ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಅಚ್ಯುತಕುಮಾರ್ Archives » Dynamic Leader
December 5, 2024
Home Posts tagged ಅಚ್ಯುತಕುಮಾರ್
ಸಿನಿಮಾ

ಅರುಣ್ ಜಿ     

ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರ ಜನವರಿ 26 ರಂದು ತೆರೆ ಕಾಣಲಿದೆ!

ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್.ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ, ಅಭಿಜಿತ್ ಮಹೇಶ್ ನಿರ್ದೇಶನದ, ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಬ್ಯಾಚುಲರ್ ಪಾರ್ಟಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪಂಚಿಂಗ್ ಡೈಲಾಗ್‌ಗಳ ಮೂಲಕ ಟ್ರೇಲರ್ ಎಲ್ಲರನ್ನೂ ಮೋಡಿ ಮಾಡುತ್ತಿದೆ‌. ಟ್ರೇಲರ್ ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ನಾನು ಕಿರುಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನಗೆ ಅಭಿಜಿತ್ ಮಹೇಶ್ ಪರಿಚಯವಾದರು. “ಕಿರಿಕ ಪಾರ್ಟಿ”, “ಅವನೇ ಶ್ರೀಮನ್ನಾರಾಯಣ” ಚಿತ್ರಗಳಲ್ಲಿ ಒನ್ ಲೈನ್ ಪಂಚಿಂಗ್ ಡೈಲಾಗ್‌ಗಳು ಅಭಿಜಿತ್ ಅವರ ಕೊಡುಗೆ. ಅಂತಹ ಅದ್ಭುತ ಪ್ರತಿಭೆ ಅವರು. ಆಗಿನಿಂದಲೂ ನಾನು ಅಭಿಜಿತ್ ಅವರಿಗೆ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಈಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನೂ ದಿಗಂತ್ ಹಾಗೂ ಯೋಗಿ ಇಬ್ಬರು ಅದ್ಭುತ ಕಲಾವಿದರು. ನಾನು ಅವರಿಬ್ಬರ ಚಿತ್ರಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ ಜನವರಿ 26 ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ರಕ್ಷಿತ್ ಶೆಟ್ಟಿ.

ಲಾಕ್ ಡೌನ್ ಸಮಯದಲ್ಲಿ ಈ ಸಿನಿಮಾದ ಕಥೆ ಹುಟ್ಟಿದ್ದು ಎಂದು ಮಾತನಾಡಿದ ನಿರ್ದೇಶಕ ಅಭಿಜಿತ್ ಮಹೇಶ್, ಇದೊಂದು ಪಕ್ಕಾ ಎಂಟರ್ ಟೈನರ್ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ. ನಿರ್ದೇಶನ ಮಾಡಲು ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು.

ನನ್ನ ಪಾತ್ರ ರಿಷಭ್ ಶೆಟ್ಟಿ ಅವರು ಮಾಡಬೇಕಿತ್ತು. ಅವರು “ಕಾಂತಾರ”ದಲ್ಲಿ ಬ್ಯುಸಿಯಾದ ಕಾರಣ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ. ನಾನು ಹಾಗೂ ದಿಗಂತ್ ಹದಿನೈದು ವರ್ಷಗಳ ಸ್ನೇಹಿತರು. ಆದರೆ ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿರುವುದು ಖುಷಿಯಾಗಿದೆ ಎಂದರು ಲೂಸ್ ಮಾದ ಯೋಗಿ.

ಪರಂವಃ ಸ್ಟುಡಿಯೋಸ್‌ನಲ್ಲಿ ನನ್ನದು ಇದು ಎರಡನೇ ಚಿತ್ರ. ಯೋಗಿ ಹಾಗೂ ನಾನು ಒಟ್ಟಿಗೆ ನಟಿಸಿರುವ ಮೊದಲ ಚಿತ್ರ. ಅಭಿಜಿತ್ ಮಹೇಶ್ ಅವರ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರೀಕರಣದ ಸಮಯ ತುಂಬಾ ಸಂತಸಮಯವಾಗಿತ್ತು ಎಂದರು ದಿಗಂತ್.

ಈ ಚಿತ್ರಕ್ಕೆ ಬೆಂಗಳೂರು ಅಷ್ಟೇ ಅಲ್ಲದೆ, ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲೂ ಹೆಚ್ಚಿನ ಚಿತ್ರೀಕರಣವಾಗಿದೆ. ನಾನು, ಯೋಗಿ ಹಾಗೂ ದಿಗಂತ್ ಅಲ್ಲಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆವು. ಇಬ್ಬರು ಒಳ್ಳೆಯ ನಟರು. ಅಭಿಜಿತ್ ಅವರು ಪ್ರತಿಭಾವಂತ ನಿರ್ದೇಶಕ. ಎಲ್ಲರೂ “ಬ್ಯಾಚುಲರ್ ಪಾರ್ಟಿ” ನೋಡಿ; ಪ್ರೋತ್ಸಾಹ ನೀಡಿ ಎಂದು ನಟ ಅಚ್ಯುತ ಕುಮಾರ್ ತಿಳಿಸಿದರು.

ಸಂಗೀತ ನಿರ್ದೇಶಕ ಅರ್ಜುನ್ ರಾಮ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಕಾಸ್ಟ್ಯೂಮ್ ಡಿಸೈನರ್ ಅರುಂಧತಿ ಹಾಗೂ ಪರಂವಃ ಸಂಸ್ಥೆಯ ಸಿಇಓ ಶ್ರೀನಿ ಶೆಟ್ಟಿ “ಬ್ಯಾಚುಲರ್ ಪಾರ್ಟಿ” ಚಿತ್ರದ ಕುರಿತು ಮಾತನಾಡಿದರು.