ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಭಾರತೀಯ ಕಮ್ಯುನಿಸ್ಟ್ ಪಕ್ಷ Archives » Dynamic Leader
October 5, 2024
Home Posts tagged ಭಾರತೀಯ ಕಮ್ಯುನಿಸ್ಟ್ ಪಕ್ಷ
ರಾಜಕೀಯ

‘ದಿ ಹಿಂದೂ’ ದಿನಪತ್ರಿಕೆಗೆ ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನೀಡಿದ ಸಂದರ್ಶನ.

ಪ್ರಧಾನಿಯವರ ಚುನಾವಣಾ ಭಾಷಣಗಳಲ್ಲಿ ಸತ್ಯಾಂಶವಿಲ್ಲ ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ‘ದಿ ಹಿಂದೂ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ‘ದಿ ಹಿಂದೂ’ ಪತ್ರಕರ್ತ ಸಂದೀಪ್ ಭೂಕನ್ ಕೇಳಿದ ಪ್ರಶ್ನೆಗಳು ಹಾಗೂ ಸೀತಾರಾಂ ಯೆಚೂರಿ ಅವರ ಉತ್ತರ ಹೀಗಿದೆ:

ಪ್ರಶ್ನೆ: ಲೋಕಸಭೆ ಚುನಾವಣೆಯ ಮೊದಲ ನಾಲ್ಕು ಹಂತದ ಮತದಾನ ಮುಗಿದಿದ್ದು, ಇದುವರೆಗಿನ ಚುನಾವಣೆಗಳು ತಮ್ಮ ಪರವಾಗಿವೆ ಎಂದು ಪ್ರತಿಪಕ್ಷಗಳು ಬಹಳ ಉತ್ಸುಕವಾಗಿವೆ. ಅವರು ಹೀಗೆ ಹೇಳಲು ಆಧಾರವೇನು?

ಸೀತಾರಾಂ ಯೆಚೂರಿ: ಕಳೆದೆರಡು ಚುನಾವಣೆಗಳಲ್ಲಿ ಇದ್ದಷ್ಟು ಜನರಲ್ಲಿ ಬಿಜೆಪಿ ಪರ ಒಲವು ಇಲ್ಲದಿರುವುದೇ ಇದಕ್ಕೆ ಕಾರಣ. ಇದು ಮೊದಲ ಸಂಕೇತವಾಗಿದೆ. ಎರಡನೆಯದಾಗಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯವರು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡದೇ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಏನನ್ನೋ ಹೇಳುತ್ತಿದ್ದಾರೆ. ಅದಕ್ಕೆ ಜನರು ಮರುಳಾಗುತ್ತಿಲ್ಲ.

ಅವರು ನಿಮ್ಮ (ಹಿಂದೂಗಳ) ಆಸ್ತಿಯನ್ನು ಕಸಿದು ಮುಸ್ಲಿಮರಿಗೆ ಕೊಡುತ್ತಾರೆ… ಅವರು ನಿಮ್ಮ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡುತ್ತಾರೆ… ಅವರು ನಿಮ್ಮ ಮಾಂಗಲ್ಯವನ್ನೂ ಕಿತ್ತುಕೊಳ್ಳುತ್ತಾರೆ ಎಂದು ಹೇಳಿದ್ದನ್ನು ಜನ ವಿಚಿತ್ರವಾಗಿ ಮತ್ತು ತಮಾಷೆಯಾಗಿ ಕಂಡರು.

ಬೆಲೆ ಏರಿಕೆ, ಜೀವನೋಪಾಯದ ಸಮಸ್ಯೆ ಹಾಗೂ ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿಜೆಪಿ ಏನಾದರೂ ಮಾತನಾಡುತ್ತದೆಯೇ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಇಂದು ದೇಶದ 90% ಜನರು ಬದುಕಲು ಸಾಲ ಮಾಡುತ್ತಿದ್ದಾರೆ ಎಂದು ನೀವು ಊಹಿಸಬಲ್ಲಿರಾ? ಕೌಟುಂಬಿಕ ಉಳಿತಾಯವು ಹಿಂದೆಂದೂ ಇಲ್ಲದಂತೆ ಕಡಿಮೆಯಾಗಿದೆ. ಅದೇ ರೀತಿ ಪ್ರತಿ ಕುಟುಂಬವು ತೆಗೆದುಕೊಂಡ ಸಾಲವೂ ಸಹ ಹಿಂದೆಂದೂ ಇಲ್ಲದಂತೆ ಹೆಚ್ಚಾಗಿರುತ್ತದೆ. ಇವುಗಳೇ ಇಂದಿನ ನಿಜವಾದ ಸಮಸ್ಯೆಗಳಾಗಿವೆ.

ಈ ವಿಷಯಗಳ ಬಗ್ಗೆ ಪ್ರಧಾನಿಯಾಗಲೀ ಅಥವಾ ಬಿಜೆಪಿಯಾಗಲೀ ಮಾತನಾಡುತ್ತಿಲ್ಲ. ಹೀಗಾಗಿ ಅವರು ಯಾವುದೇ ಜನರ ಸಮಸ್ಯೆಗಳ ಬಗ್ಗೆ ಮಾತನಾಡದೇ ಇರುವುದು ವಿರೋಧ ಪಕ್ಷಗಳಿಗೆ ನೆರವಾಗುತ್ತಿದೆ. ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ ಪಕ್ಷಗಳು ತಮ್ಮ ಪ್ರಚಾರದ ಸಮಯದಲ್ಲಿ ಜನರ ಸಮಸ್ಯೆಗಳನ್ನು ಎತ್ತಿ ಹೇಳುವ ಮೂಲಕ ಆಳವಾದ ರೀತಿಯಲ್ಲಿ ಜನರಿಗೆ ಹತ್ತಿರವಾಗುತ್ತಿದ್ದಾರೆ.

ಪ್ರಶ್ನೆ: ಪ್ರತಿಪಕ್ಷಗಳ ಪ್ರಕಾರ ಈಗ ಪರಿಸ್ಥಿತಿ ಬದಲಾಗಿರುವ ರಾಜ್ಯಗಳು ಯಾವುವು?

ಸೀತಾರಾಂ ಯೆಚೂರಿ: ಹಲವು ರಾಜ್ಯಗಳಲ್ಲಿ ಬಿಜೆಪಿ ಸಂಖ್ಯಾಬಲ ಕುಸಿಯಲಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಶತಾಯಗತಾಯ ಪ್ರಯತ್ನಿಸಿದೆ. ಆದರೂ ಅವರು ಅಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅವರ ಸಂಖ್ಯೆ ಕಡಿಮೆಯಾಗುತ್ತದೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಸೋಲನ್ನು ಎದುರಿಸಲಿದ್ದಾರೆ. ಗುಜರಾತಿನಲ್ಲೂ ಮೊದಲಿನಂತೆ ಗೆಲ್ಲಲು ಸಾಧ್ಯವಿಲ್ಲ. ಅಲ್ಲಿ ಸೋಲು ಅನುಭವಿಸುತ್ತಾರೆ. ರಾಜಸ್ಥಾನದಲ್ಲೂ ಅವರು ಸೋಲುವುದು ಖಚಿತ.

ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತದೆ. ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ಸೋಲುತ್ತದೆ. ಬಿಹಾರದಲ್ಲಿ ಸಹಜವಾಗಿಯೇ ಅವರು ಮೊದಲು ಪಡೆದಷ್ಟು ಸ್ಥಾನಗಳನ್ನು ಈ ಬಾರಿ ಪಡೆಯಲು ಸಾಧ್ಯವಿಲ್ಲ. ಈಶಾನ್ಯ ರಾಜ್ಯಗಳಲ್ಲಿಯೂ ಸಹ ಈ ಹಿಂದೆ ಪಡೆದಷ್ಟು ಸ್ಥಾನಗಳನ್ನು ಈ ಬಾರಿ ಪಡೆಯಲು ಆಗದು. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಲಾಭವಾಗುವುದಿಲ್ಲ ಎಂದು ಹೇಳಿದ್ದಾರೆ.