ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಐಪಿಎಲ್ Archives » Dynamic Leader
September 18, 2024
Home Posts tagged ಐಪಿಎಲ್
ಕ್ರೀಡೆ ಸಿನಿಮಾ

ಚೆನ್ನೈ: ಈ ವರ್ಷದ ಐಪಿಎಲ್ ಕ್ರಿಕೆಟ್ ಸರಣಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾ.22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ-ಬೆಂಗಳೂರು ತಂಡಗಳು ಸೆಣಸಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಸೀಸನ್ ಮತ್ತು 18ನೇ ಲೋಕಸಭೆ ಚುನಾವಣೆಗಳು (ಏಪ್ರಿಲ್ – ಮೇ) ಏಕಕಾಲದಲ್ಲಿ ನಡೆಯಲಿದೆ. ಇದರಿಂದ ವಿದೇಶದಲ್ಲಿ ಐಪಿಎಲ್ ಸರಣಿ ನಡೆಯಬಹುದು ಎನ್ನಲಾಗಿತ್ತು. 2009ರಲ್ಲಿ ಲೋಕಸಭೆ ಚುನಾವಣೆಯ ಕಾರಣ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 2014ರ ಚುನಾವಣೆಯ ಕಾರಣ, ಅರ್ಧದಷ್ಟು ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಯಿತು. ಕರೋನಾ ಅವಧಿಯಲ್ಲಿ (2020, 2021) ಪಂದ್ಯಗಳು ಕೂಡ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೇ ನಡೆದವು.

2019 ರಲ್ಲಿ, ಲೋಕಸಭೆ ಚುನಾವಣೆಯೊಂದಿಗೆ ಐಪಿಎಲ್ ಸರಣಿಯೂ ಭಾರತದಲ್ಲಿಯೇ ನಡೆಯಿತು. ಅದೇ ರೀತಿ ಈ ಬಾರಿಯೂ ಭಾರತದಲ್ಲೇ ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಗುಜರಾತ್, ಮುಂಬೈ ಸೇರಿದಂತೆ 10 ತಂಡಗಳು ಭಾಗವಹಿಸಲಿವೆ. ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಆರಂಭಿಕ ಪಂದ್ಯದಲ್ಲಿ ಚೆನ್ನೈ-ಬೆಂಗಳೂರು ತಂಡಗಳು ಸೆಣಸಲಿವೆ.

ಮಾರ್ಚ್ 22 ರಂದು ಚೆನ್ನೈನ ಚೆಪಾಕ್ಕಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಉಳಿದ ಸ್ಪರ್ಧೆಗಳ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಸಿನಿಮಾ

ವರದಿ: ಅರುಣ್ ಜಿ.,

ಒಂದು ಕಡೆ ಚುನಾವಣೆ ಮತ್ತೊಂದು ಕಡೆ ಐಪಿಎಲ್ ಇದರ ನಡುವೆ ಕಳೆದವಾರ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.‌ ಈ ಸಂತೋಷವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ‌

ಚುನಾವಣೆ, ಐಪಿಎಲ್ ನಡುವೆ ಈ ಚಿತ್ರ ಬಿಡುಗಡೆ ಮಾಡುತ್ತಾರಾ? ಎಂದು ಎಷ್ಟೋ ಜನ‌ ಕೇಳುತ್ತಿದ್ದರು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತವಾಗಿ ನೋಡುತ್ತಾರೆ ಎಂಬ ನಂಬಿಕೆಯಿಂದ ಈ ಚಿತ್ರವನ್ನು ಬಿಡುಗಡೆ ಮಾಡಿದರು.‌ ಅವರ ಮಾತು ನಿಜವಾಯಿತು. ಜನ ನಮ್ಮ ಚಿತ್ರಕ್ಕೆ ತೋರುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ ಹಾಗೂ ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ‌. ರಾಯರ ಹೆಸರಿನ ಈ ಚಿತ್ರಕ್ಕೆ ರಾಯರೆ ಯಶಸ್ಸು ನೀಡುತ್ತಿದ್ದಾರೆ ಎಂದರು ನಾಯಕ ಜಗ್ಗೇಶ್.

ನಾವು ಈ ಸಿನಿಮಾ ಬಿಡುಗಡೆಗೂ ಹತ್ತು ದಿನಗಳ ಮುಂಚೆ ಪ್ರಮೋಷನ್ ಶುರು ಮಾಡಿದ್ದು. ಆನಂತರ ಬಿಡುಗಡೆಯಾದ ಟ್ರೇಲರ್ ಹಾಗೂ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಬಂತು. ನನ್ನ ಈ ಹಿಂದಿನ‌ ಸಿನಿಮಾಗಳ ಜಾನರ್ ಬೇರೆ. ಈ ಸಿನಿಮಾ ಜಾನರ್‌ ಬೇರೆ. ಲೇಟ್ ಮ್ಯಾರೇಜ್ ಹಾಗೂ ಆನಂತರ ಅವರಿಗೆ ಮಕ್ಕಳಾಗದ ಸಮಸ್ಯೆ ಬಗ್ಗೆಗಿನ ಕಥಾಹಂದರವನ್ನು ಈ ಚಿತ್ರ  ಹೊಂದಿದೆ.  ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಯಶಸ್ಸಿಗೆ ಕಾರಣರಾದ ನನ್ನ ತಂಡಕ್ಕೆ,‌ ನಿರ್ಮಾಣ ಮಾಡಿರುವ ಖ್ಯಾತ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರಿಗೆ ಹಾಗೂ ಜಗ್ಗೇಶ್ ಅವರ ಆದಿಯಾಗಿ ಚಿತ್ರದಲ್ಲಿ ‌ನಟಿಸಿರುವ ಎಲ್ಲಾ ಕಲಾವಿದರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

ಚಿತ್ರದಲ್ಲಿ ಅಭಿನಯಿಸಿರುವ ಶ್ವೇತ ಶ್ರೀವಾಸ್ತವ್, ದತ್ತಣ್ಣ, ಮಿತ್ರ, ರವಿಶಂಕರ್ ಗೌಡ, ಚಿತ್ಕಲಾ ಬಿರಾದಾರ್, ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಜಿ ರಾಜ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಹಕ ಶ್ರೀಶ ಕುದುವಳ್ಳಿ ಮುಂತಾದವರು ಈ ಸಂದರ್ಭದಲ್ಲಿ ಚಿತ್ರದ ಕುರಿತು ಮಾತನಾಡಿದರು.