ಬನಶಂಕರಿ ದೇವಸ್ಥಾನದ ಬಸ್ ನಿಲ್ದಾಣದಿಂದ ಅಭಿಮಾನ್ ಸ್ಟುಡಿಯೋವರೆಗೆ ಪಾದಯಾತ್ರೆ!
ಮಂಜುಳಾ ರೆಡ್ಡಿ, ಹಿರಿಯ ವರದಿಗಾರರು
ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಮೀಸಲಿಟ್ಟಿರುವ ಡಾ.ವಿಷ್ಣುವರ್ಧನ್ ಅವರ 10 ಗುಂಟೆ ಪುಣ್ಯ ಭೂಮಿ ಜಾಗದ ಸಮಸ್ಯೆಯನ್ನು ಸರಕಾರ ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ವಿಎಸ್‌ಎಸ್ ಮತ್ತು ಅಭಿಮಾನ್ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ನಿಂದ ಡಿಸಂಬರ್ 30ರಂದು ಬನಶಂಕರಿ ದೇವಸ್ಥಾನದ ಬಸ್ ನಿಲ್ದಾಣದಿಂದ ಅಭಿಮಾನ್ ಸ್ಟುಡಿಯೋವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜು ಗೌಡ ತಿಳಿಸಿದರು.
ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿಎಸ್‌ಎಸ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಟಿ.ತಿಮ್ಮರಾಜು (ರಾಜುಗೌಡ), ‘ಅಭಿಮಾನ್ ಸ್ಟುಡಿಯೋದಲ್ಲಿರುವ 10 ಗುಂಟೆ ಜಾಗವನ್ನು ಕೂಡಲೇ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ, ಬರಿಗಾಲಿನಲ್ಲಿ ಶುಕ್ರವಾರ ಬೆಳಿಗ್ಗೆ 7.30ಕ್ಕೆ ವಿಎಸ್‌ಎಸ್ ಮತ್ತು ವಿಷ್ಣುಸೇನಾ ಸಮಿತಿ ಹಾಗೂ ಅಭಿಮಾನಿಗಳು ಬರಿಗಾಲಿನಲ್ಲಿ ಬನಶಂಕರಿಯ ಬಸ್ ನಿಲ್ದಾಣದಿಂದ ಅಭಿಮಾನ್ ಸ್ಟುಡಿಯೋವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ,’’ ಎಂದು ತಿಳಿಸಿದರು.
‘ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ಹಾಗೂ ವಿಎಸ್‌ಎಸ್, ವಿಷ್ಣುಸೇನಾ ಸಂಘಟನೆ ಸಂಧಾನದ ಫಲವಾಗಿ 2017ರಲ್ಲಿ ಅಭಿಮಾನ್ ಸ್ಟುಡಿಯೋ ಮಾಲೀಕರು ಕೆಲವು ಷರತ್ತುಗಳೊಂದಿಗೆ 10 ಗುಂಟೆ ಜಾಗವನ್ನು ನೀಡಿದ್ದರು. ಈ ಸಂಬಂಧ 2018 ಸೆಪ್ಟೆಂಬರ್‌ನಲ್ಲಿ ಜಾಗದ ಸರ್ವೆ ನಡೆಸಿರುವ ದಾಖಲೆಗಳನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿತ್ತು. ಕೆಲವು ಸಮಸ್ಯೆಗಳಿಂದ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಮಾಲೀಕರ ಷರತ್ತನ್ನು ವಾಪಸ್ ಪಡೆದು, ಡಾ.ವಿಷ್ಣುವರ್ಧನ್ ಅವರ ಪುಣ್ಯ ಭೂಮಿಗೆ ಮೀಸಲಿಟ್ಟಿದ್ದ 10 ಗುಂಟೆ ಜಾಗವನ್ನು ಕೂಡಲೇ ಕೊಡಿಸಬೇಕು. ಈ ಜಾಗವನ್ನು ವಿಷ್ಣುವರ್ಧನ್ ಪ್ರತಿಷ್ಠಾನಕ್ಕೆ ಅಥವಾ ಬಿಬಿಎಂಪಿ ಅಥವಾ ಅಭಿಮಾನ್ ಸ್ಟುಡಿಯೋ ಮಾಲೀಕರು ಹಾಗೂ ಅಭಿಮಾನಿಗಳು ಸೇರಿ ಟ್ರಸ್ಟ್ ಮೂಲಕ ನಡೆಸಿಕೊಂಡು ಹೋಗುವುದಕ್ಕೆ ಸರ್ಕಾರ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.
ನಮ್ಮ ದೇವರು ವಿಷ್ಣುವರ್ದನ್ ಪುಣ್ಯ ಸಮಾಧಿ ನೋಡಲು ಸರ್ಕಾರವು ಅನುಮತಿ ನಿರಾಕರಿಸುತ್ತಿದೆ. ಆದರೂ ಅಭಿಮಾನಿಗಳ ಬಳಗವು ಬರೀ ಕಾಲಿನಲ್ಲಿ ಸರ್ಕಾರ ಹಾಕಿರುವ ತಡೆಯನ್ನೂ ಮೀರಿ ಸಮಾದಿ ಬಳಿಗೆ ಹೋಗ ತೀರುತ್ತೇವೆಂದು ಖಾರವಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷೆ ಸ್ನೇಹ ರಶ್ಮಿ ಸರಾಗ್, ಮೇಲುಕೋಟೆ ಪ್ರಸನ್ನ, ಕಾನೂನು ಸಲಹೆ ಗಾರರಾದ ಮೋಹನ್ ಶ್ರೀನಿವಾಸ್, ಬಕಾಸ್, ಗೋಪಿಗೌಡ, ಚಂದ್ರಹಾಸ್ ಮುಂತಾದವರು ಉಪಸ್ಥಿತಿಯಿದ್ದರು