ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕಾಂಗ್ರೆಸ್ Archives » Dynamic Leader
July 14, 2024
Home Posts tagged ಕಾಂಗ್ರೆಸ್
ದೇಶ

ರಾಹುಲ್ ಗಾಂಧಿ ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್ ಅಭಿಪ್ರಾಯಪಟ್ಟಿದ್ದಾರೆ!

ಸಂಸತ್ತಿನ ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿ ಬೆಂಬಲಿಗರವರೆಗೆ ಎಲ್ಲರೂ ನಿರಂತರವಾಗಿ ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟ ಹಿಂದೂಗಳಿಗೆ ಮತ್ತು ಹಿಂದೂ ಧರ್ಮಕ್ಕೆ ವಿರೋಧವಾಗಿದೆ ಎಂದು ಮಾತನಾಡುತ್ತಿದ್ದರು. ಆದರೂ ಇವರ ಚುನಾವಣಾ ಪ್ರಚಾರ ಕೈಕೊಡಲಿಲ್ಲ. ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಪ್ರಸ್ತುತ ಸಂಸತ್ತಿನಲ್ಲಿ ಹೆಚ್ಚಿನ ಬಲದೊಂದಿಗೆ ಇವೆ. ಇದು ಬಿಜೆಪಿಯವರಿಗೆ ಭಯ ಮತ್ತು ಕೋಪಕ್ಕೂ ಕಾರಣವಾಗಿದೆ.

ಹಾಗಾಗಿಯೇ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿದ್ದನ್ನು ತಿರುಚಿ, ಹಿಂದೂ ಧರ್ಮದ ವಿರುದ್ಧ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಸುಳ್ಳು ಮಾತನಾಡಿದರು. ಅಲ್ಲದೆ, ರಾಹುಲ್ ಗಾಂಧಿ ಮನೆ ಮುಂದೆ ಬಿಜೆಪಿ ಸದಸ್ಯರು ಮುತ್ತಿಗೆ ಹಾಕಿದರು. ಕೇಂದ್ರ ಬಿಜೆಪಿ ಸರ್ಕಾರವನ್ನು ಯಾರು ಟೀಕಿಸಿದರೂ ಅವರನ್ನು ಬಿಜೆಪಿಯವರು ನಿರಂತರವಾಗಿ ಹಿಂದೂ ವಿರೋಧಿಗಳು ಮತ್ತು ಹಿಂದೂ ಧರ್ಮದ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ. ಆದರೆ ಮಾಧ್ಯಮಗಳು ಮತ್ತು ಬಿಜೆಪಿ ಐಟಿ ಸೆಲ್‌ಗಳು ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂಬಂತೆ ಸುಳ್ಳುಗಳನ್ನು ಹಬ್ಬಿಸುತ್ತಿವೆ’’ ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಸಂವಿಧಾನದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

25 ಜೂನ್ 1975 ರಂದು ಭಾರತದಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಈ ಕುರಿತು ಪ್ರಧಾನಿ ಮೋದಿ ಅವರು ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲರನ್ನೂ ಗೌರವಿಸುವ ದಿನವಾಗಿದೆ. ಕಾಂಗ್ರೆಸ್ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯು ಅವರು ಭಾರತದ ಸಂವಿಧಾನವನ್ನು ಹೇಗೆ ಸಂಪೂರ್ಣವಾಗಿ ಬುಡಮೇಲು ಮಾಡಿದರು ಎಂಬುದನ್ನು ನೆನಪಿಸುತ್ತದೆ.

ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಹಕ್ಕು ಇಲ್ಲ. ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿದವರು ಮತ್ತು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದವರು ಇವರು. ತುರ್ತು ಪರಿಸ್ಥಿತಿ ಹೇರಲು ಕಾರಣವಾದ ಭಾವನೆ ಅವರ ಪಕ್ಷದ ಸದಸ್ಯರಲ್ಲಿ ಜೀವಂತವಾಗಿದೆ.

ಅಧಿಕಾರ ಉಳಿಸಿಕೊಳ್ಳಲು ಅಂದಿನ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವದ ತತ್ವವನ್ನು ಕಡೆಗಣಿಸಿತು. ಕಾಂಗ್ರೆಸ್ ಪಕ್ಷಕ್ಕೆ ಮಣಿಯದವರನ್ನು ಹಿಂಸಿಸಲಾಯಿತು. ದುರ್ಬಲ ವರ್ಗಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕವಾಗಿ ಪ್ರತಿಗಾಮಿ ನೀತಿಗಳನ್ನು ಅನಾವರಣಗೊಳಿಸಲಾಯಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ 

ದೇಶಾದ್ಯಂತ 7 ಹಂತಗಳಲ್ಲಿ ನಡೆದ 18ನೇ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಏಕ ಬಹುಮತದೊಂದಿಗೆ ಸರ್ಕಾರ ರಚಿಸುವ ಶಕ್ತಿ ಕಂಡುಬಂದಿಲ್ಲ. ಆದರೂ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸೇರಿ ಸತತ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ಕೇರಳದ ವಯನಾಡು ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದರು. ಮತದಾನ ಮುಗಿದ ನಂತರ ಅವರು ಕಾಂಗ್ರೆಸ್ ಭದ್ರಕೋಟೆಯಾದ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲೂ ನಾಮಪತ್ರ ಸಲ್ಲಿಸಿದರು.

ಇದಾದ ಬಳಿಕ, ನಡೆದ ಮತ ಎಣಿಕೆ ವೇಳೆ ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದರು. ವಯನಾಡಿನಲ್ಲಿ ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದು ಆನಿ ರಾಜಾ ಅವರನ್ನು 3,64,422 ಮತಗಳ ಅಂತರದಿಂದ ಸೋಲಿಸಿದರು. ಅದೇ ರೀತಿ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ 6,87,649 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯನ್ನು 3,90,030 ಮತಗಳ ಅಂತರದಿಂದ ಸೋಲಿಸಿದ್ದು ಗಮನಾರ್ಹ.

ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಸ್ಪರ್ದಿಸಿ ಗೆದ್ದ ಎರಡು ಕ್ಷೇತ್ರಗಳ ಪೈಕಿ, ಒಂದರಲ್ಲಿ ರಾಜೀನಾಮೆ ನೀಡಬೇಕಾಗಿದೆ. ಅಂದರೆ, 2 ಕ್ಷೇತ್ರಗಳಲ್ಲಿ ಸ್ಪರ್ದಿಸಿ ಗೆಲುವು ಸಾದಿಸಿದ ಒಬ್ಬ ಅಭ್ಯರ್ಥಿ, 14 ದಿನಗಳೊಳಗೆ ಯಾವುದಾದರೊಂದು ಕಡೆ ಸಂಸದ ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬುದು ನಿಯಮ. ಇದನ್ನು ಆಧರಿಸಿ, ಇಂದು ರಾಹುಲ್ ಗಾಂಧಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಅಲ್ಲದೇ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಸಹೋದರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ದಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

2019ರಲ್ಲಿ ವಯನಾಡು ಕ್ಷೇತ್ರದಿಂದ ಆಯ್ಕೆಯಾದ ರಾಹುಲ್ ಗಾಂಧಿ ಅದೇ ವರ್ಷ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲೂ ಸ್ಪರ್ದೆಗಿಳಿದರು. ಆದರೆ, ಅಲ್ಲಿ ಸ್ಮೃತಿ ಇರಾನಿ ಎದುರು ಸೋತರು. ತರುವಾಯ, ಅವರು ವಯನಾಡ್ ಕ್ಷೇತ್ರದ ಸಂಸದರಾಗಿ ಮುಂದುವರೆದರು. ಈ ಬಾರಿಯೂ ವಯನಾಡ್‌ನಲ್ಲಿ ಸ್ಪರ್ದೆಗಿಳಿದ ಅವರು ಅಮೇಥಿಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ಒತ್ತಾಯದ ಹೊರತಾಗಿಯೂ ಅವರು ಸ್ಪರ್ಧಿಸಲಿಲ್ಲ. ಏತನ್ಮಧ್ಯೆ, ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯ ಸಂಸದೆ ಸೋನಿಯಾ ಗಾಂಧಿ, ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಆ ಕ್ಷೇತ್ರದಲ್ಲಿ ರಾಹುಲ್ ಅವರನ್ನು ಕಣಕ್ಕಿಳಿಸಲಾಯಿತು. ಈಗ ಅವರು ರಾಯ್ ಬರೇಲಿಯ ಸಂಸದರಾಗಿ ಆಯ್ಕೆಯಾಗಿದ್ದಾರೆ.

ರಾಜಕೀಯಕ್ಕೆ ಬರಲು ನನಗೆ ಯಾವುದೇ ಹಿಂಜರಿಕೆ ಇಲ್ಲ – ಪ್ರಿಯಾಂಕಾ ಗಾಂಧಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ವಯನಾಡಿನ ಜನತೆಗೆ ನನ್ನ ಧನ್ಯವಾದಗಳು; ವಯನಾಡಿಗೆ ಭೇಟಿ ನೀಡುವುದನ್ನು ಮುಂದುವರಿಸಲಾಗುವುದು. ಕಳೆದ 5 ವರ್ಷಗಳಿಂದ ವಯನಾಡಿನ ಜನರು ನನಗೆ ನೀಡಿದ ಬೆಂಬಲ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಯಾವಾಗಲೂ ವಯನಾಡಿನ ಜನರ ಪರವಾಗಿ ನಿಲ್ಲುತ್ತೇನೆ. ಪ್ರಿಯಾಂಕಾ ಗಾಂಧಿ ಖಂಡಿತಾ ಇಲ್ಲಿ ಗೆಲ್ಲುತ್ತಾರೆ. ನಾನು ಮತ್ತು ನನ್ನ ಸಹೋದರಿ ವಯನಾಡಿನ ಜನರನ್ನು ಪ್ರತಿನಿಧಿಸಲಿದ್ದೇವೆ” ಎಂದು ಹೇಳಿದರು.

“ನಂತರ ಮಾತನಾದಿಡ ಪ್ರಿಯಾಂಕಾ ಗಾಂಧಿ “ವಯನಾಡಿನಲ್ಲಿ ಸ್ಪರ್ಧಿಸುವುದು ಬಹಳ ಖುಷಿ ತಂದಿದೆ; ಮತ ರಾಜಕೀಯಕ್ಕೆ ಬರಲು ನನಗೆ ಯಾವುದೇ ಹಿಂಜರಿಕೆ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ರಾಹುಲ್ ಗಾಂಧಿ ಚೆಕ್ ಮೇಟ್?

ರಾಜ್ಯ

ಬೆಂಗಳೂರು: ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಅದರಂತೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕ್ರಮವಾಗಿ ಶೇ.29.84 ಮತ್ತು ಶೇ.18.44ಕ್ಕೆ ಪರಿಷ್ಕರಿಸಿದೆ.

ಈ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್ ಬೆಲೆ ರೂ.3, ಡೀಸೆಲ್ ಬೆಲೆ ರೂ.3.50ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿರುವ ಬಿಜೆಪಿ, ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕೆ ಎಂದು ಒತ್ತಾಯಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಪ್ರಕಟಿಸಿರುವ ಪ್ರಕಟಣೆಯಲ್ಲಿ, “ಕಾಂಗ್ರೆಸ್ಸಿಗರೇ, ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನೂ ಬೇಡಿರಲಿಲ್ಲ; ನೀವು ಯಾವ ಭಾಗ್ಯವನ್ನು ಕೊಡದಿದ್ದರೂ ಪರವಾಗಿಲ್ಲ. ಬೆಲೆ ಏರಿಕೆಯ ದೌರ್ಭಾಗ್ಯವನ್ನು ಮಾತ್ರ ನಮ್ಮ ಮೇಲೆ ಹೇರಬೇಡಿ. ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿ, ನೀವು ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ” ಎಂದು ಆಕ್ರೋಶ ವ್ಯಕ್ತಪ್ಡಿಸಿದ್ದಾರೆ.

“ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣೀ ರೂಪದಲ್ಲಿ ಏರಿಸುತ್ತಲೇ ಇದ್ದೀರಿ, ಇದೀಗ ಪೆಟ್ರೋಲ್ ಬೆಲೆ ರೂ.3, ಡೀಸೆಲ್ ಬೆಲೆ ರೂ.3.50ಕ್ಕೆ ದರಗಳನ್ನು ಏರಿಸಿ ಜನಸಾಮಾನ್ಯರ ಕೈ ಸುಟ್ಟಿದ್ದೀರಿ. ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳ ಕಂಡು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ” ಎಂದು ಕಿಡಿಕಾರಿದ್ದಾರೆ.

“ಬರಿದಾಗಿರುವ ನಿಮ್ಮ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡು ಬಡವರ ಜೇಬು ಖಾಲಿ ಮಾಡಲು ಹೊರಟಿರುವ ನಿಮ್ಮ ಜನ ವಿರೋಧಿ ನೀತಿ ನಿರ್ಧಾರಗಳನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ಜನಾಕ್ರೋಶವನ್ನು ಪ್ರತಿನಿಧಿಸಿ ಜಿಜೆಪಿ ಬೀದಿಗಿಳಿದು ಹೋರಾಡಲಿದೆ” ಎಂದು ಹೇಳಿದ್ದಾರೆ.

“ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಮುಖ್ಯಮಂತ್ರಿಗಳು ಹಾಗೂ ಸರಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಸೋಮವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿಭಟನೆ ನಡೆಸುತ್ತೇವೆ. ಹಾಗಾಗಿ ಇಂಧನ ಬೆಲೆ ಏರಿಕೆ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜಕೀಯ

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ 235 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯ ಎನ್‌ಡಿಎ ಮೈತ್ರಿಕೂಟಕ್ಕೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ದುಃಸ್ವಪ್ನವಾಗಿ ಪರಿಣಮಿಸಿದೆ. ಸಂಸತ್ತಿನಲ್ಲಿ ಇಂಡಿಯಾ ಮೈತ್ರಿಕೂಟದ ಪ್ರಾತಿನಿಧ್ಯವು ಮುಂಬರುವ ದಿನಗಳಲ್ಲಿ ಗಮನಾರ್ಹವಾದ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ.

ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದರು.

ಈ ಹಿನ್ನೆಲೆಯಲ್ಲಿ, ಒಂದು ಕ್ಷೇತ್ರದ ಸಂಸದರಾಗಿ ಮಾತ್ರ ಮುಂದುವರಿಯಬಹುದಾದ್ದರಿಂದ, ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ರಾಹುಲ್ ಗಾಂಧಿ ಯಾವ ಕ್ಷೇತ್ರವನ್ನು ತ್ಯಾಗ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಏತನ್ಮಧ್ಯೆ, ಕೇರಳಕ್ಕೆ ಬಂದಿದ್ದ ರಾಹುಲ್ ಗಾಂಧಿ ಯಾವ ಕ್ಷೇತ್ರದಲ್ಲಿ ಸಂಸದರಾಗಿ ಮುಂದುವರಿಯಬೇಕು ಎಂಬುದನ್ನು ಜನರ ಮಾತು ಕೇಳಿ ನಿರ್ಧರಿಸುವುದಾಗಿ ಹೇಳಿದ್ದರು.

ಉತ್ತರ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಾಗಿರುವುದರಿಂದ ರಾಯ್ಬರೇಲಿ ಕ್ಷೇತ್ರದ ಸಂಸದರಾಗಿಯೇ ಮುಂದುವರಿಯಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಯನಾಡನ್ನು ತ್ಯಜಿಸುವ ಮುಜುಗರವನ್ನು ತಪ್ಪಿಸಲು ಕಾಂಗ್ರೆಸ್ ಮಹತ್ವದ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ವಯನಾಡಿನಲ್ಲಿ ಮರುಚುನಾವಣೆ ವೇಳೆ ರಾಹುಲ್ ಅವರ ತಂಗಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕಿ ಪ್ರಿಯಾಂಕಾ ಗಾಂಧಿ ಅಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾರಣಾಸಿ ಕ್ಷೇತ್ರದಲ್ಲಿ ಕಳೆದ ಚುನಾವಣೆಗಿಂತ ಕಡಿಮೆ ಅಂತರದಲ್ಲಿ ಮೋದಿ ಗೆಲುವು ಸಾಧಿಸಿದ್ದನ್ನು ಟೀಕಿಸಿದ್ದ ರಾಹುಲ್ ಗಾಂಧಿ, ಪ್ರಬಲ ವಿರೋಧವಿಲ್ಲದೆಯೇ ಕಡಿಮೆ ಅಂತರದಲ್ಲಿ ಗೆದ್ದ ಮೋದಿ, ವಾರಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರೆ ಖಂಡಿತ ಸೋಲುತ್ತಿದ್ದರು ಎಂದು ಹೇಳಿರುವುದು ಗಮನಾರ್ಹ.

ರಾಜಕೀಯ

ದೇಶಾದ್ಯಂತ 7 ಹಂತಗಳಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 234 ಸ್ಥಾನಗಳಲ್ಲಿ ಮತ್ತು ಬಿಜೆಪಿ ಮೈತ್ರಿಕೂಟ 292 ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ.

ಆದಾಗ್ಯೂ, ಬಿಜೆಪಿ ಏಕಾಂಗಿಯಾಗಿ ಕೇವಲ 240 ಸ್ಥಾನಗಳನ್ನು ಗೆದ್ದಿದ್ದರೂ ಬಹುಮತ ಸಿಗದ ಕಾರಣ ಸಮ್ಮಿಶ್ರ ಪಕ್ಷಗಳ ಜತೆ ಸೇರಿ ಸರ್ಕಾರ ನಡೆಸುವ ತವಕದಲ್ಲಿದೆ. ಬಿಜೆಪಿ ಮೈತ್ರಿಕೂಟದಲ್ಲಿರುವ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾರಿಗೆ ಬೆಂಬಲ ನೀಡುತ್ತಾರೋ ಅವರೇ ಸರ್ಕಾರ ರಚಿಸಬಹುದು ಎಂಬ ಸ್ಥಿತಿಯಲ್ಲಿ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಬಿಜೆಪಿ ಮೈತ್ರಿಕೂಟದಲ್ಲಿರುವ 293 ಸಂಸದರ ಪೈಕಿ ಒಬ್ಬರು ಕೂಡಾ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸಮುದಾಯಕ್ಕೆ ಸೇರಿದವರು ಇಲ್ಲ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ಕುರಿತು ಪ್ರಕಟವಾದ ಅಧ್ಯಯನದಲ್ಲಿ, ಬಿಜೆಪಿ ಮೈತ್ರಿಕೂಟದಲ್ಲಿ ಶೇ.33.2ರಷ್ಟು ಸಂಸದರು ಮೇಲ್ಜಾತಿ ಸಮುದಾಯಕ್ಕೆ ಸೇರಿದವರು, ಶೇ.15.7ರಷ್ಟು ಮಧ್ಯಮ ವರ್ಗದವರು ಮತ್ತು ಶೇ.26.2ರಷ್ಟು ಮಾತ್ರ ಇತರೆ ಹಿಂದುಳಿದ ಸಮುದಾಯಗಳಿಗೆ ಸೇರಿದವರು.

ಅದೇ ಸಮಯದಲ್ಲಿ, ‘ಇಂಡಿಯಾ’ ಮೈತ್ರಿಕೂಟದಲ್ಲಿರುವ 235 ಸಂಸದರಲ್ಲಿ ಮುಸ್ಲಿಮರು ಶೇ.7.9ರಷ್ಟು, ಸಿಖ್ಖರು ಶೇ.5ರಷ್ಟು, ಮತ್ತು ಕ್ರಿಶ್ಚಿಯನ್ನರು ಶೇ.3.5% ರಷ್ಟು ಇದ್ದಾರೆ. ಇಲ್ಲಿ ಶೇ.30.7ರಷ್ಟು ಇತರೆ ಹಿಂದುಳಿದ ಸಮುದಾಯಗಳಿಗೆ ಸೇರಿದವರು, ಶೇ.2.4ರಷ್ಟು ಮೇಲ್ಜಾತಿ ಸಮುದಾಯಗಳು ಮತ್ತು ಶೇ.11.9ರಷ್ಟು ಮಧ್ಯಮ ವರ್ಗದ ಸಮುದಾಯಗಳಿಗೆ ಸೇರಿದವರು ಇದ್ದಾರೆ ಎಂದು ವಿವರಿಸಿದೆ.

ರಾಜಕೀಯ

ನವದೆಹಲಿ: ಉತ್ತರ ಪ್ರದೇಶದಲ್ಲಿ ಇತ್ತೀಚೆಗಿನ ಲೋಕಸಭೆ ಚುನಾವಣೆ ಫಲಿತಾಂಶದಿಂದ ತೃಪ್ತರಾಗಿರುವ ಕಾಂಗ್ರೆಸ್ ಪಕ್ಷವು ಜೂನ್ 11 ರಿಂದ 15 ರವರೆಗೆ ‘ಧಯವಾದ್ ಯಾತ್ರೆ’ಯನ್ನು ಘೋಷಿಸಿದೆ. ಯಾತ್ರೆಯು ರಾಜ್ಯದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಗುರಿಯನ್ನು ಹೊಂದಿದ್ದು, ಇದರ ಮೂಲಕ ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತದೆ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಸಂದೇಶಗಳನ್ನು ರವಾನಿಸುವ ಮಾಹಿತಿಯನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಹಂಚಿಕೊಂಡಿದ್ದಾರೆ.

ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಾಂಡೆ, ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಪ್ರತಿ ಕ್ಷೇತ್ರಗಳ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸಿದೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಿ 6ರಲ್ಲಿ ಗೆಲುವು ಸಾಧಿಸಿದರೆ, ಮೈತ್ರಿಕೂಟ 43 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪರಿಶೀಲನಾ ಸಭೆಯಲ್ಲಿ ಮಹಿಳೆಯರ ಹಕ್ಕು ಸೇರಿದಂತೆ ಒಂಬತ್ತು ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಪರಿಣಾಮವನ್ನು ಪಾಂಡೆ ಎತ್ತಿ ತೋರಿಸಿದರು, ಇದು ಸಾರ್ವಜನಿಕರನ್ನು ಪ್ರತಿಧ್ವನಿಸಿದೆ ಎಂದು ಹೇಳಿದ್ದಾರೆ. ಸಂವಿಧಾನದ ಬೆದರಿಕೆಗಳ ನಡುವೆಯೂ ಉತ್ತರ ಪ್ರದೇಶದ ಜನರು ತಮ್ಮ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪ್ರಚಂಡ ಪ್ರಯತ್ನವನ್ನು ಮಾಡಿದರು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸಿದವು ಎಂದು ಹೇಳಿದರು.

ರಾಜಕೀಯ

“ಇದು ನಮ್ಮ ಸ್ಫೂರ್ತಿದಾಯಕ ಧೀಮಂತರಾದ ಛತ್ರಪತಿ ಶಿವಾಜಿ ಮಹಾರಾಜರು, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವವಾಗಿದೆ!”

ಮಹಾರಾಷ್ಟ್ರದ ಸಾಂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ವಿಶಾಲ್ ಪಾಟೀಲ್ ಅವರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಾಳುತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ವಿಶಾಲ್ ಪಾಟೀಲ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಸಂಸದರ ಬಲ 100ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ಬಲ 233ಕ್ಕೆ ಏರಿಕೆಯಾಗಿದೆ.

ಪಾಟೀಲ ಅವರ ಬೆಂಬಲವನ್ನು ಸ್ವಾಗತಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮಹಾರಾಷ್ಟ್ರದ ಜನರು ವಿಶ್ವಾಸಘಾತುಕತನ, ದುರಹಂಕಾರ ಮತ್ತು ವಿಭಜನೆಯ ರಾಜಕಾರಣವನ್ನು ಸೋಲಿಸಿದರು. ಇದು ನಮ್ಮ ಸ್ಫೂರ್ತಿದಾಯಕ ಧೀಮಂತರಾದ ಛತ್ರಪತಿ ಶಿವಾಜಿ ಮಹಾರಾಜರು, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವವಾಗಿದೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾಂಗ್ಲಿಯಿಂದ ಆಯ್ಕೆಯಾದ ಸಂಸದ ವಿಶಾಲ್ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದನ್ನು ಸ್ವಾಗತಿಸುತ್ತೇನೆ. ಸಂವಿಧಾನ ಚಿರಾಯುವಾಗಲಿ!

ರಾಜಕೀಯ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ದ್ವೇಷ ಮತ್ತು ಅಹಂಕಾರದ ರಾಜಕಾರಣಕ್ಕೆ ಮತದಾರ ಮೂಗುದಾರ ತೊಡಿಸಿದ್ದಾನೆ. ಬಣ್ಣದ ಮಾತುಗಳು ಹೆಚ್ಚು ಕಾಲ ನಡೆಯದು ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ

ಅವರು ಮಾತನಾಡುತ್ತಾ, ‘ಸ್ವತಃ ಪ್ರಧಾನಿಗಳೇ ಧರ್ಮದ ಭಾವನೆ ಕೆರಳಿಸುವ ಪ್ರಯತ್ನ ಮಾಡಿಯೂ ರಾಜ್ಯದಲ್ಲಿ ಮೋದಿ ವರ್ಚಸ್ಸು ಪರಿಣಾಮ ಬೀರಲಿಲ್ಲ; ಕೈಯಲ್ಲಿರುವ ಸೀಟನ್ನು ಉಳಿಸಿಕೊಳ್ಳಲು ಅವರಿಂದಾಗಲಿಲ್ಲ. ರಾಜ್ಯ ಸರ್ಕಾರ ಕೂಡಾ ಹೆಚ್ಚಾಗಿ ಗ್ಯಾರಂಟಿಯನ್ನೇ ಅವಲಂಭಿಸಿತು. ನಿರೀಕ್ಷಿತ ಸ್ಥಾನವನ್ನು ಗಳಿಸದಿದ್ದರೂ ಒಂಬತ್ತು ಸ್ಥಾನ ಬಗಲಿಗೆ ಹಾಕಿದೆ. ಬಿಜೆಪಿಯ ಅಹಂಕಾರದ ಹುಚ್ಚು ನಾಗಾಲೋಟಕ್ಕೆ ಮತದಾರ ಲಗಾಮು ಹಾಕಿದ್ದಾನೆ.

ಕೇಂದ್ರದ ಆರ್ಥಿಕ ನೀತಿ, ರೈತರನ್ನು ಸತಾಯಿಸಿದ್ದು, ಕಾರ್ಪೊರೇಟ್ ದಿಗ್ಗಜರ ಹಿತಾಸಕ್ತಿಗಳನ್ನು ಕಾಪಾಡಿದ್ದು ಕೇಂದ್ರದ ಬಗ್ಗೆ ಜನರಿಗೆ ಅಸಹನೆ ಮೂಡಿಸಿದೆ. ರಾಮಮಂದಿರದ ವಿಚಾರ ಪ್ರಸ್ತಾಪಿಸಿ ಭಾವನಾತ್ಮಕವಾಗಿ ಮತವನ್ನಾಗಿಸುವ ಪ್ರಯತ್ನ ಫಲ ನೀಡಲಿಲ್ಲ. ರಾಜ್ಯ ಸರ್ಕಾರವನ್ನು ಉರುಳಿಸಲು ಇನ್ನು ಬಿಜೆಪಿ ಮುಂದಾಗದು. ತಮ್ಮವರನ್ನು ನಿಯಂತ್ರಿಸುವ ಕಾರ್ಯದಲ್ಲಿ ಲೀನವಾಗಬಹುದು. 

ರಾಜ್ಯದಲ್ಲಿ ಕಾಂಗ್ರೆಸ್ ಗೆ ನಿರೀಕ್ಷಿತಾ ಫಲಿತಾಂಶ ದೊರಕಲಿಲ್ಲ ಈ ಫಲಿತಾಂಶದಿಂದ ಕಾಂಗ್ರೆಸ್ ಕೂಡ ಪಾಠ ಕಲಿಯಬೇಕಾಗಿದೆ. ಕೇವಲ ಗ್ಯಾರಂಟಿಗಳಿಂದ ಗೆಲ್ಲಲಾಗದು. ದ್ವೇಷ ರಾಜಕಾರಣವನ್ನು ಮಟ್ಟ ಹಾಕಿ, ಭ್ರಷ್ಟಾಚಾರ ರಹಿತರಾಗಿ ಜನರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ರಾಜಕೀಯ

ನವದೆಹಲಿ: ದೇಶಾದ್ಯಂತ 7 ಹಂತಗಳಲ್ಲಿ ನಡೆದ 18ನೇ ಲೋಕಸಭೆ ಚುನಾವಣೆಯ ಮತ ಎಣಿಕೆ ನಿನ್ನೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಇಂಡಿಯಾ ಮೈತ್ರಿಕೂಟ 234 ಸ್ಥಾನಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ, ಬಿಜೆಪಿ ಏಕಾಂಗಿಯಾಗಿ 240 ಸೀಟು ಗೆದ್ದರೂ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ಮೈತ್ರಿ ಪಕ್ಷಗಳೊಂದಿಗೆ ಸೇರಿ ಅಧಿಕಾರ ಹಿಡಿಯಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.

ಇಂಡಿಯಾ ಮೈತ್ರಿಕೂಟ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ಮುಂದುವರಿಸಲಿದ್ದು, ಆ ಇಬ್ಬರು ಮುಖ್ಯಮಂತ್ರಿಗಳು ಇಂಡಿಯಾ ಮೈತ್ರಿಗೆ ಬೆಂಬಲ ನೀಡಿದರೆ ಇಂಡಿಯಾ ಮೈತ್ರಿಕೂಟ ಬಹುಮತ ಪಡೆದು ಸರ್ಕಾರವನ್ನು ಹಿಡಿಯಲಿದೆ. ಆದರೆ, ಆ ಎರಡು ಪಕ್ಷಗಳು ಬಿಜೆಪಿ ಮೈತ್ರಿಕೂಟದಲ್ಲಿವೆ.

400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದ ಬಿಜೆಪಿಗೆ 272 ಕ್ಷೇತ್ರಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ನಡೆಯಿತು.

ಸಲಹಾ ಸಭೆಯ ನಂತರ ಸುದ್ದಿಗಾರರನ್ನು ಭೇಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ, ”ಬಿಜೆಪಿಯ ದ್ವೇಷ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಜನರು ತೀರ್ಪು ನೀಡಿದ್ದಾರೆ. ಬಿಜೆಪಿ ಸರಕಾರದ ಫ್ಯಾಸಿಸ್ಟ್ ನೀತಿಗಳ ವಿರುದ್ಧ ಇಂಡಿಯಾ ಮೈತ್ರಿಕೂತ ಹೋರಾಟವನ್ನು ಮುಂದುವರಿಸಲಿದೆ.

ಧಾರ್ಮಿಕ ರಾಜಕೀಯ ಶಕ್ತಿಗಳು ಬೆಳೆಯದಂತೆ ಮಾಡಿದ್ದೇವೆ. ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ನೀತಿಗಳ ವಿರುದ್ಧವೂ ಜನರು ಮತ ಹಾಕಿದ್ದಾರೆ. ಮೋದಿಯ ಶ್ರೀಮಂತ ಆಪ್ತರಿಗೆ ಅನುಕೂಲವಾಗುವ ನೀತಿಗಳ ವಿರುದ್ಧವೂ ಜನರು ಮತ ಹಾಕಿದ್ದಾರೆ.

ಇಂಡಿಯಾ ಮೈತ್ರಿಕೂಟವನ್ನು ಬೆಂಬಲ ನೀಡಿದ್ದಕ್ಕಾಗಿ ಭಾರತದ ಜನರಿಗೆ ಧನ್ಯವಾದಗಳು. ಬಿಜೆಪಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಬಂಡವಾಳಶಾಹಿಗಳ ವಿರುದ್ಧ, ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜನರು ನೀಡಿರುವ ತೀರ್ಪು ಇದಾಗಿದೆ” ಎಂದು ಹೇಳಿದರು.