ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ » Dynamic Leader
November 10, 2024
ರಾಜ್ಯ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕನಸಿನ ಕೂಸು, 7 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಬದಲಿಸುವ “ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ”ಯ ಹಂತ-1ಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಹೇಳಿದ್ದಾರೆ.

ಇದು ಎರಡು ಹಂತದ ಯೋಜನೆಯಾಗಿದೆ. ಮೊದಲ ಹಂತ ಇಂದು ಉದ್ಘಾಟನೆಯಾಗಿದೆ. ಎರಡನೇ ಹಂತ ಕೂಡ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳಿಗೆ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನೆಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ.

ಹೀಗಿದ್ದರೂ ಕೆಲವರು ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ.

2014ರಲ್ಲಿ ಎತ್ತಿನಹೊಳೆಗೆ ಭೂಮಿಪೂಜೆ ನೇರವೇರಿಸಿದವನು ನಾನೇ. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀನಿ. ಕೆರೆಗಳನ್ನು ತುಂಬಿಸಿಯೇ ತುಂಬಿಸ್ತೇನೆ. ಇದು ಶತಸಿದ್ಧ ಎಂದು ಹೇಳಿದರು.

ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಎಂಬ ಸೂಚನೆಯನ್ನು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ.

Related Posts