ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯಾಧ್ಯಕ್ಷರಾಗಿ ಜಬ್ಬಾರ್ ಕಲಬುರ್ಗಿ ಆಯ್ಕೆ: ಖಾಸಿಂ ಸಾಬ್
ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿಯು ಪುನರ್ ರಚನೆಯಾಗಿದ್ದು, ಜನಾಬ್ ಜಬ್ಬಾರ್ ಕಲಬುರ್ಗಿ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎಂದು ಕೆ.ಎಂ.ಯುನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಖಾಸಿಂ ಸಾಬ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೊತೆಗೆ ಗೌರವ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಜಿ.ಎ.ಬಾವ ರವರನ್ನು, ಶೇಕಬ್ಬ ಅವರನ್ನು ಕಾರ್ಯಾಧ್ಯಕ್ಷರಾಗಿ, ಉತ್ತರ ಕರ್ನಾಟಕದ ಸಂಚಾಲಕರಾಗಿ ಬಾಗಲಕೋಟೆ ಜಿಲ್ಲೆಯ ವಕ್ಫ್ ಬೋರ್ಡ್ನ ಅಧ್ಯಕ್ಷರಾದ ಎಂ.ಎಲ್.ಸರ್ಕಾವಾಸ ಅವರನ್ನು, ದಕ್ಷಿಣ ಕರ್ನಾಟಕದ ಸಂಚಾಲಕರಾಗಿ ಚಿಕ್ಕಮಗಳೂರಿನ ಅಬ್ದುಲ್ ವಾಹಿದ್ ಮಾಗುಂಡಿ ಅವರನ್ನು ನೇಮಿಸಲಾಯಿತು. ಅಲ್ಲದೆ ಒಟ್ಟು 21 ಸದಸ್ಯರ ರಾಜ್ಯಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ಖಾಸಿಂ ಸಾಬ್ ತಿಳಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ನಂಬಿ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಆ ಕಾರಣಕ್ಕಾಗಿ ವರ್ತಮಾನದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಈ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಎಂಬುದನ್ನು ರಾಜ್ಯ ಸರ್ಕಾರ ಮರೆಯಬಾರದು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ನೂತನ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಯವರು ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
2ಬಿ ಮೀಸಲಾತಿ ಪರಿಹಾರ ಮುಂತಾದ ಹಲವು ಬೇಡಿಕೆಗಳು ಸೇರಿದಂತೆ ಪರಿಹರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದ ಮುಸ್ಲಿಮ್ ಸಮುದಾಯವು ಇದೀಗ ರಾಜಕೀಯವಾಗಿ ಅತ್ಯಂತ ಪ್ರಬುದ್ಧವಾಗಿದೆ. ಆದ್ದರಿಂದ ಈ ಸತ್ಯವನ್ನು ಅರಿತು ರಾಜ್ಯ ಸರ್ಕಾರವು ಮುಸ್ಲಿಮ್ ಸಮುದಾಯದ ಸಮಗ್ರ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಈಡೇರಿಸುವ ಯೋಜನೆಗಳನ್ನು ಕಾರ್ಯಗತ ಗೊಳಿಸುವುದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳ ಹೊಣೆಗಾರಿಕೆಯಾಗಿದೆ.
ಕರ್ನಾಟಕದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ನೋವು, ಅನ್ಯಾಯ, ಹಿಂಸೆ ಅನುಭವಿಸಿದೆ. ಗೋವು ಸಂರಕ್ಷಕರ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ, 4% ಒಬಿಸಿ ಮೀಸಲಾತಿ ಮತ್ತು ಅಲ್ಪಸಂಖ್ಯಾತ ವಿಧ್ಯಾರ್ಥಿ ವೇತನವನ್ನು ಕಡಿತಗೊಳಿಸಿ, ಸುಮಾರ 6 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯವನ್ನು ಹಾಳು ಮಾಡಿರುವುದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ನಿಗಮದಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನು ದ್ವೇಷದಿಂದ ರದ್ದುಗೊಳಿಸಿ, ಅನುದಾನಗಳನ್ನು ಕಡಿತಗೊಳಿಸಿದ ಕಾರಣ ರಾಜ್ಯದ ಮುಸ್ಲಿಮರಿಗೆ ಅಘಾದ ನೋವು ಮತ್ತು ಅನ್ಯಾಯವಾಗಿದೆ.
ಈ ಎಲ್ಲಾ ಮುಸ್ಲಿಮರ ಮೇಲಿನ ಅಸಮಾನತೆಗಳನ್ನು ಹೋಗಲಾಡಿಸಿ, ನ್ಯಾಯ ಮತ್ತು ಭದ್ರತೆಯನ್ನು ಕೊಡುವುದು ಈ ಸರ್ಕಾರದ ಹೊಣೆ ಮತ್ತು ಜವಾಬ್ದಾರಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ನೂತನ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಮುಸ್ಲಿಮರ ಸಾಮಾಜಿಕ ನ್ಯಾಯ, ಎಲ್ಲಾ ಕ್ಷೇತ್ರಗಳಲ್ಲಿ ಸಮಪಾಲು ಹಾಗು ಸರಕಾರಿ ಯೋಜನೆಗಳ ಸಮಗ್ರ ಬಳಕೆಯ ಗುರಿಯುಳ್ಳ ಕರ್ನಾಟಕ ಮುಸ್ಲಿಮ್ ಯೂನಿಟಿಯು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ವಿಸ್ತರಿಸಿ ಇಡೀ ರಾಜ್ಯಾದಂತ್ಯ ಮುಸ್ಲಿಮರ ಸಾಮಾಜಿಕ ಜಾಗೃತಿಯಲ್ಲಿ ತೊಡಗಲಿದೆ ಎಂದು ಖಾಸಿಂ ಸಾಬ್ ತಿಳಿಸಿದರು.