ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನಿತೀಶ್ ಕುಮಾರ್ Archives » Dynamic Leader
October 20, 2024
Home Posts tagged ನಿತೀಶ್ ಕುಮಾರ್
ದೇಶ

ನವಾಡ: ಬಿಹಾರದ ನವಾಡ ಜಿಲ್ಲೆಯಲ್ಲಿ ಪರಿಶಿಷ್ಟರ ವಸತಿ ಪ್ರದೇಶದಲ್ಲಿ 21 ಗುಡಿಸಲುಗಳು ಬೆಂಕಿಗೆ ಆಹುತಿಯಾದ ಘಟನೆಗೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರೂರ ಘಟನೆಯು ಬಿಹಾರದಲ್ಲಿ ನಡೆಯುತ್ತಿರುವ ‘ಜಂಗಲ್ ರಾಜ್‌’ಗೆ ಮತ್ತೊಂದು ಪುರಾವೆಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ.

ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದಲಿತ್ ತೋಲಾ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದ ಅಗ್ನಿಸ್ಪರ್ಶ ಘಟನೆಯು ಜಮೀನು ವಿವಾದದಿಂದಾಗಿ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಾವಡ ಜಿಲ್ಲಾಧಿಕಾರಿ ಅಶುತೋಷ್ ಕುಮಾರ್ ವರ್ಮಾ, “ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ 15 ಮಂದಿಯನ್ನು ಬಂಧಿಸಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಮಹಾದಲಿತ್ ತೋಲಾ ಪ್ರದೇಶದಲ್ಲಿ ಗುಂಪೊಂದು 21 ಮನೆಗಳಿಗೆ ಬೆಂಕಿ ಹಚ್ಚಿದೆ. ಕೆಲವು ಮನೆಗಳು ಅರ್ಧ ಸುಟ್ಟಿವೆ. ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿಗಾಗಿ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ನಿರಾಶ್ರಿತರಿಗೆ ಆಹಾರ, ನೀರು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳನ್ನು ಸುಟ್ಟು ಹಾಕಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದರು.

ಈ ಅಗ್ನಿಸ್ಪರ್ಶ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ನವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ “ಸಂಜೆ 7 ಗಂಟೆಗೆ, ಮಹಾದಲಿತ್ ತೋಲಾದಲ್ಲಿ ಬೆಂಕಿ ಅಪಘಾತ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಜಮೀನು ವಿವಾದದಿಂದ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ” ಎಂದರು. ಬೆಂಕಿ ಅನಾಹುತ ನಡೆದಾಗ ಗುಂಡೇಟಿನ ಸದ್ದು ಕೇಳಿತ್ತು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಜಂಗಲ್ ರಾಜ್ – ಪ್ರತಿಪಕ್ಷಗಳ ಆರೋಪ:
ನವಾಡ ಬೆಂಕಿ ಅವಘಡದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಪರಿಶಿಷ್ಟರ ಮೇಲಿನ ಅನ್ಯಾಯ ಮುಂದುವರಿದಿದೆ ಎಂಬುದಕ್ಕೆ ಇದು ‘ಜಂಗಲ್ ರಾಜ್’ ದರ್ಬಾರ್‌ಗೆ ಮತ್ತೊಂದು ಪುರಾವೆಯಾಗಿದೆ ಎಂದು ಆರೋಪಿಸಿದೆ.

ಲೇಖನ

ಡಿ.ಸಿ.ಪ್ರಕಾಶ್

ಮತದಾರರು ಈ ಬಾರಿ ಸರ್ಕಾರ ರಚಿಸುವಷ್ಟು ಬಹುಮತವನ್ನು ಬಿಜೆಪಿಗೆ ನೀಡಲಿಲ್ಲ. ಕೆಲವು ಪಕ್ಷಗಳ ಬೆಂಬಲದೊಂದಿಗೆ ನರೇಂದ್ರ ಮೋದಿ ಅವರು ಪ್ರಧಾನಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ಪಕ್ಷಗಳು ಮೋದಿ ಹೇಳಿದ್ದನೆಲ್ಲ ಹಾಗೆಯೇ ಒಪ್ಪಿಕೊಳ್ಳುವ ಪಕ್ಷಗಳಲ್ಲ. ಬದಲಾಗಿ, ಬಿಜೆಪಿಯ ವಿಚಾರಗಳಿಗೆ ವಿರುದ್ಧವಾಗಿರುವ ಮತ್ತು ಅದನ್ನು ವಿರೋಧಿಸುವ ಪಕ್ಷಗಳಾಗಿವೆ.

ಇಂತಹ ‘ನೀತಿ ವೈರಿ’ಗಳ ಕರುಣೆಯಿಂದಲೇ ನರೇಂದ್ರ ಮೋದಿಯವರು ಪ್ರಧಾನಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಜಾತಿವಾರು ಜನಗಣತಿಯ ತತ್ವವು ಭಾರತದಾದ್ಯಂತ ಬೇಡಿಕೆಯಾಗಿ ಪ್ರತಿಧ್ವನಿಸುತ್ತಿದೆ. ಇದು ಕಾಂಗ್ರೆಸ್, ಡಿಎಂಕೆ ಸೇರಿದಂತೆ ‘ಇಂಡಿಯಾ’ ಮೈತ್ರಿ ಪಕ್ಷಗಳ ಬೇಡಿಕೆ ಮಾತ್ರವಲ್ಲ, ಬಹುಮತದ ಪಕ್ಷಗಳ ಬೇಡಿಕೆಯೂ ಆಗಿದೆ. “ಪ್ರಧಾನಿ ಮೋದಿಯವರು ಜಾತಿವಾರು ಜನಗಣತಿ ನಿಲ್ಲಿಸುವ ಕನಸು ಕಾಣುತ್ತಿದ್ದಾರೆ. ಆದರೆ ಜಾತಿವಾರು ಜನಗಣತಿಯನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ.

ಶೀಘ್ರದಲ್ಲೇ 90 ಪ್ರತಿಶತ ಭಾರತೀಯರು ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸಿ ಹೋರಾಡುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರವು ಜಾತಿವಾರು ಜನಗಣತಿಗೆ ಆದೇಶಿಸದಿದ್ದರೆ, ನರೇಂದ್ರ ಮೋದಿಯವರು ಮುಂದಿನ ಪ್ರಧಾನಿ ಮಾಡುವುದನ್ನು ನೋಡುತ್ತಾರೆ” ಎಂದು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಇದು ಬಿಜೆಪಿಯ ಮೈತಿ ಪಕ್ಷಗಳಿಗೂ ನಡುಕವನ್ನು ಹುಟ್ಟಿಸಿದೆ.

ಬಿಜೆಪಿಯ ಮಿತ್ರ ಪಕ್ಷ ಲೋಕ ಜನಶಕ್ತಿ ಪಕ್ಷ ಕೂಡ ಜಾತಿವಾರು ಜನಗಣತಿಗೆ ಬೆಂಬಲ ವ್ಯಕ್ತಪಡಿಸಿದೆ. “ದೇಶಾದ್ಯಂತ ಜಾತಿವಾರು ಜನಗಣತಿ ನಡೆಸುವುದು ಅಗತ್ಯವಾಗಿದೆ” ಎಂದು ಲೋಕ ಜನಶಕ್ತಿ ಪಕ್ಷದ ನಾಯಕ ಹಾಗೂ ಪ್ರಧಾನಿ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿರುವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. “ಸರ್ಕಾರವು ಜಾರಿಗೊಳಿಸುವ ಯೋಜನೆಗಳು ವಿವಿಧ ವರ್ಗಗಳನ್ನು ಆಧರಿಸಿವೆ.

ಸರ್ಕಾರದ ಯೋಜನೆಗಳು ಸರಿಯಾದ ಜನರಿಗೆ ತಲುಪಲು ಜಾತಿವಾರು ಜನಗಣತಿಯ ಅಗತ್ಯವಿದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. “ಕೇಂದ್ರ ಸರ್ಕಾರವು ದೇಶಾದ್ಯಂತ ಜಾತಿವಾರು ಜನಗಣತಿ ನಡೆಸಬೇಕು” ಎಂದು ಲೋಕ ಜನಶಕ್ತಿ ಪಕ್ಷ ಸಂಕಲ್ಪ ಮಾಡಿದೆ. ಜನರನ್ನು ಸುಧಾರಿಸಲು ಸರ್ಕಾರಕ್ಕೆ ಜಾತಿ ಆಧಾರಿತ ಜನಸಂಖ್ಯೆಯ ಮಾಹಿತಿ ಅಗತ್ಯವಿದೆ” ಎಂಬುದನ್ನು ಚಿರಾಗ್ ಪಾಸ್ವಾನ್ ಒತ್ತಿ ಹೇಳುತ್ತಿದ್ದಾರೆ.

ಮೀಸಲಾತಿ ಎಂದು ಕರೆಯಲ್ಪಡುವ ಸಾಮಾಜಿಕ ನ್ಯಾಯವನ್ನು ತೊಡೆದುಹಾಕಲು ನೇರ ನೇಮಕಾತಿ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಡಿಎಂಕೆ, ಶಿವಸೇನೆ (ಉದ್ಧವ್ ಠಾಕ್ರೆ) ಸೇರಿದಂತೆ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅದನ್ನು ಹಿಂಪಡೆಯಿತು. ಅದರ ಮಿತ್ರ ಪಕ್ಷ ಲೋಕ ಜನಶಕ್ತಿ ಕೂಡ ಇದನ್ನು ವಿರೋಧಿಸಿತ್ತು. ‘ಇದರಿಂದ ನನಗೆ ತುಂಬಾ ಚಿಂತೆಯಾಗಿದೆ’ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು. ಮೈತ್ರಿ ಪಕ್ಷಗಳೇ ವಿರೋಧಿಸಿದಾಗ ಬಿಜೆಪಿಗೆ ಬೇರೆ ದಾರಿಯಿಲ್ಲದೆ ಹಿಂದಕ್ಕೆ ಸರಿಯಿತು.

ವಕ್ಫ್ ಬೋರ್ಡ್ ಕಾಯ್ದೆಯ ವಿಷಯದಲ್ಲೂ ಇದೇ ಆಗಿದೆ. ವಕ್ಫ್ ಬೋರ್ಡ್ ಆಕ್ಟ್-1995 ಅನ್ನು ವಕ್ಫ್ (ತಿದ್ದುಪಡಿ) ಮಸೂದೆ, 2024 ಎಂದು ಮರುನಾಮಕರಣ ಮಾಡಿದ್ದಾರೆ. ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯ ಪ್ರಕಾರ, ಆಸ್ತಿಗಳನ್ನು ನಿರ್ಧರಿಸುವ ವಕ್ಫ್ ಮಂಡಳಿಯ ಅಧಿಕಾರವನ್ನು ಬದಲಾಯಿಸಲಾಗಿದೆ. ಈ ಕಾಯಿದೆಯ ಸೆಕ್ಷನ್ 40 ಅನ್ನು ತೆಗೆದು ಹಾಕಲಾಗಿದೆ.

ಕೇಂದ್ರೀಯ ವಕ್ಫ್ ಕೌನ್ಸಿಲ್ ಎಂಬುದನ್ನು ರಚಿಸಿದ್ದಾರೆ. ಅದರಲ್ಲಿ ಮುಸ್ಲಿಮರು ಮಾತ್ರವಲ್ಲದೆ ಮುಸ್ಲಿಮೇತರರೂ ಇರುತ್ತಾರೆ. ವಕ್ಫ್ ಬೋರ್ಡ್ ಜಮೀನುಗಳನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಬೇಕು. ಈ ಜಾಗ ವಕ್ಫ್ ಆಗಿದೆಯೇ ಇಲ್ಲವೇ ಎಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರಂತೆ.

ಸಂವಿಧಾನದ 30ನೇ ವಿಧಿಯು ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮ ಆಸ್ತಿಯನ್ನು ನಿರ್ವಹಿಸಲು ಅಧಿಕಾರ ನೀಡುತ್ತದೆ. ಅದನ್ನೇ ತೆಗೆದುಕೊಂಡು ಹೋಗಿ ಜಿಲ್ಲಾಧಿಕಾರಿಗಳಿಗೆ ನೀಡುವ ಕಾನೂನು ಬಾಹಿರ ಕಾನೂನು ಇದಾಗಿದೆ. ಇದಕ್ಕೆ ‘ಇಂಡಿಯಾ’ ಮೈತ್ರಿ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ, ಮೋದಿ ಸ್ಥಾನವನ್ನು ಉಳಿಸುವ ಇಬ್ಬರು ಪ್ರಮುಖರಲ್ಲಿ ಒಬ್ಬರಾಗಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ಇಬ್ಬರಲ್ಲಿ ಮತ್ತೊಬ್ಬರಾದ ನಿತೀಶ್ ಕುಮಾರ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. “ಈ ಕಾನೂನು ಮುಸ್ಲಿಮರಿಗೆ ಭಯ ಹುಟ್ಟಿಸುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ ಶೇ.18ರಷ್ಟು ಮುಸ್ಲಿಮರಿದ್ದಾರೆ. ಅದಕ್ಕಾಗಿಯೇ ನಿತೀಶ್ ಭಯ ಪಡುತ್ತಿದ್ದಾರೆ. ನಿತೀಶ್ ಕುಮಾರ್ ಅವರ ಪಕ್ಷವು ಆರಂಭದಲ್ಲಿ ವಕ್ಫ್ ಕಾಯ್ದೆಯನ್ನು ಬೆಂಬಲಿಸಿತ್ತು. ಆ ಪಕ್ಷದ ಸಂಸದ ರಾಜೀವ್ ರಂಜನ್ ಸಂಸತ್ತಿನಲ್ಲಿ ಬೆಂಬಲಿಸಿ ಮಾತನಾಡಿದರು. ಇದು ಬಿಹಾರ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತು.

ನಿತೀಶ್ ಸಂಪುಟದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ ಮೊಹದ್ ಜಮಾ ಖಾನ್ (Mohd Zama Khan) ತಮ್ಮದೇ ಪಕ್ಷವನ್ನು ವಿರೋಧಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಿಹಾರದ ಜಲಸಂಪನ್ಮೂಲ ಸಚಿವ ವಿಜಯಕುಮಾರ್ ಚೌಧರಿ ಕೂಡ ವಕ್ಫ್ ಕಾಯ್ದೆ ವಿರುದ್ಧ ವಾಗ್ದಾಳಿ ನಡೆಸಿದರು.

ನಿತೀಶ್ ಪಕ್ಷದ ಕೆಲ ಶಾಸಕರೂ ಕೈಜೋಡಿಸಿದರು. ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳದ ಕಾರ್ಯಾಧ್ಯಕ್ಷ ಸಂಜಯ್ ಝಾ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹದ್ ಜಮಾ ಖಾನ್ ಅವರು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿ ಗೊಂದಲದ ಉತ್ತುಂಗದಲ್ಲಿದೆ ಕೇಂದ್ರ ಬಿಜೆಪಿ ಸಮ್ಮಿಶ್ರ ಸರ್ಕಾರ.

ರಾಜಕೀಯ

ಪಾಟ್ನಾ: ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಸಂಯುಕ್ತ ಜನತಾ ದಳ (ಜೆಡಿಯು) ನಿರ್ಣಯ ಅಂಗೀಕರಿಸಿದೆ.

ಹೊಸದಾಗಿ ಆಯ್ಕೆಯಾದ ಲೋಕಸಭೆಯಲ್ಲಿ ಸಂಯುಕ್ತ ಜನತಾದಳದಿಂದ 12 ಸಂಸದರಿದ್ದಾರೆ. ಅವರು ಬಿಜೆಪಿ ನೇತೃತ್ವದ  ಎನ್ ಡಿಎ ಸರ್ಕಾರದ ಭಾಗವಾಗಿದ್ದಾರೆ. ಇಂದು (ಜೂನ್ 29) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಯುಕ್ತ ಜನತಾದಳದ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕೇಂದ್ರ ಸಚಿವರು, ಸಂಯುಕ್ತ ಜನತಾದಳ ಮುಖಂಡರು ಸೇರಿದಂತೆ ಪಕ್ಷದ ಎಲ್ಲ ಸಂಸದರು ಉಪಸ್ಥಿತರಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ಸಂಯುಕ್ತ ಜನತಾದಳ ಬೆಂಬಲ ನೀಡುತ್ತಿರುವುದರಿಂದ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸುವುದೇ? ಎಂಬುದನ್ನು ಕಾದುನೋಡಬೇಕಾಗಿದೆ.

ದೇಶ

ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ತೆಲುಗು ದೇಶಂ, ಶಿವಸೇನೆ ಮತ್ತು ಮಾರ್ಕ್ಸ್‌ವಾದಿ ಪಕ್ಷಗಳಿಗೆ ನೀಡಲಾಗಿತ್ತು

ಈ ಬಾರಿ ಲೋಕಸಭಾ ಸ್ಪೀಕರ್ ಹುದ್ದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೈಗೆ ಸಿಕ್ಕರೆ ತೆಲುಗು ದೇಶಂ ಮತ್ತು ಸಂಯುಕ್ತ ಜನತಾದಳ ಪಕ್ಷಗಳ ಸಂಸದರ ನಡುವೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಅಶೋಕ್ ಗೆಹ್ಲೋಟ್ ತಮ್ಮ ಅಧಿಕೃತ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ, “ಒಂದು ವೇಳೆ ಬಿಜೆಪಿ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಂಡರೆ, ತೆಲುಗು ದೇಶಂ ಮತ್ತು ಸಂಯುಕ್ತ ಜನತಾದಳದ ಸಂಸದ ಬಳಿ ಬಿಜೆಪಿ ಚೌಕಾಸಿ ಮಾಡುವುದನ್ನು ನೋಡಬೇಕಾಗುತ್ತದೆ” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಹಲವಾರು ರಾಜ್ಯ ವಿಧಾನಸಭೆಗಳಲ್ಲಿ ಸ್ಪೀಕರ್ ನಿರ್ಧಾರದಿಂದ ಸರ್ಕಾರಗಳು ಉರುಳಿ ಪಕ್ಷಗಳು ಮುರಿದುಹೋಗಿವೆ ಎಂಬುದನ್ನು ಎರಡೂ ಪಕ್ಷಗಳು ಅರಿತುಕೊಳ್ಳಬೇಕು ಎಂದು ಅಶೋಕ್ ಗೆಹ್ಲೋಟ್ ತಮ್ಮ ಪೋಸ್ಟ್‌ನಲ್ಲಿ ಎಚ್ಚರಿಸಿದ್ದಾರೆ.

“ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ನಡೆಯಬಾರದು ಎಂದರೆ, ಎರಡು ಸಮ್ಮಿಶ್ರ ಪಕ್ಷಗಳಲ್ಲಿ (ತೆಲುಗು ದೇಶಂ-ಜೆಡಿಯು) ಯಾವುದಾದರೂ ಒಂದಕ್ಕೆ ಸ್ಪೀಕರ್ ಸ್ಥಾನವನ್ನು ಕೊಡಬೇಕು” ಎಂದು ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.

ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ತೆಲುಗು ದೇಶಂ, ಶಿವಸೇನೆ ಮತ್ತು ಮಾರ್ಕ್ಸ್‌ವಾದಿ ಪಕ್ಷಗಳಿಗೆ ನೀಡಲಾಗಿತ್ತು ಎಂಬುದನ್ನು ಅಶೋಕ್ ಗೆಹ್ಲೋಟ್, ತೆಲುಗು ದೇಶಂ ಮತ್ತು ಜೆಡಿಯು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಲೇಖನ

ಡಿ.ಸಿ.ಪ್ರಕಾಶ್

2024ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಏಕ ಬಹುಮತದೊಂದಿಗೆ ಸರ್ಕಾರ ರಚಿಸುವ ನಿರೀಕ್ಷೆ ಇತ್ತು. ಅಲ್ಲದೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶದಲ್ಲಿ ಬಿ.ಜೆ.ಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ವರದಿಯಾಗಿತ್ತು. ಆದರೆ, ಸಮೀಕ್ಷೆಯ ಫಲಿತಾಂಶವನ್ನು ಸಂಪೂರ್ಣವಾಗಿ ಸುಳ್ಳಾಗಿಸಿ, ಬಿಜೆಪಿ 240 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು.

ಬಿಜೆಪಿ, ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ನೇತೃತ್ವದಲ್ಲಿ ಬಹುಮತ ಗಳಿಸಿದ್ದು, ಮತ್ತೆ ಸರ್ಕಾರ ರಚಿಸುವ ಕೆಲಸದಲ್ಲಿ ತೊಡಗಿದೆ. 2014 ಮತ್ತು 2019ರ ಸಂಸತ್ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಕೆಲವೆಡೆ ಮಾತ್ರ ಗೆದ್ದಿದೆ. ಇದರಿಂದಾಗಿ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ.

ಈ ಹಿನ್ನೆಲೆಯಲ್ಲಿ, ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲು ವಿಫಲವಾಗಿರುವುದರಿಂದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗವುದನ್ನು ಆರ್‌ಎಸ್‌ಎಸ್ ಬಯಸುತ್ತಿಲ್ಲ ಎಂದು ಶಿವಸೇನೆಯ ಸಂಜಯ್ ರಾವತ್ ಹೇಳಿದ್ದಾರೆ. ಮತ್ತು ಮೋದಿ ಬದಲು ಮತ್ತೊಬ್ಬರನ್ನು ಪ್ರಧಾನಿಯನ್ನಾಗಿ ನೇಮಿಸುವ ಬಗ್ಗೆಯೂ ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿಸಿದರು.

ಭಾರತದ ಮುಂದಿನ ಪ್ರಧಾನಿಯಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರ ಹೆಸರನ್ನು ಪರಿಶೀಲಿಸಲಾಯಿತು. ಆದರೆ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

2024ರ ಸಂಸತ್ತಿನ ಚುನಾವಣಾ ಫಲಿತಾಂಶಗಳು ನರೇಂದ್ರ ಮೋದಿಯವರ ವಿರುದ್ಧವಾಗಿರುವುದರಿಂದ ನರೇಂದ್ರ ಮೋದಿ ಅವರು ಸ್ವಯಂಪ್ರೇರಿತರಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಅವರು ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಆರ್‌ಎಸ್‌ಎಸ್‌ಗೆ ಇಷ್ಟವಿಲ್ಲದೆ, ಬೇರೊಬ್ಬ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಲು ಪ್ರಯತ್ನಿಸಿದೆ. ಇದರ ಹೊರತಾಗಿಯೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವತ್ತ ಗಮನಹರಿಸಿದ್ದಾರೆ. ಎನ್‌ಡಿಎ ಭಾಗವಾಗಿರುವ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಈ ಹಿಂದೆ ಮೋದಿ ಮತ್ತು ಅಮಿತ್ ಶಾ ಅವರಿಂದ ಹೆಚ್ಚು ನೋವನ್ನು ಅನುಭವಿಸಿದ್ದಾರೆ. ಇದರಿಂದ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿ ಪಕ್ಷಗಳು ತಮ್ಮ ಸಂಸದರನ್ನು ಕರೆಸಿ ಸಮಾಲೋಚನೆ ನಡೆಸುವುದು ವಾಡಿಕೆ. ಈ ಸಮಾಲೋಚನಾ ಸಭೆಯಲ್ಲಿ ಆ ಪಕ್ಷದ ಸಂಸದೀಯ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಇತರ ವಿಷಯಗಳ ಬಗ್ಗೆಯೂ ಚರ್ಚೆ ನಡೆಯುತ್ತದೆ.

ಆದರೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಮಾಲೋಚನಾ ಸಭೆಯನ್ನು ಕರೆದು, ತಮ್ಮನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಇದರ ಬೆನ್ನಲ್ಲೇ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನೂತನ ಸಂಸತ್ ಸದಸ್ಯರ ಸಭೆ ದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಬೆಂಬಲ ವ್ಯಕ್ತಪಡಿಸಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದರು.

ಇದರ ಬೆನ್ನಲ್ಲೇ ಮೋದಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೇ ದೇಶದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ಪ್ರಸ್ತಾಪಿಸುವುದಾಗಿ ಮಾಜಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದರು.

ತರುವಾಯ, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಇಬ್ಬರೂ ಮೋದಿಯನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿರ್ಧಾರವನ್ನು ಪ್ರಸ್ತಾಪಿಸಿದರು. ನಂತರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಅಧಿಕೃತವಾಗಿ ಘೋಷಿಸಲಾಯಿತು.

ಸಂಸತ್ ಚುನಾವಣೆಯ ಫಲಿತಾಂಶ ಪ್ರಕಟವಾದ ಮೂರು ದಿನಗಳಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ. ಈ ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹೊಸ ಸರ್ಕಾರ ಎಷ್ಟು ದಿನ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ

ನವದೆಹಲಿ: ಕಳೆದ 4 ರಂದು ಭಾರತದ ಸಂಸತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಒಟ್ಟು 543 ಸ್ಥಾನಗಳ ಪೈಕಿ 240 ಕ್ಷೇತ್ರಗಳನ್ನು ಮಾತ್ರ ವಶಪಡಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಅದೇ ಸಮಯದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 292 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸರ್ಕಾರ ರಚನೆಗೆ ಅಗತ್ಯವಿರುವ 272ಕ್ಕೂ ಹೆಚ್ಚು ಸದಸ್ಯರನ್ನು ಈ ತಂಡ ಪಡೆದಿರುವುದರಿಂದ ಮುಂದಿನ 5 ವರ್ಷ ಸಮ್ಮಿಶ್ರ ಸರ್ಕಾರ ಖಚಿತವಾಗಿದೆ.

3ನೇ ಅವಧಿಗೆ ಸರ್ಕಾರ ರಚಿಸಲು ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ಪ್ರಧಾನಿ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಮತ್ತು ಅವರೆಲ್ಲರೂ ಪ್ರಧಾನಿ ಮೋದಿಯವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ನಾಯಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈ ಮಧ್ಯೆ ನೂತನ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕೆಂಬ ಚರ್ಚೆ ಪಕ್ಷದ ನಾಯಕರಲ್ಲಿ ನಡೆಯುತ್ತಿದೆ.

ಈ ಒತ್ತಡದ ವಾತಾವರಣದಲ್ಲಿ ದೆಹಲಿಯ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ನೂತನ ಸಂಸದರ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೇಂದ್ರ ಸಚಿವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮತ್ತು ಎನ್‌ಡಿಎ ಸಂಸದರು, ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದಾರೆ. ಸಭೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ನೆರೆದಿದ್ದವರು ಅದ್ಧೂರಿಯಾಗಿ ಸ್ವಾಗತಿಸಿದರು.

ಮೋದಿ ಅವರನ್ನು ತಮ್ಮ ನಾಯಕನನ್ನಾಗಿ (ಪ್ರಧಾನಿ) ಆಯ್ಕೆ ಮಾಡಲಾಗುತ್ತದೆ. ಇದಾದ ನಂತರ, ಪ್ರಧಾನಿ ಮೋದಿ ಅವರು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಸೇರಿದಂತೆ ಮೈತ್ರಿಕೂಟದ ಹಿರಿಯ ನಾಯಕರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.

ಆಗ ತನ್ನನ್ನು ಬೆಂಬಲಿಸುವ ಸಂಸದರ ಪಟ್ಟಿಯನ್ನು ಮೋದಿ ರಾಷ್ಟ್ರಪತಿಗಳಿಗೆ ನೀಡಲಿದ್ದಾರೆ. ಅದೇ ಸಂದರ್ಭದಲ್ಲಿ ಹೊಸ ಸರ್ಕಾರ ರಚಿಸುವ ಹಕ್ಕನ್ನು ಸಹ ಮಂಡಿಸಲಿದ್ದಾರೆ. ಅದನ್ನು ಅಂಗೀಕರಿಸುವ ರಾಷ್ಟ್ರಪತಿಗಳು ಹೊಸ ಸರ್ಕಾರ ರಚಿಸಲು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ.

ಬಿಜೆಪಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಕ್ಷಗಳು ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಸಕ್ರಿಯವಾಗಿ ಮಾಡುತ್ತಿವೆ. ದೇಶದ ಮೊದಲ ಪ್ರಧಾನಿ ನೆಹರೂ ನಂತರ ಮೋದಿ ಅವರಿಗೆ ಸತತ 3ನೇ ಬಾರಿ ಪ್ರಧಾನಿಯಾಗುವ ಅವಕಾಶ ಸಿಕ್ಕಿದೆ ಎಂದು ಬಿಜೆಪಿ ಸಂಭ್ರಮಿಸುತ್ತಿದೆ.

ರಾಜಕೀಯ

ಡಿ.ಸಿ.ಪ್ರಕಾಶ್

ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ಸಂಸತ್ತಿನ ಚುನಾವಣೆಗಳು ನಡೆದವು. ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಪರಸ್ಪರ ಪೈಪೋಟಿ ನಡೆಸಿದ್ದವು.

ಕಳೆದ 4ರಂದು ಮತ ಎಣಿಕೆ ಕಾರ್ಯ ನಡೆಯಿತು. ಇದರಲ್ಲಿ ಬಿ.ಜೆ.ಪಿ 240 ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಸಾದಿಸಿತು. ಸರ್ಕಾರ ರಚಿಸಲು ಅಗತ್ಯವಿರುವ 272 ಕ್ಕಿಂತ 32 ಸ್ಥಾನಗಳ ಕೊರತೆಯಿದ್ದರೂ ಎನ್ ಡಿಎ 292 ಸ್ಥಾನಗಳನ್ನು ಗೆದ್ದುಕೊಂಡಿತು.

ಇದರ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಮುಂದಾಯಿತು. ಪ್ರಧಾನಿ ಮೋದಿ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. 17ನೇ ಲೋಕಸಭೆ ವಿಸರ್ಜನೆಯಾಗಿದೆ.

ಬಿಜೆಪಿ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇಬ್ಬರೂ ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ, ಎನ್ ಡಿಎಗೆ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷಗಳ ಬೆಂಬಲ ಅಗತ್ಯವಿದೆ. ಅದೇ ಸಂದರ್ಭದಲ್ಲಿ, ಅವರು ಕೂಡ ಮೈತ್ರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮೈತ್ರಿ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದರೂ ಕೆಲವು ಷರತ್ತುಗಳನ್ನು ವಿಧಿಸಿವೆ. ಇದರ ಪ್ರಕಾರ ಸಾರಿಗೆ, ಐಟಿ, ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಜಲಸಂಪನ್ಮೂಲ ಒದಗಿಸುವಂತೆ ಚಂದ್ರಬಾಬು ನಾಯ್ಡು ಕೋರಿದ್ದಾರೆ ಎನ್ನಲಾಗಿದೆ.

ಅದೇ ರೀತಿ, ಬಿಹಾರ ಮುಖ್ಯಮಂತ್ರಿ ಮತ್ತು ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನ ಮತ್ತು ಕನಿಷ್ಠ ಸಾಮಾನ್ಯ ಕ್ರಿಯಾ ಯೋಜನೆ ರೂಪಿಸಲು ಷರತ್ತು ವಿಧಿಸುವ ಜೊತೆಗೆ, 3 ಕ್ಯಾಬಿನೆಟ್ ಸಚಿವರು, 2 ರಾಜ್ಯ ಸಚಿವರು ಒಟ್ಟು 5 ಕೇಂದ್ರ ಸಚಿವ ಸ್ಥಾನಗಳು ಬೇಕೆಂದು ನಿತೀಶ್ ಕುಮಾರ್ ಬಯಸಿದ್ದಾರೆ.

ಅದೇ ರೀತಿ 2 ಸಂಸದರನ್ನು ಹೊಂದಿರುವ ಜಾತ್ಯತೀತ ಜನತಾದಳ ಕೂಡ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಬಿಜೆಪಿಗೆ ಒತ್ತಡ ಹೇರುತ್ತಿದೆ. ಜೆಡಿಎಸ್ ಪಕ್ಷವು ಕೃಷಿ ಇಲಾಖೆಯನ್ನು ಕೇಳುತ್ತಿದೆ.

ಮೈತ್ರಿಗೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಕೂಡ ಷರತ್ತು ವಿಧಿಸಿದೆ ಎನ್ನಲಾಗಿದೆ. ಆ ಪಕ್ಷ ಬಿಹಾರದಲ್ಲಿ 5 ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆ.

ಹೀಗಾಗಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಮುನ್ನವೇ ಸಮ್ಮಿಶ್ರ ಪಕ್ಷಗಳ ಬೆಂಬಲ ಪಡೆಯಲು ಇಂತಹ ಹಲವು ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿಯಲ್ಲಿದೆ.

ರಾಜಕೀಯ

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟದ ನಾಯಕರ ಸಮಾಲೋಚನಾ ಸಭೆ ಮುಕ್ತಾಯವಾಗಿದೆ!

ನವದೆಹಲಿ: ದೇಶಾದ್ಯಂತ ಒಟ್ಟು 543 ಸಂಸದೀಯ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆದಿದೆ. ನಿನ್ನೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಎಣಿಕೆ ನಡೆದಿದೆ. ಇದರಲ್ಲಿ ಬಿ.ಜೆ.ಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಾ (NDA) 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಬಿ.ಜೆ.ಪಿ 240 ಸ್ಥಾನಗಳನ್ನು ವಶಪಡಿಸಿಕೊಂಡಿದೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ, ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳ, ಮರಾಠ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಮುಂತಾದ ಪಕ್ಷಗಳು ಪಾಲ್ಗೊಂಡಿದ್ದವು.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಪಕ್ಷಗಳ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ಈ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು, ಮರಾಠಾ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಮುಂತಾದವರು ಭಾಗವಹಿಸಿದ್ದರು. ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಬಿಜೆಪಿಗೆ ಬೆಂಬಲ ಪತ್ರ ನೀಡಿದರು.

ತೆಲುಗು ದೇಶಂ 16 ಸ್ಥಾನಗಳಲ್ಲಿ ಮತ್ತು ಸಂಯುಕ್ತ ಜನತಾ ದಳ 12 ಸ್ಥಾನಗಳಲ್ಲಿ ಗೆದ್ದಿದ್ದು, ಬಿಜೆಪಿ ಮೈತ್ರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸಂಜೆ 4 ಗಂಟೆಗೆ ಆರಂಭವಾದ ಸಭೆ ಮುಗಿದ ನಂತರ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಮೋದಿ ಮನೆಯಿಂದ ನಿರ್ಗಮಿಸಿದರು.

ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳು ಬೆಂಬಲ ಪತ್ರ ನೀಡಿದ್ದರಿಂದ ಪ್ರಧಾನಿ ಮೋದಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲಿದ್ದಾರೆ. ಅವರು ಇಂದು ಸರ್ಕಾರ ರಚನೆಗೆ ಹಕ್ಕು ಸಾಧಿಸುವ ನಿರೀಕ್ಷೆಯಿದೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪಕ್ಷೇತರ ಹಾಗೂ ಸಣ್ಣ ಪಕ್ಷಗಳ ಇನ್ನೂ 10 ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಯಿತು. ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮೋದಿ ಪಕ್ಕದಲ್ಲಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ಸ್ಥಾನ ನೀಡಲಾಗಿತ್ತು.

ಕೇಂದ್ರದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 272 ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ 292 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂಬುದು ಗಮಾರ್ಹ.

ರಾಜಕೀಯ

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ “ಇಂಡಿಯಾ” ಮೈತ್ರಿಕೂಟದಲ್ಲಿ ನಡೆಯುತ್ತಿರುವ ಬಿರುಕುಗಳಿಗೆ ಕಾಂಗ್ರೆಸ್ ಅನ್ನು ದೂಷಿಸಿದ್ದಾರೆ. ಮತ್ತು ಮೈತ್ರಿ ಪಾಲುದಾರರೊಂದಿಗೆ ಚರ್ಚಿಸಲು ಮತ್ತು ತೊಡಗಿಸಿಕೊಳ್ಳಲು ತೋರಿಸಬೇಕಾದ ಉತ್ಸಾಹವು ಗೋಚರಿಸುತ್ತಿಲ್ಲ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಮುಂದೆ ಬರಬೇಕಿತ್ತು. “ಇಂಡಿಯಾ” ಮೈತ್ರಿಕೂಟದೊಂದಿಗೆ ಚರ್ಚಿಸಲು ಮತ್ತು ತೊಡಗಿಸಿಕೊಳ್ಳಲು ಕಾಂಗ್ರೆಸ್ ತೋರಿಸಬೇಕಾದ ಉತ್ಸಾಹವು ಕಾಣೆಯಾಗಿದೆ” ಎಂದು ಅಖಿಲೇಶ್ ಯಾದವ್ ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪ್ರಚಾರ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್, “ಅಂತಹ ಸಹಯೋಗವು ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದನ್ನು ಸಮಯವೇ ಹೇಳುತ್ತದೆ” ಎಂದು ಹೇಳಿದ್ದಾರೆ.

ಬಿಹಾರದಲ್ಲಿನ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ಇಂಡಿಯಾ” ಮೈತ್ರಿಕೂಟದಿಂದ ಹೊರಹೋಗುವ ಸಂಭಾವ್ಯತೆಯ ಬಗ್ಗೆ ಪ್ರಶ್ನಿಸಿದಾಗ, ಅಖಿಲೇಶ್ ಯಾದವ್ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಟೀಕಿಸಿದರು ಮತ್ತು ಪಕ್ಷವು ಉಪಕ್ರಮವನ್ನು ತೆಗೆದುಕೊಂಡಿದ್ದರೆ ಪ್ರಸ್ತುತ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ಪ್ರತಿಪಾದಿಸಿದರು.

ನಿತೀಶ್ ಕುಮಾರ್ ಎನ್‌ಡಿಎ ಪಾಳಯಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಖಿಲೇಶ್, “ನಿತೀಶ್ ಕುಮಾರ್ ಅವರು “ಇಂಡಿಯಾ” ಮೈತ್ರಿಯೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ನಂತರ, ಅವರೇ ಉಪಕ್ರಮವನ್ನು ತೆಗೆದುಕೊಂಡು ಭಾರತ ಮೈತ್ರಿಯನ್ನು ರಚಿಸಿದರು” ಎಂದು ಹೇಳಿದ್ದಾರೆ.

“ನಿತೀಶ್ ಕುಮಾರ್ ಏಕೆ ಅಸಮಾಧಾನಗೊಂಡಿದ್ದಾರೆ? ಅವರ ಕುಂದುಕೊರತೆಗಳನ್ನು ಚರ್ಚಿಸಬಹುದು, ಮತ್ತು ಅವರು ಕೇಳಿದಾಗ ಪರಿಹಾರವು ಹೊರಹೊಮ್ಮಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಯುಪಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಜೆಡಿಯು ಮುಖ್ಯಸ್ಥರು ಬಿಹಾರದಲ್ಲಿ ಮತ್ತು ಪ್ರಾದೇಶಿಕ ಪಕ್ಷಗಳು ಮೈತ್ರಿಗೆ ಸೇರ್ಪಡೆಗೊಂಡ ಇತರ ರಾಜ್ಯಗಳಲ್ಲಿ “ಇಂಡಿಯಾ” ಮೈತ್ರಿಕೂಟದಲ್ಲಿ ವಿಫಲವಾದ ಸೀಟು ಹಂಚಿಕೆ ಮಾತುಕತೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಕೇವಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಲಾಭಕ್ಕಾಗಿ ಆಯೋಜಿಸಲಾಗಿದೆಯೇ ಹೊರತು “ಇಂಡಿಯಾ” ಮೈತ್ರಿಕೂಟಕ್ಕಲ್ಲ ಎಂದು ನಿತೀಶ್ ಕುಮಾರ್ ನಂಬಿದ್ದಾರೆ.

ಏತನ್ಮಧ್ಯೆ, ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಡುವಿನ ಆಂತರಿಕ ಭಿನ್ನಾಭಿಪ್ರಾಯವು ಬಿಹಾರದ ರಾಜಕೀಯ ವಲಯಗಳನ್ನು ಅಲುಗಾಡಿಸಿದೆ ಮತ್ತು ಪ್ರಸ್ತುತ ಸರ್ಕಾರವು ಭಾರಿ ಬದಲಾವಣೆಯತ್ತ ನೋಡುತ್ತಿದೆ.

ಬಿಹಾರದ ಮಹಾಘಟಬಂಧನ್‌ನ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ 122ರ ಮಾಂತ್ರಿಕ ಗುರುತನ್ನು ಪೂರೈಸಲು ಮ್ಯಾರಥಾನ್ ಸಭೆಗಳನ್ನು ನಡೆಸುತ್ತಿವೆ.

ನಿತೀಶ್ ಕುಮಾರ್ ಆಡಳಿತಾರೂಢ ಮೈತ್ರಿಕೂಟದಿಂದ ಜೆಡಿಯು ಹಿಂತೆಗೆದುಕೊಳ್ಳುವ ಸನ್ನಿವೇಶದಲ್ಲಿ, ಆರ್‌ಜೆಡಿ 122 ಅಂಕಗಳನ್ನು ತಲುಪಲು ಮತ್ತು ರಾಜ್ಯ ವಿಧಾನಸಭೆಯಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಎಂಟು ಹೆಚ್ಚುವರಿ ಶಾಸಕರ ಅಗತ್ಯವಿದೆ.

ರಾಜಕೀಯ

‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ನವದೆಹಲಿ,
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಜಂಟಿಯಾಗಿ ‘ಇಂಡಿಯಾ’ ಮೈತ್ರಿಕೂಟ ರಚಿಸಿದ್ದವು. ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಯುನೈಟೆಡ್ ಜನತಾ ದಳ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂ ಎಂಬ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಲ್ಕನೇ ಸಭೆ ನಡೆಯಲಿದೆ ಎಂದು ಘೋಷಿಸಲಾಯಿತು. ಆದರೆ ಮೈತ್ರಿ ಪಕ್ಷಗಳ ಪ್ರಮುಖ ನಾಯಕರಾದ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು.

ಇದರ ಬೆನ್ನಲ್ಲೇ ಡಿಸೆಂಬರ್ 19 ರಂದು ಮಧ್ಯಾಹ್ನ 3 ಗಂಟೆಗೆ ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

ಈ ಹಿನ್ನಲೆಯಲ್ಲಿ, ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಎಂ.ಕೆ.ಸ್ಟಾಲಿನ್, ರಾಹುಲ್ ಗಾಂಧಿ, ಟಿ.ಆರ್.ಬಾಲು. ಸೀತಾರಾಮ್ ಯೆಚೂರಿ, ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್. ಮೆಹಬೂಬ ಮುಫ್ತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಮುಂತಾದ ನಾಯಕರು ಭಾಗವಹಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಸಂಸತ್ತಿನ ಚುನಾವಣಾ ಕಾರ್ಯತಂತ್ರ ಮತ್ತು ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ದೆಹಲಿಯ ಮೂಲಗಳು ತಿಳಿಸಿವೆ.