ಬೋರೇಗೌಡನ ಬೆನ್ನಿಗೆ ನಿಲ್ಲದ ಕನ್ನಡದ ಸ್ಟಾರ್ಗಳು! ನಿರ್ದೇಶಕ ಕೆ.ಎಂ.ರಘು ಬೇಸರ » Dynamic Leader
July 23, 2024
ಸಿನಿಮಾ

ಬೋರೇಗೌಡನ ಬೆನ್ನಿಗೆ ನಿಲ್ಲದ ಕನ್ನಡದ ಸ್ಟಾರ್ಗಳು! ನಿರ್ದೇಶಕ ಕೆ.ಎಂ.ರಘು ಬೇಸರ

ಅರುಣ್ ಜಿ.,

ಎಲ್ಲ ಸಿನಿಮಾಗಳೂ ಕೆಜಿಎಫ್ಫು, ಕಾಂತಾರಾನೇ ಆಗಲು ಸಾಧ್ಯವಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ಬಗೆಯ ಕಂಟೆಂಟ್ ಇರುತ್ತದೆ. ಉತ್ತಮ ಸಿನಿಮಾ ಅನ್ನಿಸಿದಾಗ ಅದನ್ನು ಜನ ಮೆಚ್ಚಿ ನೋಡಿದಾಗಲೇ ಅವು ಹಿಟ್ ಅನ್ನಿಸಿಕೊಳ್ಳೋದು. ಬರುವ ಎಲ್ಲ ಸಿನಿಮಾಗಳೂ ಗುಣಮಟ್ಟ ಹೊಂದಿರೋದಿಲ್ಲ ಅನ್ನೋದೂ ನಿಜ. ಆದರೆ ಅಲ್ಲೊಂದು ಇಲ್ಲೊಂದು ಕ್ವಾಲಿಟಿ ಚಿತ್ರಗಳು ಬಂದಾಗ ಅದನ್ನು ಪ್ರೋತ್ಸಾಹಿಸಬೇಕಿರುವುದು ಬರಿಯ ಪ್ರೇಕ್ಷಕರ ಜವಾಬ್ದಾರಿ ಮಾತ್ರವಲ್ಲ, ಇಂಡಸ್ಟ್ರಿ ಕೂಡಾ ಸಾಥ್ ನೀಡಬೇಕು.

ಎಲ್ಲೋ ಕೆಲವು ಸಿನಿಮಾಗಳಿಗೆ ಕಿಚ್ಚ, ರಕ್ಷಿತ್ ಶೆಟ್ಟರ ಥರದವರು ಬಂದು ಕೈ ಹಿಡಿದ ಉದಾಹರಣೆಗಳಿವೆ. ಅದನ್ನು ಬಿಟ್ಟು ಕನ್ನಡದ ಬೇರೆ ಯಾವ ಹೀರೋಗಳೂ ಗುಣಮಟ್ಟದ ಸಿನಿಮಾಗಳು ಬಂದಾಗ ಅದರ ಬೆನ್ನಿಗೆ ನಿಂತು ಗೆಲ್ಲಿಸಿದ್ದು ಕಡಿಮೆ. ತಾವಾಯಿತು, ತಮ್ಮ ಪಾಡಾಯಿತು, ಯಾರು ಗೆದ್ದರೆಷ್ಟು? ಬಿಟ್ಟರೆಷ್ಟು ಎನ್ನುವ ಮನಸ್ಥಿತಿಯ ಸ್ಟಾರುಗಳೇ ಇಲ್ಲಿ ಹೆಚ್ಚು! ಸದ್ಯ ಕನ್ನಡದಲ್ಲಿ ದೊಡ್ಡಟ್ಟಿ ಬೋರೇಗೌಡ ಎನ್ನುವ ಸಿನಿಮಾವೊಂದು ತೆರೆ ಕಂಡಿದೆ. ನಿಜಕ್ಕೂ ಈ ನೆಲದ ಘಮಲಿನ ಸಿನಿಮಾ ಅದು. ಗ್ರಾಮಾಂತರ ಪ್ರದೇಶಗಳಲ್ಲಿ ಒಬ್ಬ ಬಡವ ಒಂದು ಮನೆ ಕಟ್ಟಿಸೋದು ಎಷ್ಟು ಕಷ್ಟ? ಸಣ್ಣದೊಂದು ಗೂಡು ಕಟ್ಟಲು ಈ ವ್ಯವಸ್ಥೆ ಹೇಗೆಲ್ಲಾ ಸತಾಯಿಸಿಬಿಡುತ್ತದೆ… ಅದರ ಜೊತೆಗೆ ಎದುರಾಗುವ ಕೌಟುಂಬಿಕ ಸಮಸ್ಯೆಗಳನ್ನೆಲ್ಲಾ ಸೇರಿಸಿ ನಿರ್ದೇಶಕ ಕೆ.ಎಂ.ರಘು ಚೆಂದದ ಸಿನಿಮಾವೊಂದನ್ನು ರೂಪಿಸಿದ್ದಾರೆ.

ಈ ಹಿಂದೆ ತರ್ಲೆ ವಿಲೇಜ್ ಮತ್ತು ಪರಸಂಗ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದವರು ರಘು. ಪರಸಂಗ ಸಿನಿಮಾದ ʻಮರಳಿಬಾರದೂರಿಗೆ ನಿನ್ನ ಪಯಣʼ ಹಾಡು ಇವತ್ತಿಗೂ ಎಲ್ಲೆಂದರಲ್ಲಿ ಕೇಳಿಸುತ್ತಲೇ ಇರುತ್ತದೆ. ದೊಡ್ಡಟ್ಟಿ ಬೋರೇಗೌಡ ಸಿನಿಮಾದಲ್ಲೂ ಬಹುತೇಕ ಹೊಸ ಮುಖಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಪ್ರಯತ್ನ ಮಾಡಿದ್ದಾರೆ. ಈ ಚಿತ್ರ ತೆರೆಗೆ ಬಂದಿದೆ. ನೋಡಿದವರೆಲ್ಲಾ ಮೆಚ್ಚಿ ಮಾತಾಡಿದ್ದಾರೆ. ವಿಮರ್ಶಕರು ಕೂಡಾ ಅಪಾರವಾಗಿ ಇಷ್ಟ ಪಟ್ಟಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಯಾವೊಬ್ಬ ಸ್ಟಾರ್ ಗಳೂ ಈ ಸಿನಿಮಾವನ್ನು ಪ್ರೋತ್ಸಾಹಿಸಿಲ್ಲ ಅಂತಾ ನಿರ್ದೇಶಕ ರಘು ಬೇಸರಿಸಿಕೊಂಡಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ಬಿಟ್ಟು  ತಮ್ಮ ಆಂತರ್ಯದ ನೋವನ್ನು ಬಹಿರಂಗಗೊಳಿಸಿದ್ದಾರೆ.

Related Posts