ರಾಜಕೀಯ ಪಕ್ಷಗಳು ನೈತಿಕ ರಾಜಕಾರಣದಿಂದ ದೂರವಾಗುತ್ತಿರುವುದು ಅಪಾಯಕಾರಿ: ವೆಲ್ಫೇರ್ ಪಾರ್ಟಿ
ಬೆಂಗಳೂರು: ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ರಾಜಕೀಯ ಪಕ್ಷಗಳು ತತ್ವ ಸಿದ್ದಾಂತವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿವೆ. ರಾಜಕೀಯದಲ್ಲಿ ನೈತಿಕತೆ ಮಾಯವಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಕಳವಳ ವ್ಯಕ್ತ ಪಡಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪ್ರಕ್ರಿಯೆ ಅತಿಯಾಗುತ್ತದೆ ಎಂಬುದು ವಾಸ್ತವ ಸತ್ಯ. ಪ್ರಜೆಗಳು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಪ್ರಜ್ಞೆ ರಾಜಕೀಯ ಪಕ್ಷಗಳು ಮರೆತಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದಾಂತಗಳಿಗೆ ಯಾವುದೇ ಬೆಲೆ ಇಲ್ಲ ಎನ್ನಿಸುತ್ತಿದೆ. ಟಿಕೆಟ್ ಸಿಕ್ಕರೆ ಒಂದು ಪಕ್ಷ; ಇಲ್ಲದಿದ್ದರೆ ಇನ್ನೊಂದು ಪಕ್ಷ. ಬೆಳಿಗ್ಗೆ ಒಂದು ಪಕ್ಷ, ಸಂಜೆ ಒಂದು ಪಕ್ಷ ಎಂದು ಅಭ್ಯರ್ಥಿಗಳು ಹೀಗೆ ಜಿಗಿಯುತ್ತಾ ಹೋಗುತ್ತಾರೆ. ತತ್ವ ಸಿದ್ಧಾಂತದ ಬಗ್ಗೆ ಮಾತನಾಡುವ ಪಕ್ಷಗಳು, ಅಂತಹ ಅಭ್ಯರ್ಥಿಗಳಿಗೆ ಟಿಕೀಟ್ ನೀಡಿ ಪ್ರೋತ್ಸಾಹಿಸಿ ಇಂಥ ಅನೈತಿಕತೆಗೆ ಕುಮ್ಮಕ್ಕು ನೀಡುತ್ತಿವೆ.
ಎಲ್ಲಿದ್ದರೂ ಹೇಗಿದ್ದರೂ ಜನ ಓಟು ಹಾಕುತ್ತಾರೆ ಎಂಬ ಭಾವನೆ ಅವರಲ್ಲಿ ಅಡಕವಾಗಿವೆ. ಅಧಿಕಾರಕ್ಕಾಗಿ ಪಕ್ಷಾಂತರ ಪ್ರಕ್ರಿಯೆಯಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ. ಆಪರೇಷನ್ ಕಮಲ/ಹಸ್ತ ಎಂಬ ಹೆಸರಲ್ಲಿ ನಡೆಯುವ ರಾಜಕೀಯ ಅನೈತಿಕತೆಗೂ ಇಲ್ಲಿ ಕೊರತೆಯಿಲ್ಲ. ಕುಟುಂಬ ರಾಜಕಾರಣದಲ್ಲೂ ಯಾರೂ ಕಮ್ಮಿಯಿಲ್ಲ.
ಪ್ರಿಯಾಂಕಾ ಗಾಂಧಿ ವಯನಾಡ್ ನಲ್ಲಿ ಚುನಾವಣಾ ಅಖಾಡಕ್ಕಿಳಿದಿರುವಾಗ ಅದರ ವಿರುದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಂಶಾಡಳಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಬಸವರಾಜ್ಬೊ ಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಲ್ಲಿರುವುದು ಅವರ ಕಣ್ಣಿಗೆ ಕಾಣಿಸುದಿಲ್ಲ. ಇತರ ಪಕ್ಷಗಳ ಕಡೆಗೆ ಬಹಿರಂಗವಾಗಿ ಬೆರಳು ತೋರಿಸುವಾಗ ತಮ್ಮೆಡೆಗೆ ಉಳಿದ ಬೆರಳು ತೋರುತ್ತಿರುವ ಬಗ್ಗೆ ಅವರು ಚಿಂತಿಸುವುದಿಲ್ಲ. ಯಡಿಯೂರಪ್ಪ ಪುತ್ರನಿಗೆ ರಾಜ್ಯದ ಬಿಜೆಪಿ ಅಧ್ಯಕ್ಷ ಪಟ್ಟ ಒಲಿದು ಬಂದಾಗ ಇವರು ಕಣ್ಣು ಮುಚ್ಚಿ ಕುಳಿತಿದ್ದರು.
ದೇಶದಲ್ಲಿ ಜಾತ್ಯತೀತ ಪಕ್ಷ ಎಂದು ಗುರುತಿಸಲ್ಪಡುವ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಇದರ ವಿರುದ್ದ ಕಾಂಗ್ರೆಸ್ ನಿಂದಲೂ ಅಪಸ್ವರ ಕೇಳಿ ಬರುತ್ತಿಲ್ಲ. ಶಿಸ್ತು ಕ್ರಮ, ಶೋಕಾಸ್ ನೊಟೀಸ್ ಎಚ್ಚರಿಕೆ ಯಾವುದೂ ಕಂಡು ಬರುತ್ತಿಲ್ಲ. ಪ್ರತಿಯೊಂದು ಪಕ್ಷಗಳಿಗೂ ಒಂದು ತತ್ವ ಸಿದ್ಧಾಂತ ಅನ್ನೋದು ಇರುತ್ತದೆ. ಆದರೆ, ಅದನ್ನು ಗಾಳಿಗೆ ತೂರಲಾಗುತ್ತದೆ. ಅಧಿಕಾರ, ಹಣದ ಮುಂದೆ ಯಾವ ತತ್ವ ಸಿದ್ದಾಂತವೂ ಗಣನೆಗೆ ಬರುವುದಿಲ್ಲ.
ರಾಜಕೀಯ ಪಕ್ಷಗಳು ನೈತಿಕ ರಾಜಕಾರಣದಿಂದ ದೂರ ಸರಿಯುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟಲು ಪ್ರಜ್ಞಾವಂತ ನಾಗರಿಕರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.