ಹೋರಾಡುತ್ತಿರುವ ಹೆಣ್ಣು ಮಕ್ಕಳ ಹೆಗಲಿಗೆ ರೈತ ಸಮುದಾಯ: ದೇಶವ್ಯಾಪಿ ಹೋರಾಟಕ್ಕೆ ಸಂಯುಕ್ತ ಕಿಶಾನ್ ಮೋರ್ಚ ಕರೆ!
ಲೈಂಗಿಕ ದೌರ್ಜನ್ಯ ಎಸಗಿರುವ ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ನೊಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕು ಎಂದು ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ, ಸಂಯುಕ್ತ ಕಿಶಾನ್ ಮೋರ್ಚ (ಎಸ್‌ಕೆಎಂ) ದೇಶವ್ಯಾಪಿ ಹೋರಾಟಗಳಿಗೆ ಕರೆ ನೀಡಿದೆ.
ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ, ತಮ್ಮ ಪದಕಗಳನ್ನು ಗಂಗೆಗೆ ಎಸೆಯಲು ತಯಾರಿ ನಡೆಸುತ್ತಿದ್ದ ಕುಸ್ತಿಪಟುಗಳೊಂದಿಗೆ ಸಂಯುಕ್ತ ಕಿಶಾನ್ ಮೋರ್ಚ ಮುಖಂಡ ರಾಕೇಶ್ ಟಿಕಾಯಿತ್ ರಾಜೀ ಸಂಧಾನ ನಡೆಸಿದರು.
ಕುಸ್ತಿಪಟುಗಳ ಪದಕಗಳನ್ನು ಸ್ವೀಕರಿಸಿ, 5 ದಿನಗಳಲ್ಲಿ ಇದನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಇದರಿಂದಾಗಿ ಕುಸ್ತಿಪಟುಗಳ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ಲೈಂಗಿಕ ಆರೋಪ ಮಾಡಿರುವ, ಕುಸ್ತಿಪಟುಗಳು ಮತ್ತು ಮಹಿಳಾ ಕುಸ್ತಿಪಟುಗಳು ಒಂದು ತಿಂಗಳಿಗೂ ಹೆಚ್ಚಾಗಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ, ಜೂನ್ 1 ರಂದು ಎಲ್ಲಾ ತಾಲ್ಲೂಕು ಕಛೇರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಪತ್ರ ರವಾನಿಸುವುದು ಮತ್ತು ಜೂನ್ 5 ರಂದು ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗಳನ್ನು ನಡೆಸಲು ಸಂಯುಕ್ತ ಕಿಶಾನ್ ಮೋರ್ಚ ಕರೆ ನೀಡಿದೆ.