ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
August 2024 » Dynamic Leader
December 5, 2024
Home 2024 August
ದೇಶ

“ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ; ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” – ವಿನೇಶ್ ಫೋಗಟ್

ಹರಿಯಾಣದ ರೈತರು ಶಂಭು ಗ್ರಾಮದ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 200 ದಿನಗಳನ್ನು ತಲುಪಿದ್ದು, ಇಂದು (ಶನಿವಾರ) ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ರೈತರೊಂದಿಗೆ ಸೇರಿಕೊಂಡಿದ್ದಾರೆ. “ನಿಮ್ಮ ಮಗಳು ನಿಮ್ಮೊಂದಿಗೆ ನಿಂತಿದ್ದಾಳೆ” ಎಂದು ಮಾತನಾಡಿ, ತಮ್ಮ ದೃಢವಾದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ 13 ರಿಂದ ಹರಿಯಾಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಆರಂಭಿಸಿದ್ದಾರೆ. ಹರಿಯಾಣದ ಗಡಿಭಾಗದ ಶಂಭು ಪ್ರದೇಶದಲ್ಲಿ ರೈತರು ದೆಹಲಿಗೆ ತೆರಳದಂತೆ ಅಧಿಕಾರಿಗಳು ತಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ರೈತರನ್ನು ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, “ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು, ಯಾರೂ ನಮಗಾಗಿ ಬರುವುದಿಲ್ಲ. ನಮ್ಮ ಕೋರಿಕೆಗಳು ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” ಎಂದು ಹೇಳಿದ್ದಾರೆ.

ಅಲ್ಲದೆ, “ರೈತರು ತಮ್ಮ ಹಕ್ಕುಗಳಿಗಾಗಿ ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. 200 ದಿನ ಕಳೆದರೂ ಅವರ ಬೇಡಿಕೆ ಈಡೇರದಿರುವುದು ಬೇಸರದ ಸಂಗತಿಯಾಗಿದೆ. ಅವರು ತಮ್ಮ ಹಕ್ಕುಗಳಿಗೆ ಧ್ವನಿಗೂಡಿಸುವುದನ್ನು ನೋಡಿದಾಗ ನಾವು ಹೆಚ್ಚುವರಿ ಶಕ್ತಿಯನ್ನು ಪಡೆಯುತ್ತೇವೆ” ಎಂದೂ ಹೇಳಿದ್ದಾರೆ.

2021ರ ಮುಷ್ಕರವನ್ನು ದೂಷಿಸಿದ ಸಂಸದೆ ಕಂಗನಾ ರಣಾವತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ನಿರತ ರೈತರು ಒತ್ತಾಯಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ರೈತರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ರೈತರ ಚುನಾವಣಾ ತಂತ್ರಗಾರಿಕೆ ಬಗ್ಗೆ ಯಾವುದೆ ಸ್ಪಷ್ಟ ಅಭಿಪ್ರಾಯಗಳಿಲ್ಲ!

ವಿದೇಶ

ರಕ್ಷಿಸಲ್ಪಟ್ಟವರಲ್ಲಿ 30 ಮಂದಿಯನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಉಳಿದ 17 ಮಂದಿಯನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.

ಲಾವೋಸ್, ಆಗ್ನೇಯ ಏಷ್ಯಾದ ಥೈಲ್ಯಾಂಡ್ ಬಳಿ ಇರುವ ದೇಶ. ಈ ದೇಶದಲ್ಲಿ ಐಟಿ ಕಂಪನಿಗಳಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಭಾರತೀಯರನ್ನು ಕರೆತರಲಾಗಿದೆ. ಆದರೆ, ಅವರು ಬಲವಂತವಾಗಿ ಸೈಬರ್ (Cybercrime) ಅಪರಾಧಗಳಲ್ಲಿ ತೊಡಗಿಸಿಕೊಳ್ಳಲು ದೂಡಲ್ಪಟ್ಟಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ.

ಆ ರೀತಿಯಲ್ಲಿ, ಆ ದೇಶದ ಬೋಹಿಯೊ ಪ್ರಾಂತ್ಯದ ವಿಶೇಷ ಆರ್ಥಿಕ ವಲಯದಲ್ಲಿ 47 ಭಾರತೀಯರಿಗೆ ಬೋಗಸ್ ಐಟಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿ, ಅವರನ್ನು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಲಾಗಿದೆ.

ಈ ಬಗ್ಗೆ ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ಲಭ್ಯವಾಗಿದ್ದು, ಆ ದೇಶದ ಅಧಿಕಾರಿಗಳ ಜೊತೆಗೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಹಠಾತ್ ಸಂಶೋಧನೆ ನಡೆಸಿದ್ದಾರೆ.

ಆ ಸಮಯದಲ್ಲಿ, ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಐಟಿ ಕಂಪನಿಯೊಂದು ಸೈಬರ್ ಅಪರಾಧದಲ್ಲಿ ತೊಡಗಿಸಿಕೊಳ್ಳಲು ಬಲವಂತಗೊಳಿಸಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ.

ರಕ್ಷಿಸಲ್ಪಟ್ಟವರಲ್ಲಿ 30 ಮಂದಿಯನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಉಳಿದ 17 ಮಂದಿಯನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಅಲ್ಲದೆ, ಲಾವೋಸ್‌ನಲ್ಲಿನ ನಕಲಿ ಉದ್ಯೋಗವಕಾಶಗಳನ್ನು ನಂಬಿ, ಭಾರತೀಯರು ಮೂರ್ಖರಾಗಬಾರದು ಎಂದು ಭಾರತದ ರಾಯಭಾರ ಕಚೇರಿ ಕೇಳಿಕೊಂಡಿದೆ.

ರಾಜಕೀಯ

ನವದೆಹಲಿ: “ಚೀನಾ ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಸಮಸ್ಯೆಯಾಗಿದೆ” ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಚೀನಾ ಅನೇಕ ರೀತಿಯಲ್ಲಿ ಸಮಸ್ಯೆಯಾಗಿದೆ. ಆ ದೇಶದ ವಿಶಿಷ್ಟ ರಾಜಕೀಯ ಮತ್ತು ಆರ್ಥಿಕತೆಯೇ ಇದಕ್ಕೆ ಕಾರಣ. ಅದರ ವಿಶಿಷ್ಟತೆಯನ್ನು ಒಬ್ಬರು ಅರ್ಥಮಾಡಿಕೊಳ್ಳದಿದ್ದರೆ, ಅಲ್ಲಿಂದ ಬರುವ ಪರಿಹಾರಗಳು ಮತ್ತು ತೀರ್ಮಾನಗಳು ಸಂಕೀರ್ಣವಾಗಿರುತ್ತವೆ.

ವ್ಯಾಪಾರದಲ್ಲಿ ಚೀನಾ ಅನುಭವಿಸಿದ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಳ್ಳದ ಕಾರಣ ಹಲವರು ಆ ದೇಶದೊಂದಿಗಿನ ವ್ಯಾಪಾರದ ಕೊರತೆಯ ಬಗ್ಗೆ ದೂರು ನೀಡುತ್ತಾರೆ. ಚೀನಾ ಬಗ್ಗೆ ನಾವು ಮಾತ್ರ ಚರ್ಚಿಸುತ್ತಿಲ್ಲ.

ಯುರೋಪ್ ಖಂಡದಲ್ಲಿ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆ ಮುಂತಾದ ಎಲ್ಲಾ ವಿಚಾರಗಳಲ್ಲೂ ಚೀನಾದ ಬಗ್ಗೆ ಮಾತ್ರ ಚರ್ಚಿಸಲಾಗುತ್ತದೆ. ಅಮೆರಿಕ ಆ ದೇಶದೊಂದಿಗೆ ಹಲವು ರೀತಿಯಲ್ಲಿ ಘರ್ಷಣೆ ನಡೆಸುತ್ತಿದೆ. ಆದ್ದರಿಂದ, ವಾಸ್ತವವಾಗಿ ಭಾರತಕ್ಕೆ ಮಾತ್ರ ಚೀನಾ ಸಮಸ್ಯೆಯಲ್ಲ. ಚೀನಾ, ಭಾರತ ಮತ್ತು ವಿಶ್ವಕ್ಕೆ ಸಮಸ್ಯೆಯಾಗಿದೆ” ಎಂದು ಜೈಶಂಕರ್ ಹೇಳಿದ್ದಾರೆ.

ರಾಜಕೀಯ

ನವದೆಹಲಿ: ವಕ್ಫ್ ಬೋರ್ಡ್ (Waqf Board) ತಿದ್ದುಪಡಿ ವಿಧೇಯಕವನ್ನು ಅಧ್ಯಯನ ಮಾಡಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ತಮ್ಮ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನೀಡಲು ಎಲ್ಲಾ ಪಕ್ಷದವರನ್ನೂ ಆಹ್ವಾನಿಸಿದೆ.

ವಕ್ಫ್ ಬೋರ್ಡ್ ಆಸ್ತಿಗಳನ್ನು ಅಂತರ್ಜಾಲದ ಮೂಲಕ ನೋಂದಣಿ ಮಾಡಿ ಸುಧಾರಣೆ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಇದಕ್ಕಾಗಿ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಕಳೆದ 8 ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ಇದರಲ್ಲಿ, ಕೇಂದ್ರೀಯ ವಕ್ಫ್ ಕೌನ್ಸಿಲ್ ರಚನೆ ಮಾಡುವುದಾಗಿ ಮತ್ತು ರಾಜ್ಯ ವಕ್ಫ್ ಮಂಡಳಿಗೆ ಮುಸ್ಲಿಂ ಮಹಿಳೆಯರು ಹಾಗೂ ಮುಸ್ಲಿಮೇತರ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ, ಆಸ್ತಿ ವಕ್ಫ್ ಬೋರ್ಡ್ ಭೂಮಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ ಎಂದೂ ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ.

ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದು ಮುಸ್ಲಿಂ ವಿರೋಧಿ ನಡೆ ಮತ್ತು ಸಂವಿಧಾನದ ಮೇಲಿನ ದಾಳಿ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದ್ದರು. ತರುವಾಯ, ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಜಂಟಿ ಸಂಸದೀಯ ಸಮಿತಿಯ ಪರಿಗಣನೆಗೆ ಕಳುಹಿಸಲಾಯಿತು.

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಯಿತು. ಇದರ ಮೊದಲ ಸಭೆ ಈಗಾಗಲೇ ನಡೆದಿದ್ದು, ಎರಡನೇ ಸಭೆ ನಿನ್ನೆ ದೆಹಲಿಯಲ್ಲಿ ನಡೆದಿದೆ.

ಇದರಲ್ಲಿ ಮುಂಬೈನ ಅಖಿಲ ಭಾರತ ಸುನ್ನಿ ಜಮೀಯತುಲ್ ಉಲಮಾ ಸಂಘಟನೆ, ದೆಹಲಿಯಲ್ಲಿರುವ ನಾಗರಿಕ ಹಕ್ಕುಗಳಿಗಾಗಿ ಭಾರತೀಯ ಮುಸ್ಲಿಮರು (ICMR) ಮುಂತಾದ ಸಂಸ್ಥೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ, ಲೋಕಸಭೆಯ ಕಾರ್ಯದರ್ಶಿ ನಿನ್ನೆ ಹೊರಡಿಸಿದ ಅಧಿಸೂಚನೆಯಲ್ಲಿ, ‘ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ದತ್ತಿ ಸಂಸ್ಥೆಗಳು, ತಜ್ಞರು ಮತ್ತು ಸಂಘಟನೆಗಳು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ವ್ಯಕ್ತಪಡಿಸಬಹುದು ಎಂದು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ ಮನವಿ ಮಾಡಿದೆ.

ಹಾಗಾಗಿ 15 ದಿನದೊಳಗೆ ಎಲ್ಲ ಪಕ್ಷಗಳು ತಮ್ಮ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಈ ಸಮಿತಿಗೆ ಸಲ್ಲಿಸಬಹುದು. ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸುವುದರ ಜೊತೆಗೆ, ಸಮಿತಿಯ ಮುಂದೆ ಹಾಜರಾಗಲು ಮತ್ತು ತಮ್ಮ ವಿವರಣೆಯನ್ನು ನೀಡಲು ಬಯಸುವವರು ಪತ್ರದ ಮೂಲಕ ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜಕೀಯ

ರಾಣೆಬೆನ್ನೂರು: ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು; ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕಂಚಿನ ಪುತ್ಥಳಿ ಲೋಕಾರ್ಪಣೆಗೊಳಿಸಿ, ಬಳಿಕ ಕನಕಭವನವನ್ನು ಉದ್ಘಾಟಿಸಿ ಮಾತನಾಡಿದರು.

“ಮಾಲತೇಶ ದೇವರ ಸನ್ನಿಧಿ ದೇವರಗುಡ್ಡವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸಲಾಗುವುದು. ದೇವರಗುಡ್ಡಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದರು.

“ನನ್ನ ವಿರುದ್ಧ ನಡೆಯುತ್ತಿರುವ ಬಿಜೆಪಿ – ಜೆಡಿಎಸ್ ನ ಸೇಡು, ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ. ಮಾಲತೇಶ ದೇವರ ಆಶೀರ್ವಾದ – ನಿಮ್ಮ ಪ್ರೀತಿ ನನ್ನ ಮೇಲಿರಲಿ” ಎಂದು ಪ್ರಾರ್ಥಿಸಿಕೊಂಡರು.

“ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕುವ ಮೂಲಕ ನುಡಿದಂತೆ ನಡೆದಿದ್ದೇನೆ. ಎರಡನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ” ಎಂದು ಹೇಳಿದರು.

“ನಾನು ಅಸೂಯೆ ಮಾಡುವವರಿಂದ ದ್ವೇಷದ ರಾಜಕಾರಣ ಮಾಡುವವರಿಂದ ಅಧಿಕಾರಕ್ಕೆ ಬರಲಿಲ್ಲ. ಜನರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ‌ ಆಗಿರೋದು. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ

ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂದು ಮಹಾತ್ಮಗಾಂಧಿ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇದೇ ವಿಪಕ್ಷದವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

“ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು.

ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ” ಎಂದು ಹೇಳಿದರು.

ರಾಜಕೀಯ

ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರದಂದು ಮುಸ್ಲಿಂ ಸದಸ್ಯರಿಗೆ ನಮಾಜ್ ಮಾಡಲು ನೀಡುತ್ತಿದ್ದ 2 ಗಂಟೆಗಳ ವಿರಾಮವನ್ನು ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

ವಸಾಹತುಶಾಹಿ ಪದ್ಧತಿಗಳನ್ನು ಕೈಬಿಟ್ಟು ಸಂಸತ್ತಿನ ಉತ್ಪಾದಕತೆಯನ್ನು (Productivity) ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಅಸ್ಸಾಂ ವಿಧಾನಸಭೆಯಲ್ಲಿ, ಶುಕ್ರವಾರಳಲ್ಲಿ ಮುಸ್ಲಿಂ ಸದಸ್ಯರ ನಮಾಜ್‌ಗಾಗಿ ಬೆಳಗ್ಗೆ 11 ಗಂಟೆಗೆ ವಿರಾಮ ನೀಡಿ, ಊಟದ ನಂತರ ಚರ್ಚೆಗಳನ್ನು ಪ್ರಾರಂಭಿಸುವುದು ಬಹಳ ಹಿಂದಿನಿಂದಲೂ ಅನುಸರಿಸುತ್ತಿರುವ ಅಭ್ಯಾಸವಾಗಿದೆ. ಈ ಪದ್ಧತಿಯನ್ನು 1937ರಲ್ಲಿ ಮುಸ್ಲಿಂ ಲೀಗ್ ಪಕ್ಷದ ಸೈಯದ್ ಸಾದುಲ್ಲಾ ಅವರು ಪರಿಚಯಿಸಿದರು (ಅವರು ಬ್ರಿಟಿಷ್ ಭಾರತದಲ್ಲಿ ಅಸ್ಸಾಂ ಪ್ರಾಂತ್ಯದ ಪ್ರಧಾನ ಮಂತ್ರಿಯಾಗಿದ್ದರು).

ನಮಾಜ್‌ ವಿರಾಮದ ರದ್ದತಿಯನ್ನು ‘ಐತಿಹಾಸಿಕ ನಿರ್ಧಾರ’ ಎಂದು ಶ್ಲಾಘಿಸಿರುವ ಅಸ್ಸಾಂ ಮುಖ್ಯಮಂತ್ರಿ, ಇದನ್ನು ಬೆಂಬಲಿಸಿದ್ದಕ್ಕಾಗಿ ಸ್ಪೀಕರ್ ಬಿಸ್ವಜಿತ್ ಡೈಮೇರಿ ಮತ್ತು ಇತರ ಶಾಸಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ಯಾವುದೇ ಧಾರ್ಮಿಕ ರಿಯಾಯಿತಿ ಇಲ್ಲದೆ ವಿಧಾನಸಭೆ ಕಾರ್ಯ ನಿರ್ವಹಿಸಬೇಕು ಎಂದೂ ಹೇಳಿದ್ದಾರೆ.

ಅಸ್ಸಾಂ ವಿಧಾನಸಭೆಯಲ್ಲಿ ನಿನ್ನೆ ‘ಅಸ್ಸಾಂ ರದ್ದತಿ ಮಸೂದೆ, 2024’ ಅನ್ನು ಅಂಗೀಕರಿಸಲಾಗಿದೆ. ಈ ಮಸೂದೆ, ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ, 1935 ಅನ್ನು ರದ್ದುಗೊಳಿಸಿದೆ ಎಂಬುದು ಗಮನಾರ್ಹ.

ರಾಜಕೀಯ

ಮುಂಬೈ: ಭಾರೀ ಗಾಳಿಗೆ ಮರಾಠ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಭಗ್ನಗೊಂಡಿರುವುದಕ್ಕೆ ಪ್ರಧಾನಿ ಮೋದಿ ತಲೆಬಾಗಿ ಕ್ಷಮೆಯಾಚಿಸಿದ್ದಾರೆ.

ಮಹಾರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಪಾಲ್ಘರ್ (Palghar) ಪ್ರದೇಶದಲ್ಲಿ 76 ಸಾವಿರ ಕೋಟಿ ರೂಪಾಯಿ ವೆಚ್ಚದ ವಧಾವನ್ ಬಂದರು (Vadhavan Port) ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಭಾರತದ ಅತಿದೊಡ್ಡ ಆಳವಾದ ಸಮುದ್ರ ಬಂದರುಗಳಲ್ಲಿ ಒಂದಾಗಿದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, “ಭಾರತಮಾತೆಯ ಮಗ ಛತ್ರಪತಿ ಶಿವಾಜಿಯನ್ನು ಅವಮಾನಿಸುವ ಗುಂಪು ನಾವಲ್ಲ. ಶಿವಾಜಿ ನನಗೆ ದೇವರಿದ್ದಂತೆ. ಗಾಳಿ ಮಳೆಯಿಂದಾಗಿ ವಿಗ್ರಹಕ್ಕೆ ಹಾನಿಯುಂಟಾಗಿದ್ದಕ್ಕಾಗಿ ನನ್ನ ದೇವರಾದ ಶಿವಾಜಿಯ ಬಳಿ ತಲೆಬಾಗಿ ಕ್ಷಮೆಯಾಚಿಸುತ್ತೇನೆ.

ಈ ನೆಲದ ಮಗ ಸಾವರ್ಕರ್ ಅವರನ್ನು ಅವಮಾನಿಸಿದ ಕೆಲವರು (ಕಾಂಗ್ರೆಸ್) ಅದಕ್ಕೆ ಕ್ಷಮೆ ಕೇಳಲು ಸಿದ್ಧರಿಲ್ಲ. ಇಂದು ಭಾರತದ ಅಭಿವೃದ್ಧಿಗೆ ಮಹತ್ವದ ದಿನ. ಕಳೆದ 10 ವರ್ಷಗಳಾಗಲಿ ಅಥವಾ ಈಗ ನನ್ನ ಸರ್ಕಾರದ ಮೂರನೇ ಅವಧಿಯಲ್ಲಾಗಲಿ,  ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಮಹಾರಾಷ್ಟ್ರವು ಬೆಳವಣಿಗೆಗೆ ಬೇಕಾದ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಂದಿದೆ. ಇಂದು ರೂ.76 ಸಾವಿರ ಕೋಟಿ ಮೌಲ್ಯದ ವಧಾವನ್ ಬಂದರಿನ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ದೇಶದ ಅತಿ ದೊಡ್ಡ ಆಳ ಸಮುದ್ರ ಬಂದರು ಆಗಲಿದೆ” ಎಂದು ಅವರು ಹೇಳಿದರು.

ಮಹಾರಾಷ್ಟ್ರದ ರಾಜ್ ಕೋಟ್ ಕೋಟೆಯಲ್ಲಿ ಕಳೆದ ವರ್ಷ ಡಿಸೆಂಬರ್ 4 ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಕೆಲ ದಿನಗಳ ಹಿಂದೆ ಕುಸಿದು ಬಿದ್ದಿತ್ತು.

ದೇಶ

ಬೆಂಬಲಿಗರನ್ನು ಕಳೆದುಕೊಳ್ಳುತ್ತಿರುವ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ, ಈ ಕುಸಿತದಿಂದ ಚೇತರಿಸಿಕೊಳ್ಳಲು ಬಹಿರಂಗವಾಗಿಯೇ ಲಂಚ ನೀಡಲು ಮುಂದಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತದಲ್ಲಿ, ಕಳೆದ ಏಳು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮಗಳು, ವಂಚನೆಗಳು ಮತ್ತು ಅಪರಾಧಗಳು ನಡೆದಿವೆ.

ಅದರಲ್ಲಿ ರೈತರ ಪ್ರತಿಭಟನೆ ವೇಳೆ ರ‍್ಯಾಲಿ ನಡೆಸುತ್ತಿದ್ದ 8 ರೈತರನ್ನು ಹತ್ಯೆಗೈದ ಘಟನೆ, ಮತೀಯವಾದವನ್ನು ಬೆಳೆಸುವ ಸಲುವಾಗಿ, ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಇತರ ಧಾರ್ಮಿಕ ದೇವಾಲಯಗಳ ಮುಂದೆ ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗಿದ್ದು, ಲೋಕಸಭೆ ಚುನಾವಣೆ ವೇಳೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಮತದಾನ ಮಾಡದಂತೆ ತಡೆದಿದ್ದು ಮುಂತಾದವುಗಳನ್ನು ಪ್ರಮುಖ ಅಕ್ರಮಗಳೆಂದು ಪರಿಗಣಿಸಲಾಗಿದೆ.

ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿತು. ‘ಇಂಡಿಯಾ ಮೈತ್ರಿಕೂಟ’ ಬಹುಮತ ಗಳಿಸಿತು.

ಏತನ್ಮಧ್ಯೆ, ಬಿಜೆಪಿ ಮೈತ್ರಿಕೂಟದೊಳಗಿನ ಗೊಂದಲ ಬೇರೆ. ಹಾಗಾಗಿ ಬೆಂಬಲಿಗರನ್ನು ಕಳೆದುಕೊಳ್ಳುತ್ತಿರುವ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಪತನದಿಂದ ಚೇತರಿಸಿಕೊಳ್ಳಲು ಬಹಿರಂಗವಾಗಿಯೇ ಲಂಚ ನೀಡಲು ಮುಂದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಪೋಸ್ಟ್ ಮಾಡುವವರಿಗೆ ಮಾಸಿಕ ರೂ.8 ಲಕ್ಷದವರೆಗೆ ಸರ್ಕಾರ ನೀಡಲಿದೆ ಎಂದು ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇದು ಬಹಿರಂಗ ಲಂಚವಾಗಿದೆ.

ಈ ಕುರಿತು ಖ್ಯಾತ ಯುಟ್ಯೂಬರ್ (Youtuber) ಧ್ರುವ್ ರಾಠೆ (Dhruv Rathee), ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಅಂತರ್ಜಾಲದಲ್ಲಿ ಪೋಸ್ಟ್ ಮಾಡುವವರಿಗೆ, ಯೋಗಿ ಆದಿತ್ಯನಾಥ್ ಸರ್ಕಾರ ತಿಂಗಳಿಗೆ ರೂ.8 ಲಕ್ಷದವರೆಗೆ ನೀಡುವುದಾಗಿ ಉಲ್ಲೇಖಿಸಿರುವುದು, ಕಾನೂನುಬದ್ಧಗೊಳಿಸಿದ ಲಂಚವಾಗಿದೆ” ಎಂದು ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆಯನ್ನು ಪೋಸ್ಟ್ ಮಾಡಿದ್ದಾರೆ.

ರಾಜಕೀಯ

ನವದೆಹಲಿ: ‘ರಾಹುಲ್ ಹೆಡ್‌ಲೈನ್ಸ್‌ (Headlines)ನಲ್ಲಿ ಸ್ಥಾನ ಪಡೆಯಲು ರಣತಂತ್ರ ರೂಪಿಸಿ ಮಾತನಾಡುತ್ತಿದ್ದಾರೆ’ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಇಂಗ್ಲಿಷ್ ಸುದ್ದಿ ವಾಹಿನಿಯೊಂದಕ್ಕೆ ಸ್ಮೃತಿ ಇರಾನಿ ನೀಡಿದ ಸಂದರ್ಶನ: ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ರಾಹುಲ್ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಅದೊಂದು ಪ್ರಹಸನವಾಯಿತು. ಆ ತಂತ್ರ ಫಲಿಸದ ಕಾರಣ ಈಗ ಜಾತಿ ಸಮಸ್ಯೆ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ರುಚಿ ಕಂಡಿದ್ದೇವೆ ಎಂದು ಭಾವಿಸಿರುವ ರಾಹುಲ್ ಈಗ ವಿಭಿನ್ನ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಮಿಸ್ ಇಂಡಿಯಾ:
ಅವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಅವರ ಜಾತಿ ರಾಜಕಾರಣ ಹೊಸ ತಂತ್ರ. ಮಿಸ್ ಇಂಡಿಯಾ ಸ್ಪರ್ಧೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರಿಗೆ ತಿಳಿದಿದೆ. ಆದರೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಮಾತುಗಳನ್ನು ಹೇಳುತ್ತಿದ್ದಾರೆ. ಏಕೆಂದರೆ ಇದು ಮುಖ್ಯಾಂಶಗಳನ್ನು (Headlines) ಪಡೆಯುತ್ತದೆ. ಇದೆಲ್ಲ ಗೊತ್ತಿದ್ದರೂ ಪ್ಲಾನ್ ಮಾಡಿ ಮಾಡುತ್ತಿದ್ದಾರೆ. ಈ ರೀತಿ ಸ್ಮೃತಿ ಇರಾನಿ ಹೇಳಿದ್ದಾರೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸ್ಮೃತಿ ಇರಾನಿ ಸೋತಿದ್ದರು. ಇದರಿಂದ ಮತ್ತೊಮ್ಮೆ ಸಚಿವೆಯಾಗುವ ಅವಕಾಶವನ್ನು ಕಳೆದುಕೊಂಡರು. 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ರಾಹುಲ್‌ ಗಾಂಧಿಯನ್ನು ಸೋಲಿಸಿ, ಜಯಗಳಿಸುವುದರ ಮೂಲಕ ಕೇಂದ್ರ ಸಚಿವೆಯಾದವರು ಎಂಬುದು ಗಮನಾರ್ಹ.

ರಾಜಕೀಯ

ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ಸಮುದಾಯದ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಳಮೀಸಲಾತಿಯನ್ನು ದಲಿತ ಸಮುದಾಯ ಒಮ್ಮತದಿಂದ ಒಪ್ಪಿಕೊಂಡು ಅನುಷ್ಠಾನಕ್ಕೆ ಬೆಂಬಲ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ” ಎಂದು ಹೇಳಿದ್ದಾರೆ.

“ಸಚಿವರಾದ  ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್ ಮತ್ತು ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ ಮತ್ತು ದಲಿತ ಶಾಸಕರು ಹಾಗೂ ಮುಖಂಡರ ನಿಯೋಗ ಇಂದು ನನ್ನನ್ನು ಭೇಟಿಯಾಗಿ ಒಳ ಮೀಸಲಾತಿ ಜಾರಿ ಸಂಬಂಧ ಚರ್ಚೆ ನಡೆಸಿದರು. ಒಳಮೀಸಲಾತಿ ಜಾರಿ ವಿಚಾರದಲ್ಲಿ ನನ್ನ ಬದ್ಧತೆಯನ್ನು ಅವರಿಗೆ ತಿಳಿಸಿದೆ.

ನಾನು, ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಪರವಾದ ಖಚಿತ ಮತ್ತು ದೃಢ ನಿಲುವು ಇದೆ. ಇದರಲ್ಲಿ ಗೊಂದಲ ಇಲ್ಲವೇ ಇಲ್ಲ. ಮೀಸಲಾತಿಯ ಸೌಲಭ್ಯದ ನ್ಯಾಯಯುತ ಹಂಚಿಕೆಗೆ ಒಳಮೀಸಲಾತಿ ಅಗತ್ಯ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರಿವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಕೂಡಾ ಇದೇ ಅಭಿಪ್ರಾಯವನ್ನು ಹೊಂದಿದೆ” ಎಂದಿದ್ದಾರೆ.

“ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೆನೆಪದರದ ವಿಚಾರ ಪ್ರಸ್ತಾಪವಾಗಿರುವುದು ಕೆಲವರಲ್ಲಿ ಗೊಂದಲ ಉಂಟು ಮಾಡಿದೆ. ನ್ಯಾಯಾಲಯದ ತೀರ್ಪಿನ ವಿಶ್ಲೇಷಣೆಗೆ ನಾನು ಹೋಗುವುದಿಲ್ಲ. ನಾನು ಅರ್ಥಮಾಡಿಕೊಂಡಂತೆ ಒಳ ಮೀಸಲಾತಿ ಜಾರಿಗೊಳಿಸಲು ಕೆನೆಪದರದ ವಿಚಾರ ಅಡ್ಡಿಯಾಗಲಾರದು. ಕೆನೆಪದರದ ಬಗ್ಗೆ ಇಡೀ ದಲಿತ ಸಮುದಾಯದ ನಿಲುವೇ ನನ್ನ ನಿಲುವೂ ಆಗಿದೆ” ಎಂದು ಸ್ಪಷ್ಟ ಪಡಿಸಿದ್ದಾರೆ.

“ಭಾರತೀಯ ಜನತಾ ಪಕ್ಷದ ಕೆಲವು ನಾಯಕರು ಅನಗತ್ಯವಾಗಿ ಊಹಾಪೋಹಗಳ ಮೂಲಕ ಒಳಮೀಸಲಾತಿ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕುಟಿಲ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರೋಧಿಗಳಾದ ಈ ಬಿಜೆಪಿ ನಾಯಕರ ಈ ಕುಟಿಲತನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ದಲಿತ ಸಮುದಾಯಕ್ಕೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.