ಕೊಲ್ಕತ್ತ: ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಶ್ಚಿಮ ಬಂಗಾಳ ಸರ್ಕಾರ ನೀಡುತ್ತಿರುವ ಕಲ್ಯಾಣ ಯೋಜನೆಗಳನ್ನು ತಡೆಯಲು ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ರೀತಿ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೂರುಗಳು ಬಂದಿವೆ. ತಮ್ಮ ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಲಾಭವನ್ನು ಸಾಮಾನ್ಯ ಜನರಿಗೆ ಸಿಗದಂತೆ ತಡೆಯಲು ಬಿಜೆಪಿಯು ರಾಜ್ಯದಲ್ಲಿ ಜನರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇಂದು ರಾಜ್ಯ ಸಚಿವಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೆ ಮುನ್ನ ಅನೇಕ ಆಧಾರ್ ಕಾರ್ಡ್‌ಗಳನ್ನು ಏಕೆ ನಿಷ್ಕ್ರಿಯಗೊಳಿಸಲಾಯಿತು? ಬಹುತೇಕ ‘ಮಾಟುವಾ’ ಸಮುದಾಯದ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಕಾರ್ಡ್‌ಗಳನ್ನೂ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.