ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರನ್ನು ಗಾಜಾ ಗಡಿಗೆ ಬಂದು ಇಸ್ರೇಲ್ ಮಾಡಿರುವ ವಿನಾಶವನ್ನು ನೋಡುವಂತೆ ಹಮಾಸ್‌ನ ಹಿರಿಯ ನಾಯಕರೊಬ್ಬರು ಆಹ್ವಾನಿಸಿದ್ದಾರೆ.
“ಗಾಜಾ ಗಡಿಗೆ ಬಂದು, ಗಾಜಾದ ಜನರ ವಿರುದ್ಧ ನಡೆದ ವಿಧ್ವಂಸಕ ಕೃತ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳುವಂತೆ ನಾವು ಅವರಿಗೆ ಕರೆ ನೀಡುತ್ತೇವೆ. 50 ದಿನಗಳಲ್ಲಿ, ಗಾಜಾದ ರಕ್ಷಣೆಯಿಲ್ಲದ ಮನೆಗಳ ಮೇಲೆ ಇಸ್ರೇಲ್ 40,000 ಟನ್ ಸ್ಫೋಟಕಗಳನ್ನು ಬೀಳಿಸಿದೆ. ಮತ್ತು ಅಮೆರಿಕ, ಇಸ್ರೇಲ್ ನೊಂದಿಗೆ ಸಂಬಂಧಗಳನ್ನು ವಿಸ್ತರಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಕುರಿತು ಮರುಪರಿಶೀಲನೆ ಮಾಡಬೇಕು” ಎಂದು ಹಮಾಸ್‌ನ ಹಿರಿಯ ನಾಯಕ ಒಸಾಮಾ ಹಮ್ದಾನ್ ಹೇಳಿದ್ದಾರೆ.
ಈ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ್ದ ಎಲಾನ್ ಮಸ್ಕ್, ಹಮಾಸ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಮತ್ತು ಎಲಾನ್ ಮಸ್ಕ್ ಅವರು ದ್ವೇಷ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು.