ಟೆಲ್ ಅವೀವ್: ನಿನ್ನೆ (ಶುಕ್ರವಾರ) ಮುಂಜಾನೆಯಿಂದ ಸೆಂಟ್ರಲ್ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಗಾಜಾದಲ್ಲಿ ನಿರುದ್ಯೋಗವು ಶೇ.80 ರನ್ನು ಸಮೀಪಿಸುತ್ತಿದೆ ಎಂದು ವರದಿ ಮಾಡಿದೆ.
ಹಮಾಸ್ ಜೊತೆ ಇಸ್ರೇಲ್ ನ ಯುದ್ಧ ಮುಂದುವರಿದಿದ್ದು, ವಿಶ್ವ ನಾಯಕರು ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಆದರೆ ಇಸ್ರೇಲ್ ಅದಕ್ಕೆ ಕಿವಿಗೊಡದೆ ಕಣ್ಣುಮುಚ್ಚಿ ದಾಳಿ ನಡೆಸುತ್ತಿದೆ. ನಿನ್ನೆ ಗಾಜಾದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 40 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.
ಇದರ ಬೆನ್ನಲ್ಲೇ ನಿನ್ನೆ (ಶುಕ್ರವಾರ) ಮುಂಜಾನೆಯಿಂದ ಸೆಂಟ್ರಲ್ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ 77 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 221 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕವಾಗಿ ಕದನ ವಿರಾಮ ಒಪ್ಪಂದವನ್ನು ಜಾರಿಗೆ ತರಲು ಒತ್ತಡ ಹೆಚ್ಚುತ್ತಲೇ ಇದ್ದು, ಇತ್ತೀಚಿನ ಕದನ ವಿರಾಮ ಪ್ರಸ್ತಾವನೆಗೆ ಹಮಾಸ್ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದು ಈಜಿಪ್ಟ್ ಮತ್ತು ಕಟಾರ್ ನ ಮಧ್ಯಸ್ಥರು ಹೇಳುತ್ತಿದ್ದಾರೆ.
ಏತನ್ಮಧ್ಯೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಗಾಜಾದಲ್ಲಿ ನಿರುದ್ಯೋಗವು ಶೇ.80 ರಷ್ಟು ಸಮೀಪಿಸುತ್ತಿದೆ ಎಂದು ಹೇಳಿದೆ. ಅದೇ ಸಮಯದಲ್ಲಿ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ (West Bank) ನಿರುದ್ಯೋಗವು ಸುಮಾರು ಶೇ.32 ರಷ್ಟು ತಲುಪಿದೆ. ಜೊತೆಗೆ ಆ ಭಾಗದ ಜನರು ವೇತನ ಕೊರತೆ ಎಂಬ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ, ಗಾಜಾ ಜನರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ.
ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ ಗಾಜಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 36,731 ಜನರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೇ 83,530 ಮಂದಿ ಗಾಯಗೊಂಡಿದ್ದಾರೆ. ಹಮಾಸ್ ದಾಳಿಗಳಿಂದ ಇಸ್ರೇಲ್ ನಲ್ಲಿ ಸತ್ತವರ ಸಂಖ್ಯೆ 1,139 ಆಗಿರುವುದು ಗಮನಾರ್ಹ.