ಟಿ.ಎನ್.ಸೀತಾರಾಂ ಅವರ "ನೆನಪಿನ ಪುಟಗಳು" ಗ್ರಂಥ ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ! » Dynamic Leader
October 4, 2024
ರಾಜ್ಯ

ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಗ್ರಂಥ ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬೆಂಗಳೂರು: “ಟಿ.ಎನ್.ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತಸ್ನೇಹಿತ. ನಾನು ಲಂಕೇಶ್ ಪತ್ರಿಕಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು  ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನಾನು ಸದಸ್ಯನಾಗಲು ನೆರವಾದರು. 1971 ರಲ್ಲಿ ವೀರೆಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ” ಎಂದು ಅವರು ತಮ್ಮ ಆರಂಭಿಕ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.

“ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನನಗೆ ಪಕ್ಷದ ನಾಯಕರು ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ಮೇಲೆ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ನಂತರ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984 ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ. 1985 ರಲ್ಲಿ ಜನತಾದಳದ ಪರವಾಗಿ ನಿಂತು ಜಯ ಸಾಧಿಸಿದ ನಂತರ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ನನ್ನ ಬಳಿಯಿದ್ದ ಸ್ಕೂಟರ್ ನಲ್ಲಿ ಓಡಾಡುತ್ತಿದ್ದೆ” ಎಂದು ಹೇಳಿದರು.

“ಟಿ.ಎನ್.ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿದ್ದವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು.

“ನೆನಪಿನ ಪುಟಗಳು” ಪುಸ್ತಕವನ್ನು ಉತ್ತಮವಾಗಿ ಹಾಗೂ ಸತ್ಯವನ್ನೇ ಬರೆದಿದ್ದಾರೆ. ನನ್ನ  ಉತ್ತಮ ಸ್ನೇಹಿತರಾಗಿರುವ ಟಿ.ಎನ್.ಸೀತಾರಾಂ ಅವರು ಬರೆದಿರುವ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡುತ್ತಿದ್ದೇನೆ” ಎಂದು ಹೇಳಿದರು.

ಹಿರಿಯ ನಟ, ಆಪ್‌ ಪಕ್ಷದ ರಾಜ್ಯಾಧ್ಯಕ್ಷರು ಆದ ಮುಖ್ಯಮಂತ್ರಿ ಚಂದ್ರು, ಲೇಖಕಿಯರ ಸಂಘದ ಅಧ್ಯಕ್ಷರಾದ ಹೆಚ್.ಎಲ್ ಪುಷ್ಪ, ಏಷಿಯಾನೆಟ್ ಸುವರ್ಣ ಸಂಪಾದಕರಾದ ರವಿ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Posts