ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
May 2023 » Dynamic Leader
October 11, 2024
ದೇಶ ರಾಜಕೀಯ

ಜೈಪುರ: ‘ಬಡವರನ್ನು ವಂಚಿಸುವುದು ಕಾಂಗ್ರೆಸ್ ತಂತ್ರ; ಕಳೆದ 50 ವರ್ಷಗಳಿಂದಲೂ ಅದನ್ನೇ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯ 9 ವರ್ಷಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಇಂದು (ಮೇ 31) ಪ್ರಧಾನಿ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಮೆಗಾ ರ‍್ಯಾಲಿಯನ್ನು ಉದ್ಘಾಟಿಸಿದರು. ಇದೇ ರೀತಿಯ ರ‍್ಯಾಲಿಗಳನ್ನು ದೇಶಾದ್ಯಂತ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಂದು ತಿಂಗಳ ಕಾಲ ಈ ರ‍್ಯಾಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ಸಂಸದರು, ಬಿಜೆಪಿ ನಾಯಕರು ಭಾಗವಹಿಸಿ, ತಮ್ಮ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಿದ್ದಾರೆ.

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ರಾಜಸ್ಥಾನದ ಅಜ್ಮೀರ್‌ಗೆ ಬರುವ ಮೊದಲು, ಬ್ರಹ್ಮ ದೇವಾಲಯ ಪುಷ್ಕರಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಬ್ರಹ್ಮದೇವನ ಆಶೀರ್ವಾದದಿಂದ, ಭಾರತದಲ್ಲಿ ಹೊಸ ಸೃಷ್ಟಿಗಳ ಯುಗ ನಡೆಯುತ್ತಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ 9 ವರ್ಷಗಳ ಆಡಳಿತ ಪೂರ್ಣಗೊಂಡಿದೆ. ಈ 9 ವರ್ಷಗಳ ಸರ್ಕಾರದ ಅವಧಿಯಲ್ಲಿ ಬಡವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ತರಲಾಗಿದೆ.

ಬ್ರಹ್ಮ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ

2014ರ ಮೊದಲು ಪರಿಸ್ಥಿತಿ ಹೇಗಿತ್ತು? ಆ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. ಗಡಿಯಲ್ಲಿ ರಸ್ತೆ ನಿರ್ಮಿಸಲು ಕಾಂಗ್ರೆಸ್ ಸರಕಾರ ಹೆದರುತಿತ್ತು. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಾಣುತಿತ್ತು. ಕಾಂಗ್ರೆಸ್ ಸರ್ಕಾರ ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡುತಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಕೇವಲ 60% ಲಸಿಕೆಗಳನ್ನು ಮಾತ್ರ ಜನರಿಗೆ ನೀಡಲಾಗುತ್ತಿತ್ತು. 100ರಲ್ಲಿ 40 ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಜೀವ ಉಳಿಸುವ ಲಸಿಕೆಗಳನ್ನು ನೀಡಲು ಅಸಮರ್ಥರಾಗಿದ್ದರು. ಪ್ರಸ್ತುತ, 100% ಲಸಿಕೆಗಳನ್ನು ಎಲ್ಲರಿಗೂ ನೀಡಲಾಗುತ್ತಿದೆ.

ಈಗ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ. ದೇಶದಲ್ಲಿ 100% ಲಸಿಕೆಗಳ ವ್ಯಾಪ್ತಿಯನ್ನು ಸಾಧಿಸಲು ಇನ್ನೂ 40 ವರ್ಷಗಳನ್ನು ತೆಗೆದುಕೊಳ್ಳುತಿತ್ತು. ಜೀವ ಉಳಿಸುವ ಲಸಿಕೆಗಳು ಲಭ್ಯವಿಲ್ಲದಿದ್ದಾಗ, ಸತ್ತ ಬಡ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ನೀವು ಊಹಿಸಬಲ್ಲಿರಾ? ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸುಳ್ಳು ಭರವಸೆ ನೀಡುವುದು ಹೊಸದೇನಲ್ಲ. ಇದನ್ನು 50 ವರ್ಷಗಳ ಹಿಂದಿನಿಂದಲೂ ಮಾಡುತ್ತಿದೆ.

ಇದು ಬಡವರಿಗೆ ಆ ಪಕ್ಷ ಮಾಡುವ ದೊಡ್ಡ ದ್ರೋಹವಾಗಿದೆ. ಬಡವರಿಗೆ ಮೋಸ ಮಾಡುವುದೇ ಕಾಂಗ್ರೆಸ್ ತಂತ್ರ. ಇದರಿಂದ ರಾಜಸ್ಥಾನದ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಒಂದು ಹುದ್ದೆ, ಒಂದು ಪಿಂಚಣಿ ಹೆಸರಿನಲ್ಲಿ, ಮಾಜಿ ಸೈನಿಕರಿಗೆ ದ್ರೋಹ ಬಗೆದಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಾಜಿ ಸೈನಿಕರಿಗೆ ಬಾಕಿ ಹಣ ನೀಡಿ, ಅವರ ಅಭಿವೃದ್ಧಿಗೆ ನೆರವಾದರು’ ಎಂದು ಪ್ರಧಾನಿ ಮೋದಿ ಮಾತನಾಡಿದರು.

ರಾಜಕೀಯ

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ, ಮಹಿಳೆಯರಿಗೆ ಸರ್ಕಾರಿ ಬಸ್ ಸಂಚಾರ ಉಚಿತ ಮುಂತಾದ  5 ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಎಲ್ಲಾ ಸಚಿವರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.

ನಂತರ ಈ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, “ನಾವು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ನಮ್ಮ ಎಲ್ಲಾ 5 ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದೇವೆ. ಜೂನ್ 2 ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಅವುಗಳನ್ನು ಜಾರಿಗೆ ಕೊಡುತ್ತೇವೆ” ಎಂದು ಭರವಸೆಯ ಮಾತುಗಳನ್ನು ಆಡಿದರು.

—–

ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿ: ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಅಹವಾಲುಗಳನ್ನು ಆಲಿಸಿ, ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಮೂಲಕ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಗೆ ಸಮರ್ಪಕವಾಗಿ ಹಣ ಪಾವತಿಯಾಗುವಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕ್ರೀಡೆ ದೇಶ ರಾಜಕೀಯ

ಲೈಂಗಿಕ ದೌರ್ಜನ್ಯ ಎಸಗಿರುವ ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ನೊಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕು ಎಂದು ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ, ಸಂಯುಕ್ತ ಕಿಶಾನ್ ಮೋರ್ಚ (ಎಸ್‌ಕೆಎಂ) ದೇಶವ್ಯಾಪಿ ಹೋರಾಟಗಳಿಗೆ ಕರೆ ನೀಡಿದೆ.

ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ, ತಮ್ಮ ಪದಕಗಳನ್ನು ಗಂಗೆಗೆ ಎಸೆಯಲು ತಯಾರಿ ನಡೆಸುತ್ತಿದ್ದ ಕುಸ್ತಿಪಟುಗಳೊಂದಿಗೆ ಸಂಯುಕ್ತ ಕಿಶಾನ್ ಮೋರ್ಚ ಮುಖಂಡ ರಾಕೇಶ್ ಟಿಕಾಯಿತ್ ರಾಜೀ ಸಂಧಾನ ನಡೆಸಿದರು.

ಕುಸ್ತಿಪಟುಗಳ ಪದಕಗಳನ್ನು ಸ್ವೀಕರಿಸಿ, 5 ದಿನಗಳಲ್ಲಿ ಇದನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಇದರಿಂದಾಗಿ ಕುಸ್ತಿಪಟುಗಳ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ಲೈಂಗಿಕ ಆರೋಪ ಮಾಡಿರುವ, ಕುಸ್ತಿಪಟುಗಳು ಮತ್ತು ಮಹಿಳಾ ಕುಸ್ತಿಪಟುಗಳು ಒಂದು ತಿಂಗಳಿಗೂ ಹೆಚ್ಚಾಗಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ, ಜೂನ್ 1 ರಂದು ಎಲ್ಲಾ ತಾಲ್ಲೂಕು ಕಛೇರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಪತ್ರ ರವಾನಿಸುವುದು ಮತ್ತು ಜೂನ್ 5 ರಂದು  ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗಳನ್ನು ನಡೆಸಲು ಸಂಯುಕ್ತ ಕಿಶಾನ್ ಮೋರ್ಚ ಕರೆ ನೀಡಿದೆ.

ಸಿನಿಮಾ

ವರದಿ:ಅರುಣ್ ಜಿ.,

ಬೆಂಗಳೂರು: ಸೋನು ಫಿಲಂಸ್ ಲಾಂಛನದಲ್ಲಿ ಕೆ.ಮಂಜುನಾಥ್ ನಾಯಕ್ ಅವರು ನಿರ್ಮಾಣ ಮಾಡಿರುವ ಚಿತ್ರ “ಅರಳಿದ ಹೂವುಗಳು” ಚಿತ್ರದುರ್ಗದ ಶಿಕ್ಷಕರು ಹಾಗೂ ಸಾಹಿತಿಗಳೂ ಆದ ಕೆ.ಮಂಜುನಾಥ್ ನಾಯಕ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಈ ಚಿತ್ರದ ಟೀಸರ್ ಹಾಗೂ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಹೆಣ್ಣು ಅಬಲೆಯಲ್ಲ ಸಬಲೆ, ಆಕೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಸಂದೇಶ ಹೊತ್ತು ಬರುತ್ತಿರುವ ಈ ಚಿತ್ರದ ಚಿತ್ರಕಥೆ, ಸಂಭಾಷಣೆ, ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡಿರುವವರು ಬಿ.ಎ.ಪುರುಷೋತ್ತಮ್ ಓಂಕಾರ್. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಮಂಜುನಾಥ್ ಈ ಹಿಂದೆ ಸೀತಮ್ಮನ ಮಗ ಚಿತ್ರ ನಿರ್ಮಿಸಿದ್ದೆ. 100 ಸಿನಿಮಾ ಮಾಡಿದ ಅನುಭವವನ್ನು ಅದೊಂದೇ ಸಿನಿಮಾ ನೀಡಿತು.

ಕಳೆದ ವರ್ಷ ನಾನೇ ಬರೆದ ಕಾದಂಬರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ನಿರ್ಧರಿಸಿ ಈ ಚಿತ್ರಕ್ಕೆ ‌ಕೈ ಹಾಕಿದೆ. ಅಲ್ಲದೆ ಪುರುಷೋತ್ತಮ್ ಅವರ ಪ್ಲಾನ್ ನನಗೆ ಇಷ್ಟವಾಯಿತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಸಮಾಜಕ್ಕೆ ಒಂದು ಸಂದೇಶ ಕೊಡಬೇಕು ಎಂಬುದು ನನ್ನ ಉದ್ದೇಶ. ಚಿತ್ರದ 63 ಸೀನ್‌ಗಳಲ್ಲೂ ಒಂದೊಂದು ಸಂದೇಶ ಹೇಳಿದ್ದೇವೆ. ಪುರುಷೋತ್ತಮ್ ಅವರ ಕಾರಣದಿಂದಲೇ ನಿಂತುಹೋಗಬೇಕಿದ್ದ ಈ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಜೂನ್ 9ಕ್ಕೆ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಇಡೀ ಚಿತ್ರವನ್ನು ಚಿತ್ರದುರ್ಗದ ಚಂದವಳ್ಳಿಯ ತೋಟ, ಕಾಲೇಜು, ಕೋಟೆಯ ಸುತ್ತಮುತ್ತ 30 ದಿನಗಳ ಕಾಲ  ಚಿತ್ರೀಕರಿಸಿದ್ದೇವೆ ಎಂದರು.

ನಿರ್ದೇಶಕ ಪುರುಷೋತ್ತಮ್ ಮಾತನಾಡಿ, “ಹೆಣ್ಣು ಅಬಲೆಯಲ್ಲ ಸಬಲೆ, ಅವಮಾನ  ಮಾಡಿದವರ, ಆಡಿಕೊಂಡವರ ಮುಂದೆ ಗೆದ್ದು, ಸಾಧನೆ ಮಾಡಿ ಎಲ್ಲರೆದುರು ತಲೆಯೆತ್ತಿ ನಿಲ್ಲಬೇಕು. ಸಾವೇ ಕೊನೆ ಹಂತ ಎಂದು ನಿರ್ಧರಿಸಬಾರದು. ಕಷ್ಟ ಬಂದಿದೆ, ಮೋಸ ಹೋಗಿದ್ದೇನೆಂದು ಹೆದರಿ ಕುಳಿತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ಛಲದಿಂದ ಗೆಲ್ಲುವುದೇ ಸಾಧನೆ. ಆಗಲೇ ನಮ್ಮ ಜೀವನ ಅರಳಿದ ಹೂವುಗಳು ಆಗುತ್ತದೆ ಎನ್ನುವುದೇ ಈ ಚಿತ್ರದ ಕಥೆ” ಎಂದು ಹೇಳಿದರು.

ಇನ್ನು ಈ ಚಿತ್ರದ ನಾಲ್ಕು ಹಾಡುಗಳಿಗೆ ರಾಜ್ ಭಾಸ್ಕರ್ ಅವರ ಸಂಗೀತ ಸಂಯೋಜನೆ ಇದ್ದು, ಮುತ್ತುರಾಜ್  ಅವರ ಛಾಯಾಗ್ರಹಣ, ಕವಿತಾ ಭಂಡಾರಿ ಅವರ ಸಂಕಲನವಿದೆ. ಚಿತ್ರದ ಸಹ ನಿರ್ಮಾಪಕರಾಗಿ ಸುಮೀತ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಕೆ.ಮಂಜುನಾಥ್ ನಾಯಕ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧನಲಕ್ಷ್ಮಿ ಭಾಗ್ಯಶ್ರೀ, ಶಶಿಕಲಾ, ಸುಲೋಚನ, ರಂಜಿತ್, ಗಂಚು ಕುಮಾರ್, ಅಪ್ಪು ಮಂಜುಳಾ, ವಿಶ್ವ ಡುಮ್ಮು ಉಳಿದ ಪಾತ್ರವರ್ಗದಲ್ಲಿದ್ದಾರೆ. ಜಯಲಕ್ಷ್ಮಿ ಫಿಲಂಸ್‌ನ ರಾಜು ಅವರು ಈ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ದೇಶ

ಜೈಪುರ: ಪ್ರತಿಯೊಬ್ಬರೂ ತಮ್ಮ ಲಿಂಗ ಮತ್ತು ಲಿಂಗ ಗುರುತನ್ನು ನಿರ್ಧರಿಸುವುದು ಒಬ್ಬರ ಹಕ್ಕಾಗಿದೆ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ.

ರಾಜಸ್ಥಾನದಲ್ಲಿ ಹುಟ್ಟಿನಿಂದಲೇ ಹೆಣ್ಣಾಗಿದ್ದ ವ್ಯಕ್ತಿಗೆ, ಹೆಣ್ಣಿನ ಸ್ಥಾನಮಾನದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲಾಯಿತು. 2013ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದ ಅವರಿಗೆ ಲಿಂಗ ದೋಷವಿರುವುದು ಪತ್ತೆಯಾಗಿತ್ತು. ತರುವಾಯ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಲಿಂಗ ಪರಿವರ್ತನೆ ಮಾಡಿ ಪುರುಷರಾದರು.

ಮಹಿಳೆ ಒಬ್ಬಳನ್ನು ಮದುವೆಯಾಗಿ ಮಕ್ಕಳೂ ಸಹ ಅವರಿಗಿದ್ದಾರೆ. ಈ ಹಿನ್ನಲೆಯಲ್ಲಿ ಆತನ ಕುಟುಂಬವು ಭವಿಷ್ಯದಲ್ಲಿ ಎಲ್ಲಾ ವಿತ್ತೀಯ ಪ್ರಯೋಜನಗಳನ್ನು ಪಡೆಯುವ ರೀತಿಯಲ್ಲಿ, ತನ್ನ ಲಿಂಗವನ್ನು ಪುರುಷ ಎಂದು ನೋಂದಾಯಿಸಲು ಆದೇಶ ನೀಡುವಂತೆ ಕೋರಿ ಅವರು ರಾಜಸ್ಥಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಇದೀಗ ತೀರ್ಪನ್ನು ಪ್ರಕಟಿಸಿದೆ. ತೀರ್ಪಿನಲ್ಲಿ ‘ಪ್ರತಿಯೊಬ್ಬರೂ ತಮ್ಮ ಲಿಂಗ ಮತ್ತು ಲಿಂಗ ಗುರುತಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ತಾಯಿಯ ಗರ್ಭದಲ್ಲಿರುವಾಗಲೇ ಒಬ್ಬರಿಗೆ ಸಾಂವಿಧಾನಿಕವಾಗಿ ಸಿಗಬಹುದಾದ ಎಲ್ಲಾ ಹಕ್ಕುಗಳನ್ನು ನೀಡಬೇಕಾಗಿದೆ. ತೃತೀಯ ಲಿಂಗ ಕಾಯ್ದೆಯ ಪ್ರಕಾರ ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಗೊಂಡ ವ್ಯಕ್ತಿಗೆ, ಅವರು ಬಯಸಿದ ಲಿಂಗ ಮಾನ್ಯತೆಯನ್ನು ನೀಡಬೇಕು.

ಆದರೆ, 2019ರಲ್ಲಿ ಕಾನೂನು ಜಾರಿಗೆ ಬರುವ ಮೊದಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಿಂದಿನ ಕಾನೂನುಗಳ ಪ್ರಕಾರ, ಅವರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಲಿಂಗವನ್ನು ಬದಲಾಯಿಕೊಳ್ಳಬಹುದು. ಅದರ ಆಧಾರದ ಮೇಲೆ, ರಾಜ್ಯ ಸರ್ಕಾರವು ಅವರ ಸೇವಾ ದಾಖಲೆಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ವಿದೇಶ

ಮಿಸೌರಿ: ಜಗತ್ತಿನಲ್ಲಿ ಎಲ್ಲೋ ಒಂದು ಕಡೆ ಪವಾಡ ಸದೃಶ ಘಟನೆಗಳು ನಡೆಯುತ್ತಿರುತ್ತವೆ. ಅದರಂತೆ ಅಮೆರಿಕದ ಮಿಸೌರಿ ಎಂಬ ಪುಟ್ಟ ಪಟ್ಟಣದಲ್ಲಿ ಪವಾಡವೊಂದು ನಡೆದಿದೆ. ಅಲ್ಲಿನ ಕ್ಯಾಥೋಲಿಕ್ ಸನ್ಯಾಸಿನಿ ವಿಲ್‌ಹೆಲ್ಮಿನಾ ಲಾನ್‌ಸಾಸ್ಟರ್ 2019 ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು.

ಅವರ ದೇಹವನ್ನು ಮರದ ಶವಪೆಟ್ಟಿಗೆಯಲ್ಲಿ ಇರಿಸಿ ಸಮಾಧಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ಶವವನ್ನು ಬೇರೆಡೆ ಹೂಳಲು ಕ್ರಮಕೈಗೊಳ್ಳಲಾಗಿದೆ. ಅದರಂತ ಕೆಲ ದಿನಗಳ ಹಿಂದೆ ಅವರ ದೇಹವನ್ನು ಹೊರತೆಗೆಯಲಾಗಿತ್ತು. ನಂತರ ಇತರ ಸನ್ಯಾಸಿನಿಯರು ಶವಪೆಟ್ಟಿಗೆಯನ್ನು ತೆರೆದಾಗ ಅವರಿಗೆ ಆಶ್ಚರ್ಯವಾಯಿತು. ಕಾರಣ, ಸನ್ಯಾಸಿನಿ ವಿಲ್‌ಹೆಲ್ಮಿನಾ ಲಾನ್‌ಸಾಸ್ಟರ್ ಅವರ ದೇಹವು ಸಮಾಧಿಯಾದ 4 ವರ್ಷಗಳ ನಂತರವೂ ಅದು ಹಾಗೇ ಇತ್ತು. ಅವರ ಕೂದಲು, ಮೂಗು, ತುಟಿಗಳು ಮತ್ತು ಕಣ್ಣುಗಳು ಹಾನಿಗೊಳಗಾಗದೆ ಹಾಗೆಯೇ ಇತ್ತು. ಅವರ ಮುಖದಲ್ಲಿ ನಗು ಬೆಳಗಿತು.

ಸಾಮಾನ್ಯವಾಗಿ ಯಾರಾದರೂ ಸತ್ತರೆ, ಅವರ ದೇಹವನ್ನು ಹೂಳಿದಾಗ ಅದು ಕೆಲವೇ ತಿಂಗಳುಗಳಲ್ಲಿ ಅಸ್ಥಿಪಂಜರವಾಗಿ ಬದಲಾಗುತ್ತದೆ. ಆದರೆ ಸನ್ಯಾಸಿನಿಯ ಶವ ಅಂತಹದ್ದೇನೂ ಇಲ್ಲದೇ ಇದ್ದುದರಿಂದ ಆ ಸುದ್ದಿ ವೇಗವಾಗಿ ಹಬ್ಬಿತ್ತು. ಇದರಿಂದ ಮಿಸೌರಿ ಪಟ್ಟಣದ ಜನರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು. ಅವರು ಸನ್ಯಾಸಿನಿಯ ದೇಹವನ್ನು ಆಶ್ಚರ್ಯದಿಂದ ನೋಡಿದರು. ಜನರು ಅವರ ಪಾದಗಳನ್ನು ಮುಟ್ಟಿ ನಮಿಸಿದರು. ಇಂದಿಗೂ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಬಳಿಕ ಮತ್ತೆ ಅಂತ್ಯಕ್ರಿಯೆ ನಡೆಯಲಿದೆ. ಇದು ಮಿಸೌರಿಯ ಪವಾಡ ಎಂದು ಆ ಊರಿನವರು ಹೇಳುತ್ತಿದ್ದಾರೆ.

ಅವರ ಶವದ ಬಳಿ ಸೂಚನಾ ಫಲಕವೊಂದನ್ನು ಹಾಕಲಾಗಿದೆ. ಅದರಲ್ಲಿ ‘ಸಹೋದರಿಯ ದೇಹವನ್ನು ವಿಶೇಷವಾಗಿ ಅವರ ಪಾದಗಳನ್ನು ಸ್ಪರ್ಶಿಸುವಲ್ಲಿ ದಯವಿಟ್ಟು ಮೃದುವಾಗಿರಿ’ ಎಂದು ಉಲ್ಲೇಖಿಸಲಾಗಿದೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಲಗ್ಗೆರೆ, ಚೌಡೇಶ್ವರಿ ನಗರ ನಿವಾಸಿಯಾದ ಕಾಂಗ್ರೆಸ್ ಕಾರ್ಯಕರ್ತ ಮತ್ತಿ ರವಿ ಎಂಬಾತನು ಸ್ನೇಹಿತನಾದ ಕೃಷ್ಣಮೂರ್ತಿಯ ಹುಟ್ಟು ಹಬ್ಬಕ್ಕೆಂದು ದಿನಾಂಕ: 24-04-2023 ರಂದು ಸಂಜೆ ಸುಮಾರು 07-45 ಗಂಟೆಯ ಸಮಯಕ್ಕೆ ಹೋಗಿ ಮನೆಗೆ ವಾಪಸ್ಸು ಬಂದಿದ್ದ. ರವಿ ಮನೆಗೆ ಬಂದನಂತರ ಮಂಜು ಎಂಬುವವನು ರವಿಗೆ ಪದೇ ಪದೇ ಕಾಲ್ ಮಾಡುತ್ತಲೇ ಇದ್ದು, ಸದರಿ ಕರೆಯನ್ನು ಸ್ವೀಕರಿಸಿ, 50 ಅಡಿ ರಸ್ತೆಯ ಹತ್ತಿರ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟು ಹೋಗಿದ್ದ.

ದಿನಾಂಕ: 25-04-2023 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ ರವಿಯ ಸ್ನೇಹಿತ ನರಸಿಂಹ ರವಿಯ ಮನೆಯ ಬಳಿ ಬಂದು, ‘ರವಿಗೆ ಮಂಜು ಮತ್ತು ಆತನ ಸ್ನೇಹಿತರು ಹೊಡೆದಿರುತ್ತಾರೆ, ಆತನನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ’ ಎಂದು ಆತನ ಪತ್ನಿ ಪುಷ್ಪ ಬಳಿ ತಿಳಿಸಿದ್ದಾನೆ. ಪುಷ್ಪ ಅವರು ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣಾ ಮೊ.ಸಂ.154/2023 ಕಲಂ 302 ಐಪಿಸಿ ಮತ್ತು ಕಲಂ 3(2), (ವಿ), ಎಸ್.ಸಿ/ಎಸ್.ಟಿ ಆಕ್ಟ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ 1) ಕೆ.ಮಂಜುನಾಥ್ @ ಮಂಜು, 2) ನಾಗರಾಜ್ @ ಸ್ಪಾಟ ನಾಗ, 3) ಬಿ.ಸಿ.ಗೋಪಾಲ್ @ ಗೋಪಿ, 4) ಕಿರಣ್ ಕುಮಾರ್ ಎನ್, 5) ಮಣಿಕಂಠನ್ ಕೆ @ಮಣಿ, 6) ಕಾರ್ತಿಕ್ ಎಸ್, 7) ಬಾಬು @ ಹಾಸಿಗೆ ಬಾಬು ಮುಂತಾದ ಒಟ್ಟು 7 ಜನರನ್ನು ನಂದಿನಿ ಲೇಔಟ್ ಪೊಲೀಸ್ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ.

ಮೃತ ರವಿ

ಕಳೆದ ಯುಗಾದಿ ಹಬ್ಬದಲ್ಲಿ ಮೃತ ರವಿ ಜೂಜಾಟದಲ್ಲಿ ಹಣವನ್ನು ಗೆದ್ದಿದ್ದು, ಎ1, ಎ2 ಅರೋಪಿಗಳು ಸೋತ ಹಣವನ್ನು ಕೊಡುವಂತೆ ಮೃತ ರವಿಗೆ ಕೇಳಿದ್ದು, ಮೃತ ರವಿ ಹಣ ಕೊಡದಿದ್ದರಿಂದ, ಎ1, ಎ2 ಆರೋಪಿಗಳು ಬಲವಂತವಾಗಿ ರವಿಯಿಂದ ಸ್ವಲ್ಪ ಹಣವನ್ನು ಪಡೆದುಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ಮೃತ ರವಿ ತನ್ನ ಹಣವನ್ನು ವಾಪಸ್ಸು ಕೊಡುವಂತೆ ಎ1, ಎ2 ಅರೋಪಿಗಳಿಗೆ ಅಗಾಗೆ ಕೇಳುತ್ತಿದ್ದರಿಂದ ಸದರಿ ಅರೋಪಿಗಳು, ದ್ವೇಷ ಸಾಧಿಸಿಕೊಂಡು ಚೌಡೇಶ್ವರಿ ನಗರ, ಹಳ್ಳಿರುಚಿ ಸಸ್ಯಹಾರಿ ಹೋಟೆಲ್ ಮುಂಭಾಗ ಖಾಲಿ ಜಾಗದ ಬಳಿ ಮೃತ ರವಿಯನ್ನು ಕರೆಯಿಸಿಕೊಂಡು, ಗುಂಪು ಕಟ್ಟಿಕೊಂಡು, ಡ್ರ‍್ಯಾಗರ್‌ನಿಂದ ಬಲವಾಗಿ ಹೊಡೆದು, ಸೈಜು ಕಲ್ಲಿನಿಂದ ದೇಹದ ಮೇಲೆ ಇತರೆ ಭಾಗಗಳಿಗೆ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಶಿವ ಪ್ರಕಾಶ್ ದೇವರಾಜು, ಐಪಿಎಸ್., ಬೆಂಗಳೂರು ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಪ್ರವೀಣ್ ಎಂ. ಸಹಾಯಕ ಪೊಲೀಸ್ ಆಯುಕ್ತರು, ಮಲ್ಲೇಶ್ವರಂ ಉಪ-ವಿಭಾಗ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ನಲವಾಗಲು ಮಂಜುನಾಥ್ ಹಾಗೂ ನಂದಿನಿ ಪೊಲೀಸ್ ಠಾಣೆಯ ನೇತೃವದಲ್ಲಿ ಪಿಎಸ್ಐಗಳಾದ ಭೀಮಾಶಂಕರ್ ಗುಮತೆ, ವಿನೋಧ ರಾಥೋಡ್, ಕೃಷ್ಣಪ್ಪ ಮಾಚನಹಳ್ಳಿ, ಚಂದನ್ ಕುಮಾರ್ ಮತ್ತು ಠಾಣೆಯ ಪೊಲೀಸ್ ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  

ಸಿನಿಮಾ

ವರದಿ: ಅರುಣ್ ಜಿ.,

ಇಂದು ಡಾ.ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈಜೋಡಿಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ ಸಹ ಕಾಣಿಸಿಕೊಂಡಿರುವುದು ವಿಶೇಷ.

ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವಿವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.  ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್, ಜೂನ್ ತಿಂಗಳಲ್ಲಿ ಅವಿವಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕಾಂಗ್ರೆಸ್ ಪಕ್ಷವು ರಾಜ್ಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಸೋಲಿಸಲು ಸಾಧ್ಯ ಎಂದು ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಶರದ್ ಪವಾರ್ ಮುಂತಾದ ನಾಯಕರು ಒತ್ತಾಯಿಸಿದ್ದಾರೆ. ಆದರೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವಲ್ಲಿ ವಿವಿಧ ಸಮಸ್ಯೆಗಳು ಕಂಡುಬರುತ್ತವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಕಾಂಗ್ರೆಸ್ ನೇತೃತ್ವದಲ್ಲಿ ಒಟ್ಟುಗೂಡಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದುವರೆಗೆ ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಶೇಖರ್ ರಾವ್, ಅಖಿಲೇಶ್ ಯಾದವ್, ಕೇಜ್ರಿವಾಲ್ ಸೇರಿದಂತೆ ರಾಜ್ಯದ ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನೂ ಭೇಟಿಯಾಗಿದ್ದರು. ಇದಾದ ಬಳಿಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಅಂತಿಮ ರೂಪ ಪಡೆಯುತ್ತಿದೆ. ಈ ವೇಳೆ ರಾಜಕೀಯ ತಜ್ಞರು ಕುತೂಹಲದಿಂದ ಕಾಯುತ್ತಿದ್ದ ಎಲ್ಲ ವಿರೋಧ ಪಕ್ಷಗಳು ಒಂದೆಡೆ ಸೇರುವ ಕಾರ್ಯಕ್ರಮ ಜೂನ್ 12 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಸಭೆಗೆ ಹಾಜರಾಗುವಂತೆ ನಿತೀಶ್ ಕುಮಾರ್ ವಿಪಕ್ಷ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಖರ್ಗೆ ಮತ್ತು ರಾಹುಲ್ ಭಾಗವಹಿಸುವುದು ಖಚಿತವಾಗಿದೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ಮತ್ತು ಶರದ್ ಪವಾರ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಈ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಕಮ್ಯುನಿಸ್ಟರೂ ಭಾಗವಹಿಸಲಿದ್ದಾರೆ.

ಆದರೆ, ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ರಾವ್, ತೆಲುಗು ದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು, ವೈ.ಎಸ್.ಆರ್. ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ಸಮನ್ವಯಗೊಳಿಸಲು ನಿತೀಶ್ ಕುಮಾರ್ ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಆದರೂ ನಿತೀಶ್ ಕುಮಾರ್ ಅವರು ಒಮ್ಮತದಿಂದ ಎಲ್ಲರನ್ನೂ ಒಟ್ಟುಗೂಡಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಶೇ.38ರಷ್ಟು ಮತಗಳನ್ನು ಪಡೆದಿತ್ತು. ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಬಿಕ್ಕಟ್ಟು ಸೃಷ್ಟಿಸಬಹುದು ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ಒಟ್ಟು 543 ಎಂಪಿ ಕ್ಷೇತ್ರದಲ್ಲಿ ಕನಿಷ್ಠ 450 ಕ್ಷೇತ್ರಗಳಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

450 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಖಂಡಿತವಾಗಿಯೂ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಬರದಂತೆ ತಡೆಯಬಹುದು ಎಂದು ನಿತೀಶ್ ಕುಮಾರ್ ರಾಜ್ಯ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಆದರೆ ರಾಜ್ಯ ಪಕ್ಷದ ನಾಯಕರು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದರಿಂದ ಕಾಂಗ್ರೆಸ್ ತನ್ನ ನಿಲುವು ಬದಲಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕು.

ಕ್ರೀಡೆ ದೇಶ

ಬೆಂಗಳೂರು: “ಲೈಂಗಿಕ ದೌರ್ಜನ್ಯ ಎಸಗಿರುವ ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿ ದೌರ್ಜನ್ಯ ಎಸಗಿರುವುದು ಖಂಡನೀಯ. ತಕ್ಷಣ ಬಂಧಿತ ಮಹಿಳಾ ಕುಸ್ತಿಪಟುಗಳನ್ನು ಬಿಡುಗಡೆಗೊಳಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

“ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂಬಂತೆ ಸಂಭ್ರಮಿಸುತ್ತಿರುವ ನರೇಂದ್ರ ಮೋದಿ ಸರ್ಕಾರ, ಅಲ್ಲಿಂದ ಕೂಗಳತೆಯ ದೂರದಲ್ಲಿ ಧರಣಿ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ಪ್ರಜಾಸತ್ತಾತ್ಮಕ ಹಕ್ಕನ್ನು ಪೊಲೀಸರ ಮೂಲಕ ಹತ್ತಿಕ್ಕಲು ಹೊರಟಿರುವುದು ಆತ್ಮವಂಚನಾ ನಡವಳಿಕೆಯ ಪ್ರತೀಕ.

ಕೇಂದ್ರ  ಬಿಜೆಪಿ ಸರ್ಕಾರ ತಕ್ಷಣ ಲೈಂಗಿಕ ದೌರ್ಜನ್ಯದ ಆರೋಪಕ್ಕೊಳಗಾಗಿರುವ ಭಾರತೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ನೊಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕು” ಎಂದು ಹೇಳಿದ್ದಾರೆ.