ವಕ್ಫ್ ಬೋರ್ಡ್ ಸ್ವತಂತ್ರವನ್ನು ಮೋಟಕುಗೊಳಿಸುವ ಕೇಂದ್ರ ಸರಕಾರದ ಯೋಜನೆಗೆ KMU ವಿರೋಧ! » Dynamic Leader
December 4, 2024
ರಾಜ್ಯ

ವಕ್ಫ್ ಬೋರ್ಡ್ ಸ್ವತಂತ್ರವನ್ನು ಮೋಟಕುಗೊಳಿಸುವ ಕೇಂದ್ರ ಸರಕಾರದ ಯೋಜನೆಗೆ KMU ವಿರೋಧ!

“ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ!”- ಕರ್ನಾಟಕ ಮುಸ್ಲಿಂ ಯುನಿಟಿ

“ಭಾರತದ ವಕ್ಫ್ 1954ರ ಕಾಯ್ದೆಯಡಿ ಸಂವಿಧಾನಬದ್ದ ಮಂಡಳಿಯಾಗಿ ರಚನೆ ಗೊಂಡಿದೆ. ಅಧಿಕೃತವಾಗಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಭಾರತೀಯ ಶಾಸನಬದ್ದ ಸಂಸ್ಥೆಯಾಗಿದೆ. ಇಂದಿನ ವಕ್ಫ್ ಮಂಡಳಿಗೆ ಒಳಪಟ್ಟ ಎಲ್ಲಾ ಆಸ್ತಿಗಳು ಹಲವಾರು ದಶಕಗಳಿಂದ ಮುಸ್ಲಿಮರು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಶಾಶ್ವತವಾಗಿ ನೀಡಲ್ಪಟ್ಟ ದೇಣಿಗೆಗಳು, ಅದು ಚರ ಅಥವಾ ಸ್ಥಿರ ಆಸ್ತಿಗಳು ಎಲ್ಲವೂ ಶಾಶ್ವತ ಸಮರ್ಪಣೆಗಳೇ ಆಗಿವೆ.

ಇಡೀ ಭಾರತದ ಮುಸ್ಲಿಮರಿಂದ ಪಡೆದ ಅನುದಾನದಿಂದಲೇ ವಕ್ಫ್ ಆಸ್ತಿಗಳನ್ನು ಸಂಗ್ರಹಿಸಲಾಗಿದೆಯೇ ಹೊರತು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರಗಳಿಂದ ಪಡೆದ ಆಸ್ತಿಗಳಲ್ಲ. ಇಂತಹ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ವಕ್ಫ್ ಮಂಡಳಿಯ ಅಧಿಕಾರ ಮತ್ತು ಅದರ ಕಾರ್ಯಚಟುವಟಿಕೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ವಿರೋಧಿಯಾಗಿದೆ.

ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ. ಕೇಂದ್ರ ಸರ್ಕಾರವೇ ಈ ಮಸೂದೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ.

ನಮ್ಮ ದೇಶದಲ್ಲಿ 1995ರ ವಕ್ಫ್ ಕಾಯ್ದೆ ಇದ್ದು, 2013ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅಡಿಯಲ್ಲಿಯೇ ವಕ್ಫ್ ಆಸ್ತಿ ನಿರ್ವಹಣೆ ಮಾಡಲಾಗುತ್ತಿದೆ.

ಯಾವುದೇ ಭೂಮಿಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ.

ಈ ಹೊಸ ಮಸೂದೆಯು ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಯೋಜನೆ ಹೊಂದಿದೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಈಗಲೇ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಕರಡು ಮಸೂದೆಯು ಪ್ರಸ್ತಾಪಿಸಿದ ಪ್ರಮುಖ ತಿದ್ದುಪಡಿಗಳಲ್ಲಿ ವಕ್ಫ್ ಬೋರ್ಡ್‌ಗಳ ಪುನರ್‌ ರಚನೆ, ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು, ಮಂಡಳಿಯು ವಕ್ಫ್‌ ಆಸ್ತಿ ಎಂದು ಘೋಷಿಸುವ ಮೊದಲು ಭೂಮಿಯ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಯ್ದೆಯ ಕೆಲವು ಷರತ್ತುಗಳನ್ನು ರದ್ದುಗೊಳಿಸುವುದು ಸೇರಿದೆ.

ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು ಮತ್ತು ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು ಸೆಕ್ಷನ್ 14ಕ್ಕೆ ತಿದ್ದುಪಡಿ ತರುವುದು ಮತ್ತು ರಾಜ್ಯ ವಕ್ಫ್ ಮಂಡಳಿಗಳು ತನ್ನದೆಂದು ಹೇಳಿಕೊಂಡಿರುವ ವಿವಾದಿತ ಭೂಮಿಯನ್ನು ಹೊಸದಾಗಿ ಪರಿಶೀಲಿಸಲು ಮಸೂದೆಯು ಪ್ರಸ್ತಾಪಿಸಿದೆ ಎಂದು ತಿಳಿದು ಬಂದಿದೆ. ಇಂತಹ ಕೇಂದ್ರ ಸರಕಾರದ ನಿಲುವುಗಳನ್ನು ಕರ್ನಾಟಕ ಮುಸ್ಲಿಂ ಯುನಿಟಿಯ ವಿರೋಧವಿದೆ ಹಾಗೂ ಬಲವಾಗಿ ಖಂಡಿಸುತ್ತದೆ.

ಪ್ರಸ್ತುತ, ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್ ಮಂಡಳಿಗಳಿವೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕೆ 2013ರಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ಇವುಗಳ ನಿರ್ದೇಶನಗಳಲ್ಲಿಯೇ ಪ್ರಸ್ತುತ ಭಾರತ ವಕ್ಫ್ ಮಂಡಳಿ ಹಾಗು ರಾಜ್ಯ ವಕ್ಫ್ ಮಂಡಳಿಗಳು ಸಕ್ರಿಯವಾಗಿವೆ. ಇಂತಹ ಸಕ್ರಿಯ ಸರ್ಕಾರಿ ವಕ್ಫ್‌ ಕಾಯ್ದೆ ಮತ್ತು ಮಂಡಳಿಗಳನ್ನು ಬಿಜೆಪಿ ಮತ್ತು ಸಂಘಪರಿವಾರ ವಿರೋಧಿಸುತ್ತಾ ಬರುತ್ತಿರುವುದು ನಾಚಿಕೆಗೇಡು.

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗಳ ಅಧಿಕಾರವನ್ನು ಕಡಿತಗೊಳಿಸುವುದನ್ನು ವಕ್ಫ್ ಮಂಡಳಿಗೆ ಇರುವ ಕಾನೂನಿನ ಮಾನ್ಯತೆಯನ್ನು ಹಾಳುಮಾಡುವ ತಿದ್ದುಪಡಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಸದ್ಯ ಭಾರತ ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತರಲು ಬಯಸಿರುವ ಸುಮಾರು ನಲವತ್ತು ತಿದ್ದುಪಡಿಗಳಿಗೆ ನಮ್ಮ ವಿರೋಧಿವಿದೆ.

ವಕ್ಫ್ ಮಂಡಳಿಗೆ ಸಂಬಂದಿಸಿದಂತೆ ಈ ತಿದ್ದುಪಡಿ ಕಾಯ್ದೆಗಳು ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಈ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿ ದೊಡ್ಡಮಟ್ಟದ ಜನಾಂದೋಲನ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯಾಧ್ಯಕ್ಷರಾದ ಜಬ್ಬಾರ ಕಲಬುರ್ಗಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್ ಅವರು ಪತ್ರಿಕಾ ಹೇಳಿಕೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

Related Posts