ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಆಶ್ರಯ ಮನೆಗಳು Archives » Dynamic Leader
September 21, 2024
Home Posts tagged ಆಶ್ರಯ ಮನೆಗಳು
ಬೆಂಗಳೂರು

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಇಂದು ಮಾನ್ಯ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಾಗಿದೆ.

ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಹಾಗೂ “ಡೈನಾಮಿಕ್ ಲೀಡರ್” ಪತ್ರಿಕೆಯ ಸಂಪಾದಕ ಡಿ.ಸಿ.ಪ್ರಕಾಶ್ ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ,

“ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2023 (1) ಹಾಗೂ ವಇ 115 ಕೊಮಂಇ ೨೦೧೩ (2)ರ ಪ್ರಕಾರ ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ, ಅಧಿಕಾರ ದುರುಪಯೋಗ ಪಡಿಸಿಕೊಂಡು, ರಚಿತವಾಗದ ಆಶ್ರಯ ಸಮಿತಿಯ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳು

“ಕೊಳಗೇರಿ ಜನರ ಮನೆಗಳನ್ನು ಬೈರತಿ ಬಸವರಾಜ್ ಹಿಂಬಾಲಕರಿಗೆ ಅವರ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅನುಕೂಲಸ್ಥ ವರ್ಗದ ಜನರಿಗೆ ಹಂಚಿಕೆ ಮಾಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಂಚನೆಯಲ್ಲಿ ಭಾಗಿಯಾಗಿರುವ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದೆ” ಎಂದು ಹೇಳಿದ್ದಾರೆ.

ಬೈರತಿ ಬಸವರಾಜ್ ಅವರೊಂದಿಗೆ ಸೇರಿಕೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಜಂಟಿಯಾಗಿ ತಯಾರಿಸಿದ 768 ಫಲಾನುಭವಿಗಳ ಪಟ್ಟಿಯಲ್ಲಿರುವವರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡುತ್ತಿರುವುದನ್ನು ಕೂಡಲೆ ತಡೆಗಟ್ಟಿ, ಮಂಡಳಿಯ ನಿಯಮಗಳಂತೆ ನಿಜವಾದ ಘೋಷಿತ ಕೊಳಗೇರಿ ಬಡಜನರಿಗೆ ಸದರಿ ಮನೆಗಳು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಕೋರಲಾಗಿದೆ ಎಂದು ಡಿ.ಸಿ.ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು!

ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು
dynamicleaderdesk@gmail.com

“ಕೊಳಗೇರಿ ಮಂಡಳಿ ಸರ್ಕಾರಿ ಸಂಸ್ಥಯೋ? ಅಥವಾ ಶಾಸಕರ ಭವನವೋ? ಮಂಡಳಿಯ ಅಧಿಕಾರಿಗಳು ಸಂಬಳ ಪಡೆಯುವುದು ಕೊಳಗೇರಿ ಜನರ ಹೆಸರಿನಲ್ಲೋ? ಅಥವಾ ಶಾಸಕರ ಬಳಿಯೋ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡಬೇಕಿದೆ”

ಬೆಂಗಳೂರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಹಾಗೂ ವಇ 115 ಕೊಮಂಇ 2013 (2)ರ ಪ್ರಕಾರ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡಬೇಕು. ಕೊಳಗೇರಿ ಮಂಡಳಿ ಸ್ಥಾಪಿತವಾಗಿರುವುದೇ ಕೊಳಗೇರಿ ಜನರಿಗೆ ಪುನರ್ವಸತಿ ಕಲ್ಪಿಸಿಕೊಡುವುದಕ್ಕಾಗಿ. ಯೋಜನೆ ಯಾವುದೇ ಇದ್ದರೂ ಫಲಾನುಭವಿ ಕೊಳಗೇರಿ ಜನರಾಗಿರಬೇಕು; ಇದು ಮಂಡಳಿಯ ನಿಯಮ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ರಾಜೀವ್‌ಗಾಂಧಿ ನಗರಕ್ಕೆ (ದೇವಸಂದ್ರ) 107 ಮನೆಗಳು, ಸಂಜಯ್‌ಗಾಂಧಿ ನಗರಕ್ಕೆ (ದೇವಸಂದ್ರ) 245 ಮನೆಗಳು, ರಾಮಮೂರ್ತಿನಗರ ಸರ್ವೆ ನಂ.85ರಲ್ಲಿನ ಕೊಳಗೇರಿ ಪ್ರದೇಶಕ್ಕೆ 337 ಮನೆಗಳು ಹಾಗೂ ಭಟ್ಟರಹಳ್ಳಿ ಜನತಾ ಕಾಲೋನಿಗೆ 79 ಮನೆಗಳು ಒಟ್ಟು 768 ಮನೆಗಳನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಕೊಳಗೇರಿ ಮಂಡಳಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಿ, ಮನೆಗಳನ್ನು ನಿರ್ಮಾಣ ಮಾಡಿತ್ತು.

ಆದರೆ, ಕೊಳಗೇರಿ ಮಂಡಳಿಗೆ ಸದರಿ ಮನೆಗಳನ್ನು ಮೇಲ್ಕಂಡವರಿಗೆ ಹಂಚಿಕೆ ಮಾಡುವ ಅಥವಾ ಸ್ಥಳಾಂತರ ಮಾಡುವ ಯಾವ ಉದ್ದೇಶವೂ ಇಲ್ಲ. ಸದರಿ ಮನೆಗಳನ್ನು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಸೂಚಿಸುವ ಕಾರ್ಯಕರ್ತರಿಗೆ ಹಾಗೂ ಅವರ ಹಿಂಬಾಲಕರಿಗೆ ಹಂಚಿಕೆ ಮಾಡಬೇಕೆಂಬದು ಮಂಡಳಿಯ ಇರಾದೆಯಾಗಿದೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಶಾಸಕ ಬೈರತಿ ಬಸವರಾಜ್ ಅವರು ತಮ್ಮ ಕಾರ್ಯಕರ್ತರಿಂದ ಹಾಗೂ ಹಿಂಬಾಲಕರಿಂದ ಅರ್ಜಿಗಳನ್ನು ಪಡೆದು, ಪಟ್ಟಿಮಾಡಿ, 768 ಫಲಾನುಭವಿಗಳಿಗೆ ಮಂಡಳಿಯಿಂದ ಅಕ್ರಮವಾಗಿ ಅನುಮೋದನೆ ಪಡೆದುಕೊಂಡಿದ್ದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಆಶ್ರಯ ಸಮಿತಿ ಇಲ್ಲ್ಲ. ಸರ್ಕಾರ (ವಸತಿ ಇಲಾಖೆ) ಅಥವಾ ಕೊಳಗೇರಿ ಮಂಡಳಿ ಯಾವುದೇ ಆಶ್ರಯ ಸಮಿತಿಗಳನ್ನು ರಚನೆ ಮಾಡಿರುವುದಿಲ್ಲ. ಆದರೂ ಇವರು 768 ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮನ್ನು ಆಶ್ರಯ ಸಮಿತಿ ಅಧ್ಯಕ್ಷರು ಎಂದು ಬರೆಸಿಕೊಂಡಿದ್ದಾರೆ. ಇದನ್ನು ಅನುಮೋದಿಸಿ ಅವರೊಂದಿಗೆ ಮಂಡಳಿಯ ಆಯುಕ್ತರಾದ ವೆಂಕಟೇಶ್ ಸಹಾ ಸಹಿ ಮಾಡಿದ್ದಾರೆ. ಇದು ಮಂಡಳಿಯ ನಿಯಮಗಳಿಗೆ ವಿರುದ್ಧವಾದದ್ದು ಮತ್ತು ದೊಡ್ಡ ಅಪರಾಧವಾಗಿದೆ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ವಸತಿ ಮನೆಗಳನ್ನು, ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರದ (ವಸತಿ ಇಲಾಖೆ) ವತಿಯಿಂದ ಆಶ್ರಯ ಸಮಿತಿಯನ್ನು ರಚಿಸಲಾಗಿರುವ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ದಿನಾಂಕ: 04.03.2023 ರಂದು ವಸತಿ ಇಲಾಖೆಗೆ ಅರ್ಜಿ ಬರೆಯಲಾಗಿತ್ತು. ಪತ್ರಕ್ಕೆ ಉತ್ತರ ನೀಡಿದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ-2 ರವರು “ಕೋರಿರುವ ಮಾಹಿತಿಯು ಇಲಾಖೆಯಲ್ಲಿ ಲಭ್ಯವಿರುವುದಿಲ್ಲ” ಎಂದು ಹೇಳಿ, ಮಾಹಿತಿಯನ್ನು ನೇರವಾಗಿ ಒದಗಿಸಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಸೆಕ್ಷನ್ 6(3) ರಡಿಯಲ್ಲಿ ಅರ್ಜಿಯನ್ನು ವರ್ಗಾವಣೆ ಮಾಡಿದರು.

ವಸತಿ ಇಲಾಖೆ, ಸೆಕ್ಷನ್ 6(3)ರ ಅಡಿಯಲ್ಲಿ ವರ್ಗಾಯಿಸಿದ ಪತ್ರಕ್ಕೆ ಮಾಹಿತಿ ಒದಗಿಸಿದ ಮಂಡಳಿಯ ನಂ.1ನೇ ವಿಭಾಗದ ಕಾರ್ಯಪಾಲಕ ಅಭಿಯಂತರರು “ತಾವು ಕೋರಿರುವ ಮಾಹಿತಿಯನ್ನು ಪರಿಶೀಲಿಸಲಾಗಿದ್ದು ಸದರಿ ಆದೇಶವು ಈ ಕಛೇರಿಯಲ್ಲಿ ಲಭ್ಯವಿರುವುದಿಲ್ಲ. ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ನಂ.2ನೇ ಉಪ ವಿಭಾಗ ಬೆಂಗಳೂರು ರವರ ಬಳಿಯೂ ಲಭ್ಯವಿರುವುದಿಲ್ಲ” ಎಂದು ಮಾಹಿತಿ ನೀಡಿದ್ದಾರೆ” ಹಾಗಾಗಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಸಮಿತಿಯೇ ರಚನೆಯಾಗಿಲ್ಲ ಎಂಬುದು ಸಾಬೀತಾಗಿದೆ.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಶ್ರಯ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ವಇ ಹೆಚ್‌ಎಎಸ್ 2013, ಬೆಂಗಳೂರು, ದಿನಾಂಕ: 31ನೇ ಅಕ್ಟೋಬರ್ 2013 ರಂದು ನಗರ ಆಶ್ರಯ ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಅದರಂತೆ, ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಅಧ್ಯಕ್ಷರಾಗಿರುತ್ತಾರೆ. ಸಂಬಂಧಿಸಿದ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿರುವ ವಿಧಾನ ಪರಿಷತ್ತಿನ ಸದಸ್ಯರು, ಪಾಲಿಕೆಯ ಮಹಾಪೌರರು ಅಥವಾ ಮಹಾನಗರ ಪಾಲಿಕೆಯ ಪ್ರತಿನಿಧಿ, ಸಂಬಂಧಪಟ್ಟ ಕಂದಾಯ ಉಪವಿಭಾಗಾಧಿಕಾರಿ, ತಾಲ್ಲೂಕಿನ ತಹಶೀಲ್ದಾರರು ಸದಸ್ಯರಾಗಿರುತ್ತಾರೆ. ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಆಯುಕ್ತರು ನಾಮ ನಿರ್ದೇಶನ ಮಾಡುವ ಜಂಟಿ/ಉಪ ಆಯುಕ್ತರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬ ಪ್ರತಿನಿಧಿ ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ. ಮೇಲಿನ ಸದಸ್ಯರ ಪೈಕಿ ಒಬ್ಬರು ಮಹಿಳೆಯಾಗಿರಬೇಕು. ಇದುವೇ ಆಶ್ರಯ ಸಮಿತಿ ರಚನೆಯ ವಿಧಾನ. ಮನೆ ಕೋರಿ ಬರುವ ಅರ್ಜಿಗಳನ್ನು ಇವರೆಲ್ಲರೂ ಸೇರಿ ಪರಿಶೀಲಿಸಿ, ಅಂತಿಮಗೊಳಿಸಿ, ಪಟ್ಟಿ ಮಾಡಿದ ಮೇಲೆ ಅಧ್ಯಕ್ಷರು (ಶಾಸಕರು) ಪಟ್ಟಿಗೆ ಸಹಿ ಮಾಡುತ್ತಾರೆ. ಆ ಪಟ್ಟಿಯಲ್ಲಿರುವವರೇ ಅಧಿಕೃತ ಫಲಾನುಭವಿಗಳು. ಅಂತಹವರಿಗೆ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಮನೆಗಳನ್ನು ಹಂಚಿಕೆ ಮಾಡುತ್ತದೆ. ಇದ್ಯಾವುದೂ ಇಲ್ಲದೇ ತನಗೆ ಇಷ್ಟ ಬಂದವರನ್ನೆಲ್ಲ ಸೇರಿಸಿಕೊಂಡು ಅಕ್ರಮವಾಗಿ ಪಟ್ಟಿ ಮಾಡಿ, ಅದಕ್ಕೆ ಅಶ್ರಯ ಸಮಿತಿ ಅಧ್ಯಕ್ಷರೆಂದು ಸಹಿ ಮಾಡಿಸಿ, ಮನೆಗಳನ್ನು ಹಂಚಿಕೆ ಮಾಡುತ್ತಿರುವುದು ಕಾನೂನು ಬಾಹಿರವಾದ ಕೆಲಸವಲ್ಲದೇ ಮತ್ತೇನು? ಇದು ಅಕ್ಷಮ್ಯ ಅಪರಾಧವೂ ಆಗಿದೆ.

912 (ಜಿ+3) ಮನೆಗಳ ಪೈಕಿ (ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮನೆಗಳನ್ನೂ ಸೇರಿ) 912 ಮನೆಗಳು ಮೇಲ್ಛಾವಣಿ ಮಟ್ಟ ಮತ್ತು 96 ಮನೆಗಳು ಪೂರ್ಣತಾ ಹಂತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ. ಮನೆಗಳ ಕಾಮಗಾರಿ ಪೂರ್ಣವಾಗಲು ಕನಿಷ್ಟ ಇನ್ನೂ ಒಂದೂವರೆ ವರ್ಷವಾದರೂ ಬೇಕು ಎಂದು ಹೇಳಲಾಗುತ್ತಿದೆ. ಕಾಮಗಾರಿ ಮುಗಿಸಲು ಮಂಡಳಿಯಲ್ಲಿ ಹಣವೂ ಇಲ್ಲ. ಈ ಹಿನ್ನಲೆಯಲ್ಲಿ ಮನೆಗಳನ್ನು ಹಂಚಿಕೆ ಮಾಡುವ ತರಾತುರಿ ಯಾಕೆ?

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ 768 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಕೊಡುವ ಮೂಲಕ ಶಾಸಕರು ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯಲು ಮಂಡಳಿ ಅನುವು ಮಾಡಿಕೊಟ್ಟಿತು. ಮುಂಬರುವ ಸಂಸತ್ ಚುನಾವಣೆಯಲ್ಲಿ ಮುಂದಿನಂತೆಯೇ ಮತ ಗಳಿಸಲು ಇದೀಗ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಶಾಸಕರಾದ ಬೈರತಿ ಬಸವರಾಜ್ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗಬೇಕು ಎಂಬುದಕ್ಕಾಗಿ, ಕೊಳಗೇರಿ ಜನರ ಮನೆಗಳನ್ನು ಶಾಸಕರು ಕೈತೋರಿಸುವ ಫಲಾನುಭವಿಗಳಿಗೆ ಮಂಡಳಿ ಹಂಚಿಕೆ ಮಾಡುತ್ತಿರುವುದು ಕಾನೂನು ಬಾಹಿರವಲ್ಲವೇ? ಕೊಳಗೇರಿ ಮಂಡಳಿ ಸರ್ಕಾರಿ ಸಂಸ್ಥಯೋ? ಅಥವಾ ಶಾಸಕರ ಭವನವೋ? ಮಂಡಳಿಯ ಅಧಿಕಾರಿಗಳು ಸಂಬಳ ಪಡೆಯುವುದು ಕೊಳಗೇರಿ ಜನರ ಹೆಸರಿನಲ್ಲೋ? ಅಥವಾ ಶಾಸಕರ ಬಳಿಯೋ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡಬೇಕಿದೆ.

ಕಳೆದ ವರ್ಷ ಜನವರಿ 20 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಜನಶಕ್ತಿ ವೇದಿಕೆಯಿಂದ ಪತ್ರ ಬರೆದು, “ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ಮನೆಗಳನ್ನು, ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುವುದನ್ನು ತಡೆಗಟ್ಟಬೇಕೆಂದು ಕೋರಲಾಯಿತು. ನಮ್ಮ ಮನವಿಯನ್ನು ಮಾನ್ಯ ಮಾಡಿದ ವಸತಿ ಇಲಾಖೆ, ದೂರಿನಲ್ಲಿರುವ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ವಾಸ್ತವಾಂಶದ ಅಭಿಪ್ರಾಯದ ವರದಿಯೊಂದನ್ನು ಅತ್ಯಂತ ಜರೂರಾಗಿ ಸರ್ಕಾರಕ್ಕೆ ಕಳುಹಿಸಿಕೋಡುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರನ್ನು ಕೋರಿತು. ಆದರೆ ವರ್ಷವಾದರೂ ಇನ್ನು ವರದಿಯನ್ನು ಕಳುಹಿಸಿಕೊಡಲಿಲ್ಲ. ಇದು ಶಾಸಕರ ಮೇಲೆ ಮಂಡಳಿಯ ಅಧಿಕಾರಿಗಳು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ.

ಚುನಾವಣೆ ರಾಜಕಾರಣಕ್ಕಾಗಿ ಕೊಳಗೇರಿ ಜನರ ಮನೆಗಳನ್ನು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಅವರು ಮಂಡಳಿ ನಿಯಮಗಳನ್ನು ಗಾಳಿಗೆದೂರಿ ಮತ್ತು ತಮ್ಮನ್ನು ಆಶ್ರಯ ಸಮಿತಿ ಅಧ್ಯಕ್ಷರೆಂದು ಹೇಳಿಕೊಂಡು ತಮ್ಮ ಕಾರ್ಯಕರ್ತರಿಗೆ, ಹಿಂಬಾಲಕರಿಗೆ ಹಾಗೂ ಸ್ಥಿತಿವಂತರಿಗೆ ಸದರಿ ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದಾರೆ. ಇದು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಮತ್ತು ವಇ 115 ಕೊಮಂಇ 2013 (2)ಕ್ಕೆ ವಿರೋಧವಾಗಿದೆ.

ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ.

ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಮನವಿಯಾಗಿದೆ.    

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸು ಇದೀಗ ಸಾಕಾರಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬೆಂಗಳೂರು ನಗರ ಜಿಲ್ಲೆಯಾದ್ಯಂತ ‘1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿಯಲ್ಲಿ ನಿರ್ಮಿಸಿ ಪೂರ್ಣಗೊಂಡಿರುವ ಬಡಾವಣೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಕೂಡಲೇ ನೊಂದಾಯಿಸಿ, ಸ್ವಂತ ಸೂರು ಹೊಂದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಎಕ್ಸ್’ ಪೇಜ್ ನಲ್ಲಿ ತಿಳಿಸಿದ್ದಾರೆ.

ಕೂಗೂರು ಸರ್ವೆ ನಂ.69, ಸಾದೇನಹಳ್ಳಿ ಸರ್ವೆ ನಂ.30, ಅಗ್ರಹಾರ ಪಾಳ್ಯ ಸರ್ವೆ ನಂ.30, ಚಿಕ್ಕನಹಳ್ಳಿ-ಕಾಮನಹಳ್ಳಿ ಸರ್ವೆ ನಂ.71 ಹಾಗೂ ಜೆ.ಭಂಗೀಪುರ ಸರ್ವೆ ನಂ.29ರಲ್ಲಿ 1 ಬಿ.ಹೆಚ್.ಕೆ ಮನೆಗಳು ಮತ್ತು ಗೂಳಿಮಂಗಲ ಸರ್ವೆ ನಂ.67ರಲ್ಲಿ 2 ಬಿ.ಹೆಚ್.ಕೆ ಮನೆಗಳು ಪೂರ್ಣಗೊಂಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: https://ashraya.karnataka.gov.in/