ಸಿಎಂ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಜಾರಿ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧವಾಗಿದೆ; ಇದು ಖಂಡನೀಯ: ಖಾಸಿಂ ಸಾಬ್ » Dynamic Leader
September 16, 2024
ರಾಜಕೀಯ

ಸಿಎಂ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಜಾರಿ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧವಾಗಿದೆ; ಇದು ಖಂಡನೀಯ: ಖಾಸಿಂ ಸಾಬ್

ಬೆಂಗಳೂರು: “ನೇರ ಭಾಗಿಯಾಗದ ಆರ್ಥಹೀನ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಯೋಜಿಸಿ ಸಿಲುಕಿಸಲಾಗಿದೆ.  ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಘಿ ಪ್ರೇರಿತ ಪಕ್ಷಗಳು ಹೊರಟಿವೆ. ಇದು ಜಾತಿ ಹಾಗೂ ಕೋಮು ಭ್ರಷ್ಟರ ನಡೆಯಾಗಿದೆ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ.

“ಜನಪರ ಆಡಳಿತವನ್ನು ಸಹಿಸಲಾರದೆ, ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಖುರ್ಚಿಯ ಆಸೆಗಾಗಿ ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಇದರ ಪ್ರೇರಣೆಯ ಭಾಗವಾಗಿಯೇ ರಾಜ್ಯಪಾಲರು ಈ ಆದೇಶವನ್ನು ನೀಡಿದ್ದಾರೆ ಎಂಬ ಗುಮಾನಿ ಪ್ರತಿ ಕರ್ನಾಟಕದ ಪ್ರಜೆಗೂ ಮೂಡಿದೆ” ಎಂದು ಹೇಳಿದ್ದಾರೆ.

“ಪ್ರಮುಖ ಹಾಗೂ ವಿಷೆಶವಾಗಿ ಶೋಷಿತ, ದಲಿತ, ಅಹಿಂದ, ಮುಖಂಡರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೊದಲಿನಿಂದಲೂ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ ಎಂಬುದು ಬಹಿರಂಗದ ಸತ್ಯದ ವಿಷಯ” ಎಂದು ಹೇಳಿದ್ದಾರೆ.

“ಈಗಾಗಲೇ ನಡೆಯುತ್ತಿರುವ ರಾಷ್ಟ್ರ ಮಟ್ಟದಲ್ಲಿ ಹಿಂದುಳಿದ ನಾಯಕರನ್ನು ಮೂಲೆಗುಂಪು ಮಾಡುವ ಪ್ರಕ್ರಿಯೆಯಲ್ಲಿ ಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವುದರ ಹಿಂದೆ ಹಲವಾರು ರಾಜಕೀಯ ಕಾರಣಗಳಿವೆ.

ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕತ್ವವನ್ನು ಕೊನೆಗಾಣಿಸಬಹುದು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಭವಿಷ್ಯದಲ್ಲಿ ಕರ್ನಾಟಕದ ರಾಜಕಾರಣದಿಂದ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರ ಇಡಬಹುದು ಮತ್ತು ಸಿದ್ದರಾಮಯ್ಯರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆ ಮೂಲಕ ರಾಜ್ಯದ ಸಮಸ್ತ ಹಿಂದುಳಿದ ವರ್ಗಗಳು ಅಧಿಕಾರ ನಡೆಸಲು ಅಸಮರ್ಥರು ಎಂದು ಬಿಂಬಿಸಬಹುದು ಎನ್ನುವ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ; ಇದು ಖಂಡನೀಯ. ಅಲ್ಲದೆ ಇದು ಕೋಮುವಾದಿ ರಾಜಕೀಯದ ಭಾಗವೇ ಆಗಿದೆ” ಎಂದು ಕಿಡಿಕಾರಿದ್ದಾರೆ.

“ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತಮ್ಮ ಸರಕಾರದಲ್ಲೇ ತನಿಖಾ ಆಯೋಗವನ್ನು ರಚಿಸಿರುವ ದೇಶದ ಏಕೈಕ ರಾಜಕಾರಣಿ ಸಿದ್ದರಾಮಯ್ಯ. ಇದು ಪ್ರತಿ ಅಹಿಂದ ವರ್ಗಗಳ ಹೆಮ್ಮೆಯು ಕೂಡ” ಎಂದು ಶ್ಲಾಘಿಸಿದ್ದಾರೆ.

“ಹಿಂದೆಯೂ ಸಹ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ಮತ್ತಿತರರ ವಿರುದ್ಧ ಇಂತಹುದೇ ಷಡ್ಯಂತ್ರಗಳನ್ನು ರೂಪಿಸಲಾಗಿತ್ತು. ಆದರೆ, ಅಂದಿನ ಅಂತಹ ಅಹಿಂದ ವಿರೋಧಿ ಕುತಂತ್ರಗಳು ಇಂದು ನಡೇಯುವುದಿಲ್ಲ. ಇಂದು ಮುಸ್ಲಿಂ, ದಲಿತ, ಶೋಷಿತ ಸಮುದಾಯಗಳು ಜಾಗೃತವಾಗಿವೆ. ಎಂಬುದನ್ನು ಕರ್ನಾಟಕದ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳು ಆರಿಯ ಬೇಕಿದೆ.

ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ನಾಯಕರು ಈ ಮಟ್ಟದ ಕೊಳಕು ಹಾಗೂ ಅಪ್ರಬುದ್ಧ ರಾಜಕೀಯಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಶೋಷಿತರ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವ ಅನಿವಾರ್ಯತೆಯನ್ನು ನೀವೇ ರಾಜ್ಯದಲ್ಲಿ ನಿರ್ಮಾಣ ಮಾಡುತ್ತೀದ್ದೀರ” ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

“ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಿ, ಸಿದ್ದರಾಮಯ್ಯರವರನ್ನು ದುರ್ಬಲ ಗೊಳಿಸುವ ಈ ನೀಚ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿ ತಾಲೂಕುಗಳಲ್ಲೂ ಹೋರಾಟ ನಡೆಸಲಾಗುವುದು” ಎಂದು ಹೇಳಿದ್ದಾರೆ.

“ಸಾಂವಿಧಾನಿಕ ಹುದ್ದೆಯಲ್ಲಿರುವ ಮಾನ್ಯ ರಾಜ್ಯಪಾಲರು ಒಂದು ರಾಜಕೀಯ ಪಕ್ಷದ ಪ್ರತಿನಿದಿಯಂತೆ ವರ್ತಿಸುತ್ತಿರುವುದು ಅಕ್ಷಮ್ಯ ಹಾಗೂ ಸಂವಿಧಾನ ವಿರೋಧಿಯಾಗಿದೆ. ಇದು ಪ್ರಜಾಪ್ರಭುತ್ವದ ನಡೆಯಲ್ಲ” ಎಂದು ಖಂಡಿಸಿದ್ದಾರೆ.  

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯು ರಾಜಕೀಯ ಪ್ರೇರಿತವಾಗಿ ಮಾಡಿರುವ ಸುಳ್ಳು ಆರೋಪವನ್ನೇ ಆಧಾರವಾಗಿಟ್ಟುಕೊಂಡು, ರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ವಾಗಿದೆ. ಇದನ್ನು ಕರ್ನಾಟಕ ಮುಸ್ಲಿಂ ಯುನಿಟಿ (KMU) ಖಂಡಿಸುತ್ತದೆ” ಎಂದು ಹೇಳಿದ್ದಾರೆ.

“ಬಿಜೆಪಿ ಮತ್ತು ಮಿತ್ರಪಕ್ಷದ ಹತ್ತಾರು ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಬಾಕಿ ಉಳಿದಿದ್ದರೂ ರಾಜ್ಯಪಾಲರು ಯಾಕೆ ತಲೆ ಕೆಡಿಸಿಕೊಂಡಿಲ್ಲ? ಎಂಬ ನಾಗರೀಕರ ಪ್ರಶ್ನೆಗೆ ರಾಜಭವನ ಉತ್ತರಿಸಬೇಕಿದೆ.

ರಾಜಭವನ ಕೇಸರೀಕರಣ ಗೊಳ್ಳಬಾರದು ಮತ್ತು ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ರಂತೆ ವರ್ತಿಸಬಾರದು. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ” ಎಂದು ಹೇಳಿದ್ದಾರೆ.

“ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ವಿರುದ್ಧದ ಅನ್ಯಾಯ, ಸಂವಿಧಾನ ವಿರೋಧಿ, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆತರುವ ರಾಜ್ಯಪಾಲರ ಈ ನಡೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ” ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ.  

Related Posts