ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಉಚಿತ ಬಸ ಪ್ರಯಾಣ Archives » Dynamic Leader
September 17, 2024
Home Posts tagged ಉಚಿತ ಬಸ ಪ್ರಯಾಣ
ರಾಜಕೀಯ

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

“ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು. ಕುಂಟು ನೆಪ ನೀಡಿ ತಿರಸ್ಕರಿಸುವಂತಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದೇನೆ. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಗೃಹ ಜ್ಯೋತಿ ಯೋಜನೆಗೆ ಆಗಸ್ಟ್‌ 1 ರಂದು ಕಲಬುರಗಿಯಲ್ಲಿ ಚಾಲನೆ ನೀಡುವ ಕುರಿತು ಯೋಚಿಸುತ್ತಿದ್ದೇವೆ. ಈ ಯೋಜನೆಯ ಮಾರ್ಗಸೂಚಿಗಳ ಕುರಿತು ಇರುವ ಎಲ್ಲ ಗೊಂದಲಗಳನ್ನು ನಿವಾರಿಸಿ, ನಾಗರಿಕರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ನೋಂದಾಯಿಸಲು ಅವಕಾಶವಿದೆ. ಇದಲ್ಲದೆ, ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್‌ ಡೆಸ್ಕ್‌ ಸ್ಥಾಪಿಸಲಾಗುವುದು. ಜೂನ್‌ 15 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್‌ ಮೂಲಕ ಅಥವಾ ಮೊಬೈಲ್‌ ಆಪ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

ಹೊಸ ಮನೆ, ಹೊಸ ಬಾಡಿಗೆದಾರರಿಗೆ ರಾಜ್ಯದ ವಿದ್ಯುತ್‌ ಬಳಕೆಯ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್‌ ಸೌಲಭ್ಯ ನೀಡಲಾಗುವುದು. ಒಂದು ವರ್ಷದ ಸರಾಸರಿ ಲಭ್ಯವಾದ ನಂತರ, ಈ ದತ್ತಾಂಶವನ್ನು ಆಧರಿಸಿ, ಉಚಿತ ವಿದ್ಯುತ್‌ ಸೌಲಭ್ಯ ನೀಡಲಾಗುವುದು. ಹಳೆ ವಿದ್ಯುತ್‌ ಬಿಲ್‌ ಬಾಕಿ ಪಾವತಿಗೆ ಸೆಪ್ಟೆಂಬರ್‌ 30 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಗೃಹಜ್ಯೋತಿ ಯೋಜನೆಗೆ ಆಧಾರ್‌, ಆರ್.ಆರ್.ಸಂಖ್ಯೆ, ಬಾಡಿಗೆದಾರರು ಕರಾರು ಪತ್ರ ಹಾಗೂ ಅದೇ ವಿಳಾಸದ ಮತದಾರರ ಗುರುತು ಚೀಟಿ ಮಾಹಿತಿ ಸಲ್ಲಿಸಿ, ಸೌಲಭ್ಯ ಪಡೆಯಬಹುದಾಗಿದೆ.

ಗೃಹ ಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ 17 ಅಥವಾ 18 ರಂದು ಬೆಳಗಾವಿಯಲ್ಲಿ ಚಾಲನೆ ನೀಡುವ ಕುರಿತು ಚರ್ಚಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್‌ 15 ರಿಂದ ಪ್ರಾರಂಭವಾಗಲಿದೆ. ಈ ಯೋಜನೆಗೆ ಆನ್‌ಲೈನ್‌ ನಲ್ಲಿ ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಂತೆಯೇ ನಾಡಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಪ್ರತ್ಯೇಕ ಕೌಂಟರುಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಅರ್ಜಿದಾರರು ರೇಷನ್‌ ಕಾರ್ಡ್‌ ಸಂಖ್ಯೆ, ಯಜಮಾನಿಯ ಹಾಗೂ ಪತಿಯ ಆಧಾರ್‌ ಕಾರ್ಡ್‌ ಸಂಖ್ಯೆ, ಆಧಾರ್‌ ಸಂಯೋಜನೆಯಾಗಿರುವ ಬ್ಯಾಂಕ್‌ ಖಾತೆಯ ವಿವರವನ್ನು ಒದಗಿಸಬೇಕು. ಈ ದಾಖಲೆಗಳ ಪ್ರತಿಗಳನ್ನು ಆಫ್‌ಲೈನ್‌ ಅರ್ಜಿಗಳೊಂದಿಗೂ ಸಲ್ಲಿಸಬಹುದು.

ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್‌ ಖಾತೆಗೆ ನೆರವಿನ ಮೊತ್ತ ಜಮೆ ಆಗಲಿದೆ. ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಶೇ.85ಕ್ಕೂ ಹೆಚ್ಚು ಕುಟುಂಬಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ತೆರಿಗೆ ಪಾವತಿದಾರರಲ್ಲದ ಎಪಿಎಲ್‌ ಕಾರ್ಡುದಾರರಿಗೂ ಈ ಸೌಲಭ್ಯ ದೊರೆಯಲಿದೆ