ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನಟಿ ಶ್ರುತಿ Archives » Dynamic Leader
November 7, 2024
Home Posts tagged ನಟಿ ಶ್ರುತಿ
ಸಿನಿಮಾ

ಅರುಣ್ ಜಿ.,

ಲಂಕಾಸುರ ಚಿತ್ರದ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ಸಿನಿಮಾ ನಟಿ ಮಾಲಾಶ್ರೀ ಬಿಡುಗಡೆ ಮಾಡಿದರು.

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಹಾಗೂ ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ “ಲಂಕಾಸುರ” ಚಿತ್ರಕ್ಕಾಗಿ “ಬಹದ್ದೂರ್”  ಚೇತನ್ ಕುಮಾರ್ ಬರೆದಿರುವ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ.  ಇತ್ತೀಚಿಗೆ ಅದ್ದೂರಿಯಾಗಿ ನಡೆದ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

‘ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಮಾಲಾಶ್ರೀ ಹಾರೈಸಿದರು.

‘ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ “ಮಾದೇಶ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ.‌ “ಲಂಕಾಸುರ” ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ ನಿರ್ಮಾಪಕರು ಆಗಿದ್ದಾರೆ ಒಳ್ಳೆಯದಾಗಲಿ’ ಎಂದರು ನಟಿ ಶೃತಿ.

ನಟ ಶ್ರೀನಗರ ಕಿಟ್ಟಿ‌, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸೇರಿದಂತೆ ಅನೇಕ ಗಣ್ಯರು ತಮ್ಮ ಮಾತುಗಳ ಮೂಲಕ ಶುಭ ಕೋರಿದರು. ‘ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ನೋಡಿ ಹಾರೈಸಿ’ ಎಂದರು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್.

‘ಕೊರೋನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ “ಲಂಕಾಸುರ” ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೆವು. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ‌. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ‌. ನೋಡಿ ಪ್ರೋತ್ಸಾಹ ನೀಡಿ’ ಎಂದರು ನಾಯಕ  ವಿನೋದ್ ಪ್ರಭಾಕರ್.

‘ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. “ಮಾರ್ಡನ್ ಮಹಾಲಕ್ಷ್ಮಿ” ಹಾಡನ್ನು ನಾನೇ ಹಾಡಿದ್ದೇನೆ’ ಎಂದು ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹೇಳಿದರು.

ನಿರ್ದೇಶಕ ಪ್ರಮೋದ್ ಕುಮಾರ್, ಛಾಯಾಗ್ರಾಹಕ ಸುಜ್ಞಾನ್, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಮುಂತಾದವರು “ಲಂಕಾಸುರ” ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ

ಅರುಣ್ ಜಿ.,

ಬೆಂಗಳೂರು: ನಟಿ ಶೃತಿ ಅವರ ಮನೆಯ ಮೂರನೇ ತಲೆಮಾರು ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದೆ. ಇತ್ತೀಚೆಗೆ ನಟ ಶರಣ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದೊಡ್ಡಮ್ಮ ಶೃತಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದೆ. ಮಾವ ಶರಣ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ನಡುವೆ ಕೀರ್ತಿ ಕೃಷ್ಣ ಯಾವ ಸಿನಿಮಾದೊಂದಿಗೆ ಚಿತ್ರರಂಗದಲ್ಲಿ ಲಾಂಚ್ ಆಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಚಿತ್ರರಂಗದಲ್ಲಿ ಸಾಕಷ್ಟು ಜನ ಕೀರ್ತಿ ಕೃಷ್ಣ ಅವರನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದರು. ಅಂತಿಮವಾಗಿ ಈಗ ಕೀರ್ತಿ ತಮ್ಮ ಮೊದಲ ಸಿನಿಮಾವನ್ನು ಒಪ್ಪಿದ್ದಾರೆ. ಅದು ಧರಣಿ. ಮನೋಜ್ ನಾಯಕನಾಗಿ ನಟಿಸುತ್ತಿರುವ ʻಧರಣಿʼ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು ಈ ಚಿತ್ರದಲ್ಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಈಗ ಕೀರ್ತಿ ಆಯ್ಕೆಯಾಗುವ ಮೂಲಕ ʻಧರಣಿʼಯ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿದೆ.

ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶೃತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಮುಖಕ್ಕೆ ಬಣ್ಣ ಹಚ್ಚಿದ್ದವರು ಕೀರ್ತಿ. ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಬೇಕು ಅಂತಾ ಕಾದಿದ್ದ ಕೀರ್ತಿ ಮತ್ತು ಅವರ ಕುಟುಂಬದವರಿಗೆ ʻಧರಣಿʼಯ ಕತೆ ಅಪಾರವಾಗಿ ಇಷ್ಟವಾಗಿದ್ದರಿಂದ ಈ ಚಿತ್ರದ ಮೂಲಕ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.

ಶೃತಿ ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ತಂದೆ ಕೃಷ್ಣ, ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಕೃಷ್ಣ ಅವರ ತಾಯಿ ಕೂಡಾ ನಟಿಯಾಗಿದ್ದವರು. ನಂತರ ಶೃತಿ, ಶರಣ್ ಕೂಡಾ ಬಣ್ಣದ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರು. ಈಗ ಮೂರನೇ ತಲೆಮಾರಿನ ಕೀರ್ತಿ ಕೃಷ್ಣ ಕೂಡಾ ಭರವಸೆ ಮೂಡಿಸಿದ್ದಾರೆ. 

ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನದ ʻಧರಣಿʼ ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ, ಶ್ರೀನಿಧಿ ಡಿ.ಎಸ್.ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ, ಟೈಗರ್ ಶಿವು ಸಾಹಸ ಸಂಯೋಜನೆ ಇದೆ.