ಬೆಂಗಳೂರು: ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಾರ್ ಮತ್ತು ಸ್ಟಾರ್ ಹೋಟೆಲ್‌ಗಳಿಗೆ ಮಧ್ಯರಾತ್ರಿ ಒಂದು ಗಂಟೆಯವರೆಗೆ ತೆರೆಯಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಖಂಡಿಸಿದ್ದಾರೆ.
“ಬಡ ಬೀದಿ ವ್ಯಾಪಾರಿಗಳಿಗೆ ರಾತ್ರಿ ಹತ್ತು ಗಂಟೆಯಾದರೆ ಸಾಕು, ದರ್ಪದಿಂದ ಕಿರುಕುಳ ನೀಡಿ ಬಂದ್ ಮಾಡಿಸುತ್ತಾರೆ. ಮದ್ಯ ವ್ಯಸನಿಗಳಿಂದಲೇ ಅಪರಾಧ ಹೆಚ್ಚಾಗುತ್ತಿದ್ದರೂ ಅದಕ್ಕೆ ಸಮಯ ವಿಸ್ತರಿಸಿ ಇನ್ನಷ್ಟು ಹೆಚ್ಚಿಸಲು ಅನುವು ಮಾಡಿಕೊಡುವ ಸರ್ಕಾರಕ್ಕೆ ಇತ್ತೀಚೆಗೆ ಕುಡುಕರ ಮೇಲೆ ಒಲವು ಹೆಚ್ಚಾದಂತೆ ಕಾಣುತ್ತಿದೆ. ಇತ್ತೀಚೆಗೆ ಸ್ಕಾಚ್ ಗಳ ಬೆಲೆಯಲ್ಲಿ ತೀವ್ರ ಇಳಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕುಡಿತಕ್ಕೆ ಅವಕಾಶ ಕೊಟ್ಟು ರಾಜ್ಯದ ಶಾಂತಿ ನೆಮ್ಮದಿಯನ್ನು ಹಾಳು ಮಾಡಲು ಸರ್ಕಾರ ಹೊರಟಿದೆಯೇ ಎಂದು ಪ್ರಶ್ನಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಅಪರಾಧ ಪ್ರಕ್ರಿಯೆಗಳು ಮದ್ಯ ವ್ಯಸನಿಗಳಿಂದಲೇ ಹೆಚ್ಚಾಗಿ ನಡೆಯುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯಾದರೂ ಸರಕಾರಕ್ಕೆ ಇರಬೇಡವೇ? ಇದನ್ನು ತಡೆಗಟ್ಟುವ ಬದಲು ಅದನ್ನು ಸುಗಮಗೊಳಿಸಲು ಹೊರಟಿರುವುದು ಖಂಡನೀಯ.
ಸರ್ಕಾರವು ಕೇವಲ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಾಡುವ ಇಂತಹ ನಡೆಯನ್ನು ನಮ್ಮ ವೆಲ್ಫೇರ್ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು” ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.