ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕರ್ನಾಟಕ ಮುಸ್ಲಿಂ ಯುನಿಟಿ Archives » Dynamic Leader
September 18, 2024
Home Posts tagged ಕರ್ನಾಟಕ ಮುಸ್ಲಿಂ ಯುನಿಟಿ
ರಾಜ್ಯ

ಬೆಂಗಳೂರು: ಕರ್ನಾಟಕ ಮುಸ್ಲಿಮರ ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸೂಕ್ತ ಹಾಗೂ ಶೀಘ್ರವಾಗಿ ಈಡೇರಿಸಲು ಒತ್ತಾಯಿಸಿ ಇದೇ ಆಗಸ್ಟ್ 22 ರಂದು ಕರ್ನಾಟಕ ಮುಸ್ಲಿಂ ಯುನಿಟಿ ವತಿಯಿಂದ ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಚಿಂತನಾ ಸಭೆಯನ್ನು ಆಯೋಜಿಸಲಾಗಿತ್ತು.

ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲ್ಬುರ್ಗಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಚಿಂತನಾ ಸಭೆಯಲ್ಲಿ, ರಾಜ್ಯ ಗೌರವ ಅಧ್ಯಕ್ಷರಾದ ಜಿ.ಎ.ಭಾವ, ಔಕಾಫ್ ಮಂಡಳಿ ಮಾಜಿ ಅಧ್ಯಕ್ಷರಾದ ಶಾಫಿ ಸಹದಿ, ರಾಜ್ಯ ಯುವ ಅಧ್ಯಕ್ಷ ಎಂ.ಎನ್.ನೂರ್ ಅಹಮದ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್, ಕಿತ್ತೂರು ಕರ್ನಾಟಕ ವಿಭಾಗದ ಸಂಚಾಲಕ ಎಂ.ಎಲ್.ಸರಕಾವಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚಿಂತನಾ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್ ಮುಂತಾದವರಿಗೆ ಕಳುಹಿಸಿ ಕೊಡಲಾಗಿದೆ.

ಚಿಂತನಾ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಮತ್ತು ಮುಖ್ಯಮಂತ್ರಿಗಳು ಹಾಗೂ ಇತರರಿಗೆ ಕಳುಹಿಸಿಕೊಟ್ಟ ಮನವಿ ಪತ್ರದ ಸಾರಾಂಶ ಈ ರೀತಿಯಿದೆ: ನಮ್ಮ ಕರ್ನಾಟಕ ರಾಜ್ಯವು ಸೂಫಿ, ಶರಣರು, ದಾಸರ ನೆಲೆಯಬೀಡಾಗಿದೆ. ನ್ಯಾಯ, ಸೌಹಾರ್ದತೆ, ಸಹಬಾಳ್ವೆಯ ಕನ್ನಡನಾಡಾಗಿದೆ. ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಹಾಗೂ ಸಮ ಸಮಾಜದ ಗುರಿಯೊಂದಿಗೆ ಬಸವಣ್ಣ, ಟಿಪ್ಪುಸುಲ್ತಾನ್, ಡಿ.ದೇವರಾಜ ಅರಸ್ ಅವರಂತಹ ನೂರಾರು ದಿವಂಗತ ಹುತಾತ್ಮರೆಲ್ಲರೂ ನಮ್ಮೊಂದಿಗೆ ಸೈದ್ಧಾಂತಿಕವಾಗಿ ಬದುಕಿ, ಪರಿವರ್ತನೆಯ ಸಾಮಾಜದ, ನ್ಯಾಯ ಬುನಾದಿಯ, ಸಮಾಜ ನಿರ್ಮಾಣದ ನಾಡಿಗೆ ಜೀವತುಂಬಿದ್ದಾರೆ.

ಆದರೆ, ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆಯುಳ್ಳ ಮುಸ್ಲಿಮರ ಸಾಮಾಜಿಕ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಮುಸ್ಲಿಮರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ.

ನಮ್ಮನ್ನು ಆಳಿದ ಜಾತ್ಯತೀತ / ಕೋಮುವಾದಿ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಸರ್ಕಾರಗಳು ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಸರಿಯಾದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಲಿಲ್ಲ. ಸರ್ಕಾರಗಳು ಇವುಗಳ ಅನುಷ್ಠಾನಕ್ಕಾಗಿ ಸೂಕ್ತ ಬಜೆಟ್ ಗಳ ಘೋಷಣೆಯನ್ನೂ ಮಾಡಲಿಲ್ಲ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಿದರೂ ಆಯಾ ಪಕ್ಷಗಳ ಯೋಗ್ಯತೆಗೆ ತಕ್ಕಂತೆ ಮುಸ್ಲಿಮರನ್ನು ಅಭಿವೃದ್ಧಿಯಿಂದ ಹೊರಗಿಡುವ ಅಥವಾ ತಾರತಮ್ಯಮಾಡುವ ಯೋಚನೆಗಳಿಂದ ಮಾತ್ರ ಬದಲಾಗಲಿಲ್ಲ; ಇದು ಖಂಡನೀಯ.

ನಮ್ಮ ದೇಶ ಸ್ವಾತಂತ್ರ್ಯಗೊಂಡು ಇದೀಗ 78 ವರ್ಷಗಳು ಕಳೆದಿದೆ. ಆದರೆ, ಭಾರತೀಯ ಮುಸ್ಲಿಮರು ವಿಶೇಷವಾಗಿ, ಕರ್ನಾಟಕದ ಅತಿಹೆಚ್ಚು ಮುಸ್ಲಿಮರು ಬಡತನ, ನಿರುದ್ಯೋಗ, ಅನಕ್ಷರತೆಯಲ್ಲಿ ನಲುಗುತ್ತಿರುವುದು, ಕೋಮು ದೌರ್ಜನ್ಯಗಳಿಂದ ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕಳೆದು ಕೊಳ್ಳುತ್ತಿರುವುದು ಶೋಚನಿಯ.

ಮುಸ್ಲಿಮರು ಎಲ್ಲಾ ಕ್ಷೆತ್ರ ಗಳಲ್ಲೂ ಹಿಂದುಳಿದಿದ್ದಾರೆ ಎಂಬ ನಗ್ನ ಸತ್ಯವನ್ನು ಡಾ.ಗೋಪಾಲ್ ಸಿಂಗ್ ವರದಿ, ಜಸ್ಟೀಸ್ ರಾಜೇಂದ್ರ ಸಾಚಾರ್ ಸಮಿತಿಯ ವರದಿ, ಜಸ್ಟೀಸ್ ರಂಗನಾಥ್ ಮಿಶ್ರ ವರದಿ, ಪ್ರೊಫೆಸರ್ ಕುಂಡು ಮುಂತಾದ ಕೇಂದ್ರ ಸರ್ಕಾರಗಳು ನೇಮಿಸಿದ ಸಮಿತಿ-ಆಯೋಗಗಳೇ ಮುಸ್ಲಿಮರ ಈ ಚಿಂತಾಜನಕ ದುಸ್ಥಿತಿಗಳನ್ನು ಬಹಿರಂಗ ಪಡೆಸಿವೆ.

ಅಲ್ಲದೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಆಯೋಗಗಳು ಸಹ ಮುಸ್ಲಿಮರು ಹಿಂದುಳಿದಿದ್ದಾರೆ ಮತ್ತು ಅಭಿವೃದ್ಧಿಯಿಂದಲೂ ವಂಚಿತರಾಗಿದ್ದಾರೆ ಎಂದು ಹೇಳಿವೆ. ಇಷ್ಟಲ್ಲದೆ, ಮುಸ್ಲಿಮರಿಗಾಗಿ ಸಂವಿಧಾನಬದ್ದವಾಗಿ ಜಾರಿಗೊಂಡಿದ್ದ ಮೀಸಲಾತಿಯನ್ನು ಸಹ ಕಿತ್ತುಕೊಳ್ಳಲಾಗಿದೆ.

ರಾಜ್ಯದಲ್ಲಿ OBC ಯ ಹಾವನೂರು, ಪ್ರೊ.ರವಿವರ್ಮ ಕುಮಾರ್ ಆಯೋಗಗಳಿಂದ ಹಿಡಿದು ಡಾ.ಸಿ.ಎಸ್.ದ್ವಾರಕನಾಥ್ ಆಯೋಗದವರೆಗೆ ಸ್ವತಂತ್ರ ನಂತರ ಕಳೆದ 78 ವರ್ಷಗಳಲ್ಲಿ ಬಂದಿರುವ ಎಲ್ಲ ಕೇಂದ್ರ, ರಾಜ್ಯ ಆಯೋಗಗಳು ಸಹ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ.

ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ಅಧ್ಯಯನದ ಪೂರ್ಣವರದಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿತ್ತು.

ವೀರಪ್ಪ ಮೊಯಿಲಿ ಅವರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿ, ಅಂದಿನ ಅಧ್ಯಕ್ಷರಾಗಿದ್ದ ಕೆ.ರೆಹಮಾನ್ ಖಾನ್ ನೇತೃತ್ವದಲ್ಲಿ ಕರ್ನಾಟಕದ ಮುಸ್ಲಿಮರ ಸಾಮಾಜಿಕ, ಆರ್ಥಿಕ ವರದಿಯ ಆಧಾರದ ಮೇಲೆ ಮೊದಲ ಬಾರಿಗೆ ಶೇ.6ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು.

ನಂತರ ರಾಜ್ಯದ ಮೀಸಲಾತಿ ಮಿತಿ ಶೇ.50ಕ್ಕೂ ಮೀರಿ ಹೆಚ್ಚಳವಾದ ಕಾರಣ, ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾದ ನಂತರ, ಮತ್ತೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಹಿಂದಿನಂತೆಯೇ ಕಲ್ಪಿಸಲಾಯಿತು. ಇದೀಗ, ಮುಸ್ಲಿಮರ ಅಭಿವೃದ್ಧಿಗೆ ಒಂದಷ್ಟು ಆಸರೆಯಾಗಿದ್ದ ಆ ಮೀಸಲಾತಿಯನ್ನೂ ಸಹ ಕಿತ್ತುಕೊಳ್ಳಲಾಗಿದೆ.

ಇಂತಹ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದ, ತಾರತಮ್ಯಕ್ಕೆ ಒಳಗಾದ, ಅಭಿವೃದ್ಧಿಯಿಂದ ವಂಚನೆಗೆ ಒಳಗಾದ, ಕೋಮುವಾದಿಗಳ ದೌರ್ಜನ್ಯಕ್ಕೆ ಒಳಗಾದ ಹಾಗೂ ರಾಜಕೀಯವಾಗಿ ಸಮಾನ ಪಾಲುಸಿಗದ ಮುಸ್ಲಿಮರಾದ ನಾವು ನಮ್ಮ ಹಕ್ಕುಗಳಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಈ ಕೆಳಕಂಡ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ.

ಸರಕಾರಕ್ಕೆ ನಮ್ಮ ಹಕ್ಕೋತ್ತಾಯಗಳು:
ವಕ್ಫ್ ಮಂಡಳಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಕ್ಫ್ನ ಹಕ್ಕು ಮತ್ತು ಸ್ವತಂತ್ರವನ್ನು ಮೋಟುಕುಗೊಳಿಸುವ ಕೇಂದ್ರ ಸರ್ಕಾರದ ಹೊಸ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯವನ್ನು ಕೈಗೊಳ್ಳಬೇಕು.

ಒಬಿಸಿ ಮುಸ್ಲಿಂ 2B ಮೀಸಲಾತಿಯನ್ನು ಮರುಸ್ಥಾಪಿಸಬೇಕು. 4% ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು.

ಸ್ಥಳೀಯವಾಗಿ ನಡೆಯುವ ಚುನಾವಣೆಗಳಲ್ಲಿ, ಒಬಿಸಿ ಮೀಸಲಾತಿಯಲ್ಲಿ ಪ್ರಬಲ ಜಾತಿಗಳಿಂದ ಮುಸ್ಲಿಮರು ಅವಕಾಶ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಈ ಮೀಸಲಿನಲ್ಲಿ ಒಳಮೀಸಲು ತಂದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.

ಅತಿ ಹಿಂದುಳಿದ ನದಾಫ್ – ಪಿಂಜಾರ ಸಮುದಾಯಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ / ಸಕ್ರಿಯಗೊಳಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು.

ರಾಜ್ಯದ ಮುಸ್ಲಿಮ್ ಲೈಸನ್ಸ್ ಗುತ್ತಿಗೆದಾರರಿಗೆ ಆಧ್ಯತೆ ಹಾಗೂ ವಿಶೇಷ ಅವಕಾಶಗಳನ್ನು ನೀಡಬೇಕು.

ರಾಜಕೀಯ

ಬೆಂಗಳೂರು: “ನೇರ ಭಾಗಿಯಾಗದ ಆರ್ಥಹೀನ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಯೋಜಿಸಿ ಸಿಲುಕಿಸಲಾಗಿದೆ.  ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಘಿ ಪ್ರೇರಿತ ಪಕ್ಷಗಳು ಹೊರಟಿವೆ. ಇದು ಜಾತಿ ಹಾಗೂ ಕೋಮು ಭ್ರಷ್ಟರ ನಡೆಯಾಗಿದೆ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ.

“ಜನಪರ ಆಡಳಿತವನ್ನು ಸಹಿಸಲಾರದೆ, ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಖುರ್ಚಿಯ ಆಸೆಗಾಗಿ ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಇದರ ಪ್ರೇರಣೆಯ ಭಾಗವಾಗಿಯೇ ರಾಜ್ಯಪಾಲರು ಈ ಆದೇಶವನ್ನು ನೀಡಿದ್ದಾರೆ ಎಂಬ ಗುಮಾನಿ ಪ್ರತಿ ಕರ್ನಾಟಕದ ಪ್ರಜೆಗೂ ಮೂಡಿದೆ” ಎಂದು ಹೇಳಿದ್ದಾರೆ.

“ಪ್ರಮುಖ ಹಾಗೂ ವಿಷೆಶವಾಗಿ ಶೋಷಿತ, ದಲಿತ, ಅಹಿಂದ, ಮುಖಂಡರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೊದಲಿನಿಂದಲೂ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ ಎಂಬುದು ಬಹಿರಂಗದ ಸತ್ಯದ ವಿಷಯ” ಎಂದು ಹೇಳಿದ್ದಾರೆ.

“ಈಗಾಗಲೇ ನಡೆಯುತ್ತಿರುವ ರಾಷ್ಟ್ರ ಮಟ್ಟದಲ್ಲಿ ಹಿಂದುಳಿದ ನಾಯಕರನ್ನು ಮೂಲೆಗುಂಪು ಮಾಡುವ ಪ್ರಕ್ರಿಯೆಯಲ್ಲಿ ಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವುದರ ಹಿಂದೆ ಹಲವಾರು ರಾಜಕೀಯ ಕಾರಣಗಳಿವೆ.

ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕತ್ವವನ್ನು ಕೊನೆಗಾಣಿಸಬಹುದು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಭವಿಷ್ಯದಲ್ಲಿ ಕರ್ನಾಟಕದ ರಾಜಕಾರಣದಿಂದ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರ ಇಡಬಹುದು ಮತ್ತು ಸಿದ್ದರಾಮಯ್ಯರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆ ಮೂಲಕ ರಾಜ್ಯದ ಸಮಸ್ತ ಹಿಂದುಳಿದ ವರ್ಗಗಳು ಅಧಿಕಾರ ನಡೆಸಲು ಅಸಮರ್ಥರು ಎಂದು ಬಿಂಬಿಸಬಹುದು ಎನ್ನುವ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ; ಇದು ಖಂಡನೀಯ. ಅಲ್ಲದೆ ಇದು ಕೋಮುವಾದಿ ರಾಜಕೀಯದ ಭಾಗವೇ ಆಗಿದೆ” ಎಂದು ಕಿಡಿಕಾರಿದ್ದಾರೆ.

“ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತಮ್ಮ ಸರಕಾರದಲ್ಲೇ ತನಿಖಾ ಆಯೋಗವನ್ನು ರಚಿಸಿರುವ ದೇಶದ ಏಕೈಕ ರಾಜಕಾರಣಿ ಸಿದ್ದರಾಮಯ್ಯ. ಇದು ಪ್ರತಿ ಅಹಿಂದ ವರ್ಗಗಳ ಹೆಮ್ಮೆಯು ಕೂಡ” ಎಂದು ಶ್ಲಾಘಿಸಿದ್ದಾರೆ.

“ಹಿಂದೆಯೂ ಸಹ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ಮತ್ತಿತರರ ವಿರುದ್ಧ ಇಂತಹುದೇ ಷಡ್ಯಂತ್ರಗಳನ್ನು ರೂಪಿಸಲಾಗಿತ್ತು. ಆದರೆ, ಅಂದಿನ ಅಂತಹ ಅಹಿಂದ ವಿರೋಧಿ ಕುತಂತ್ರಗಳು ಇಂದು ನಡೇಯುವುದಿಲ್ಲ. ಇಂದು ಮುಸ್ಲಿಂ, ದಲಿತ, ಶೋಷಿತ ಸಮುದಾಯಗಳು ಜಾಗೃತವಾಗಿವೆ. ಎಂಬುದನ್ನು ಕರ್ನಾಟಕದ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳು ಆರಿಯ ಬೇಕಿದೆ.

ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ನಾಯಕರು ಈ ಮಟ್ಟದ ಕೊಳಕು ಹಾಗೂ ಅಪ್ರಬುದ್ಧ ರಾಜಕೀಯಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಶೋಷಿತರ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವ ಅನಿವಾರ್ಯತೆಯನ್ನು ನೀವೇ ರಾಜ್ಯದಲ್ಲಿ ನಿರ್ಮಾಣ ಮಾಡುತ್ತೀದ್ದೀರ” ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

“ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಿ, ಸಿದ್ದರಾಮಯ್ಯರವರನ್ನು ದುರ್ಬಲ ಗೊಳಿಸುವ ಈ ನೀಚ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿ ತಾಲೂಕುಗಳಲ್ಲೂ ಹೋರಾಟ ನಡೆಸಲಾಗುವುದು” ಎಂದು ಹೇಳಿದ್ದಾರೆ.

“ಸಾಂವಿಧಾನಿಕ ಹುದ್ದೆಯಲ್ಲಿರುವ ಮಾನ್ಯ ರಾಜ್ಯಪಾಲರು ಒಂದು ರಾಜಕೀಯ ಪಕ್ಷದ ಪ್ರತಿನಿದಿಯಂತೆ ವರ್ತಿಸುತ್ತಿರುವುದು ಅಕ್ಷಮ್ಯ ಹಾಗೂ ಸಂವಿಧಾನ ವಿರೋಧಿಯಾಗಿದೆ. ಇದು ಪ್ರಜಾಪ್ರಭುತ್ವದ ನಡೆಯಲ್ಲ” ಎಂದು ಖಂಡಿಸಿದ್ದಾರೆ.  

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯು ರಾಜಕೀಯ ಪ್ರೇರಿತವಾಗಿ ಮಾಡಿರುವ ಸುಳ್ಳು ಆರೋಪವನ್ನೇ ಆಧಾರವಾಗಿಟ್ಟುಕೊಂಡು, ರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ವಾಗಿದೆ. ಇದನ್ನು ಕರ್ನಾಟಕ ಮುಸ್ಲಿಂ ಯುನಿಟಿ (KMU) ಖಂಡಿಸುತ್ತದೆ” ಎಂದು ಹೇಳಿದ್ದಾರೆ.

“ಬಿಜೆಪಿ ಮತ್ತು ಮಿತ್ರಪಕ್ಷದ ಹತ್ತಾರು ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಬಾಕಿ ಉಳಿದಿದ್ದರೂ ರಾಜ್ಯಪಾಲರು ಯಾಕೆ ತಲೆ ಕೆಡಿಸಿಕೊಂಡಿಲ್ಲ? ಎಂಬ ನಾಗರೀಕರ ಪ್ರಶ್ನೆಗೆ ರಾಜಭವನ ಉತ್ತರಿಸಬೇಕಿದೆ.

ರಾಜಭವನ ಕೇಸರೀಕರಣ ಗೊಳ್ಳಬಾರದು ಮತ್ತು ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ರಂತೆ ವರ್ತಿಸಬಾರದು. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ” ಎಂದು ಹೇಳಿದ್ದಾರೆ.

“ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ವಿರುದ್ಧದ ಅನ್ಯಾಯ, ಸಂವಿಧಾನ ವಿರೋಧಿ, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆತರುವ ರಾಜ್ಯಪಾಲರ ಈ ನಡೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ” ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ.  

ರಾಜಕೀಯ

“ಇಸ್ಮಾಯಿಲ್ ತಮಟಗಾರ ಮೇಲೆ ಈ ಹಿಂದೆಯೂ ಸಹ ಹತ್ಯೆಗೆ ಯತ್ನ ನಡೆದಿದ್ದು, ಇವರ ಹಾಗೂ ಇವರ ಕುಟುಂಬಕ್ಕೆ ಜೀವ ಭಯ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸಬೇಕು” – ಕರ್ನಾಟಕ ಮುಸ್ಲಿಂ ಯುನಿಟಿ

ಜಾತ್ಯತೀತ ಮುಖಂಡರು, ಹಿರಿಯ ಸಮಾಜ ಸೇವಕರು, ಮುಸ್ಲಿಂ ರಾಜಕೀಯ ನಾಯಕರು ಹಾಗೂ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ಮಾಯಿಲ್ ತಮಟಗಾರ ರವರ ಮನೆ ಹಾಗೂ ಕುಟುಂಬಸ್ಥರ ಮೇಲೆ ನಡೆದ ದಾಳಿಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸಿದೆ.

ಇಂತಹ ಸಮಾಜ ವಿರೋಧಿ ಕೃತ್ಯಗಳನ್ನು ತಡೆಯಲು ಅವಳಿ ನಗರದ ಪೊಲೀಸರು ಮುಂದಾಗಬೇಕು ಎಂದು ಹೇಳಿರುವ ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯಾಧ್ಯಕ್ಷ ಜಬ್ಬಾರ್ ಕಲ್ಬುರ್ಗಿ ಅವರು, “ಇಸ್ಮಾಯಿಲ್ ತಮಟಗಾರರ ಮನೆ ಹಾಗೂ ಕುಟುಂಬಸ್ಥರ ಮೇಲೆ ನಡೆದ ದಾಳಿಯ ಕುರಿತು ಸೂಕ್ತ ಹಾಗೂ ಶೀಘ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವಳಿ ನಗರದ ಪೊಲೀಸ್ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

“ಈ ಹಿಂದೆಯೂ ಸಹ ಇವರ ಮೇಲೆ ಹತ್ಯೆಗೆ ಯತ್ನ ನಡೆದಿದ್ದು, ಇವರ ಹಾಗೂ ಇವರ ಕುಟುಂಬಕ್ಕೆ ಜೀವ ಭಯ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸಬೇಕು” ಎಂದೂ ಹೇಳಿದ್ದಾರೆ.

“ಈ ಕೃತ್ಯ ಮಾಡಿರುವ ಹಾಗೂ ಈ ಕುತಂತ್ರದ ಹಿಂದೆ ಯಾರು ಇದ್ದಾರೆಂಬುದನ್ನು ಪೋಲೀಸರು ತನಿಖೆ ನಡೆಸಿ, ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮವನ್ನು ಅತಿ ಶೀಘ್ರವಾಗಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅವಳಿ ನಗರದ ಪೊಲೀಸ್ ಇಲಾಖೆಯ ವಿರುದ್ಧ ರಾಜ್ಯದಾದಂತ್ಯ ಕರ್ನಾಟಕ ಮುಸ್ಲಿಂ ಯುನಿಟಿ (KMU) ಹೋರಾಟ ನಡೆಸಲಿದೆ” ಎಂದು ಹೇಳಿದ್ದಾರೆ.

ರಾಜ್ಯ

“ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ!”- ಕರ್ನಾಟಕ ಮುಸ್ಲಿಂ ಯುನಿಟಿ

“ಭಾರತದ ವಕ್ಫ್ 1954ರ ಕಾಯ್ದೆಯಡಿ ಸಂವಿಧಾನಬದ್ದ ಮಂಡಳಿಯಾಗಿ ರಚನೆ ಗೊಂಡಿದೆ. ಅಧಿಕೃತವಾಗಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಭಾರತೀಯ ಶಾಸನಬದ್ದ ಸಂಸ್ಥೆಯಾಗಿದೆ. ಇಂದಿನ ವಕ್ಫ್ ಮಂಡಳಿಗೆ ಒಳಪಟ್ಟ ಎಲ್ಲಾ ಆಸ್ತಿಗಳು ಹಲವಾರು ದಶಕಗಳಿಂದ ಮುಸ್ಲಿಮರು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಶಾಶ್ವತವಾಗಿ ನೀಡಲ್ಪಟ್ಟ ದೇಣಿಗೆಗಳು, ಅದು ಚರ ಅಥವಾ ಸ್ಥಿರ ಆಸ್ತಿಗಳು ಎಲ್ಲವೂ ಶಾಶ್ವತ ಸಮರ್ಪಣೆಗಳೇ ಆಗಿವೆ.

ಇಡೀ ಭಾರತದ ಮುಸ್ಲಿಮರಿಂದ ಪಡೆದ ಅನುದಾನದಿಂದಲೇ ವಕ್ಫ್ ಆಸ್ತಿಗಳನ್ನು ಸಂಗ್ರಹಿಸಲಾಗಿದೆಯೇ ಹೊರತು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರಗಳಿಂದ ಪಡೆದ ಆಸ್ತಿಗಳಲ್ಲ. ಇಂತಹ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ವಕ್ಫ್ ಮಂಡಳಿಯ ಅಧಿಕಾರ ಮತ್ತು ಅದರ ಕಾರ್ಯಚಟುವಟಿಕೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ವಿರೋಧಿಯಾಗಿದೆ.

ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ. ಕೇಂದ್ರ ಸರ್ಕಾರವೇ ಈ ಮಸೂದೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ.

ನಮ್ಮ ದೇಶದಲ್ಲಿ 1995ರ ವಕ್ಫ್ ಕಾಯ್ದೆ ಇದ್ದು, 2013ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅಡಿಯಲ್ಲಿಯೇ ವಕ್ಫ್ ಆಸ್ತಿ ನಿರ್ವಹಣೆ ಮಾಡಲಾಗುತ್ತಿದೆ.

ಯಾವುದೇ ಭೂಮಿಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ.

ಈ ಹೊಸ ಮಸೂದೆಯು ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಯೋಜನೆ ಹೊಂದಿದೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಈಗಲೇ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಕರಡು ಮಸೂದೆಯು ಪ್ರಸ್ತಾಪಿಸಿದ ಪ್ರಮುಖ ತಿದ್ದುಪಡಿಗಳಲ್ಲಿ ವಕ್ಫ್ ಬೋರ್ಡ್‌ಗಳ ಪುನರ್‌ ರಚನೆ, ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು, ಮಂಡಳಿಯು ವಕ್ಫ್‌ ಆಸ್ತಿ ಎಂದು ಘೋಷಿಸುವ ಮೊದಲು ಭೂಮಿಯ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಯ್ದೆಯ ಕೆಲವು ಷರತ್ತುಗಳನ್ನು ರದ್ದುಗೊಳಿಸುವುದು ಸೇರಿದೆ.

ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು ಮತ್ತು ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು ಸೆಕ್ಷನ್ 14ಕ್ಕೆ ತಿದ್ದುಪಡಿ ತರುವುದು ಮತ್ತು ರಾಜ್ಯ ವಕ್ಫ್ ಮಂಡಳಿಗಳು ತನ್ನದೆಂದು ಹೇಳಿಕೊಂಡಿರುವ ವಿವಾದಿತ ಭೂಮಿಯನ್ನು ಹೊಸದಾಗಿ ಪರಿಶೀಲಿಸಲು ಮಸೂದೆಯು ಪ್ರಸ್ತಾಪಿಸಿದೆ ಎಂದು ತಿಳಿದು ಬಂದಿದೆ. ಇಂತಹ ಕೇಂದ್ರ ಸರಕಾರದ ನಿಲುವುಗಳನ್ನು ಕರ್ನಾಟಕ ಮುಸ್ಲಿಂ ಯುನಿಟಿಯ ವಿರೋಧವಿದೆ ಹಾಗೂ ಬಲವಾಗಿ ಖಂಡಿಸುತ್ತದೆ.

ಪ್ರಸ್ತುತ, ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್ ಮಂಡಳಿಗಳಿವೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕೆ 2013ರಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ಇವುಗಳ ನಿರ್ದೇಶನಗಳಲ್ಲಿಯೇ ಪ್ರಸ್ತುತ ಭಾರತ ವಕ್ಫ್ ಮಂಡಳಿ ಹಾಗು ರಾಜ್ಯ ವಕ್ಫ್ ಮಂಡಳಿಗಳು ಸಕ್ರಿಯವಾಗಿವೆ. ಇಂತಹ ಸಕ್ರಿಯ ಸರ್ಕಾರಿ ವಕ್ಫ್‌ ಕಾಯ್ದೆ ಮತ್ತು ಮಂಡಳಿಗಳನ್ನು ಬಿಜೆಪಿ ಮತ್ತು ಸಂಘಪರಿವಾರ ವಿರೋಧಿಸುತ್ತಾ ಬರುತ್ತಿರುವುದು ನಾಚಿಕೆಗೇಡು.

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗಳ ಅಧಿಕಾರವನ್ನು ಕಡಿತಗೊಳಿಸುವುದನ್ನು ವಕ್ಫ್ ಮಂಡಳಿಗೆ ಇರುವ ಕಾನೂನಿನ ಮಾನ್ಯತೆಯನ್ನು ಹಾಳುಮಾಡುವ ತಿದ್ದುಪಡಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಸದ್ಯ ಭಾರತ ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತರಲು ಬಯಸಿರುವ ಸುಮಾರು ನಲವತ್ತು ತಿದ್ದುಪಡಿಗಳಿಗೆ ನಮ್ಮ ವಿರೋಧಿವಿದೆ.

ವಕ್ಫ್ ಮಂಡಳಿಗೆ ಸಂಬಂದಿಸಿದಂತೆ ಈ ತಿದ್ದುಪಡಿ ಕಾಯ್ದೆಗಳು ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಈ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿ ದೊಡ್ಡಮಟ್ಟದ ಜನಾಂದೋಲನ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯಾಧ್ಯಕ್ಷರಾದ ಜಬ್ಬಾರ ಕಲಬುರ್ಗಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್ ಅವರು ಪತ್ರಿಕಾ ಹೇಳಿಕೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ದೇಶ

ಬೆಂಗಳೂರು: ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ನಿಧನಕ್ಕೆ ಕರ್ನಾಟಕ ಮುಸ್ಲಿಂ ಯುನಿಟಿಯ  (KMU) ಸಂತಾಪ ಸೂಚಿಸಿದೆ. ಈ ಕುರಿತು ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್.ಎ ರವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ, “ಉಳ್ಳಾಲದ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸುಪುತ್ರರು, ಇಸ್ಲಾಂ ಧಾರ್ಮಿಕ ಪಂಡಿತರ ಕುಟುಂಬದ ನೇತಾರರು, ಹಲವಾರು ಮಸೀದಿಗಳ ಖಾಝಿಗಳು, ಗೌರವಾಧ್ಯಕ್ಷರು, ಆದ್ಯಾತ್ಮಿಕ ಗುರುಗಳು, ಸಾವಿರಾರು ಧಾರ್ಮಿಕ ಮುಖಂಡರ ಮಾರ್ಗದರ್ಶಿಗಳು, ತಮ್ಮ ಒಟ್ಟು ಜೀವಿತ ಅವಧಿಯನ್ನು ಸಮಾಜಕ್ಕಾಗಿ ಮುಡುಪಾಗಿ ಇಟ್ಟಿದ್ದ ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರು ನಮ್ಮೆಲ್ಲರನ್ನು ಅಗಲಿದ್ದಾರೆ.

ಈ ಸಜ್ಜನರ ಅಗಲಿಕೆ ಇಡೀ ರಾಜ್ಯಕ್ಕೆ ವಿಶೇಷವಾಗಿ ನಾಡಿನ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹನು ಮಾನ್ಯರಾದ ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಪರಲೋಕ ಯಾತ್ರೆಯಲ್ಲಿ ಇವರ ಸಕಲ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಶಿಷ್ಯವೃಂದಕ್ಕೆ ಮತ್ತು ಬಂಧು ಬಳಗಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹ ನೀಡಲಿ” ಎಂದು ತಿಳಿಸಿದ್ದಾರೆ.

ಅಂತಿಮ ದರ್ಶನದ ವ್ಯವಸ್ಥೆಯ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ!

ಮಂಗಳೂರು: ಉಳ್ಳಾಲ ದರ್ಗಾದಲ್ಲಿ ಸೈಯದ್ ಕೂರತ್ ತಂಙಳ್ ರವರ ಅಂತಿಮ ದರ್ಶನದ ವ್ಯವಸ್ಥೆಯ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು‌. ಈ ಸಂದರ್ಭದಲ್ಲಿ ಡಾ.ಯು.ಟಿ.ಇಫ್ತಿಕಾರ್ ಫರೀದ್, ಡಾ.ಕಣಚೂರು ಮೋನು, ಫರಾದ್ ಯೆನೆಪೋಯ ಹಾಗೂ ದರ್ಗಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ಹುಬ್ಬಳ್ಳಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಫಯಾಜ್‌ ಎಂಬ ಯುವಕ ನೇಹಾ ಎಂಬ ಯುವತಿಯನ್ನು ತಾನು ಓದುತ್ತಿರುವ ಕಾಲೇಜಿನ ಆವರಣದಲ್ಲಿಯೆ ಇರಿದು ಕೊಂದಿದ್ದಾನೆ. ಇಬ್ಬರೂ ಪರಿಚಿತರಿದ್ದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂಬುದೇ ಕೊಲೆಗೆ ಕಾರಣ ಎನ್ನಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ.   

ಆರೋಪಿ ಹುಡುಗ ಬಂಧನವಾಗಿ ಕಾನೂನುಪ್ರಕ್ರಿಯೆ ನಡೆಯುತ್ತಿದೆ. ಈ ಕರುಳು ಕಲಕುವ ಘಟನೆ ಖಂಡನೀಯ. ಈ ಹೆಣ್ಣುಮಗಳ ಬದುಕಿನ ಈ ರೀತಿಯ ಅಂತ್ಯಕ್ಕೆ ಕಾರಣವಾದ ಆರೋಪಿಯ ಮೇಲೆ ಸೂಕ್ತ ಹಾಗೂ ಶೀಘ್ರ ಕಾನೂನು ರೀತಿಯ ಕ್ರಮಜರುಗಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊಲೆ ಆರೊಪಿಯನ್ನು ಒಂದು ಘಂಟೆಯೊಳಗೆ ಬಂಧಿಸಿದ ಹುಬ್ಬಳ್ಳಿ ಪೊಲೀಸರ ಕಾರ್ಯ ಶ್ಲಾಘನಿಯ ಎಂದು ಹೇಳಿರುವ ಖಾಸಿಂ ಸಾಬ್, ಇತ್ತೀಚೆಗೆ ಪುತ್ತೂರಿನ ಜಯಶ್ರೀ ಎಂಬ ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಉಮೇಶ್ ಎಂಬ ಯುವಕ ಈ ಹುಡುಗಿಯನ್ನು ಹತ್ಯೆ ಮಾಡಿದ್ದ. ಇಂತಹ ನೂರಾರು ಪ್ರೀತಿ ಪ್ರೇಮಗಳ ನೆಪಗಳ ಸುತ್ತ ಹತ್ಯೆಗಳು, ಆಸಿಡ್ ದಾಳಿಗಳು ನಮ್ಮ ನಡುವೆ ನಡೆಯುತ್ತಲೇ ಇವೆ.

ಈ ಕೃತ್ಯಗಳು ಅಮಾನವೀಯ ಹಾಗೂ ಶಿಕ್ಷಾರ್ಹ. ಇಂತಹ ಘಟನೆಗಳಿಗೆ ಕೋಮು ಧರ್ಮಗಳ ಬಣ್ಣ ಬಳಿಯುವ ನೀಚ ರಾಜಕೀಯ ಮಾಡದಿರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸುತ್ತ, ಕೆಲವು ರಾಜಕೀಯ ಮುಖಂಡರು ಈ ಘಟನೆಯನ್ನು ಧರ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ

ಆರೋಪಿಯ ಜಾತಿ, ಧರ್ಮ, ವರ್ಗ, ಹೆಸರನ್ನು ನೋಡಿ ಅಪರಾಧವನ್ನು ಆತನ ಇಡೀ ಸಮುದಾಯದ ತಲೆಗೆ ಕಟ್ಟಿ, ಸಮಾಜದಲ್ಲಿ ಹಿಂದು ಮುಸ್ಲಿಮರ ಮಧ್ಯೆ ಭಯ ಮತ್ತು ಸಂಶಯವನ್ನುಂಟು ಮಾಡಿ ಈ ಚುನಾವಣಾ ಸಂಧರ್ಭದಲ್ಲಿ ರಾಜಕೀಯಲಾಭ ಮಾಡಿಕೊಳ್ಳಲು ಹೊರಟಿರುವ ರಾಜಕಾರಣಿಗಳ ನೀಚನಡೆ ಖಂಡನೀಯ ಎಂದು ಹೇಳಿದ್ದಾರೆ.

ನೇಹಾ ಹಂತಕ ಫಯಾಜ್ ಬೆಳಗಾವಿ ಜಿಲ್ಲೆ ಮುನವಳ್ಳಿಯವನಾಗಿದ್ದು, ಅಲ್ಲಿ ಹಿಂದೂ-ಮುಸ್ಲಿಮರು ಜಂಟಿಯಾಗಿ ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಕೇಶ್ವರ-ಸವದತ್ತಿ ಹೆದ್ದಾರಿಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಮಂದಿ ನೇಹಾ ಫೊಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಈ ಅಮಾನವಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಇಂತಹ ಅಮಾನವೀಯ ನೇಹಾ ಹತ್ಯೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ  ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ಅಳ್ನಾವರ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರುಗಳು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾರೇ ಕಾನೂನು ಕೈಗೆತ್ತಿಕೊಂಡರೂ ಖಂಡಿಸುತ್ತೇವೆ. ಪೊಲೀಸರ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆ ಸ್ವಾಗತಾರ್ಹ ಎಂದು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ.  

ಅಪರಾದಿಗೆ ಸೂಕ್ತ ಹಾಗೂ ಶೀಘ್ರ ಕಾನೂನು ಶಿಕ್ಷೆ ಆಗಬೇಕು ವೆಂಬುದು ನಮ್ಮ ಬೇಡಿಕೆ. ನೇಹಾ ಸಾವಿನ ದುಃಖ ಭರಿಸು ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಾರ್ಥನೆಯಾಗಿದೆ ಎಂದು ಕರ್ನಾಟಕ ಖಾಸಿಂ ಸಾಬ್ ಹೇಳಿದ್ದಾರೆ.  

ರಾಜ್ಯ

ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯ.

ಇತ್ತೀಚಿಗೆ ಶ್ರೀರಂಗಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಕೋಮು ಪ್ರಚೋದನಕಾರಿ ಆಗಿದೆ. ಭಟ್ ಈ ಮೂಲಕ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ, ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಕೋಮು ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ಅಧ್ಯಕ್ಷ ಜಬ್ಬಾರ್ ಕಲ್ಬುರ್ಗಿ ಹೇಳಿದ್ದಾರೆ.  

ಅಲ್ಪಸಂಖ್ಯಾತರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮುಸ್ಲಿಂ ಮಹಿಳೆಯ ಗೌರವ ಘನತೆಗಳಿಗೆ ಕುಂದುಂಟು ಮಾಡಿರುವ ಇವರ ಕೋಮುದ್ವೇಷಿ ಹೇಳಿಕೆ ಖಂಡನೀಯ. ಕರ್ನಾಟಕ ರಾಜ್ಯದಲ್ಲಿ ಶಾಂತಿ ಭಂಗವನ್ನು ಉಂಟು ಮಾಡುವ ಮತ್ತು ಮಹಿಳಾ ಹಕ್ಕುಗಳ ಉಲ್ಲಂಘನೆಯ ಹೇಳಿಗಳನ್ನು ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಶೀಘ್ರ ಹಾಗೂ ಸೂಕ್ತ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲು ಗೊಳಿಸಬೇಕು ಎಂದು ಸರ್ಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಅವರೇ ನೇರಹೊಣೆ ಎಂದು ಹೇಳಿದ್ದಾರೆ.  

ಇತರೆ ಧರ್ಮ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಸಭ್ಯವಾಗಿ, ಅಶ್ಲೀಲವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಆ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರೆ ಎಲ್ಲಾ ಮುಖಂಡರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಹೊಣೆ ಸರಕಾರದ್ದಾಗಿದೆ. ಈ ಹೇಯ ಕೃತ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಪಕ್ಷದ ಮೌನವೂ ಸಹ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾನೂನು ಬಾಹಿರ ಕೃತ್ಯವನ್ನು ಕೆಎಂಯು ಖಂಡಿಸುತ್ತದೆ. ಅಲ್ಲದೆ, ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯ

ವಿಜಯಪುರದ ಮುಸ್ಲಿಂ ಧಾರ್ಮಿಕ ಮುಖಂಡರಾದ ಸೈಯ್ಯದ್ ತನ್ವೀರ್ ಹಾಶ್ಮಿಯವರ ವಿರುದ್ಧದ ಬಸನಗೌಡ ಪಾಟೀಲ್ ಯತ್ನಾಳ್‌  ಹೇಳಿಗೆ ಖಂಡನೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಒಂದು ಚಿತ್ರವೊಂದನ್ನು ಇಟ್ಟುಕೊಂಡು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು  ‘ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿ ಸಂಚಲನ ಮೂಡಿಸಿದರು.

ಇದನ್ನು ಕರ್ನಾಟಕ ಮುಸ್ಲಿಂ ಯೂನಿಟಿಯ (ರಾಜ್ಯ ಸಮಿತಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್. ಎ.,  ತೀವ್ರವಾಗಿ ಖಂಡಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. “ಸುನ್ನಿ ಜಮಾತ್‌ನ ಮುಖಂಡರು, ಹಿರಿಯ ಸಮಾಜ ಸೇವಕರು ಹಾಗೂ ಜಾತ್ಯತೀತ ಮನೋಭಾವದ ಧಾರ್ಮಿಕ ಪಂಡಿತರು ಆಗಿರುವ ತನ್ವೀರ್ ಪೀರಾ ರವರ ಕುರಿತು ಯತ್ನಾಳರ ತೇಜೋವದೆ ಹೇಳಿಕೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದ್ದಾರೆ.

“ಯತ್ನಾಳ್ ಅಪಪ್ರಚಾರ ಮಾಡುತ್ತಿರುವ ತನ್ವೀರ್ ಪೀರಾ ರವರ ಫೋಟೋಗಳಲ್ಲಿ ಒಂದು ಬಾಗ್ದಾದಿನ ಪ್ರಿನ್ಸ್‌ ಶೇಖ್‌ ಖಾಲಿದ್‌ ಅವರ ಜ್ಯೋತೆಗಿನ ಫೋಟೋ ಹಾಗೂ ಮತ್ತೊಂದು ಫೋಟೋದಲ್ಲಿ ಇರುವವರು ಇರಾಕ್‌ ಸರ್ಕಾರದ ಸೆಕ್ಯುರಿಟಿ ಆಫೀಸರ್‌ ಆಗಿರುವ ಸಜ್ಜಾದೇ ನಶೀನ್‌ ಹಜ್ರತ್‌ ಗೌಸ್‌ ಆಜಂ ರವರ ಜ್ಯೋತೆಗೆ ತನ್ವೀರ್ ಪೀರಾ ರವರು ಇರುವ ಹತ್ತು ವರ್ಷಗಳ ಹಿಂದಿನ ಫೋಟೋಗಳು” ಎಂದು ಸ್ಪಷ್ಟನೆ ನೀಡಿದ್ದಾರೆ.

“ಫೋಟೋಗಳನ್ನು ತಿರುಚಿ, ಬಳಸಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಪೀರಾರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಅಪಪ್ರಚಾರದ ಹಿಂದೆ ಮುಸ್ಲಿಂ ವಿರೋಧಿ ಭಾವನೆ, ಶಾಂತಿಕದಡುವ ಉದ್ದೇಶ ಯತ್ನಾಳ್ ಹೊಂದಿದ್ದಾರೆ” ಆರೋಪಿಸಿದ್ದಾರೆ. “ಈ ಕೂಡಲೇ ಕರ್ನಾಟಕ ಸರಕಾರ ಬಿಜೆಪಿಯ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.

“ಹುಬ್ಬಳ್ಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯದ ರಕ್ಷಣೆ ನಮ್ಮ ಸರಕಾರ ಜವಾಬ್ದಾರಿಯಾಗಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಅವರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿಗಳನ್ನು ಮೀಸಲು ಇರಿಸುವುದಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಅಲ್ಲದೆ, ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ಓಬಿಸಿಯೊಳಗಿನ ಮುಸ್ಲಿಮರ ಶೇ.4ರಷ್ಟು ಇರುವ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕೆಂದು KMU ಸರಕಾರಕ್ಕೆ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.

ರಾಜ್ಯ

ಮೊನ್ನೆ ಪೊಲೀಸರ ಮೇಲೆ ಹಲ್ಲೆ; ಈಗ ಪತ್ರಕರ್ತರ ಮೇಲೆ ಗೂಂಡಾಗಿರಿ. ಈ ಅಮಾನವೀಯ, ಸಂವಿಧಾನ ವಿರೋಧಿ ಕಾನೂನು ಬಾಹಿರ ಘಟನೆಗಳು ನಡೆದದ್ದು ಮುಸ್ಲಿಮ್ ಎಂಬ ಗುಮಾನಿಯ (… ಮುಸ್ಲಿಮ್ ಆಗಿದ್ದರೆ..!? ) ಮೇಲೆ ಮಾತ್ರ. ಕೋಮುವಾದಿ(ವ್ಯಾದಿ)ಗಳ ಅನೈತಿಕ ಪೋಲಿಸ್‌ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ, ರಾಜ್ಯ ಗೃಹ ಇಲಾಖೆಯು, ಆ್ಯಂಟಿ ಕಮ್ಯೂನಲ್ ವಿಂಗನ್ನು ರಚನೆ ಮಾಡಿತ್ತು. ಇದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದಂತಿದೆ ಎಂದು ಕರ್ನಾಟಕ ಮುಸ್ಲಿಮ್ ಯೂನಿಟಿಯ ರಾಜ್ಯಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ, ಕೋಮುವಾದಿಗಳ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಎಗ್ಗಿಲ್ಲದೆ ಮಿತಿಮೀರಿ ನಡೆಯುತ್ತಿದ್ದವು. ಇದಕ್ಕೆ ಸಹಕಾರಿ ಎಂಬಂತೆ ಕೆಲ ಅಧಿಕಾರಿಗಳು ಸಹ ಸಾತ್ ನೀಡುತ್ತಿದ್ದದ್ದು ಬಹಿರಂಗಗೊಂಡಿದೆ. ಇಂತಹ ಕಾನೂನು ಬಾಹಿರ ಕೃತ್ಯಗಳ ಕಡಿವಾಣಕ್ಕೆ, ಕಾಂಗ್ರೆಸ್ ಪಕ್ಷ, ತಾನು ಆಡಳಿತಕ್ಕೆ ಬಂದರೆ ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವುದಾಗಿ ಆಶ್ವಾಸನೆ ನೀಡಿತ್ತು.

ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಈ ರೀತಿಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ, ಆಂಟಿ ಕಮ್ಯುನಲ್ ವಿಂಗ್ ಅನ್ನು ರಚಿಸಿತು. ಆದರೆ, ಈ ವಿಂಗ್‌ನ ಕಾರ್ಯವೈಖರಿ ಮತ್ತು ಪರಿಣಾಮಗಳು ಮಾತ್ರ ಈವರೆಗೆ ಶೂನ್ಯವೆ ಆಗಿದೆ. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯ ಅಧಿಕೃತ ವರದಿಗಾರರಾದ ಅಭಿಜಿತ್ ಅವರ ಮೇಲೆ, ಗೂಂಡಾಗಿರಿ ನಡೆಸಿರುವ ಕೋಮುವಾದಿಗಳ ವಿರುದ್ಧ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಾಸಿಂ ಸಾಬ್ ಆಗ್ರಹಿಸಿದ್ದಾರೆ.

ಈ ವಿಂಗ್ ಜಾರಿಗೆ ಬಂದ ನಂತರವೂ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂಬ ಸತ್ಯವು ಇದರ ಸೀಮಿತತೆ ಮತ್ತು ನಿಸ್ಕ್ರಿಯತೆಯನ್ನು ಸೂಚಿಸುತ್ತದೆ. ಮುರುಡೇಶ್ವರ ಬೀಚ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ, ಬೆಂಗಳೂರಿನಲ್ಲಿ ಬಿಎಂಟಿಸಿಯ ಮುಸ್ಲಿಮ್ ನಿರ್ವಾಹಕರ ಟೋಪಿಯನ್ನು ಬಲವಂತವಾಗಿ ತೆಗೆಸಿದ್ದು ಸೇರಿದಂತೆ, ಕೋಮುವಾದಿ ಪುಂಡಾಟಗಳು ಮೊದಲಿನಂತೆಯೇ ಮುಂದುವರಿದಿವೆ.

ನೈತಿಕ ಪೊಲೀಸ್ ಗಿರಿ ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಜಿಲ್ಲೆಗೆ ಕೆಟ್ಟ ಹೆಸರು ತರಲು ಕೋಮುವಾದಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ.

ಇಂತಹ ದಬ್ಬಾಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಈ ಸ್ಪಷ್ಟನೆಗಳು ಸ್ವಾಗತಾರ್ಹವೆ. ಆದರೆ, ಈ ವಿಂಗ್ ಅನ್ನು ಶಕ್ತ ಸಕ್ರಿಯಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂಬುದು ಪ್ರಶ್ನೆ.

ಕೂಡಲೇ ಈ ವಿಂಗ್ ಅನ್ನು ಸಕ್ರಿಯಗೊಳಿಸುವ ಕುರಿತು ಮತ್ತಷ್ಟು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು; ಕೋಮು ಗೂಂಡಾಗಿರಿಗಳನ್ನು ನಿಲ್ಲಿಸಬೇಕು ಎಂದು ಖಾಸಿಂ ಸಾಬ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯ

ಕರ್ನಾಟಕ ಮುಸ್ಲಿಮ್ ಯೂನಿಟಿ (KMU) ಬಾಗಲಕೋಟೆ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಮುಸ್ಲಿಮರ ಐಕ್ಯತಾ ಸಮಾವೇಶವು ಬಾಗಲಕೋಟೆ ಜಿಲ್ಲೆಯ ಹುನುಗುಂದ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.

ಸುಮಾರು ಮುನ್ನೂರಕ್ಕೂ ಹೆಚ್ಚು ಕೆಎಂಯು ಮುಖಂಡರು, ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಕೆಎಂಯುನ ರಾಜ್ಯ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿಯವರು, ಕರ್ನಾಟಕ ಮುಸ್ಲಿಮ್ ಸಮಾಜದ ಪ್ರಮುಖವಾದ ಮೂರು ಬೇಡಿಕೆಗಳ ನಿರ್ಣಯಗಳನ್ನು ಸಮಾವೇಶದಲ್ಲಿ ಓದಿದರು.  ಅದಕ್ಕೆ ಎಲ್ಲಾ ಪದಾಧಿಕಾರಿಗಳು ಕೈ ಎತ್ತುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು. 

ಅಲ್ಲದೆ, ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ನಗರ, ಹೋಬಳಿ, ಪಂಚಾಯತಿ, ಹಳ್ಳಿ ಹಾಗೂ ವಾರ್ಡ್ ಮಟ್ಟದಲ್ಲಿ ಸಂಘಟನೆಯನ್ನು ಕಟ್ಟುವ ಮೂಲಕ, ಮುಸ್ಲಿಮರ ಸಾಮಾಜಿಕ ನ್ಯಾಯ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಸಮಪಾಲಿಗಾಗಿ ನಾವು ಒಂದಾಗಬೇಕು ಎಂಬ ನಿರ್ಣಯವನ್ನು ಕೈಗೊಂಡರು.

ಕರ್ನಾಟಕ ಮುಸ್ಲಿಮ್ ಯೂನಿಟಿಯ ಉತ್ತರ ಕರ್ನಾಟಕ ಸಂಚಾಲಕರಾದ ಮೈಬೂಬ್ ಸರ್ಕಾವಾಸ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಮುಸ್ಲಿಮರು ಸರ್ಕಾರದ ಎಲ್ಲಾ ಯೋಜನೆಗಳ ಪಾಲುದಾರರು ಆಗಬೇಕು; ತಳಮಟ್ಟದ ರಾಜಕೀಯ ನಾಯಕತ್ವಕ್ಕೆ ಆದ್ಯತೆ ಅವಕಾಶಗಳನ್ನು ನೀಡಬೇಕು; ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಮುಂದಿನ ದಿನಗಳಲ್ಲಿ ಶ್ರಮಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹಾಗೂ ನಗರ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳ ಪದಗ್ರಹಣ ಕಾರ್ಯ ನಡೆಯಿತು. ಅಧ್ಯಕ್ಷೀಯ ಭಾಷಣವನ್ನು ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರರವರು ವಹಿಸಿದ್ದರು. ಈ ಸಮಾವೇಶದಲ್ಲಿ ಕೆಎಂಯುನ ಇತರೆ ಜಿಲ್ಲಾ ಮುಖಂಡರು, ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.