ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಐಎಸ್‌ಐ ಕೈವಾಡ Archives » Dynamic Leader
September 10, 2024
Home Posts tagged ಐಎಸ್‌ಐ ಕೈವಾಡ
ವಿದೇಶ

• ಡಿ.ಸಿ.ಪ್ರಕಾಶ್ 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಂತೆಯೇ ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಆಡಳಿತವನ್ನು ಸ್ಥಾಪಿಸಲು ಪಾಕಿಸ್ತಾನದ ಐಎಸ್‌ಐ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ!

ಹಿಂದೂ ಮಹಾಸಾಗರವು ವಿಶ್ವದ 3ನೇ ಅತಿದೊಡ್ಡ ಸಾಗರವಾಗಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ವ್ಯಾಪಾರದಲ್ಲಿ ಶೇ.80ರಷ್ಟು ಮತ್ತು ಅಂತಾರಾಷ್ಟ್ರೀಯ ಸರಕು ವ್ಯಾಪಾರದಲ್ಲಿ ಶೇ.40ರಷ್ಟು  ಈ ಕಡಲ ಪ್ರದೇಶದ ಮೂಲಕವೇ ನಡೆಯುತ್ತದೆ. ಪ್ರಸ್ತುತ ಈ ಪ್ರದೇಶದಲ್ಲಿ ಭಾರತ ಪ್ರಾಬಲ್ಯ ಹೊಂದಿದೆ.

ಇದಕ್ಕೆ ಸವಾಲೆಸೆಯಲು ಚೀನಾ ‘ಒಂದು ರಸ್ತೆ, ಒಂದು ವಲಯ’ ಉಪಕ್ರಮದ ಅಡಿಯಲ್ಲಿ ಭಾರತದ ನೆರೆಯ ರಾಷ್ಟ್ರಗಳನ್ನು ತನ್ನ ಮಿತ್ರರಾಷ್ಟ್ರಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಬಾಂಗ್ಲಾದೇಶದ ಬಂದರುಗಳು ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ಭಾರಿ ಹೂಡಿಕೆ ಮಾಡಿಕೊಂಡು ಬರುತ್ತಿದೆ. ಆದರೂ, ಆ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೇ ಆಧ್ಯತೆ ನೀಡುತ್ತಿದ್ದರು.

ಇದರಿಂದಾಗಿ ಬಾಂಗ್ಲಾದೇಶದ ವ್ಯಾಪಾರದಲ್ಲಿ ಭಾರತದ ಕೈ ಮೇಲಾಗಿದೆ. ಬಾಂಗ್ಲಾದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 19,000ಕ್ಕೂ ಹೆಚ್ಚು ಭಾರತೀಯರು ಬಾಂಗ್ಲಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೇಖ್ ಹಸೀನಾ ಇತ್ತೀಚೆಗೆ ಹೇಳಿದಂತೆ, “ಬಾಂಗ್ಲಾದೇಶದ ತೀಸ್ತಾ ನದಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಉತ್ಸುಕವಾಗಿದೆ. ಆದರೆ, ಈ ಯೋಜನೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು” ಎಂದು ಹೇಳಿದರು.

ಸತತವಾಗಿ ಭಾರತದ ಪರವಾಗಿದ್ದ ಶೇಖ್ ಹಸೀನಾ ಆಡಳಿತವನ್ನು ಕಿತ್ತೊಗೆಯಲು ಚೀನಾ ನಿರ್ಧರಿಸಿತು. ಇದಕ್ಕಾಗಿ ಆ ದೇಶವು ಪಾಕಿಸ್ತಾನದ ಐಎಸ್‌ಐ ಜೊತೆ ರಹಸ್ಯವಾಗಿ ಕೈ ಜೋಡಿಸಿದೆ. ಬಾಂಗ್ಲಾದೇಶಕ್ಕೆ ನುಸುಳಲು ಮತ್ತು ಗಲಭೆಗಳನ್ನು ಎಬ್ಬಿಸಲು ಐಎಸ್‌ಐ ಗೂಢಚಾರರಿಗೆ ಚೀನಾ ಉದಾರವಾಗಿ ಹಣವನ್ನು ನೀಡಿದೆ ಎಂದು ವರದಿಗಳಾಗಿದೆ.

ಈ ಕುರಿತು ಹೇಳುತ್ತಿರುವ ಭಾರತೀಯ ಗುಪ್ತಚರ ಮೂಲಗಳು, ‘ಜಮಾತ್-ಎ-ಇಸ್ಲಾಮಿ ಎಂಬ ಸಂಪ್ರದಾಯವಾದಿ ಸಂಘಟನೆ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ವಿದ್ಯಾರ್ಥಿ ಸಂಘಕ್ಕೆ ಸೇರಿದ ಇಸ್ಲಾಮಿ ಛತ್ರ ಶಿಬಿರ್ (Islami Chhatra Shibir) ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ಐಎಸ್‌ಐ (ISI) ಕಳೆದ ಕೆಲವು ವರ್ಷಗಳಿಂದ ವಿಶೇಷ ತರಬೇತಿ ನೀಡುತ್ತಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಶಿಬಿರಗಳಲ್ಲಿ ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ.

ಐಎಸ್‌ಐ ಮೂಲಕ ತರಬೇತಿ ಪಡೆದ ಇವರು, ಬಾಂಗ್ಲಾದೇಶ ವಿದ್ಯಾರ್ಥಿ ಸಂಘದ ಪ್ರತಿಭಟನೆಯನ್ನು ಗಲಭೆಯಾಗಿ ಪರಿವರ್ತಿಸಿ ಅಪಾರ ಪ್ರಮಾಣದ ಪ್ರಾಣಹಾನಿ ಮಾಡಿದ್ದಾರೆ. ಇದಕ್ಕಾಗಿ ಚೀನಾ ಐಎಸ್‌ಐಗೆ ಭಾರಿ ಮೊತ್ತದ ಹಣ ನೀಡಿದೆ.

ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕ: ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿಯ (Bangladesh Nationalist Party) ನಾಯಕ ತಾರಿಕ್ ರೆಹಮಾನ್ (Tarique Rahman) ಅವರು ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಮತ್ತು ಹಿರಿಯ ಐಎಸ್‌ಐ ಮುಖ್ಯಸ್ಥ ಜಾವಿದ್ ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭೇಟಿಯಾಗಿದ್ದರು. ಆಗ ಶೇಖ್ ಹಸೀನಾ ಅವರ ಆಡಳಿತವನ್ನು ಕಿತ್ತೊಗೆಯಲು ಸಂಚು ರೂಪಿಸಲಾಗಿದೆ.

ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್, ಮುಂಬೈನ ಭೂಗತ ಲೋಕ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ದುಬೈನಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಯನ್ನು ತಾರಿಕ್ ರೆಹಮಾನ್ ಖರೀದಿಸಿದ್ದಾರೆ.

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಇತ್ತೀಚೆಗೆ 10 ಟ್ರಕ್‌ಗಳಲ್ಲಿ ಸಾಗಿಸಲಾಗಿದ್ದ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಇಸ್ಲಾಮಿ ಛತ್ರ ಶಿಬಿರ್ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿತ್ತು.

ಇದರ ಹಿಂದೆ ತಾರಿಕ್ ರೆಹಮಾನ್ ಮತ್ತು ದಾವೂದ್ ಇಬ್ರಾಹಿಂ ಇದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಂತೆಯೇ ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಆಡಳಿತವನ್ನು ಸ್ಥಾಪಿಸಲು ಪಾಕಿಸ್ತಾನದ ಐಎಸ್‌ಐ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ’ ಎಂದು ಭಾರತೀಯ ಗುಪ್ತಚರ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.