"ವಿದ್ಯಾರ್ಥಿ ವಿದ್ಯಾರ್ಥಿನಿಯರೇ" ಚಿತ್ರದ ಪೋಸ್ಟರ್-ಮೋಷನ್ ಪೋಸ್ಟರ್ ಅನಾವರಣ! » Dynamic Leader
July 14, 2024
ಸಿನಿಮಾ

“ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರದ ಪೋಸ್ಟರ್-ಮೋಷನ್ ಪೋಸ್ಟರ್ ಅನಾವರಣ!

ಅರುಣ್ ಕುಮಾರ್ ಜಿ

ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರ ಚಿತ್ರೀಕರಣ ಶುರುವಾದಂದಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಅತ್ಯಂತ ಕ್ರಿಯಾಶೀಲವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳುವ ನಿಟ್ಟಿನಲ್ಲಿ ನಿರ್ದೇಶಕರ ಪಟ್ಟುಗಳೆಲ್ಲವೂ ಫಲ ಕೊಟ್ಟಿವೆ. ಇದೀಗ ಅದೇ ಹಾದಿಯಲ್ಲಿ ಸಾಗಿ ಬಂದಿರುವ ಚಿತ್ರತಂಡ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.

ಈ ಸಿನಿಮಾ ಶೀರ್ಷಿಕೆ ಕೇಳಿದರೇನೇ ಒಟ್ಟಾರೆ ಕಥಾನಕದ ಬಗೆಗೊಂದು ಸುಳಿವು ಸಿಗುತ್ತದೆ. ಆದರೆ, ಅಂಥಾ ಯಾವ ಅಂದಾಜಿಗೂ ನಿಲುಕದ ಸ್ವರೂಪದಲ್ಲಿ ಈ ಸಿನಿಮಾವನ್ನು ರೂಪಿಸಿರುವ ಭರವಸೆ ನಿರ್ದೇಶಕ ಅರುಣ್ ಅಮುಕ್ತ ಅವರಲ್ಲಿದೆ. ಈ ಹಿಂದೆ ಟೈಟಲ್ ಲಾಂಚ್ ಅನ್ನೂ ಸಹ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿದ್ದ ಚಿತ್ರತಂಡ, ಇಂದು ಬೆಳಗ್ಗೆ ಪೋಸ್ಟರ್ ಹಾಗೂ ಸಂಜೆ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರ ಸುತ್ತ ಈಗೊಂದಷ್ಟು ನಿರೀಕ್ಷೆ ಮತ್ತು ಚರ್ಚೆ ಹುಟ್ಟಿಕೊಂಡಿದೆ.

ಇದುವರೆಗೂ ಈ ಸಿನಿಮಾದ ಪಾತ್ರವರ್ಗ ಕಾಣಿಸಿರಲಿಲ್ಲ. ಈ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಕೆಲ ಪಾತ್ರಗಳ ದರ್ಶನವಾಗಿದೆ. ಇದರಲ್ಲಿ ಚಂದನ್ ಶೆಟ್ಟಿ, ಭಾವನಾ ಅಪ್ಪು, ಅಮರ್, ಮನಸ್ವಿ, ವಿವಾನ್ ಸುನಿಲ್ ಪುರಾಣಿಕ್, ಅರವಿಂದ ರಾಜ್ ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ. ಇದರಲ್ಲಿ ನಾಲಕ್ಕು ಪಾತ್ರಗಳು ಈ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿವೆ. ಅಂದಹಾಗೆ ಇದೊಂದು ಟೀನೇಜ್ ಕಲ್ಟ್ ಸಿನಿಮಾ. ಈಗಾಗಲೇ ಕಾಲೇಜು ಕೇಂದ್ರಿತವಾದ ಒಂದಷ್ಟು ಸಿನಿಮಾಗಳು ತೆರೆಗಂಡು ಗೆದ್ದಿವೆ. ಆ ಸಾಲಿನಲ್ಲಿ ಈ ಚಿತ್ರವನ್ನೂ ದಾಖಲಾಗುವಂತೆ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಶ್ರಮ ವಹಿಸುತ್ತಿದೆ.

ಸುಬ್ರಮಣ್ಯ ಕುಕ್ಕೆ ಮತ್ತು ಶಿವಲಿಂಗೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ.

ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿಶೇಷವೆಂದರೆ, ಇದುವರೆಗೂ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಂದನ್ ಶೆಟ್ಟಿ ಪಾತ್ರವನ್ನು ಗೌಪ್ಯವಾಗಿಡಲಾಗಿದೆ. ಶಿವರಾತ್ರಿಯಂದು ಚಂದನ್ ಶೆಟ್ಟಿ ಪಾತ್ರ ಪರಿಚಯ ಮಾಡಲಿರೋ ಮೋಷನ್ ಪೋಸ್ಟರ್ ಲಾಂಚ್ ಆಗಲಿದೆ. ಇದೀಗ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರ ಚಿತ್ರೀಕರಣದ ಅಂತಿಮ ಘಟ್ಟದಲ್ಲಿದೆ.

Related Posts