ಬಿ.ಝಡ್.ಜಮೀರ್ ಅಹಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಕರ್ನಾಟಕ ಮುಸ್ಲಿಮ್ ಯುನಿಟಿ! » Dynamic Leader
July 23, 2024
ರಾಜಕೀಯ

ಬಿ.ಝಡ್.ಜಮೀರ್ ಅಹಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಕರ್ನಾಟಕ ಮುಸ್ಲಿಮ್ ಯುನಿಟಿ!

ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಮುಸ್ಲಿಮ್ ಮತದಾರರ ಪಾತ್ರವನ್ನು ಗುರುತಿಸಿ ಸೂಕ್ತ ಸ್ಥಾನ – ಮಾನಗಳನ್ನು ನೀಡಲು ಕರ್ನಾಟಕ ಮುಸ್ಲಿಮ್ ಯುನಿಟಿ ಒತ್ತಾಯ.

ಈ ಭಾರಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬಹಳ ಮುತುವರ್ಜಿಯಿಂದ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಕಾಂಗ್ರೆಸ್ಸಿನೊಂದಿಗೆ ಮುಸ್ಲಿಂ ಸಮುದಾಯಕ್ಕೆ ಬಹಳಷ್ಟು ನಿರೀಕ್ಷೆಗಳಿವೆ

2ಬಿ ಮೀಸಲಾತಿ ಪರಿಹಾರ ಮುಂತಾದ ಹಲವು ಬೇಡಿಕೆಗಳು ಇವೆ. ಇದೆಲ್ಲವನ್ನೂ ಪರಿಹರಿಸುವುದು ಕಾಂಗ್ರೆಸ್ಸಿನ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ದಲಿತರ ನಂತರ ಎರಡನೇ ಅತಿ ದೊಡ್ಡ ಮತದಾರರನ್ನು ಹೊಂದಿರುವ ಮುಸ್ಲಿಮ್ ಸಮುದಾಯಕ್ಕೆ ಒಂದು ಪಕ್ಷವನ್ನು ಜಯಿಸಲಿಕ್ಕೂ ಅಥವಾ ಸೋಲಿಸಲಿಕ್ಕೂ ಸಾಧ್ಯವೆಂಬ ಸತ್ಯ ಈ ಚುನಾವಣೆಯಲ್ಲಿ ಸಾಬೀತಾಗಿದೆ. ಕರ್ನಾಟಕದ ಮುಸ್ಲಿಮ್ ಸಮುದಾಯವು ಇದೀಗ ರಾಜಕೀಯವಾಗಿ ಅತ್ಯಂತ ಪ್ರಬುದ್ಧವಾಗಿದೆ. ಆದ್ದರಿಂದ ಈ ಸತ್ಯವನ್ನು ಅರಿತು ಕಾಂಗ್ರೆಸ್ ಪಕ್ಷ / ಸರ್ಕಾರ ಮುಸ್ಲಿಮ್ ಸಮುದಾಯದ ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಈಡೇರಿಸುವ ಯೋಜನೆಗಳನ್ನು ಮಾಡಿದರೆ ಮಾತ್ರ ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜಯಗಳಿಸಬಹುದು. ಕಾಂಗ್ರೆಸ್ಸಿನ ನೇತಾರರು ಇದರ ಬಗ್ಗೆ ವಿಶೇಷವಾಗಿ ಚಿಂತಿಸಬೇಕಾಗಿದೆ.

ಕರ್ನಾಟಕದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಕಳೆದ ನಾಲ್ಕು ವರ್ಷದಲ್ಲಿ  ಸಾಕಷ್ಟು ನೋವು, ಅನ್ಯಾಯ, ಹಿಂಸೆ ಅನುಭವಿಸಿರುತ್ತಾರೆ. ಮಹಿಳೆಯರ ಶಿಕ್ಷಣದ ವಿಚಾರ (ಹಿಜಾಬ್) ದಲ್ಲಿ ಗೊಂದಲವನ್ನು ಸೃಷ್ಠಿ ಮಾಡಲಾಗಿತ್ತು. ದೇವಸ್ಥಾನ ಪ್ರದೇಶದಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಸಂಘಿಗಳಿಂದ ತಾಕೀತು ಮಾಡಲಾಗಿತ್ತು. ಅನಗತ್ಯವಾಗಿ ಗೋವು ಸಂರಕ್ಷಕರ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ ಮಾಡಲಾಗಿತ್ತು. ಲವ್‌ ಜೀಹಾದ್‌ ಹೆಸರಲ್ಲಿ ಮುಸ್ಲಿಮ್ ಯುವಕ/ಯುವತಿಯರ ಮೇಲೆ ವಿನಾ ಕಾರಣ ದೌರ್ಜನ್ಯ ಮಾಡಲಾಗುತಿತ್ತು. 4% ಮೀಸಲಾತಿಯನ್ನು ರದ್ದುಗೊಳಿಸಿ, ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮರುಹಂಚಿಕೆ ಮಾಡಿ, ಮುಸ್ಲಿಮರನ್ನು ಇ ಡಬ್ಲ್ಯೂಎಸ್ ಕೋಟಾಗೆ ವರ್ಗಾವಣೆಮಾಡಿ ಗೊಂದಲವನ್ನು ಸೃಷ್ಠಿಸಿತು. ಗಣನೀಯವಾಗಿ ಅಲ್ಪಸಂಖ್ಯಾತ ವಿಧ್ಯಾರ್ಥಿ ವೇತನವನ್ನು ಕಡಿತ ಗೋಳಿಸಿ ಸುಮಾರ 6 ಲಕ್ಷಕ್ಕೂ ಹೆಚ್ಚು ಮಕ್ಕಳ ವಿಧ್ಯಾರ್ಥಿ ವೇತನದಿಂದ ವಂಚನೆ ಮಾಡಿತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಗೂ ನಿಗಮದಿಂದ ಜಾರಿಯಲ್ಲಿದ್ದ ಯೋಜನೆಗಳನ್ನು ದ್ವೇಶದಿಂದ ರದ್ದುಗೊಳಿಸಿತು.

ಅನುದಾನ ಕಡಿತಗೊಳಿಸಿ ಮುಸ್ಲಿಂ ಸಮುದಾಯವನ್ನು ಹೆದರಿಕೆಯಲ್ಲಿಡುವ ಪ್ರಯತ್ನವನ್ನು ಸರ್ಕಾರದಿಂದಲೇ ಮಾಡಲಾಗಿತ್ತು. ಸಿ.ಎ.ಎ. ಮತ್ತು ಎನ್.ಆರ್.ಸಿ ಹೋರಾಟದಲ್ಲಿ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿ ಮುಗ್ದ ಮುಸ್ಲಿಮರ ಸಾವಿಗೆ ಕಾರಣವಾಯಿತು. ಮಂಗಳೂರು ಹಾಗೂ ನರಗುಂದದಲ್ಲಿ ಕೋಮುದ್ವೇಶದ ಕಾರಣ ಕೊಲೆಗಳಾದರೂ ಕನಿಷ್ಠ ಮಾನವಿಯತೆ ತೋರದಿರುವದು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡದೆ ತಾರತಮ್ಯ ಮಾಡಿರುವದು ಮುಸ್ಲಿಮ್ ಭೇಗುದಿಗೆ ಕಾರಣವಾಗಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ಮುಸ್ಲಿಮ್ ಸಮುದಾಯಕ್ಕೆ 2023ರ ಸಾರ್ವತ್ರಿಕ ಚುನಾವಣೆ ವರವಾಗಿ ಬಂದಿತು.

ಈ ಮೇಲಿನ ಎಲ್ಲ ಬೆಳವಣಿಗೆಗಳನ್ನ ಹತ್ತಿರದಲ್ಲಿ ಕಂಡಿದ್ದ ಮುಸ್ಲಿಮರಲ್ಲಿ ಸಾಕಷ್ಟು ಜಾಗೃತಿ ಉಂಟಾಗಿತ್ತು. ಹೀಗಾಗಿ ರಾಜ್ಯದ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಇಡಿಯಾಗಿ ಬೆಂಬಲಿಸಿ ಶೇ.95ರಷ್ಟು ಪೂಲಿಂಗ್ ಮಾಡಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಮುಸ್ಲಿಮರು ಬಹುಮುಖ್ಯ ಪಾತ್ರವನ್ನುವಹಿಸಿದರು. ಇದಕ್ಕಾಗಿ ಕರ್ನಾಟಕ ಮುಸ್ಲಿಮ್ ಯೂನಿಟಿಯು, ಸಮುದಾಯದ ಎಲ್ಲಾ ಮುಖಂಡರುಗಳಿಗೆ, ಉಲೇಮಾಗಳಿಗೆ, ಚಿಂತಕರಿಗೆ ಹಾಗೂ ರಾಜ್ಯದ ಸಮಸ್ತ ಮುಸ್ಲಿಮ್ ಮತದಾರರಿಗೆ ಅಭಿನಂದಿಸುತ್ತದೆ.

ಕರ್ನಾಟಕದಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗದೆ ಇಂದು ಬಹುಮತದ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದಲ್ಲಿ 9  ಮುಸ್ಲಿಂ ಅಭ್ಯರ್ಥಿಗಳು ಗೆದ್ದು ಬಿಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ಕರ್ನಾಟಕ ಮುಸ್ಲಿಮ್ ಯೂನಿಟಿಯ ಹೊಕ್ಕೋತ್ತಾಯವಾಗಿದೆ. ಹಾಗೆಯೇ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಗಳಲ್ಲಿ ಮುಸ್ಲಿಮರಿಗೆ ಸೂಕ್ತ ಆಧ್ಯತೆ, ಸರ್ಕಾರದ ಎಲ್ಲಾ ಪ್ರಮುಖ ನಿಗಮ / ಮಂಡಳಿಗಳಲ್ಲಿ ಸೂಕ್ತ ಆಧ್ಯತೆ ನೀಡಬೇಕು, ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ನಿಗಮ / ಮಂಡಳಿಗಳನ್ನು ಸಂಪೂರ್ಣ ಹಾಗು ಖಡ್ದಾಯವಾಗಿ ಭರ್ತಿಮಾಡ ಬೇಕು. ಅದರಲ್ಲೂ ವಿಶೇಷವಾಗಿ ರಾಜ್ಯಾದ್ಯಂತ ಚುನಾವಣಾ ಪ್ರವಾಸ ಕೈಕೊಂಡು, ಮುಸ್ಲಿಮರ ಮತಗಳನ್ನು ಕ್ರೋಢೀಕರಿಸಿದ, ಕರ್ನಾಟಕ ಮುಸ್ಲಿಮ್ ಜನನಾಯಕ, ಪ್ರಖರ ವಾಗ್ಮಿ, ಅರ್ಹ, ಅಹಿಂದ ಮುಖಂಡರೂ ಆಗಿರುವ ಶ್ರೀ.ಬಿ.ಜಡ್.ಜಮೀರ್ ಅಹ್ಮದ್ ಖಾನ್ ರವರಿಗೆ  ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ, ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿರುವ ಸಮುದಾಯದ ಉಪಕಾರ ಸ್ಮರಿಸಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಮುಸ್ಲಿಮ್ ಯುನಿಟಿ ಸಂಘಟನೆ ಒತ್ತಾಯ ಮಾಡುತ್ತಿದೆ.

ಗೆಲುವಿನ ಸಂಭ್ರಮದಲ್ಲಿ ಶೇ.95ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಮುಸ್ಲಿಮ್ ಸಮಾಜವನ್ನು ಮರೆಯಬಾರದು. ಮುಸ್ಲಿಮ್ ಸಮುದಾಯಕ್ಕೆ ನೀಡಿರುವ 2ಬಿ ಮೀಸಲಾತಿಯ ಪ್ರಕರಣವನ್ನು ತಕ್ಷಣಕ್ಕೆ ಬಗೆಹರಿಸಬೇಕು. ದಲಿತರಿಗೆ ನೀಡಿರುವ ಭರವಸೆಯನ್ನೂ ಈಡೇರಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಒತ್ತಾಯಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಸಮುದಾಯದ ಒಂಬತ್ತು ಅಭ್ಯರ್ಥಿಗಳಿಗೆ ಹಾಗೂ ರಾಜ್ಯದ ಧಿಮಂತ ನಾಯಕ ಶ್ರೀ.ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ. ಡಿ.ಕೆ. ಶಿವಕುಮಾರ್ ರವರನ್ನು ಈ ಮೂಲಕ ಕೆ.ಎಮ್.ಯು ಅಭಿನಂದಿಸುತ್ತಿದೆ.

Related Posts