ಮುಸ್ಲಿಮರ ಬಕ್ರೀದ್ ಹಬ್ಬ ಹಾಗೂ ರಾಜ್ಯ ರೈತರ ಆರ್ಥಿಕತೆ, ಸ್ವಾವಲಂಬನೆ, ಉದ್ಯೋಗ ಒಂದು ಚಿಂತನೆ!
• ಡಾ.ಖಾಸಿಂ ಸಾಬ್ ಎ
“ಕರ್ನಾಟಕದಲ್ಲಿ ಒಂದು ಕೋಟಿ ಮುಸ್ಲಿಮರು ಈದ್ ಉಲ್ ಅಧಾವನ್ನು (ಬಕ್ರೀದ್) ಪ್ರತಿವರ್ಷ ಆಚರಿಸುತ್ತಾರೆ. ಕರ್ನಾಟಕದ ಒಟ್ಟು ಮುಸ್ಲಿಂ ಜನಸಂಖ್ಯೆ ಒಂದು ಕೋಟಿ. ಸರಿಸುಮಾರು 35 ಲಕ್ಷ ಕುಟುಂಬಗಳು!”
ರಾಜ್ಯದ ಶೇ.50ರಷ್ಟು ಮುಸ್ಲಿಮರು ರೂ.10 ಸಾವಿರದಿಂದ ರೂ.50 ಸಾವಿರ ಬೆಲೆಯ ಆಡು/ಕುರಿಗಳನ್ನು ಬಕ್ರೀದ್ ಹಬ್ಬಕ್ಕೆ ಕಡ್ಡಾಯವಾಗಿ ಕುರ್ಬಾನಿ (ದಾನ) ಕೊಡುತ್ತಾರೆ. ಪ್ರತಿ ಕುರಿ/ಮೇಕೆಗೆ ಸರಾಸರಿ ರೂ.20 ಸಾವಿರ ಬೆಲೆಯನ್ನು ಕೊಟ್ಟು ಕೊಂಡುಕೊಂಡರೂ (50 ಲಕ್ಷ × ರೂ.20000) 4 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ಆಗುತ್ತದೆ.
ಕೋಮುವಾದಿಯೇತರ ಅಭಿವೃದ್ಧಿಯ ಆರ್ಥಿಕ ದೃಷ್ಟಿಕೋನದಿಂದ ಇದು ಯಾರಿಗೆ ಯಾವ ಜಾತಿ ಮತ್ತು ಧರ್ಮದವರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದನ್ನು ನೋಡಬೇಕಿದೆ. ಬಕ್ರೀದ್ ಹಬ್ಬಕ್ಕೆ ಬಳಕೆಯಾಗುವ ಕುರಿ/ಆಡು/ಮೇಕೆಗಳು ಬಹುರಾಷ್ಟ್ರೀಯ ಉತ್ಪನ್ನಗಳಲ್ಲ. ಬದಲಾಗಿ 100% ದೇಸಿ ಗ್ರಾಮೀಣ ಕುರುಬ, ಒಕ್ಕಲಿಗ ಇತರೆ ರೈತಾಪಿ ಸಮುದಾಯಗಳ ಸಾಕು ಪ್ರಾಣಿಗಳಾಗಿವೆ.
ಈ ಪ್ರಾಣಿಗಳನ್ನು ಸಾಕುವವರು ಹಾಗೂ ಮಾರುವವರು ನಮ್ಮ ಕರ್ನಾಟಕ ರಾಜ್ಯದ ಗ್ರಾಮೀಣ ಹಳ್ಳಿಗಳ ರೈತರು. (ವಿಶೇಷವಾಗಿ ಕುರುಬ ಸಮುದಾಯದ ರೈತರರು) ಇದರಿಂದ ರಾಜ್ಯದಲ್ಲಿ 20 ಲಕ್ಷ ರೈತಾಪಿ ಕುಟುಂಬಗಳು ನೇರ ಉದ್ಯೋಗ ಪಡೆಯುತ್ತವೆ. ಒಬ್ಬ ರೈತ ವರ್ಷಕ್ಕೆ ಸರಾಸರಿ 100 ಕುರಿಗಳನ್ನು ನಿರ್ವಹಿಸಿದರೆ, ಪ್ರತಿ ಕುಟುಂಬವು ವರ್ಷಕ್ಕೆ 20 ಲಕ್ಷಗಳನ್ನು ಗಳಿಸುತ್ತವೆ. ಇದು ಹೆಚ್ಚು ಕಮ್ಮಿ ಕರ್ನಾಟಕ ರಾಜ್ಯ ಸರಕಾರದ ಒಂದು ವರ್ಷದ ‘ಆಯವ್ಯಯ’ ಬಜೆಟ್ ಗೆ ಸಮ.
ಆದ್ದರಿಂದ, ಬಕ್ರೀದ್ ಹಬ್ಬ ಸ್ಥಳೀಯ ವ್ಯಾಪಾರ ವ್ಯವಹಾರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತದೆ. ಮತ್ತು ರೈತರ ಸ್ವಾವಲಂಬಿ ಬದುಕುಗಳಿಗೆ ಬೆಂಬಲಕಾರಿಯೂ ಆಗಿದೆ. ಅಲ್ಲದೆ, ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕತೆ ಮತ್ತು ಸುಮಾರು 20 ಲಕ್ಷ ಸಣ್ಣ ರೈತರಿಗೆ ಉದ್ಯೋಗವನ್ನು ಒದಗಿಸುತ್ತದೆ. ರೈತರ ವ್ಯವಹಾರವು ಎಂದಿಗೂ ಧರ್ಮವನ್ನು ಆಧರಿಸಿಲ್ಲ. ಆದ್ದರಿಂದ ವಿವಿಧ ಸಮುದಾಯಗಳ ಎಲ್ಲಾ ರೈತರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಜೊತೆಗೆ, ಪ್ರತಿ ಕುರಿ/ಮೇಕೆಯ ಮಾಂಸವನ್ನು ಕನಿಷ್ಠ 100 ಜನ ಸೇವಿಸುತ್ತಾರೆ. ಆದ್ದರಿಂದ ಬಕ್ರೀದ್ ಹಬ್ಬವು ಭಾರತದಲ್ಲಿ ಸರಿಸುಮಾರು 40 ಕೋಟಿ ಜನರಿಗೆ ಆಹಾರವನ್ನು ಒದಗಿಸುತ್ತದೆ. ಈ ಹಬ್ಬದ ಜೊತೆಗೆ ಇದರಿಂದಾಗುವ ವ್ಯಾಪಾರ ದೃಷ್ಟಿಕೋನಗಳು ಮತ್ತು ಉದ್ಯೋಗದ ಹೆಚ್ಚಳವನ್ನೂ ನೋಡಬೇಕಿದೆ.
ಬಕ್ರೀದ್ ಹಬ್ಬದಂದು ನಡೆಯುವ ವಹಿವಾಟಿನಿಂದ ಆಗುವ ಉದ್ಯೋಗ ನಿರ್ಮಾಣ ಮತ್ತು ಜಿಡಿಪಿ ಬೆಳವಣಿಗೆಯ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ, ಇಂತಹ ಗ್ರಾಮೀಣ ಕೃಷಿಯಾಧಾರಿತ ವ್ಯಾಪಾರವನ್ನು ಉತ್ತೇಜಿಸಬೇಕಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಕುರಿ/ಮೇಕೆಗಳ ಈ ಒಂದು ತಿಂಗಳ ವ್ಯಾಪಾರದಿಂದ ಆಗುವ ಗಳಿಕೆಯಿಂದ ರೈತರು ಇಡೀ ವರ್ಷ ಬದುಕಬಲ್ಲರು ಎಂಬುದನ್ನು ನಾವೆಲ್ಲರೂ ಮನಗಾಣಬೇಕು.
ಲೇಖಕರು:
ಡಾ.ಖಾಸಿಂ ಸಾಬ್ ಎ.
ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಯುನಿಟಿ.