ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಅಲ್ವಾ ಸಮಾರಂಭ Archives » Dynamic Leader
September 10, 2024
Home Posts tagged ಅಲ್ವಾ ಸಮಾರಂಭ
ರಾಜಕೀಯ

 ಡಿ.ಸಿ.ಪ್ರಕಾಶ್

ನವದೆಹಲಿ: “ಪ್ರಧಾನಿ ಮೋದಿ ತಮ್ಮ ಶರ್ಟ್‌ನ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಭಾರತ ಸಿಲುಕಿಕೊಂಡಿದೆ. ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಭಾರತವೂ ಮೋದಿ ಆಡಳಿತದಲ್ಲಿ ಸಿಕ್ಕಿಬಿದ್ದಿದೆ” ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡಿದರು. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, “ಭಾರತದಲ್ಲಿ ಭಯದ ವಾತಾವರಣವಿದೆ. ಆ ಭಯ ನಮ್ಮ ದೇಶದ ಎಲ್ಲ ಭಾಗಗಳಿಗೂ ಹಬ್ಬಿದೆ. ಬಿಜೆಪಿಯಲ್ಲಿ ಒಬ್ಬರಿಗೆ ಮಾತ್ರ ಪ್ರಧಾನಿ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿಯಾಗಬೇಕಾದರೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಆಡಳಿತದಲ್ಲಿ ಕೇಂದ್ರ ಸಚಿವರು, ರೈತರು, ಕಾರ್ಮಿಕರು ಎಲ್ಲರೂ ಭಯದಲ್ಲಿದ್ದಾರೆ. ಈ ಭಯ ಭಾರತದಲ್ಲಿ ಏಕೆ ಆಳವಾಗಿದೆ ಎಂಬುದು ನನ್ನ ಒಂದೇ ಪ್ರಶ್ನೆಯಾಗಿದೆ. ನನ್ನ ಮಾತಿಗೆ ಬಿಜೆಪಿಯವರು ನಗುತ್ತಿದ್ದರೂ ಅವರಿಗೆ ಒಳಗೊಳಗೆ ಒಂದು ರೀತಿಯ ಭಯ ಕಾಡುತ್ತಿದೆ.

ಪ್ರಧಾನಿ ಮೋದಿ ತಮ್ಮ ಶರ್ಟ್‌ನ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಭಾರತ ಸಿಲುಕಿಕೊಂಡಿದೆ. ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಭಾರತವೂ ಮೋದಿ ಆಡಳಿತದಲ್ಲಿ ಸಿಕ್ಕಿಬಿದ್ದಿದೆ. ಭಾರತವನ್ನು ವಶಪಡಿಸಿಕೊಂಡಿರುವ ಬಿಜೆಪಿಯ ಚಕ್ರವ್ಯೂಹದ ಹಿಂದೆ 3 ಶಕ್ತಿಗಳಿವೆ. ಅವುಗಳು ಯಾವುದೆಂದರೆ,

ಭಾರತದ ಎಲ್ಲಾ ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿರುವ ಇಬ್ಬರು ವ್ಯಕ್ತಿಗಳು, ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸರ್ಕಾರದ ಸಂಸ್ಥೆಗಳು, ರಾಜಕೀಯ ಅಧಿಕಾರದ ಆಸೆ. ಈ ಮೂರೂ ಸೇರಿ ಭಾರತವನ್ನು ಹಾಳು ಮಾಡಿದೆ. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ಈ ಚಕ್ರವ್ಯೂಹದ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬುದು ನನ್ನ ಅನಿಸಿಕೆ.

ಕೇಂದ್ರ ಬಜೆಟ್ ಈ ದೇಶದ ರೈತರು, ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ, ನನ್ನ ದೃಷ್ಟಿಯಲ್ಲಿ ಈ ಬಜೆಟ್‌ನ ಏಕೈಕ ಉದ್ದೇಶವೆಂದರೆ, ಏಕಸ್ವಾಮ್ಯ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಸರ್ಕಾರಿ ಸಂಸ್ಥೆಗಳ ರಚನೆಯನ್ನು ಬಲಪಡಿಸುವುದು. ಏಕೆಂದರೆ, ಸಣ್ಣ ಉದ್ದಿಮೆಗಳಿಗೆ ಭಾರಿ ಹೊಡೆತ ನೀಡಿರುವ ತೆರಿಗೆ ಭಯೋತ್ಪಾದನೆಗೂ ಬಜೆಟ್‌ಗೂ ಯಾವುದೇ ಸಂಬಂಧವಿಲ್ಲ. ಜಿಎಸ್‌ಟಿ ಒಂದು ತೆರಿಗೆ ಭಯೋತ್ಪಾದನೆ. ಜಿಎಸ್‌ಟಿಯಿಂದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಶವಾಗುತ್ತವೆ. ಕೇಂದ್ರ ಸರ್ಕಾರ ಜಿಎಸ್‌ಟಿ ಮೂಲಕ ತೆರಿಗೆ ಭಯೋತ್ಪಾದನೆಯನ್ನು ಹೇರಿದೆ.

‘ಅಗ್ನಿಪಥ್’ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಪಿಂಚಣಿ ನೀಡಲು ಬಜೆಟ್‌ನಲ್ಲಿ ಯಾವುದೇ ಹಣಕಾಸಿನ ಹಂಚಿಕೆ ಇಲ್ಲ. ಯುವಕರನ್ನು ಬಾಧಿಸುವ ದೊಡ್ಡ ಸಮಸ್ಯೆ ಎಂದರೆ ಪ್ರಶ್ನೆ ಪತ್ರಿಕೆ ಸೋರಿಕೆ. ಆದರೆ ಹಣಕಾಸು ಸಚಿವರು ಬಜೆಟ್‌ನಲ್ಲಿ ಈ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 70 ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಅಲ್ಲದೆ, ಕಳೆದ 10 ವರ್ಷಗಳಲ್ಲಿ ನಡೆದ ನೀಟ್ ಪರೀಕ್ಷೆಯ ಪತ್ರಿಕೆಗಳ ಸೋರಿಕೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪದವಿಲ್ಲ. ಮೋದಿ ಸರ್ಕಾರ ನಿರುದ್ಯೋಗ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಮಾನಾರ್ಥಕವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕಳೆದ 20 ವರ್ಷಕ್ಕಿಂತ ಕಡಿಮೆ ಹಣ ಮೀಸಲಿಡಲಾಗಿದೆ.

ಅದೇ ರೀತಿ ಬಜೆಟ್‌ನಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ಇಲ್ಲ. ಎನ್‌ಡಿಎ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡುತ್ತೇವೆ ಎಂದು ರೈತರಿಗೆ ಹೇಳಲು ಬಯಸುತ್ತೇನೆ. ಇದೇ ಸದನದಲ್ಲಿ, ನಾವು ಕನಿಷ್ಟ ಬೆಂಬಲ ಬೆಲೆಗೆ ಶಾಸನಬದ್ಧ ಖಾತರಿ ಮಸೂದೆಯನ್ನು ಅಂಗೀಕರಿಸುತ್ತೇವೆ. ಈ ಬಜೆಟ್‌ಗೂ ಮುನ್ನ ಮಧ್ಯಮ ವರ್ಗದವರು ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದರು. ಈಗ ಈ ಬಜೆಟ್ ಮೂಲಕ ಬಿಜೆಪಿ ಸರ್ಕಾರ ಅದೇ ಮಧ್ಯಮ ವರ್ಗದ ಬೆನ್ನು ಮತ್ತು ಎದೆಗೆ ಚೂರಿ ಹಾಕಿದೆ.

ಭಾರತದ ಮೂಲಸೌಕರ್ಯ ಮತ್ತು ವ್ಯವಹಾರಗಳನ್ನು ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ನಿಯಂತ್ರಿಸುತ್ತಿದ್ದಾರೆ. ಅವರು ವಿಮಾನ ನಿಲ್ದಾಣಗಳು, ದೂರಸಂಪರ್ಕ ಕಂಪನಿಗಳು, ಬಂದರುಗಳು ಇತ್ಯಾದಿಗಳನ್ನು ಹೊಂದಿದ್ದಾರೆ. ಮುಂದೆ ರೈಲ್ವೆಗೂ ಕಾಲಿಡಲಿದ್ದಾರೆ. ಅವರಿಗೆ ಭಾರತದ ಸಂಪತ್ತನ್ನು ತೆಗೆದುಕೊಳ್ಳುವ ಏಕಸ್ವಾಮ್ಯ ಹಕ್ಕನ್ನು ನೀಡಲಾಗಿದೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಹಣಕಾಸು ಸಚಿವಾಲಯದಲ್ಲಿ ನಡೆದ ಸಾಂಪ್ರದಾಯಿಕ ‘ಅಲ್ವಾ’ ಸಮಾರಂಭದಲ್ಲಿ ಒಬ್ಬನೇ ಒಬ್ಬ ಆದಿವಾಸಿ ಅಥವಾ ದಲಿತ ಅಧಿಕಾರಿಯೂ ಕಾಣಲಿಲ್ಲ. ಒಟ್ಟು 20 ಅಧಿಕಾರಿಗಳು ಕೇಂದ್ರ ಬಜೆಟ್ ಸಿದ್ಧಪಡಿಸಿದರು. ಅವರಲ್ಲಿ ಒಬ್ಬರೂ ಹಿಂದುಳಿದ, ದಲಿತ ಅಥವಾ ಬುಡಕಟ್ಟು ಸಮುದಾಯಕ್ಕೆ ಸೇರಿದವರಲ್ಲ. ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜನರು ಭಾರತದ ಜನಸಂಖ್ಯೆಯಲ್ಲಿ ಶೇ.73ರಷ್ಟು ಇದ್ದಾರೆ. ಆದರೆ ಕೇಂದ್ರ ಬಜೆಟ್‌ನಿಂದ ಅವರಿಗೆ ಏನೂ ಸಿಕ್ಕಿಲ್ಲ.

ಬಿಜೆಪಿಯ ಚಕ್ರವ್ಯೂಹ ಕೋಟ್ಯಂತರ ಜನರಿಗೆ ಹಾನಿ ಮಾಡುತ್ತದೆ. ನಾವು ಈ ಚಕ್ರವ್ಯೂಹವನ್ನು ಮುರಿಯಲಿದ್ದೇವೆ. ಇದನ್ನು ಮಾಡುವ ಮಾರ್ಗವೇನಂದರೆ, ನಿಮ್ಮನ್ನು ಹೆದರಿಸುವುವ ಜಾತಿವಾರು ಜನಗಣತಿಯೇ. ಇಂಡಿಯಾ ಮೈತ್ರಿಕೂಟವು ಈ ಸದನದಲ್ಲಿ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ಮಸೂದೆಯನ್ನು ಅಂಗೀಕರಿಸುತ್ತದೆ. ಅದೇ ರೀತಿ ಜಾತಿವಾರು ಜನಗಣತಿ ನಡೆಸುತ್ತೇವೆ. ನೀವು ಇಷ್ಟಪಡುತ್ತೀರೋ ಇಲ್ಲವೋ ಅದು ಸಂಭವಿಸುತ್ತದೆ.

ಭಾರತದ ಸ್ವರೂಪವೇ ಬೇರೆ. ಪ್ರತಿಯೊಂದು ಧರ್ಮವು ಚಕ್ರವ್ಯೂಹಕ್ಕೆ ವಿರೋಧಿ ತಂತ್ರವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿಯೂ ಸಹ ಇದೆ. ಹಸಿರು ಕ್ರಾಂತಿ, ಸ್ವಾತಂತ್ರ್ಯ, ಸಂವಿಧಾನದ ಮೂಲಕ ನೀವು ರಚಿಸಿದ ಚಕ್ರವ್ಯೂಹವನ್ನು ನಾವು ಮುರಿಯುತ್ತೇವೆ. ನಿಮ್ಮನ್ನು ನೀವು ಹಿಂದೂ ಎಂದು ಕರೆದುಕೊಳ್ಳುತ್ತೀರಿ. ಆದರೆ ನಿಮಗೆ ಹಿಂದೂ ಧರ್ಮ ಅರ್ಥವಾಗುತ್ತಿಲ್ಲ” ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.