ವಯನಾಡು ಕ್ಷೇತ್ರಕ್ಕೆ ರಾಹುಲ್ ರಾಜೀನಾಮೆ... ಅಖಾಡಕ್ಕೆ ಪ್ರಿಯಾಂಕಾ ಗಾಂಧಿ! » Dynamic Leader
December 4, 2024
ರಾಜಕೀಯ

ವಯನಾಡು ಕ್ಷೇತ್ರಕ್ಕೆ ರಾಹುಲ್ ರಾಜೀನಾಮೆ… ಅಖಾಡಕ್ಕೆ ಪ್ರಿಯಾಂಕಾ ಗಾಂಧಿ!

ಡಿ.ಸಿ.ಪ್ರಕಾಶ್ 

ದೇಶಾದ್ಯಂತ 7 ಹಂತಗಳಲ್ಲಿ ನಡೆದ 18ನೇ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಏಕ ಬಹುಮತದೊಂದಿಗೆ ಸರ್ಕಾರ ರಚಿಸುವ ಶಕ್ತಿ ಕಂಡುಬಂದಿಲ್ಲ. ಆದರೂ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸೇರಿ ಸತತ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ಕೇರಳದ ವಯನಾಡು ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದರು. ಮತದಾನ ಮುಗಿದ ನಂತರ ಅವರು ಕಾಂಗ್ರೆಸ್ ಭದ್ರಕೋಟೆಯಾದ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲೂ ನಾಮಪತ್ರ ಸಲ್ಲಿಸಿದರು.

ಇದಾದ ಬಳಿಕ, ನಡೆದ ಮತ ಎಣಿಕೆ ವೇಳೆ ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದರು. ವಯನಾಡಿನಲ್ಲಿ ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದು ಆನಿ ರಾಜಾ ಅವರನ್ನು 3,64,422 ಮತಗಳ ಅಂತರದಿಂದ ಸೋಲಿಸಿದರು. ಅದೇ ರೀತಿ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ 6,87,649 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯನ್ನು 3,90,030 ಮತಗಳ ಅಂತರದಿಂದ ಸೋಲಿಸಿದ್ದು ಗಮನಾರ್ಹ.

ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಸ್ಪರ್ದಿಸಿ ಗೆದ್ದ ಎರಡು ಕ್ಷೇತ್ರಗಳ ಪೈಕಿ, ಒಂದರಲ್ಲಿ ರಾಜೀನಾಮೆ ನೀಡಬೇಕಾಗಿದೆ. ಅಂದರೆ, 2 ಕ್ಷೇತ್ರಗಳಲ್ಲಿ ಸ್ಪರ್ದಿಸಿ ಗೆಲುವು ಸಾದಿಸಿದ ಒಬ್ಬ ಅಭ್ಯರ್ಥಿ, 14 ದಿನಗಳೊಳಗೆ ಯಾವುದಾದರೊಂದು ಕಡೆ ಸಂಸದ ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬುದು ನಿಯಮ. ಇದನ್ನು ಆಧರಿಸಿ, ಇಂದು ರಾಹುಲ್ ಗಾಂಧಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಅಲ್ಲದೇ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಸಹೋದರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ದಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

2019ರಲ್ಲಿ ವಯನಾಡು ಕ್ಷೇತ್ರದಿಂದ ಆಯ್ಕೆಯಾದ ರಾಹುಲ್ ಗಾಂಧಿ ಅದೇ ವರ್ಷ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲೂ ಸ್ಪರ್ದೆಗಿಳಿದರು. ಆದರೆ, ಅಲ್ಲಿ ಸ್ಮೃತಿ ಇರಾನಿ ಎದುರು ಸೋತರು. ತರುವಾಯ, ಅವರು ವಯನಾಡ್ ಕ್ಷೇತ್ರದ ಸಂಸದರಾಗಿ ಮುಂದುವರೆದರು. ಈ ಬಾರಿಯೂ ವಯನಾಡ್‌ನಲ್ಲಿ ಸ್ಪರ್ದೆಗಿಳಿದ ಅವರು ಅಮೇಥಿಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ಒತ್ತಾಯದ ಹೊರತಾಗಿಯೂ ಅವರು ಸ್ಪರ್ಧಿಸಲಿಲ್ಲ. ಏತನ್ಮಧ್ಯೆ, ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯ ಸಂಸದೆ ಸೋನಿಯಾ ಗಾಂಧಿ, ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಆ ಕ್ಷೇತ್ರದಲ್ಲಿ ರಾಹುಲ್ ಅವರನ್ನು ಕಣಕ್ಕಿಳಿಸಲಾಯಿತು. ಈಗ ಅವರು ರಾಯ್ ಬರೇಲಿಯ ಸಂಸದರಾಗಿ ಆಯ್ಕೆಯಾಗಿದ್ದಾರೆ.

ರಾಜಕೀಯಕ್ಕೆ ಬರಲು ನನಗೆ ಯಾವುದೇ ಹಿಂಜರಿಕೆ ಇಲ್ಲ – ಪ್ರಿಯಾಂಕಾ ಗಾಂಧಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ವಯನಾಡಿನ ಜನತೆಗೆ ನನ್ನ ಧನ್ಯವಾದಗಳು; ವಯನಾಡಿಗೆ ಭೇಟಿ ನೀಡುವುದನ್ನು ಮುಂದುವರಿಸಲಾಗುವುದು. ಕಳೆದ 5 ವರ್ಷಗಳಿಂದ ವಯನಾಡಿನ ಜನರು ನನಗೆ ನೀಡಿದ ಬೆಂಬಲ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಯಾವಾಗಲೂ ವಯನಾಡಿನ ಜನರ ಪರವಾಗಿ ನಿಲ್ಲುತ್ತೇನೆ. ಪ್ರಿಯಾಂಕಾ ಗಾಂಧಿ ಖಂಡಿತಾ ಇಲ್ಲಿ ಗೆಲ್ಲುತ್ತಾರೆ. ನಾನು ಮತ್ತು ನನ್ನ ಸಹೋದರಿ ವಯನಾಡಿನ ಜನರನ್ನು ಪ್ರತಿನಿಧಿಸಲಿದ್ದೇವೆ” ಎಂದು ಹೇಳಿದರು.

“ನಂತರ ಮಾತನಾದಿಡ ಪ್ರಿಯಾಂಕಾ ಗಾಂಧಿ “ವಯನಾಡಿನಲ್ಲಿ ಸ್ಪರ್ಧಿಸುವುದು ಬಹಳ ಖುಷಿ ತಂದಿದೆ; ಮತ ರಾಜಕೀಯಕ್ಕೆ ಬರಲು ನನಗೆ ಯಾವುದೇ ಹಿಂಜರಿಕೆ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ರಾಹುಲ್ ಗಾಂಧಿ ಚೆಕ್ ಮೇಟ್?

Related Posts