ದೀನ್ ಈಗಾಗಲೇ ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಾರು ಸ್ಫೋಟ ಘಟನೆಗೂ, ಅರೇಬಿಕ್ ಭಾಷೆ ಓದಿದ ವಿದ್ಯಾರ್ಥಿಗಳಿಗೂ ಸಂಬಂಧ ಕಲ್ಪಿಸಿ ಎನ್ಐಎ ಪ್ರಕರಣ ದಾಖಲಿಸಿರುವುದು ಖಂಡನೀಯ” ಎಂದು ಹೇಳಿದ್ದಾರೆ. ಪತ್ರಿಕಾ ಘೋಷ್ಠಿಯಲ್ಲಿ ತಂದೆ ಪೆರಿಯಾರ್ ದ್ರಾವಿಡರ್ ಕಳಗಂ ಅಧ್ಯಕ್ಷ ಕೋವೈ ರಾಮಕೃಷ್ಣನ್ ಉಪಸ್ಥಿತರಿದ್ದರು.

ದೇಶ

ಲಂಡನ್: ವಿಶ್ವದಾದ್ಯಂತ ಜನರನ್ನು ಬಲಿತೆಗೆದುಕೊಂಡ ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ವೈರಸ್ ಹರಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 2020ರಲ್ಲಿ ಚೀನಾದಿಂದ ಹರಡಿದ ಕೊರೊನಾ ವೈರಸ್ ಮೂರು ವರ್ಷಗಳಿಂದ ಪ್ರಪಂಚದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿತು. ಈ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಸುಮಾರು 70 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಈ ಹಿನ್ನಲೆಯಲ್ಲಿ, ಕೊರೊನಾ ವೈರಸ್‌ಗಿಂತ ಏಳು ಪಟ್ಟು ಹೆಚ್ಚು ಅಪಾಯಕಾರಿಯ ಹೊಸ ವೈರಸ್ ಹೊರಹೊಮ್ಮಲಿದ್ದು, ಆ ಹೊಸ ಸಾಂಕ್ರಾಮಿಕ ರೋಗದಿಂದ ಸುಮಾರು 5 ಕೋಟಿ ಜನರು ಸಾಯಬಹುದು ಎಂದು ಅಂದಾಜಿಸಲಾಗಿದೆ. 1918-1920ರ ಅವಧಿಯಲ್ಲಿ ಜಗತ್ತನ್ನು ಬೆಚ್ಚಿ ಬೀಳಿಸಿದ ‘ಸ್ಪ್ಯಾನಿಷ್’ ಜ್ವರದಷ್ಟೇ ಇದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹೊಸ ರೀತಿಯ ವೈರಸ್‌ಗೆ ‘ಎಕ್ಸ್’ ಎಂದು ಹೆಸರಿಸಿದೆ. ಇದರ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ತಜ್ಞ ಮತ್ತು ಯುಕೆ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಡೇಮ್ ಕೇಟ್ ಬಿಂಗ್‌ಹ್ಯಾಮ್, ‘ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಹೊಸ ರೀತಿಯ ವೈರಸ್ ಅನ್ನು ಅಧ್ಯಯನ ಮಾಡಲಾಗಿದೆ. ಅಧ್ಯಯನದ ವರದಿಯಂತೆ, ಹೊಸದಾಗಿ ಗುರುತಿಸಲಾದ ‘ಎಕ್ಸ್’ ವೈರಸ್ ಹರಡಿದರೆ ಕನಿಷ್ಠ 5 ಕೋಟಿ ಜನರನ್ನು ಕೊಲ್ಲಬಹುದು ಎಂದು ಅಂದಾಜಿಸಲಾಗಿದೆ.

ಈ ಸಾಂಕ್ರಾಮಿಕ ರೋಗವನ್ನು ಎದುರಿಸುವುದು ದೊಡ್ಡ ಸವಾಲಾಗಿರುತ್ತದೆ. ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಸಾಂಕ್ರಾಮಿಕ ‘X’ ಹರಡುವ ಮೊದಲು ಅದನ್ನು ಎದುರಿಸಲು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 25 ಬಗೆಯ ವೈರಾಣುಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಬೆಂಗಳೂರು

ಬೆಂಗಳೂರು: ಬೆಂಗಳೂರು ಬಂದ್ ವೇಳೆಯಲ್ಲಿ ವಾಹನ ಸಂಚಾರ ಮತ್ತು ಸಾರ್ವಜನಿಕ ವಹಿವಾಟುಗಳಿಗೆ ಯಾರಿಂದಲೂ ತೊಂದರೆಯಾಗಿಲ್ಲ. ಒಟ್ಟು 771 ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಬೆಂಗಳೂರು ನಗರಾದ್ಯಂತ ಈ ದಿನ (ಸೆ.26) ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಈ ಹಿನ್ನಲೆಯಲ್ಲಿ, ನಗರಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಡಲಾಗಿತ್ತು. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ. ವಾಹನ ಸಂಚಾರ ಮತ್ತು ಸಾರ್ವಜನಿಕ ವಹಿವಾಟುಗಳಿಗೆ ಯಾರಿಂದಲೂ ದಕ್ಕೆ ಆಗದಂತೆ ನೋಡಿಕೊಳ್ಳಲಾಗಿತ್ತು.

ಇದನ್ನೂ ಓದಿ: ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು! – ಸಿದ್ದರಾಮಯ್ಯ

ಬಂದ್ ಅಂಗವಾಗಿ ಕೆಲವು ಸಂಘಟನೆಗಳು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಮತ್ತು ಮೆರೆವಣಿಗೆ ಮಾಡಲು ಯತ್ನಿಸಿದ್ದು, ಅವರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂಧಿಸಿ, ನಂತರ ಬಿಡುಗಡೆ ಮಾಡಿರುತ್ತಾರೆ. ಈ ರೀತಿ ಒಟ್ಟು 771 ಪ್ರತಿಭಟನಾಕಾರರನ್ನು ಬಂಧಿಸಲಾಗಿರುತ್ತದೆ. ಆಟೋರಿಕ್ಷ ಸಂಚಾರ ಸೇರಿದಂತೆ ಸಾರಿಗೆ ವ್ಯವಸ್ಥೆ ಸಾಮಾನ್ಯವಾಗಿದ್ದು, ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್‌ಗಳು ಸಾಮಾನ್ಯವಾಗಿ ತೆರೆದಿದ್ದವು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ಇದೇ ಅಂಗವಾಗಿ ಸುಮಾರು ಒಂದು ಸಾವಿರ ಜನರು ಪೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡು, ಈ ಸಮಯದಲ್ಲಿ ವಿವಿಧ ಸಂಘಟನೆ ಮುಖಂಡರು ಸರ್ಕಾರದ ದೋರೆಣೆಯ ವಿರುದ್ಧ ಪ್ರತಿಭಟಿಸಿರುತ್ತಾರೆ. ನಂತರ ರಾಜ್ಯದ ಮಂತ್ರಿಗಳಾದ ಆರ್.ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ ತೆರಳಿರುತ್ತಾರೆ. ಒಟ್ಟಾರೆ, ಜನ-ಸಾಮಾನ್ಯರಿಗೆ ಯಾವುದೇ ತೊಂದರೆ ಆಗದೇ ಬಂದ್ ಶಾಂತಿಯುತವಾಗಿ ಮುಕ್ತಾಯಗೊಂಡಿರುತ್ತದೆ” ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಾನು ನಿಮಗೆ ನೀಡಿದ ಉಡುಗರೆ: ಪ್ರಧಾನಿ ಮೋದಿ