ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಫೋಟೋ Archives » Dynamic Leader
October 22, 2024
Home Posts tagged ಫೋಟೋ
ಸಿನಿಮಾ

ಅರುಣ್ ಕುಮಾರ್ ಜಿ

‘ಫೋಟೋ’ ಕನ್ನಡ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್, ಲೂಸಿಯಾ ಪವನ್. ಮಾರ್ಚ್ 15ಕ್ಕೆ ‘ಫೋಟೋ’ ರಿಲೀಸ್.

ಬೆಂಗಳೂರು: ಕನ್ನಡದಲ್ಲೀಗ ಕಂಟೆಂಟ್ ಆಧಾರಿತ ಸಿನಿಮಾಗಳ ಪ್ರಭೆ ಜೋರಾಗಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ ‘ಫೋಟೋ.’ ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಈ ಸಿನಿಮಾದ ಮೊದಲ ನೋಟ ಅನಾವರಣಗೊಂಡಿದೆ. ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ.

ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ‘ನಿರ್ದಿಗಂತ ಫಾರಂ ಹೌಸ್’ ನಲ್ಲಿ ಫೋಟೋ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಹರಗಾರರು ಹಾಗೂ ಪತ್ರಕರ್ತರಾಗಿರುವ ಜೋಗಿ, ‘ಫೋಟೋ’ ಚಿತ್ರ ಪ್ರೆಸೆಂಟ್ ಮಾಡಿರುವ ಪ್ರಕಾಶ್ ರಾಜ್, ನಿರ್ದೇಶಕ ಉತ್ಸವ್ ಗೋನವಾರ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಡಾಲಿ ಧನಂಜಯ್, “ಉತ್ಸವ್ ಅವರು ತುಂಬಾ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತುಂಬಾ ಖುಷಿ ವಿಚಾರ ಏನೆಂದರೆ, ಇತ್ತೀಚೆಗೆ ಬರುತ್ತಿರುವ ಯುವ ನಿರ್ದೇಶಕರು, ಒಳ್ಳೊಳ್ಳೆ ಸಿನಿಮಾಗಳನ್ನು; ಬೇರೆ ಬೇರೆ ರೀತಿಯ ಸಿನಿಮಾಗಳನ್ನು ನಮ್ಮ ಕನ್ನಡದ ಜನಗಳ ಮುಂದೆ ತರುತ್ತಿದ್ದಾರೆ. ಅದು ತುಂಬಾ ಖುಷಿ ವಿಚಾರವಾಗಿದೆ. ಆ ರೀತಿಯ ಸಿನಿಮಾಗಳಿಗೆ ಒಬ್ಬೊಬ್ಬರು ಜೊತೆಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ರಾಜ್ ಸರ್ ಜೊತೆಯಾಗಿದ್ದಾರೆ.

ನಾನು ಮೈಸೂರಿಗೆ ಬಂದಾಗ, ಇಲ್ಲಿಗೆ ಎರಡು ಮೂರು ಬಾರಿ ಬಂದಿದ್ದೇನೆ. ಒಂದು ಗುರಿ ಇಟ್ಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೇಗೆ ಟೈಮ್ ಸಿಗುತ್ತದೆಯೋ ಗೊತ್ತಿಲ್ಲ. ತೋಟಗಾರಿಕೆ, ರಂಗಭೂಮಿ ಎಲ್ಲವನ್ನೂ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ. 22-23 ವರ್ಷಕ್ಕೆ ಈ ರೀತಿ ಕಥೆ ಹೇಳಬೇಕು ಅಂತಾ ಪ್ರೆಸೆಂಟ್ ಮಾಡಿರುವುದು ಖುಷಿ ತಂದಿದೆ” ಎಂದರು.

ಲೂಸಿಯಾ ಪವನ್ ಮಾತನಾಡಿ, “ಫೋಟೋ ಸಿನಿಮಾದ ಪೋಸ್ಟರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಪೋಸ್ಟ್ ಮಾಡುತ್ತಿದ್ದಾರೆ. ತುಂಬಾ ಚೆನ್ನಾಗಿದೆ ಅಂತಾ ಫೀಡ್ ಬ್ಯಾಕ್ ಬರುತ್ತಿದೆ. ನಾನು ಸಿನಿಮಾ ನೋಡಿದ್ದೇನೆ. ತುಂಬಾ ಪ್ರಭಾವ ಬೀರಿತು. ಲಾಕ್ ಡೌನ್ ಕಷ್ಟಗಳನ್ನು ಸಿನಿಮ್ಯಾಟಿಕ್ ಆಗಿ ನೋಡುವುದು ಬಹಳ ಇಂಪ್ಯಾಕ್ಟ್ ಆಗುತ್ತದೆ. ಮೇಕಿಂಗ್ ನೋಡಿದಾಗ ಬಹಳಷ್ಟು ಸ್ಪೂರ್ತಿಯಾಯ್ತು. ಇಡೀ ತಂಡಕ್ಕೆ ಒಳ್ಳೆಯದು ಆಗಲಿ” ಎಂದರು.

ಪ್ರಕಾಶ್ ರಾಜ್ ಮಾತನಾಡಿ, “ನಮ್ಮ ದೇಹಕ್ಕೆ ಆದ ಗಾಯಗಳು ಇದೆಯಲ್ಲ, ಅದು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ಇದೆಯಲ್ಲ, ನಾವು ಸುಮ್ಮನಿದ್ದಷ್ಟು ಜಾಸ್ತಿಯಾಗುತ್ತದೆ. ನನಗೆ ಉತ್ಸವ್ ಸಿನಿಮಾನಾ ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ಬ್ಯುಸಿ ಇದ್ದೆ. ಸಿನಿಮಾ ನೋಡಿ ಆದ್ಮೇಲೆ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟೂ ದುಃಖ ಬಂತು.

ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಇದ್ದೆವು; ಇಡೀ ಪ್ರಪಂಚ ಲಾಕ್ ಡೌನ್ ಆಗಿತ್ತು. ಎಲ್ಲಿ ಹೋಗುವುದೆಂದು ಗೊತ್ತಿಲ್ಲ; ಹೋಗಲು ದಾರಿಯೂ ತಿಳಿದಿಲ್ಲ. ಇದು ನಾವು ಲಾಕ್ ಡೌನ್ ನಲ್ಲಿ ನೋಡಿದ ನೈಜ ಸ್ಥಿತಿ. ಲಾಕ್ ಡೌನ್ ಸಮಯದಲ್ಲಿ ಒಬ್ಬರು ಲಾರಿ, ಬಸ್ ತೆಗೆದುಕೊಂಡು ಹೋಗಿ… ಅವರನ್ನು ಮನೆಗೆ… ಯೋಚನೆ ಮಾಡಿಲ್ಲ. ಈ ನೋವುಗಳನ್ನು ದಾಖಲೆ ಮಾಡ್ಬೇಕು ಅಂತಾ 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಾವು ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲೋಣ ಎಂದು ಇದನ್ನು ರಿಲೀಸ್ ಮಾಡಲು ನಿಂತೆವು” ಎಂದರು.

ನಿರ್ದೇಶಕ ಉತ್ಸವ್ ಗೋನವಾರ ಮಾತನಾಡಿ, “ಲಾಕ್ ಡೌನ್ ಗೂ ಮುಂಚೆ ನಾನು ಕೂರ್ಗ್ ಗೆ ಹೋಗಿದ್ದೆ. ಆ ಸಮಯದಲ್ಲೊಂದು ಆರ್ಟಿಕಲ್ ಓದಿದ್ದೆ. ಗಂಗಮ್ಮ ಎಂಬ ಗರ್ಭಿಣಿ ಬೆಂಗಳೂರಿಂದ ಊರಿಗೆ ಹೋಗಬೇಕಾದರೆ ಮಧ್ಯೆದಲ್ಲಿ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿ ಸತ್ತು ಹೋಗ್ತಾರೆ; ಬಳ್ಳಾರಿ ಹತ್ತಿರ. ಈ ಆರ್ಟಿಕಲ್ ತುಂಬಾ ಕಾಡಿತು. ಈ ವಿಷಯ ಡಾಕ್ಯುಮೆಂಟ್ ಆಗಬೇಕು ಎಂದು ಅನಿಸಿತು. ಆಗ ಬರೆಯಲು ಶುರು ಮಾಡಿದೆ. ಆ ನಂತರ ಅದನ್ನು ಸಿನಿಮಾ ಮಾಡಿದೆ” ಎಂದರು.

ಕನ್ನಡದ ಈ ‘ಫೋಟೋ’ ಅನ್ನುವ ಚಿತ್ರವನ್ನ ಸ್ವತಃ ಪ್ರಕಾಶ್ ರಾಜ್ ಪ್ರಸೆಂಟ್ ಮಾಡುತ್ತಿದ್ದಾರೆ. ತಮ್ಮ ‘ನಿರ್ದಿಗಂತ’ ಮೂಲಕ ಈ ಚಿತ್ರಕ್ಕೆ ಬೆಂಬಲವಾಗಿಯೇ ನಿಂತಿದ್ದಾರೆ. ಹೊಸ ಪ್ರತಿಭೆಗೆ ಈ ಮೂಲಕ ಹೆಗಲುಕೊಟ್ಟಿದ್ದಾರೆ. ‘ಫೋಟೋ’ ಮೂಲಕ ಸ್ವತಂತ್ರವಾಗಿ ಡೈರೆಕ್ಟರ್ ಆಗಿರೋ ಉತ್ಸವ್ ಗೋನವಾರ, ಇಲ್ಲಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಡೆದ ಕಥೆಯನ್ನು ಮನಸ್ಸಿಗೆ ತಾಕುವಂತೆ ದೃಶ್ಯ ರೂಪಕ್ಕೆ ಇಳಿಸಿ, ಪ್ರಕಾಶ್ ರಾಜ್ ಅವರಂತಹ ನಟರೂ ಒಪ್ಪಿಕೊಳ್ಳುವಂತೆ ಸಿನಿಮಾ ಮಾಡಿದ್ದಾರೆ.

ಮಸಾರಿ ಟಾಕೀಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ‘ಫೋಟೋ’ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್ ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಅವರು ಕ್ಯಾಮೆರಾ ಹಿಡಿದಿದ್ದು ರವಿ ಹಿರೇಮಠ್ ಹಿನ್ನೆಲೆ ಸಂಗೀತ, ಶಿವರಾಜ್ ಮೆಹೂ ಎಡಿಟಿಂಗ್ ಕೆಲಸ ಚಿತ್ರಕ್ಕಿದೆ. ಮಾರ್ಚ್ 15ಕ್ಕೆ ಎಲ್ಲರಿಂದ ಲೈಕ್ ಪಡೆಯೋದಕ್ಕೆ ‘ಫೋಟೋ’ ತೆರೆಗೆ ಬರ್ತಿದೆ.