ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Yuvanidhi Archives » Dynamic Leader
September 10, 2024
Home Posts tagged Yuvanidhi
ರಾಜ್ಯ

“ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ” ಎಂದು ವಿವೇಕಾನಂದರು ತಿಳಿಸಿದರು: ಸಿದ್ದರಾಮಯ್ಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ, ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು; ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಯುವತಿಯರು 130 ಕೋಟಿ 28 ಲಕ್ಷ ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ ಎಂದು ಹೇಳಿದರು.

ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂ ತಲುಪಿಸುತ್ತಿದ್ದೇವೆ‌. ಇಂಥ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದು ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಹೇಳಿದರು.

ಯುವಕ ಯುವತಿಯರಿಗೆ ಹಣದ ಜತೆಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡಿ ಅವರಿಗೆ ಉದ್ಯೋಗ ಕೊಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ‌. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪ್ರತಿ ನಿರುದ್ಯೋಗಿ ಯುವಕ ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡೀದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು; ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನ ಚಳವಳಿ ನಡೆಯಲಿ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.