ಬಿಜೆಪಿ ಸರ್ಕಾರದಿಂದ ಮೀಸಲಾತಿ ವಂಚಿತರಾದ ಮುಸ್ಲಿಮರ ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕಿದ ಮೊದಲ ಜಯ! » Dynamic Leader
October 22, 2024
ರಾಜ್ಯ

ಬಿಜೆಪಿ ಸರ್ಕಾರದಿಂದ ಮೀಸಲಾತಿ ವಂಚಿತರಾದ ಮುಸ್ಲಿಮರ ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕಿದ ಮೊದಲ ಜಯ!

ಡಿ.ಸಿ.ಪ್ರಕಾಶ್ ಸಂಪಾದಕರು

ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅವೈಜ್ಞಾನಿಕವಾಗಿ EWS ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ದಬ್ಬಾಳಿಕೆ ಎಂದು ಒತ್ತಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ವ್ಯಕ್ತಿಗಳು ಸಲ್ಲಿಸಿರುವ ಹಲವು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಸರ್ಕಾರದ ನಡೆಯು ಅಸ್ಥಿರ ಹಾಗೂ ದೋಷಪೂರಿತವಾಗಿರುವಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಏಪ್ರಿಲ್ 18ರವರೆಗೂ ಜಾರಿಗೊಳಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಗುರುವಾರ ಭರವಸೆ ನೀಡಿದೆ.

ನ್ಯಾಯಾಲಯದ ಎದುರು ಹಾಜರುಪಡಿಸಿರುವ ದಾಖಲೆಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ಕರ್ನಾಟಕ ಸರ್ಕಾರದ ನಿರ್ಧಾರವು ‘ಸಂಪೂರ್ಣ ತರ್ಕರಹಿತ ಕಲ್ಪನೆ’ ಎಂಬಂತೆ ಕಾಣಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇ.13ರಷ್ಟಿರುವ ಮುಸ್ಲಿಂ ಜನಸಂಖ್ಯೆ ವಿರುದ್ಧ ತಾರತಮ್ಯ ಮಾಡುವ ಮೂಲಕ ಸಮಾನತೆಯ ಸಾಂವಿಧಾನಿಕ ತತ್ವವನ್ನು ಹಾಗೂ ಜಾತ್ಯತೀತತೆಯನ್ನು ಕರ್ನಾಟಕ ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಅರ್ಜಿದಾರರು ವಾದಿಸಿದರು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸರ್ಕಾರವು ಯಾವುದೇ ಅಧ್ಯಯನ ನಡೆಸಿಲ್ಲ ಅಥವಾ ಯಾವುದೇ ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಿಲ್ಲ ಎಂದು ಪ್ರತಿಪಾದಿಸಿದರು.

ಈ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ, ರಾಜ್ಯದಲ್ಲಿನ ವಿವಿಧ ಸಮುದಾಯಗಳ ಸಮಾಜೋ- ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ ಆಯೋಗ ಸಲ್ಲಿಸಿದ್ದ ಶಿಫಾರಸಿನ ಆಧಾರದಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದು ಹೇಳಿತು. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು ಶೇ.40 ರಷ್ಟಿರುವ ಒಕ್ಕಲಿಗರು ಮತ್ತು ಲಿಂಗಾಯತರ ಪ್ರಮಾಣದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಸಮುದಾಯಗಳು ಅಧಿಕ ಮೀಸಲಾತಿಗೆ ಅರ್ಹವಾಗಿವೆ ಎಂದು ಸರ್ಕಾರ ತಿಳಿಸಿದೆ.

ಆದರೆ ಆಯೋಗದ ವರದಿಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೋರ್ಟ್, ತನ್ನ ನಿರ್ಧಾರಕ್ಕೆ ಪೂರಕವಾದ ಮತ್ತಷ್ಟು ಪುರಾವೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು 2013ರಲ್ಲಿ ಜಾರಿಗೊಳಿಸಿದ ಮೀಸಲಾತಿಯಲ್ಲಿ ಮುಸ್ಲಿಮರ ಶೇ.4ರಷ್ಟನ್ನು ಹೇಗೆ ಗುರುತಿಸಲಾಗಿದೆ ಎಂಬ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

1992ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ಣಾಯಕ ತೀರ್ಪಿನಲ್ಲಿ ನಿಗದಿಪಡಿಸಲಾಗಿದ್ದ ಶೇ.50ರ ಮೀಸಲಾತಿಯ ಮಿತಿಯನ್ನು ಕರ್ನಾಟಕ ಸರ್ಕಾರದ ನಿರ್ಧಾರ ಮೀರಿದೆ ಎಂಬುದನ್ನು ಕೋರ್ಟ್ ಗಮನಿಸಿದೆ. ಈ ಮಿತಿಯನ್ನು ದಾಟಲು ಅಸಾಧಾರಣ ಸನ್ನಿವೇಶ ಹಾಗೂ ನಿರಾಕರಿಸಲಾಗದ ಕಾರಣಗಳು ಅತಿ ಅಗತ್ಯ ಎಂದು ಕೋರ್ಟ್ ತಿಳಿಸಿದೆ.

ಬಳಿಕ ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ, ಕರ್ನಾಟಕ ಸರ್ಕಾರ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಪ್ರತಿನಿಧಿಗಳು ಅರ್ಜಿಗಳಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ. ಮುಂದಿನ ಆದೇಶದವರೆಗೂ ಈ ನಿರ್ಧಾರದ ಆಧಾರದಲ್ಲಿ ಯಾವುದೇ ನೇಮಕಾತಿ ಅಥವಾ ಪ್ರವೇಶಾತಿ ನಡೆಸದಂತೆ ನಿರ್ದೇಶನ ನೀಡಿದೆ. ಒಟ್ಟಾರೆಯಾಗಿ ಇದು ಬಿಜೆಪಿ ಸರ್ಕಾರದಿಂದ ಮೀಸಲಾತಿ ವಂಚಿತರಾದ ಮುಸ್ಲಿಮರ ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕಿದ ಮೊದಲ ಜಯವಾಗಿದೆ. Muslim OBC Reservation: Supreme Court Slams Karnataka Govt For Scrapping 4 percent Quota.

Related Posts