ಚೆನ್ನೈನಲ್ಲಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಪೂರ್ಣಾಕೃತಿಯ ಪ್ರತಿಮೆ ಸ್ಥಾಪನೆ: ವಿಧಾನಸಭೆಯಲ್ಲಿ ಸ್ಟಾಲಿನ್ ಘೋಷಣೆ! » Dynamic Leader
July 14, 2024
ರಾಜಕೀಯ

ಚೆನ್ನೈನಲ್ಲಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಪೂರ್ಣಾಕೃತಿಯ ಪ್ರತಿಮೆ ಸ್ಥಾಪನೆ: ವಿಧಾನಸಭೆಯಲ್ಲಿ ಸ್ಟಾಲಿನ್ ಘೋಷಣೆ!

“ದಿವಂಗತ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ದ್ರಾವಿಡ ಮಾಡಲ್ ಸರ್ಕಾರದ ಪರವಾಗಿ ಗೌರವಾರ್ಥ ಘೋಷಣೆಯೊಂದನ್ನು ಮಾಡುತ್ತಿದ್ದೇನೆ” ಎಂ.ಕೆ.ಸ್ಟಾಲಿನ್ 

ಚೆನ್ನೈ: ಸಾಮಾಜಿಕ ನ್ಯಾಯ ದೃಷ್ಟಿ ಮತ್ತು ಸಾಮಾಜಿಕ ನ್ಯಾಯ ಪಯಣದಲ್ಲಿ ಈ ಸರ್ಕಾರ ಯಾವುದೇ ಆಮಿಷ, ರಾಜಿ ಇಲ್ಲದೇ ಕೆಲಸ ಮಾಡುತ್ತಿರುವುದಕ್ಕೆ ಸಾಮಾಜಿಕ ನ್ಯಾಯ ರಕ್ಷಕ ವಿ.ಪಿ.ಸಿಂಗ್ ನೀಡಿದ ಉತ್ಸಾಹವೇ ಕಾರಣ. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಸ್ಮರಣಾರ್ಥ ಚೆನ್ನೈನಲ್ಲಿ ಪೂರ್ಣ ಪ್ರಮಾಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು” ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ನಿಯಮ ಸಂಖ್ಯೆ 110ರ ಅಡಿಯಲ್ಲಿ ಇಂದು ಘೋಷಿಸಿದ್ದಾರೆ.

ಸ್ಟಾಲಿನ್ ಅವರು ಇಂದು ವಿಧಾನಸಭೆಯಲ್ಲಿ ಇದನ್ನು ಉದ್ದೇಶಿಸಿ ಮಾತನಾಡುವಾಗ, “ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿ ದೊಡ್ಡ ಜಮೀನ್ದಾರರಾದ ರಾಜ ದಯಾ ಭಗವತಿ ಪ್ರತಾಪ್ ಸಿಂಗ್ ಅವರಿಗೆ ಜನಿಸಿದರು. ಐಷಾರಾಮಿ ಜೀವನ ಲಭಿಸಿದ್ದರೂ ಅದಕ್ಕೆ ಅಂಟಿಕೊಳ್ಳದೇ ಕಾಲೇಜು ದಿನಗಳಲ್ಲಿ ಗಾಂಧಿ ಚಳವಳಿಗೆ ಸೇರಿಕೊಂಡರು; ಭೂದಾನ ಚಳುವಳಿಯಲ್ಲಿ ಭಾಗವಹಿಸಿದರು. ಅವರು ತಮ್ಮ ಜಮೀನುಗಳನ್ನೇ ಭೂದಾನ ಮಾಡಿದರು.

1969ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಿಂತು ಗೆದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ; ಕೇಂದ್ರ ವಾಣಿಜ್ಯ ಸಚಿವ; ವಿದೇಶಾಂಗ ವ್ಯವಹಾರಗಳ ಸಚಿವ; ಹಣಕಾಸು ಮತ್ತು ರಕ್ಷಣಾ ಸಚಿವ ಮುಂತಾದ ಉನ್ನತ ಸ್ಥಾನಗಳನ್ನು ಅಲಂಕರಿಸಿದರು. ಅವರು ನ್ಯಾಷನಲ್ ಫ್ರಂಟ್ ರಚಿಸಿ 1989ರಲ್ಲಿ ಭಾರತದ ಪ್ರಧಾನ ಮಂತ್ರಿಯಾದರು. ಸನ್ಮಾನ್ಯ ವಿ.ಪಿ.ಸಿಂಗ್ ಅವರು ಕೇವಲ ಹನ್ನೊಂದು ತಿಂಗಳು ಪ್ರಧಾನಿಯಾಗಿದ್ದರೂ ಅವರ ಸಾಧನೆ ಅಪಾರ. ಅದಕ್ಕಾಗಿಯೇ ನಾವು ಈ ವೇದಿಕೆಯಲ್ಲಿ ನಿಂತು ಅವರನ್ನು ಹೊಗಳುತ್ತಿದ್ದೇವೆ.

ಭಾರತದ ಸಂವಿಧಾನವನ್ನು ರಚಿಸಿದಾಗ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಿಗೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿಯನ್ನು ನೀಡಲಾಯಿತು. ಆದರೆ ಹಿಂದುಳಿದ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಿಲ್ಲ. ಇದನ್ನು ಒದಗಿಸಲಿಕ್ಕಾಗಿ ರಚಿಸಲಾದ ಎರಡನೇ ಹಿಂದುಳಿದ ವರ್ಗಗಳ ಆಯೋಗವೇ ಬಿ.ಪಿ. ಮಂಡಲ್ ನೇತೃತ್ವದ ಆಯೋಗ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ 27% ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸು ಮಾಡಿದ ಬಿ.ಪಿ.ಮಂಡಲ್ ವರದಿಯನ್ನು     ಯಥಾವತ್ತಾಗಿ ಜಾರಿಗೊಳಿಸಿದವರು ಸಾಮಾಜಿಕ ನ್ಯಾಯದ ಹರಿಕಾರ ವಿ.ಪಿ.ಸಿಂಗ್.

ಅವರು ಹಿಂದುಳಿದ ಸಮುದಾಯಕ್ಕೆ ಸೇರಿದವರಲ್ಲ; ಬಡ ಕುಟುಂಬದವರೂ ಅಲ್ಲ; ಆದರೆ, ಅದನ್ನು ಮಾಡಿದ್ದು ವಿ.ಪಿ.ಸಿಂಗ್. ಮಂಡಲ್ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ವಿ.ಪಿ.ಸಿಂಗ್ ಘೋಷಿಸಿದಾಗ, ‘ಮುಂದುವರಿದ ಜಾತಿಗೆ ಸೇರಿದವರು ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ಸಚಿವರೊಬ್ಬರು ಹೇಳಿದಾಗ, ‘ಇಗೋ, ಈಗಲೇ ದಿನಾಂಕವನ್ನು ಪ್ರಕಟಿಸುತ್ತೇನೆ’ ಎಂದು ಹೇಳಿದ ಗಾಂಭೀರ್ಯತೆಯ ಒಡೆಯ ವಿ.ಪಿ.ಸಿಂಗ್. ಅದುವೇ ಅವರ ಸ್ಥಾನಕ್ಕೆ ಬಿಕ್ಕಟ್ಟಾಯಿತು.   

‘ಕೆಲವೊಮ್ಮೆ ಬದುಕಿಗಿಂತ ಸಾವನ್ನು ಆರಿಸಿಕೊಳ್ಳುವುದೇ ಮೇಲು’ ಎಂದು ಹೇಳಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದವರು ಸ್ವಾಭಿಮಾನಿ ಸೂರ್ಯ ವಿ.ಪಿ.ಸಿಂಗ್. ‘ವಿ.ಪಿ.ಸಿಂಗ್ ಅವರನ್ನು ಬೇಕಾದರೆ ಗಲ್ಲಿಗೇರಿಸಿಕೊಳ್ಳಿ. ಆದರೆ, ದಮನಿತರಿಗೆ ನ್ಯಾಯ ಕೊಡಿಸಿ’ ಎನ್ನುವಷ್ಟರ ಮಟ್ಟಿಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಕಾಳಜಿ ಹೊಂದಿದ್ದರು.

ಅಧಿಕಾರದಲ್ಲಿದ್ದ 11 ತಿಂಗಳಲ್ಲಿ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ; ಮಾಹಿತಿ ಹಕ್ಕು ಕಾಯಿದೆಗೆ ಚಾಲನೆ; ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ಚಾಲನೆ; ಕೆಲಸ ಮಾಡುವ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾಡಿದ್ದು; ಚುನಾವಣಾ ಸುಧಾರಣೆಗಳು; ಅಂತರರಾಜ್ಯ ಮಂಡಳಿ; ರಾಷ್ಟ್ರೀಯ ಭದ್ರತಾ ಮಂಡಳಿ; ರೈತರ ಸಮಸ್ಯೆ ಬಗೆಹರಿಸಲು ಮೂರು ಸಮಿತಿಗಳ ರಚನೆ; ದೆಹಲಿಯ ಕೊಳೆಗೇರಿ ನಿವಾಸಿಗಳಿಗೆ ವಸತಿ ಸೌಕರ್ಯ; ಗರಿಷ್ಠ ಚಿಲ್ಲರೆ ಬೆಲೆ (MRP) ಮುದ್ರಿಸಬೇಕು; ಗ್ರಾಹಕರ ರಕ್ಷನೆ ಮುಂತಾದ ಎಲ್ಲವನ್ನೂ ಮಾಡಿ ತೋರಿಸಿದವರು ಮಹಾನ್ ಸಾಧಕ ವಿ.ಪಿ.ಸಿಂಗ್ ಅವರು” ಎಂದು ಹೇಳಿ ಶ್ಲಾಘಿಸಿ ಮಾತನಾಡಿದರು.        

Related Posts