ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಅಮಿತ್ ಶಾ Archives » Dynamic Leader
December 13, 2024
Home Posts tagged ಅಮಿತ್ ಶಾ
ರಾಜಕೀಯ

ಡಿ.ಸಿ.ಪ್ರಕಾಶ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಪರಿಸ್ಥಿತಿಗೆ ಬಿಜೆಪಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಆರೋಪಿಸಿದ್ದಾರೆ.

ದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಮಲ್ಟಿಪ್ಲೆಕ್ಸ್ ಥಿಯೇಟರ್ ಬಳಿಯ ಸ್ವೀಟ್ ಅಂಗಡಿ ಮುಂಭಾಗದಲ್ಲಿ ಸಂಭವಿಸಿದ ನಿಗೂಢ ಸ್ಫೋಟವು ಪ್ರದೇಶದಲ್ಲಿ ಸಾಕಷ್ಟು ಆಘಾತವನ್ನು ಸೃಷ್ಟಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅತಿಶಿ, “ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ 2 ತಿಂಗಳ ಅವಧಿಯಲ್ಲಿ 2ನೇ ಬಾರಿ ಇಂತಹ ಘಟನೆ ನಡೆದಿದೆ.

ಈ ಪರಿಸ್ಥಿತಿಯು ಭದ್ರತಾ ಕ್ರಮಗಳಲ್ಲಿ ಪ್ರಮುಖ ಲೋಪವನ್ನು ಸೂಚಿಸುತ್ತದೆ. ಈ ಪರಿಸ್ಥಿತಿಗೆ ಬಿಜೆಪಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ನಿವಾಸಿಗಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಇಂತಹ ಘಟನೆಗಳು ದೆಹಲಿಯಲ್ಲಿ ಹೆಚ್ಚುತ್ತಿರುವ ಅಭದ್ರತೆಯ ಭಾವನೆಯನ್ನು ತೋರಿಸುತ್ತದೆ. ದೆಹಲಿಯಲ್ಲಿ ಎಲ್ಲಿ ನೋಡಿದರೂ ಭಯದ ವಾತಾವರಣವಿದೆ. ಸಂಜೆ 7 ಗಂಟೆಯ ನಂತರ ಮಹಿಳೆಯರು ಅಸುರಕ್ಷಿತರಾಗಿರುವುದಾಗಿ ಭಾವಿಸುತ್ತಾರೆ. ಅಲ್ಲದೆ, ಹೆಣ್ಣು ಮಕ್ಕಳು ಹೊರಗೆ ಹೋಗುವ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ” ಎಂದು ಹೇಳಿದರು.

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ತಲೆ ಎತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ರಾಜಕೀಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜಸ್ರೊಟಾ (Jasrota) ಪ್ರದೇಶದಲ್ಲಿ ನೆನ್ನೆ ಕಾಂಗ್ರೆಸ್ ನಿಂದ ಚುನಾವಣಾ ಪ್ರಚಾರ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿದರು. ಸ್ವಲ್ಪಮಟ್ಟಿಗೆ ಕುಸಿದು ಬಿದ್ದ ಅವರನ್ನು ವೇದಿಕೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಓಡಿ ಬಂದು ಎತ್ತಿ ಹಿಡಿದರು. ನಂತರ ಅವರನ್ನು ಆಸನಕ್ಕೆ ಕರೆದೊಯ್ದು ಕುಳಿತುಕೊಳ್ಳುವಂತೆ ಮಾಡಿದರು. ಸ್ವಲ್ಪ ವಿರಾಮದ ನಂತರ ಮತ್ತೆ ಮಾತನಾಡಿದ ಖರ್ಗೆಯವರು ‘ಅಷ್ಟು ಬೇಗ ನಾನು ಸಾಯುವುದಿಲ್ಲ. ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವವರೆಗೂ ನಾನು ಬದುಕಿರುತ್ತೇನೆ; ನಾನು ನಿಮಗಾಗಿ ಹೋರಾಡುತ್ತೇನೆ” ಎಂದು ಆವೇಶದಿಂದ ಹೇಳಿದರು.

ಖರ್ಗೆಯವರ ಭಾಷಣವನ್ನು ಅಮಿತ್ ಶಾ ಖಂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಖರ್ಗೆಯವರ ಹೇಳಿಕೆ ಅವಮಾನಕರ ಮತ್ತು ನಾಚಿಕೆಗೇಡು. ಖರ್ಗೆಯವರ ಮಾತು ಅವರ ಅಸಹ್ಯ ಮತ್ತು ಭಯವನ್ನು ತೋರಿಸುತ್ತದೆ. ಖರ್ಗೆಯವರ ಆರೋಗ್ಯದ ವಿಚಾರವಾಗಿ, ಅವರು ದೀರ್ಘಾಯುಷ್ಯ ಮತ್ತು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಅವರು ದೀರ್ಘಕಾಲ ಬದುಕಲಿ, 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ರೂಪುಗೊಳ್ಳುವವರೆಗೆ ಬದುಕಲಿ’ ಎಂದು ಹೇಳಿದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಎಕ್ಸ್ ಸೈಟ್‌ನಲ್ಲಿ, ‘ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ, ಜನಗಣತಿ, ಜಾತಿವಾರು ಜನಗಣತಿ ಮುಂತಾದ ಗಂಭೀರ ವಿಷಯಗಳತ್ತ ಗಮನಹರಿಸಬೇಕು. ನಿಮ್ಮ ಸರ್ಕಾರದ ಅಂಕಿಅಂಶಗಳೇ ನಗರದ ಚರಂಡಿ ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಲ್ಲಿ ಶೇಕಡಾ 92ರಷ್ಟು ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ತೋರಿಸುತ್ತದೆ.

ದಲಿತರು, ಆದಿವಾಸಿಗಳು, ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ವರ್ಗದವರು ಯಾವ ಕೆಲಸದ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ ಎಂಬುದು ಬಹಿರಂಗವಾಗುತ್ತದೆ ಎಂಬುದಕ್ಕಾಗಿಯೇ ಬಿಜೆಪಿ ಜಾತಿವಾರು ಜನಗಣತಿಯನ್ನು ವಿರೋಧಿಸುತ್ತಿದೆ. ಜಾತಿವಾರು ಜನಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ; ಅದನ್ನು ಮಾಡಿ ಮುಗಿಸೋಣ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೇಶ

ಗುರ್ಗಾನ್: ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

ಹರಿಯಾಣದ ಗುರ್ಗಾನ್ನ (Gurgaon) ಬಾದಶಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill 2024) ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದ್ದೇವೆ. ಇದರೊಂದಿಗೆ ಮಂಡಳಿಯ ಕೋರಿಕೆಯಂತೆ ಹಣ ವಿತರಣೆಗೂ ಅನುಮತಿ ನೀಡಲಾಗಿದೆ.

ಈ ಮಸೂದೆಗೆ ಸಂಬಂಧಿಸಿದಂತೆ ವಕ್ಫ್ ಮಂಡಳಿಯ ಪ್ರತಿನಿಧಿಗಳು ಮಾಡಿರುವ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ. ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿಯ ಜಗದಾಂಬಿಕಾ ಪಾಲ್ ಅವರು ಮಸೂದೆಯ ಸಂಪೂರ್ಣ ವಿವರಗಳನ್ನು ಅಧ್ಯಯನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಸೈಬರ್ ಅಪರಾಧ ಸಮನ್ವಯ ಕೇಂದ್ರದ ಮೊದಲ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಿನ್ನೆ ದೆಹಲಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ ಸುಮಾರು ಶೇ.46ರಷ್ಟು ಅಥವಾ ಬಹುತೇಕ ಅರ್ಧದಷ್ಟು ಗಾತ್ರವನ್ನು ಭಾರತ ಕೈಗೊಳ್ಳುತ್ತದೆ. ಇದು ಏಜೆನ್ಸಿಗಳ ಕೆಲಸವನ್ನು ಸವಾಲಾಗಿಸುವಂತೆ ಮಾಡುತ್ತದೆ.

ಅಪರಾಧಿಗಳು ಬಳಸುವ MO ಅನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (AI)ಯನ್ನು ಬಳಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ 5000 ಸೈಬರ್ ಕಮಾಂಡೋಗಳಿಗೆ (Commandos) ತರಬೇತಿ ನೀಡಿ ಸಿದ್ಧಪಡಿಸಲು ಸರ್ಕಾರ ಯೋಜಿಸಿದೆ” ಎಂದು ಅವರು ಹೇಳಿದರು.

ಕ್ರೀಡೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ನಕಲಿ ಅರ್ಜಿಗಳು ಬಂದಿವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹೇಳಿದೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅವಧಿ ಮುಂಬರುವ ಟಿ20 ವಿಶ್ವಕಪ್‌ನೊಂದಿಗೆ ಕೊನೆಗೊಳ್ಳಲಿದೆ. ಇದರ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಅದರಂತೆ ಬಿಸಿಸಿಐ ಗೂಗಲ್ ಫಾರಂಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿತ್ತು. ಅರ್ಜಿ ಸಲ್ಲಿಸುವ ಗಡುವು ನಿನ್ನೆ (ಮೇ 27) ಕೊನೆಗೊಂಡಿದೆ.

ಈ ಹಿನ್ನೆಲೆಯಲ್ಲಿ, ಒಟ್ಟು 3000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಬಿಸಿಸಿಐ ಹೇಳಿಕೊಂಡಿದೆ. ಅವುಗಳಲ್ಲಿ ಹೆಚ್ಚಿನವು ನಕಲಿ ಅರ್ಜಿಗಳು ಎಂದು ವರದಿಯಾಗಿದೆ. ನಿರ್ದಿಷ್ಟವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೆಹ್ವಾಗ್, ಧೋನಿ ಮತ್ತಿತರರ ಹೆಸರಿನಲ್ಲೂ ನಕಲಿಯಾಗಿ ಅರ್ಜಿ ಸಲ್ಲಿಸಲಾಗಿದೆ.

ಇದರಿಂದ ಹಲವರು ಆಘಾತಕ್ಕೊಳಗಾಗಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಗೂಗಲ್ ಫಾರಂಗಳ ಮೂಲಕ ಅರ್ಜಿಗಳು ಬಂದಿರುವುದರಿಂದ ಹೆಚ್ಚು ನಕಲಿಗಳು ಬಂದಿವೆ ಎನ್ನಲಾಗಿದೆ. ಇದರಲ್ಲಿನ ಅರ್ಹ ಅರ್ಜಿಗಳನ್ನು ಪರಿಗಣಿಸಿ, ಇವರಲ್ಲಿ ಒಬ್ಬರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಲೇಖನ

ಡಿ.ಸಿ.ಪ್ರಕಾಶ್

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 13 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ 200ಕ್ಕೂ ಹೆಚ್ಚು ಕೃಷಿ ಸಂಘಟನೆಗಳು ಮತ್ತು ರೈತರು ದೆಹಲಿಗೆ ಮುತ್ತಿಗೆ ಹಾಕಿ ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹೋರಾಟ ನಡೆಸಿದ ರೈತರನ್ನು, ನೆರೆಯ ದೇಶದ ಗಡಿಯಲ್ಲಿ ಯುದ್ಧ ನಡೆಸುತ್ತಿರುವ ವಿದೇಶಿಯರ ಮೇಲೆ ದಾಳಿ ಮಾಡಿದಂತೆ, ದೆಹಲಿ ಗಡಿಯಲ್ಲಿ ಮೋದಿ ಸರ್ಕಾರವು ತನ್ನ ನಿಯಂತ್ರದಲ್ಲಿರುವ ದೆಹಲಿ ಪೊಲೀಸರು, ಅರೆಸೇನಾ ಪಡೆ ಮತ್ತು ಹರಿಯಾಣ ಬಿಜೆಪಿ ಸರ್ಕಾರದ ಪೊಲೀಸರ ಮೂಲಕ ರೈತರ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಮೋದಿ ಸರ್ಕಾರದ ದಾಳಿಗೆ ಎರಡು ಹಂತದ ಹೋರಾಟಗಳಲ್ಲಿ 800ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ, “ನಮ್ಮ ಮೇಲೆ ಹಲ್ಲೆ ನಡೆಸಿ, ನಮ್ಮ ಸಹಪಾಟಿಗಳನ್ನು ಕೊಂದು ಹಾಕಿದ್ದ ನೀವುಗಳು, ನಮ್ಮ ಊರಿಗೆ ಮತ ಕೇಳಲು ಏಕೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿ, ಹರಿಯಾಣ ಮತ್ತು ಪಂಜಾಬ್ ನಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಬಿಜೆಪಿ ಸದಸ್ಯರನ್ನು ರೈತರು ಓಡಿಸುತ್ತಿದ್ದಾರೆ. ಇದರಲ್ಲಿ ಹರಿಯಾಣ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರಿಸ್ಥಿತಿ ತೀರಾ ಹೀನಾಯವಾಗಿದೆ.

ಸಿರ್ಸಾದಲ್ಲಿ ಅಶೋಕ್ ತನ್ವಾರ್, ಅಂಬಾಲಾದಲ್ಲಿ ಬಾಂಟೊ ಕಟಾರಿಯಾ, ಸೋನಿಪತ್‌ನಲ್ಲಿ ಮೋಹನ್ ಲಾಲ್ ಬಡೋಲಿ, ರೋಡಕ್‌ನಲ್ಲಿ ಅರವಿಂದ್ ಶರ್ಮಾ, ಮಹೇಂದ್ರ ಘಾಟ್‌ನಲ್ಲಿ ಧರಂಬೀರ್ ಸಿಂಗ್ ಮತ್ತು ಕುರುಕ್ಷೇತ್ರದಲ್ಲಿ ನವೀನ್ ಜಿಂದಾಲ್ ಅವರಂತಹ ಬಿಜೆಪಿ ಅಭ್ಯರ್ಥಿಗಳನ್ನು ರೈತರು ಒಟ್ಟಾಗಿ ಸೇರಿ ಓಡಿಸಿದ್ದರಿಂದ ಅವರು ತಮ್ಮ ಪ್ರಚಾರ ಮತ್ತು ರ‍್ಯಾಲಿಗಳನ್ನುರದ್ದುಗೊಳಿಸಿ ಮನೆ ಸೇರಿದ್ದಾರೆ.

ಮಾಜಿ ಮುಖ್ಯಮಂತ್ರಿ ಖಟ್ಟರ್
ಬಿಜೆಪಿಯ ಹಿರಿಯ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಲೋಕಸಭೆ ಚುನಾವಣೆಯಲ್ಲಿ ಕರ್ನೂಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ಪ್ರಚಾರ ಮಾಡಿದಲ್ಲೆಲ್ಲ ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಮನೋಹರ್ ಲಾಲ್ ಖಟ್ಟರ್ ಪ್ರಚಾರ ಸಭೆಗಳನ್ನು ರದ್ದುಪಡಿಸಿ ಪಕ್ಷದ ಕಚೇರಿಗೆ ವಾಪಸ್ ತೆರಳಿದ್ದಾರೆ. ಕಳೆದ 4 ದಿನಗಳಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಪ್ರಚಾರ ರದ್ದು
ಮೇ 18 ರಂದು ಹರಿಯಾಣದಲ್ಲಿ ಪ್ರಧಾನಿ ಮೋದಿ ಪ್ರಚಾರ ಆರಂಭಿಸಲಿದ್ದು, ಮೇ 25 ರಂದು 6ನೇ ಹಂತದಲ್ಲಿ ರಾಜ್ಯದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಖಟ್ಟರ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ರೈತರು ಓಡಿಸುತ್ತಿರುವುದರಿಂದ ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗಳು ನಡೆಯುವುದು ಖಚಿತವಾಗಿಲ್ಲ ಎಂದು ವರದಿಯಾಗಿದೆ.

“ಇಂಡಿಯಾ” ಮೈತ್ರಿಕೂಟ 7ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ
ಹರಿಯಾಣದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ರೈತರು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ಹೊಂದಿದ್ದಾರೆ. ಬಿಜೆಪಿಯು ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ‘ಝೀರೋ ಗ್ರೌಂಡ್’ ಮತ್ತು ‘ಲೋಕ್ ಪೋಲ್’ ಸೇರಿದಂತೆ ಮತಗಟ್ಟೆ ಸಮೀಕ್ಷಾ ಸಂಸ್ಥೆಗಳು ಬಿಡುಗಡೆ ಮಾಡಿರುವ ಸಮೀಕ್ಷೆಗಳಲ್ಲಿ, ಒಟ್ಟು 10 ಸ್ಥಾನಗಳ ಪೈಕಿ 7ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್-ಆಮ್ ಆದ್ಮಿ ಪಕ್ಷ ಒಳಗೊಂಡ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ. ಜೆಜೆಪಿ ಪಕ್ಷದ ಬೆಂಬಲವನ್ನು ಉಳಿಸಿಕೊಂಡರೆ ಹರಿಯಾಣದಲ್ಲಿ ಬಿಜೆಪಿ “ವೈಟ್‌ವಾಶ್” ಆಗಲಿದೆ ಎಂಬುದು ಗಮನಾರ್ಹ.

SOURCE: theekkathir.in

ದೇಶ

“ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳವನ್ನು ಪ್ರತಿಭಟಿಸಿದಾಗ ಮೋದಿ ಮೌನ ವಹಿಸಿದ್ದರು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದಾಗ ಮೋದಿ ಮೌನ ವಹಿಸಿದ್ದರು. ಸಾವಿರಾರು ಮಹಿಳೆಯರ ವಿನಯವನ್ನು ಕೆರಳಿಸುತ್ತಿರುವ ತನ್ನ ಮಿತ್ರನ ಬಗ್ಗೆ ಮೋದಿ ಮೌನ ವಹಿಸಿದ್ದಾರೆ” -ಡಿ.ರಾಜಾ 

ಕರ್ನಾಟಕದಲ್ಲಿ ಜಾತ್ಯತೀತ ಜನತಾದಳದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಸಂಸದರಾಗಿದ್ದಾರೆ. ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ.

ಈ ಹಿನ್ನಲೆಯಲ್ಲಿ, ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಹೊರಬಿದ್ದು ಕರ್ನಾಟಕವನ್ನು ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಜ್ವಲ್ ರೇವಣ್ಣ ಹುಡುಗಿಯರ ಜೊತೆ ಚೆಲ್ಲಾಟವಾಡುತ್ತಿರುವ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಏಪ್ರಿಲ್ 26 ರಂದು ಹಾಸನ ಕ್ಷೇತ್ರಕ್ಕೆ ಮತದಾನದ ಮೊದಲ ದಿನದಿಂದ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೀಗಾಗಿ ಇಡೀ ದೇವೇಗೌಡರ ಕುಟುಂಬವೇ ಆಘಾತಕ್ಕೆ ಒಳಗಾಗಿದೆ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆಯನ್ನು ಕೈಗೊಂಡಿದೆ. ಇದರ ಬೆನ್ನಲ್ಲೇ ರೇವಣ್ಣ ವಿರುದ್ಧ ಮಹಿಳೆಯರಿಗೆ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪಲಾಯನ ಮಾಡಿದ್ದಾರೆ ಎಂಬ ವರದಿಗಳು ಬರುತ್ತಿವೆ.

ಈ ಹಿನ್ನಲೆಯಲ್ಲಿ, ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ತಮ್ಮ ‘ಎಕ್ಸ್’ ಪೇಜ್ ನಲ್ಲಿ ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ, “ಜೆಡಿಎಸ್ ಪಕ್ಷದ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರ ಸುತ್ತ ಬಹಿರಂಗಗೊಂಡಿರುವ ಸಂಗತಿಗಳು NDA ಮತ್ತು ಮೋದಿಯವರ ‘ನಾರಿ ಶಕ್ತಿ’ಯ ಹಕ್ಕುಗಳ ನಿಜ ಸ್ವರೂಪವನ್ನು ಬಯಲು ಮಾಡಿದೆ. ಪ್ರಧಾನಿ ಮೋದಿಯ ಆಪ್ತ ವ್ಯಕ್ತಿಯನ್ನು ಒಳಗೊಂಡ ಸಾವಿರಾರು ಸಂಖ್ಯೆಯಲ್ಲಿ ಹೇಯ ವಿಡಿಯೋಗಳು ಹೊರಬಿದ್ದಿವೆ. ಮೋದಿಯವರ ಮಹಿಳಾ ಸುರಕ್ಷತೆಯ ಭರವಸೆಗೆ ಸಾವಿರಾರು ಸಂತ್ರಸ್ತರು ಸಾಕ್ಷಿಯಾಗಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ತಿಳಿದಿದ್ದರೂ ಮೋದಿ ಮತ್ತು ಅಮಿತ್ ಶಾ ಅವರು ಮೌನವಾಗಿದ್ದಾರೆ. ವಿಡಿಯೋಗಳು ಹೊರಬಿದ್ದ ನಂತರ ರೇವಣ್ಣ ದೇಶ ಬಿಟ್ಟು ಪರಾರಿಯಾಗಿದ್ದಾರೆ, ಪರಾರಿಯಾಗಲು ಸಹಾಯ ಮಾಡಿದವರು ಯಾರು? ಉತ್ತರ ನಮಗೆಲ್ಲರಿಗೂ ಗೊತ್ತು.

ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳವನ್ನು ಪ್ರತಿಭಟಿಸಿದಾಗ ಮೋದಿ ಮೌನ ವಹಿಸಿದ್ದರು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದಾಗ ಮೋದಿ ಮೌನ ವಹಿಸಿದ್ದರು. ಸಾವಿರಾರು ಮಹಿಳೆಯರ ವಿನಯವನ್ನು ಕೆರಳಿಸುತ್ತಿರುವ ತನ್ನ ಮಿತ್ರನ ಬಗ್ಗೆ ಮೋದಿ ಮೌನ ವಹಿಸಿದ್ದಾರೆ. ಜನರು ಮತದಾನದ ಮೂಲಕ ಮಾತನಾಡುತ್ತಾರೆ.” ಎಂದು ಹೇಳಿದ್ದಾರೆ.

ರಾಜಕೀಯ

ಡೀಪ್‌ಫೇಕ್ ಮಾಡಿದ ವಿಡಿಯೋದಲ್ಲಿ, ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (ಎಸ್‌ಸಿ), ಬುಡಕಟ್ಟು (ಎಸ್‌ಟಿ) ಮತ್ತು  ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮಿತ್ ಶಾ ಹೇಳಿದ್ದರು ಎಂದು ಉಲ್ಲೇಖಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಎಂದು ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ, ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (ಎಸ್‌ಸಿ), ಬುಡಕಟ್ಟು (ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮಿತ್ ಶಾ ಹೇಳಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಅಮಿತ್ ಶಾ ಅವರು ಆ ರೀತಿ ಮಾತನಾಡಿಲ್ಲ ಮತ್ತು ವಿಡಿಯೋ ಡೀಪ್‌ಫೇಕ್ ಮಾಡಿದ ನಕಲಿ ಎಂದು ಬಿಜೆಪಿ ಕಿಡಿಕಾರಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಈ ಹಿನ್ನಲೆಯಲ್ಲಿ, ನಿನ್ನೆ ದೆಹಲಿ ಪೊಲೀಸರ ಬಳಿ ದೂರು ದಾಖಲಿಸಿರುವ ಬಿಜೆಪಿ,  “ತೆಲಂಗಾಣದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ಕಾನೂನು ಬಾಹಿರವಾಗಿದ್ದು ಅದನ್ನು ತೆಗೆದುಹಾಕಬೇಕು ಎಂದು ಅಮಿತ್ ಶಾ ಮಾತನಾಡಿರುವ ಹಳೆಯ ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗಿದೆ. ಈ ವಿಡಿಯೋವನ್ನು ತೆಲಂಗಾಣ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಪೇಜ್ ನಲ್ಲಿ ಶೇರ್ ಮಾಡಿದೆ. ನಂತರ ಪಕ್ಷದ ಹಲವು ಮುಖಂಡರು ಇದನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದೆ.

ದೂರಿನ ಆಧಾರದ ಮೇಲೆ, ದೆಹಲಿ ಪೊಲೀಸರು ಆ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಖಾತೆಗಳ ವಿವರಗಳನ್ನು ನೀಡುವಂತೆ ಎಕ್ಸ್ ಮತ್ತು ಫೇಸ್‌ಬುಕ್‌ಗೆ ಕೇಳಿಕೊಂಡಿದ್ದಾರೆ. ಇದಲ್ಲದೆ, ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್ ಗಳಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ವಿಶೇಷ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದಾದ ಬಳಿಕ ಇಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬಳಸುತ್ತಿದ್ದ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡು ಮೇ 1 ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, “ಬಿಜೆಪಿ ಮತ್ತು ಪ್ರಧಾನಿ ಮೋದಿ ತಮ್ಮ ರಾಜಕೀಯ ಲಾಭಕ್ಕಾಗಿ ದೆಹಲಿ ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯ ನಂತರ ನರೇಂದ್ರ ಮೋದಿ ಅವರು ಚುನಾವಣೆ ಗೆಲ್ಲಲು ದೆಹಲಿ ಪೊಲೀಸರನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಇಲ್ಲಿ ಯಾರೂ ಇದಕ್ಕೆ ಹೆದರುವುದಿಲ್ಲ. ಇಂತಹ ಕುತಂತ್ರಗಳಿಗೆ ಉತ್ತರ ಕೋಡುವ ಬಹಳ ಜನ ನಮ್ಮಲ್ಲಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ವಿಶೇಷವಾಗಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ನಾವು ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ರಾಜಕೀಯ

ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ, ಎಂ.ಕೆ.ಸ್ಟಾಲಿನ್ ಒಂದು ವರ್ಷ ಪ್ರಧಾನಿಯಾಗಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ಟೀಕಿಸಿ ಮಾತನಾಡುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ಸರ್ಕಾರವನ್ನು ರಚಿಸಿದರೆ, ವರ್ಷಕ್ಕೆ ಒಬ್ಬ ಪ್ರಧಾನಿ ಯೋಜನೆಯನ್ನು ಜಾರಿಗೆ ತರಲು ಯೋಜಿಸುತ್ತಿದ್ದು, ಅದರ ಪ್ರಕಾರ ಪ್ರತಿ ವರ್ಷ ಒಬ್ಬ ಪ್ರಧಾನಿ ಇರುತ್ತಾರೆ. ವರ್ಷಕ್ಕೊಂದು ಪ್ರಧಾನಿ ಇದ್ದರೆ ಜಗತ್ತೇ ನಮ್ಮನ್ನು ನೋಡಿ ನಗುತ್ತದೆ. ನಿಮಗೆ ವರ್ಷಕ್ಕೊಂದು ಪ್ರಧಾನಿ ಬೇಕೇ? ಎಂದು ಪ್ರಧಾನಿ ಮೋದಿ ಅವರು ಸಾರ್ವಜನಿಕ ಸಭೆಗಳಲ್ಲಿ ಟೀಕಿಸಿ ಮಾತನಾಡುತ್ತಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಕೆಲವು ವಿರೋಧ ಪಕ್ಷಗಳು, ವರ್ಷಕ್ಕೊಂದು ಪ್ರಧಾನಿಯನ್ನು ಬೇಕಾದರೂ ಒಪ್ಪಿಕೊಳ್ಳುತ್ತೇವೆ. ಆದರೆ, ಖಂಡಿತವಾಗಿಯೂ ಮೋದಿಯನ್ನು ಪ್ರಧಾನಿಯಾಗಲು ಬಿಡುವುದಿಲ್ಲ ಎಂದು ಹೇಳಿದೆ. ಈ ಹಿನ್ನಲೆಯಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ 30 ವರ್ಷಗಳ ಅಸ್ಥಿರ ಆಡಳಿತಕ್ಕೆ ದೇಶ ಬೆಲೆ ನೀಡಿದೆ. ಆದರೆ ಕಳೆದ 10 ವರ್ಷಗಳಲ್ಲಿ ಪ್ರಬಲ ನಾಯಕತ್ವದೊಂದಿಗೆ ರಾಜಕೀಯ ಸ್ಥಿರತೆಯನ್ನು ಕಂಡಿದ್ದೇವೆ.

ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ, ಎಂ.ಕೆ.ಸ್ಟಾಲಿನ್ ಒಂದು ವರ್ಷ ಪ್ರಧಾನಿಯಾಗಿರುತ್ತಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್ ಒಂದು ವರ್ಷ ಪ್ರಧಾನಿಯಾಗಿರುತ್ತಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಒಂದು ವರ್ಷ ಪ್ರಧಾನಿಯಾಗಿರುತ್ತಾರೆ. ಏನಾದರು ಒಂದು ವರ್ಷ ಉಳಿದರೆ ರಾಹುಲ್ ಗಾಂಧಿ ಪ್ರಧಾನಿಯಾಗಿರುತ್ತಾರೆ. ಇಂಡಿಯಾ ಮೈತ್ರಿಕೂಟ ಹೇಳುವಂತೆ ದೇಶವನ್ನು ಈ ರೀತಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿ ಆಡಳಿತವಿರುವ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ಮೀಸಲು ಪಡೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 29 ನಕ್ಸಲೀಯರು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

ಸಂಸತ್ತಿನ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಕ್ಸಲ್ (ಮಾವೋವಾದಿ) ನಿರ್ಮೂಲನೆಗೆ ಕೇಂದ್ರ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ರೀತಿಯಾಗಿ, ಬಿಜೆಪಿ ಆಡಳಿತವಿರುವ ಛತ್ತೀಸ್‌ಗಢ ರಾಜ್ಯದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ಮೀಸಲು ಪಡೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 29 ನಕ್ಸಲೀಯರು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

ಗೃಹ ಸಚಿವಾಲಯದ ಪ್ರಕಾರ, ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ನಕ್ಸಲ್ ಉಗ್ರಗಾಮಿತ್ವವನ್ನು ಶೇ.70 ರಿಂದ ಶೇ.52ಕ್ಕೆ ಇಳಿಸಲಾಗಿದೆ. ಅಲ್ಲದೆ, ಭವಿಷ್ಯದಲ್ಲಿ ನಕ್ಸಲ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಾಖಂಡಿತವಾಗಿ ಹೇಳಿದ್ದಾರೆ.

ಈ ವರ್ಷದ ಆರಂಭದಿಂದ, ಗಡಿ ಭದ್ರತಾ ಪಡೆ (BSF), ಜಿಲ್ಲಾ ಮೀಸಲು ಪಡೆ (DRG) ಮತ್ತು ಕಮಾಂಡೋ ಬೆಟಾಲಿಯನ್ (COBRA) ಸೇರಿದಂತೆ ಸಶಸ್ತ್ರ ಪಡೆಗಳು ನಕ್ಸಲ್ ಪ್ರಭಾವಿತ ಛತ್ತೀಸ್‌ಗಢ ರಾಜ್ಯದ ಅರಣ್ಯಗಳಲ್ಲಿ ನಕ್ಸಲ್ ಹುಡುಕಾಟ ಮತ್ತು ಬೇಟೆಯಲ್ಲಿ ತೊಡಗಿವೆ.

ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ ಅಂತ್ಯದಲ್ಲಿ ಛತ್ತೀಸ್‌ಗಢದ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಕ್ಸಲರೆಂದು ಶಂಕಿಸಿ ಅಲೆದಾಡುತ್ತಿದ್ದ ಮೂವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಆದರೆ, ಮೃತ ಮೂವರ ಕುಟುಂಬಗಳು ಮತ್ತು ಗ್ರಾಮಸ್ಥರು, ‘ನಾವು ಆದಿವಾಸಿಗಳು ಅರಣ್ಯವನ್ನು ಅವಲಂಬಿಸಿ ಬದುಕುತ್ತಿದ್ದೇವೆ.

ನಾವು ತೊಗಟೆ, ಎಲೆಗಳು ಮತ್ತು ಇತರ ಉತ್ಪನ್ನಗಳಿಗಾಗಿ ಕಾಡಿಗೆ ಹೋಗುತ್ತೇವೆ. ಹೀಗಾಗಿ ಎಲೆ ಸಂಗ್ರಹದ ಸೀಸನ್ ಶುರುವಾಗಿರುವುದರಿಂದ ಮೂವರೂ ಮರಗಳ ತೊಗಟೆಗಳು, ಕಾಂಡಗಳು ಸೇರಿದಂತೆ ವಸ್ತುಗಳಿಂದ ಹಗ್ಗಗಳನ್ನು ತಯಾರಿಸಲು ಕಾಡಿಗೆ ತೆರಳಿದ್ದರು. ಆದರೆ ಸರಕಾರಕ್ಕೆ ಲೆಕ್ಕ ಕೊಡಬೇಕು ಎಂಬುದಕ್ಕಾಗಿ ಮೂವರು ಅಮಾಯಕರನ್ನು ನಕ್ಸಲರು ಎಂದು ಆರೋಪಿಸಿ ಪೊಲೀಸರು ನಕಲಿ ಎನ್‌ಕೌಂಟರ್ ಮಾಡಿದ್ದಾರೆ’ ಎಂದು ಆರೋಪಿಸಿದರು.

ತರುವಾಯ, ಮಾರ್ಚ್ ಅಂತ್ಯದಲ್ಲಿ, ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಸಿಪುರಪಟ್ಟಿ ಅರಣ್ಯ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರನ್ನು ನಕ್ಸಲೀಯರು ಎಂದು ಶಂಕಿಸಿ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದರು. ಈ ಕುರಿತು ಹೇಳಿಕೆ ನೀಡಿರುವ ನಕ್ಸಲ್ ಸಂಘಟನೆಯ ಕಾರ್ಯದರ್ಶಿ, ‘ಸತ್ತವರಲ್ಲಿ ಇಬ್ಬರು ಮಾತ್ರ ನಮ್ಮ ಸಂಘಟನೆಯ ಸದಸ್ಯರು. ಉಳಿದ ನಾಲ್ವರು ಗ್ರಾಮದ ನಾಗರಿಕರು.

ಜನರನ್ನು ಭೇಟಿ ಮಾಡಲು ಮತ್ತು ಅವರ ಕುಂದುಕೊರತೆಗಳನ್ನು ಆಲಿಸಲು ಗ್ರಾಮಕ್ಕೆ ಹೋದ ನಮ್ಮ ಇಬ್ಬರು ಸಂಘಟಕರು ಮತ್ತು ನಾಲ್ವರು ನಿರಾಯುಧ ನಾಗರಿಕರನ್ನು ಭದ್ರತಾ ಪಡೆಗಳು ಕರೆದೊಯ್ದು ವಿಚಾರಣೆಗೆ ಒಳಪಡಿಸಿ ನಂತರ ಅವರನ್ನು ಓಡಲುಬಿಟ್ಟು ಮನಬಂದಂತೆ ಗುಂಡಿಕ್ಕಿ ಕೊಂದಿದ್ದಾರೆ.

ಇದೊಂದು ನಕಲಿ ಎನ್‌ಕೌಂಟರ್, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಕೂಡ ಪೊಲೀಸರು ಮತ್ತು ಭದ್ರತಾ ಪಡೆಗಳು ಜೋಡಿಸಿಟ್ಟಿದ್ದು’ ಎಂದು ಅವರು ಆರೋಪಿಸಿದ್ದಾರೆ. ಇದನ್ನು ಭದ್ರತಾ ಪಡೆ ನಿರಾಕರಿಸಿದೆ. ಈ ಹಿನ್ನಲೆಯಲ್ಲಿ, ನಕ್ಸಲರ ಹತ್ಯೆಯನ್ನು ಪ್ರತಿಭಟಿಸಲು ನಕ್ಸಲೀಯರು ಏಪ್ರಿಲ್ 3 ರಂದು ಸುಕ್ಮಾ ಮತ್ತು ಬಿಜಾಪುರದಲ್ಲಿ ಒಂದುದಿನದ ಬಂದ್ ಗೆ ಕರೆ ನೀಡಿದರು.

ಆ ಬಳಿಕ ನಕ್ಸಲರ ಬೇಟೆಯನ್ನು ಮತ್ತಷ್ಟು ತೀವ್ರಗೊಳಿಸಿದ ಸರ್ಕಾರ, ಹುಡುಕಾಟವನ್ನು ಮುಂದುವರಿಸಿತು. ನಕ್ಸಲರು ಬಂದ್ ಘೋಷಿಸಿದ ದಿನವೇ, ಛತ್ತೀಸ್‌ಗಢದ ಬಿಜಾಪುರದಲ್ಲಿ 13 ನಕ್ಸಲೀಯರನ್ನು ಎನ್‌ಕೌಂಟರ್‌ ಮಾಡಲಾಯಿತು. ತದನಂತರ, ಏಪ್ರಿಲ್ 6 ರಂದು ಕಂಕೇರ್‌ನಲ್ಲಿ ಇನ್ನೂ 3 ನಕ್ಸಲೀಯರನ್ನು ಕೊಲ್ಲಲಾಯಿತು.

ಇದೇ ಹಿನ್ನಲೆಯಲ್ಲಿ, ಕಂಕೇರ್ ಜಿಲ್ಲೆಯ ಹಪಟೋಲಾ ಅರಣ್ಯದಲ್ಲಿ ಏಪ್ರಿಲ್ 16ರಂದು ಗಡಿ ಭದ್ರತಾ ಪಡೆಗಳು 15 ಮಹಿಳೆಯರು ಸೇರಿದಂತೆ ಒಟ್ಟು 29 ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅದರಲ್ಲಿ, ಸರ್ಕಾರದಿಂದ ತಲಾ ರೂ.25 ಲಕ್ಷ ಘೋಷಣೆ ಮಾಡಿದ್ದ ನಕ್ಸಲ್ ಚಳುವಳಿಯ ಪ್ರಮುಖ ನಾಯಕ ಶಂಕರ್ ರಾವ್ ಕೂಡ ಕೊಲೆಯಾಗಿದ್ದಾರೆ.

ಅವರಿಂದ ಐದು ಎಕೆ-47 ರೈಫಲ್‌ಗಳು ಮತ್ತು ಎಲ್‌ಎಂಜಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಮೃತರ 18 ಶವಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಅಲ್ಲದೆ, ನಕ್ಸಲರೊಂದಿಗಿನ ಈ ಕಾಳಗದಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷವೊಂದರಲ್ಲೇ ಇದುವರೆಗೆ 79 ನಕ್ಸಲೀಯರು ಹತರಾಗಿದ್ದಾರೆ ಮತ್ತು ಈ ನಿರ್ದಿಷ್ಟ ದಾಳಿಯು ದೇಶದಲ್ಲೇ ಅತ್ಯಂತ ಭೀಕರ ದಾಳಿಯಾಗಿದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಈ ದಾಳಿಯ ಬಗ್ಗೆ ಮಾತನಾಡಿರುವ ಛತ್ತೀಸ್‌ಗಢ ಬಿಜೆಪಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, “ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ ಐತಿಹಾಸಿಕ ವಿಜಯವಾಗಿದೆ” ಎಂದು ಹೇಳಿದ್ದಾರೆ.

ಅದೇ ರೀತಿ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು “ಗಡಿ ಭದ್ರತಾ ಪಡೆಯ ಯೋಧರನ್ನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ನಕ್ಸಲ್ ಮುಕ್ತ ಛತ್ತೀಸ್‌ಗಢವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು! ಇದು ನಕ್ಸಲ್ ವಾದದ ವಿರುದ್ಧ ಛತ್ತೀಸ್‌ಗಢ ಪೊಲೀಸರು ನಡೆಸಿದ ಸರ್ಜಿಕಲ್ ಸ್ಟ್ರೈಕ್” ಎಂದು ಬಣ್ಣಿಸಿದ್ದಾರೆ.

ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ದೇಶದಿಂದ ನಕ್ಸಲಿಸಂ ಮುಕ್ತಗೊಳಿಸಲು ಮೋದಿ ಸರಕಾರ ಬದ್ಧವಾಗಿದೆ. ಅಲ್ಲದೆ, ಛತ್ತೀಸ್‌ಗಢದ ಕಂಕೇರ್‌ನಲ್ಲಿ ಭದ್ರತಾ ಪಡೆಗಳ ಈ ಮಹಾನ್ ವಿಜಯವು ನಕ್ಸಲಿಸಂನ ಸಂಪೂರ್ಣ ನಿರ್ಮೂಲನೆಗೆ ಪ್ರಮುಖ ಹೆಜ್ಜೆಯಾಗಿದೆ!” ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ, ಛತ್ತೀಸ್‌ಗಢದ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಂಚಲನದ ಮಾಹಿತಿ ನೀಡಿದ್ದಾರೆ. ಅಂದರೆ “ಬಿಜೆಪಿ ಆಡಳಿತದಲ್ಲಿ ನಕಲಿ ಎನ್‌ಕೌಂಟರ್‌ಗಳು ಸರ್ವಸಾಮಾನ್ಯವಾಗಿ ನಡೆಯುತ್ತಿವೆ. ಅದರಲ್ಲೂ ಕಳೆದ ನಾಲ್ಕು ತಿಂಗಳಲ್ಲಿ ನಕಲಿ ಎನ್‌ಕೌಂಟರ್‌ಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ.

ಬಿಜೆಪಿ ಸರ್ಕಾರವು ಅನೇಕ ಮುಗ್ಧ ಬುಡಕಟ್ಟು ಗ್ರಾಮಸ್ಥರನ್ನು ‘ನಕ್ಸಲರು’ ಎಂದು ಬ್ರಾಂಡ್ ಮಾಡಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುತ್ತಿದೆ. ಅಲ್ಲದೆ, ‘ಸುಳ್ಳು ಪ್ರಕರಣ’ ದಾಖಲಿಸಿ ಬಂಧಿಸುತ್ತೇವೆ ಎಂದು ಆದಿವಾಸಿಗಳಿಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಕಂಕೇರ್ ಮಾತ್ರವಲ್ಲದೆ ಕವರ್ತಾ ಜಿಲ್ಲೆಯಲ್ಲೂ ಇಂತಹ ಘಟನೆಗಳನ್ನು ಕೇಳಿ ಬರುತ್ತಿವೆ!” ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.