ಶಿಕ್ಷಣದ ಜೊತೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕಲಿಸುವ ಕಾರಣ ಮದರಸಾಗಳನ್ನು ಅಸಂವಿಧಾನಿಕವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್! » Dynamic Leader
December 12, 2024
ದೇಶ

ಶಿಕ್ಷಣದ ಜೊತೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕಲಿಸುವ ಕಾರಣ ಮದರಸಾಗಳನ್ನು ಅಸಂವಿಧಾನಿಕವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್!

ಡಿ.ಸಿ.ಪ್ರಕಾಶ್

2004ರಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ಮದರಸಾ ಶಿಕ್ಷಣ ಕಾಯ್ದೆ 2004’ ಅನ್ನು ಜಾರಿಗೆ ತಂದಿತ್ತು. ಇದೀಗ ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ ‘ಮದ್ರಸಾ ಶಿಕ್ಷಣ ಕಾಯಿದೆ 2004’ ಅನ್ನು ಸಾಂವಿಧಾನಿಕ ಎಂದು ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಪಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಿಸಿ ಈ ಪ್ರಕರಣದಲ್ಲಿ ತೀರ್ಪು ನೀಡಿದೆ. 2004ರಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ಮದ್ರಸಾ ಶಿಕ್ಷಣ ಕಾಯ್ದೆ 2004’ ಅನ್ನು ಜಾರಿಗೆ ತಂದಿತು. ಹಲವು ವರ್ಷಗಳ ನಂತರ, ಅಲಹಾಬಾದ್ ಹೈಕೋರ್ಟ್ ಕಳೆದ ಮಾರ್ಚ್‌ನಲ್ಲಿ ಮದರಸಾ ಶಿಕ್ಷಣ ಕಾಯ್ದೆಯನ್ನು ಅಸಂವಿಧಾನಿಕ ಮತ್ತು ಜಾತ್ಯತೀತತೆಗೆ ವಿರುದ್ಧವಾದದ್ದು ಎಂದು ಹೇಳಿ ರದ್ಧುಗೊಳಿಸಿತು.

ಹೈಕೋರ್ಟ್ ತೀರ್ಪಿನಿಂದ 17 ಲಕ್ಷ ಮದರಸಾ ವಿದ್ಯಾರ್ಥಿಗಳ ಬದುಕು ಪ್ರಶ್ನಾರ್ಹವಾಗಿತ್ತು. ಇದೀಗ ಆ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದರಿಂದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಏಪ್ರಿಲ್‌ನಿಂದ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಏಪ್ರಿಲ್ 5 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, “ಜಾತ್ಯತೀತತೆ ಎಂದರೆ ‘ಬದುಕು ಮತ್ತು ಬದುಕಲು ಬಿಡು’ ಎಂಬುದೇ ಆಗಿದೆ” ಎಂದು ನ್ಯಾಯಾಲಯ ಹೇಳಿತ್ತು.

“ಮದರಸಾ ಶಿಕ್ಷಣ ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸಿದೆ ಎಂದು ಅಲಹಾಬಾದ್ ನ್ಯಾಯಾಲಯವು ತಪ್ಪಾಗಿ ಹೇಳಿದೆ. ಈ ಕಾಯ್ದೆಯು ಮದರಸಾಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ” ಸುಪ್ರೀಂ ಕೋರ್ಟ್ ಹೇಳಿದೆ.

12ನೇ ತರಗತಿಯ ನಂತರ ಮದರಸಾಗಳಲ್ಲಿ ನೀಡಲಾಗುವ ಫಾಝಿಲ್ ಮತ್ತು ಕಾಮಿಲ್ ಪದವಿಗಳು ಯುಜಿಸಿ ಕಾಯ್ದೆಗೆ ವ್ಯತಿರಿಕ್ತವಾಗಿದೆ ಎಂದೂ ಸುಪ್ರೀಂ ಕೋರ್ಟ್ ಗಮನಸೆಳೆದಿದೆ. ಇದಲ್ಲದೆ, ಮದರಸಾ ಶಿಕ್ಷಣ ಕಾಯ್ದೆಯು ಅಲ್ಪಸಂಖ್ಯಾತರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದು, ಶಿಕ್ಷಣದ ಜೊತೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕಲಿಸುವ ಕಾರಣ ಮದರಸಾಗಳನ್ನು ಅಸಂವಿಧಾನಿಕವೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮದರಸಾಗಳು ಮುಸ್ಲಿಮರು ಅರೇಬಿಕ್, ಉರ್ದು, ಪರ್ಷಿಯನ್, ಇಸ್ಲಾಮಿಕ್ ಅಧ್ಯಯನಗಳು, ಟಿಬ್ (ಸಾಂಪ್ರದಾಯಿಕ ಔಷಧ), ತತ್ವಶಾಸ್ತ್ರ ಮತ್ತು ಇತರ ಕೆಲವು ವಿಷಯಗಳನ್ನು ಕಲಿಯುವ ಶಾಲೆಗಳಾಗಿವೆ.

ಉತ್ತರ ಪ್ರದೇಶದಲ್ಲಿ 23,500 ಮದರಸಾಗಳಿವೆ. ಅದರಲ್ಲಿ ಕೇವಲ 16,513 ಮಾತ್ರ ಸರ್ಕಾರದಿಂದ ನೋಂದಣಿ ಮತ್ತು ಮಾನ್ಯತೆ ಪಡೆದಿದೆ. ಇವುಗಳಲ್ಲಿ 560 ಮದರಸಾಗಳು ಉತ್ತರ ಪ್ರದೇಶ ಸರ್ಕಾರದಿಂದ ಸ್ಥಾಪಿಸಲಾಗಿದೆ ಎಂಬುದು ಗಮನಾರ್ಹ.

Related Posts